– ಡಿ.ವಿ. ರಾಜಶೇಖರ
ದೇಶವನ್ನು ಲೂಟಿ ಮಾಡಿದ, ಲಕ್ಷಾಂತರ ಭಾರತೀಯರ ಸಾವಿಗೆ ಕಾರಣವಾದ ವಸಾಹತುಶಾಹಿಗಳ ವಂಶಸ್ಥೆ
ಬ್ರಿಟನ್ನ ರಾಣಿ ಎರಡನೆಯ ಎಲಿಜಬೆತ್ ನಿಧನಕ್ಕೆ (ಸೆ.೮) ಜಗತ್ತಿನ ಎಲ್ಲ ಕಡೆಯಿಂದ ಶೋಕ ಓತಪ್ರೋತವಾಗಿ ಹರಿದು ಬಂದಿದೆ. ಈ ಶೋಕ ಪ್ರವಾಹದ ನಡುವೆಯೂ ಭಿನ್ನವಾದ ಅಭಿಪ್ರಾಯ ವ್ಯಕ್ತಮಾಡಿ ನಾವು ಏಕೆ ಶೋಕ ವ್ಯಕ್ತಮಾಡಬೇಕು ಎಂಬ ಪ್ರಶ್ನೆಯನ್ನು ಎತ್ತಿದವರೂ ಇದ್ದಾರೆ. ಮುಖ್ಯವಾಗಿ ಬ್ರಿಟನ್ ವಸಾಹತುಶಾಹಿ ದೇಶಗಳಲ್ಲಿನ ಮಾನವ ಹಕ್ಕು ಹೋರಾಟಗಾರರಿಂದ ಮತ್ತು ವಿಚಾರವಂತರಿಂದ ಈ ಪ್ರಶ್ನೆ ಪ್ರತಿಧ್ವನಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದು ಚರ್ಚೆಯ ಪ್ರಮುಖ ವಿಷಯವಾಗಿದೆ.
ರಾಣಿ ಎಲಿಜಬೆತ್ ಸಾವು ಆಫ್ರಿಕಾ ಖಂಡದ ದೇಶಗಳ ದುರಂತಮಯ ಇತಿಹಾಸವನ್ನು ನೆನಪಿಸುತ್ತದೆ. ಬ್ರಿಟನ್ ರಾಜಪ್ರಭುತ್ವ ಆಫ್ರಿಕಾದ ಜನರ ಮೇಲೆ ನಡೆಸಿದ ದೌಜನ್ಯ, ಹಿಂಸಾಚಾರ ಅಷ್ಟಿಷ್ಟಲ್ಲ. ಜನರನ್ನು ಗುಲಾಮರನ್ನಾಗಿಸಿ ಹಡಗುಗಳಲ್ಲಿ ತುಂಬಿ ಕಳುಹಿಸಿದ ರಾಣಿಯ ವಂಶಜರನ್ನು ಹೇಗೆ ಮರೆಯಲು ತಾನೆ ಸಾಧ್ಯ, ರಾಣಿ ಎಲಿಜಬೆತ್ ಅಧಿಕಾರ ಪಡೆದ ನಂತರದ ಈ ೭೦ ವರ್ಷಗಳಲ್ಲಿ ಒಮ್ಮೆಯೂ ಅವರ ವಂಶಜರಿಂದ ಹಿಂದೆ ಆದ ದೌರ್ಜನ್ಯಕ್ಕೆ ಕ್ಷಮಾಪಣೆಯೂ ಕೇಳಲಿಲ್ಲ, ಗುಲಾಮರಾಗಿ ಬ್ರಿಟನ್ ಪ್ರಭುತ್ವಕ್ಕೆ ದುಡಿದವರ ಗತಿ ಏನಾಗಿದೆ, ಅವರ ಕುಟುಂಬಗಳಿಗೆ ಪರಿಹಾರ ಕೊಡಲು ಸಾಧ್ಯವೇ ಎಂಬ ಬಗ್ಗೆ ಅವರು ಒಮ್ಮೆಯೂ ಯೋಚಿಸಲಿಲ್ಲ, ಬದಲಾಗಿ ಎಲ್ಲ ಸಾಕ್ಷ್ಯಧಾರಗಳನ್ನೂ ಮುಚ್ಚಿಹಾಕುವ ಪ್ರಯತ್ನವನ್ನು ನಡೆಸಿದರು. ಇಂಥವರ ಬಗ್ಗೆ ಶೋಕ ಪಡುವುದು ಹೇಗೆ ಸಾಧ್ಯ ಎಂದು ದಕ್ಷಿಣ ಆಫ್ರಿಕಾದ ಫ್ರೀಡಂ ಫೈಟರ್ ಪಾರ್ಟಿಯ ನಾಯಕ ಜೂಲಿಯಸ್ ಮೆಲೆಮಾ ಪ್ರಶ್ನಿಸಿದ್ದಾರೆ. ಇದೇ ರೀತಿಯ ಅಭಿಪ್ರಾಯಗಳು ಆಫ್ರಿಕಾ ಖಂಡದ ಬಹುಪಾಲು ದೇಶಗಳಿಂದ ಕೇಳಿಬಂದಿವೆ.
ಭಾರತ ಕೂಡ ಸುಮಾರು ಎರಡು ಶತಮಾನಗಳ ಕಾಲ ಬ್ರಿಟಿಷರ ವಸಾಹತು ದೇಶವಾಗಿತ್ತು. ಬ್ರಿಟಿಷ್ ಸೇನೆ ಭಾರತೀಯರ ಮೇಲೆ ನಡೆಸಿದ ದೌರ್ಜನ್ಯ ಅತ್ಯಂತ ಕ್ರೂರವಾದುದು. ಬ್ರಿಟಿಷ್ ರಾಜಪ್ರಭುತ್ವದ ಅವಧಿಯಲ್ಲಿ ದೌರ್ಜನ್ಯಕ್ಕೆ ಸಿಕ್ಕಿ ಸತ್ತ ಭಾರತೀಯರ ಸಂಖ್ಯೆ ಮೂರು ಕೋಟಿಗೂ ಹೆಚ್ಚು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಳ್ಳುವ ಮುಂಚೆ ಅಭಿವೃದ್ಧಿ ದರ ಶೇ. ೨೫ ರಿಂದ ೩೫ ಇದ್ದದ್ದು ಬ್ರಿಟಿಷರ ಅವಧಿಯಲ್ಲಿ ಅದು ಏಳು-ಎಂಟಕ್ಕೆ ಇಳಿಯಿತು. ಭಾರತವನ್ನು ಮೊದಲು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಕೊಳ್ಳೆ ಹೊಡೆಯಲಾಯಿತು. ಬ್ರಿಟಷರೇ ನೇರವಾಗಿ ಭಾರತದ ವ್ಯವಹಾರ ನೋಡಿಕೊಳ್ಳಲು ಆರಂಭಿಸಿದ ನಂತರ ನಡೆದದ್ದು ದರೋಡೆ. ಭಾರತದ ಸಂಪತ್ತೆನ್ನೆಲ್ಲಾ ದೋಚಿ ಸಾಗಿಸಲಾಯ್ತು. ಈಗ ಮಾಡಿರುವ ಅಂದಾಜಿನ ಪ್ರಕಾರ ಬ್ರಿಟನ್ ಆಡಳಿತಗಾರರು ಭಾರತದಿಂದ ಕೊಳ್ಳೆ ಹೊಡೆದದ್ದು ಸುಮಾರು ೪೭ ಟ್ರಿಲಿಯನ್ ಡಾಲರ್‌ನಷ್ಟು ಸಂಪತ್ತು. ಇದರಲ್ಲಿ ಚಿನ್ನ, ಬೆಳ್ಳಿ, ದವಸ ಧಾನ್ಯವೂ ಸೇರಿತ್ತು. ಸುಮಾರು ೨೦೦ ಮಿಲಿಯನ್ ಡಾಲರ್ ಬೆಲೆಯುಳ್ಳ ಕೋಹಿನೂರ್ ವಜ್ರವನ್ನು ಕದ್ದೊಯ್ಯಲಾಯಿತು. ಸಾವಿರಾರು ಜನರನ್ನು ಗುಲಾಮರನ್ನಾಗಿ ಹಡಗುಗಳಿಗೆ ತುಂಬಿ ತಮ್ಮ ಇತರ ವಸಾಹತು ದೇಶಗಳಿಗೆ ಕಳುಹಿಸಲಾಯಿತು.
ಬ್ರಿಟಿಷರು ನಡೆಸಿದ ಅತ್ಯಂತ ಕ್ರೂರ ಸಾಮೂಹಿಕ ಹತ್ಯೆ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಅಮಾಯಕ ಪ್ರತಿಭಟನಾಕಾರರ ಮೇಲೆ ಬ್ರಿಗೆಡಿಯರ್ ಜನರಲ್ ಡೈರ್ ನಾಯಕತ್ವದ ಸೇನೆ ನಡೆಸಿದ ಗುಂಡಿನ ದಾಳಿ.(೧೯ಏಪ್ರಿಲ್ ೧೯೧೯) ಈ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ೩೭೦ ಮತ್ತು ಗಾಯಗೊಂಡವರು ಸಾವಿರಕ್ಕೂ ಹೆಚ್ಚು.
೧೯೩೫ ಮತ್ತು ೪೫ರ ಮಧ್ಯೆ ಬಂಗಾಲದಲ್ಲಿ ಕಂಡ ಕ್ಷಾಮ ಅತ್ಯಂತ ಭೀಕರವಾದುದು. ಈ ಕ್ಷಾಮ ಸಹಜವಾದುದಾಗಿರಲಿಲ್ಲ. ಮನುಷ್ಯ ನಿರ್ಮಿತ ಅಂದರೆ ಅಂದಿನ ಆಡಳಿತಗಾರರಾದ ಬ್ರಿಟಷರು ನಿರ್ಮಿಸಿದ ಕ್ಷಾಮ. ಈ ಕ್ಷಾಮದಲ್ಲಿ ೩೦ ಲಕ್ಷ ಜನರು ಸತ್ತರೆಂದು ಅಂದಾಜು ಮಾಡಲಾಗಿದೆ. ಜನರ ಹಸಿವನ್ನು ನೀಗಿಸಲು ಬೇಕಾದ ಆಹಾರ ಧಾನ್ಯವನ್ನು ಅಲ್ಲಿಗೆ ಪೂರೈಸದೆ ಬೇರೆ ಕಡೆಗೆ ಸಾಗಿಸಿದ್ದುದೇ ಈ ದುರಂತಕ್ಕೆ ಕಾರಣ. ಭಾರತೀಯರನ್ನು ದ್ವೇಷಿಸುತ್ತಿದ್ದ ಬ್ರಿಟನ್‌ನ ಅಂದಿನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ನಿರ್ದೇಶನಗಳಿಂದಾಗಿ ಕ್ಷಾಮಪೀಡಿತ ಬಂಗಾಲಕ್ಕೆ ಬರಬೇಕಿದ್ದ ಆಹಾರಧಾನ್ಯ ತುಂಬಿದ ಹಡಗುಗಳು ಯೂರೋಪ್ ಮತ್ತು ಯುದ್ಧದ ಇತರ ಪ್ರದೇಶಗಳಿಗೆ ರವಾನೆಯಾದವು ಎಂದು ಅಧ್ಯಯನಕಾರರು ಹೇಳುತ್ತಾರೆ. ಇದೆಲ್ಲಾ ಇತಿಹಾಸ.
ರಾಣಿ ಸತ್ತಾಗ ಹಳೆಯದೆಲ್ಲವನ್ನು ಕೆದಕುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸರಿಯಾದುದೆ. ಆದರೆ ಇತಿಹಾಸವಿಲ್ಲದೆ ಅವರು ರಾಣಿಯಾಗುತ್ತಿರಲಿಲ್ಲ ಎನ್ನವುದೂ ನಿಜವೇ. ಕನಿಷ್ಠ ಇತಿಹಾಸದಲ್ಲಿ ಆದ ತಪ್ಪುಗಳ ಬಗ್ಗೆ ಈಗಿನವರಲ್ಲಿ ಅರಿವಿರಬಾರದೇ? ಸತ್ತಾಗ ಹಳೆಯದನ್ನೆಲ್ಲಾ ಕೆದಕಿ ಸಂತಾಪ ವ್ಯಕ್ತಮಾಡದಿರುವುದು ಅಸೌಜನ್ಯ ಎನ್ನುವುದಾದರೆ ಇತಿಹಾಸದಲ್ಲಿ ಆಗಿರುವ ತಪ್ಪುಗಳಿಗೆ ವಿಷಾದ ವ್ಯಕ್ತಮಾಡದಿರುವುದೂ ಅಸೌಜನ್ಯವಾಗುತ್ತದೆ.
ಬ್ರಿಟಿಷರ ಆಡಳಿತಕಾಲದಲ್ಲಿ ಭಾರತೀಯರನ್ನು ತಲ್ಲಣಗೊಳಿಸಿದ ದುರಂತ ಘಟನೆ ಜಲಿಯನ್‌ವಾಲಾಬಾಗ್ ದುರಂತ. ರಾಣಿ ಎರಡನೆಯ ಎಲಿಜಬೆತ್ ಅಧಿಕಾರ ವಹಿಸಿಕೊಂಡ ನಂತರ ಭಾರತದ ೫೦ ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಬಂದಿದ್ದರು. ಆಗ ಜಲಿಯನ್‌ವಾಲಾಬಾಗ್‌ಗೂ ಭೇಟಿ ನೀಡಿದ್ದರು. ಈ ದುರಂತಕ್ಕಾಗಿ ಭಾರತೀಯರ ಕ್ಷಮೆ ಕೇಳುತ್ತೀರಾ ಎನ್ನುವ ಪ್ರಶ್ನೆಗೆ ರಾಣಿ ಎಲಿಜಬೆತ್ ಮೌನದ ಉತ್ತರ ನೀಡಿದ್ದರು. ಕನಿಷ್ಠ ವಿಷಾದವನ್ನೂ ವ್ಯಕ್ತ ಮಾಡಲಿಲ್ಲ.
ನಂತರ ದೆಹಲಿಯ ರಾಷ್ಟ್ರಪತಿ ಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಾಡಿದ ಭಾಷಣದಲ್ಲಿ ಈ ದುರಂತವನ್ನು ಪರೋಕ್ಷವಾಗಿ ಅವರು ಪ್ರಸ್ತಾಪಿಸಿದರು. ಇತಿಹಾಸದಲ್ಲಿ ಅನೇಕ ಕಳವಳಕಾರಿ ಘಟನೆಗಳು ನಡೆದುಹೋಗಿವೆ. ನಾವು ದುಃಖದ ಘಟನೆಗಳಿಂದ ಸಂತೋಷವನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿ ಸುಮ್ಮನಾದರು. ಈ ಧೋರಣೆಯನ್ನು ವಿವರಿಸುವುದು ಹೇಗೆ? ಕ್ಷಮೆಯಿರಲಿ ವಿಷಾದ ಭಾವನೆಯನ್ನೂ ಅವರು ವ್ಯಕ್ತಮಾಡದಿರುವುದನ್ನು ಭಾರತೀಯರು ಸೌಜನ್ಯ ಎಂದು ತಿಳಿಯಲು ಸಾಧ್ಯವಿಲ್ಲ.
ಇದೇನೇ ಇರಲಿ ಹಿಂದೆ ಆದದ್ದನ್ನು ಮುಂದಿಟ್ಟುಕೊಂಡು ಇಂದು ಮುಂದುವರಿಯಲು ಸಾಧ್ಯವಿಲ್ಲ.
ಬ್ರಿಟನ್ ಇಂದು ಬದಲಾಗಿದೆ. ಪ್ರಜಾತಂತ್ರ ದೇಶವಾಗಿ ಬೆಳೆದಿದೆ. ಯುರೋಪಿನ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದೆ. ಸಹಸ್ರಾರು ಭಾರತೀಯರಿಗೆ ಬ್ರಿಟನ್ ಈಗ ಉದ್ಯೋಗ ನೀಡಿದೆ. ಹಳೆಯದನ್ನು ಮರೆತು ಭಾರತೀಯರು ಅಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಭಾರತದ ಜೊತೆ ಬ್ರಿಟನ್ ಉತ್ತಮ ಬಾಂಧವ್ಯವನ್ನೂ ಪಡೆದಿದೆ. ಅನೇಕ ನೋವಿನ ಘಟನೆಗಳ ನಡುವೆಯೂ ಬ್ರಿಟಿಷರ ಆಡಳಿತ ಭಾರತದ ಆಡಳಿತ ವ್ಯವಸ್ಥೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಸಾಮಾಜಿಕವಾಗಿಯೂ ಉತ್ತಮ ಬದಲಾವಣೆಗಳಾಗಿವೆ.
ಆದರೂ ಬ್ರಿಟಿಷರ ಕಾಲದ ಹಲವು ಕಾನೂನುಗಳು ಇನ್ನು ಉಳಿದುಕೊಂಡು ಬಂದಿವೆ. ದೇಶದ್ರೋಹದ ಕಾನೂನು ಇದಕ್ಕೊಂದು ನಿದರ್ಶನ. ಬ್ರಿಟಿಷರು ಜಾರಿಗೊಳಿಸಿದ ಸತಿಪದ್ಧತಿಯ ನಿಷೇಧವೂ ಸೇರಿದಂತೆ ಹಲವು ಕಾನೂನುಗಳು ಭಾರತವನ್ನು ಆಧುನಿಕ ದೇಶವಾಗಿ ಪರಿವರ್ತಿಸಿದ್ದನ್ನು ಮರೆಯುವಂತಿಲ್ಲ.
ಬ್ರಿಟನ್ ದೇಶ ರಾಣಿ ಅಥವಾ ರಾಜಪ್ರಭುತ್ವವನ್ನು ಅಲಂಕಾರಿಕವಾಗಿ ಉಳಿಸಿಕೊಂಡಿದೆ. ಯುವಜನಾಂಗ ಇದನ್ನು ವಿರೋಧಿಸುತ್ತಾರೆ. ಆದರೆ ಅಂಥ ವ್ಯವಸ್ಥೆ ಉಳಿಯಬೇಕೆಂದು ಬಯಸುವ ಸಂಪ್ರದಾಯಸ್ಥ ಹಿರಿಯರ ಮತ್ತು ಮಧ್ಯವಯಸ್ಸಿನವರ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಬ್ರಿಟನ್‌ನಲ್ಲಿ ಈ ವ್ಯವಸ್ಥೆ ಉಳಿದುಕೊಂಡಿದೆ. ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುವ ದೇಶಗಳಲ್ಲಿ ರಾಣಿ, ರಾಜ ಪ್ರಭುತ್ವ ಅಲಂಕಾರಿಕವಾಗಿಯೇ ಆಗಲಿ ಇರುವುದು ಪ್ರಜಾಪ್ರಭುತ್ವದ ಅಣಕವೇ ಸರಿ.
ಆರ್ಥಿಕ ಬಿಕ್ಕಟ್ಟು: ಹೊಸ ಪ್ರಧಾನಿಗೆ ಸವಾಲು
ನಿರೀಕ್ಷೆಯಂತೆಯೇ ಭಾರತ ಮೂಲದ ರಿಶಿ ಸುನಕ್ ಅವರು ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿಲ್ಲ. ಆಡಳಿತ ಕನ್ಸರ್ವೇಟಿವ್ ಪಾರ್ಟಿ ಸದಸ್ಯರು ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ಅವರನ್ನು ಆಯ್ಕೆಮಾಡಿದ್ದಾರೆ. ಇದು ವರ್ಣಾಧಾರಿತ ಆಯ್ಕೆ ಎಂಬ ಆರೋಪವನ್ನು ರಿಶಿ ಸುನಕ್ ಅವರೇ ತಿರಸ್ಕರಿಸಿದ್ದಾರೆ. ಇದೇನೇ ಇರಲಿ ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಹೊಸ ಪ್ರಧಾನಿ ಲಿಜ್ ಟ್ರಸ್ ಅವರಿಗೆ ದೊಡ್ಡ ಸವಾಲಾಗಿದೆ. ಭಾರಿ ಪ್ರಮಾಣದ ತೆರಿಗೆ ವಿನಾಯ್ತಿ ಕೊಡುವುದಾಗಿ ಅವರು ಚುನಾವಣೆ ಸಂಧರ್ಭದಲ್ಲಿ ಘೋಷಿಸಿದ್ದರು. ವಾಸ್ತವವಾಗಿ ಹೀಗೆ ಮಾಡುವುದು ಕಷ್ಟ. ಆದರೆ ಟ್ರಸ್ ಹಠ ಹಿಡಿದು ನಿಂತಿದ್ದಾರೆ. ಯುಕ್ರೇನ್ ಮೇಲೆ ರಷ್ಯಾ ನಡೆಸಿದ ಸೇನಾ ದಾಳಿಯ ಪರಿಣಾಮವಾಗಿ ಇಡೀ ಯೂರೋಪ್ ಇಂಧನ ಸಮಸ್ಯೆಯನ್ನು ಎದುರಿಸುತ್ತಿದೆ. ಬೆಲೆಏರಿಕೆ, ಹಣದುಬ್ಬರ ಜನರಿಗೆ ಘಾಸಿ ತಂದಿವೆ.
ದೇಶ ಎದುರಿಸುತ್ತಿರುವ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ದಿಸೆಯಲ್ಲಿ ಪ್ರಧಾನಿ ಟ್ರಸ್ ಕೆಲವು ಬದಲಾವಣೆಗಳನ್ನು ತಂದಿದ್ದಾರೆ. ಟ್ರಸ್ ಅವರ ಸರ್ಕಸ್ ಇಲ್ಲಿಗೆ ಮುಗಿಯಲಾರದು. ಸಂಪನ್ಮೂಲ ಸಂಗ್ರಹ ಆಗಬೇಕು, ಇಂಧನ ಬೆಲೆಗಳು ಇಳಿಯಬೇಕು. ಎಲ್ಲ ಸಮಸ್ಯೆಗಳೂ ಇಲ್ಲಿಗೆ ಅಂತ್ಯವಾಗುವುದಿಲ್ಲ. ವರ್ಷಾಂತ್ಯಕ್ಕೆ ದೇಶ ಆರ್ಥಿಕ ಹಿಂಜರಿತಕ್ಕೆ ಸಿಕ್ಕಲಿದೆಯೆಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಜನರ ಬದುಕು ತುಟ್ಟಿಯಾಗಲಿದೆ. ಈ ಪರಿಸ್ಥಿತಿಯನ್ನು ಟ್ರಸ್ ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಆಡಳಿತ ಕನ್ಸರ್ವೇಟಿವ್ ಪಕ್ಷದ ಭವಿಷ್ಯವೂ ಅಡಗಿದೆ.
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…
ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…