Andolana originals

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ.

ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು ದಿಲ್ಲ ಎಂದವರು ಹೇಳಿದ್ದರೂ ದಶಕಗಳ ಕಾಲದಿಂದ ಯಾವ ಸಿದ್ಧಾಂತಕ್ಕಾಗಿ ಅವರು ಹೋರಾಡುತ್ತಾ ಬಂದರೋ? ಅದೇ ಸಿದ್ಧಾಂತಕ್ಕಾಗಿ ಅವರು ತಮ್ಮ ಹೋರಾಟದ ಪರಂಪರೆಯನ್ನು ಮುಂದುವರಿಸಬೇಕಿದೆ. ಕಾರಣ? ಯಾವ ಸಿದ್ಧಾಂತಕ್ಕಾಗಿ ಅವರು ಹೋರಾಡುತ್ತಾ ಬಂದರೋ? ಆ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ನಿರಂತರವಾಗಿ ಹೋರಾಡುವುದು ಅನಿವಾರ್ಯ. ಇದು ಅವರಿಗೂ ಗೊತ್ತು.

ಅರ್ಥಾತ್, ವ್ಯವಸ್ಥೆಯ ತಳದಲ್ಲಿರುವ ಶೋಷಿತ ವರ್ಗಗಳೇ ನಿವೆ? ಆ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕನಸು ಕಂಡವರು ಸಿದ್ದರಾಮಯ್ಯ.ಮತ್ತು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಅದಕ್ಕಾಗಿ ಹೋರಾಡುತ್ತಾ ಬಂದವರು ಅವರು. ಜಾತಿ ವ್ಯವಸ್ಥೆಯ ಕರಾಳ ವರ್ತುಲದಲ್ಲಿ ಇಂತಹ ಹೋರಾಟ ನಡೆಸಿದ ಹಲವರು ದಿಕ್ಕು ದಿಸೆಯಿಲ್ಲದೆ ನಾಪತ್ತೆಯಾಗಿದ್ದಾರೆ. ಕಾರಣ? ಈ ವರ್ತುಲದೊಳಗೆ ನುಗ್ಗಿದವರಿಗೆ ಹೊರಬರುವ ಮಾರ್ಗವೇ ಗೋಚರಿಸುವುದಿಲ್ಲ. ಅದೊಂದು ರೀತಿಯಲ್ಲಿ ಮಹಾಭಾರತದ ಚಕ್ರವ್ಯೂಹ ಇದ್ದಂತೆ. ಒಳನುಗ್ಗುವ ಅಭಿಮನ್ಯುಗಳ ಸಂಖ್ಯೆ ಹಲವಾರು ಆದರೂ, ಅದರೊಳಗೆ ನುಗ್ಗಿ ಹೊರ ಬರುವ ಅರ್ಜುನನ ಚಾಕಚಕ್ಯತೆ ಇರುವ ನಾಯಕರು ವಿರಳ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಇಂತಹ ವಿರಳ ನಾಯಕರಲ್ಲಿ ಸಿದ್ದರಾಮಯ್ಯ ಪ್ರಮುಖರು.

ಇಲ್ಲದಿದ್ದರೆ ಜಾತಿ ವ್ಯವಸ್ಥೆಯ ಕರಾಳ ವರ್ತುಲಕ್ಕೆ ನುಗ್ಗಿ ಸುದೀರ್ಘ ಕಾಲ ನಾಡನ್ನಾಳಿದ ಖ್ಯಾತಿ ಅವರಿಗೆ ದಕ್ಕಲು ಸಾಧ್ಯ ವಿರಲಿಲ್ಲ ಮತ್ತು ಹೀಗೆ ಸುದೀರ್ಘ ಕಾಲ ಆಳಲು ಅವರಿಗೆ ಸಾಧ್ಯವಾಗಿದ್ದರಿಂದ ಕರ್ನಾಟಕದ ಶೋಷಿತ ವರ್ಗಗಳಿಗೆ ದೊಡ್ಡ ಮಟ್ಟದ ಶಕ್ತಿ ಸಿಕ್ಕಿರುವುದೂ ನಿಜ. ಆದರೆ ವ್ಯವಸ್ಥೆಯ ನಾಗಾಲೋಟವನ್ನು ಗಮನಿಸಿದರೆ ಮತ್ತು ಅದು ತಲುಪಿರುವ ಘಟ್ಟವನ್ನು ನೋಡಿದರೆ ಶೋಷಿತ ವರ್ಗಗಳಿಗೆ ಸಿಕ್ಕ ಶಕ್ತಿ ಇನ್ನೂ ಸಾಲದು. ಸಿದ್ಧರಾಮಯ್ಯ ಅವರ ಹೋರಾಟದ ಪರಂಪರೆ ಮುಂದುವರಿಯಬೇಕಿರುವುದು ಈ ಕಾರಣಕ್ಕಾಗಿ.

ಅಂದ ಹಾಗೆ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರಬಹುದು. ಆದರೆ ಅದೇ ನಿಲುವಿಗೆ ಅವರು ಅಂಟಿಕೊಳ್ಳಬೇಕು ಅಂತೇನೂ ಇಲ್ಲ.ಯಾಕೆಂದರೆ ಯಾವ ಆದರ್ಶಕ್ಕಾಗಿ, ಯಾವ ಸಿದ್ಧಾಂತಕ್ಕಾಗಿ ಅವರು ಹೋರಾಡುತ್ತಾ ಬಂದರೋ? ಆ ಆದರ್ಶ, ಸಿದ್ಧಾಂತವನ್ನು ಮುಂದುವರಿಸಿಕೊಂಡು ಹೋಗಬಲ್ಲ ಉತ್ತರಾಧಿಕಾರಿಗಳನ್ನು ಹುಡುಕುವುದು ಕೂಡಾ ಅವರ ಮುಂದಿರುವ ಜವಾಬ್ದಾರಿ. ಯಾಕೆಂದರೆ ದಿನದಿಂದ ದಿನಕ್ಕೆ ವ್ಯವಸ್ಥೆ ಹೇಗೆ ಬರಡಾಗುತ್ತಾ ಸಾಗಿದೆ ಎಂದರೆ,ಆ ಬರಡು ನೆಲದಲ್ಲಿ ಕನಸುಗಳು ಹುಟ್ಟಲು ಸಾಧ್ಯವೇ ಇಲ್ಲ ಎಂಬ ಆತಂಕ ಕಾಡತೊಡಗಿದೆ. ಸಿದ್ದರಾಮಯ್ಯ ಅವರ ಹೋರಾಟದ ಪರಂಪರೆಗೆ ಚಳವಳಿ ಗಳು ಸೃಷ್ಟಿಸಿದ ಕನಸಿನ ಬೆಂಬಲವಾದರೂ ಇತ್ತು. ಮತ್ತು ಇಂತಹ ಕನಸುಗಳೊಂದಿಗೆ ಅವರು ಸುದೀರ್ಘ ಕಾಲ ಹೋರಾಡಲು ಸಾಧ್ಯವಾಯಿತು.

ಆದರೆ ಈಗ ರೂಪುಗೊಳ್ಳುತ್ತಿರುವ ಆಡಳಿತ ವ್ಯವಸ್ಥೆಯಲ್ಲಿ ಕನಸುಗಾರರ ಸಂಖ್ಯೆ ಕ್ಷೀಣವಾಗಿದೆ. ಅರ್ಥಾತ್, ಅಸ್ತಿತ್ವಕ್ಕಾಗಿ ಹೋರಾಡುವ, ತಮ್ಮ ಸುತ್ತ ನೆರೆದವರ ಹಿತ ಕಾಪಾಡುವ ಸೀಮಿತ ಗುರಿಯ ನಾಯಕರೇ ಹೆಚ್ಚಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ತಳದಲ್ಲಿರುವ ಜನ ಸಮುದಾಯಗಳಿಗೆ ಶಕ್ತಿ ತುಂಬುವವರು ಯಾರು? ಪ್ರಬಲ ತಳಿಗಳು ಉಳಿಯುತ್ತವೆ, ದುರ್ಬಲ ತಳಿಗಳು ಅಳಿಯುತ್ತವೆ ಎಂಬ ಚಾರ್ಲ್ಸ್ ಡಾರ್ವಿನ್ನನ ಸಿದ್ಧಾಂತ ಮನುಷ್ಯ ಬದುಕಿಗೆ ಅನ್ವಯವಾದರೆ ಅದಕ್ಕಿಂತ ಘೋರವಾದ್ದು ಇನ್ನೇನೂ ಇಲ್ಲ.

ಯಾಕೆಂದರೆ ಇಂತಹ ಕಾಲಘಟ್ಟದಲ್ಲಿ ಮನುಷ್ಯ ನೇರವಾಗಿ ಜಂಗಲ್ ರಾಜ್‌ನಲ್ಲಿ ಬದುಕಬೇಕಾಗುತ್ತದೆ. ವಾಸ್ತವವಾಗಿ ಹೇಳಬೇಕೆಂದರೆ ನಾವೀಗ ಜಂಗಲ್ ರಾಜ್ ಪ್ರವೇಶಿಸಿ ಹಲವು ಕಾಲವೇ ಆಗಿದೆ. ಆದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದುವರೆಗೂ ಅಸ್ತಿತ್ವದಲ್ಲಿರುವುದರಿಂದ ಜಂಗಲ್ ರಾಜ್‌ನ ದುಷ್ಪರಿಣಾಮಗಳು ಇನ್ನೂ ಪರಿಪೂರ್ಣ ಮಟ್ಟದಲ್ಲಿ ಕಾಣಿಸಿಲ್ಲ. ಅದು ಕಾಣಿಸಿದ ದಿನ ಮನುಷ್ಯನ ಬದುಕು ಅರಣ್ಯ ನ್ಯಾಯದ ತೆಕ್ಕೆಗೆ ಸಿಲುಕುತ್ತದೆ. ಬಲಿಷ್ಟರು ದುರ್ಬಲರನ್ನು ಬೇಟೆಯಾಡಿ ಬದುಕುವ ಇಂತಹ ವ್ಯವಸ್ಥೆಯಲ್ಲಿ ದುರ್ಬಲರ ಬದುಕನ್ನು ಊಹಿಸಲೂ ಸಾಧ್ಯವಿಲ್ಲ.

ಹಾಗಾಗದಂತೆ ನೋಡಿಕೊಳ್ಳುವುದೇ ಇವತ್ತಿನ ಅನಿವಾರ್ಯತೆ ಮತ್ತು ಇದಕ್ಕಾಗಿ ಹೋರಾಟದ ಪರಂಪರೆ ಮುಂದುವರಿಯುವುದೂ ಅನಿವಾರ್ಯ. ಹೀಗಾಗಿ ಸಿದ್ದರಾಮಯ್ಯ ಅವರಂತಹ ನಾಯಕರು ಸಾಮಾಜಿಕ ನ್ಯಾಯಕ್ಕಾಗಿ ನಡೆಸುತ್ತಾ ಬಂದ ಹೋರಾಟದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಜನ್ಮ ದಿನದ ಸಂದರ್ಭದಲ್ಲಿ ಇಂತಹ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಚೈತನ್ಯ, ಪ್ರೇರಣೆ ಅವರಿಗೆ ದಕ್ಕಲಿ.

” ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಇಂತಹ ವಿರಳ ನಾಯಕರಲ್ಲಿ ಸಿದ್ದರಾಮಯ್ಯ ಪ್ರಮುಖರು”

 

 

ಆಂದೋಲನ ಡೆಸ್ಕ್

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

13 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

14 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

15 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

17 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

17 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

21 hours ago