ಲಕ್ಷ್ಮೀಕಾಂತ್ ಕೊಮಾರಪ್ಪ
ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದೆ. ಯೋಜನೆ ಜಾರಿಯಾದರೆ ಅಗತ್ಯ ಮೂಲ ಭೂತ ಸೌಲಭ್ಯಗಳಿಲ್ಲದೆ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಕಾಣದ ಮಲ್ಲಳ್ಳಿ ಗ್ರಾಮವು ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮಹತ್ವ ಪಡೆದುಕೊಳ್ಳುವ ನಿರೀಕ್ಷೆಯಿದೆ.
ಪುಷ್ಪಗಿರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿಯು ಮಲ್ಲಳ್ಳಿ ಗ್ರಾಮದ ಕಲ್ಲುಬಂಡೆಗಳ ನಡುವೆ ಸುಮಾರು ೨೯೦ ಅಡಿ ಎತ್ತರದಿಂದ ಧುಮುಕಿ ಅದ್ಭುತ ಜಲಪಾತವನ್ನು ಸೃಷ್ಟಿಸಿದೆ. ಮೊದಲ ಹಂತದಲ್ಲಿ ಸುಮಾರು ೨೦೦ ಅಡಿ, ನಂತರ ಸುಮಾರು ೯೦ ಅಡಿ ಸೇರಿದಂತೆ ಹಂತ ಹಂತವಾಗಿ ಧುಮುಕುವ ನೀರಿನ ರಭಸ ಮತ್ತು ಪ್ರಕೃತಿಯ ಸೊಬಗು ವರ್ಷಪೂರ್ತಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದೇ ನದಿ ಮುಂದೆ ಹರಿದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ತಲುಪುತ್ತದೆ.
ಮಲ್ಲಳ್ಳಿ ಜಲಪಾತದಲ್ಲಿ ರೋಪ್‌ವೇ ನಿರ್ಮಾಣದ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು. ಇತ್ತೀಚೆಗೆ ನಡೆದ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ರಾಜ್ಯದ ೧೩ ಪ್ರಮುಖ ಪ್ರವಾಸಿ ತಾಣಗಳಲ್ಲಿ ರೋಪ್‌ವೇ ಯೋಜನೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಮಲ್ಲಳ್ಳಿ ಜಲಪಾತವೂ ಸ್ಥಾನ ಪಡೆದಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಎಕನಾಮಿಕ್ ಸರ್ವೀಸ್ (ರೈಟ್ಸ್) ಸಂಸ್ಥೆಗೆ ವಹಿಸಲಾಗಿದೆ. ತಾಂತ್ರಿಕ ಹಾಗೂ ಪರಿಸರ ಸಂಬಂಽತ ಅಂಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದ ಬಳಿಕ ಮುಂದಿನ ಆಡಳಿತಾತ್ಮಕ ಕ್ರಮಗಳು ಕೈಗೊಳ್ಳಲಾಗುತ್ತವೆ. ಪ್ರಸ್ತಾವಿತ ಯೋಜನೆಯ ಪ್ರಕಾರ ಸುಮಾರು ಒಂದರಿಂದ ಒಂದೂವರೆ ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಾಣವಾಗಲಿದೆ. ಬೆಟ್ಟದ ಮೇಲ್ಭಾಗದಿಂದ ಜಲಪಾತದ ಸಮೀಪದ ಪ್ರದೇಶಕ್ಕೆ ಹಾಗೂ ಅಲ್ಲಿಂದ ಮರಳಿ ಮೇಲ್ಭಾಗಕ್ಕೆ ಪ್ರವಾಸಿಗರು ಸುರಕ್ಷಿತವಾಗಿ ಸಂಚರಿಸಲು ಕೇಬಲ್ ಕಾರ್ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಇದರಿಂದ ಹಿರಿಯ ನಾಗರಿಕರು, ಮಕ್ಕಳು ಹಾಗೂ ದೂರ ನಡೆಯಲು ಸಾಧ್ಯವಾಗದವರಿಗೆ ಜಲಪಾತದ ಸೌಂದರ್ಯ ವನ್ನು ಸುಲಭವಾಗಿ ವೀಕ್ಷಿಸುವ ಅವಕಾಶ ದೊರೆಯಲಿದೆ. ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಯೋಜನೆ ಜಾರಿಯಾಗಬೇಕು ಎಂಬ ಅಭಿಪ್ರಾಯವೂ ಕೇಳಿಬಂದಿದೆ.ಮಲ್ಲಳ್ಳಿ ಜಲಪಾತವು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ಸಮೀಪದಲ್ಲಿರುವುದರಿಂದ ಪರಿಸರದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ನಿಯಮಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಯೋಜನೆ ಅಭಯಾರಣ್ಯದ ಬಫರ್ (ಪರಿಸರ ಸೂಕ್ಷ್ಮ) ವಲಯದ ಹೊರಗೆ ಮಾತ್ರ ಅನುಷ್ಠಾನಗೊಳ್ಳಬೇಕು. ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಿದರೆ ತಮ್ಮಿಂದ ಯಾವುದೇ ವಿರೋಧವಿಲ್ಲ ಎಂಬ ಅಭಿಪ್ರಾಯವನ್ನು ಪರಿಸರ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.
ರೋಪ್‌ವೇ ಯೋಜನೆ ಅನುಷ್ಠಾನಗೊಂಡರೆ ಮಲ್ಲಳ್ಳಿ ಗ್ರಾಮದಲ್ಲಿ ಪ್ರವಾಸೋದ್ಯಮ:
ಆಧಾರಿತ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಹೋಂ ಸ್ಟೇ, ಹೋಟೆಲ್, ಸ್ಥಳೀಯ ಸಾರಿಗೆ, ಮಾರ್ಗದರ್ಶಕರ ಸೇವೆ, ಸಣ್ಣ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಉತ್ತೇಜನ ದೊರೆಯುವ ಸಾಧ್ಯತೆ ಇದೆ. ಇದರಿಂದ ಗ್ರಾಮೀಣ ಯುವ ಜನತೆಗೆ ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆಯೂ ವ್ಯಕ್ತವಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆಗೆ ತಾತ್ವಿಕ ಒಪ್ಪಿಗೆ; ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಪ್ರಸ್ತುತ ಯೋಜನೆಗೆ ಅಗತ್ಯವಿರುವ ಅನುಮತಿಗಳ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅರಣ್ಯ ಇಲಾಖೆಯ ತಂತ್ರಾಂಶದ ಮೂಲಕ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭಿಸುವ ನಿರೀಕ್ಷೆ ಇದೆ.
” ಮಲ್ಲಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಯೋಜನೆ ರೂಪಿಸಲಾಗಿದೆ. ಪಿಪಿಪಿ(ಸಾರ್ವಜನಿಕ -ಖಾಸಗಿ ಸಹಭಾಗಿತ್ವ)ಯಲ್ಲಿ ಈ ರೋಪ್‌ವೇ ಯೋಜನೆ ಕಾರ್ಯಗತವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೊಂಡರೆ ಸ್ಥಳೀಯವಾಗಿ ಉದ್ಯೋಗಸೃಷ್ಟಿಯಾಗುತ್ತದೆ. ನಮ್ಮೆಲ್ಲರ ಕನಸ್ಸಿನ ಯೋಜನೆ ಅನುಷ್ಠಾನಗೊಂಡರೆ ಪ್ರಕೃತಿದತ್ತವಾದ ಪ್ರವಾಸಿ ತಾಣವಾಗುತ್ತದೆ. ಅತೀ ಹೆಚ್ಚು ಪ್ರವಾಸಿಗರು ಬರಲಿದ್ದಾರೆ.”
-ಡಾ. ಮಂಥರ್‌ಗೌಡ, ಶಾಸಕರು, ಮಡಿಕೇರಿ ಕ್ಷೇತ್ರ
” ರೋಪ್‌ವೇ ಯೋಜನೆ ಅಭಯಾರಣ್ಯ ಅಥವಾ ಬಫರ್ ವಲಯದೊಳಗೆ ಪ್ರವೇಶಿಸದೆ, ಅದರ ಹೊರಗಡೆ ಹಾಗೂ ಕಾನೂನುಬದ್ಧ ಅನುಮತಿಗಳೊಂದಿಗೆ ಜಾರಿಯಾದರೆ ವಿರೋಧವಿಲ್ಲ. ಆದರೆ ಮರಗಳ ಅನಗತ್ಯ ತೆರವು, ವನ್ಯಜೀವಿಗಳ ಆವಾಸಕ್ಕೆ ತೊಂದರೆ, ಶಬ್ದ ಮಾಲಿನ್ಯ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.”
-ರವಿ ಚಂಗಪ್ಪ, ಪರಿಸರವಾದಿ ಹಾಗೂ ಜಿಲ್ಲಾಧ್ಯಕ್ಷ, ಕೊಡಗು ಕಾವೇರಿ ಸೇನೆ
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…