ಎಡಿಟೋರಿಯಲ್

ಬೆಂಗಳೂರು ಡೈರಿ : ಮುಂದಿನ ವಿಧಾನಸಭಾ ಚುನಾವಣೆಯ ನಂತರ ‘ಜನನಾಯಕರ’ ಪರಂಪರೆ ಇಲ್ಲವಾಗುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ

ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು! 

೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು ಬಳಸಿಕೊಂಡು ಜನ ನಾಯಕರಾದರು. ಅಷ್ಟೇ ಅಲ್ಲ, ವಿವಿಧ ಜಾತಿಗಳ ನಾಯಕರನ್ನು ಗುರುತಿಸಿ ಮುಂಚೂಣಿಗೆ ತರತೊಡಗಿದರು. ಮುಂದೆ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಹೆಚ್.ಡಿ.ದೇವೇಗೌಡ, ಯಡಿಯೂರಪ್ಪ, ಸಿದ್ಧರಾಮಯ್ಯ ಅವರೆಲ್ಲ ಜನನಾಯಕರೇ.

ಆದರೆ ಯಡಿಯೂರಪ್ಪ ಅವರ ಪದಚ್ಯುತಿಯ ನಂತರ ಕರ್ನಾಟಕದ ರಾಜಕೀಯ ಜನನಾಯಕರ ಪರಂಪತೆಯಿಂದ ಕೆಲವೇ ಕಾಲದಲ್ಲಿ ವಿಮುಖವಾಗುವ ಆತಂಕ ಕಾಣುತ್ತಿದೆ.

೧೯೫೨ ರ ಮೊದಲ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದ್ದ ಕಾಲದಲ್ಲಿ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಪದೇ ಪದೇ ಬರತೊಡಗಿದ್ದರು. ಸ್ವಾತಂತ್ರ್ಯಾನಂತರ ಇಲ್ಲಿ ಕೆ.ಸಿ.ರೆಡ್ಡಿ ಅವರ ನೇತೃತ್ವದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಿತ್ತು. ಮತ್ತು ಅವರು ಕೂಡಾ ತಮ್ಮ ಜತೆಗಿದ್ದ ಕೆಲವೇ ಮಂತ್ರಿಗಳ ಜತೆಗೂಡಿ ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದರೇನೋ ನಿಜ. ಹೀಗೆ ಒಳ್ಳೆಯ ಆಡಳಿತ ನೀಡಿ ಗಮನ ಸೆಳೆದಿದ್ದ ಕೆ.ಸಿ.ರೆಡ್ಡಿ ಅವರನ್ನು ೧೯೫೨ ರ ಲೋಕಸಭೆ ಚುನಾವಣೆಗಳ ನಂತರ ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವುದು ನೆಹರೂ ಅವರ ಬಯಕೆಯಾಗಿತ್ತು.

ಯಾಕೆಂದರೆ ರಾಜ್ಯಗಳಲ್ಲಿ ಒಳ್ಳೆಯ ಹೆಸರು ಪಡೆದ, ಆಡಳಿತದಲ್ಲಿ ದಕ್ಷತೆ ಉಳ್ಳವರನ್ನು ತಮ್ಮ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಅತ್ಯಂತ ಪರಿಣಾಮಕಾರಿ ಸರ್ಕಾರ ನೀಡಬೇಕು ಎಂಬುದು ನೆಹರೂ ಅವರ ಇಚ್ವೆಯಾಗಿತ್ತು. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರನ್ನು ರಾಷ್ಟ್ರ ರಾಜಕೀಯಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಕ್ಕೆ ಇದೇ ಮುಖ್ಯ ಕಾರಣ. ಆದರೆ ಕೆ.ಸಿ.ರೆಡ್ಡಿ ಅವರಿಗೆ ದಿಲ್ಲಿಗೆ ಹೋಗುವುದಕ್ಕಿಂತ ಇಲ್ಲೇ ಇರುವ, ಅಸ್ತಿತ್ವಕ್ಕೆ ಬರುವ ಜನಾದೇಶದ ಸರ್ಕಾರದ ಮುಖ್ಯಮಂತ್ರಿಯಾಗುವ ಆಸೆ ಇತ್ತು.
ವಸ್ತುಸ್ಥಿತಿ ಎಂದರೆ ಆಡಳಿತ ಕೇಂದ್ರ ವಿಧಾನಸೌಧವನ್ನು ಕಟ್ಟಿಸುವ ಯೋಚನೆ ಅವರ ಕಾಲದಲ್ಲೇ ಮೊಳಕೆಯೊಡೆದು ಒಂದು ಹಂತಕ್ಕೆ ಬಂದಿತ್ತು.ಆದರೆ ಜವಾಹರಲಾಲ್ ನೆಹರೂ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ನಿರ್ಧರಿಸಿದ್ದರು. ಅವರಿಗೆ ಕೇಂದ್ರ ಸಂಪುಟಕ್ಕೆ ದಕ್ಷ ನಾಯಕರು ಬೇಕಿತ್ತು. ಅದೇ ಕಾಲಕ್ಕೆ ರಾಜ್ಯದಲ್ಲಿ ಜನನಾಯಕರೊಬ್ಬರನ್ನು ಸಿಎಂ ಹುದ್ದೆಗೆ ತರುವುದು ಬೇಕಿತ್ತು.
ಇದೇ ಉದ್ದೇಶಕ್ಕಾಗಿ ಅವರು ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನ ಅವರು ಪದೇ ಪದೇ ರಾಜ್ಯಕ್ಕೆ ಬರತೊಡಗಿದರು. ಹೀಗೆ ಬಂದವರು ಜನನಾಯಕನ ಶೋಧ ನಡೆಸಿದಾಗ ಅವರಿಗೆ ಪಕ್ಕಾ ಆದ ಹೆಸರು- ಕೆಂಗಲ್ ಹನುಮಂತಯ್ಯ.ತಮ್ಮ ವಿಚಾರಧಾರೆಗಳಿಂದ, ನಡವಳಿಕೆಯಿಂದ ಅವರು ಜನಾನುರಾಗಿ ನಾಯಕರಾಗಿ ಬೆಳೆದು ನಿಂತಿದ್ದಾರೆ ಎಂಬುದು ಖಚಿತವಾದ್ದರಿಂದ ನೆಹರೂ ಅದೇ ಹೆಸರನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ನಿಕ್ಕಿಗೊಳಿಸಿದರು. ಮುಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು.

೧೯೫೪ ರ ಹೊತ್ತಿಗೆ ಕೆಂಗಲ್ ಹನುಮಂತಯ್ಯ ಅವರನ್ನು ನೆಹರೂ ಪದಚ್ಯುತಗೊಳಿಸಿದರಾದರೂ ಮತ್ತೋರ್ವ ಜನನಾಯಕನ ಹೆಸರು ಪಕ್ಕಾ ಆಗುವವರೆಗೆ ಇರಲಿ ಅಂತ ಕಡಿದಾಳ್ ಮಂಜಪ್ಪ ಅವರನ್ನು ಕೆಲ ತಿಂಗಳ ಮಟ್ಟಿಗೆ ಪಟ್ಟಕ್ಕೇರಿಸಿದ್ದರು. ಕಡಿದಾಳ್ ಮಂಜಪ್ಪ ಪ್ರಾಮಾಣಿಕ ನಾಯಕರಾಗಿದ್ದರೂ, ದಕ್ಷ ನಾಯಕರಾಗಿದ್ದರೂ ಜನನಾಯಕರಾಗಿರಲಿಲ್ಲ.

ಪರಿಣಾಮ? ಕೆಂಗಲ್ ಹನುಮಂತಯ್ಯ ಅವರ ನಂತರ ಮುಖ್ಯಮಂತ್ರಿಗಳಾದ ಕಡಿದಾಳ್ ಮಂಜಪ್ಪ ಕೆಲವೇ ಕಾಲದಲ್ಲಿ ಕೆಳಗಿಳಿದರು. ಅವರ ಜಾಗಕ್ಕೆ ಅದಾಗಲೇ ಜನನಾಯಕರಾಗಿದ್ದ ನಿಜಲಿಂಗಪ್ಪ ಬಂದು ಕುಳಿತರು. ಮುಂದೆ ರಾಜ್ಯದ ನಾಯಕರು ಮತ್ತು ಕೇಂದ್ರದ ನಾಯಕರ ಮಧ್ಯೆ ಪ್ರತಿಷ್ಠೆಯ ಸಂಘರ್ಷಗಳು ನಡೆಯುತ್ತಿದ್ದವು. ಮತ್ತದರ ಪರಿಣಾಮವಾಗಿ ಜೀ ಹುಜೂರ್ ಲೀಡರುಗಳು ಮುಖ್ಯಮಂತ್ರಿಗಳಾಗುತ್ತಿದ್ದರಾದರೂ ಕೇಂದ್ರದ ನಾಯಕರು ಬಹುತೇಕ ಸಂದರ್ಭಗಳಲ್ಲಿ ಜನನಾಯಕರನ್ನೇ ನಾಯಕತ್ವಕ್ಕಾಗಿ ಹುಡುಕುತ್ತಿದ್ದರು.೧೯೬೯ ರಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಹೋಳಾಯಿತಲ್ಲ? ಇದರ ಪರಿಣಾಮವಾಗಿ ಇಲ್ಲಿದ್ದ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರ ಉರುಳಿಬಿತ್ತು. ಮುಂದೆ ೧೯೭೨ ರ ಚುನಾವಣೆಗೂ ಮುನ್ನ ತಮ್ಮ ಬಣಕ್ಕೆ ನಾಯಕನನ್ನು ಹುಡುಕಲು ಹೊರಟ ಇಂದಿರಾಗಾಂಧಿ ಅವರಿಗೆ ಕಂಡಿದ್ದು ಕೆ.ಮಲ್ಲಪ್ಪ. ಆದರೆ ಇಂದಿರಾಗಾಂಧಿ ಅವರು ತಮ್ಮನ್ನು ಭವಿಷ್ಯದ ನಾಯಕತ್ವಕ್ಕಾಗಿ ಆಹ್ವಾನಿಸಿದಾಗ ಮಲ್ಲಪ್ಪ ಅದನ್ನು ನಯವಾಗಿ ತಿರಸ್ಕರಿಸಿದರು.
ನನ್ನ ಬದಲು ಜನಪ್ರಿಯರಾಗಿ ಬೆಳೆದು ನಿಂತಿರುವ ದೇವರಾಜ ಅರಸರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದು ಮಲ್ಲಪ್ಪನವರು ಹೇಳಿದಾಗ ಇಂದಿರಾಗಾಂಧಿ ಅದಕ್ಕೆ ಒಪ್ಪಿಗೆ ನೀಡಿದರು. ಮುಂದೇನಾಯಿತು ಎಂಬುದು ಇತಿಹಾಸ. ೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು ಬಳಸಿಕೊಂಡು ಜನ ನಾಯಕರಾದರು. ಅಷ್ಟೇ ಅಲ್ಲ, ವಿವಿಧ ಜಾತಿಗಳ ನಾಯಕರನ್ನು ಗುರುತಿಸಿ ಮುಂಚೂಣಿಗೆ ತರತೊಡಗಿದರು.
ಮುಂದೆ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಹೆಚ್.ಡಿ.ದೇವೇಗೌಡ, ಯಡಿಯೂರಪ್ಪ, ಸಿದ್ಧರಾಮಯ್ಯ ಅವರೆಲ್ಲ ಜನನಾಯಕರೇ. ಆದರೆ ಯಡಿಯೂರಪ್ಪ ಅವರ ಪದಚ್ಯುತಿಯ ನಂತರ ಕರ್ನಾಟಕದ ರಾಜಕೀಯ ಜನನಾಯಕರ ಪರಂಪತೆಯಿಂದ ಕೆಲವೇ ಕಾಲದಲ್ಲಿ ವಿಮುಖವಾಗುವ ಆತಂಕ ಕಾಣುತ್ತಿದೆ. ೨೦೨೩ ರ ವಿಧಾನಸಭಾ ಚುನಾವಣೆಯ ನಂತರ ಸಿದ್ಧರಾಮಯ್ಯ ಉಳಿದುಕೊಂಡರೆ ಜನನಾಯಕರ ಪರಂಪರೆ ಒಂದು ಅವಧಿಗಾದರೂ ಮುಮದುವರಿಯುತ್ತದೆ. ಇಲ್ಲವೇ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಜನನಾಯಕರ ತಳಿಯೇ ಇಲ್ಲವಾಗುತ್ತದೆ. ಆನಂತರ ಏನಿದ್ದರೂ ಸೀಮಿತ ಪ್ರಭಾವವುಳ್ಳ ಪಾಳೇಗಾರರ ಪರಂಪರೆ ಶುರುವಾಗುತ್ತದೆ.

ಅಂದ ಹಾಗೆ ಜನನಾಯಕರಿದ್ದಾಗ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಶಕ್ತಿ ಇರುತ್ತದೆ. ಪಾಳೇಗಾರರ ಸ್ವರೂಪದ ನಾಯಕರೇ ಮುಂಚೂಣಿಗೆ ಬಂದಾಗ ಸಾಮಾಜಿಕ ನ್ಯಾಯಕ್ಕಿಂತ ಬಡಿದಾಡಬಲ್ಲವನು ಬದುಕುತ್ತಾನೆ ಎಂಬ ವಾತಾವರಣ ಸೃಷ್ಟಿಯಾಗುತ್ತದೆ. ಕರ್ನಾಟಕದ ರಾಜಕಾರಣ ಬಹುಬೇಗ ಪಾಳೇಗಾರ ನಾಯಕರ ಪರಂಪರೆಯತ್ತ ವಾಲುತ್ತದೆ ಅನ್ನಲು ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.ಈ ಮಾತಿಗೆ ಯಾವ ರಾಜಕೀಯ ಪಕ್ಷವೂ ಹೊರತಲ್ಲ ಎಂಬುದೇ ವಾಸ್ತವ!

 

andolanait

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ   72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…

18 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 21 ಶುಕ್ರವಾರ

3 hours ago

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

15 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

16 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

18 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

18 hours ago