ಹಾಡು ಪಾಡು

ಕುಕ್ಕರಿನ ಶೀಟಿ ತರಹದ ಜಿರಲೆ ಹೋರಾಟ

ಸುರೇಶ ಕಂಜರ್ಪಣೆ

ಜಿರಲೆ ಪಕ್ಷದ ಹುಟ್ಟು ಮತ್ತು ಅದರ ಇತ್ತೀಚಿಗಿನ ಚಳವಳಿ ಕುರಿತು ವರ್ಣರಂಜಿತ ಊಹಾಪೋಹ, ವಿಶ್ಲೇಷಣೆಗಳು ನಡೆದಿವೆ. ಇವೆಲ್ಲಾ ಒಂದು ಜೀವಂತ ಚಡಪಡಿಕೆಯ ಪ್ರಜಾಸತ್ತೆಯಲ್ಲಿ ಸಹಜ.

ಮೊನ್ನೆ ದೆಹಲಿಯಲ್ಲಿ ನಡೆದ ಚಳವಳಿಯನ್ನು ಬಲು ಸೂಕ್ಷ್ಮವಾಗಿ ಗಮನಿಸಿದಾಗ ವ್ಯಕ್ತವಾದ ಸಂಶಯಗಳೂ ಸರಿಯಾದದ್ದೇ. ಗಂಭೀರ ಪ್ರತಿರೋಧವನ್ನು ಚಿವುಟಿ ಹಾಕುತ್ತಾ ಬಂದಿರುವ ಸದ್ಯದ ಮೋದಿ ಸರ್ಕಾರ ಈ ಚಳವಳಿಗೆ ಮಾತ್ರ ಅಪೂರ್ವ ಸಹನೆ ತೋರಿದ ವರ್ತನೆ ಅಚ್ಚರಿ ತಂದಿದೆ. ವಿಮಾನ ನಿಲ್ದಾಣದಿಂದಲೇ ಇದರ ನಾಯಕನನ್ನು ಕರೆತಂದು ಸರ್ಕಾರ ಪ್ರತಿಭಟನೆಯ ಅಂಗಣಕ್ಕೆ ಬಿಟ್ಟಿದೆ! ಹಲವಾರು ಗಣ್ಯರಿಂದ ಹಿಡಿದು ಎಡ ಸಿದ್ಧಾಂತದ ಕಾರ್ಯಕರ್ತರೂ ಈ ಚಳವಳಿಯಲ್ಲಿ ಭಾಗಿಯಾಗಿದ್ದು ಇದರ ಸಂಘಟಕರನ್ನು ಗಲಿಬಿಲಿ ಮಾಡಿದೆ ಎಂಬ ವರದಿಗಳಿವೆ. ಆದರೆ ಈ ಚಳವಳಿ ಮೂಲಕ ಇಷ್ಟು ದಿನ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ತಲೆ ತೊಳೆದುಕೊಂಡ ತಲೆಮಾರು ಎಂದು ಪರಿಗಣಿತವಾದ ಝೀನ್ ಜೀ ಯುವಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಚೇತೋಹಾರಿ. ಕೇವಲ ಸಾಮಾಜಿಕ ಮಾಧ್ಯಮಗಳ ಮೂಲಕ ಬಿರುಗಾಳಿ ಎಬ್ಬಿಸಿದ ತಕ್ಷಣ ಚಳವಳಿಯೊಂದು ಸೃಷ್ಟಿಯಾಗುತ್ತದೆ ಎಂಬ ಕಲ್ಪನೆ ಭಾರತದಂಥ ದೇಶದಲ್ಲಿ ನಿಜವಾಗಲು ಸಾಧ್ಯವಿಲ್ಲ. ಭೌತಿಕ ಚಳವಳಿಯಷ್ಟೆ ಒಂದು ಪ್ರಭುತ್ವವನ್ನು ನಿಯಂತ್ರಿಸಬಲ್ಲುದು. ಸದರಿ ಜಿರಲೆ ಆಂದೋಲನ ಒಂದು ಸೀಮಿತ, ಅದೂ ಆಢ್ಯ ಕನಸಾದ ನೀಟ್ ಪರೀಕ್ಷೆಯ ಅಧ್ವಾನಗಳ ವಿರುದ್ಧ ದನಿ ಎತ್ತಿದ ಕಾರಣ ಅದರ ದೃಷ್ಟಿಯ ವ್ಯಾಪಕತೆ ಬಗ್ಗೆ ಸಕಾರಣ ಶಂಕೆಗಳಿವೆ. ನಿಜಕ್ಕೂ ಬೀದಿಗಿಳಿಯಬೇಕಾಗಿದ್ದು ಈ ನೀಟ್ ಆಕಾಂಕ್ಷಿಗಳಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸಿ/ಮುಗಿಸಲೂ ಸಾಧ್ಯವಾಗದೇ ನಿರ್ದಿಷ್ಟ ಕೌಶಲವೂ ಇಲ್ಲದೇ ತಾರುಣ್ಯಕ್ಕೆ ಅಡಿಯಿಟ್ಟ ಕೋಟ್ಯಂತರ ಯುವಕರು, ಭವಿಷ್ಯವೆಂದರೆ ಖಾತರಿ ಇಲ್ಲದ ಪ್ರಪಾತದಂಚಿಗೆ ಬಂದು ನಿಲ್ಲುವುದು ಎಂಬ ಮಟ್ಟಿಗೆ ತಲುಪಿದ್ದಾರೆ. ದಶಕದ ಹಿಂದೆ ಎರಡು ಕೋಟಿ ಉದ್ಯೋಗ, ಸ್ಕಿಲ್ ಇಂಡಿಯಾ ಮೂಲಕ ತರಬೇತಿ ಇತ್ಯಾದಿ ಘೋಷಣೆ ಮಾಡಿದ್ದು ತಾನಲ್ಲವೇ ಅಲ್ಲ ಎಂಬಂತೆ ಈ ಸರ್ಕಾರ ಇದೆ. ಇವೆಲ್ಲಾ ಸೋಪಿನ ಬುರುಗು ಗುಳ್ಳೆಗಳಾಗಿ ಹಾಗೆಯೇ ತೇಲಿ ಒಡೆದು ಹೋಗಿವೆ. ೨೦೧೪ರಲ್ಲಿ ಆಸೆ ಕಣ್ಣಿಂದ ಮೋದಿಗೆ ಮತ ಹಾಕಿದ ೨೦ರ ಹರೆಯದ ಯುವಕನಿಗೆ ಈಗ ಮೂವತ್ತೈದಾಗಿದೆ!! ಅತ್ತ ಉದ್ಯೋಗವೂ ಇಲ್ಲ, ಇತ್ತ ಸಂಸಾರದ ಕನಸೂ ಇಲ್ಲ ಎಂಬ ದಾರುಣ ಸಂಗತಿ ಹಾದಿಬೀದಿಯಲ್ಲಿ ನಮಗೆ ಎದುರಾಗುತ್ತಿದೆ.

ಹೀಗಿದ್ದೂ ಇವರೇಕೆ ಬೀದಿಗಿಳಿಯುತ್ತಿಲ್ಲ?

ರಾಜಕೀಯ ಶಾಸ್ತ್ರದ ಸಿದ್ಧಾಂತಿಯೊಬ್ಬ ಜನಸಾಮಾನ್ಯರ ಈ ಬಿಕ್ಕಟ್ಟಿನ ಬಗ್ಗೆ ಬರೆಯುತ್ತಾ ಜನಸಾಮಾನ್ಯರು ಹೋರಾಟಕ್ಕೆ ಬೀದಿಗೆ ಬರಲಾರದಷ್ಟು ನಿತ್ಯ ಬದುಕಿನ ಜಂಜಾಟದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಆಗ ಯಾರಾದರೂ ಅವರ ಪರವಾಗಿ ಈ ಹೊಣೆ ವಹಿಸಬೇಕಾಗುತ್ತದೆ. ಈ ಹೊಣೆ ಹೊತ್ತವರು ತಳದ ಜನರ ಭಾವನೆ, ಅಭಿಪ್ರಾಯಗಳನ್ನು ಪ್ರತಿನಿಽಸಿ ಅಭಿವ್ಯಕ್ತಿಗೊಳಿಸುತ್ತಾರಾ ಎಂಬುದಷ್ಟೆ ಪ್ರಶ್ನೆ.

ಗಾಂಧಿ ಇದನ್ನು ಲೋಹಿಯಾ ಅವರಿಗೆ ಬೇರೆ ರೀತಿಯಲ್ಲಿ ಹೇಳಿದ್ದರು. ಹೋರಾಟದ ಬದಲು ಖಾದಿ ಬಗ್ಗೆ ಹೆಚ್ಚು ನಿರತರಾದಾಗ ಲೋಹಿಯಾ ಅವರು, ಬಾಪೂ ಹೀಗಾದರೆ ಹೋರಾಟದ ಮೂಲಕ ಸ್ವರಾಜ್ ಯಾವಾಗ? ಎಂದು ಕೇಳಿದ್ದರಂತೆ. ಆಗ ಗಾಂಧಿ, ನೋಡಪ್ಪಾ, ಸಾಮಾನ್ಯ ಜನರು ನಿತ್ಯವೂ ಬೀದಿಗಿಳಿಯಲಾರರು. ಆದರೆ ಹೋರಾಟದ ನೆನಪು ಮಾಡುವ ಒಂದು ಸಂಗತಿ ಅವರ ನಿತ್ಯ ಬದುಕಿನಲ್ಲಿರಬೇಕು. ಚರಕ ಅಂಥಾ ಒಂದು ಸಾಧನ ಎಂದಿದ್ದರಂತೆ. ಮೂವತ್ತು ವರ್ಷಗಳ ತಮ್ಮ ರಾಜಕೀಯ ಹೋರಾಟದ ಅವಧಿಯಲ್ಲಿ ಗಾಂಧಿ ಮೂರು ದೊಡ್ಡ ಹೋರಾಟಗಳನ್ನಷ್ಟೇ ಸಂಘಟಿಸಿದ್ದರು. ಹೋರಾಟದ ಸೂಕ್ಷ್ಮಇರುವುದು ನಿತ್ಯ ಜಂಜಾಟದ ಮಂದಿಯ ಅಸಹಾಯಕತೆಯ ಮಾನಸಿಕ ಮರ್ಮ ಅರ್ಥ ಮಾಡಿಕೊಳ್ಳುವುದರಲ್ಲಿ. ಈ ಜಿರಲೆ ಹೋರಾಟಗಳ ಮುಖ್ಯ ಸಾಧನೆ ಎಂದರೆ ಅರಿತೋ ಅರಿಯದೆಯೋ ಇದು ಒಂದು ಜೋಮು ಹಿಡಿದ ಸ್ಥಾಗಿತ್ಯಕ್ಕೆ ಅಚಾನಕ್ ಢೀ ಕೊಟ್ಟಿರುವುದರಲ್ಲಿ. ಈ ಚಳವಳಿ ಹುಲ್ಲು ಬಣವೆಯ ಬೆಂಕಿಯಂತೆ ಆರಿ ಹೋಗಬಹುದು. ಆದರೆ ಇದರಲ್ಲಿ ಧುಮುಕಿದ ಯುವಕರ ಚಡಪಡಿಕೆ ಇನ್ನೊಂದು ದೊಡ್ಡ ಹೋರಾಟದ ಮೂಲ ಕೆಂಡವಾಗಬಲ್ಲುದು. ೧೯ನೇ ಶತಮಾನದ ಯುರೋಪಿನ ಹಲವು ದೇಶಗಳಲ್ಲಿ ಹಿಂಸಾತ್ಮಕವಾದ ಬಂಡಾಯ ನಡೆದಿತ್ತು. ಬಹುತೇಕ ಎರಡು- ಮೂರು ದಿನಗಳ ಹೋರಾಟಗಳಿವು. ಅಂದಿನ ಪ್ರಭುತ್ವಗಳು ಇವನ್ನು ಕ್ರೂರವಾಗಿ ದಮನಿಸಿದ್ದವು. ಆದರೆ ಅದರ ಸ್ಮರಣೆಯೇ ಸ್ಛೂರ್ತಿಯಾಗಿ ೨೦ನೇ ಶತಮಾನದ ಅಂತ್ಯಕ್ಕೆ ಬಹುತೇಕ ಯುರೋಪಿನ ದೇಶಗಳು ಸಕ್ರಿಯ ಪ್ರಜಾಸತ್ತೆಗಳಾಗಿ ರೂಪಾಂತಗೊಂಡಿದ್ದವು. ಅರ್ಥಾತ್ ಸೈದ್ಧಾಂತಿಕ ಸ್ಪಷ್ಟತೆ, ಹೊಸ ವ್ಯವಸ್ಥೆಯ ಪರಿಕಲ್ಪನೆಗಳೆಲ್ಲಾ ಊರದೇ ಹೋರಾಟಗಳು ಯಶಸ್ವಿಯಾಗವು.

ಈ ಸಾಧ್ಯತೆ ಒಂದು ಆಶಯ ಮಾತ್ರ!: 

ಈ ದೇಶದ ಸಣ್ಣಪುಟ್ಟ ಬಂಡಾಯದ ಮೊಳಕೆಗಳನ್ನೂ ಅಕ್ಕಪಕ್ಕದ ದೇಶಗಳ ಯಶಸ್ವಿ ಹೋರಾಟಗಳ ಜೊತೆ ಹೋಲಿಸಿ ನಮ್ಮಲ್ಲೂ ಆದೀತು ಎಂದು ಆಶಾಭಾವನೆ ಇಟ್ಟುಕೊಂಡ ಬಹುದೊಡ್ಡ ಸಂಖ್ಯೆಯ ವರ್ಗ ಇದೆ. ಆದರೆ ಗಮನಿಸಬೇಕಾದದ್ದೆಂದರೆ ಈ ಭಾರತವೆಂಬ ದೇಶ ಎಷ್ಟು ದೊಡ್ಡದು ಅಂದರೆ ಇದು ನಿಜಕ್ಕೂ ಯುರೋಪಿಯನ್ ಒಕ್ಕೂಟದಂಥಾದ್ದು. ಶ್ರೀಲಂಕಾ, ನೇಪಾಳಗಳ ಆರ್ಥಿಕತೆ ಕರ್ನಾಟಕದಷ್ಟೂ ಇಲ್ಲ! ಅಲ್ಲಿ ಆದದ್ದು ಇಲ್ಲಾಗಲು ಇರುವ ತೊಡಕುಗಳ ಪಟ್ಟಿ ಮಾಡಹೊರಟರೆ ಅದೇ ತಣ್ಣೀರೆರಚಿದಂತೆ ಭಾಸವಾಗಬಹುದು. ಆದರೆ ಇಂಥ ಅಸಮಾಧಾನ, ಆಕ್ರೋಶಗಳು ಕುಡಿಯೊಡೆದಾಗ ಪ್ರಭುತ್ವ ಏನು ಮಾಡುತ್ತದೆ? ಜಾಣ ಪ್ರಭುತ್ವ ಅದು ನಿರಸನಗೊಳ್ಳುವಂತೆ ಮಾಡುತ್ತದೆ!! ಕುಕ್ಕರಿನ ಶೀಟಿ ತರ ಅದಕ್ಕೊಂದು ಅಭಿವ್ಯಕ್ತಿಯ ಹಾದಿ ತೋರಿಸಿ ಒತ್ತಡ ನಿವಾರಣೆಯಾಗುವಂತೆ ಮಾಡುತ್ತದೆ. ಆ ಬೇಡಿಕೆಯನ್ನು ತಾನು ಈಡೇರಿಸಿ, ಹೋರಾಟವೇ ಒಂದು ದೇಹಿ ಎಂದು ಬೇಡಿದ ಮನವಿಯಂತೆ ರೂಪಾಂತರಗೊಳಿಸುತ್ತದೆ.

ಕೊಡಗಿನ ರಾಜನ ಬಗ್ಗೆ ಒಂದು ಕತೆ ನಮ್ಮ ಕಡೆ ಪ್ರಚಲಿತ ಇತ್ತು. ಆತ ಬೆಳ್ಳಂಬೆಳಿಗ್ಗೆ ಅರಮೆನೆಯ ಉಪ್ಪರಿಗೆಯಲ್ಲಿ ನಿಂತಾಗ, ಒಂದಷ್ಟು ಜನ ಬಡವರು ಅರಮನೆಯೊಳಗೆ ಬಂದು ಅವನೆದುರು ಕೆಳಗೆ ನಿಂತು ಅವನನ್ನು ವಾಚಾಮಗೋಚರ ಬೈಯುತ್ತಿದ್ದರಂತೆ. ನಮಗೆ ಹೊಟ್ಟೆ ಬಟ್ಟೆಗೆಗತಿ ಇಲ್ಲ, ನೀನ್ಯಾವ ಸೀಮೆ ರಾಜ ಎಂದೆಲ್ಲಾ ಸಂಸ್ಕ ತ ಬಳಸಿ ಬೈಯುತ್ತಿದ್ದರಂತೆ. ಇದು ನಿತ್ಯದ ರಿಚ್ಯುವಲ್. ಆಮೇಲೆ ತಮ್ಮ ಆ ದಿನದ ಪಡಿ ಪಡೆದು ನಜರೊಪ್ಪಿಸಿ ತೆರಳುತ್ತಿದ್ದರಂತೆ. ಅರಸು ಒಬ್ಬನಿಗೆ ತನ್ನೆದುರು ತನಗೇ ಕಾಣದಂತಿರುವ ಸವಾಲುಗಳ ದರ್ಶನ ಪಡೆವ ಉಪಾಯ ಇದು. ನಮ್ಮ ಹೋರಾಟಗಳು ಇಂಥಾ ಪ್ರಭುತ್ವ ಬಯಸುವ ಪ್ರಸ್ತುತಿಗಳಾಗದಿದ್ದರೆ ಸಾಕು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

22 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

22 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

22 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

22 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

22 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

22 hours ago