Andolana originals

ಬಿಸಿಲ ಝಳಕ್ಕೆ ನೀರಿಗಿಳಿಯುವ ಮುನ್ನಇರಲಿ ಎಚ್ಚರ..!

ನವೀನ್ ಡಿಸೋಜ

ಕೊಡಗು ಜಿಲ್ಲೆಯಲ್ಲಿ ಇವೆ ಅಪಾಯಕಾರಿ ಸ್ಥಳಗಳು; ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ

ಮಡಿಕೇರಿ:ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದ್ದು,ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ.

ಕೊಡಗಿನ ತಂಪಾದ ವಾತಾವರಣ, ಹರಿಯುವ ನದಿಗಳು, ಜಲಪಾತಗಳು ಜನರನ್ನು ತಮ್ಮತ್ತ ಸೆಳೆಯುತ್ತವೆ. ಆದರೆ ಇದೇ ಆಕರ್ಷಣೆ ಅನೇಕ ಬಾರಿ ಅವಗಢಗಳಿಗೆ ಕಾರಣವಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಗುಂಪಾಗಿ ಹೋಗಿ ನದಿ, ಹೊಳೆಗಳಲ್ಲಿ ಇಳಿದು ಆಟವಾಡುವ ವೇಳೆ ಅಜಾಗರೂಕತೆಯಿಂದಾಗಿ ದುರ್ಘಟನೆಗಳು ಸಂಭವಿಸುತ್ತಿವೆ.

ನೀರಿನ ಆಳ, ಹರಿವಿನ ತೀವ್ರತೆ, ತಕ್ಷಣ ಬದಲಾಗುವ ಪರಿಸ್ಥಿತಿಗಳ ಬಗ್ಗೆ ಅರಿವು ಇಲ್ಲದೆ ನೀರಿಗೆ ಇಳಿಯುವುದು ಅಪಾಯಕಾರಿಯಾಗಿದೆ. ಹೊರಗೆ ಶಾಂತವಾಗಿ ಕಾಣುವ ನೀರಿನ ಅಡಿಯಲ್ಲಿ ಆಳವಾದ ಕುಣಿಗಳು, ತೀವ್ರ ಸುಳಿಗಳು ಇರುತ್ತವೆ. ಈ ಎಲ್ಲ ಕಾರಣಗಳಿಂದ ಕೊಡಗಿನಲ್ಲಿ ಬೇಸಿಗೆ ಸಮಯದಲ್ಲಿಯೇ ಹಲವರು ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ.

ಪ್ರವಾಸಿಗರು ಸೆಲಿ, ವಿಡಿಯೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಎಚ್ಚರಿಕೆ ಫಲಕಗಳನ್ನು ಕಡೆಗಣಿಸುತ್ತಾರೆ. ಮದ್ಯಪಾನ ಮಾಡಿದ ಬಳಿಕ ನೀರಿಗೆ ಇಳಿಯುವುದು, ಸ್ನೇಹಿತರ ಒತ್ತಾಯಕ್ಕೆ ಮಣಿದು ನೀರಿನಲ್ಲಿ ಆಟವಾಡಲು ಮುಂದಾಗುವುದು, ಸ್ಥಳೀಯರ ಸೂಚನೆಗಳನ್ನು ನಿರ್ಲಕ್ಷಿಸುವುದು. ಇಂತಹ ವಿಷಯಗಳು ಅವಗಢಗಳು ಸಂಭವಿಸಲು ಕಾರಣವಾಗುತ್ತವೆ. ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ ಅವುಗಳನ್ನು ಉದಾಸೀನ ಮಾಡುವುದರಿಂದ ಅಪಾಯಗಳು ಸಂಭವಿಸುತ್ತಿವೆ. ಜೀವಕ್ಕಿಂತ ಮೋಜು ಮುಖ್ಯವಲ್ಲ ಎಂಬ ಅರಿವು ಎಲ್ಲರಲ್ಲೂ ಮೂಡಬೇಕಿದೆ.

ಈಗ ಬೇಸಿಗೆ ರಜೆಯ ಸಮಯ. ಮಕ್ಕಳು (ಗಂಡು ಮಕ್ಕಳು) ತಮ್ಮ ಸ್ನೇಹಿತರೊಂದಿಗೆ ಸುತ್ತಾಡಲು, ಆಟವಾಡಲು ತೆರಳುತ್ತಾರೆ. ಕೆಲವೊಮ್ಮೆ ಪೋಷಕರಿಗೆ ತಿಳಿಸದೇ ತೋಟಗಳಲ್ಲಿನ ಕೆರೆಗಳಲ್ಲಿ, ಹೊಳೆ, ಜಲಪಾತಗಳಲ್ಲಿ ಆಟವಾಡಲು ತೆರಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಕ್ಕಳ ಪ್ರಾಣಕ್ಕೇ ತೊಂದರೆಯಾಗಿರುವ ಅನೇಕ ಘಟನೆಗಳು ನಡೆದ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ಮಕ್ಕಳ ಪೋಷಕರು ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳ ಚಟುವಟಿಕೆ ಬಗ್ಗೆ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಕೆರೆ, ನದಿ, ಜಲಪಾತಗಳ ಬಳಿ ಇರುವ ಸ್ಥಳೀಯರೂ ಈ ಬಗ್ಗೆ ಎಚ್ಚರ ವಹಿಸಿದರೆ ಅವಘಡಗಳನ್ನು ತಪ್ಪಿಸಬಹುದಾಗಿದೆ.

ಕೊಡಗು ಜಿಲ್ಲೆಯ ನದಿ, ಜಲಾಶಯಗಳ ಬದಿಯಲ್ಲಿ ಅನೇಕ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಿವೆ. ಅಲ್ಲಿಗೆ ಆಗಮಿಸುವ ಪ್ರವಾಸಿಗರು ನೀರಿಗಿಳಿದು ಅಪಾಯವನ್ನು ತಂದುಕೊಳ್ಳುವ ಘಟನೆಗಳು ಸಂಭವಿಸುತ್ತಿರುತ್ತವೆ. ಇತ್ತೀಚೆಗೆ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿಯೂ ಇಂತಹದ್ದೇ ಘಟನೆ ನಡೆದು ಪ್ರವಾಸಿಗರೊಬ್ಬರು ಪ್ರಾಣ ಕಳೆದು ಕೊಂಡಿದ್ದರು. ಹೀಗಾಗಿ ಇಂತಹ ಹೋಂಸ್ಟೇ ಮತ್ತು ರೆಸಾರ್ಟ್‌ನವರೇ ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಸುರಕ್ಷತಾ ಕ್ರಮವಾಗಿ ಸೂಚನಾ ಫಲಕಗಳನ್ನು ಅಳವಡಿಸುವುದು, ಈಜು ತಜ್ಞರನ್ನು ನೇಮಿಸಿಕೊಳ್ಳುವುದು, ಲೈಫ್ ಜಾಕೆಟ್‌ನಂತಹ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ ಪಿ.ಭಂಡಾರಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಅಪಾಯದ ಸ್ಥಳಗಳು: 

* ಹಾರಂಗಿ ಹಿನ್ನೀರು

* ದುಬಾರೆ ಕಾವೇರಿ ನದಿ ತಟ

* ಚೇಲಾವರ ಜಲಪಾತ

* ಇರ್ಪು ಜಲಪಾತ

* ನಿಸರ್ಗಧಾಮ

* ಬರಪೊಳೆ ನದಿ

* ಕೋಟೆ ಅಬ್ಬಿ

* ತೋಟಗಳಲ್ಲಿನ ಖಾಸಗಿ ಕೆರೆಗಳು

ತಪ್ಪದೇ ವಹಿಸಬೇಕಾದ ಎಚ್ಚರಿಕೆಗಳು: 

* ನೀರಿನ ಆಳ ತಿಳಿಯದೆ ಇಳಿಯಬೇಡಿ

* ಎಚ್ಚರಿಕೆ ಫಲಕಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ

ಪಾಲಿಸಿ

* ಮದ್ಯಪಾನ ಮಾಡಿ ನೀರಿಗೆ ಇಳಿಯಬೇಡಿ

* ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ

* ಜಾರು ಬಂಡೆಗಳ ಮೇಲೆ ನಿಲ್ಲಬೇಡಿ

* ಲೈಫ್ ಜಾಕೆಟ್ ಇಲ್ಲದೆ ಸಾಹಸ ಚಟುವಟಿಕೆ ಬೇಡ

* ಸ್ಥಳೀಯರ ಸೂಚನೆಗಳನ್ನು ಪಾಲಿಸಿ

” ಬೇಸಿಗೆಯಲ್ಲಿ ನೀರಿಗಿಳಿದು ಅಪಾಯ ತಂದುಕೊಳ್ಳುವವರ ಸಂಖ್ಯೆ ಹೆಚ್ಚು. ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ನದಿ ತೀರದಲ್ಲಿರುವ ಹೋಂಸ್ಟೇ, ರೆಸಾರ್ಟ್ ಮಾಲೀಕರು ಈ ಬಗ್ಗೆ ಎಚ್ಚರ ವಹಿಸಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.”

-ಚಂದ್ರಶೇಖರ್ ಪಿ.ಭಂಡಾರಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

9 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

9 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

9 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

9 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

9 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

9 hours ago