ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕರ್ನಾಟಕ, ಮಹಾರಾಷ್ಟ್ರದಲ್ಲಿ ಮತ್ತೆ ಹಿಂದಿ ವಿವಾದ

ಹಿಂದಿ ಭಾಷೆಯ ಪ್ರಶ್ನೆ ಮತ್ತೆ ವಿವಾದವನ್ನು ಉಂಟು ಮಾಡಿದೆ. ತನ್ನ ಮಾತೃ ಭಾಷೆಯಲ್ಲದ ಮತ್ತು ಉತ್ತರ ಭಾರತದ ರಾಜ್ಯಗಳ ಮಾತೃ ಭಾಷೆಯನ್ನು ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ಮೇಲೆ ಹೇರಲಾಗುತ್ತಿದೆ ಎನ್ನುವ ಆರೋಪ ಮತ್ತೆ ವಿವಾದವಾಗಿ ತಲೆ ಎತ್ತಿದೆ. ಕೇಂದ್ರ ಸರ್ಕಾರ ೧೯೬೪ರಲ್ಲಿ ದೌಲತ್ ಸಿಂಗ್ ಕೊಠಾರಿ ನೇತೃತ್ವದಲ್ಲಿ ದೇಶದ ಶಿಕ್ಷಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಭಾಷಾ ನೀತಿ ಹೇಗಿರಬೇಕೆನ್ನುವ ಬಗೆಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ನೇಮಕ ಮಾಡಿತ್ತು. ಈ ಆಯೋಗವು ೧೯೬೮ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಗೆ ಶಿಫಾರಸು ಮಾಡಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ಇಂಗ್ಲಿಷ್ ಮತ್ತು ಉರ್ದು ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಒಪ್ಪಿಕೊಂಡಿತ್ತು. ಹಾಗಾಗಿ ಸ್ವಾತಂತ್ರ್ಯಾ ನಂತರ ಆಡಳಿತ ಮತ್ತು ಶಿಕ್ಷಣದಲ್ಲಿ ಹೊಸದೊಂದು ಭಾಷಾ ನೀತಿ ರೂಪಿಸಲು ಅಂದಿನ ಸರ್ಕಾರ ನಿರ್ಧರಿಸಿತ್ತು. ಆಗ ಕೇಂದ್ರ ಸರ್ಕಾರ ಹಿಂದಿ ಮತ್ತು ಇಂಗ್ಲಿಷನ್ನು ಆಡಳಿತ ಭಾಷೆಗಳನ್ನಾಗಿ ಒಪ್ಪಿಕೊಂಡಿತು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿಗಳ ಮೂಲಕ ಶಿಕ್ಷಣದಲ್ಲಿ ಇಂಗ್ಲಿಷ್ ಕಲಿಕೆಯನ್ನು ಜನಪ್ರಿಯಗೊಳಿಸಿದ್ದರು. ಹಾಗಾಗಿ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಪರಿಚಯಿಸುವ ಕೇಂದ್ರದ ನೀತಿಯನ್ನು ದಕ್ಷಿಣ ರಾಜ್ಯಗಳು ಮುಖ್ಯವಾಗಿ ತಮಿಳುನಾಡು ತೀವ್ರವಾಗಿ ವಿರೋಧಿಸಿತ್ತು. ತಮಿಳುನಾಡಿನ ಮಟ್ಟಿಗೆ ಈ ವಿರೋಧದ ದನಿಯನ್ನು ಕೇಂದ್ರ ಸರ್ಕಾರ ಇನ್ನೂ ತಗ್ಗಿಸಲು ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ತಮಿಳರು ಗಟ್ಟಿಯಾಗಿ ನಿಂತಿರುವುದು ತಮ್ಮ ಮಾತೃಭಾಷೆಯ ಬೆಳವಣಿಗೆ ಬಗೆಗಿರುವ ಬದ್ಧತೆಯನ್ನು ತೋರುತ್ತದೆ.

ಕರ್ನಾಟಕ ಸರ್ಕಾರ ಈಗ ಹತ್ತನೇ ತರಗತಿಯಲ್ಲಿ ಮೂರನೇ ಭಾಷೆಯನ್ನಾಗಿ ತೆಗೆದುಕೊಂಡಿರುವ ಹಿಂದಿ ಪರೀಕ್ಷೆಯಲ್ಲಿ ಜಾರಿಯಲ್ಲಿದ್ದ ಅಂಕಗಳನ್ನು ಪರೀಕ್ಷಾ ಫಲಿತಾಂಶಕ್ಕೆ ಪರಿಗಣಿಸದೆ ಗ್ರೇಡ್‌ಪದ್ಧತಿಯನ್ನು ಜಾರಿಗೆ ತರಲು ಕೈಗೊಂಡಿರುವ ತೀರ್ಮಾನವನ್ನು ಹಿಂದಿ ಬಗೆಗೆ ಹೆಚ್ಚು ಒಲವು ಉಳ್ಳ ಭಾರತೀಯ ಜನತಾ ಪಕ್ಷದ ರಾಜ್ಯದ ನಾಯಕರು ವಿವಾದ ಸೃಷ್ಟಿಸುತ್ತಿರುವುದು ವಿಪರ್ಯಾಸ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕ ನೀಡುವ ಪದ್ಧತಿಯನ್ನು ಕೈಬಿಡುವ ಶಿಕ್ಷಣ ಇಲಾಖೆಯ ನಿರ್ಧಾರದಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂಕ ನೀಡುವ ಬದಲಿಗೆ ಗ್ರೇಡ್ ನೀಡುವ ಹೊಸ ಪದ್ಧತಿಯನ್ನು ಈಗ ಅಳವಡಿಸಲಾಗಿದೆ. ಇದರಿಂದ ತನ್ನದಲ್ಲದ ಭಾಷೆಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾ ಹೆಚ್ಚಿನ ಪ್ರಮಾಣದಲ್ಲಿ ಅನುತ್ತೀರ್ಣರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಹೊಸ ಪದ್ಧತಿಯಿಂದ ಅನುಕೂಲಕರವಾಗಿದೆ ಎನ್ನುವುದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸ್ಪಷ್ಟನೆ. ಈ ನಿರ್ಧಾರವನ್ನು ಸಹಜವಾಗಿಯೇ ಕನ್ನಡ ಪರಸಂಘಟನೆಗಳು ಸ್ವಾಗತಿಸಿವೆ. ವಿದ್ಯಾರ್ಥಿ ಸಮೂಹ ಸಹಜವಾಗಿ ಖುಷಿ ಪಡುವುದನ್ನು ಇಲ್ಲ ಎನ್ನಲಾಗದು.

ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ೧ರಿಂದ ೫ನೇ ತರಗತಿವರೆಗೆ ಕಡ್ಡಾಯವಾಗಿ ಬೋಧಿಸಲಾಗುತ್ತಿದ್ದ ತೃತೀಯ ಭಾಷೆಯಾಗಿದ್ದ ಹಿಂದಿಯನ್ನು ರದ್ದು ಮಾಡಿದೆ. ಮರಾಠಿಗರ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಹಲವು ವರ್ಷಗಳಿಂದ ವಿರೋಧ ಮಾಡಿಕೊಂಡೇ ಬಂದಿದ್ದ ಶಿವಸೇನೆ ಪ್ರಯತ್ನಕ್ಕೆ ಈಗ ಜಯಸಿಕ್ಕಿದೆ ಎಂದು ಕುಣಿದಾಡಲಾಗುತ್ತಿದೆ.

ಭಾಷೆಯ ವಿಷಯದಲ್ಲಿ ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಹಲವಾರು ಬಾರಿ ಗೊಂದಲ ಸೃಷ್ಟಿಸಲಾಗಿದೆ. ಕಳೆದ ವರ್ಷ ಏಪ್ರಿಲ್ ೧೬ರಂದು ಮಹಾರಾಷ್ಟ್ರ ಸರ್ಕಾರ ಒಂದನೇ ತರಗತಿಯಿಂದ ಐದರವರೆಗೆ ಕಡ್ಡಾಯವಾಗಿ ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಮಾಡಿ ಆಜ್ಞೆ ಹೊರಡಿಸಿತ್ತು. ಒಂದನೇ ತರಗತಿಯಿಂದಲೇ ಹಿಂದಿಯನ್ನು ಕಡ್ಡಾಯ ಮಾಡುವುದರಿಂದ ಮರಾಠಿ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ, ಈ ನೀತಿ ತೃತೀಯ ಭಾಷಾ ಸೂತ್ರದ ಹೆಸರಿನಲ್ಲಿ ಸ್ಥಳೀಯ ಮಾತೃ ಭಾಷೆಯನ್ನು ಕಡೆಗಣಿಸಲಾಗುತ್ತದೆ, ಇದರಿಂದ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ನಾಶಕ್ಕೆ ಎಡೆಮಾಡಿ ಕೊಟ್ಟಂತಾಗುವುದೆಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಿದವು. ಇದರ ಫಲವಾಗಿ ಅದೇ ವರ್ಷ ಜೂನ್ ೧೭ರಂದು ಮತ್ತೊಂದು ಆಜ್ಞೆ ಹೊರಡಿಸಿ ಹಿಂದಿ ಕಲಿಕೆಯನ್ನು ಕಡ್ಡಾಯದ ಬದಲಿಗೆ ಆಯ್ಕೆ (ಆಪ್ಷನಲ್ ) ಯ ವಿಷಯವನ್ನಾಗಿ ಮಾಡಲಾಯಿತು.

ಕಳೆದ ತಿಂಗಳ ೨೯ರಂದು ಈ ಎರಡೂ ಆಜ್ಞೆಗಳನ್ನು ರದ್ದು ಮಾಡಿದ್ದು, ಹಿಂದಿಯನ್ನು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಡ್ಡಾಯವಾಗಿ ಕಲಿಸುವ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ. ಈ ಸಂಬಂಧ ಶಿಕ್ಷಣ ತಜ್ಞ ಡಾ. ನರೇಂದ್ರ ಜಾಧವ್ ಅವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಲಾಗಿದ್ದು ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ತೃತೀಯ ವಿಷಯವನ್ನಾಗಿ ಕಲಿಯುವ ಸಂಬಂಧ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾಷಾ ನೀತಿ ಹೇಗಿರಬೇಕೆನ್ನುವ ವಿಷಯದಲ್ಲಿ ಅಧ್ಯಯನ ಮಾಡಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ. ಕನ್ನಡ ಭಾಷೆಗಿಂತ ಮರಾಠಿ ಮಾತನಾಡುವವರಿಗೆ ಹಿಂದಿ ಕಲಿಕೆ ಮತ್ತು ಬರವಣಿಗೆ ಸುಲಭ. ಆದರೂ ಮರಾಠಿ ಭಾಷೆಯ ಹಿರಿಮೆ ಮತ್ತು ಐತಿಹಾಸಿಕ ಹಿನ್ನೆಲೆ ಹಾಗೂ ಮರಾಠಿ ಸಂಸ್ಕೃತಿಗೆ ಹಿಂದಿಯಿಂದ ಯಾವುದೇ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಲು ಕೇಂದ್ರದಲ್ಲಿ ಹಿಂದಿ ಪ್ರೇಮಿ ತನ್ನದೇ ಪಕ್ಷವಾದ ಬಿಜೆಪಿ ಸರ್ಕಾರವಿದ್ದರೂ, ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಹಿಂದಿ ಹೇರಿಕೆ ವಿಷಯದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿರುವುದನ್ನು ಮೆಚ್ಚಲೇಬೇಕು.

ಇಡೀ ದೇಶದಲ್ಲಿ ತಮಿಳುನಾಡು ಬಿಟ್ಟರೆ ಬೇರೆ ಯಾವುದೇ ರಾಜ್ಯವೂ ಕೇಂದ್ರದ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿಲ್ಲ.ಕೇಂದ್ರ ಸರ್ಕಾರವು ೨೦೨೦ರಲ್ಲಿ ಜಾರಿಗೆ ತಂದ ತ್ರಿಭಾಷಾ ಸೂತ್ರವನ್ನು ಒಳಗೊಂಡ ನೂತನ ಶಿಕ್ಷಣ ನೀತಿಯನ್ನೂ ತಿರಸ್ಕರಿಸಿದ್ದರಿಂದ ಕೇಂದ್ರದಿಂದ ಬರಬೇಕಿದ್ದ ೨,೧೫೨ ಕೋಟಿರೂ.ಗಳನ್ನೂ ಲೆಕ್ಕಿಸದೆ ದ್ವಿಭಾಷಾ ನೀತಿಗೆ ಅಂಟಿಕೊಂಡಿದೆ. ಅಂದರೆ ಕೇಂದ್ರ ಸರ್ಕಾರ ಸುತ್ತುಬಳಸಿ ಹಿಂದಿಯನ್ನು ನಮ್ಮ ಮೇಲೆ ಹೇರುತ್ತಿದೆ ಎನ್ನುವುದು ತಮಿಳುನಾಡಿನ ಬಲವಾದ ಶಂಕೆ. ಹಾಗಾಗಿ ತಮಿಳುನಾಡು ಹಿಂದಿ ವಿರೋಧಿ ನೀತಿಯನ್ನು ಬಲವಾಗಿ ವಿರೋಧ ಮಾಡಿಕೊಂಡೇ ಬಂದಿರುವುದರಿಂದ ತನ್ನ ರಾಜ್ಯದಲ್ಲಿ ಹಿಂದಿ ನುಸುಳದಂತೆ ಎಚ್ಚರವಹಿಸಿರುವುದು ಗಮನಾರ್ಹ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರವು ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟಿರುವುದು ಕಾಣುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದ ಕಾರಣದಿಂದ ಅಂಕದ ಬದಲಿಗೆ ಗ್ರೇಡ್ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ಕರ್ನಾಟಕವು ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿದೆ ಎಂದು ಭಾವಿಸಕೂಡದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಸ್ಪಷ್ಟನೆ ನೀಡುವ ಮೂಲಕ ಸಮಗ್ರ ಶಿಕ್ಷಣ ನೀತಿಯನ್ವಯ ಕೇಂದ್ರ ಸರ್ಕಾರ ನೀಡುವ ಅನುದಾನದ ಗದಾಪ್ರಹಾರದಿಂದ ತಪ್ಪಿಸಿಕೊಂಡಿದೆ. ಆದರೆ ಬೇರೆ ಭಾಷೆಯ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ತೆಗೆದುಕೊಂಡಿರುವುದೇ ಹೆಚ್ಚಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ತನ್ನ ಶೈಕ್ಷಣಿಕ ಭಾಷಾ ನೀತಿಯನ್ನು ಪುನರ್ ರೂಪಿಸವ ಅವಶ್ಯಕತೆ ಇದೆ ಎಂಬುದು ಭಾಷಾ ತಜ್ಞರ ಅಭಿಮತ.

ಈ ಮಧ್ಯೆ ಸಿಬಿಎಸ್‌ಇ ತ್ರಿಭಾಷಾ ಸೂತ್ರದಂತೆ ನೂತನ ಪಠ್ಯ ನೀತಿಯನ್ನು ಪ್ರಕಟಿಸಿದ್ದು , ಇದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀವ್ರವಾಗಿ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ತಮ್ಮಪ್ರತಿಭಟನೆ ವ್ಯಕ್ತಪಡಿಸಿರುವುದು ಗಮನಾರ್ಹ. ತಮಿಳುನಾಡಿನಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿಯಲ್ಲಿರುವುದರಿಂದ ತ್ರಿಭಾಷಾ ಸೂತ್ರವನ್ನು ಪರೋಕ್ಷವಾಗಿ ನಮ್ಮ ಮೇಲೆ ಹೇರಲಾಗುತ್ತಿದೆ ಎನ್ನುವುದು ಸ್ಟಾಲಿನ್ ಆರೋಪ.

” ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದ ಹಿನ್ನೆಲೆಯಲ್ಲಿ ಅಂಕದ ಬದಲಿಗೆ ಗ್ರೇಡ್ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ಕರ್ನಾಟಕವು ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿದೆ ಎಂದು ಭಾವಿಸಕೂಡದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

5 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

5 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

5 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

5 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

5 hours ago