Andolana originals

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ

ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು

ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು… ನಿಮಿಷಕ್ಕೊಮ್ಮೆ ಮಂಜಿನಿಂದ ಮುಸುಕಿ ಕಣ್ಮರೆಯಾಗುವ ಜಲಧಾರೆ… ಒಬ್ಬರ ಮಾತುಗಳು ಇನ್ನೊಬ್ಬರಿಗೆ ಕೇಳದಷ್ಟು ಭೋರ್ಗೆರೆಯುವ ನೀರಿನ ಶಬ್ದ… ಇದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತದ ಸುಂದರ ದೃಶ್ಯ.

ಕೊಡಗು ಜಿಲ್ಲೆಯ ಜಲಪಾತಗಳಿಗೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಈಗ ಜೀವ ಕಳೆ ಬಂದಿದೆ. ಅದರಲ್ಲೂ ಅಚ್ಚ ಹಸಿರಿನ ಪರಿಸರದ ನಡುವೆ ಭೋರ್ಗರೆಯುತ್ತಿರುವ ಮಲ್ಲಳ್ಳಿ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮಲ್ಲಳ್ಳಿ ಜಲಪಾತ ಮೈದುಂಬಿದ್ದು, ಜಲಧಾರೆಯನ್ನು ನೋಡಲು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ.

ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆಯಿಂದ ಕೆಳ ಭಾಗಕ್ಕೆ ಭೋರ್ಗರೆಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಮನಮೋಹಕವಾಗಿದೆ. ಶಾಂತಳ್ಳಿ ಹೋಬಳಿಯ ಬಿದ್ದಳ್ಳಿಯ ಸಮೀಪದ ಮಲ್ಲಳ್ಳಿಯಲ್ಲಿ ಜಲಪಾತವಾಗಿ ಹರಿಯುವ ಈ ಸ್ಥಳ ಸೋಮವಾರ ಪೇಟೆಯಿಂದ ೨೫ ಕಿ.ಮೀ. ದೂರದಲ್ಲಿದೆ. ಕುಮಾರಧಾರಾ ನದಿಯು ಎತ್ತರದ ಕಲ್ಲು ಬಂಡೆಯಿಂದ ೩೯೦ ಅಡಿ ಎತ್ತರದಿಂದ ಧುಮುಕಿ ಜಲಧಾರೆಯಾಗಿ, ಮೊದಲ ಹಂತದ ೨೦೦ ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿ ನಂತರ ೯೦ ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಹೀಗೆ ಹಂತ ಹಂತವಾಗಿ ಒಟ್ಟಾಗಿ ಸುಮಾರು ೩೯೦ ಅಡಿ ಎತ್ತರದಿಂದ ನೀರು ಬೀಳುವ ಸದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಜಲಪಾತದಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ನೀರಿನೊಳಗೆ ಯಾರೂ ಇಳಿಯದಂತೆ ಪ್ರವಾಸೋದ್ಯಮ ಇಲಾಖೆಯಿಂದ ಬ್ಯಾರಿಕೇಡ್ ಆಳವಡಿಸಲಾಗಿದೆ. ಜಲಪಾತದ ಮೇಲ್ಭಾಗದಲ್ಲಿರುವ ಬೃಹತ್ ಗಾತ್ರದ ಕಲ್ಲುಗಳು ಅತ್ಯಂತ ಆಕರ್ಷಣೀಯ ಸ್ಥಳವಾಗಿದ್ದು, ಇಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ತುಂಬಿಕೊಳ್ಳುತ್ತಾ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಜಲಪಾತದ ಅಂದವನ್ನು ಸೆರೆಹಿಡಿದು ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಗೆಳೆಯರೊಂದಿಗೆ ಸೆಲಿ ತೆಗೆದುಕೊಂಡು ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ.

ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಬೆಂಗಳೂರಿನಿಂದಲೇ ಅತೀ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವುದು ಜಲಪಾತದ ಆಕರ್ಷಣೀಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಪ್ರವಾಸಿಗರ ರಕ್ಷಣೆ, ಮಾಹಿತಿಗಾಗಿ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಇವರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ ನೀಡುತ್ತಿದ್ದಾರೆ.

ಜಲಪಾತದ ನೀರಿಗೆ ಇಳಿಯದಂತೆ, ಆಪಾಯಕಾರಿ ಸ್ಥಳಗಳತ್ತ ತೆರಳದಂತೆ ಎಚ್ಚರಿಕೆಯನ್ನು ನೀಡುತ್ತಾರೆ. ಮಲ್ಲಳ್ಳಿ ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವುದರಿಂದ ಪ್ರವಾಸಿಗರು ನಡೆಯುವ ಪ್ರಯಾಸ ತಪ್ಪಿದಂತಾಗಿದೆ. ಭಾರಿ ಮಳೆಯ ಸಂದರ್ಭದಲ್ಲಿ ಜಲಪಾತದ ಬುಡದಲ್ಲಿ ನಿಂತು ನೋಡುವುದು ಕಷ್ಟ. ಜಲಪಾತದ ಸಮೀಪಕ್ಕೆ ತೆರಳಲು ೪೦೦ಕ್ಕೂ ಅಧಿಕ ಮೆಟ್ಟಿಲನ್ನು ನಿರ್ಮಿಸಲಾಗಿದೆ.

” ಜಲಪಾತ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಆಪಾಯಕಾರಿ ಕೂಡ. ಇಲ್ಲಿ ಸಾಕಷ್ಟು ಮಂದಿ ಪ್ರವಾಸಿಗರು ನೀರಿಗಿಳಿದು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ರವಾಸಿಗರು ನೀರಿಗಿಳಿಯಬಾರದು. ಈ ಬಗ್ಗೆ ಎಚ್ಚರಿಕೆ ಫಲಕ, ಮೆಶ್ ಅಳವಡಿಕೆ, ಹೋಂ ಗಾರ್ಡ್‌ಗಳನ್ನು ನೇಮಕದ ಬಳಿಕವೂ ಅವರ ಕಣ್ಣು ತಪ್ಪಿಸಿ ನೀರಿಗಿಳಿಯುವುದು ಅಪಾಯಕಾರಿ. ಪ್ರವಾಸಿಗರು ತಾವಾಗಿ ಯೇ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು.”

ಶರತ್, ಸ್ಥಳೀಯರು, ಕುಂದಳ್ಳಿ ಗ್ರಾಮ

” ಈ ಜಲಪಾತಕ್ಕೆ ಹಲವು ವರ್ಷಗಳಿಂದ ಬಂದು ಹೋಗುತ್ತಿದ್ದೇವೆ. ಮೊದಲು ಜಲಪಾತದ ಸಮೀಪಕ್ಕೆ ತೆರಳಲು ಮೆಟ್ಟಿಲಿನ ವ್ಯವಸ್ಥೆ ಇಲ್ಲದೇ ಕಷ್ಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಮೆಟ್ಟಿಲಿನ ಸೌಕರ್ಯದೊಂದಿಗೆ ಜಲಪಾತದ ಪಕ್ಕದಲ್ಲಿಮೆಶ್ ಅಳವಡಿಸಲಾಗಿದೆ. ಎತ್ತರದಿಂದ ಬೀಳುವ ನೀರನ್ನು ಸಮೀಪದಲ್ಲಿ ನೋಡುವಾಗ ರೋಮಾಂಚನವಾಗುತ್ತದೆ.”

ಧನ್ಯ, ಪ್ರವಾಸಿ

” ಪ್ರವಾಸಿ ತಾಣಗಳಲ್ಲಿ ಹುಚ್ಚಾಟಗಳಿಂದ ಈಗಾಗಲೇ ಹಲವಾರು ಮಂದಿ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಪ್ರವಾಸಿಗರು ಮೋಜು ಮಸ್ತಿಗಾಗಿ ತಮ್ಮ ಜೀವನವನ್ನು ಪಣಕ್ಕಿಡುವುದು ವಿಪರ್ಯಾಸ. ಸ್ಥಳೀಯ ಜಲಧಾರೆಗಳ ನೀರಿನ ಆಳ ಎತ್ತರ ತಿಳಿಯದೆ ಹುಚ್ಚಾಟದಿಂದ ಮೈ ಮರೆಯುವುದನ್ನು ನಿಲ್ಲಿಸಬೇಕು. ಪ್ರವಾಸೋದ್ಯಮ ಇಲಾಖೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ವಿಶೇಷ ಗಮನ ಹರಿಸಿ ಸೂಕ್ತ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಬೇಕು.”

ವಸಂತ್ ಆಚಾರ್ಯ, ಅಧ್ಯಕ್ಷರು ಯುವ ಘಟಕ, ಕರವೇ (ಪ್ರವೀಣ್ ಶೆಟ್ಟಿ ಬಣ)

ಅಪಾಯಕಾರಿ ಜಲಪಾತ..!:  ೨೦೦೧ರಿಂದ ಈವರೆಗೆ ಮಲ್ಲಳ್ಳಿ ಜಲಪಾತದಲ್ಲಿ ೧೨ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಜಲಪಾತದಲ್ಲಿ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಲವಾರು ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದು ಯಾರೂ ನೀರಿಗೆ ಇಳಿಯದಂತೆ ಮೆಶ್ ಅಳವಡಿಸಿ ಇಬ್ಬರು ಹೋಂಗಾರ್ಡ್‌ಗಳನ್ನು ಪ್ರವಾಸೋದ್ಯಮ ಇಲಾಖೆ ನೇಮಕ ಮಾಡಿದ್ದರೂ ಪ್ರವಾಸಿಗರು ಇವರ ಕಣ್ಣು ತಪ್ಪಿಸಿ ಜಲಪಾತಕ್ಕೆ ಇಳಿಯುವ ದುಸ್ಸಾಹಸ ಮಾಡಿ ಪ್ರಾಣ ಕಳೆದುಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.

 

 

ಆಂದೋಲನ ಡೆಸ್ಕ್

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

10 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

11 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

12 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

13 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

14 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

18 hours ago