ಎಡಿಟೋರಿಯಲ್

ಚಾರಣದಲ್ಲಿ ಮಾರ್ಗಸೂಚಿ ಕಟ್ಟುನಿಟ್ಟು ಅನುಸರಣೆಗೆ ಕ್ರಮ ಅಗತ್ಯ

ರಾಜ್ಯದ ಅರಣ್ಯ ಪ್ರದೇಶ ಒಂದು ವಾರದ ಅಂತರದಲ್ಲಿ ಕೇರಳ ರಾಜ್ಯದ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಾಕೆಯ ಪ್ರಾಣವನ್ನೇ ಬಲಿತೆಗೆದುಕೊಂಡರೆ, ಇನ್ನೊಬ್ಬಾಕೆಯ ಜೀವನದಲ್ಲಿ ಭಯಾನಕ ಗುರುತು ಉಳಿಸಿಬಿಟ್ಟಿತು. ಕೇರಳದ ಕೊಚ್ಚಿ ಮೂಲದ ಜಿ.ಎಸ್.ಶರಣ್ಯ ಅವರು ಏಪ್ರಿಲ್ ೩ರಂದು ಕೊಡಗು ಜಿಲ್ಲೆ ಪ್ರವಾಸಕ್ಕೆ ಏಕಾಂಗಿಯಾಗಿ ಬಂದಿದ್ದರು. ಅರಣ್ಯ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದರು ಎನ್ನಲಾಗಿದೆ. ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕಾಗಿ ಬಂದಿದ್ದ ಅವರನ್ನು ಅರಣ್ಯ ಇಲಾಖೆಯು ಬೇರೊಂದು ತಂಡದೊಂದಿಗೆ ಜೊತೆ ಮಾಡಿ ಕಳುಹಿಸಿತ್ತು. ಸಂಜೆ ವೇಳೆಗೆ ತಂಡ ಹಿಂದಿರುಗಿದರೆ ಶರಣ್ಯ ನಾಪತ್ತೆಯಾಗಿದ್ದರು.  ಇದರಿಂದ ಇಲಾಖೆ ಕಂಗಾಲಾಗಿತ್ತು. ಆಕೆ ಮಧ್ಯಾಹ್ನದ ವೇಳೆ, ಕೇರಳದಿಂದ ಬಂದಾಗ ವಾಸ್ತವ್ಯ ಇದ್ದ ಹೋಟೆಲ್‌ಗೆ ಫೋನ್ ಕರೆ ಮಾಡಿ, ತಾನು ದಾರಿ ತಪ್ಪಿರುವುದಾಗಿ ಹೇಳಿದ್ದರು. ನಂತರ ಫೋನ್ ಸಂಪರ್ಕ ಕಡಿತಗೊಂಡಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸರು ಶರಣ್ಯ ಅವರ ರಕ್ಷಣಾ ಕಾರ್ಯ ಕೈಗೊಂಡರು. ಇನ್ನೇನು ಶರಣ್ಯ ಅವರು ಜೀವಂತವಾಗಿ ಸಿಗುವುದು ಕಷ್ಟ ಎಂಬ ನಿರ್ಧಾರಕ್ಕೆ ಬರುವ ವೇಳೆ ಏ.೫ರಂದು ಆಕೆಯನ್ನು ಪತ್ತೆಹಚ್ಚಿ ಅತ್ಯಂತ ಸುರಕ್ಷಿತವಾಗಿ ಕಾಡಿನ ಮಕ್ಕಳು ಅರ್ಥಾತ್ ಪರಿಶಿಷ್ಟ ಆಡಿ ಜನಾಂಗದ ಯುವಕರು ವಾಪಸ್ ಕರೆತಂದರು. ಇಡೀ ರಾಜ್ಯವೇ ಶರಣ್ಯ ಸುರಕ್ಷಿತವಾಗಿ ಬಂದಿದ್ದನ್ನು ನೋಡಿ ನಿಟ್ಟುಸಿರುಬಿಟ್ಟಿತು.

ಶರಣ್ಯ ಪ್ರಕರಣ ಸುಖಾಂತ್ಯವಾದ ಬೆನ್ನಲ್ಲೇ ಏ.೮ರಂದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಶ್ರೇಣಿಗೆ ಪೋಷಕರು ಸೇರಿದಂತೆ ೪೦ ಮಂದಿ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ ಬಾಲಕಿ ಶ್ರೀನಂದಾ ಅರಣ್ಯ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದರು. ಇಡೀ ಕುಟುಂಬ ಮಾತ್ರವಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಇದೊಂದು ರೀತಿಯಲ್ಲಿ ಆಘಾತಕಾರಿಯಾಗಿತ್ತು. ಶ್ರೀನಂದಾಗಾಗಿ ಶೋಧಕಾರ್ಯ ಚಾಲನೆಗೊಂಡಿತ್ತು. ಸತತ ಹುಡುಕಾಟದ ನಂತರ ಏ.೧೦ರಂದು ಬಾಲಕಿ ಸುಮಾರು ೨,೦೦೦ ಅಡಿ ಪ್ರಪಾತದಲ್ಲಿ ಶವವಾಗಿ ಪತ್ತೆಯಾದಳು. ಬೃಹತ್ ತಂಡದ ಜೊತೆ ಹೋಗಿದ್ದರೂ ಆಕೆ ಕಾಣೆಯಾಗಿ ಮೃತಪಟ್ಟಿದ್ದು ಹಲವಾರು ಅನುಮಾನಗಳಿಗೆ ಕಾರಣವಾಯಿತು. ಅದೇನೆ ಇದ್ದರೂ ಬೆಟ್ಟ, ಕಾಡು ಪ್ರದೇಶಗಳಲ್ಲಿ ಚಾರಣಕ್ಕೆ ಹೋಗುವವರ ಸುರಕ್ಷತೆಯ ಬಗ್ಗೆ ಗಂಭೀರ ಚಿಂತನೆಗೆ ಈ ಉಭಯ ಪ್ರಕರಣಗಳೂ ಅವಕಾಶ ಕಲ್ಪಿಸಿವೆ.

ಚಾರಣಕ್ಕೆ ಹೋಗುವ ಮಂದಿ ಪೂರ್ವಭಾವಿಯಾಗಿ ರಕ್ಷಣಾ ಸಿದ್ಧತೆಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಅಲ್ಲದೆ, ಏಕಾಂಗಿಯಾಗಿ ಹೋಗುವ ಬಯಕೆಯನ್ನು ನಿಯಂತ್ರಿಸಿಕೊಳ್ಳುವುದು ಸೂಕ್ತ. ಗುಂಪುಗಳಲ್ಲಿ ಪ್ರವಾಸ, ಚಾರಣಕ್ಕೆ ತೆರಳುವುದು ಹೆಚ್ಚು ಸುರಕ್ಷಿತ. ಅಲ್ಲದೆ, ಚಾರಣಿಗರು ತರಬೇತಿ ಪಡೆಯಬೇಕು. ಬೆಟ್ಟಕ್ಕೆ ತೆರಳಿದಾಗ ಅಥವಾ ನೋಂದಣಿ ಮಾಡಿಕೊಳ್ಳುವಾಗ ತರಬೇತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಸ್ಥಳೀಯರನ್ನು ಸೇರಿಸಿಕೊಳ್ಳುವ ಬಗ್ಗೆ ಯೋಚಿಸಬೇಕು. ಅಂದರೆ ಒಂದು ತಂಡ ಚಾರಣಕ್ಕೆ ಹೋದರೆ ಸ್ಥಳೀಯರೊಬ್ಬರನ್ನು ಮಾರ್ಗದರ್ಶಕರಾಗಿ ಕರೆದೊಯ್ಯುವ ಜರೂರತ್ತನ್ನು ಈ ಎರಡೂ ಪ್ರಕರಣಗಳು ಸಾಕ್ಷೀಕರಿಸಿವೆ. ಪ್ರವಾಸದ ಸಂದರ್ಭಗಳಲ್ಲಿ ಫೋಟೊ ಅಥವಾ ರೀಲ್ಸ್ ಮೋಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಈ ಬಗ್ಗೆ ಹಿರಿಯರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.

ಶರಣ್ಯ ಅವರು ಟೆಕ್ಕಿಯಾಗಿದ್ದು, ಮಾನಸಿಕವಾಗಿ ಬಹಳ ಗಟ್ಟಿತನ ಹೊಂದಿದ್ದರಿಂದ ಬಹುಶಃ ಅವರು ನಾಲ್ಕು ದಿನಗಳ ನಂತರವೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ, ಇಂತಹ ಅತಿರೇಕ ಅನಿಸುವ ಮನೋಸ್ಥೈರ್ಯ ಬಹಳ ಅಪಾಯಕಾರಿ ಎಂಬುದನ್ನು ಅರಿಯಬೇಕು. ಇನ್ನು ಶ್ರೀನಂದಾ ಅವರಿಗೆ ಇನ್ನಷ್ಟೇ ಜೀವನ ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದ್ದ ವಯಸ್ಸು.ಅಷ್ಟರಲ್ಲೇ ಆಕೆಯ ಜೀವನ ದುರಂತವಾಗಿ ಅಂತ್ಯ ಕಂಡಿದ್ದು ವಿಪರ್ಯಾಸ. ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಬೇಕಿದೆ. ಏತನ್ಮಧ್ಯೆ ರಾಜ್ಯ ಸರ್ಕಾರ ಅರಣ್ಯ ಪ್ರದೇಶ, ಬೆಟ್ಟದ ಚಾರಣಿಗರು ಹಾಗೂ ಪ್ರವಾಸಿಗರಿಗೆ ಹೊಸ ಮಾರ್ಗಸೂಚಿಗಳನ್ನು ರಚಿಸಲು ಆಲೋಚಿಸಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಇರುವ ಮಾರ್ಗಸೂಚಿಯನ್ನೂ ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ಆದೇಶ ನೀಡಬೇಕು. ಶರಣ್ಯ ಮತ್ತು ಶ್ರೀನಂದಾದಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು.

” ಚಾರಣಕ್ಕೆ ಹೋಗುವ ಮಂದಿ ಪೂರ್ವಭಾವಿಯಾಗಿರಕ್ಷಣಾ ಸಿದ್ಧತೆಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಅಲ್ಲದೆ, ಏಕಾಂಗಿಯಾಗಿ ಹೋಗುವ ಬಯಕೆಯನ್ನು ನಿಯಂತ್ರಿಸಿಕೊಳ್ಳುವುದು ಸೂಕ್ತ. ಗುಂಪುಗಳಲ್ಲಿಪ್ರವಾಸ, ಚಾರಣಕ್ಕೆ ತೆರಳುವುದು ಹೆಚ್ಚು ಸುರಕ್ಷಿತ. ಅಲ್ಲದೆ, ಚಾರಣಿಗರು ತರಬೇತಿ ಪಡೆಯಬೇಕು.”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

9 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

13 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

13 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

13 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

13 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

14 hours ago