ಹಾಡು ಪಾಡು

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ

ಧೋ… ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ ಮಳೆಗೆ, ಕಾಯುವ ಬಿಸಿಲಿಗೆ ಹೆಂಚು ತನ್ನ ಬಣ್ಣವನ್ನು ಕಪ್ಪಾಗಿಸಿಕೊಂಡಿತ್ತು, ಮನೆಯ ಹಿತ್ತಲೇ ದಟ್ಟ ಕಾಡು. ಮನೆಗೂ ಕಾಡಿಗೂ ನಡುವೆ ಮಣ್ಣಿನ ಕಚ್ಚಾ ರಸ್ತೆ ಹಾವಿನಂತೆ ಬಿದ್ದುಕೊಂಡಿತ್ತು.

ಮನೆಯ ಮುಂದೆ ಅಂಗಳ ದಾಟಿದರೆ ತೋಡು, ಅದರ ಆಚೆಗೆ ಭತ್ತದ ಗದ್ದೆಗಳು, ಗದ್ದೆ ಬಯಲಿನ ಅಂಚಿನಲ್ಲಿ ಹರಿಯುವ ಹೊಳೆ. ಮಳೆಗಾಲದಲ್ಲಿ ಹಸಿರೇ ಮೈ ಹೊದ್ದಂತೆ ಕಾಣುವ ಹಸಿರ ಸಿರಿ ಸಂಪತ್ತು.
ನಮಗೆ ಆಗ ಹುಡುಗಿಯರಿಗೆ ಆ ಚಳಿ ಮಳೆ ಗಾಳಿಗೆ ಒಂದು ಬೆಚ್ಚನೆಯ ಪ್ಯಾಂಟನ್ನು ಹಾಕುವ ಅವಕಾಶವೂ, ಲಭ್ಯತೆಯೂ ಇರಲಿಲ್ಲ. ತುಂಡು ಫ್ರಾಕುಗಳು, ಅದು ಮೇಲಕ್ಕೆ ಮೇಲಕ್ಕೆ ಹೋದಂತೆ ಅರ್ಧ ಮೀಟರ್ ಬಟ್ಟೆ ತೆಗೆದು ಅದೇ ಹಳೆ ಫ್ರಾಕಿಗೆ ಅಡಿಭಾಗದಲ್ಲಿ ಹೊಸ ಫ್ರಿಲ್ಲು. ಆ ಚಳಿ ಮಳೆಗೆ ಬೆಳಿಗ್ಗೆ ಎದ್ದ ಹಾಗೆ, ಗದ್ದೆಗೆ ಪಕ್ಷಿ ಪಾರಕ್ಕೆ ಎಂದು ಅಟ್ಟುವ ನನ್ನಮ್ಮನಿಗೆ ಬೆಚ್ಚನೆಯ ಪ್ಯಾಂಟೊಂದನ್ನು ಕೊಡಿಸುವ ಮನಸೇಕೆ ಬರಲಿಲ್ಲವೋ ಗೊತ್ತಿಲ್ಲ. ಹಾಗಂತ ನನ್ನಮ್ಮ ಏನು ಹಳೆ ಕಾಲದವರೇನಲ್ಲ.

ಆ ಪುಟ್ಟ ಫ್ರಾಕಿನಲ್ಲಿ, ಇದ್ದ ಒಂದೇ ಒಂದು ಹಳೆಯದಾದ ಹಸಿರು ಸ್ವೆಟರಿನಲ್ಲಿ, ಗದ್ದೆಯ ಏರಿಯ ಮೇಲಿರುವ ಪುಟ್ಟ ಸೈಜುಕಲ್ಲಿನ ಮೇಲೆ ಕುಳಿತು, ಗಾಳಿಗೆ ಹಾರುವ ಕೊಡೆಯನ್ನು ನಿಯಂತ್ರಿಸುತ್ತಾ ಶಾಲೆ ಪುಸ್ತಕವನ್ನು ಓದಿಕೊಳ್ಳಬೇಕಿತ್ತು. ಮಧ್ಯೆ ಮಧ್ಯೆ ಗದ್ದೆಗೆ ಬೀಳುವ ಪಕ್ಷಿಗಳನ್ನು, ಚಪ್ಪಾಳೆ ತಟ್ಟಿ, ಹಾ..ಹಾ ಅಂತ ಬಾಯಿ ಬಡಿದು ಓಡಿಸಬೇಕಿತ್ತು. ಅಪ್ಪ ಗದ್ದೆ ಬಯಲಿನ ಅದ್ಯಾವುದೋ ಮೂಲೆಯ ಗದ್ದೆಯೊಂದರಲ್ಲಿ ಗದ್ದೆ ಉಳುತ್ತಿದ್ದರು. ಅಮ್ಮನ ಕೂಗಿನ ಕರೆಯೊಂದು ಬರುವವರೆಗೂ ನಾನು ಗದ್ದೆಯಲ್ಲಿ ಕುಳಿತಿರಬೇಕಿತ್ತು. ಆನಂತರ ಹೊರಟು, ಶಾಲೆಗೆ ಮೂರು ಮೈಲಿ ಕಾಲುನಡಿಗೆಯಲ್ಲೇ ಸಾಗಬೇಕಿತ್ತು.

ಹೀಗೆ ಗದ್ದೆ ತೋಡು ಹೊಳೆ ಕಾಡು ಇವುಗಳ ಮಧ್ಯೆ ಇರುವ ಒಂದು ನಾಡ ಹೆಂಚಿನ ಮನೆಯೊಳಗೆ ಬೆಳೆದ ನಮಗೆ ಕಾಡಿನ ಸಂಪತ್ತುಗಳೇ ಆಹಾರ. ಬೆಳಿಗ್ಗೆ ಎದ್ದು ಬಚ್ಚಲಲ್ಲಿ ಮುಖ ತೊಳೆದು ಅಮ್ಮ ಕೊಡುವ ಕರಿ ಕಾಫಿಗೆ ಅಡುಗೆ ಮನೆಗೆ ಬಂದರೆ, ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮಾಂಸಗಳನ್ನು ತುಂಬಿ, ಅದನ್ನು ಕುಯ್ಯುವ ಅಪ್ಪ ಅಮ್ಮ. ಈ ಚಿತ್ರಣ ರಾತ್ರಿ ಅಪ್ಪನಿಗೆ ದೊಡ್ಡ ಬೇಟೆಯಾಗಿದೆ ಎಂದು ಸಾರಿ ಹೇಳುತ್ತಿತ್ತು. ಮನೆಗೆ ಮಾಂಸ ಇಟ್ಟುಕೊಳ್ಳುವುದಕ್ಕಿಂತ ಊರಿನವರಿಗೆ ಸ್ನೇಹಿತರಿಗೆ ನೆರೆಕೆರೆಯವರಿಗೆ ಹಂಚುವುದರಲ್ಲಿ ಅಪ್ಪನಿಗೆ ಖುಷಿ. ಗುಂಡಿನ ಸದ್ದಿಗೆ “ಇದು ಈರಪ್ಪಂದೇ ಬೊಡಿ” ಎಂದು ಜನರು ಹೇಳುವಷ್ಟು ಅಪ್ಪ ನುರಿತ ಬೇಟೆಗಾರ. ಅಂತಹ ಬೇಟೆಯ ಹುಚ್ಚಿನ ಅಪ್ಪನಿಗೆ ಅದನ್ನು ತಿನ್ನುವುದರಲ್ಲಿ ಹೆಚ್ಚಿನ ಖುಷಿ ಇಲ್ಲ. ಅಮ್ಮನಿಗೆ ತನ್ನ ನಿತ್ಯದ ಕೆಲಸದ ಜೊತೆಗೆ ಹೆಚ್ಚಿನ ಕೆಲಸದ ಗೊಣಗಾಟ. ನನಗೋ ಬೆಳಿಗ್ಗೆ ಬೆಳಿಗ್ಗೆ ಮಾಂಸ ರಕ್ತ ಕಂಡು ಹೊಟ್ಟೆಯಿಂದ ಕಿತ್ತುಕೊಂಡು ಬರುವ ಹೇವರಿಕೆ, ಆ ದಿನ ಬೆಳಗಿನ ಉಪಾಹಾರಕ್ಕೆ, ಅಕ್ಕಿ ರೊಟ್ಟಿಗೆ ಮೊಸರಿಗೆ ಬೆಲ್ಲ ಹೆರೆದುಕೊಂಡು ತಿಂದು ಹೋಗಬೇಕಿತ್ತು. ಉಳಿದವರಿಗೆಲ್ಲಾ ಮಾಂಸಾಹಾರ.

ಮೂರನೇ ತರಗತಿಯಲ್ಲಿರುವಾಗ, ಶಾಲೆ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಬರುವಾಗ, ಮುಂದೆ ಹೋಗುವ ದೊಡ್ಡಪ್ಪನ ಹೆಣ್ಣು ಮಕ್ಕಳಿಬ್ಬರು, ಕಿತ್ತಳೆ ಹಣ್ಣು ಕದಿಯಲು ದಾರಿ ಬದಿಯ ತೋಟಕ್ಕೆ ನಾನು ನೋಡುತ್ತಿದ್ದಂತೆಯೇ ನುಗ್ಗಿದರು. ಈ ಮೊದಲು ಸುಮಾರು ಬಾರಿ ನುಗ್ಗಿರಬಹುದೇನೋ, ಸಲೀಸಾಗಿ ನುಗ್ಗಿದರು. ಈ ಬಾರಿ ನಾನು ನೋಡಿಬಿಟ್ಟಿದ್ದಕ್ಕೆ ಏನೋ… “ಬಾ… ಬಾ… ನುಗ್ಗು” ಎಂದು ಬಲವಂತವಾಗಿ, ತೋಟಕ್ಕೆ ಹಾಕಿದ ಐದು ಎಳೆಯ ಮುಳ್ಳು ತಂತಿ ಬೇಲಿಯ ಕೊನೆಯ ಸಾಲು ಹಾಗೂ ನೆಲಕ್ಕೂ ನಡುವಿನ ಮಧ್ಯೆ, ಇಬ್ಬರು ಸೇರಿ ನನ್ನ ತೂರಿಸಿಬಿಟ್ಟರು. “ಬಾ… ಬಾ…” ಎಂದು ತೋಟದ ಮಧ್ಯೆ ಕರೆದುಕೊಂಡು ಹೋದವರಿಗೆ ನನ್ನ ಲಕ್ಷ್ಯವಿಲ್ಲ. ಅವರಿಗೆ ಕಿತ್ತಳೆ ಹಣ್ಣು ಹೆರಕುವುದರಲ್ಲಿ ಬ್ಯುಸಿ ಆಗ ನಾನೋ ಮಹಾ ಪೆದ್ದಿ, ತೋಟಕ್ಕೆ ನುಗ್ಗಿದಾಯಿತು, ಬಿದ್ದ ಎರಡು ಕಿತ್ತಳೆ ಆದರು ಹೆರಕಬಹುದಿತ್ತೇನೋ ಒಂದೂ ತೋಚಲಿಲ್ಲ ಭಯಕ್ಕೆ ಅಳು ಬರುತ್ತಿದೆ, ಅತ್ತರೆ ತೋಟದ ಪಾರಗಾರರು ಬಂದು ಹೊಡೆಯುತ್ತಾರೆ ಎಂದು ಅವರು ಹೆದರಿಸಿದ್ದಾಯಿತು. ಅವರೋ ಸುಮಾರು ಕಿತ್ತಳೆ ಕುಯ್ಯುತ್ತಾ ಮುಂದೆ ಮುಂದೆ ಹೋಗಿ ಕಾಣದೆ ಆದರು. ಅವರೊಡನೆ ಹೋಗಲೂ ಆಗದೆ, ಹಿಂತಿರುಗಿ ಬರಲೂ ಆಗದೆ ತೋಟದ ನಡುವೆ ದಿಕ್ಕು ತೋಚದಂತೆ ನಿಂತುಬಿಟ್ಟೆ.
ವಾಪಸು ಬರಲು ಹಿಂತಿರುಗಿ ಹೊರಟರೇ ಬೇಲಿಯೇ ಸಿಗುತ್ತಿಲ್ಲ… ಕೊನೆಗೂ ಬೇಲಿ ಸಿಕ್ಕಿ ಅದರ ಬಳಿ ಹೋದರೆ, ನಾನು ನುಗ್ಗಿದ ಜಾಗ ಎಲ್ಲೋ, ಹೋಗಿ ತಲುಪಿದ್ದು ಎಲ್ಲಿಗೋ..! ಏನು ಮಾಡಲು ತೋಚದೆ ಗೊಳೋ… ಎಂದು ಬೇಲಿ ಬದಿಯಲ್ಲಿ ನಿಂತು ಅಳಲು ಶುರುಮಾಡಿದೆ. ತೋಟದ ಒಳಗೆ ಹೋದವರೂ ಕಾಣುತ್ತಿಲ್ಲ, ಬೇಲಿ ದಾಟಿ ಹೊರಗೆ ಬರಲೂ ಗೊತ್ತಾಗುತ್ತಿಲ್ಲ. ಮನೆಯಲ್ಲಿ ಗೊತ್ತಾದರೆ ಬೆನ್ನು ಮೂಳೆ ಮುರಿಯುವ ಹಾಗೆ ಏಟು ಬೀಳುತ್ತದೆ. ತೋಟ ನುಗ್ಗಿ ಕದ್ದಿದ್ದು, ತಿಂದಿದ್ದೂ ಒಂದೂ ಇಲ್ಲ. ಪೆದ್ದಿಯಂತೆ ಸುಮ್ಮನೆ ಅದೆಷ್ಟು ಹೊತ್ತು ಅಳುತ್ತಾ ನಿಂತೆನೋ ಗೊತ್ತಿಲ್ಲ.

ಯಾರೋ ಅಪರಿಚಿತರು ನನ್ನ ಪರಿಸ್ಥಿತಿ ಕಂಡು, ಬೇಲಿ ದಾಟಿಸಿ ಮುಂದೆ ಹೋದರು. ತೋಟ ದಾಟಿ, ಗದ್ದೆಯ ಏರಿಯೊಳಗೆ ಸಾಗಿ ಅದು ಹೇಗೆ ಮನೆ ಸೇರಿದೆನೋ ದೇವರಿಗೇ ಗೊತ್ತು. ಮತ್ತೆಂದೂ ತೋಟದ ಬೇಲಿ ನುಗ್ಗುವ ಸಾಹಸ ಮಾಡಲಿಲ್ಲ. ದೊಡ್ಡಪ್ಪನ ಮಕ್ಕಳು ತಪ್ಪಿಯೂ ನನ್ನಲ್ಲಿ ಹೇಗೆ ಹೋದೆ ಎಂದು ಕೇಳಲಿಲ್ಲ.

ಆಂದೋಲನ ಡೆಸ್ಕ್

Recent Posts

ಎಐ ಮನುಷ್ಯನನ್ನು ಆಳಲಾಗದು!

ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…

2 hours ago

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

2 hours ago

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…

2 hours ago

ಡೂಮರ್ಸ್ ಮತ್ತು ಬೂಮರ್ಸ್

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…

2 hours ago

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…

2 hours ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

3 hours ago