ಪಂಜುಗಂಗೊಳ್ಳಿ ಅವರ ವಾರದ ಅಂಕಣ
ದೈಹಿಕ ನ್ಯೂನತೆ ನಡುವೆ ಆರ್ಥಿಕ ಪ್ರಗತಿಯ ಮೆಟ್ಟಿಲೇರಿದ ಮಹಿಳೆ
ಹರ‍್ಯಾಣದ ಅಂಬಾಲಾದ ಹಿಮಾಂಶಿಕಾ ಶರ್ಮಾರಿಗೆ ಹುಟ್ಟುವಾಗಲೇ ‘ಜುವನೈಲ್ ರ‍್ಹಿಮಾಟೈಸ್ ಆರ್ತ್ರೈಟಿಸ್’ ಸಮಸ್ಯೆ ಇತ್ತು. ಈ ಸಮಸ್ಯೆ ಇರುವ ವ್ಯಕ್ತಿಯ ಮೂಳೆ ಗಂಟುಗಳು ಸೆಟೆದುಗೊಂಡು ದೈಹಿಕ ಚಲನೆ ಕಷ್ಟವಾಗಿ, ಗಾಲಿ ಕುರ್ಚಿಯಲ್ಲಿ ಕುಳಿತು ಚಲಿಸಬೇಕಾಗುತ್ತದೆ. ಹಿಮಾಂಶಿಕಾರಿಗೆ ಮೂರು ವರ್ಷ ಪ್ರಾಯವಾದಾಗ ಅವರಲ್ಲಿ ಈ ಸಮಸ್ಯೆಯ ಬಾಹ್ಯ ಲಕ್ಷಣಗಳು ಕಾಣಿಸಿಕೊಂಡವು. ಅವರ ಹೆತ್ತವರು ಅದನ್ನು ಗುಣಪಡಿಸಬಹುದು ಎಂಬ ನಿರೀಕ್ಷೆಯಲ್ಲಿ ಅವರನ್ನು ಎಷ್ಟೋ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ, ತಜ್ಞರು ಶಸಚಿಕಿತ್ಸೆಗಳನ್ನು ನಡೆಸಿದರೂ ಅವೆಲ್ಲವೂ ವ್ಯರ್ಥವಾದವು.
ಹಿಮಾಂಶಿಕಾ ಚಿಕ್ಕಂದಿನಿಂದಲೇ ‘ಜುವೆನೈಲ್ ರ‍್ಹಿಮಾಟೈಸ್ ಆರ್ತ್ರೈಟಿಸ್’ ಕಾಯಿಲೆ ಇದ್ದುದರಿಂದ ಅವರಿಗೆ ಅದನ್ನು ಹೊರತುಪಡಿಸಿ ತಮ್ಮನ್ನು ಊಹಿಸಿಕೊಳ್ಳಲು ಅಸಾಧ್ಯ. ಹಾಗಾಗಿ, ಸಣ್ಣ ಪ್ರಾಯದಲ್ಲಿ ಅದು ಅವರಿಗೆ ಒಂದು ಸಮಸ್ಯೆಯೇ ಅನ್ನಿಸಲಿಲ್ಲ. ಆದರೆ, ಅವರಿಗೆ ಪ್ರಾಯವಾಗುತ್ತ ಹೋದಂತೆ ಅದು ನಿಧಾನವಾಗಿ ಅವರ ಕಾಲ ಗಂಟು, ಮೊಣಕೈ, ಬೆರಳು, ಸೊಂಟ ಹಾಗೂ ಕುತ್ತಿಗೆಯನ್ನು ಘಾಸಿಗೊಳಿಸತೊಡಗಿತು. ಶಾಲೆಯಲ್ಲಿ ಅವರ ಸಹಪಾಠಿ ಮಕ್ಕಳು ಕ್ರೀಡೆ, ಶಾಲಾ ವಿಹಾರ ಮೊದಲಾದ ಸಂದರ್ಭಗಳಲ್ಲಿ ಖುಷಿಯಿಂದ ನಲಿಯುತ್ತಿದ್ದರೆ, ಹಿಮಾಂಶಿಕಾ ಗಂಟು ನೋವು, ಸುಸ್ತು ಅನುಭವಿಸುತ್ತ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದರು.
೨೦೧೦ ರಲ್ಲಿ ಹಿಮಾಂಶಿಕಾ ಹತ್ತನೇ ತರಗತಿಯಲ್ಲಿದ್ದರು. ಒಂದು ದಿನ ಬೆಳಿಗ್ಗೆ ಅವರು ಎಂದಿನಂತೆ ಶಾಲಾ ಉಡುಪು ಧರಿಸಿ, ಮನೆಯ ಮೆಟ್ಟಿಲುಗಳನ್ನು ಇಳಿಯಲು ಕಾಲು ಹಾಕಲು ಪ್ರಯತ್ನಿಸಿದರೆ ಆಗುತ್ತಿಲ್ಲ! ಅವರ ಕಾಲುಗಳು ಅವರದ್ದಲ್ಲ ಎಂಬಂತೆ ಅವರಿಗೆ ಭಾಸವಾಗುತ್ತಿತ್ತು. ಏನು ಮಾಡಬೇಕೆಂಬುದು ತಿಳಿಯದ ಹಿಮಾಂಶಿಕಾ ನಿಂತಲ್ಲೇ ಜೋರಾಗಿ ಅತ್ತರು. ಅವರ ಅಳು ಕೇಳಿ ತಂದೆ ಮೆಟ್ಟಿಲು ಹತ್ತಿ ಬಂದು, ಅವರನ್ನು ಅನಾಮತ್ತಾಗಿ ಎತ್ತಿ ಕೆಳಕ್ಕೆ ತಂದರು. ಆ ದಿನದಿಂದ ಹಿಮಾಂಶಿಕಾರಿಗೆ ನಡೆಯುವುದು ದುಸ್ತರವಾಗ ತೊಡಗಿತು. ೨೦೧೪ರಲ್ಲಿ ಅವರು ಶಾಶ್ವತವಾಗಿ ಗಾಲಿ ಕುರ್ಚಿಯನ್ನು ಬಳಸುವಂತಾಯಿತು. ಗಾಲಿ ಕುರ್ಚಿಯನ್ನು ಬಳಸುವುದರೊಂದಿಗೆ ಹಿಮಾಂಶಿಕಾರ ಬದುಕಿನ ಗತಿಯೂ ಬದಲಾಯಿತು. ದೇಹದ ಗಂಟುಗಳ ನೋವಿನೊಂದಿಗೆ ಅವರ ದಿನ ಬೆಳಗಾಗುತ್ತಿತ್ತು. ಪ್ರತೀದಿನ ಎದ್ದ ನಂತರ ಅವರು ಮನೆಯಲ್ಲೇ ಮುಕ್ಕಾಲು ಗಂಟೆಯ ಫಿಸಿಯೋ ಥೆರಪಿಗೆ ಒಳಗಾಗುತ್ತಾರೆ. ಅಷ್ಟೆಲ್ಲ ಚಿಕಿತ್ಸೆ, ಆರು ಶಸ್ತ್ರಚಿಕಿತ್ಸೆಗಳ ನಂತರವೂ ಹಿಮಾಂಶಿಕಾ ತನ್ನ ಸೊಂಟದ ಬಲಭಾಗದ ಗಂಟನ್ನು ಕಳೆದುಕೊಳ್ಳಬೇಕಾಯಿತು. ತಾವು ತಿನ್ನುವ ಆಹಾರದ ಬಗ್ಗೆಯೂ ಅವರು ಎಚ್ಚರದಿಂದಿರಬೇಕಾಗುತ್ತದೆ. ಅದರಲ್ಲಿ ತುಸು ಎಚ್ಚರ ತಪ್ಪಿದರೂ ನೋವು ತೀವ್ರಗೊಳ್ಳುತ್ತದೆ.
ಈ ದೇಶದಲ್ಲಿ ವಿಕಲಾಂಗರಿಗೆ ಸಾರ್ವಜನಿಕ ಸೌಕರ್ಯಗಳು ಇಲ್ಲವೇ ಇಲ್ಲ ಎಂಬಷ್ಟು ವಿರಳ. ಬಸ್ಸುಗಳಲ್ಲಿ ಸಂಚರಿಸುವುದು ಬಿಡಿ, ಟ್ಯಾಕ್ಸಿ ಚಾಲಕರು ಕೂಡಾ ಹಿಮಾಂಶಿಕಾರ ಗಾಲಿ ಕುರ್ಚಿಯನ್ನು ನೋಡುತ್ತಲೇ ಅವರನ್ನು ಹತ್ತಿಸಿಕೊಳ್ಳಲು ನಿರಾಕರಿಸುತ್ತಾರೆ. ಬೇರೆಯವರು ಗಾಲಿ ಕುರ್ಚಿಯಿಂದ ತಮ್ಮ ವಾಹನಗಳ ಒಳಭಾಗ ಹಾಳಾಗಬಹುದು ಎಂದು ಇವರಿಂದ ದೂರವಿರುತ್ತಾರೆ. ಬೇರೊಬ್ಬರ ಸಹಾಯವಿಲ್ಲದೆ ಅವರು ಮನೆಯಿಂದ ಹೊರ ಹೋಗುವುದು ಸಾಧ್ಯವೇ ಇಲ್ಲ. ಹೀಗಾಗಿ ಪ್ರತೀ ಬಾರಿ ಯಾವುದಾದರೂ ಕಾರಣಕ್ಕೆ ಹೊರ ಹೋಗುವುದೆಂದರೆ ಹಿಮಾಂಶಿಕಾರಿಗೆ ಪಾಲಿಗೆ ಬಹು ದೊಡ್ಡ ಯಾತನೆ. ಆದರೂ, ಹಿಮಾಂಶಿಕಾ ಇವೆಲ್ಲವನ್ನು ಏನೂ ಬೇಸರವಿಲ್ಲದೆ ಮಾಡುತ್ತಾರೆ. ತನ್ನ ದೈಹಿಕ ಮಿತಿ ತನ್ನ ದೇಹಕ್ಕೆ ಮಾತ್ರವೇ ವಿನಾ ತನ್ನ ಮನಸ್ಸಿಗಲ್ಲ ಎಂಬುದನ್ನು ಅವರು ಪ್ರತಿ ಕ್ಷಣವೂ ತನಗೆ ತಾನೇ ಹೇಳಿಕೊಳ್ಳುತ್ತಾರೆ. ಆ ಕಾಯಿಲೆಗೆ ತನ್ನ ಬದುಕನ್ನು ನಿರ್ಧರಿಸುವ ಅವಕಾಶ ಕೊಡುವುದಿಲ್ಲ ಎಂದು ಯಾವತ್ತೋ ನಿರ್ಧರಿಸಿದ್ದರು.
ತನ್ನ ಹರೆಯದಿಂದಲೂ ಹಿಮಾಂಶಿಕಾರಿಗೆ ಬರೆಯುವುದು ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಅವರಿಗೆ ೧೭ ವರ್ಷ ಪ್ರಾಯವಾದಾಗ ತನ್ನ ಪುಸ್ತಕವೊಂದನ್ನು ಪ್ರಕಟಿಸಬೇಕೆಂಬ ಕನಸನ್ನು ಕಂಡಿದ್ದರು. ಆದರೆ, ಅದಕ್ಕೆ ಸೂಕ್ತ ಆರ್ಥಿಕ ಅನುಕೂಲವಿಲ್ಲದಿದ್ದರಿಂದ ಅವರ ಕನಸು ನನಸಾಗಿರಲಿಲ್ಲ. ಅವರ ಹೆತ್ತವರ ಆದಾಯದ ಹೆಚ್ಚಿನ ಭಾಗ ಅವರ ವೈದ್ಯಕೀಯ ಖರ್ಚಿಗೆ ಹೋಗುತ್ತಿತ್ತು. ಎಷ್ಟೆಂದರೆ, ಹಿಮಾಂಶಿಕಾರ ತಂಗಿಗೆ ಎಂಟು ವರ್ಷವಾದಾಗ ಅವಳ ಜನ್ಮದಿನದ ಆಚರಣೆಗೆ ಕೇಕ್ ತರಲು ಅವರಲ್ಲಿ ದುಡ್ಡಿರಲಿಲ್ಲ. ಆಗ ಅವರ ತಾಯಿ ಎರಡು ಸಮೋಸಗಳನ್ನು ತಂದು, ಅದನ್ನೇ ಕತ್ತರಿಸಿ, ಮನೆಯವರೆಲ್ಲ ಅವಳ ಜನ್ಮದಿನವನ್ನು ಆಚರಿಸಿದ್ದರು.
ಅಂತಹ ಪರಿಸ್ಥಿಯಲ್ಲೂ ಹಿಮಾಂಶಿಕಾರ ತಾಯಿ ಮಗಳ ಪುಸ್ತಕ ಪ್ರಕಟಿಸುವ ಕನಸನ್ನು ನನಸಾಗಿಸಲು ಮುಂದಾದರು. ಅವರು ತಮ್ಮ ಒಂದು ಉಂಗುರವನ್ನು ಮಾರಿದರು. ಅವರ ತಂದೆ ಯಾರಿಂದಲೋ ಸಾಲ ಪಡೆದು ಮತ್ತೊಂದಷ್ಟು ಹಣ ತಂದರು. ಅಪ್ಪ -ಅಮ್ಮ ಇಬ್ಬರೂ ಸೇರಿ ಮಗಳ ಪುಸ್ತಕ ಪ್ರಕಟಿಸುವ ಕನಸನ್ನು ಪೂರ್ತಿಗೊಳಿಸಿದರು.
ಪುಸ್ತಕ ಪ್ರಕಟಿಸುವ ಅವರ ಕನಸು ನನಸಾಯಿತಾದರೂ ಅದರಿಂದ ಒಂದೇ ಒಂದು ರೂಪಾಯಿಯ ಲಾಭವಾಗಲಿಲ್ಲ. ಆದರೆ, ಆ ಪುಸ್ತಕದ ಮೂಲಕ ಹಿಮಾಂಶಿಕಾರಿಗೆ ತಮ್ಮಂತೆಯೇ ಮನೆಗಳಲ್ಲಿ ಕುಳಿತು ಬರವಣಿಗೆ ನಡೆಸುವ ಆನೇಕ ವೃತ್ತಿಪರ ಬರಹಗಾರರ ಸಂಪರ್ಕ ಸಿಕ್ಕಿತು. ಆಗ, ಮೊತ್ತ ಮೊದಲ ಬಾರಿಗೆ ಹಿಮಾಂಶಿಕಾರಿಗೆ ತಾನು ಮುಂದೇನು ಮಾಡಬಹುದು ಎಂಬುದರ ಒಂದು ಅಸ್ಪಷ್ಟ ಆಲೋಚನೆ ತೋರಿತು. ಆ ಆಲೋಚನೆಯ ಜಡನ್ನೇ ಹಿಡಿದು ನಡೆದ ಹಿಮಾಂಶಿಕಾ ಕೆಲವು ಸಣ್ಣಪುಟ್ಟ ಬರವಣಿಗೆ ಕೆಲಸಗಳನ್ನು ಮಾಡಿಕೊಡುವ ಅವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಆ ಸಣ್ಣಪುಟ್ಟ ಅವಕಾಶಗಳೇ ಮುಂದೆ ಅವರಿಗೆ ವೃತ್ತಿಪರ ಬರವಣಿಗೆಯನ್ನು ಕೈಗೆತ್ತಿಕೊಳ್ಳಲು ಪ್ರೇರೇಪಿಸಿದವು. ಹೀಗೆ ಹಿಮಾಂಶಿಕಾ ಮುಂದಿನ ಕೆಲವು ವರ್ಷಗಳಲ್ಲಿ ಒಬ್ಬ ಯಶಸ್ವಿ ಲೇಖಕಿಯಾಗಿ ರೂಪುಗೊಂಡರು. ಆ ಮೂಲಕ ತನ್ನ ಬದುಕಿಗೊಂದು ಭದ್ರವಾದ ಆರ್ಥಿಕ ಬುನಾದಿಯನ್ನು ಹಾಕಿಕೊಳ್ಳುವಲ್ಲಿ ಸಫಲರಾದರು.
೨೮ ವರ್ಷ ಪ್ರಾಯದ ಹಿಮಾಂಶಿಕಾ ಶರ್ಮಾ ಡಿಜಿಟಲ್ ಮಾಧ್ಯಮದಲ್ಲಿ ಈಗ ಒಬ್ಬ ಯಶಸ್ವೀ ‘ಕಂಟೆಂಟ್ ರೈಟರ್’ ಆಗಿ ರೂಪುಗೊಂಡಿದ್ದಾರೆ. ತನ್ನ ತಂಗಿಯ ಶಿಕ್ಷಣದ ಪೂರ್ಣ ಖರ್ಚನ್ನು ತಾನೇ ವಹಿಸಿಕೊಂಡು, ಅವಳು ದೊಡ್ಡ ಕಾಲೇಜಿನಲ್ಲಿ ಕಲಿಯಲು ಸಾಧ್ಯವಾಗುವಂತೆ ಮಾಡಿದ್ದಾರೆ. ತಂದೆಗೆ ಚಿಕ್ಕದೊಂದು ಹೋಟೆಲು ತೆರೆಯಲು ಹಣ ಹೊಂದಿಸಿ, ಅವರು ತಮ್ಮದೇ ಸ್ವಂತದ ವೃತ್ತಿ ಮಾಡಲು ಅವಕಾಶ ಒದಗಿಸಿದರು. ಈ ವರ್ಷ ತಮ್ಮ ಮತ್ತು ತಮ್ಮ ಕುಟುಂಬದ ಬಳಕೆಗೆಂದು ಒಂದು ಕಾರನ್ನು ಖರೀದಿಸಿದರು. ಅಂದು ಮೆಟ್ಟಿಲು ಇಳಿಯಲಾಗದ ತನ್ನನ್ನು ಅನಾಮತ್ತು ಎತ್ತಿ ನಡೆದ ತಂದೆ ಆ ಕಾರಿನ ಮೇಲೆ ಹೆಮ್ಮೆಯಿಂದ ಕೈಯಾಡಿಸುವಾಗ ಹಿಮಾಂಶಿಕಾ ತಮ್ಮ ಬದುಕು ಪಡೆದ ತಿರುವುಗಳನ್ನು ನೆನೆಪಿಸಿಕೊಂಡು ಭಾವುಕರಾಗುತ್ತಾರೆ. ತನ್ನನ್ನು ತನ್ನ ಕಾಲ ಮೇಲೆ ನಿಲ್ಲಿಸಲು ತಮ್ಮಿಂದಾದುದನ್ನೆಲ್ಲ ಮಾಡಿದ ತಮ್ಮ ಹೆತ್ತವರಿಗೆ ತಾನೊಂದು ಭಾರವಾಗುವ ಬದಲು ತಾನೇ ಅವರಿಗೆ ಆಸರೆಯಾಗಿ ನಿಲ್ಲಲು ಸಾಧ್ಯವಾದ ತೃಪ್ತಿ ಅವರೆಲ್ಲ ನೋವುಗಳನ್ನು ಸಹ್ಯಗೊಳಿಸುತ್ತಿದೆ.
” ಹಿಮಾಂಶಿಕಾರ ತಾಯಿ ಮಗಳ ಪುಸ್ತಕ ಪ್ರಕಟಿಸುವ ಕನಸನ್ನು ನನಸಾಗಿಸಲು ಮುಂದಾದರು. ಅವರು ತಮ್ಮ ಒಂದು ಉಂಗುರವನ್ನು ಮಾರಿದರು. ಅವರ ತಂದೆ ಯಾರಿಂದಲೋ ಸಾಲ ಪಡೆದು ಮತ್ತೊಂದಷ್ಟು ಹಣ ತಂದರು. ಅಪ್ಪ -ಅಮ್ಮ ಇಬ್ಬರೂ ಸೇರಿ ಮಗಳ ಪುಸ್ತಕ ಪ್ರಕಟಿಸುವ ಕನಸನ್ನು ಪೂರ್ತಿಗೊಳಿಸಿದರು.”
ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…
ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ ಯಾವುದೇ ನಾಗರಿಕನು ತನ್ನ…
ಕೆ.ಬಿ.ರಮೇಶನಾಯಕ ರಾಜ್ಯ ಸರ್ಕಾರದ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ಇಲಾಖೆ ಕಸರತ್ತು. ಮೈಸೂರು: ನಕಲಿ ಫಲಾನುಭವಿಗಳನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ…