ಹಾಡು ಪಾಡು

ಶಾಂತಿದೂತನ ನಾಡಿನಲ್ಲಿ ದ್ವೇಷದ ಕೆನ್ನಾಲಿಗೆ

ಫಾತಿಮಾ ರಲಿಯಾ

ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್ ನಿರಾಶ್ರಿತರ ಮೇಲೆ ಸುಮಾರು ಹನ್ನೆರಡು ಮಂದಿ ದೊಣ್ಣೆ ಹಿಡಿದು ದಾಳಿ ನಡೆಸಿದರು.

ಅವರಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ‘ನೀವು ನಮ್ಮ ದೇಶ ಬಿಟ್ಟು ತೆರಳಿ’ ಎಂಬುದು ದಾಳಿಕೋರರು ಅವರಿಗೆ ಹೇಳಿದ ಮಾತು. ಅದಕ್ಕೂ ಮೊದಲು ವಲಸಿಗರ ಅಂಗಡಿಗಳು, ಮನೆಗಳ ಮೇಲೆ ದಾಳಿ ಮತ್ತು ಲೂಟಿ ಆಗಿರುವ ಘಟನೆಗಳು ವರದಿಯಾಗಿದ್ದವು.

ದಕ್ಷಿಣ ಆಫ್ರಿಕಾಕ್ಕೂ ನಮ್ಮ ಭಾರತಕ್ಕೂ ಒಂದು ಐತಿಹಾಸಿಕ ನಂಟಿದೆ. ಗಾಂಧೀಜಿಯವರನ್ನು ರೈಲಿನಿಂದ ಹೊರ ತಳ್ಳಿದ ಘಟನೆಯನ್ನು ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ಮೂಲ ಬೇರು ಎಂದು ಗುರುತಿಸಲಾಗುತ್ತದೆ. ದಶಕಗಳ ನಂತರ, ಅದೇ ದೇಶದಲ್ಲಿ ನೆಲ್ಸನ್ ಮಂಡೇಲಾ ವರ್ಣಭೇದ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಅದಕ್ಕಾಗಿ ಜೈಲುವಾಸವನ್ನೂ ಅನುಭವಿಸಿದರು. ಆ ನಂತರ ಅಧಿಕಾರಕ್ಕೆ ಬಂದರು, ತಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಬಿಳಿಯರ ವಿರುದ್ಧ ದ್ವೇಷ ಕಾರದೆ, ಪ್ರತೀಕಾರದ ರಾಜಕಾರಣಕ್ಕೆ ಒತ್ತು ಕೊಡದೆ ಸಮನ್ವಯತೆಗೆ ಆದ್ಯತೆ ನೀಡಿದರು.

ಇದೆಲ್ಲಾ ಮುಗಿದು ಸುಮಾರು ವರ್ಷಗಳೇ ಕಳೆಯಿತು. ಜಗತ್ತು ಎಲ್ಲಿಂದ ಎಲ್ಲಿಗೋ ತಲುಪಿದೆ, ವರ್ಣಭೇದ ನೀತಿಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿದೆಯೇನೋ ಅನ್ನುವಂತಿದ್ದ ದಕ್ಷಿಣ ಆಫ್ರಿಕಾ ಈಗ ಅವನ್ನು ಸ್ಚಲ್ಪ ಮಟ್ಟಿಗಾದರೂ ಮೆಟ್ಟಿ ನಿಂತಿದೆ. ಆದರೆ ಒಳಗೆ ಮಡುಗಟ್ಟಿದ್ದ ದ್ವೇಷ? ಅದು ಇನ್ನೊಂದು ರೂಪದಲ್ಲಿ ವ್ಯಕ್ತವಾಗುತ್ತಿದೆ. ಪ್ರಪಂಚದ ಉಳಿದೆಲ್ಲಾ ದೇಶಗಳಂತೆ ದಕ್ಷಿಣ ಆಫ್ರಿಕಾ ಸಹ ವಲಸಿಗರು ನಮ್ಮ ದೇಶವನ್ನು ಹಾಳುಗೆಡವುತ್ತಿದ್ದಾರೆ ಎನ್ನುವ ಹುಸಿ ಭ್ರಮೆಯಲ್ಲಿ ತೇಲುತ್ತಿದೆ. ಯಾವ ನೆಲದಲ್ಲಿ ಗಾಂಧಿಯ ಸತ್ಯಾಗ್ರಹ ಚಳವಳಿಯ ರೂಪುರೇಷೆ ರೂಪುಗೊಂಡಿತೋ, ಯಾವ ನೆಲದಲ್ಲಿ ನೆಲ್ಸನ್ ಮಂಡೇಲಾ ಅದೇ ಅಹಿಂಸಾತ್ಮಕ ಚಳವಳಿಗೆ ಒಂದು ತಾತ್ವಿಕ ನೆಲೆ ಒದಗಿಸಿದರೋ ಅದೇ ನೆಲದಲ್ಲಿ ವಲಸಿಗರ ವಿರುದ್ಧ ಅಸಮಾಧಾನ ಮತ್ತು ಹಿಂಸಾತ್ಮಕ ಘಟನೆಗಳು ಸುದ್ದಿಯಾಗುತ್ತಿವೆ. ಉದ್ಯೋಗದ ಕೊರತೆ, ಆರ್ಥಿಕ ಸಂಕಷ್ಟ, ಬಡತನ ಮತ್ತು ಸಾರ್ವಜನಿಕ ಸೇವೆಗಳ ಮೇಲಿನ ಒತ್ತಡದಂತಹ ಸಮಸ್ಯೆಗಳಿಗೆ ವಿದೇಶಿ ವಲಸಿಗರನ್ನೇ ಹೊಣೆ ಮಾಡುವ ಮನಸ್ಥಿತಿ ಕೆಲವು ಕಡೆ ಬಲಗೊಳ್ಳುತ್ತಿದೆ. ‘ಹೊರಗಿನವರು ನಮ್ಮ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂಬ ಆರೋಪ ಕೇಳಿಬರುತ್ತಿದೆ.

೨೦೨೬ರಲ್ಲಿ ದಕ್ಷಿಣ ಆಫ್ರಿಕಾದ ಹಲವು ನಗರಗಳಲ್ಲಿ ವಲಸೆ ವಿರೋಧಿ ಪ್ರತಿಭಟನೆಗಳು ನಡೆದಿವೆ. ವಿದೇಶಿ ಪ್ರಜೆಗಳ ವಿರುದ್ಧ ಹಲ್ಲೆ, ಬೆದರಿಕೆ ಮತ್ತು ಆಸ್ತಿ ಲೂಟಿಯ ಘಟನೆಗಳನ್ನು ಮಾನವ ಹಕ್ಕು ಸಂಘಟನೆಗಳು ದಾಖಲಿಸಿವೆ. ಏಪ್ರಿಲ್‌ನಲ್ಲಿ ಡರ್ಬನ್‌ನಲ್ಲಿ ಸುಮಾರು ೨೦ ವರ್ಷಗಳಿಂದ ವಾಸಿಸುತ್ತಿದ್ದ ಕ್ಯಾಮರೂನ್ ಮೂಲದ ಅಂಗಡಿ ಮಾಲೀಕ ಮತ್ತು ಅವರ ಮೂವರು ಸಹೋದ್ಯೋಗಿಗಳ ಮೇಲೆ ದೊಣ್ಣೆ, ಚಾಟಿ, ಪೆಪ್ಪರ್ ಸ್ಪ್ರೇ ಮತ್ತು ಸ್ಟನ್ ಗನ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ದಾಖಲಿಸಿದೆ. ಇದೇ ಡರ್ಬನಲ್ಲಾಗಿತ್ತು ಗಾಂಧೀಜಿಯವರು ಫಸ್ಟ್ ಕ್ಲಾಸ್ ಟ್ರೈನ್ ಟಿಕೆಟ್ ಕೊಂಡದ್ದು ಮತ್ತು ಇದೇ ಡರ್ಬನ್ ೨೫ ವರ್ಷಗಳ ಹಿಂದೆ ’ಜನಾಂಗೀಯ ತಾರತಮ್ಯ’ದ ವಿರುದ್ಧ ಇಡೀ ಜಗತ್ತು ಒಟ್ಟಾಗಿ ‘ಡರ್ಬನ್ ಘೋಷಣೆ’ ಮಾಡಿಕೊಂಡದ್ದು.

ದಕ್ಷಿಣ ಆಫ್ರಿಕಾದ ನಿರುದ್ಯೋಗ, ಬಡತನ, ಅಪರಾಧ ಮತ್ತು ಸಾರ್ವಜನಿಕ ಸೇವೆಗಳಲ್ಲಿನ ವ್ಯತ್ಯಯ ಮುಂತಾದ ನೂರಾರು ಸಮಸ್ಯೆಗಳಿವೆ. ಅದರ ನಡುವೆ ಈ ‘ಹೊರಗಿನವರು’ ಎಂಬ ಭಾವ ಮತ್ತೆ ಜಗತ್ತು ಹಾಗೂ ದ. ಆಫ್ರಿಕಾದ ನಡುವೆ ಗೋಡೆಗಳನ್ನು ಕಟ್ಟುತ್ತಿದೆ. ವಲಸೆ ವಿರೋಧಿ ಸಂಘಟನೆಗಳು ಅಕ್ರಮ ವಲಸೆಯ ವಿರುದ್ಧವೇ ತಮ್ಮ ಹೋರಾಟ ಎಂದು ಹೇಳುತ್ತಿವೆ. ಆದರೆ ದಾಖಲೆ ಹೊಂದಿರುವ ವಲಸಿಗರು ಮತ್ತು ವರ್ಷಗಳಿಂದ ಅಲ್ಲಿಯೇ ಬದುಕುತ್ತಿರುವವರೂ ಹಲ್ಲೆ ಮತ್ತು ಬೆದರಿಕೆಗೆ ಒಳಗಾಗಿರುವ ಘಟನೆಗಳು ವರದಿಯಾಗಿವೆ.

ಒಂದು ಕಾಲದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಗಾಂಧಿಯೂ ‘ಹೊರಗಿನವರೇ’. ಆದರೆ ಆ ಹೊರಗಿನವನ ಅನುಭವಿಸಿದ ತಾರತಮ್ಯವೇ ಮುಂದೆ ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಹಿಂಸಾತ್ಮಕ ಹೋರಾಟಗಳಲ್ಲಿ ಒಂದಕ್ಕೆ ದಾರಿ ತೋರಿಸಿತು. ಗಾಂಧಿಯಿಂದ ಮಂಡೇಲಾವರೆಗೆ ಜಗತ್ತಿಗೆ ಮನುಷ್ಯನ ಘನತೆಯ ಪಾಠ ಹೇಳಿದ ನೆಲದಲ್ಲಿ ಇಂದು ಮತ್ತೆ ಅದೇ ಹಳೆಯ ಪ್ರಶ್ನೆ ‘ಒಳಗಿನವರು- ಹೊರಗಿನವರು’ ಎನ್ನುವ ಹೊಸ ರೂಪದಲ್ಲಿ ಪ್ರತ್ಯಕ್ಷವಾದದ್ದು ಕಾಲದ ವ್ಯಂಗ್ಯ.

” ಮಹಾತ್ಮ ಗಾಂಧಿಯಿಂದ ನೆಲ್ಸನ್ ಮಂಡೇಲಾವರೆಗೆ ಜಗತ್ತಿಗೆ ಶಾಂತಿ ಅಹಿಂಸೆಯ ಪಾಠ ಹೇಳಿದ ದಕ್ಷಿಣ ಆಫ್ರಿಕಾದಲ್ಲಿ ಇಂದು ಮತ್ತೆ ಅದೇ ಹಳೆಯ ‘ಒಳಗಿನವರು- ಹೊರಗಿನವರು’ ಎನ್ನುವ ರಕ್ಕಸ ಹೊಸ ರೂಪದಲ್ಲಿ ಪ್ರತ್ಯಕ್ಷವಾದದ್ದು ಕಾಲದ ವ್ಯಂಗ್ಯ.”

 

 

ಆಂದೋಲನ ಡೆಸ್ಕ್

Recent Posts

ಎರಡು ಗಂಟೆ ಹೆಣ್ಣಾದಾಗಲೇ ಹೀಗೆ! ಪೂರ್ತಿ ಹೆಣ್ಣು ಜನ್ಮದ ಸಂಕಷ್ಟ ಹೇಗಿರಬಹುದು?

ಪಾತು ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ,…

27 mins ago

ಸೈಕಲ್ ನಂಜುಂಡಸ್ವಾಮಿಯ ಪಂಕ್ಚರ್ ಶಾಪ್ ಖಾಲಿ ಖಾಲಿ

ಅಜಯ್ ಕುಮಾರ್ ಎಂ.ಗುಂಬಳ್ಳಿ ಈಗ ಸೈಕಲ್‌ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್…

31 mins ago

ಇಂದು ಮೈಸೂರಿನಲ್ಲಿ ಜಾಗತಿಕ ಸೈಕಲ್ ಸವಾರಿ

ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…

46 mins ago

ನಾಳೆ ಅರಮನೆಗೆ ಅಭಿಮನ್ಯು ಪ್ರವೇಶ

ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…

51 mins ago

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

15 hours ago