ನಮ್ಮ ಸೀಮೆಯಲ್ಲಿ ಕೆಲವು ವಿಶಿಷ್ಟ ಪ್ರಜೆಗಳಿದ್ದರು. ಇವರು ಬದುಕನ್ನು ಕಷ್ಟದಲ್ಲೂ ಸುಂದರಗೊಳಿಸಬಹುದೆಂದು ಕಾಣಿಸಿದವರು. ಸರ್ವರೂ ತುಳಿಯದ ಹಾದಿಯಲ್ಲಿ ನಡೆದವರು. ಸಾಹಸದ ಬಾಳ್ವೆ ಮಾಡಿ ಸೋಲುಂಡವರು. ಬೇಲಿ ಹೂಗಳಂತೆ ಅಖ್ಯಾತರು.
ಇವರಲ್ಲಿ ನಮ್ಮೂರ ಸನ್ನಿಪೀರಣ್ಣನೂ ಒಬ್ಬನು. ಮುಖಕ್ಷೌರ ಮಾಡದ, ಕುಳ್ಳಗೆ ತೆಳ್ಳಗೆ ಇದ್ದ ಸನ್ನಿಪೀರಾ ಊರೊಳಗಿದ್ದೂ ಊರಿನಂತಾಗದವನು. ನಿರಂಕುಶಮತಿಯಾಗಿ ಯಾರಿಗೂ ಸೊಪ್ಪುಹಾಕದೆ ತನ್ನಿಚ್ಛೆಯ ಬದುಕು ನಡೆಸಿದವನು. ‘ಸಂಸ್ಕಾರ’ದ ನಾರಾಣಪ್ಪ. ಜನ, ಮುಖಕ್ಕೆ ಹೊಡೆದಂತೆ ಏನಾ ದರೂ ಹೇಳಿಬಿಡುತ್ತಾನೆಂದು ಅವನ ಬಾಯಿಗೆ ಬೀಳಲು ಅಳುಕುತ್ತಿದ್ದರು. ಅವನ ನಿಷ್ಠುರತೆಗೆ ಸನ್ನಿ ಬಿರುದನಿತ್ತು ಸೇಡು ತೀರಿಸಿಕೊಂಡಿದ್ದರು. ಮನೆಯಲ್ಲಿ ಯಾರಾದರೂ ವಿಚಿತ್ರವಾಗಿ ಆಡಿದರೆ, ‘ಸನ್ನಿಪೀರನಂಗೆ ಆಡ್ತೀಯಲ್ಲೊ’, ‘ನಿನಗೇನು ಸನ್ನಿಪೀರಾ ಮೈಮೇಲೆ ಬಂದಿದಾನಾ?’ ಎನ್ನುತ್ತಿದ್ದರು. ಊರಿನ್ನೂ ಮಲಗಿರುವಾಗಲೇ ಎದ್ದು ಮೂರು ಮೈಲಿ ದೂರದ ತರೀಕೆರೆಗೆ ಹೋಗುವುದು, ದಿನವಿಡೀ ಸಾಮಿಲ್ಲಿನಲ್ಲಿ ಮರಕೊಯ್ಯುವುದು, ಕತ್ತಲದಾರಿಯಲ್ಲಿ ಸೈಕಲ್ ಟೈರಿನ ದೊಂದಿ ಮಾಡಿಕೊಂಡು ಮನೆಗೆ ಬರುವುದು ಅವನ ದಿನಚರಿ. ದೆವ್ವಗಳಿಂದ ಕುಖ್ಯಾತವಾಗಿದ್ದ ಹಳ್ಳವನ್ನು ಏಕಾಂಗಿಯಾಗಿ ದಾಟುವ ಅವನು ನಮ್ಮ ಪಾಲಿಗೆ ಜಗತ್ತಿನ ಶಕ್ತಿಶಾಲಿ ಮನುಷ್ಯನಾಗಿದ್ದ. ಮನೆಯಲ್ಲಿ ಹಣ್ಣಾದ ತಾಯಿ, ಚಿಕ್ಕವಯಸ್ಸಿನ ಮಗಳು. ಹೆಂಡತಿ ಕಿರಿಕಿರಿ ತಾಳಲಾಗದೆ ಬಿಟ್ಟುಹೋಗಿದ್ದಳು. ವಿವಾಹ ಬದುಕಿನ ಕುರುಹಾದ ಏಕೈಕ ಪುತ್ರಿಯನ್ನು ಜತನದಿಂದ ಪೋಷಿಸಿದ್ದನು. ಮಣಿಸರದ ಅಂಗಡಿಯಿಂದ ರಾಶಿ ಗಿಲೀಟಿನ ಆಭರಣ ತಂದು ಸಿಂಗರಿಸುತ್ತಿದ್ದನು. ರಂಜಾನ್ ಬಂದರೆ ಮುನೀರಾ ಸರ್ವಾಲಂಕಾರ ಭೂಷಿತೆಯಾಗಿ ಗೆಳತಿಯರ ಹೊಟ್ಟೆಯಲ್ಲಿ ಬೆಂಕಿ ಎಬ್ಬಿಸುವಳು. ಊರೆಲ್ಲ ಉಂಡು ಮಲಗಿದ ಬಳಿಕ ಬರುತ್ತಿದ್ದ ಪೀರಣ್ಣ ಮನೆಯ ಮುಂದೆ ನಿಂತು ಒಂದು ಆವಾಜ್ ಹಾಕುತ್ತಿದ್ದನು: ‘ಬೇಟಾ…’ ಈ ಕರೆಗೇ ಕಾಯುತ್ತಿದ್ದವಳಂತೆ ಮುನೀರಾ ‘ಅಬ್ಬಾ ಆಯಾ, ಅಬ್ಬಾ ಆಯಾ’ ಎಂದು ಕುಣಿಸುತ್ತ ಬಾಗಿಲು ತೆಗೆದು ತಿಂಡಿಪೊಟ್ಟಣ ಇಸಿದುಕೊಳ್ಳುತ್ತಿದ್ದಳು. ನಿದ್ದೆಯಲ್ಲಿದ್ದ ಜನ ‘ಸನ್ನಿ ಅಬ್ ಆಯಾ ಕಿಕಿ’ ಎಂದು ಗೊಣಗಿ ನಿದ್ದೆ ಮುಂದುವರಿಸುತ್ತಿದ್ದರು.
ಸಾಮಿಲ್ ಹೊಟ್ಟಿನ ದೂಳೀಮಯ ಮೈ ತೊಳೆದುಕೊಂಡ ಪೀರಣ್ಣ, ಸುಟ್ಟ ಒಣಮೀನು ನಂಜಿಕೊಂಡು ಅಪರಾತ್ರಿ ಆರೋಗಣೆ ಶುರು ಮಾಡುವನು.
ಹೀಗೆ ವರ್ಷವಿಡೀ ಹಗಲುಹೊತ್ತು ಜನರ ಕಣ್ಣಿಗೆ ಬೀಳದಂತೆ ನಿಶಾಚರನಾಗಿ ಬದುಕಿದ ಪೀರಣ್ಣನ ಮುಖಚಂದಿರ, ಹಬ್ಬಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ದೊರಕುತ್ತಿತ್ತು. ಅದ್ಭುತ ನಟ. ಮೊಹರಂನಲ್ಲಿ ಅವನದು ಪಾಳೇಗಾರ ಸೋಗು. ರಟ್ಟೆ ಸೊಂಟಗಳಿಗೆ ಕಟ್ಟಿದ ಕಪ್ಪು ಸರವಿಗಳನ್ನು ಹಿಡಿದ ನಾಲ್ಕು ಜನ ಹಿಂದಿನಿಂದ ಎಳೆಯುತ್ತಿರಲು ತಪ್ಪಿಸಿಕೊಳ್ಳಲು ಕೊಸರಾಡುತ್ತ, ಹುಲಿಯಂತೆ ಹೆಜ್ಜೆಹಾಕುತ್ತ, ಲಟ್ಟನೆ ಕುತ್ತಿಗೆ ತಿರುಗಿಸಿ ಕಣ್ಣು ಕೆಕ್ಕರಿಸಿ ನೆರೆದ ನೆರವಿಯತ್ತ ನೋಡುತ್ತ, ತಪ್ಪಟಿ ಹೊಡೆತಕ್ಕೆ ಕುಣಿಯುತ್ತಿದ್ದನು. ಚಿಕ್ಕಹಳ್ಳದ ದೆವ್ವಗಳು ಹೆದರುವುದು ಆಶ್ಚರ್ಯವಲ್ಲ.
ಎರಡನೇ ವರ್ಣರಂಜಿತ ವ್ಯಕ್ತಿ ಅಜೀಜ್. ಆರಡಿ ಎತ್ತರದ ದೃಢಕಾಯದ ನಗುಮುಖಿ. ಊರಿನ ಸೋಮಾರಿತನವನ್ನೆಲ್ಲ ತಾನೇ ಧಾರಣ ಮಾಡಿದ್ದ ಆಲಸಿ. ಎಳವೆಯಲ್ಲಿ ತಂದೆ ಸತ್ತು ತಾಯಿ ಮುದ್ದಿನಿಂದ ಸಾಕಿದ್ದೇ ಅವನು ಹಾಳಾಗಲು ಕಾರಣವೆಂದು ಊರು ಆಡಿಕೊಳ್ಳುತ್ತಿತ್ತು. ಮಕ್ಕಳನ್ನು ದಂಡಿಸುವಾಗ ‘ಸಡಿಲ ಬಿಟ್ಟರೆ ನೀನು ಅಜೀಜ್ ಆಗುತ್ತೀಯಾ’ ಎಂದು ಎಚ್ಚರಿಸುತ್ತಿತ್ತು. ಅಜೀಜಣ್ಣನ ನಾಷ್ಟಾಕ್ಕೆ ಎಂಟು ರಾಗಿರೊಟ್ಟಿ ಮತ್ತು ಹುರುಳಿ ಚಟ್ನಿ; ಊಟಕ್ಕೆ ಎರಡು ರಾಗಿಮುದ್ದೆಯ ಮೇಲೆ ಅರ್ಧಸೇರಕ್ತಿ ಅನ್ನ. ಬಕಾಸುರನನ್ನು ಮುದಿತಾಯಿ ಮತ್ತು ಹೆಂಡತಿ, ಕಳೆಗೆ ಕುಯಿಲಿಗೆ ಹೋಗಿ ಸಂಭಾಳಿಸುತ್ತಿದ್ದರು. ಬೇಸಗೆಯಲ್ಲಿ ಅವರು ಕಾಫಿತೋಟಗಳಿಗೆ ಗುಳೆ ಹೋದರೆ, ಅಜೀಜನೂ ಸಿಳ್ಳು ಹೊಡೆಯುತ್ತ ಹಿಂಬಾಲಿಸುತ್ತಿದ್ದನು. ಹೆಣ್ಣುಮಕ್ಕಳ ದುಡಿಮೆಯಿಲ್ಲದೆ ಹೋಗಿದ್ದರೆ, ನಮ್ಮೂರ ಅನೇಕ ಸಂಸಾರಗಳು ಬೀದಿಗೆ ಬಿದ್ದಿರುತ್ತಿದ್ದವು.
ಅಜೀಜಣ್ಣ ಮನಸ್ಸು ಬಂದಾಗ ಹೋಗಿ ದೊಡ್ಡ ಸಾಗುವಾನಿ ನಾಟ ತಂದು, ಬಂಡಿ ಮಾಡುವವರ ಮುಂದೆ ಒಗೆದು ಇಪ್ಪತ್ತು ರೂ. ಸಂಪಾದಿಸುತ್ತಿದ್ದನು. ರೊಕ್ಕವನ್ನು ಸಿನಿಮಾ ಟಾಕೀಸಿಗೂ ಹೋಟೆಲುಗಳಿಗೂ ಶ್ರದ್ಧೆಯಿಂದ ಸಮರ್ಪಿಸುತ್ತಿದ್ದನು. ಅವನಿಂದ ಕೆಲಸ ತೆಗೆಸುವವರು ಕೇರಳ ಲಕ್ಕಿ ರೆಸ್ಟೋರೆಂಟಿನ ಜಗುಲಿಯ ಮೇಲೊ ವಿನಾಯಕ ಟಾಕೀಸಿನ ಆವರಣದಲ್ಲೊ ಭೇಟಿಯಾಗುತ್ತಿದ್ದರು. ಅಜೀಜಣ್ಣ ‘ಬಹಾರೋ ಫೂಲು ಬರಸಾವೊ’ ಮುಂತಾದ ಸಿನಿಮಾ ಹಾಡುಗಳನ್ನು ಸಿಳ್ಳೆಯಲ್ಲೇ ನುಡಿಸುತ್ತಿದ್ದನು. ಹಬ್ಬದ ದಿನ ಬೇವಿನ ಮರವೇರಿ ಮಹಿಳೆಯರಿಗೆ ಉಯ್ಯಾಲೆ ಹಾಕಿಕೊಡುತ್ತಿದ್ದನು. ಹೆಂಗಸರ ಜತೆಕೂತು ಚೌಕಾಬಾರ ಆಡುತ್ತಿದ್ದನು. ಅವನ ಪ್ರತಿಭೆ ಕಾಡು ಕುಸುಮದ ಪರಿಮಳದಂತಿದ್ದು ಲೋಕದ ಲಕ್ಷ ಕ್ಕೆ ಬಾರದೆಹೋಯಿತು. ಕೊನೆಯ ದಿನಗಳಲ್ಲಿ ಮರಕೆತ್ತುತ್ತ ಬಾಚಿಯಿಂದ ಕಾಲಿಗೆ ಗಾಯವಾಗಿ ಕುಂಟುತ್ತಿದ್ದನು. ಗಾಯ ನಂಜಾಗಿ ನಡುವಯಸ್ಸಿಗೇ ಸತ್ತನು.
‘ಅಜೀಜ್’ ಎಂದರೆ ಬಲಶಾಲಿ ಎಂದರ್ಥ. ಅದೇಕೊ ನಾನು ಕಂಡ ಅಜೀಜಣ್ಣಗಳೆಲ್ಲ ಪುಕ್ಕಲುಗಳು. ನಂಟರ ಪೈಕಿಯಿದ್ದ ಅಜೀಜಣ್ಣನೊಬ್ಬನು ಮಡದಿಗೆ ಹೆದರುವುದಕ್ಕೆ ಹೆಸರಾಗಿದ್ದನು. ಆಕೆಯನ್ನು ಸಂಪ್ರೀತಗೊಳಿಸಲು ಏನಾದರೂ ಸಾಹಸ ಮಾಡಲೆಳಸಿ, ಫಜೀತಿಗೆ ಸಿಕ್ಕಿಬೀಳುತ್ತಿದ್ದನು. ಸಂತೆಯಿಲ್ಲದ ಒಂದು ದಿನ ಮನೆಯಲ್ಲಿರುವಾಗ್ಗೆ, ಮಡದಿಗೆ ಕಾರ ಕಡೆಯಲು ಹೇಳಿ, ಗಾಳ ಎತ್ತಿಕೊಂಡು ಕೆರೆಗೆ ಹೋದನು. ಯಾವ ಮೀನೂ ಗಾಳ ಕಚ್ಚಲಿಲ್ಲ. ಬರಿಗೈಯಲ್ಲಿ ಮನೆಗೆ ತೆರಳಲು ಧೈರ್ಯವಾಗಲಿಲ್ಲ. ಅದೇ ಹೊತ್ತಿಗೆ ಬೆಸ್ತರು ಮೀನನ್ನು ದಂಡೆಗೆ ತರಲು, ಅಜೀಜಣ್ಣ ಎರಡು ಕೆಜಿಯ ಮೀನೊಂದನ್ನು ಖರೀದಿಸಿ, ಸಂಜೆಯೊಳಗೆ ಹಣ ಕೊಡುತ್ತೇನೆಂದು ಹೇಳಿ ಬಂದನು. ಹೆಂಡತಿಯೆದುರು ಮೀನನ್ನು ದೊಪ್ಪೆಂದು ಎತ್ತಿಹಾಕಿ, ಅದನ್ನು ಎಳೆದು ದಡಕ್ಕೆ ಹಾಕುವುದಕ್ಕೆ ರಟ್ಟೆಯೆಲ್ಲ ಬಿದ್ದುಹೋಯಿತು ಎಂದನು. ಆಕೆ ಸಂಭ್ರಮದಿಂದ ಮೀನನ್ನುಜ್ಜಿ ಹುಳಿಮಾಡಿ ಮುದ್ದೆ ಕೂಡಿಸಿ, ಇನ್ನೇನು ಬಾಹುಬಲಿ ಪತಿಗೆ ಬಡಿಸಬೇಕು. ಅಷ್ಟರಲ್ಲಿ, ‘ಅಕ್ಕಾ, ಅಜೀಜಣ್ಣ ಮನ್ಯಾಗೈತಾ?’ ಕೂಗು ಬಾಗಿಲಲ್ಲಿ ಅನುರಣಿಸಿತು. ಹೊರಗೆ ಬಂದು ನೋಡಲು ಮೀನುಗಾರ ನಕ್ಷತ್ರಿಕನಂತೆ:
‘ಏನಪ್ಪ? ಏನು ಬೇಕಿತ್ತು?’
‘ಅಣ್ಣಾ ಮೀನು ತಗೊಂಬಂದಿದ್ದ. ದುಡ್ಡು ಕೊಡಬೇಕಮ್ಮ?”
ಆಕೆಗೆ ಅಪಮಾನವಾಯಿತು. ಭೂರಿ ನನಗಂಡ ಬುಗುಡಿ ತಂದರೆ, ಇಟ್ಕೊಳ್ಳೋಕೆ ತೂತಿಲ್ಲವೆಂದು ಆಕೆ ಬಲ್ಲಳು. ಆದರೆ ಪತಿ ಬೇಟೆಯಾಡಿ ತಂದದ್ದೆಂದು ಹೆಮ್ಮೆಯಿಂದ ಗಲ್ಲಿಯವರಿಗೆಲ್ಲ ಮತ್ಸ್ಯ ಪ್ರದರ್ಶನದಿದ್ದಳು. ಮರ್ಯಾದೆ ಹೋಗಿತ್ತು. ರೊಕ್ಕ ಕೊಟ್ಟು ಒಳಬಂದಳು. ಗಂಡ ಪೆಚ್ಚುನಗೆ ಬೀರುತ್ತ ತಟ್ಟೆಯ ಮುಂದೆ ಕೂತಿದ್ದನು. ‘ತಟ್ಟೆ ಕಿತ್ತುಕೊಂಡು ಅಂಗಳಕ್ಕೆ ಚೆಲ್ಲಬೇಕೆಂದು ಆಲೋಚನೆ ಬಂತು’, ಆದರೆ ಮಸಾಲೆ ಅರೆದು ಕಷ್ಟಪಟ್ಟು ಮಾಡಿದ ಸಾರು ಕಂಪು ಬೀರುತ್ತಿತ್ತು. ಮಾಫು ಮಾಡಿ ಬಡಿಸಿದಳು.
ಮದುವೆಯಾಗಿ ಮಡದಿ ಮಕ್ಕಳ ಕಷ್ಟಕ್ಕೊಳಗಾಗುವ ರಿಸ್ಕನ್ನೇ ತೆಗೆದುಕೊಳ್ಳದವನು ಜೇನುಪುಟ್ಟ. ಅವನದು ಮಾಸಿದ ಬಟ್ಟೆ ತೊಟ್ಟ ಕುಡಿದು ಲಡ್ಡಾದ ದೇಹ. ಜೇನ್ನೊಣ ಕಚ್ಚಿಕಚ್ಚಿ ಗೋಣಿತಟ್ಟಾದ ತೊಗಲು. ಮುಖದ ತೊಗಲನ್ನು ಸೀಳಿ ಗೋಲಿ ಸಿಕ್ಕಿಸಿದಂತಿರುವ ಬೆಳ್ಳನೆಯ ಕಣ್ಣುಗಳನ್ನು ಪಟಪಟ ಮಿಟುಕಿಸುತ್ತಿದ್ದನು. ಅವನಿಗೆ ನೊಣಗಳ ಮುಳ್ಳು ಚುಚ್ಚಿದರೂ ಪರಿಣಾಮ ಬೀರುತ್ತಿರಲಿಲ್ಲ. ಲಡಾಸು ಸೈಕಲ್ಲು, ಜೇನಿಳಿಸಲು ಹಗ್ಗ, ಕತ್ತಿ, ಬೆಂಕಿಪೊಟ್ಟಣ ಮತ್ತು ಟಿನ್‌ಡಬ್ಬ– ಅವನ ಬಂಡವಾಳ. ಪುಟ್ಟ, ದೊಡ್ಡದೊಡ್ಡ ಅರಳಿಮರದ ತುದಿಗಳನ್ನು ಕೋತಿಯಂತೆ ಏರುತ್ತಿದ್ದನು. ಹೆಜ್ಜೇನನ್ನು ಇಳಿಸಿ, ತುಪ್ಪವನ್ನು ಸಂತೆಯಲ್ಲಿ ಮಾರುತ್ತಿದ್ದನು. ಜೇನು ಕೀಳಲು ಹೋಗದ ದಿನ, ಬಣ್ಣಬಣ್ಣದ ದೊಗಲೆ ಬಟ್ಟೆಯನ್ನು ಧರಿಸಿ, ತಲೆಯ ಮೇಲೆ ಖಾಲಿಬಾಟಲಿ ಇಟ್ಟುಕೊಂಡು, ಮಡ್ಗಾರ್ಡಿಲ್ಲದ ಸೈಕಲ್ಲೇರಿ, ಹ್ಯಾಂಡಲನ್ನು ಕೈಬಿಟ್ಟು ಒಂದು ಸುತ್ತು ಬರುತ್ತಿದ್ದನು. ನಾವೆಲ್ಲ ಹೋ ಎಂದು ಅವನ ಹಿಂದೆ ದೌಡುತ್ತಿದ್ದೆವು.
ಜಗಳಗಂಟಿ ರಂಗಮ್ಮನ ನೆನಪಾಗುತ್ತಿದೆ. ಬೀದಿಯಲ್ಲಿ ಹೋಗುವಾಗ, ಏನಾದರೂ ಕಂಡರೆ ನಿಂತು ಟೀಕೆ–ಟಿಪ್ಪಣಿ ಮಾಡುವುದು ಆಕೆಯ ಹವ್ಯಾಸ. ದನ ನಿಂತಿದ್ದರೆ, ‘ಯಾಕೆ ನಿನ್ನೆಯಿಂದಲೂ ಇಲ್ಲೇ ನಿಂತಿದ್ದೀಯಾ? ಮನಿಗೆ ಹೋಗದಲ್ಲವೇ?’ ಎನ್ನುವಳು. ನಾಯಿ ಕಂಡರೆ ‘ಯಾಕ್ಹಂಗೆ ಓಡಾಡ್ತೀಯೊ ಅತ್ಲಿಂದಿತ್ತ. ಬ್ಯಾರೆ ಕೆಲಸವಿಲ್ಲವೇ?’ ಎಂದು ಬೈಯುವಳು. ಆಕೆಯ ಬಾಯಿಗೆ ಸಿಕ್ಕಲು ಎಲ್ಲರೂ ಹೆದರುತ್ತಿದ್ದರು. ಪೊಲೀಸ್ ಇಲಾಖೆಯಲ್ಲಿದ್ದ ಆಕೆಯ ಗಂಡ ಕುಡಿತ ಹೆಚ್ಚಾಗಿ ತೀರಿಕೊಂಡ. ಆಕೆ ಅಳಲಿಲ್ಲ. ಸಂಬಂಧಿಕರೆಲ್ಲ ಅಳುವಾಗ ‘ಏ ಅಂಥ ರಾಜೀವ ಗಾಂಧಿನೇ ಹೋದನಂತೆ. ಇವನ್ಯಾವ ಪುಕಳಿ ಅಂತ ಅಳ್ತೀರೇ?’ ಎಂದು ಹೇಳಿ ನೆರೆದವರನ್ನು ಬೆಚ್ಚಿಬೀಳಿಸಿದ್ದಳು. ಅವಳಿಗೆ ಏನಮ್ಮ ಸಾರು ಎಂದರೆ ‘ಅದೇ ಉಗಿಯೋ ಸಾರು ಕಣೇ’ ಎನ್ನುವಳು. ಮೀನು ತಿನ್ನುವಾಗ ಮುಳ್ಳನ್ನು ಬಾಯಿಂದ ಉಗಿಯುವುದರಿಂದ ಈ ಹೆಸರು.
ಯಾವುದೇ ಊರಿನ ಸೊಗಸು ಜನರ ಮಾತುಕತೆ ಊಟ ದುಡಿಮೆಗಳಲ್ಲಿರುತ್ತದೆ. ಅವರು ಯಾರನ್ನೊ ಮೆಚ್ಚಿಸಲು ಮಾತಾಡುವುದಿಲ್ಲ. ಬದುಕುವುದಿಲ್ಲ. ಅವರ ಸಹಜ ವರ್ತನೆ ಲೋಕಕ್ಕೆ ವಿಚಿತ್ರವಾಗಿ ಕಾಣುತ್ತದೆ. ಲೋಕರಂಜನೆ ಮಾಡಿದ ಅವರ ಬದುಕಿನ ತೆರೆ ಸರಿಸಿದರೆ ದುಃಖದ ಕಡಲು ಕಾಣಬಹುದು. ಕೆಲವೊಮ್ಮೆ ಸಂತಾನವಿರುವುದಿಲ್ಲ. ಹೆಂಡತಿ ಬಿಟ್ಟಿರುತ್ತಾಳೆ. ಕುಡುಕ ಗಂಡನಿಂದ ಸಾಕಾಗಿರುತ್ತಾರೆ. ಈ ನೋವನ್ನು ವಿನೋದದಿಂದ ಚದುರಿಸಿ ಜೀವಿಸಲು ಬೇಕಾದ ನೆಮ್ಮದಿ ಸೃಷ್ಟಿಸಿಕೊಳ್ಳುತ್ತಾರೆ. ಇಂತಹ ಎಷ್ಟೊ ಬೇಲಿಹೂಗಳು ಕಾಲನ ಕರೆಗೆ ಕಣ್ಮುಂದೆಯೇ ಉದುರಿದವು. ಅವುಗಳ ಕಂಪು ನೆನಹಿನ ಹವೆಯಲ್ಲಿ ಉಳಿದಿದೆ.
ವಿರಾಜಪೇಟೆ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ಹೊರವಲಯದ ಅರಮೇರಿ ಬಳಿಯ ನಾಲ್ಕನೇ ರಸ್ತೆಯಲ್ಲಿ…
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಟಾಕ್ಸಿಕ್ ಚಿತ್ರದ ವಿರುದ್ಧ ಮಕ್ಕಳ ಹಕ್ಕುಗಳ…
ಬೆಂಗಳೂರು: ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ದೇಶ ವಿರೋಧ ಘೋಷಣೆ ಕೂಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿ ಠಾಣೆ ಪೊಲೀಸರು…
ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಮತ್ತು ಅದರ ನಿರೂಪಕ ನಟ ಕಿಚ್ಚ ಸುದೀಪ್ ವಿರುದ್ಧ…
ಹಾಸನ: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ…
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…