Andolana originals

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ

ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ ಟಾಸ್ಕ್.

“ನಾನು ನಿಮಗೆ ಬೇಡವಾದೆನೇ? ” ಎಂದು ಬೇಸರದಲ್ಲಿ ಅಟ್ಟ ಸೇರಿದ್ದ ತಟ್ಟೆ ಪುಟ್ಟೆ, ಪಾತ್ರೆಪಗಡೆಗಳೂ ಒಮ್ಮೆ ಆಚೆ ಬಂದು ಮಡಿಯಾಗಿ ಮತ್ತೆ ತಮ್ಮ ಜಾಗವನ್ನು ಸೇರುತ್ತವೆ. ಮೂಲೆಮೂಲೆಯಲ್ಲೂ ಅವಿತು ಕುಳಿತ ದುಂಬುದೂಳು ಕೂಡ ಮನೆಯಿಂದ ಕಾಲ್ಕೀಳುತ್ತದೆ. “ಮೊನ್ನೆ ತಾನೇ ವರಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲಾ ಕ್ಲೀನ್ ಮಾಡಿದ್ದೀವಲ್ಲ ಬಿಡಮ್ಮ” ಅಂತ ಅಂದ್ರೆ “ನಿನ್ನ ಮಕ್ಕಳು ಬೀದಿ ಸುತ್ತಿ ಬಂದು ಮುಡಿಸಿಕೋಬಿಟ್ಟಿದ್ದಾರೆ, ಎಲ್ಲಾ ಮೈಲಿಗೆ ಆಗ್ಹೋಗಿದೆ, ಗೌರಿವ್ರತ ಅಂದ್ರೆ ಸುಮ್ನೇನಾ ಬಹಳ ಮಡಿಯಾಗಿ ನಿಷ್ಠೆಯಿಂದ ಮಾಡಬೇಕು. ಮಡಿನೀರು ತಂದು ಬಳಕೆ ತೆಗೀಬೇಕು. ವಾರ ತುಂಬಿಸುವವರೆಗೆ ಸ್ವಲ್ಪ ನಿನ್ನ ಮಕ್ಕಳ ಕೈಕಾಲಿಗೆ ಹಗ್ಗಕಟ್ಟು ತಾಯಿ” ಅಂತ ಅಮ್ಮ ಸ್ವಲ್ಪ ಖಡಕ್ಕಾಗೇ ವಾರ್ನ್ ಮಾಡ್ತಾಳೆ.

ಮಡಿ ಮಾಡುವುದರ ಮೊದಲ ಹಂತ ಸಂಪು- ಟ್ಯಾಂಕು ತೊಳೆದು ಹುಣಿಸೆಹಣ್ಣು ಹಾಕಿ ಮಡಿ ಮಾಡೋದು. ಕಳೆದ ವರ್ಷ ಟ್ಯಾಂಕನ್ನ ನಾನೇ ಮಡಿ ಮಾಡ್ತೀನಿ ಅಂತ ಟ್ಯಾಂಕಿಗಿಳಿದು ಹತ್ತೋ ಕಾಗದೆ ಪರದಾಡಿದ್ದು, ಹಂಗೂ ಹಿಂಗೂ ಹತ್ತೇ ಬಿಟ್ಟೆ ಅನ್ನುವಾಗ ಟ್ಯಾಂಕಿನ ಕುತ್ತಿಗೆ ಮುರಿದು ಹಾಕಿದ್ದು; ಅಮ್ಮ ಮುಖಕ್ಕೆ ಮಾಡಿದ ಮಂಗಳಾ ರತಿ, ಅಬ್ಬಾ. . ! ಈ ವರ್ಷ ನನ್ನನ್ನು ಹತ್ತಿರಕ್ಕೂ ಬಿಡದೆ ಯಾರೋ ತೆಳ್ಳಗಿರುವ ಹುಡುಗನನ್ನು ಕರೆಸಿ ಬಾವಿನೀರು ಸೇದಿ ಅದಕ್ಕೆ ಹುಣಿಸೆಹಣ್ಣಿನ ಹುಳಿಯನ್ನು ಪ್ರೋಕ್ಷಿಸಿ ಅವನಿಗೆ ಮೊದಲು ಮಡಿ ಮಾಡಿಸಿ ಆಮೇಲೆ ಟ್ಯಾಂಕ್ ಮಡಿ ಮಾಡಿಸಿದ್ದಾಳೆ ಅಮ್ಮ.

ಗೌರಿಗಣೇಶ ಅಂದ ಕೂಡಲೇ ನಮಗೆ ನೆನಪಾಗುವುದೇ ದೊಡ್ಡದೊಡ್ಡ ಗಾತ್ರದ ವರ್ಣರಂಜಿತ ಗಣೇಶನ ಮೂರ್ತಿಗಳು. ಅದರ ಬುಡದಲ್ಲೊಂದು ಪುಟ್ಟದಾದ ಅವನಮ್ಮ ಗೌರಿ. ಊರಿನ ಪ್ರಮುಖ ಬೀದಿಗಳಲ್ಲಿ ಕೂರಿಸುವ ಗಣೇಶನ ನಡುವೆ ನಮ್ಮ ಮನೆಯ ಗೌರಿ ಗೌಣವಾಯಿತೇನೋ ಎಂದೆನಿಸ ಬಹುದು. ಆದರೆ ಹೆಣ್ಣುಮಕ್ಕಳು ಆಚರಿಸುವ ಸ್ವರ್ಣಗೌರಿ ವ್ರತದ ವಿಶೇಷತೆಯೇ ಬೇರೆಯಾಗಿದೆ.

ಹಬ್ಬದ ದಿನ ಬೆಳ್ಳಂಬೆಳಿಗ್ಗೆ ತಣ್ಣೀರಲ್ಲಿ ಮಿಂದು ಮಡಿಯುಟ್ಟು ಬಾವಿಯಿಂದ ಮಡಿನೀರು ಸೇಯ್ದು ಬಿಂದಿಗೆಯನ್ನು ಹೂಗಳು ಮಾವಿನ ಎಲೆಗಳಿಂದ ಚಂದದಲ್ಲಿ ಅಲಂಕರಿಸಿ ಗಂಗೆ ಪೂಜೆ ಮಾಡ ಲಾಗುತ್ತದೆ. ಇದನ್ನು ಬಳಕೆ ತೆಗೆಯೋದು ಅಂತಾನೂ ಕರೆಯುತ್ತಾರೆ. ಅರಿಶಿನದ ಪುಡಿಯಿಂದ ಗೌರಮ್ಮನನ್ನು ಮಾಡಿ ಗೌರಿಪೂಜೆ ಮಾಡು ತ್ತಾರೆ. ಇತ್ತೀಚೆಗಂತೂ ಮನೆಗಳಲ್ಲಿ ಬೆಳ್ಳಿಯ ಗೌರಿ ವಿಗ್ರಹಕ್ಕೆ ಪೊಜೆ ಸಲ್ಲಿಸುವವರೇ ಹೆಚ್ಚು, ಅಂಗಡಿಗಳಲ್ಲಿ ಸಿಗುವ ಸಿದ್ಧ ಗೌರಮ್ಮನನ್ನು ತಂದು ಪೂಜಿಸುವವರೂ ಉಂಟು. ಆದರೆ ಅರಿಶಿನದಿಂದ ತಯಾರಿ ಸಿದ ಗೌರಿಯೇ ಶ್ರೇಷ್ಠ ಅಂತ ನನ್ನಮ್ಮ ಅರಿಶಿನದ ಗೌರಿಯನ್ನೇ ಮಾಡು ತ್ತಾಳೆ. ಗೌರಿಹಬ್ಬಕ್ಕೆ ವಿಶೇಷವಾದ ಭಕ್ಷ್ಯಗಳನ್ನು ನೈವೇದ್ಯಕ್ಕೆಂದು ತಯಾ ರಿಸುತ್ತಾರೆ. ಅಜ್ಜಿ ಇದ್ದಾಗ ದೇವರ ಕೋಣೆಯಲ್ಲಿಯೇ ಒಂದು ಒರಳು ಕಲ್ಲು ಹಾಗೂ ಸೌದೆ ಒಲೆ ಇತ್ತು. ದೇವರ ನೈವೇದ್ಯಕ್ಕೆ ಪ್ರಸಾದ ಅಲ್ಲಿಯೇ ಸಿದ್ಧವಾಗುತ್ತಿತ್ತು. ಅಜ್ಜಿ ಅಷ್ಟು ನೇಮನಿಷ್ಠೆ ಭಕ್ತಿಯಿಂದ ಮಡಿ ವಂತಿಕೆ ಪಾಲಿಸುತ್ತಿದ್ದಳು. ಈಗ ಅದು ಅಡುಗೆ ಕೋಣೆಗೇ ಶಿಫ್ಟ್ ಆಗಿದೆ.

ಗೌರಿಹಬ್ಬದಲ್ಲಿ ಬಹಳ ವಿಶೇಷ ಅನ್ನಿಸೋದು ನನ್ನೂರಿನ ಗೌರಿ ಗುಡಿಯ ಗೌರಿಪೂಜೆ. ಗೌರಿಹಬ್ಬದ ಹಿಂದಿನ ದಿನವೇ ಐವರು ಮುತ್ತೈದೆಯರು ಮಡಿಯಿಂದ ಗೌರಿಗುಡಿಗೆ ತೆರಳಿ ಒರಳುಕಲ್ಲು ಹಾಗೂ ಒನಕೆಗೆ ಮೊದಲು ಪೂಜೆ ಸಲ್ಲಿಸಿ ಆನಂತರ ಶುದ್ಧ ಅರಿಶಿನದ ಕೊಂಬನ್ನು ಹದವಾಗಿ ಕುಟ್ಟಿ ಜರಡಿ ಹಿಡಿದು ಅರಿಶಿನದಪುಡಿ ತಯಾರಿಸಿ ಪೂಜಾರಪ್ಪನ ಕೈಗೆ ಕೊಟ್ಟು ಬರುತ್ತಾರೆ.

ಮರುದಿನ ಬೆಳಿಗ್ಗೆ ಆ ಅರಿಶಿನದ ಪುಡಿಯಿಂದ ಸುಂದರವಾದ ಗೌರಮ್ಮನ ಮೂರ್ತಿ ಮಾಡು ವುದು ಪೂಜಾರಪ್ಪನ ಕೆಲಸ. ಐದಾರು ತಲೆಮಾರುಗಳ ಹಿಂದಿನಿಂದಲೂ ಇದೇ ಪದ್ಧತಿ ನಡೆದು ಬಂದಿದೆಯೆಂದು ನನ್ನಜ್ಜಿ ಹೇಳುತ್ತಿದ್ದ ನೆನಪು. ಗೋಧೂಳಿ ಸಮಯಕ್ಕೆ ಪೂಜಾರಪ್ಪ ಗೌರಮ್ಮನನ್ನು ಕೂರಿಸಿ ಅಲಂಕರಿಸಿಟ್ಟರೆ ಹಿಂದಿನ ದಿನ ಬಂದಿದ್ದ ಐವರು ಮುತ್ತೈದೆಯರು ಪೂಜಾ ರಪ್ಪನ ಜೊತೆಗೂಡಿ ಮೊದಲ ಪೂಜೆ ನೆರವೇರಿಸಿ ಕಂಕಣಕಟ್ಟಿಸಿಕೊಂಡು ದೇವಿಗೆ ಬಾಗಿನ ಅರ್ಪಿಸುತ್ತಾರೆ. ಆನಂತರ ಉಳಿದವರ ಸರದಿ. ಇತ್ತೀಚೆಗೆ ರಾಸಾಯನಿಕ ವಸ್ತು ಬಳಸಿ ತಯಾರಿ ಸಿದ ಬಣ್ಣಬಣ್ಣದ ಮೂರ್ತಿ ಆಕರ್ಷಕವಾಗಿ ಕಂಡರೂ ನಮ್ಮ ಹಿಂದಿನವರ ಪದ್ಧತಿ ಅದರ ಹಿಂದಿದ್ದ ಪರಿಸರ ಕಾಳಜಿ ಬೆರಗು ಮೂಡಿಸುತ್ತದೆ.

ಮನೆಯಲ್ಲಿ ಹೊಸನೀರು ತಂದು ಬಳಕೆ ತೆಗೆದ ಮೇಲೆ ತವರಿಂದ ಉಡುಗೊರೆಯಾಗಿ ಬಂದ ಸೀರೆಯುಟ್ಟು ತವರಿಂದ ಬಂದ ಬಾಗಿನ ವನ್ನು ಹೊತ್ತು ಹೆಂಗಳೆಯರ ದಂಡು ಗೌರಿಗುಡಿಯತ್ತ ತೆರಳುತ್ತದೆ. “ಮುತ್ತೈದೆ ಮುತ್ತೈದೆ ಬಾಗಿನ ತಗೋ, ಸಾವಿತ್ರಿ ಸಾವಿತ್ರಿ ಬಾಗಿನ ಕೊಡು” ಅಂತ ಸೆರಗಿನಿಂದ ಬಾಗಿನ ಹಿಡಿದು ದೇವಿಗೆ ಅರ್ಪಿಸು ತ್ತಾರೆ. ಸಾಮಾನ್ಯವಾಗಿ ಪ್ರತಿಮನೆಯಿಂದ ಸಿದ್ಧವಾಗುವ ಎರಡು ಬಾಗಿನದಲ್ಲಿ ಒಂದು ಗೌರಿಗಾದರೆ ಮತ್ತೊಂದು ಹಿರಿಯ ಮುತ್ತೈದೆ ಯರಿಗೋ, ಮನೆಯ ಹೆಣ್ಣು ಮಕ್ಕಳಿಗೋ ಕೊಡುವುದುಂಟು. ಇತ್ತೀಚೆಗೆ ಜನರಿಗೆ ಕೊಡುವ ಬಾಗಿನದಲ್ಲಿ ಮೊರಕ್ಕೆ ಕುಟ್ಟೆಹಿಡಿಯು ತ್ತದೆಂದು ಸ್ಟೀಲ್ ತಟ್ಟೆ ಬಳಸಿ ‘ತಟ್ಟೆಬಾಗಿನ’ ನೀಡುತ್ತಾರೆ. ಆದರೆ ಗೌರಿಗುಡಿಯ ಗೌರಮ್ಮಂಗೆ ಮೊರದ ಬಾಗಿನದ ಪದ್ಧತಿ ಹಾಗೇ ಮುಂದುವರಿದಿದೆ. ಪುಟಾಣಿ ಹೆಣ್ಣುಮಕ್ಕಳೂ ಚಂದದಲ್ಲಿ ಅಲಂ ಕೃತವಾಗಿ ಪುಟಾಣಿ ಮೊರದಲ್ಲಿ ಬಾಗಿನ ಮಾಡಿಸಿಕೊಂಡು ಬಂದು ವಯಸ್ಸಿಗೆ ತಕ್ಕಂತೆ ಪುಟಾಣಿ ಬಾಗಿನವನ್ನು ದೇವಿಗೆ ನೀಡುತ್ತಾರೆ. ಗೌರಿಗೆ ಬಾಗಿನ ಅರ್ಪಿಸಿ ಪೂಜೆಮುಗಿಸಿ ಬಂದ ನಂತರವೇ ತಿಂಡಿ ಸೇವನೆ.

ಗೌರಿಹಬ್ಬದಲ್ಲಿ ಗೌರಮ್ಮ ಭೂಮಿಗೆ ಬರುತ್ತಾಳೆಂದರೆ ತವರು ಮನೆಗೆ ಹೆಣ್ಮಗಳು ಬಂದಿದ್ದಾಳೆಂಬ ಪ್ರತೀತಿ ಇನ್ನೂ ಇದೆ. ಅದಕ್ಕಾಗಿಯೇ ಹಬ್ಬದ ತರುವಾಯ ಮೂರ್ತಿ ವಿಸರ್ಜನೆಗೂ ಮುನ್ನವೇ ಪ್ರತಿಮನೆ ಯಿಂದಲೂ ಸೋಗಲು ನೀಡಿ ಉಡಿ ತುಂಬಿ ಗೌರಮ್ಮನನ್ನು ಕಳುಹಿಸಿ ಕೊಡುತ್ತಾರೆ. ಹಿಂದಿನವರು ಮಾಡಿರುವ ಪ್ರತಿಯೊಂದು ಪದ್ಧತಿಗೂ ಒಂದು ಹಿರಿದಾದ ಅರ್ಥವಿದೆ. ಆಡಂಬರವೆನಿಸೋ ಅದ್ಧೂರಿಯಾದ ಆಚರಣೆಗಿಂತ ಅರ್ಥಗರ್ಭಿತ ಆಚರಣೆ ಮೇಲಲ್ಲವೇ? ಸಂಭ್ರಮಿಸುವುದಕ್ಕೆ ಹಬ್ಬ ನೆಪವಾಗದೆ ಅನುಕರಣೀಯವಾಗಬೇಕು.
shubamangalamahesh@gmail.com

ಆಂದೋಲನ ಡೆಸ್ಕ್

Recent Posts

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

1 min ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

20 mins ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

35 mins ago

ʼಮಣ್ಣಿನ ಗಣಪನಿಗೆ ಮನ್ನಣೆಗೆ ಸಿಗಲಿʼ

ಭಾರತಿ ಸಜ್ಜನ್‌ ಮೈಸೂರು : ಜಾಗತಿಕ ತಾಪಮಾನ ಏರುಗತಿಯ ನಡುವೆಯೇ ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಎಡೆ ಸಿದ್ಧತೆ ನಡೆದಿದೆ.…

51 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌

1 hour ago

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

1 day ago