ಹಾಡು ಪಾಡು

ತಿರಸ್ಕಾರದ ವ್ಯಂಗ್ಯ ಪ್ರತಿಭಟನೆಯ ಸಂಕೇತವಾದಾಗ

ಶೇಷಾದ್ರಿ ಗಂಜೂರು

ಸಂಕೇತವನ್ನೇ ಬ್ರಾಂಡ್ ಆಗಿಸಿಕೊಂಡ ದಿಢೀರ್ ಚಳವಳಿಯೊಂದು ಇದ್ದಕ್ಕಿದ್ದಂತೆ ಎದುರು ನಿಂತಾಗ ಅದರ ಬಗೆಗೆ ಒಂದು ಆರೋಗ್ಯಕರ ಸಂದೇಹದ ಅಗತ್ಯವೂ ಇದೆ

‘ಜುಜಿತ್ಸು‘ ಎಂಬ ಮಲ್ಲಯುದ್ಧದ ವಿದ್ಯೆಯ ಬಗೆಗೆ ಹಲವರಿಗೆ ಮಾಹಿತಿ ಇರಬಹುದು. ಎದುರಾಳಿಯ ಆಕ್ರಮಣವನ್ನೇ ತಿರುಗುಬಾಣವಾಗಿಸುವ ಚಾತುರ್ಯದ ವಿದ್ಯೆ ಅದು. ಇಂತಹ ಚಾತುರ್ಯ, ಮಲ್ಲಯುದ್ಧದ ಈ ಕ್ರೀಡೆಗೆ ಮಾತ್ರ ಸೀಮಿತವಲ್ಲ. ರಾಜಕಾರಣದಲ್ಲಿಯೂ ಇಂತಹ ‘ಮಾತಿನ ಜುಜಿತ್ಸು’ವಿಗೆ ಹಲವಾರು ಉದಾಹರಣೆಗಳಿವೆ. ೨೦೧೪ರ ಪಾರ್ಲಿಮೆಂಟ್ ಚುನಾವಣೆಗಳಿಗೂ ಮುಂಚೆ, ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನರೇಂದ್ರ ಮೋದಿಯವರನ್ನು ‘ಚಹ ಮಾರುವವ’ ಎಂದಿದ್ದೂ, ಅದನ್ನೇ ಮೋದಿಯವರು ‘ಚಾಯ್‌ವಾಲಾ‘ ಎನ್ನುವ ಬಿರುದಂತೆ ಬಳಸಿ, ‘ಚಾಯ್ ಪೆ ಚರ್ಚಾ’ ಗಳನ್ನು ಏರ್ಪಡಿಸಿ, ರಾಜಕೀಯ ಅಸ್ತ್ರವಾಗಿಸಿದ್ದೂ ಎಲ್ಲರಿಗೂ ತಿಳಿದೇ ಇದೆ.

ಇಂತಹ ಮಾತಿನ ಜುಜಿತ್ಸುಗಳಿಗೆ ದೇಶ-ಕಾಲ ಮೀರಿದ ಇತಿಹಾಸವಿದೆ. ಹದಿನೆಂಟನೆಯ ಶತಮಾನದ ಫ್ರಾನ್ಸಿನಲ್ಲಿ ‘ಕೂಲಾಟ್ಸ್’ಎಂಬ ಮೊಣಕಾಲು ಉದ್ದದವರೆಗಿರುವ ರೇಷ್ಮೆ ಪ್ಯಾಂಟ್‌ಗಳನ್ನು ಧರಿಸುವ ಪರಿಪಾಠ ರಾಜ ಮನೆತನ/ಸಿರಿವಂತ ವರ್ಗಗಳಲ್ಲಿ ಇತ್ತು. ಸಮಾಜದ ಮೇಲ್ವರ್ಗದವರು ಮಾತ್ರ ಈ ‘ಕೂಲಾಟ್ಸ್ ಗಳನ್ನು ಧರಿಸುತ್ತಿದ್ದರಿಂದ, ಅದು ಗಣ್ಯತೆಯ ಸಂಕೇತವೂ ಆಗಿ, ‘ಕೂಲಾಟ್ಸ್ ತೊಡದವರನ್ನು (ಫ್ರೆಂಚ್ ಭಾಷೆಯಲ್ಲಿ ‘ಸ್ಯಾನ್ಸ್ ಕೂಲಾಟ್ಸ್) ‘ಗಮಾರರು’ ಎಂದು ನಗೆಯಾಡುವುದೂ ನಡೆದಿತ್ತು. ಆದರೆ, ಆ ಶತಮಾನದ ಅಂತ್ಯದಲ್ಲಿ, ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಗಣ್ಯತೆಯ ನೊಗವನ್ನು ಕಿತ್ತೊಗೆದು ಚಕ್ರವರ್ತಿಯ ಕತ್ತನ್ನೇ ಕತ್ತರಿಸಿ ಗಣರಾಜ್ಯ ಸ್ಥಾಪಿಸಿದ ಕ್ರಾಂತಿಕಾರರು ‘ಸ್ಯಾನ್ಸ್ ಕೂಲಾಟ್ಸ್’ ಎಂಬ ನಿಂದನೆಯನ್ನೇ ತಮ್ಮ ಬಿರುದೂ-ಗುರುತೂ ಆಗಿಸಿಕೊಂಡರು.

ಫ್ರೆಂಚ್ ಕ್ರಾಂತಿಗೆ ಎರಡು ಶತಮಾನಗಳ ಮುನ್ನ ಹದಿನಾರನೆಯ ಶತಮಾನದಲ್ಲಿ, ಇಂದಿನ ಹಾಲೆಂಡ್ ಅಂದಿನ ಸ್ಪೇನಿನ ಅಧಿನದಲ್ಲಿದ್ದಾಗ, ಹಾಲೆಂಡಿನ ಕೆಲ ನಾಯಕರು ತಮ್ಮ ಮನವಿಯೊಂದನ್ನು ಮಂಡಿಸಲು ಸ್ಪೇನಿನ ರಾಜಪ್ರತಿನಿಧಿಯನ್ನು ಭೇಟಿ ಮಾಡಿದರು. ಆಗ, ಸ್ಪೇನಿನ ಹಿರಿಯ ಅಧಿಕಾರಿಯೊಬ್ಬ ‘ಈ ಭಿಕ್ಷುಕರ ಬಗೆಗೆ ಹೆದರಬೇಕಿಲ್ಲ’ ಎಂದು ರಾಜಪ್ರತಿನಿಧಿಯ ಕಿವಿಯಲ್ಲಿ ಪಿಸುಗುಟ್ಟಿದ. ಅದು ಆ ನಾಯಕರಿಗೆ ಕೇಳಿಸಿತು. ‘ಭಿಕ್ಷುಕ‘ ಎಂಬ ಈ ಬಯ್ಗುಳವನ್ನೇ ತಮ್ಮ ಅಸ್ಮಿತೆಯಾಗಿಸಿಕೊಂಡ ಅವರು, ಬೇಕೆಂದೇ ಭಿಕ್ಷುಕರಂತೆ ಹರಕು-ಮುರಕು ಧರಿಸುವುದು, ಉಣ್ಣುವುದನ್ನೇ ತಮ್ಮ ಪ್ರತಿಭಟನೆಯ ತಂತ್ರವನ್ನಾಗಿಸಿಕೊಂಡರು. ‘ಭಿಕ್ಷುಕ ಜ಼ಿಂದಾಬಾದ್’ ಅವರ ಹೋರಾಟದ ಕರೆಯೂ ಆಯಿತು. ದಶಕಗಳ ಹೋರಾಟದ ನಂತರ ಸ್ಪೇನಿನ ಆಧಿಪತ್ಯದಿಂದ ಹಾಲೆಂಡ್ ಬಿಡುಗಡೆಹೊಂದಿತು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್, ಭಾರತದ ಯುವ ಸಮೂಹದ ಬಗೆಗೆ ಮಾತನಾಡುತ್ತಾ ಬಳಸಿದ ‘ಪ್ಯಾರಾಸೈಟ್‘, ‘ಕಾಕ್ರೋಚ್‘ (‘ಪರಾವಲಂಬಿ‘, ‘ಜಿರಳೆ‘) ಪದಗಳು ಮತ್ತು ಅದಕ್ಕೆ ಉತ್ತರವೆಂಬಂತೆ ಕಾಣುತ್ತಿರುವ ಇಂದಿನ ‘ಕಾಕ್ರೋಚ್ ಜನತಾ ಪಕ್ಷ’ದ ಹೆಸರಿನ ಚಳವಳಿ ಮೇಲಿನದೆಲ್ಲವನ್ನೂ ನೆನಪಿಸುತ್ತದೆ.

ತುಳಿತಕ್ಕೊಳಗಾದವರು ಆಡಳಿತ ವರ್ಗದ ಅಹಂಕಾರವನ್ನೇ ತಮ್ಮ ಪ್ರತಿಭಟನೆಯ ಇಂಧನವಾಗಿಸಿಕೊಳ್ಳುವುದು — ಹೊಸದಲ್ಲವಾದರೂ — ಒಂದು ಆಕರ್ಷಕ ಕಥನ ಎನ್ನುವುದು ನಿಜ. ‘ಕಾಕ್ರೋಚ್‘ ಎಂಬ ತಿರಸ್ಕಾರದ ವ್ಯಂಗ್ಯವನ್ನೇ ಪ್ರತಿಭಟನೆಯ ಸಂಕೇತವಾಗಿಸಿಕೊಳ್ಳುವುದು ಮೊನಚಾದ ವಿಡಂಬನೆ ಎನ್ನುವುದೂ ನಿಜವೇ. ಆದರೆ, ಸಂಕೇತವನ್ನೇ ಬ್ರಾಂಡ್ ಆಗಿಸಿಕೊಂಡ ದಿಢೀರ್ ಚಳವಳಿಯೊಂದು ಇದ್ದಕ್ಕಿದ್ದಂತೆ ಎದುರು ನಿಂತಾಗ ಅದರ ಬಗೆಗೆ ಒಂದು ಆರೋಗ್ಯಕರ ಸಂದೇಹದ ಅಗತ್ಯವೂ ಇದೆ. ಇಂದಿನ ಹಲವಾರು ಡಿಜಿಟಲ್ ಪ್ರತಿಭಟನೆಗಳ ಆಳದಲ್ಲಿರುವ ಒಂದು ಸತ್ಯವನ್ನು ನಾವು ಕಾಣಲೇಬೇಕಿದೆ: ಈ ಮೀಮ್ಸ್-ರೀಲ್ಸ್ ಆಧಾರಿತ ಚಳವಳಿಗಳು ಬಹುಮಟ್ಟಿಗೆ ದುರ್ಬಲವಾಗಿರುತ್ತವೆ. ಅವು, ತಲ್ಲಣ ಮೂಡಿಸಿ ಬದಲಾವಣೆ ತರುವ ಸ್ಛೋಟಕಗಳಂತೆ ಕೆಲಸ ಮಾಡುವ ಬದಲು ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿಡಲು ನೆರವಾಗುವ ‘ಸೇಫ್ಟಿ ವಾಲ್ವ್’ಗಳಾಗಿ ಕೆಲಸ ಮಾಡುವುದೇ ಹೆಚ್ಚು.

ತಾತ್ವಿಕ/ಸೈದ್ಧಾಂತಿಕ ಬದ್ಧತೆ ಮತ್ತು ಸ್ಪಷ್ಟತೆಗಳಿಲ್ಲದೆ ಕೇವಲ ವ್ಯಂಗ್ಯವೊಂದರ ಆಧಾರದಲ್ಲಿಯೇ ರೂಪುಗೊಳ್ಳುವ ಚಳವಳಿಯ ಯಶಸ್ಸು ಖಂಡಿತಾ ಪ್ರಶ್ನಾರ್ಹ. ಅಽಕಾರದ ಅಸಂಬದ್ಧತೆಯನ್ನು ಬಯಲಿಗೆಳೆಯುವಲ್ಲಿ ವ್ಯಂಗ್ಯ-ವಿಡಂಬನೆಗಳು ಉತ್ತಮ ಸಾಧನಗಳು ಎಂಬುದರಲ್ಲಿ ಎರಡು ಮಾತಿಲ್ಲ.  ಆದರೆ, ಕೇವಲ ವ್ಯಂಗ್ಯ-ವಿಡಂಬನೆಗಳಿಂದಲೇ ಸಾಂಸ್ಥಿಕ ವ್ಯವಸ್ಥೆಯೊಂದನ್ನು ಕಟ್ಟಲು ಸಾಧ್ಯವಿಲ್ಲ; ‘ಜಿರಳೆ’ ಎಂಬ ನಿಂದನೆಯನ್ನು ರಾಜಕೀಯ ಪಕ್ಷವೊಂದರ ಗುರುತಾಗಿಸಿಕೊಂಡು ಸುಪರಿಚಿತ ಬ್ರಾಂಡ್ ಆಗಿ ಬೆಳೆಯಬಹುದೇ ಹೊರತು ಅದೊಂದು ನಿಜವಾದ ಪರ್ಯಾಯವಾಗುವುದಿಲ್ಲ. (ಇಲ್ಲಿ, ಇಂದು ತೆರೆಮರೆಗೆ ಸರಿದಿರುವ ‘ಹೊಟ್ಟೆ ಪಕ್ಷದ ರಂಗಸ್ವಾಮಿ’ ಯವರನ್ನು ನೆನಪಿಸಿಕೊಳ್ಳಬಹುದು; ಅವರು ಇಡೀ ರಾಜ್ಯಾದ್ಯಂತ ಸುಪರಿಚಿತರಾಗಿದ್ದರೂ, ಅವರು ಸ್ಪಽಸಿದ ಲೆಕ್ಕವಿಲ್ಲದಷ್ಟು ಚುನಾವಣೆಗಳಲ್ಲಿ, ಗೆಲ್ಲುವುದು ಪಕ್ಕಕ್ಕಿಡಿ, ಕನಿಷ್ಠ ಒಮ್ಮೆಯೂ ಅವರು ಠೇವಣಿ ಉಳಿಸಿಕೊಳ್ಳಲಿಲ್ಲ.) ಬ್ರಾಂಡ್ ಒಂದೇ ಬದಲಾವಣೆ ತರುವುದಿಲ್ಲ;

ಪ್ರಶ್ನೆ ಪತ್ರಿಕೆ ಸೋರುವಿಕೆ ನಿಲ್ಲಿಸುವುದಿಲ್ಲ; ಲಕ್ಷಾಂತರ ಯುವ ಜನರು ಎದುರಿಸುತ್ತಿರುವ ನಿರುದ್ಯೋಗದ ಬವಣೆ ತಪ್ಪಿಸುವುದಿಲ್ಲ. ಇದೂ ಅಲ್ಲದೆ, ವ್ಯಂಗ್ಯ-ಕಟುಕಿಗಳು ಆಡಳಿತದಲ್ಲಿರುವವರಿಗೆ ಹೊಸವೇನೂ ಅಲ್ಲ. ಅವುಗಳನ್ನು ಜೀರ್ಣಿಸಿಕೊಳ್ಳುವುದರಲ್ಲಿ ಚಾಣಾಕ್ಷತೆ ಪಡೆಯುತ್ತಲೇ ಗದ್ದಿಗೆಗೇರಿದವರು ಅವರು. ಸಾಮಾಜಿಕ ಆಕ್ರೋಶವನ್ನು ಮೀಮ್-ಜೋಕ್ಸ್-ಹ್ಯಾಶ್ ಟ್ಯಾಗ್‌ಗಳ ಮೂಲಕ ಹೊರ ಹಾಕಿದಾಗ, ಆ ಆಕ್ರೋಶದ ಸ್ಛೋಟಕ ಶಕ್ತಿ ದುರ್ಬಲಗೊಂಡು ಸರ್ಕಾರಕ್ಕೆ ಅದನ್ನು ನಿಭಾಯಿಸುವುದು ಸುಲಭವಾಗುತ್ತದೆನ್ನುವುದನ್ನೂ ಅವರೂ ಬಲ್ಲರು. ನ್ಯಾಯಾಂಗ ಮತ್ತು ಆಡಳಿತ ಸುಧಾರಣೆಗಳನ್ನು ಒತ್ತಾಯಿಸಬೇಕಿದ್ದ ಸಾಮೂಹಿಕ ಆಕ್ರೋಶವೊಂದು ಟಿ-ಷರ್ಟ್ ಮೇಲಿನ ಬರಹವಾಗಿ, ಫೇಸ್ ಬುಕ್ ಪೋಸ್ಟ್ ಆಗಿ, ಕೊನೆಗೆ ಡಿಜಿಟಲ್ ಹರಟೆಗಳಲ್ಲಿ ಕೊನೆಗೊಂಡರೆ, ನೆಮ್ಮದಿಯ ನಿಟ್ಟುಸಿರನ್ನು ಬಿಡುವವರು ನಮ್ಮನ್ನು ಆಳುವವರೇ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

23 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

23 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

23 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

23 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

23 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

23 hours ago