ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು
ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು
ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ
ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಈ ಮೂರು ಪ್ರeಗಳು ಪೊಲೀಸ್ ಇಲಾಖೆ ಅಥವಾ ಯಾವುದೇ ಸಾರ್ವಜನಿಕ ಸೇವಾ ಇಲಾಖೆಗಳ ಕೈಪಿಡಿಯಲ್ಲಿ (ಮಾನ್ಯುಯಲ್) ಬರೆದಿಟ್ಟ ಅಥವಾ ಪಾಲಿಸಲು ಸೂಚಿಸುವ ಲಿಖಿತ ನಿಯಮಗಳಲ್ಲ. ಇವು ಕಾಲಕ್ರಮೇಣ ಅನುಭವದಿಂದ ನಾವು ಹದಗೊಳಿಸಿ ಕೊಳ್ಳಬೇಕಾದ ಅಂತಃಪ್ರಜ್ಞೆಗಳು. ಸಮವಸದಗಲಿ, ದೈನಂದಿನ ಬದುಕಿ ನಗಲಿ – ಇವು ನಮ್ಮ ಪ್ರಜ್ಞೆಯ ಭಾಗವಾಗುವವರೆಗೂ ನಾವು ಇವುಗಳನ್ನು ನೆನಪಿಸಿಕೊಳ್ಳುತ್ತಲೇ ಇರಬೇಕಾಗಿರುವುದು ಇಂದಿನ ತುರ್ತು ಅಗತ್ಯ.
೧. ವ್ಯಕ್ತಿ ಪ್ರಜ್ಞೆ: ಶಿಸ್ತಿನ ಜೊತೆಗೆ ಆಳವಾದ ಸ್ಪಂದನೆಯ ಅಗತ್ಯತೆ. ವ್ಯಕ್ತಿ ಪ್ರಜ್ಞೆ ಎಂದರೆ ಕೇವಲ ಎದುರಿಗಿರುವವರನ್ನು ಗುರುತಿಸುವುದಲ್ಲ; ಅದು ಶಿಸ್ತಿನೊಂದಿಗೆ ನಾವು ತೋರುವ ಅನುಭೂತಿ. ನಾವು ಬಾಯಿ ತೆರೆಯುವ ಮುನ್ನ, ನಮ್ಮ ಮುಂದೆ ನಿಂತಿರುವ ವ್ಯಕ್ತಿ ಯಾರೆಂದು ಅರಿಯುವ ಸೂಕ್ಷ್ಮತೆ ನಮಗಿರಬೇಕಾಗುತ್ತದೆ. ಉದಾಹರಣೆಗೆ ಪೊಲೀಸ್ ಠಾಣೆಗೆ ಬರುವ ಸಂತ್ರಸ್ತ ವ್ಯಕ್ತಿಗಳಿಗೆ ಕಾನೂನಿನ ಕಲಂಗಳನ್ನು (ಸೆಕ್ಷೆನ್ಸ್) ಓದಿ ಹೇಳುವ ಅಗತ್ಯವಿಲ್ಲ, ಅವರಿಗೆ ತಕ್ಷಣಕ್ಕೆ ಬೇಕಿರುವುದು ಗೌರವಯುತ ಸಹಾನುಭೂತಿಯ ಸ್ಪಂದನೆ ಮತ್ತು ಭರವಸೆ. ಶರಣರ ನುಡಿಗಳಂತೆ ಏನು ಬಂದಿರಿ ಹದುಳವಿದ್ದಿರೆ ಎಂದರೆ ನಿಮ್ಮ ಮೈಸಿರಿ ಹಾರಿಹೋಗುದೆ? ಕುಳ್ಳಿರೆಂದರೆ ನೆಲ ಕುಳಿ ಹೋಗುದೆ? ಕೊಡಲಿಲ್ಲದಿದ್ದರೂ ಒಂದು ಒಂದು ಗುಣವಾದರೂ ಇರಬೇಕು ಅದೇ ವೇಳೆ, ನಾವು ಚಾಳಿ ಬಿದ್ದ ಅಪರಾಧಿಗೆ ಸುಮ್ಮನೆ ನೀತಿ ಉಪದೇಶ ಮಾಡುವ ಅಗತ್ಯವಿಲ್ಲ; ಅವನಿಗೆ ಬೇಕಾಗಿರುವುದು ನಮ್ಮ ಕಾನೂನಿನ ಕಠಿಣ ನಿಲುವು ಮತ್ತು ಕಾನೂನಿನ ಸ್ಪಷ್ಟವಾದ ಜರಿ. ಇನ್ನು ಪ್ರಜಪ್ರಭುತ್ವದಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಬೇಕಿರುವುದು ಅಧಿಕಾರಿಗಳ ಮುಖ ಸ್ತುತಿಯ ಮಾತುಗಳಿಗಿಂತ, ನಿರ್ಭಯ ಮತ್ತು ನಿಪಕ್ಷಪಾತವಾಗಿ ನೀಡುವ ಸತ್ಯಾಂಶದಿಂದ ಕೂಡಿದ ಮಾಹಿತಿಗಳು.
ನಮ್ಮ ಒಂದು ಮಾತು ಕೇಳುವವರನ್ನು ಸಂತೈಸಬಹುದು, ಕೆರಳಿಸಬಹುದು ಅಥವಾ ಸಂಪೂರ್ಣವಾಗಿ ಅವರ ನಿರ್ಧಾರಗಳನ್ನು ಬದಲಾಯಿಸಲೂಬಹುದು. ಹಾಗಾಗಿ ಹಲವಾರು ಬಾರಿ ನಮ್ಮೆದುರಿಗಿರುವ ವ್ಯಕ್ತಿಯ ಮನಸ್ಥಿತಿಯನ್ನು ಮರೆತ ಕ್ಷಣವೇ, ನಾವು ಪೊಲೀಸ್ ಸೇವೆಯ ನಿಜವಾದ ವೃತ್ತಿಪರತೆಯನ್ನು ಕಳೆದುಕೊಳ್ಳುತ್ತೇವೆ.
೨. ಸ್ಥಳದ ಪ್ರಜ್ಞೆ: ನಾವಿರುವ ಸ್ಥಳದ ಸಂದರ್ಭ ಗೌರವಿಸುವುದು. ಪ್ರತಿ ಸ್ಥಳವೂ ತನ್ನದೇ ಆದ ಭಾವನಾತ್ಮಕ, ಪರಿಸರ ಮತ್ತು ಪರಿಸ್ಥಿತಿಯ ಹಿನ್ನೆಲೆ ಹೊಂದಿರುತ್ತದೆ. ಪೊಲೀಸ್ ಠಾಣೆ ಎನ್ನುವುದು ಕೇವಲ ಒಂದು ಕಟ್ಟಡವಲ್ಲ – ಅದೆಷ್ಟೋ ಬಾರಿ ಸಂಕಷ್ಟದಲ್ಲಿರುವ ಜನರಿಗೆ ಕೊನೆಯ ಭರವಸೆಯ ತಾಣ ಕೂಡ ಆಗಿರುತ್ತದೆ. ಅಪರಾಧ ನಡೆದ ಸ್ಥಳ ಕೇವಲ ಕ್ರೈಮ್ ಸೀನ್ ಅಷ್ಟೇ ಅಲ್ಲ – ಅದು ಯಾರದೋ ಬದುಕು ಅಲ್ಲಿ ಶಾಶ್ವತವಾಗಿ ಬದಲಾದ ಅಥವಾ ಅಂತ್ಯಗೊಂಡ ಸ್ಥಳ ಕೂಡ ಆಗಿರಬಹುದು. ಹಾಗೆಯೇ ಅಂತ್ಯಕ್ರಿಯೆ ಅಥವಾ ಶ್ರದ್ಧಾಂಜಲಿಯ ಸ್ಥಳದಲ್ಲಿ ನಾವು ಕರ್ತವ್ಯ ನಿರ್ವಹಣೆ ಮಾಡುವಾಗ ಸಹೋದ್ಯೋಗಿಗಳೊಂದಿಗೆ ಸ್ಥಿತಿಯ ಅರಿವಿಲ್ಲದೆ ಹರಟುವ ಅವಕಾಶವೆಂದು ಭಾವಿಸಬಾರದು. ಮೌನ ಅಗತ್ಯವಿರುವ ಕಡೆಗೆ ನಾವು ಅಸಭ್ಯವಾಗಿ ನಕ್ಕರೆ, ಅಥವಾ ಸಾವು ಮತ್ತು ದುಃಖದ ವಾತಾವರಣ ಇರುವಲ್ಲಿ ಹಗುರವಾಗಿ ವರ್ತಿಸಿದರೆ, ಸಮಾಜದಲ್ಲಿ ನಮ್ಮ ಪಾತ್ರದ ಘನತೆಯನ್ನು ನಾವೇ ಹರಾಜು ಹಾಕಿಕೊಂಡಂತೆ…ಅಂತ್ಯಕ್ರಿಯೆ ಸಂಧರ್ಭದಲ್ಲಿ ಸ್ಥಳ ಪ್ರe ಎಂದರೆ ಆ ಜಗ ಹೊತ್ತಿರುವ ದುಃಖ ಮತ್ತು ತೀವ್ರತೆಯನ್ನು ಗೌರವಿಸುವುದು. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಬಿತ್ತರವಾದಂತೆ ಸೇನಾಧಿಕಾರಿಯೊಬ್ಬರು ವೀರಮರಣವನ್ನಪ್ಪಿದಾಗ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೊಬೈಲ್ ನಲ್ಲಿ ನಗಾಡುತ್ತಾ ಮಾತನಾಡುವ ದೃಶ್ಯ ಬಿತ್ತರಗೊಂಡು ಅವರ ವರ್ತನೆಮ ಸಾರ್ವಜನಿಕವಾಗಿ ಬಹಳಷ್ಟು ಟೀಕೆಗೆ ಒಳಪಟ್ಟಿತ್ತು. ನಮ್ಮ ಧ್ವನಿಯನ್ನು ಯಾವಾಗ ತಗ್ಗಿಸಬೇಕು, ಯಾವಾಗ ನೇರ ಮತ್ತು ಸ್ಪಷ್ಟವಾಗಿರಬೇಕು ಅಥವಾ ಯಾವಾಗ ಮೊಬೈಲ್ ಕರೆಗಳನ್ನು ಸ್ವೀಕರಿಸಬಾರದು, ಯಾವ ಸಂದರ್ಭದಲ್ಲಿ ಹರಟಬಾರದು ಎನ್ನುವ ವಿವೇಚನೆ ನಮ್ಮಲ್ಲಿ ಇರಬೇಕು. ಏಕೆಂದರೆ, ಕೆಲವೊಮ್ಮೆ ನಾವು ಮಾತನಾಡದಿದ್ದರೂ ಆ ಸ್ಥಳದ ವಾತಾವರಣವೇ ಎಲ್ಲವನ್ನೂ ಅಭಿವ್ಯಕ್ತಗೊಳಿಸುತ್ತಿರುತ್ತದೆ.
೩. ಸಮಯದ ಪ್ರಜ್ಞೆ: ಸಮಯೋಚಿತ ಸ್ಪಂದನೆ ಸಮಯಪಾಲನೆಯ ವಿವೇಚನೆ ಎನ್ನುವುದು ಪೊಲೀಸ್ ಸೇವೆಯಲ್ಲಿ ಎಂದಿಗೂ ತಟಸ್ಥವಾಗಿರುವುದಿಲ್ಲ. ಉದಾಹರಣೆಗೆ ತಡವಾಗಿ ದಾಖಲಿಸುವ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಮುಖ್ಯ ಸಾಕ್ಷ್ಯವನ್ನೇ ನಾಶಪಡಿಸಬಹುದು, ಘಟನಾ ಸ್ಥಳಕ್ಕೆ ತಡವಾಗಿ ತಲುಪುವುದು ಒಂದು ಅಮೂಲ್ಯ ಜೀವವನ್ನೇ ಬಲಿ ಪಡೆಯಬಹುದು. ಸೂಕ್ತ ಸಂದರ್ಭದಲ್ಲಿ ಕೇಳದ ಕ್ಷಮೆ ಇಡೀ ಸಮುದಾಯದ ವಿಶ್ವಾಸವನ್ನೇ ಕಳೆದು ಕೊಳ್ಳಬೇಕಾಗಬಹುದು. ಉದಾಹರಣೆಗೆ ಈ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರು ಸಮುದಾಯವೊಂದರ ಪ್ರತಿಭಟನಾ ಮೆರವಣಿಗೆ ಕಾಲಕ್ಕೆ ಭಾಗವಹಿಸಿದ್ದ ಮಹಿಳೆಯೊಬ್ಬರಿಗೆ ಒರಟಾಗಿ ಮಾತನಾಡಿದ್ದಾಗ ಇಡೀ ಸಮು ದಾಯದ ಕೋಪಕ್ಕೆ ಇಲಾಖೆ ತುತ್ತಾಗಬೇಕಾಯಿತು, ಅದನ್ನು ಸರಿಪಡಿಸ ಬೇಕಾದರೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಾಕು ಬೇಕಾಯಿತು. ಆದ್ದ ರಿಂದ ಸಮಯದ ಪ್ರಜ್ಞೆ ಎನ್ನುವುದು ಬರಿ ಗಡಿಯಾರದ ಸಮಯಪಾಲನೆ ಗಿಂತಲೂ ಆಳವಾದದ್ದು. ಯಾವಾಗ ತಕ್ಷಣದ ಕ್ರಮ ಕೈಗೊಳ್ಳಬೇಕು ಮತ್ತು ಯಾವಾಗ ತಾಳ್ಮೆಯಿಂದ ಕಾಯಬೇಕು ಎಂದು ತಿಳಿಯುವುದೇ ನಿಜವಾದ ಸಮಯಪ್ರಜ್ಞೆ. ಮೌನವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದಾದಾಗ ಮಾತ ನಾಡಲೇಬೇಕು; ಆದರೆ ಗಾಯ ಇನ್ನೂ ಹಸಿಯಾಗಿರುವಾಗ ತೀರ ಬೇಗ ಮಾತನಾಡಿದರೆ ನೋವು ಹೆಚ್ಚಾಗಬಹುದು ಎಂಬುದನ್ನೂ ಅರಿತಿರಬೇಕು. ಸಾರ್ವ ಜನಿಕ ಬದುಕಿನಲ್ಲಿ ಸಮಯ ಪಾಲನೆ ಎಂದರೆ ಬೆಳಿಗ್ಗೆ ೧೧ ಗಂಟೆಗೆ ಸಭೆ ಎಂದು ಮಾತು ಕೊಟ್ಟು ೧೦:೫೫ ಕ್ಕೆ ಹಾಜರಿರುವುದು ಅಥವಾ ತಡವಾಗುವುದಾದರೆ ಮುಂಚಿತವಾಗಿ ತಿಳಿಸುವುದು, ಇದು ಕೇವಲ ಗಡಿಯಾರದ ಮುಳ್ಳಿಗಾಗಿ ಅಲ್ಲ, ಜನರೊಂದಿಗಿನ ‘ವಿಶ್ವಾಸಾರ್ಹತೆಯನ್ನು’ ಕಾಯ್ದುಕೊಳ್ಳುವುದಕ್ಕಾಗಿ ಕೂಡ ಹೌದು.
ಈ ಮೂರು ಪ್ರeಗಳ ಅಂತರಸಂಬಂಧ ಮತ್ತು ನಿಜವಾದ ಪರೀಕ್ಷೆ ಸ್ಮಾರ್ಟ್ ಫೋನ್‌ನ ಒಂದೇ ಒಂದು ವಿಡಿಯೋ ಕ್ಲಿಪ್, ವರ್ಷಗಟ್ಟಲೆ ಮಾಡಿದ ನಿಷ್ಠಾವಂತ ಸೇವೆಯನ್ನೇ ಅಳಿಸಿಹಾಕಬಹುದಾದ ಈಗಿನ ಡಿಜಿಟಲ್ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ವಿಶ್ವಾಸಾರ್ಹತೆಯನ್ನು ನಿರ್ಧರಿಸುವುದೇ ಈ ಪ್ರಜ್ಞೆಗಳು. ಇವು ಒಂದಕ್ಕೊಂದು ಬೆಸೆದುಕೊಂಡಿರುವ ಸರಣಿ ಕೊಂಡಿಗಳು. ಒಂದರಲ್ಲಿ ಎಡವಿದರೂ ಉಳಿದೆರಡೂ ದುರ್ಬಲಗೊಳ್ಳುತ್ತವೆ. ವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನಾವು ಮಧ್ಯಪ್ರವೇಶಿಸಬೇಕಾದ ಸರಿಯಾದ ಕ್ಷಣವನ್ನು ಕೂಡ ತಪ್ಪುತ್ತೇವೆ. ಸ್ಥಳದ ಗಂಭೀರತೆಯನ್ನು ಗ್ರಹಿಸದಿದ್ದರೆ, ನಮ್ಮ ಸಮಯಪ್ರಜ್ಞೆ ಕೂಡ ಅಪ್ರಸ್ತುತವಾಗುತ್ತದೆ.
ಇವುಗಳು ನಾವು ಕೇವಲ ತರಬೇತಿಯಲ್ಲಿ ಕಲಿಯುವ ಮತ್ತು ಕಲಿಸುವ ‘ಸಾಫ್ಟ್ ಸ್ಕಿಲ್ಸ್’ಗಳಲ್ಲ – ಇವು ನ್ಯಾಯ ದೊರಕಿಸಿ ಕೊಡುವುದಕ್ಕಾಗಿ, ಇಲಾಖೆಯ ಘನತೆಗಾಗಿ ಮತ್ತು ನಮ್ಮ ಆತ್ಮಸಾಕ್ಷಿಗಾಗಿ ಬದುಕಿನಲ್ಲಿ ರೂಢಿಸಿಕೊಳ್ಳಬೇಕಾದ ಜೀವನ ಕೌಶಲಗಳು ಹೌದು.. ಕೊನೆಯಲ್ಲಿ ನಮಗೆ ಎದುರಾಗುವ ನಿಜವಾದ ಸವಾಲು ಎಂದರೆ: ಯಾರೂ ನಮ್ಮನ್ನು ನೋಡದಿದ್ದಾಗಲೂ ನಾವು ಈ ಮೂರು ಪ್ರಜ್ಞೆಗಳನ್ನು ಅಳವಡಿಸಿಕೊಂಡು ನಡೆಯಬವೇ? ನಮ್ಮ ತಪ್ಪನ್ನು ತಿದ್ದಲು ಹಿರಿಯ ಅಧಿಕಾರಿಗಳು ಜತೆಯಲ್ಲಿ ಇಲ್ಲದಿರುವಾಗ, ಘಟನೆಯನ್ನು ರೆಕಾರ್ಡ್ ಮಾಡಲು ಯಾವುದೇ ಕ್ಯಾಮೆರಾಗಳು ಇಲ್ಲದಿರುವಾಗ, ಮತ್ತು ಕೊನೆಯಲ್ಲಿ ನಮಗಾಗಿ ಸಿಗುವ ಯಾವುದೇ ಚಪ್ಪಾಳೆಗಳು ಇಲ್ಲದಿರುವಾಗಲೂ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದೇ ಮುಖ್ಯ. ಏಕೆಂದರೆ ಆಗಷ್ಟೇ ನಮಗೆ ಸ್ಪಷ್ಟವಾಗಿ ತಿಳಿಯುವುದು – ನಮ್ಮ ಜೊತೆಗೆ ನಾವು ಧರಿಸಿರುವ ಸಮವಸಕ್ಕೆ ಕೂಡ ಗೌರವ ದೊರಕುತ್ತದೆ ಎಂದು.
” ಈ ಮೂರು ಪ್ರಜ್ಞೆಗಳ ಅಂತರಸಂಬಂಧ ಮತ್ತು ನಿಜವಾದ ಪರೀಕ್ಷೆ ಸ್ಮಾರ್ಟ್ಫೋನ್‌ನ ಒಂದೇ ಒಂದು ವಿಡಿಯೋ ಕ್ಲಿಪ್, ವರ್ಷಗಟ್ಟಲೆ ಮಾಡಿದ ನಿಷ್ಠಾವಂತ ಸೇವೆಯನ್ನೇ ಅಳಿಸಿಹಾಕಬಹುದಾದ ಈಗಿನ ಡಿಜಿಟಲ್ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ವಿಶ್ವಾಸಾರ್ಹತೆಯನ್ನು ನಿರ್ಧರಿಸುವುದೇ ಈ ಪ್ರಜ್ಞೆಗಳು.”
‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…
ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…
ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…
ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…