ಅಂಕಣಗಳು

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್

ಎಚ್.ಹಾಲಪ್ಪ

ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಅಪೂರ್ಣ ಎಂದು ನಂಬಿದ್ದ ತಮ್ಮ ಕಾರ್ಯಪ್ರವೃತ್ತಿಯಿಂದ ಸಮಾಜದಲ್ಲಿ ಸಮಾನತೆಯನ್ನು ಜೀವಂತಗೊಳಿಸಿದ ದೇಶದಾದ್ಯಂತ ಬಾಬೂಜಿ ಎಂದೇ ಕರೆಯಲ್ಪಡುವ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಡಾ.ಬಾಬು ಜಗಜೀವನರಾಮ್ ದೇಶದ ಮೊದಲ ಉಪ ಪ್ರಧಾನಿ ಎಂಬ  ಹೆಗ್ಗಳಿಕೆಗೆ ಪಾತ್ರವಾದವರು. ಅವರ ಜನ್ಮದಿನವಾದ ಏ.೫ ನ್ನು ತನ್ಮಯಿ ದಿನ (ಸಮಾನತೆಯ ದಿನ) ಎಂದು ಆಚರಿಸಲಾಗುತ್ತಿದೆ.

ಮಹಾತ್ಮ ಗಾಂಽಜಿ ಅವರಿಂದ ‘ಪುಟವಿಟ್ಟ ಅಪ್ಪಟ ಚಿನ್ನ’ ಎಂದು ಕರೆಯಿಸಿಕೊಂಡಿದ್ದ ಬಾಬೂಜಿ ಅವರು ದೀರ್ಘಕಾಲ ಸೇವೆ ಸಲ್ಲಿಸಿದ ‘ಕೇಂದ್ರ ಕ್ಯಾಬಿನೆಟ್ ಮಂತ್ರಿ’ ಎಂಬ ದಾಖಲೆ ಬರೆದಿದ್ದಾರೆ. ೧೯೫೨ರಲ್ಲಿ ನಡೆದ ಪ್ರಥಮ ಚುನಾವಣೆಯಿಂದ ಆರಂಭಗೊಂಡು ೩೪ ವರ್ಷಗಳ ಕಾಲ ನಿರಂತರವಾಗಿ ಸಂಸದರಾಗಿ ಸೇವೆ ಸಲ್ಲಿಸಿದರು. ೧೯೮೬ ಜುಲೈ ೬ ರಂದು ಅವರು ನಿಧನರಾಗುವವರೆಗೂ ಸಂಸತ್‌ನಲ್ಲಿ ಸದಸ್ಯರಾಗಿ, ಅವರೊಬ್ಬ ಶ್ರೇಷ್ಠ ಸಂಸದೀಯ ಪಟು ಅಷ್ಟೇ ಅಲ್ಲ ಶೋಷಿತರ, ದಲಿತರ ಮತ್ತು ಪ್ರಜಾಪ್ರಭುತ್ವದ ಧ್ವನಿಯಾಗಿದ್ದರು.

ಗಾಂಧೀಜಿಯವರು ಆರಂಭಿಸಿದ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ಇವರು ಪಾಲ್ಗೊಂಡು ೧೯೩೫ ರಲ್ಲಿ ಶೋಷಿತರ ಸಮಾನತೆಗಾಗಿ ಹೋರಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ‘ಅಖಿಲ ಭಾರತ ದಮನಿತ ವರ್ಗಗಳ ಒಕ್ಕೂಟ’ವನ್ನು ಸ್ಥಾಪಿಸುವಲ್ಲಿ ಇವರು ನಿರ್ವಹಿಸಿದ ಪಾತ್ರ ಮಹತ್ವದ್ದಾಗಿದೆ. ‘ದುಡಿಮೆಗೆ ತಕ್ಕ ಕೂಲಿಯನ್ನು ನೀಡಬೇಕು ಮತ್ತು ದುಡಿಯುವ ಕೈಗಳಿಗೆ ಭೂಮಿಯನ್ನು ನೀಡಬೇಕು’ ಎಂದು ಬಾಬೂಜಿ ಅವರು ಒತ್ತಾಯಿಸಿದ್ದರ ಪರಿಣಾಮವಾಗಿ ಕಾರ್ಮಿಕರ ಸಂಘ ಸ್ಥಾಪನೆಗೊಂಡಿತು. ಕಾರ್ಮಿಕರ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕನಿಷ್ಠ ಕೂಲಿ ಮಸೂದೆ (೧೯೪೬), ಕೈಗಾರಿಕಾ ವಿವಾದ ಕಾಯ್ದೆ (೧೯೪೬) ಮತ್ತು ಭಾರತೀಯ ವಾಣಿಜ್ಯ ಮಂಡಳಿ ಕಾಯ್ದೆ (೧೯೪೬) ಈ ೩ ಮಸೂದೆಗಳನ್ನು ಮಂಡಿಸಿದರು. ಪ್ರಸ್ತುತ ದಿನಗಳಲ್ಲೂ ಈ ಕಾಯ್ದೆಗಳು ಚಾಲ್ತಿಯಲ್ಲಿರುವುದು ಇವರು ಕೈಗೊಂಡ ಕಾರ್ಯಗಳಿಗೆ ಸಾಕ್ಷಿಯಾಗಿದೆ.

೧೯೭೪ರಲ್ಲಿ ನಮ್ಮ ದೇಶ ಬರಗಾಲವನ್ನು ಎದುರಿಸಿದಾಗ ಆಹಾರದ ಬಿಕ್ಕಟ್ಟನ್ನು ನಿಭಾಯಿಸುವ ಹೊಣೆಯನ್ನು ಹೊತ್ತು ಆಹಾರದ ಖಾತೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡು ಭಾರತದ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಮತ್ತು ಸ್ವಾವಲಂಬನೆಯನ್ನು ಸಾಧಿಸುವಲ್ಲಿ ಇವರು ಕೈಗೊಂಡ ಕ್ರಮಗಳಿಂದಾಗಿ ಹಸಿರು ಕ್ರಾಂತಿಯ ಹರಿಕಾರ ಎಂದು ಪ್ರಸಿದ್ಧರಾಗಿದ್ದಾರೆ. ೧೯೭೪ರಲ್ಲಿ ರೋಮ್‌ನಲ್ಲಿ ನಡೆದ ‘ವಿಶ್ವ ಆಹಾರ ಸಮ್ಮೇಳನ’ದಲ್ಲಿ ಮಾತನಾಡುತ್ತಾ, ಯಾವ ಮನುಷ್ಯನೂ ಆಹಾರಕ್ಕಾಗಿ ಪರಿತಪಿಸಬಾರದು, ಯುದ್ಧ ತಡೆಗಟ್ಟಲು ವಿಶ್ವ ಸಂಸ್ಥೆಯಲ್ಲಿ ಭದ್ರತಾ ಸಮಿತಿ ಇರುವಂತೆ ಹಸಿವು ನಿವಾರಿಸಲು ಆಹಾರ ಭದ್ರತಾ ಸಮಿತಿ ಜಾರಿಗೆ ಬರುವುದು ಆವಶ್ಯಕ ಎಂದು ಪ್ರತಿಪಾದಿಸಿದರು. ಅವರ ಮಾತಿನ ಪರಿಣಾಮವಾಗಿ ‘ವಿಶ್ವ ಆಹಾರ ಸಮಿತಿ’ ಅಸ್ತಿತ್ವಕ್ಕೆ ಬಂದಿತು.

ಬಾಬೂಜಿ ಅವರು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಗೌರವಕ್ಕೆ ಆದ್ಯತೆ ನೀಡಿದರು. ಜಾತಿ ಆಧಾರಿತ ಭೇದಭಾವವನ್ನು ತೀವ್ರವಾಗಿ ವಿರೋಧಿಸಿ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಹಕ್ಕುಗಳು ದೊರಕಬೇಕು ಎಂದು ಆಶಿಸಿದವರು. ಅಂತರ್ಜಾತಿ ವಿವಾಹಗಳು ಸಮಾಜದಲ್ಲಿ ಸಮಾನತೆ ಮತ್ತು ಏಕತೆಯನ್ನು ಬೆಳೆಸುವ ಸಾಧನವೆಂದು ಇವರ ಚಿಂತನೆಗಳು ಸೂಚಿಸುತ್ತವೆ. ಬಾಬೂಜಿ ಅವರ ಜೀವನ ಚರಿತ್ರೆಯನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು. ಸಮಾಜದಲ್ಲಿ ಇವರ ಆದರ್ಶಗಳನ್ನು ಅಳವಡಿಸಿಕೊಂಡು ಜಾತಿ- ಧರ್ಮಗಳ ಅಡೆತಡೆಗಳನ್ನು ಮೀರಿ ಪ್ರತಿಯೊಬ್ಬರ ಆಯ್ಕೆಯನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಸಮಾನತೆ ಮತ್ತು ಮಾನವೀಯತೆ ಸ್ಥಾಪನೆಯಾಗುತ್ತದೆ. ಇವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಅನುಸರಿಸಿದಾಗ ಮಾತ್ರ ಇವರಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ.

ಶೋಷಿತ ಜನಾಂಗದಲ್ಲಿ ಹುಟ್ಟಿ ಜಾತಿ ಅಸ್ಪೃಶ್ಯತೆಯನ್ನು ಮೀರಿ ಬೆಳೆದ ಬಾಬೂಜಿ ಅವರು ಭವಿಷ್ಯದ ಭಾರತಕ್ಕೆ ಆದರ್ಶವಾಗಿದ್ದಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಮೊದಲ ಉಪ ಪ್ರಧಾನಿಯಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರ ರಾಜಕಾರಣದಲ್ಲಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ.

(ಲೇಖಕರು, ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು)

ಆಂದೋಲನ ಡೆಸ್ಕ್

Recent Posts

ಚಾರಣದಲ್ಲಿ ಮಾರ್ಗಸೂಚಿ ಕಟ್ಟುನಿಟ್ಟು ಅನುಸರಣೆಗೆ ಕ್ರಮ ಅಗತ್ಯ

ರಾಜ್ಯದ ಅರಣ್ಯ ಪ್ರದೇಶ ಒಂದು ವಾರದ ಅಂತರದಲ್ಲಿ ಕೇರಳ ರಾಜ್ಯದ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಾಕೆಯ ಪ್ರಾಣವನ್ನೇ ಬಲಿತೆಗೆದುಕೊಂಡರೆ, ಇನ್ನೊಬ್ಬಾಕೆಯ…

51 mins ago

ಐತಿಹಾಸಿಕ ಸಂಸತ್ ಅಧಿವೇಶನಕ್ಕೆ ದಿನಗಣನೆ!

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ನಿರ್ಧಾರ  ಏಪ್ರಿಲ್ ೧೬ರಿಂದ ೧೮ರವರೆಗೆ ಮೂರು ದಿನಗಳ ಕಾಲ ಸಂಸತ್ತಿನ…

55 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್, ಬಿಜೆಪಿ ಪಾಳೆಯದಲ್ಲಿ ಮಿಶ್ರಭಾವನೆ ಹುಟ್ಟು ಹಾಕಿದ ಉಪಚುನಾವಣೆ

ಅಭ್ಯರ್ಥಿಗಳ ಗೆಲುವಿಗಾಗಿ ಸ್ವತಃ ಫೀಲ್ಡಿಗಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಮತ್ತು…

1 hour ago

ಬಿಸಿಲ ಝಳಕ್ಕೆ ನೀರಿಗಿಳಿಯುವ ಮುನ್ನಇರಲಿ ಎಚ್ಚರ..!

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಇವೆ ಅಪಾಯಕಾರಿ ಸ್ಥಳಗಳು; ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ಮಡಿಕೇರಿ:ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು…

4 hours ago

ಹಾಲಿ-ಮಾಜಿ ಶಾಸಕರಿಗೆ ಕ್ಷೇತ್ರ ಪುನರ್‌ವಿಂಗಡಣೆ ಗುಮ್ಮ!

ಕೆ.ಬಿ.ರಮೇಶನಾಯಕ ಶೇ.೩೩ ಮಹಿಳಾ ಮೀಸಲು ಜಾರಿಯಾದರೆ ಐದು ಸ್ಥಾನ ಮೀಸಲು  ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಕೆಲ ಭಾಗಗಳನ್ನು ಬೇರ್ಪಡಿಸಿ…

4 hours ago

150 ವರ್ಷಕ್ಕೆ ಸಾಕ್ಷಿಯಾದ ಸರ್ಕಾರಿ ಶಾಲೆ!

ಹೇಮಂತ್‌ಕುಮಾರ್ ಮಂಡ್ಯ: ಜಿಲ್ಲೆಯ ಮೇಲುಕೋಟೆ ಪ್ರಖ್ಯಾತ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿದ್ದು, ಹತ್ತಾರು ಶತಮಾನಗಳ ವಿಶೇಷತೆಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ…

4 hours ago