ಹಾಡು ಪಾಡು

ಮುಟ್ಟಿಸಿದ ಪೆರಿಯಾರ್‌ ಮತ್ತು ಮುಟ್ಟಿಸಿಕೊಂಡ ಮಹಾದೇವ

  • ಡಾ. ಮೊಗಳ್ಳಿ ಗಣೇಶ್‌

ಇದೊಂದು ಐತಿಹಾಸಿಕ ಪ್ರಶಸ್ತಿ. ಆಗ ಬ್ರಿಟಿಷರ ಕಾಲದಲ್ಲಿ ಅಸ್ಪೃಶ್ಯರನ್ನು ಕೇರಳದ ಬೀದಿಗಳಲ್ಲಿ ನಡೆಯಲು ಬಿಡುತ್ತಿರಲಿಲ್ಲ. ಯಾರೂ ಕಾಣದಂತೆ ಮರೆಯಲ್ಲಿ ಬೆದರುತ್ತ ನಡೆಯಬೇಕಿತ್ತು. ಹೆಂಗಸರು ಮೇಲುಡುಪು ಧರಿಸುವಂತಿರಲಿಲ್ಲ. ಬ್ರಿಟಿಷರೂ ಅಸಹಾಯಕರಾಗಿದ್ದರು.

ಇವತ್ತಿನ ಮಾರ್ಕ್ಸ್‌ವಾದಿ ಕೇರಳ ಅವತ್ತು ಮಲಬಾರ್ ಪ್ರದೇಶವಾಗಿ ತಿರುವಾಂಕೂರು ರಾಜರ ಕ್ರೂರ ಆಡಳಿತಕ್ಕೆ ಒಳಪಟ್ಟಿತ್ತು. ಸ್ತನಗಂದಾಯವನ್ನೂ ವಿಽಸಿತ್ತು. ಇದಿರಲಿ; ಆಗ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಪೆರಿಯಾರ್ ರಾಮಸ್ವಾಮಿ ದ್ರಾವಿಡ ದೇಶದ ಹುಲಿಯಾಗಿದ್ದರು. ರಾಜರ ಎದುರು ನಿಂತರು. ತಿರುವಾಂಕೂರಿನ ಯಾವ ದೇವಾಲಯಗಳಿಗೂ ಅಸ್ಪೃಶ್ಯರಿಗೆ ಪ್ರವೇಶ ಇರಲಿಲ್ಲ. ಪೆರಿಯಾರ್ ದಲಿತರ ಪರ ನಿಂತರು. ದಲಿತರು ನಗರದ ಮುಖ್ಯ ರಸ್ತೆಗಳಲ್ಲಿ ತಿರುಗಾಡಲು, ಪ್ರಧಾನ ಸಮಾಜದ ಜೊತೆ ಬೆರೆಯಲು, ದೇವಾಲಯಗಳಲ್ಲಿ ಪ್ರವೇಶಿಸಲು ಸಂಪೂರ್ಣ ಅರ್ಹರು.

ಅವರು ನಮ್ಮಂತೆಯೇ ಮನುಷ್ಯರು ಎಂದು ಕೇರಳದ ತಿರುವಾಂಕೂರಿನ ವೈಕಂ ಮಹಾದೇವ ದೇಗುಲದ ಮುಂದೆ ಮೌನ ಸತ್ಯಾಗ್ರಹ ನಡೆಸಿದರು. ಇದಕ್ಕೆ ಉತ್ತರದಿಂದ ಗಾಂಧೀಜಿಯ ಬೆಂಬಲವೂ ಇತ್ತು. ನಿರಂತರ ಶಾಂತ ಚಳವಳಿ ಸಾಗಿತು. ಬ್ರಿಟಿಷರ ಹಿಡಿತ ರಾಜರ ಮೇಲೂ ಇತ್ತು. ಪಂಚಾಯ್ತಿ ನಡೆಯಿತು. ಅಂತಿಮವಾಗಿ ದಲಿತರಿಗೆ ಮುಕ್ತ ಪ್ರವೇಶ ಸಾಧ್ಯವಾಯಿತು. ಈ ಘಟನೆ ನಡೆದು ಭಾರತ ಇಂದು ಏನೇನೋ ಆಗಿದೆ. ಹೊಸ ಬಗೆಯ ಅಸ್ಪೃಶ್ಯತೆಗಳು ಬೆಳೆಯುತ್ತಲೇ ಇವೆ. ಇಲ್ಲಿ ಮುಖ್ಯ ಏನು ಎಂದರೆ ಪೆರಿಯಾರ್ ಅವರ ವೈಕಂ ಸತ್ಯಾಗ್ರಹ ಘಟಿಸಿ ಇಂದಿಗೆ ನೂರು ವರ್ಷಗಳು ಆಗಿವೆ.

ಅಂಬೇಡ್ಕರ್ ಇಂತಹ ಹೋರಾಟದ ಸಾಗರದಲ್ಲಿ ಅದೆಷ್ಟು ಸಲ ಮುಳುಗಿ ಎದ್ದಿದ್ದರೋ. ಪೆರಿಯಾರ್ ಅವರ ಶಿಷ್ಯರಾಗಿದ್ದ ಎಂ. ಕರುಣಾನಿಽಯವರ ಮಗ ಮತ್ತು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಸ್ಟಾಲಿನ್ ದ್ರಾವಿಡ ಭಾರತದಲ್ಲಿ ಅಸ್ಪೃಶ್ಯತೆ ನಾಶ ಆಗಬೇಕು ಎಂಬ ಆಶಯದಲ್ಲಿ ಐದು ಲಕ್ಷ ರೂಪಾಯಿಗಳ ‘ವೈಕಂ ಪ್ರಶಸ್ತಿ’ಯನ್ನು ಮೊದಲ ಬಾರಿಗೆ ನಮ್ಮ ದೇವನೂರ ಮಹಾದೇವ ಅವರಿಗೆ ಕೊಟ್ಟಿರುವುದು ಬಹಳ ಹೆಮ್ಮೆಯ ಸಂಗತಿ. ದೇವನೂರ ಮಹಾದೇವ ಸರ್ವಜನಾಂಗದ ತೋಟದ ಒಂದು ಹಣ್ಣಾದ ಹಣ್ಣು. ಅದನ್ನು ಅಷ್ಟು ಸುಲಭವಾಗಿ ಕಿತ್ತು ತಿನ್ನಲು ಸಾಧ್ಯವಿಲ್ಲ.

ಆ ಹಣ್ಣನ್ನು ತಿಂದು ಅರಗಿಸಿಕೊಳ್ಳಬೇಕಾದರೆ ಬಹಳ ದೊಡ್ಡ ಶಕ್ತಿ ಬೇಕು. ಸರಿಸುಮಾರು ಅರವತ್ತು ವರ್ಷಗಳಿಂದಲೂ ದೇವನೂರ ಮಹಾದೇವ ದಮನಿತರೆಲ್ಲರ ಪರ ಹೋರಾಟ ಮಾಡುತ್ತಲೇ ಬಂದವರು. ಸುಮ್ಮನೆ ಅವರನ್ನು ಕಿಡಿಗೇಡಿಗಳು ದಲಿತರ ನಾಯಕ, ಸಾಹಿತಿ, ಹೋರಾಟಗಾರ ಎನ್ನುತ್ತಾರೆ. ಪಂಪ ಹೇಳಿದ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಮಾತಿಗೆ ಸಾರ್ಥಕ ಹೆಸರು ದೇವನೂರ ಮಹಾದೇವ. ನಿಜವಾದ ಸಾಹಿತಿಗೆ ಯಾವ ಜಾತಿಯೂ ಇಲ್ಲ. ದ್ವೇಷವೂ ಇಲ್ಲ. ಆದ್ದರಿಂದಲೇ ಅವರ ಒಂದು ಕಣ್ಣು ಗಾಂಽ, ಇನ್ನೊಂದು ಕಣ್ಣು ಅಂಬೇಡ್ಕರ್.

ಇವೆರಡು ಸೇರಿ ಆದದ್ದು ಅವರ ಸಾಹಿತ್ಯದ ಅಂತಃಕರಣದ ಕಣ್ಣು. ನಾನು ಬಿ. ಎ. ಓದುವಾಗ ಅವರು ಒಂದು ಚಳವಳಿ ಮಾಡಿದ್ದರು. ಚೌವಾರ್‌ಕೆರೆಯ ನೀರಿನ ಹೋರಾಟವ ನೆನಪಿಸುತ್ತ, ‘ನಮ್ಮ ಸವರ್ಣೀಯರೇ; ನಮ್ಮ ಕೇರಿಗೂ ಬಂದು ಮಾರಿಗುಡಿಯಲ್ಲಿ ಹೊಸ ಮಡಕೆಯಲ್ಲಿ ಇಟ್ಟಿರುವ ನಮ್ಮ ನೀರು ಕುಡಿಯಿರಿ’ ಎಂದು ಕರೆ ಕೊಟ್ಟಿದ್ದರು. ಭಾಗಶಃ ನಲವತ್ತು ವರ್ಷಗಳ ಹಿಂದಿನ ಘಟನೆ ಇದು. ಯಾರೂ ಬಂದು ನೀರು ಕುಡಿಯಲಿಲ್ಲ. ಆದರೆ ದೇವನೂರ ಮಹಾದೇವ ಸಾಹಿತ್ಯದ ನೀರನ್ನು ಮುಟ್ಟದೆ, ಗುಟುಕರಿಸದೆ, ಗಟಗಟನೆ ಕುಡಿಯದೇ ಯಾರೂ ಮುಟ್ಟಿಸಿಕೊಳ್ಳದೆ ಹೋಗಲು ಸಾಧ್ಯವಿಲ್ಲ. ದೇವನೂರ ಮಹಾದೇವ ಸಾಹಿತ್ಯದ ಹಾದಿಯಲ್ಲಿ ನಡೆಯದವರು ಏನಾಗುವರೊ ಏನೋ. ದೇವನೂರ ಅವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.

ಅವರಿಗೆ ಇಡೀ ನಾಡಿನ ತುಂಬಾ ವಿನಾಕಾರಣ ಕ್ಷುದ್ರ ಶತ್ರುಗಳಿದ್ದಾರೆ. ಅಂತಹವರನ್ನೂ ದೇವನೂರ ಮಹಾದೇವ ನಗುನಗುತ್ತ ಅಪ್ಪಿಕೊಂಡಿದ್ದಾರೆ. ಪೆರಿಯಾರ್ ಗರ್ಜಿಸಿದವರು. ದೇವನೂರ ಮಹಾದೇವ ಗರ್ಜಿಸಲೇ ಇಲ್ಲ. ಕೇಳಿಸದೇ ಇರುವ ಗರ್ಜನೆ ಮಹಾದೇವ ಎಂಬ ಈ ಮಾಯಾವಿಯದು. ಆ ಗರ್ಜನೆ ಹೆದರಿಸುವುದಿಲ್ಲ. ದಾಳಿ ಮಾಡುವುದಿಲ್ಲ. ಅಂತರಾಳವ ಕರಗಿಸಿಬಿಡುತ್ತದೆ. ಬಾಬಾಸಾಹೇಬರ ಗರ್ಜನೆ ಈಗಲೂ ಜಗತ್ತಿನಲ್ಲಿ ಮೊಳಗುತ್ತಲೇ ಇದೆ. ಕೇಳಿಸಬೇಕಾದವರಿಗೆ ಕೇಳಿಸುತ್ತಲೇ ಇದೆ. ಬದಲಾಗಬೇಕಾದವರು ಪರಿವರ್ತನೆ ಆಗುತ್ತಲೇ ಇದ್ದಾರೆ. ಜಾತ್ಯತೀತ ಪ್ರಶಸ್ತಿಯ ಈ ಎಚ್ಚರ ನಮ್ಮ ಕಾಲದ ರಾಜಕಾರಣದ, ಧರ್ಮದ ಎಚ್ಚರವೂ ಆಗಬೇಕು. ಮತೀಯ ಭಾರತ ಮದಗರೆಯುತ್ತಲೇ ಇರುವಾಗ ತಮಿಳುನಾಡಿನ ಸರ್ಕಾರ ಇಂತಹ ಒಂದು ಉನ್ನತ ಜಾತ್ಯತೀತ ವೈಕಂ ಪ್ರಶಸ್ತಿಯನ್ನು ಯಾವತ್ತೂ ಯೋಗ್ಯರಿಗೇ ಕೊಡಲಿ. ತಮಿಳುನಾಡು ಕಾವೇರಿ ವಿಷಯದಲ್ಲಿ ಎಷ್ಟೇ ರಾಜಕೀಯ ಮಾಡಲಿ. ಮಳೆಯ ನೀರು ಆಕಾಶದ ಮೋಡದಿಂದ ಬರುತ್ತದೆ. ಅದು ಸರ್ವರ ಜೀವಜಲ. ದೇವನೂರ ಮಹಾದೇವ ಕೂಡ ಮುಟ್ಟಿಸಿಕೊಳ್ಳುವ ಹೊಳೆ. ಅದಕ್ಕೆ ವಿಶ್ವದ ಸಂಬಂಧವಿದೆ. ದೇವನೂರ ಮಹಾದೇವ ಅವರಿಗೆ ಇನ್ನೂ ಉನ್ನತವಾದ ನೊಬೆಲ್ ಪ್ರಶಸ್ತಿ ಸಿಗಲಿ ಎನ್ನುವುದು ನನ್ನ ಆಸೆ.

 

andolana

Recent Posts

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

3 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

3 hours ago

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…

3 hours ago

ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ  ಯಾವುದೇ ನಾಗರಿಕನು ತನ್ನ…

3 hours ago

ಗಾಲಿಕುರ್ಚಿಯಲ್ಲಿ ಕುಳಿತೇ ಯಶಸ್ವೀ ಲೇಖಕಿಯಾದ ಹಿಮಾಂಶಿಕಾ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ದೈಹಿಕ ನ್ಯೂನತೆ ನಡುವೆ ಆರ್ಥಿಕ ಪ್ರಗತಿಯ ಮೆಟ್ಟಿಲೇರಿದ ಮಹಿಳೆ ಹರ‍್ಯಾಣದ ಅಂಬಾಲಾದ ಹಿಮಾಂಶಿಕಾ ಶರ್ಮಾರಿಗೆ…

3 hours ago

ಇ-ಕೆವೈಸಿಗೆ ಮುಗಿಬಿದ್ದ ಫಲಾನುಭವಿಗಳು

ಕೆ.ಬಿ.ರಮೇಶನಾಯಕ ರಾಜ್ಯ ಸರ್ಕಾರದ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ಇಲಾಖೆ ಕಸರತ್ತು.  ಮೈಸೂರು: ನಕಲಿ ಫಲಾನುಭವಿಗಳನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ…

3 hours ago