ಅಜಯ್ ಕುಮಾರ್ ಎಂ.ಗುಂಬಳ್ಳಿ
ಈಗ ಸೈಕಲ್‌ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್ ತುಳಿಯುತ್ತಾರೆ, ಸೈಕಲ್‌ಗೂ ಅವರಿಗೂ ಬಿಡಿಸಲಾಗದ ಸಂಬಂಧವೆಂಬಂತೆ. ವ್ಯಾಯಾಮದ ಕಾರಣಕ್ಕೆ ಕೆಲವರು ಸೈಕಲ್ ಹೊಡೆಯಬಹುದು, ಅದು ಬಿಟ್ಟರೆ ಮಕ್ಕಳು ಬೈಸಿಕಲ್ ಕೇಳಬಹುದು, ಹಠ ಹಿಡಿಯಬಹುದು. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕೊಟ್ಟಿದ್ದ ಸೈಕಲ್ ಅಲ್ಲೊಂದು, ಇಲ್ಲೊಂದು ಕಾಣಸಿಗುತ್ತದೆ. ನಮ್ಮ ಊರಲ್ಲಿ ಮೊದಲಿದ್ದ ಸೈಕಲ್ ಶಾಪ್‌ಗಳು ಕಾಲಕ್ರಮೇಣ ಮುಚ್ಚಿವೆ.
ಈಗ ‘ಸೈಕಲ್‌ಶಾಪ್’ಎನ್ನುವ ಹೆಸರಿನಡಿ ಒಂದು ಕೋಣೆಯೋ, ಕೊಠಡಿಯೋ ಇಲ್ಲ. ಸೈಕಲ್ ಶಾಪಿಂದ ರೂಪಾಂತರ ಹೊಂದಿ ಬೈಕ್ ಗ್ಯಾರೇಜ್ ಆದ ಮೂರುನಾಲ್ಕು ಅಂಗಡಿಗಳಿವೆ. ಆದರೆ ‘ಸೈಕಲ್ ಶಾಪ್’ ಎಂಬ ನಿರ್ದಿಷ್ಟ ಹೆಸರಿನ ಒಂದಂಗಡಿಯೂ ಇಲ್ಲ. ಸದ್ಯ ಪಂಕ್ಚರ್ ಮತ್ತು ಸೈಕಲ್ಲಿನ ಇತರೆ ರಿಪೇರಿ ಕೆಲಸಗಳನ್ನು ನಂಜುಂಡಸ್ವಾಮಿ ಮಾಡುತ್ತಾನೆ. ನಂಜುಂಡಸ್ವಾಮಿ ದಿವ್ಯಾಂಗ ವ್ಯಕ್ತಿ. ತಾತ್ಕಾಲಿಕ ಸೈಕಲ್ ಶಾಪ್ ಅನ್ನು ಮಾರಿಗುಡಿ ಸೂರಿನ ಕೆಳಗೆ ಇಟ್ಟುಕೊಂಡಿದ್ದಾರೆ.
ನಾನು ಕುತೂಹಲದಿಂದ ‘ಈಗಲೂ ನಿಮಗೆ ವ್ಯಾಪಾರ ಆಗುತ್ತ?’ ಕೇಳಿದೆ. ‘ಆಗುತ್ತೆ, ಒಂದೊಂದು ದಿನ ಆಗಲ್ಲ. ಏನಾರ ಮಾಡ್ಬೇಕಲ್ಲ ಜೀವನಕ್ಕೆ. ಇದೊಂದೆ ಕೆಲಸ ನನಗೆ ಗೊತ್ತಿರೋದು’ ಅಂದರು. ‘ದಿನಕ್ಕೆ ಎಷ್ಟು ಸೈಕಲ್ಲು ಬರಬಹುದು? ಕೇಳಿದೆ. ‘ಇಷ್ಟೆ ಅಂತ ಹೇಳಕ್ಕಾಗಲ್ಲ. ಒಂದ್ ದಿನ ಎರಡು ಮೂರು ನಾಲಕ್ಕು ಹೀಗೆ. ಒಂದೂ ಸೈಕಲ್ಲು ಬಾರದ ದಿನವೂ ಉಂಟು’ ಎಂದು ‘ಬೈಕ್‌ಗಳು ಬಂದ ಮೇಲೆ ನಮ್ಮ ಕೆಲಸಕ್ಕೆ ಹೊಡೆತ ಬೀಳ್ತು ಸಾ’ ಅಂದ. ನಾನು ‘ಹೌದೆಂದು’ ತಲೆಯಾಡಿಸಿದೆ. ‘ಒಂದ್ ಪಂಕ್ಚರ್‌ಗೆ ಎಷ್ಟು ರೂಪಾಯಿ ತಗೋತೀರ’ ಎಂದೆ. ‘ಇಪ್ಪತ್ತು ಇಲ್ಲ ಮೂವತ್ತು’ ಎಂದರು. ‘ಈ ತರ ರಿಪೇರಿಗಳಿಗೆ ಸ್ವಲ್ಪ ಹೆಚ್ಚು ಕಡಿಮೆ ತಗೋತೀನಿ.
ನಾನೇನು ಅಷ್ಟೆ ಇಷ್ಟೆ ಅಂತ ಡಿಮ್ಯಾಂಡು ಮಾಡಲ್ಲ. ಕೆಲಸ ನೋಡಿ ನೀವೇ ಕೊಡಿ ಅಂತ ಗ್ರಾಹಕರಿಗೆ ಹೇಳ್ತಿನಿ’ ಅನ್ನುತ್ತಲೇ ‘ಮೊದಲಾದರೆ ಪಂಕ್ಚರ್, ಟಯರ್ ಬದಲಾವಣೆ, ರಿಮ್ ಬೆಂಡ್ ತೆಗೆಯೋದು, ಸೀಟ್ ಕವರ್, ಪೆಡಲ್, ಬ್ರೇಕ್ ಲಿವರ್ (ಬ್ರೇಕ್ ಕಡ್ಡಿ) ಮಾರಾಟ ಇತ್ತು. ಈಗ ಪಂಕ್ಚರ್ ಬಿಟ್ಟರೆ ಇತರೆ ಕೆಲಸಗಳು ಅಮವಾಸ್ಯೆಗೋ, ಹುಣ್ಣಿಮೆಗೋ ಅನ್ನುವ ಹಾಗಿದೆ. ಚಿಕ್ಕಂದಿನಿಂದಲೂ ಇದೇ ಕೆಲಸ ಮಾಡಿಕೊಂಡೇ ಇದ್ದೀನಿ. ನನ್ನ ಕಾಲು ಸರಿಯಾಗಿ ಸಪೋರ್ಟು ಮಾಡದಿದ್ದರಿಂದ ಬೇರೆ ಕೆಲಸ ನನಗೆ ಆಗಿಬರಲಿಲ್ಲ’ವೆಂದು ಅವನೇ ಹೇಳುತ್ತಾನೆ.
ಈ ಮೊದಲು ಕೊಳ್ಳೇಗಾಲ, ಕಂದಹಳ್ಳಿಯಲ್ಲಿ ಅಂಗಡಿ ಹಾಕುತ್ತಿದ್ದು, ಈಗ ಗುಂಬಳ್ಳಿಯಲ್ಲಿ ಹಾಕಿದ್ದಾರೆ. ‘ಈ ಊರಿಗೆ ನಮ್ ಅಕ್ಕನ ಕೊಟ್ಟಿದ್ದಿವಿ. ಅದಕ್ಕೆ ಇಲ್ಲಿಗೆ ಬತ್ತಿನಿ’ ಅಂದಾಗ ‘ಸಂಚಾರಿ ಸೈಕಲ್ ಶಾಪ್ ನಿಮ್ಮದು’ ಅಂದು ನಕ್ಕು ‘ನಿಮಗೆ ಮದುವೆ, ಮಕ್ಕಳು?’ ಅಂತ ಕೇಳಿದಾಗ ‘ಆಗಿಲ್ಲ ಸಾ.. ನಮ್ ತಾಯಿ ಆವಾಗ್ಲೆ ಮದುವೆ ಆಗೋಕೆ ಒತ್ತಾಯ ಮಾಡುದ್ರು. ನಾನು ಅಂಗವಿಕಲ. ನನ್ನನ್ನು ಯಾರು ಒಪ್ಪುತ್ತಾರೆ ಅಂತ ನಾನೇ ಸಂದೇಹ ಪಟ್ಟೆ. ನಾನು ದುಡಿಯೋದೆ ಕಷ್ಟ. ಹೆಂಡತಿಗೆ ಅನ್ನ ಕೊಡಲು ಆಗುತ್ತೋ ಇಲ್ಲವೋ ಅಂತ ಭಯ ಪಟ್ಟು ಆಗಲಿಲ್ಲ.
ಆದರೆ ನನ್ನ ತಮ್ಮಂದಿರಿಗೆ, ಅಕ್ಕಂದಿರಿಗೆ ನಾನೇ ನಿಂತು ಲಗ್ನ ಮಾಡ್ದೆ, ಅವರಿಗೆಲ್ಲ ಬೆಳೆದ ಮಕ್ಕಳಿದ್ದಾರೆ’ ಎಂದರು. ಅವರ ಬಳಿಯಿದ್ದ ಸೈಕಲ್ ಚೈನ್ ಗಾರ್ಡ್ ಮೇಲೆ ಟೈಗರ್ ಪ್ರಭಾಕರ್ ಸ್ಟಿಕ್ಕರ್‌ನತ್ತ ಕೈ ತೋರಿಸಿದೆ. ‘ನಾನು ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರ ಪಿಚ್ಚರ್ ನೋಡೋಕೆ ಟೆಂಟು, ಟಾಕೀಸ್ಗು ಹೋಗಿದೀನಿ. ಯಾವ ಚಿತ್ರ ಎಂದು ನೆನಪಿಲ್ಲ. ಒಂದ್ಸಾರಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಅವರನ್ನು ನೋಡಲು ಹೋಗಿ ಸಾಹಸ ಮಾಡಿ ಕಡೆಗೂ ನೋಡಿದ್ದೆ.
ಅವರು ನನ್ನ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ದರು’ ಎಂದು ಖುಷಿಯಲ್ಲಿ ಉಬ್ಬಿ ಹೇಳಿದರು. ‘ಈಗಲೂ ವಿನೋದ್ ಪ್ರಭಾಕರ್ ಎಂದರೆ ತುಂಬಾ ಇಷ್ಟ. ಯಾವಾಗಲೂ ಅವರೇ ನಮ್ ಬಾಸು’ ಎಂದು ನಂಜುಂಡಸ್ವಾಮಿ ನಗುತ್ತಲೇ ನುಡಿದು ಕೆಲಸದ ಸಾಮಾನುಗಳನ್ನು ಚೀಲಕ್ಕೆ ತುಂಬಿ ಸೈಕಲ್‌ನ ಹ್ಯಾಂಡಲ್ ಬಾರಿಗೆ ಒಂದು, ಕ್ಯಾರಿಯರ್‌ಗೆ ಒಂದು ಇಟ್ಟು ‘ಬರ್ತಿನಿ ಸಾ’ ಎಂದು ಪೆಡಲ್ ಮೇಲೆ ಕಾಲಿಟ್ಟರು.
” ಗುಂಬಳ್ಳಿಯ ನಂಜುಂಡಸ್ವಾಮಿ ದಿವ್ಯಾಂಗ ವ್ಯಕ್ತಿ. ತಾತ್ಕಾಲಿಕ ಸೈಕಲ್ ಶಾಪ್ ಅನ್ನು ಮಾರಿಗುಡಿ ಸೂರಿನ ಕೆಳಗೆ ಇಟ್ಟುಕೊಂಡಿದ್ದಾರೆ.”
ಪಾತು ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ,…
ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್…
ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…
ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…