ಹಾಡು ಪಾಡು

ಇಂದು ಮೈಸೂರಿನಲ್ಲಿ ಜಾಗತಿಕ ಸೈಕಲ್ ಸವಾರಿ

ಸಿರಿ ಮೈಸೂರು

ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು ಬಳಸುತ್ತಿದ್ದರು. ಜನರು ನಡೆದುಕೊಂಡೇ ಓಡಾಡುತ್ತಿದ್ದರು. ಆದರೆ ಸ್ವಲ್ಪ ಕಾಲ ಕಳೆದ ಮೇಲೆ ರಸ್ತೆಯಲ್ಲಿ ಎರಡು ಚಕ್ರಗಳು ಸಂಚರಿಸಲು ಶುರುವಾಯಿತು. ಯಾವುದದು ಎರಡು ಚಕ್ರಗಳು? ಎಂದರೆ ಅದೇ ಬೈಸಿಕಲ್. ಆಡುಭಾಷೆಯಲ್ಲಿ ಸೈಕಲ್. ಜನರು ನಡೆದುಕೊಂಡು ಹೋಗುವುದಕ್ಕಿಂತ ವೇಗವಾಗಿ ಸೈಕಲ್‌ನಲ್ಲಿ ಓಡಾಡಬಹುದೆಂದು ಕಂಡುಕೊಂಡರು. ಸ್ವಲ್ಪವೇ ಸಮಯದಲ್ಲಿ ಸೈಕಲ್ ಮನೆಮನೆಯಲ್ಲೂ ಇರಲು ಶುರುವಾಯಿತು. ಪ್ರಪಂಚ ಇನ್ನಷ್ಟು ಆಧುನಿಕವಾಗುತ್ತಿದ್ದಂತೆ ದೂರದೂರಕ್ಕೆ ಸೈಕಲ್ ತುಳಿಯಲು ಮನುಷ್ಯ ಕಷ್ಟಪಡತೊಡಗಿದ. ಏಕೆಂದರೆ ಅಷ್ಟರಲ್ಲಿ ಮೋಟಾರು ವಾಹನಗಳು, ಅದರಲ್ಲೂ ದ್ವಿಚಕ್ರ ವಾಹನಗಳು ಎಲ್ಲರ ಕೈಗೆಟುಕಲು ಶುರುವಾದವು. ಭರ್ರೆಂದು ಸ್ಕೂಟರ್‌ನಲ್ಲಿ ಹೋಗಲು ಸಾಧ್ಯವಾಗುವಾಗ ಸುಮ್ಮನೆ ಸೈಕಲ್ ತುಳಿಯುವುದೇಕೆ ಹೇಳಿ? ಈಗೆಲ್ಲಾ ಎಲ್ಲೆಲ್ಲೂ ವಾಹನಗಳದ್ದೇ ಕಾರುಬಾರು.

ಬೈಸಿಕಲ್ ಓಡಿಸುವಷ್ಟು ಶಕ್ತಿ, ಓಡಿಸಲು ಸೂಕ್ತವಾದ ರಸ್ತೆ ಎರಡೂ ಸಿಗುವುದು ಕಷ್ಟವೇ. ನಮ್ಮ ದೇಶ ಆಟೋಮೊಬೈಲ್ ಕ್ಷೇತ್ರದಲ್ಲಿ ಕಂಡ ಬೆಳವಣಿಗೆಗಳನ್ನು ಪಾಶ್ಚಿಮಾತ್ಯ ದೇಶಗಳು ದಶಕಗಳ ಹಿಂದೆಯೇ ಕಂಡಿದ್ದವು. ಆ ಮಜಲನ್ನುದಾಟಿರುವ ಆ ದೇಶಗಳ ಜನರು ಈಗ ‘ಮರಳಿ ಮಣ್ಣಿಗೆ’ ಎನ್ನುವಂತೆ ಮತ್ತೆ ಸೈಕಲ್‌ನತ್ತ ಮುಖ ಮಾಡಿದ್ದಾರೆ. ಅದರಿಂದಾಗುವ ಆರೋಗ್ಯದ ಪ್ರಯೋಜನಗಳು, ಪರಿಸರಕ್ಕಾಗುವ ಅನುಕೂಲಗಳನ್ನು ಅರಿತು ಮತ್ತೆ ಸೈಕ್ಲಿಂಗ್ ಮಾಡುತ್ತಿದ್ದಾರೆ. ಆ ವಿಷಯದಲ್ಲಿ ಅವರೆಲ್ಲಾ ಬಹಳ ಮುಂದೆ ಬಂದಿದ್ದರೆ ಇತ್ತ ಭಾರತ ಈಗೀಗ ಆ ದಿಕ್ಕಿನತ್ತ ಸಾಗಿದೆ. ಅದರಲ್ಲೂ ಮೈಸೂರು ಸೈಕ್ಲಿಂಗ್‌ನ ಪ್ರಮುಖ ಸ್ಥಳವಾಗುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಸಾಕ್ಷಿ ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಲೇ ಟಾಪ್ ಡ್ಯೂ ಟೂರ್ (L’ Etape du Tour).

ವಿಶಾಲವಾದ ರಸ್ತೆಗಳು, ಹಸಿರು ಚಪ್ಪರದಂತಿರುವ ನೆರಳು ತುಂಬಿದ ಹಾದಿಗಳು, ತಂಪುಗಾಳಿ ತುಂಬಿದ ವಾತಾವರಣ… ಹೀಗೆ ಮೈಸೂರಿಗೆ ತನ್ನದೇ ವೈಶಿಷ್ಟ್ಯಗಳಿವೆ. ಇದು ಸೈಕ್ಲಿಂಗ್ ಮಾಡುವವರಿಗೆ ಅತ್ಯಂತ ಸೂಕ್ತ ವಾತಾವರಣ. ಇದರಿಂದಾಗಿ ಮೈಸೂರಿನಲ್ಲಿ ಸಾಕಷ್ಟು ಸೈಕ್ಲಿಂಗ್ ಪಟುಗಳೂ ಇದ್ದು, ಸೈಕ್ಲಿಂಗ್‌ಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯುತ್ತಿರುತ್ತವೆ. ಈ ಪೈಕಿ ಒಂದು ಲೇ ಟಾಪ್ ಮೈಸೂರು. ಎನ್‌ಇಬಿ ಸ್ಪೋರ್ಟ್ಸ್, ಯುವಜನ ಸಬಲೀಕರಣ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಹಾಗೂ ಇನ್ನಷ್ಟು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಇಂದು ಈ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುತ್ತಿದ್ದು, ಇದರ ಹಿಂದಿರುವ ಮೂಲ ಸಂಸ್ಥೆ ಫ್ರಾನ್ಸ್‌ನ ಟೂರ್ ಡೇ ಫ್ರಾನ್ಸ್. ವಿಶೇಷ ಏನೆಂದರೆ ಈ ಕಾರ್ಯಕ್ರಮ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿಗೆ. ಒಂದು ಕಿ.ಮೀ., ಇಪ್ಪತ್ತು ಕಿ.ಮೀ., ಐವತ್ತು ಕಿ.ಮೀ., ನೂರು ಕಿ.ಮೀ. ಸೇರಿದಂತೆ ವಿವಿಧ ವಯೋಮಾನದವರಿಗೆ ವಿವಿಧ ವಿಭಾಗಗಳಲ್ಲಿ ಸೈಕ್ಲಿಂಗ್ ರೇಸ್ ನಡೆಯಲಿದ್ದು, ಭಾರತದ ೧೨ ರಾಜ್ಯಗಳಿಂದ ಹಾಗೂ ಇತರ ೫ ದೇಶಗಳಿಂದ ಉತ್ಸಾಹಿ ಸೈಕ್ಲಿಸ್ಟ್‌ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಚಾಮುಂಡಿ ಬೆಟ್ಟ, ಬಲಮುರಿ, ಸಾಗರಕಟ್ಟೆ ಸೇರಿದಂತೆ ಮೈಸೂರಿನ ವಿವಿಧ ಪಾರಂಪರಿಕ ಹಾಗೂ ಪ್ರಾಕೃತಿಕ ಸೌಂದರ್ಯವುಳ್ಳ ದಾರಿಗಳಲ್ಲಿ ಸೈಕ್ಲಿಸ್ಟ್‌ಗಳು ಸಾಗಲಿದ್ದಾರೆ.

ಏನಿದು ಲೇ ಟಾಪ್ ಡ್ಯೂ ಟೂರ್?:  ೧೯೯೩ರಲ್ಲಿ ಫ್ರಾನ್ಸ್‌ನಲ್ಲಿ ಹವ್ಯಾಸಿ ಸೈಕ್ಲಿಸ್ಟ್‌ಗಳಿಗೆ ಉತ್ತೇಜನ ನೀಡಿ ಸೈಕ್ಲಿಂಗ್‌ಗೆ ಉತ್ತಮ ವೇದಿಕೆ ಸೃಷ್ಟಿಸುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ ಇದು. ಈ ಸಂಸ್ಥೆ ಆಸಕ್ತಿ ಇರುವವರಿಗೆ ಮೌಂಟೇನ್ ರೂಟ್‌ಗಳಲ್ಲಿ ಸೈಕ್ಲಿಂಗ್ ಮಾಡಲು ಅವಕಾಶಗಳನ್ನು ಒದಗಿಸುತ್ತದೆ. ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾನ ಆಸಕ್ತಿ ಉಳ್ಳವರನ್ನು ಒಗ್ಗೂಡಿಸುತ್ತದೆ. ೧೯೯೩ರಲ್ಲಿ ಆರಂಭವಾದ ಈ ಸಂಸ್ಥೆ ನಂತರ ವಿವಿಧ ದೇಶಗಳಲ್ಲಿ ತನ್ನ ಕಾರ್ಯಕ್ರಮಗಳನ್ನು ಮಾಡಲು ಆರಂಭಿಸಿತು. ಚೈನಾ, ಥೈಲ್ಯಾಂಡ್, ಬ್ರೆಜಿಲ್, ಮೆಕ್ಸಿಕೋ, ಆಸ್ಟ್ರೇಲಿಯಾ ದೇಶಗಳಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಿತು. ಪ್ರಪಂಚದಲ್ಲಿ ಸೈಕ್ಲಿಂಗ್‌ಗಾಗಿ ಇಡೀ ರಸ್ತೆಗಳನ್ನು ಬಂದ್ ಮಾಡಿಸುವ ಕಾರ್ಯಕ್ರಮ ಇದೊಂದೇ ಎನ್ನಲಾಗಿದೆ. ಇದು ಪ್ರಸ್ತುತ ಐರೋಪ್ಯ ರಾಷ್ಟ್ರದ ಅತಿದೊಡ್ಡ ಸೈಕ್ಲಿಂಗ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಈಗ ಮೈಸೂರಿನ ಮೂಲಕ ಭಾರತಕ್ಕೆ ಕಾಲಿಡುತ್ತಿದೆ.

ಇದರಿಂದ ಮೈಸೂರಿಗೆ ಏನು ಲಾಭ?: ಮೈಸೂರು ಈಗ ಹಿಂದೆಂದಿಗಿಂತ ವೇಗವಾಗಿ ಬೆಳೆಯುತ್ತಿದೆ. ಶಿಕ್ಷಣ, ಉದ್ಯೋಗ, ಕೈಗಾರಿಕೆ, ಪ್ರವಾಸೋದ್ಯಮ, ಉತ್ಪಾದನೆ… ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮೈಸೂರಿನ ಹೆಸರು ಮುಂಚೂಣಿಯಲ್ಲಿದೆ. ಆದರೆ ಈ ಪೈಕಿ ಸುಸ್ಥಿರ ಅಭಿವೃದ್ಧಿಯನ್ನು ಸಾಧ್ಯವಾಗಿಸುವ ಬೆಳವಣಿಗೆಗಳು ಯಾವುವು ಎಂದು ಕೇಳಿದರೆ ಅದಕ್ಕೆ ನಮಗೆ ಖುಷಿಯಾಗುವಂತಹ ಉತ್ತರ ಸಿಗಲಾರದು. ಏಕೆಂದರೆ ಯಾವುದೂ ಇಲ್ಲ. ಈ ರೀತಿಯ ಅಭಿವೃದ್ಧಿಗಳಿಂದ ನಗರದ ಆರ್ಥಿಕತೆ, ಜನಸಂಖ್ಯೆ ತೀವ್ರವಾಗಿ ಹೆಚ್ಚಾಗಬಹುದು ಎಂಬುದನ್ನು ಹೊರತುಪಡಿಸಿದರೆ ನಗರದ ಉಸಿರು ಕಟ್ಟುತ್ತದೆ ಎಂಬುದು ಕಟುಸತ್ಯ. ಮೈಸೂರು ನೆಮ್ಮದಿಯ ತಾಣ ಎಂದು ಎಲ್ಲೆಲ್ಲಿಂದಲೋ ಜನರು ಇಲ್ಲಿ ಬಂದು ವಾಸ ಮಾಡಲು ತೊಡಗುತ್ತಿದ್ದಾರೆ. ಈ ಪೈಕಿ ಜವಾಬ್ದಾರಿಯುತ ಬೆಳವಣಿಗೆಗೆ ಅವರು ಎಷ್ಟು ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಲೆಕ್ಕ ಹಾಕುವುದು ಕಷ್ಟಸಾಧ್ಯ. ಆದರೆ ಇವೆಲ್ಲಾ ದಿನಕಳೆದಂತೆ ನಡೆದೇ ತೀರುವ ಸಂಗತಿಗಳು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದರ ಬಗ್ಗೆ ಚಿಂತಿಸುವ ಬದಲು ಈ ರೀತಿಯ ಅಭಿವೃದ್ಧಿಯೊಂದಿಗೆ ಸೈಕ್ಲಿಂಗ್‌ನಂತಹ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸಿದರೆ ಅದರಿಂದಾಗಿ ನಗರ ಉಸಿರಾಡಲು ಇನ್ನಷ್ಟು ಅನುವು ಮಾಡಿಕೊಟ್ಟಂತಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬರೋಬ್ಬರಿ ೨,೫೦೦ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇದೇ ಕಾರ್ಯಕ್ರಮದ ಮೊದಲ ಜಯ. ‘ಮೈಸೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಹನಗಳ ಸಂಖ್ಯೆ ಬಹಳ ತೀವ್ರವಾಗಿಯೇ ಹೆಚ್ಚಾಗಿದೆಯಾದರೂ ಜನರು ಮೈಸೂರಿನಲ್ಲಿ ಸೈಕ್ಲಿಂಗ್ ಮರೆತಿಲ್ಲ. ಇಲ್ಲಿ ಬಹಳಷ್ಟು ಸೈಕ್ಲಿಂಗ್ ಕ್ಲಬ್‌ಗಳಿವೆ. ವಾರಾಂತ್ಯದಲ್ಲಿ ಎಲ್ಲರೂ ನಗರದ ವ್ಯಾಪ್ತಿಯ ಒಳಗಿನ ಹಾಗೂ ಹೊರಗಿನ ಸ್ಥಳಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಸೈಕ್ಲಿಂಗ್ ಮಾಡುತ್ತಾರೆ. ಆದ್ದರಿಂದ ಇಂತಹ ಅಂತಾರಾಷ್ಟ್ರೀಯ ಸೈಕ್ಲಿಂಗ್ ಚಟುವಟಿಕೆ ನಡೆಯಲು ಮೈಸೂರು ಸೂಕ್ತ ಸ್ಥಳ ಎನ್ನುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ಇಲ್ಲಿನ ಸೈಕ್ಲಿಸ್ಟ್‌ಗಳು. ಜೊತೆಗೆ ೨೦೧೭ರಲ್ಲಿ ಮೈಸೂರಿನಲ್ಲಿ ಸೈಕ್ಲಿಂಗ್ ಉತ್ತೇಜಿಸುವ ಸಲುವಾಗಿ ಟ್ರಿನ್ ಟ್ರಿನ್ ಯೋಜನೆ ಆರಂಭಿಸಲಾಗಿತ್ತು. ಅದು ಬಹಳಷ್ಟು ಮಟ್ಟಕ್ಕೆ ಯಶಸ್ವಿಯೂ ಆಯಿತು. ಅಲ್ಲದೆ ನಗರದ ಹಲವಾರು ಸ್ಥಳಗಳಲ್ಲಿ ಈಗಲೂ ಸೈಕ್ಲಿಂಗ್ ಪಾತ್‌ಗಳು ಇರುವುದನ್ನು ನಾವು ನೋಡಬಹುದು.

ಅತಿ ಪ್ರಮುಖ ರಸ್ತೆಗಳಲ್ಲಿ ಸೈಕಲ್‌ಗಳು ನೋಡಲು ಸಿಗುವುದಿಲ್ಲವಾದರೂ ನಗರದಲ್ಲಿ ಸೈಕ್ಲಿಂಗ್ ಸಂಸ್ಕ ತಿ ನನೆಗುದಿಗೆ ಬಿದ್ದಿಲ್ಲ. ಇಂತಹ ಕಾರ್ಯಕ್ರಮಗಳಿಂದ ಈ ಚಟುವಟಿಕೆ ಮೈಸೂರಿನಲ್ಲಿ ಇನ್ನಷ್ಟು ಹೆಚ್ಚಾಗಿ ಪರಿಸರದ ಜೊತೆಗೆ ಆರೋಗ್ಯಕ್ಕೂ ಅನುಕೂಲ ಮಾಡಿಕೊಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿಗೆ. ಮುಂದಿನ ದಿನಗಳಲ್ಲಿ ಆಗಾಗ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದರೆ ದೇಶ ಹಾಗೂ ವಿದೇಶದಿಂದಲೂ ಜನರು ಮೈಸೂರಿನತ್ತ ಬರುತ್ತಾರೆ. ಬಂದವರು ಕೇವಲ ಸೈಕ್ಲಿಂಗ್ ಮಾಡಿ ಹೋಗುತ್ತಾರೆಯೇ? ಖಂಡಿತ ಇಲ್ಲ. ಒಂದೆರಡು ದಿನಗಳು ಇಲ್ಲೇ ಉಳಿಯುತ್ತಾರೆ. ತಮಗೆ ಇಷ್ಟವಾದರೆ ಉಳಿದವರನ್ನೂ ಮುಂದಿನ ಬಾರಿ ಮೈಸೂರಿಗೆ ಕರೆದುಕೊಂಡು ಬರುತ್ತಾರೆ. ಇದರಿಂದಾಗಿ ಮೈಸೂರಿನ ಪ್ರಸಿದ್ಧಿ ಹೆಚ್ಚಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ. ಅಲ್ಲದೆ ಈ ರೀತಿಯ ಒಂದು ಕಾರ್ಯಕ್ರಮ ಭಾರತದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಕಾರಣ ಈಗಲೇ ಜಾಗತಿಕ ವೇದಿಕೆಯಲ್ಲಿ ಮೈಸೂರಿನ ಹೆಸರು ಸದ್ದು ಮಾಡುತ್ತದೆ. ಈವರೆಗೂ ಮೈಸೂರಿನ ಹೆಸರನ್ನು ಕೇಳದಿದ್ದವರೂ ‘ಯಾವ ಊರಿದು?’ ಎಂದು ತಿಳಿದುಕೊಳ್ಳುವಂತಾಗುತ್ತದೆ. ಇದು ದಸರಾ ಹಬ್ಬದ ಸಮಯವೂ ಆಗಿರುವ ಕಾರಣ ಇಲ್ಲಿನ ಇನ್ನಷ್ಟು ಆಕರ್ಷಣೆಗಳ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ತಿಳಿಯುತ್ತದೆ. ಪ್ರವಾಸೋದ್ಯನವನ್ನೇ ಮುಖ್ಯ ಆರ್ಥಿಕ ಮೂಲ ವಾಗಿ ಇರಿಸಿಕೊಂಡಿರುವ ನಗರಕ್ಕೆ ಇದು ವರವಲ್ಲದೇ ಮತ್ತೇನು? ಇದನ್ನು ಹೊರತುಪಡಿಸಿ ನೋಡಿದರೆ ಮೈಸೂರಿನಲ್ಲಿ ಈಗಾಗಲೇ ಇರುವ ಸೈಕ್ಲಿಂಗ್ ಆಸಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. ಸೈಕಲ್ ತುಳಿಯುವುದು ಹೆಚ್ಚಾ ದಷ್ಟೂ ಸುಸ್ಥಿರ ಅಭಿವೃದ್ಧಿಗೆ ಪುಷ್ಟಿ ಸಿಕ್ಕಂತೆ. ಜೊತೆಗೆ ಆರೋಗ್ಯಕ್ಕೂ ಪುಷ್ಟಿ ಸಿಕ್ಕಂತೆ. ‘ಇತಿಹಾಸ ಮರುಕಳಿಸುತ್ತದೆ (ಹಿಸ್ಟರಿ ರಿಪೀಟ್ಸ್)’ ಎನ್ನುವ ಮಾತಿನಂತೆ ಮತ್ತೆ ಮೈಸೂರಿನ ರಸ್ತೆಗಳಲ್ಲಿ ದಶಕಗಳ ಹಿಂದಿನಂತೆ ಸೈಕಲ್‌ಗಳು ಸದ್ದು ಮಾಡಲಿವೆ. ಆದರೆ ಈಗ ಮೈಸೂರಿನವರು ಮಾತ್ರವಲ್ಲದೆ ದೇಶ ವಿದೇಶಗಳಿಂದ ಜನರು ಬರಲಿದ್ದಾರೆ. ಇಲ್ಲಿ ಸೈಕ್ಲಿಂಗ್ ಮಾಡುವ ಜೊತೆಗೆ ನಗರದ ಸೌಂದರ್ಯವನ್ನು ಸವಿಯಲಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಮೈಸೂರು ಕೆಂಪು ಹಾಸು ಹಾಸಿ ಸಿದ್ಧವಾಗಿದೆ. ಇದು ದೇಶದ ಹಾಗೂ ಮೈಸೂರಿನ ಸೈಕ್ಲಿಂಗ್ ಇತಿಹಾಸದಲ್ಲಿ ಮೈಲಿಗಲ್ಲಾಗಿ ಇಡೀ ನಗರ ಹಾಗೂ ನಗರದ ಜನರ ಸುಸ್ಥಿರ ಅಭಿವೃದ್ಧಿಯ ಹಾದಿಗೆ ದೀವಿಗೆಯಾಗಲಿಗೆ ಎಂಬುದು ಸದ್ಯಕ್ಕೆ ಮೈಸೂರಿಗರಲ್ಲಿ ಮೂಡುತ್ತಿರುವ ಆಶಾಭಾವ.

” ಮೈಸೂರಿನ ರಸ್ತೆಗಳಲ್ಲಿ ದಶಕಗಳ ಹಿಂದಿನಂತೆ ಸೈಕಲ್ಗಳು ಸದ್ದು ಮಾಡಲಿವೆ. ಆದರೆ ಈಗ ಮೈಸೂರಿನವರು ಮಾತ್ರವಲ್ಲದೆ ದೇಶ ವಿದೇಶಗಳಿಂದ ಜನರು ಬರಲಿದ್ದಾರೆ. ಇಲ್ಲಿ ಸೈಕ್ಲಿಂಗ್ ಮಾಡುವ ಜೊತೆಗೆ ನಗರದ ಸೌಂದರ್ಯವನ್ನೂ ಸವಿಯಲಿದ್ದಾರೆ.”

 

ಆಂದೋಲನ ಡೆಸ್ಕ್

Recent Posts

ಶಾಂತಿದೂತನ ನಾಡಿನಲ್ಲಿ ದ್ವೇಷದ ಕೆನ್ನಾಲಿಗೆ

ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್…

5 mins ago

ನಾಳೆ ಅರಮನೆಗೆ ಅಭಿಮನ್ಯು ಪ್ರವೇಶ

ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…

17 mins ago

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

14 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

15 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

15 hours ago