ಹಾಡು ಪಾಡು

ದೇವರಗುಡ್ಡನಾಗಬೇಕಿದ್ದ ದುಂಡು ಮಾದೇವಸ್ವಾಮಿ ಚಿತ್ರಗಾರನಾದ ವೃತ್ತಾಂತ

ಸ್ವಾಮಿ ಪೊನ್ನಾಚಿ

ದಿನಬೆಳಗಾದರೆ ಮಾದಪ್ಪ, ಮಂಟೇಸ್ವಾಮಿಯ ಹಾಡು ಹಾಡಿಕೊಂಡು ಬರುವ ಜನಪದರ ದಂಡು. ಸುತ್ತಮುತ್ತ ದೇವರಗುಡ್ಡ ನೀಲಗಾರರ ಹಿಂಡು. ಊರೂರಿ ನಲ್ಲೂ ಮಾರಿಹಬ್ಬದ ಮಾರಿಕುಣಿತ. ಒಂದು ಗಂಡು ಮಗುವಾದರೆ ಮಾದಪ್ಪನಿಗೆ ‘ಗುಡ್ಡ’ ಬಿಡುತ್ತೇನೆಂದು ಹರಸಿಕೊಂಡ ಮೇಲೆ ಹುಟ್ಟಿದ ಮಗು ನೀಲಗಾರರ ದೇವರಗುಡ್ಡರ ಸಹವಾಸದಿಂದ ಕಲಿತ ಪದಗಳನ್ನು ಹಾಡುತ್ತಾ ತಾನೂ ಅದಕ್ಕೆ ಜೊತೆಯಾಗಿ ಪದಕಟ್ಟುತ್ತಾ ತನ್ನ ಕಾವ್ಯಪ್ರತಿಭೆಯನ್ನು ತೋರಿಸುತ್ತಾ ಇನ್ನೇನು ದೇವರಗುಡ್ಡ ದೀಕ್ಷೆ ತೆಗೆದುಕೊಂಡುಬಿಡಬೇಕು ಎನ್ನುವಾಗ ಆ ದೀಕ್ಷೆ ಸಮಾರಂಭಕ್ಕೆ ಖರ್ಚು ಮಾಡುವಷ್ಟು ಹಣ ಇಲ್ಲದೆ ದೇವರಗುಡ್ಡ ಆಗಲೇ ಇಲ್ಲ. ಚಾಮರಾಜನಗರಕ್ಕೆ ಮತ್ತೊಬ್ಬ ಜನಪದ ಕಲಾವಿದ ಸಿಕ್ಕ ಅಂದುಕೊಳ್ಳು ವಾಗಲೇ ಇವೆಲ್ಲವನ್ನೂ ಬಿಟ್ಟು ಸಂಪೂರ್ಣವಾಗಿ ಚಿತ್ರಕಲೆಯಲ್ಲಿ ತೊಡಗಿಸಿ ಕೊಂಡ.

ಹಾಗೆ ನೋಡಿದರೆ ಈತ ಜನಪದ ಹಾಡು ಹಾಡಿಕೊಂಡು ಕಾರ್ಯಕ್ರಮ ಹರಿಕಥೆ, ಶಿವಕಥೆ ಮಾಡಿಕೊಂಡಿರಬೇಕಿತ್ತು. ವಾದನ, ನರ್ತನ, ಗಾಯನದ ನಡುವಿಂದ ತಪ್ಪಿಸಿಕೊಂಡು ಅವುಗಳೆಲ್ಲದರ ಪ್ರಭಾವದಿಂದ ಬಿಡಿಸಿಕೊಂಡು ಚಿತ್ರಕಲಾವಿದ ಆದದ್ದು ಮಾತ್ರ ಸೋಜಿಗ. ನಾಲ್ಕನೇ ತರಗತಿ ಓದುವಾಗ ನವಿಲು ಚಿತ್ರ ಬರೆದು ಶಿಕ್ಷಕರಿಂದ ಪೆನ್ಸಿಲ್ ಬಹುಮಾನವಾಗಿ ಪಡೆದ ಹುಡುಗ ಮುಂದೆ ಅದೇ ಪೆನ್ಸಿಲ್ ಬಳಸಿಕೊಂಡು ದೊಡ್ಡಕಲಾವಿದನಾಗುತ್ತೇನೆಂದು ಊಹಿಸಿರಲಿಲ್ಲ. ಊರಿನಲ್ಲಿ ಚಿಕ್ಕ ಮಕ್ಕಳಿಗೆ ‘ಅಮ್ಮ’ ಕಾಯಿಲೆ ಬಂದಾಗ ಅವರ ಬೆನ್ನಮೇಲೆ ಸಿಂಹದ ಚಿತ್ರವನ್ನು ಬರೆಯುವುದಕ್ಕೆ ಶುರು ಮಾಡಿದ ಇವರಿಗೆ ಚಿತ್ರಕಲೆ ಅಂಟಿಕೊಂಡಿತು. ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದ ಈ ಹುಡುಗ ಹೈಸ್ಕೂಲ್‌ನಲ್ಲಿ ಫೀಜು ಕಟ್ಟಲಾಗದೆ ಶಾಲೆ ಬಿಡುತ್ತೇ ನೆಂದು ಹೋದಾಗ, ಇವರ ಪ್ರತಿಭೆಯನ್ನು ಕಂಡ ಇವರ ಹೈಸ್ಕೂಲ್ ಶಿಕ್ಷಕರೇ ಫೀಜು ಕಟ್ಟಿಕೊಂಡು ಓದಿಸಿದರು. ಆದರೆ ಚಿತ್ರಕಲೆಯಲ್ಲಿ ಗೀಳು ಅಂಟಿಸಿಕೊಂಡ ಹುಡುಗ ತನ್ನ ಹೈಸ್ಕೂಲು ಶಿಕ್ಷಕರ ಆಸೆ ಈಡೇರಿಸಲಿಲ್ಲ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲಾದ. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಹೇಗಿದ್ದರೂ ಅಲ್ಪಸ್ವಲ್ಪ ಚಿತ್ರಕಲೆ ಬರೆಯುವುದು ಗೊತ್ತಿದ್ದ ಈ ಹುಡುಗ, ಯಳಂದೂರಿನ ಖಾನ್ ಆರ್ಟ್ಸ್ ಅವರ ಬಳಿ ಸೇರಿಕೊಂಡು ಸಣ್ಣಪುಟ್ಟ ಬ್ಯಾನರ್ಗಳನ್ನು ಬರೆದುಕೊಂಡು ಮನೆ ಸಂಚ ನಡೆಸಲು ಪ್ರಯತ್ನಿಸಿದ. ಕೊನೆಗೆ ಇದರಿಂದ ಹೊಟ್ಟೆ ತುಂಬುವುದಿಲ್ಲವೆಂದು ತಿಳಿದು, ಹೇಗಾದರೂ ಮಾಡಿ ಚಿತ್ರಕಲೆಯಲ್ಲಿ ಸಾಧಿಸಬೇಕೆಂದು ಮೈಸೂರಿನ ವೈಜಯಂತಿ ಸ್ಕೂಲ್ ಆಫ್ ಆರ್ಟ್ಸ್ ಸೇರಬೇಕೆಂದು ಅಲ್ಲಿ ಹೋದಾಗ, ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕೆಂದರು.

ವಿಧಿ ಇಲ್ಲದೆ ಮತ್ತೊಮ್ಮೆ ಹತ್ತನೇ ತರಗತಿ ಓದುವಂತಾಯಿತು. ಚಿತ್ರಕಲೆಯ ಮೇಲಿನ ಪ್ರೀತಿ ಎಸ್‌ಎಸ್‌ಎಲ್‌ಸಿಯನ್ನು ಕಷ್ಟಪಟ್ಟು ಓದಿ ಒಂದೇ ಸಲಕ್ಕೆ ನಾಲ್ಕು ವಿಷಯಗಳಲ್ಲಿ ಪಾಸ್ ಆಗುವಂತೆ ಮಾಡಿತು. ವೈಜಯಂತಿ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಸೀಟೇನೋ ಸಿಕ್ಕಿತು. ಇವರು ತೆಗೆದುಕೊಂಡಿದ್ದ ಮೂರು ಮುಕ್ಕಾಲು ಮಾರ‍್ಕಿಗೆ ಹಾಸ್ಟೆಲ್ ಸಿಕ್ಕಿರಲಿಲ್ಲ. ಪ್ರತಾಪ್ ತೇಜೋಪಾಲ್ ಅನ್ನೋರು ಇವನ ಚಿತ್ರಕಲೆ ಪ್ರತಿಭೆ ನೋಡಿ ತನ್ನ ರೂಮಲ್ಲಿ ಉಳಿಸಿಕೊಂಡಿದ್ದರು. ಎಲ್ಲೋ ಬ್ಯಾನರ್ ಬರೆಯುತಿದ್ದ ಈ ಹುಡುಗನನ್ನು ಗಮನಿಸಿದ ಬಸವೇಶ ಅನ್ನೋರು ಹೇಗೋ ಮಾಡಿ ಹಾಸ್ಟೆಲ್ ಸೇರಿಸಿದರು. ಇನ್ನು ಆರ‍್ಟ್ ಕಾಲೇಜಿನ ಫೀಜಿಗೆ ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ ಜಯದೇವ ಆರ್ಟಿಸ್ಟ್‌ನವರ ಜೊತೆ ಜೊತೆ ಸೇರಿಕೊಂಡು ರಾಜಕೀಯ ಸಮಾವೇಶಗಳಿಗೆ ಬ್ಯಾನರ್ ಬರೆಯುವುದು, ಸ್ಟೇಜ್ ಸಿದ್ಧತೆ ಮಾಡುವುದು, ಸುತ್ತೂರು ಮುಂತಾದ ದೊಡ್ಡ ದೊಡ್ಡ ಜಾತ್ರೆಗಳಲ್ಲಿ ಕೆಲಸ ಮಾಡುವುದು, ಸಿನೆಮಾ ಸೆಟ್ ಹಾಕುವುದು ಮುಂತಾದ ಕೆಲಸ ಮಾಡಿಕೊಂಡು ಖರ್ಚು ಸರಿದೂಗಿಸಿಕೊಂಡು ಕೋರ್ಸು ಮುಗಿಸಿದನು.

ದುಡ್ಡುಕಾಸಿಗಾಗಿ ಹಗಲು ರಾತ್ರಿ ಎಂದು ದುಡಿದ ಈ ಹುಡುಗನಿಗೆ ಕಲೆಗಿಂತ ಬದುಕು ಕಟ್ಟಿಕೊಳ್ಳಲು ನೆರವಾಗುವ ದುಡ್ಡಿನ ಬೆಲೆ ಗೊತ್ತಿತ್ತು. ವನ್ಯಜೀವಿಗಳ ಸಂರಕ್ಷಣೆಯ ಕುರಿತಂತೆ ಹಾಗೂ ಇತರೆ ಸಮಾಜಮುಖಿ ಜಾಗೃತಿ ಮೂಡಿಸುವ ಅದೆಷ್ಟೋ ಚಿತ್ರಗಳನ್ನು ಬರೆದರೂ ಸಂಬಂಧಿಸಿದ ಸಂಸ್ಥೆಗಳಿಂದ ಅಥವಾ ಸರ್ಕಾರದಿಂದ ಯಾವುದೇ ಧನ ಸಹಾಯವಿರಲಿ ಪ್ರೋತ್ಸಾಹದ ಮಾತು ಕೂಡ ಬರಲಿಲ್ಲ. ಚಿತ್ರಕಲೆಯನ್ನು ಕೇವಲ ಪ್ರೊಫೆಷನಲ್ ಆಗಿ ತೆಗೆದುಕೊಳ್ಳದೆ ಕಮರ್ಷಿಯಲ್ ಆಗಿಯೂ ಬಳಸಿ ಕೊಂಡರು. ಚಿತ್ರಕಲೆ ಕೈ ಹಿಡಿಯಿತು, ಬದುಕು ಕೊಟ್ಟಿತು. ಹೆಸರೂ ತಂದುಕೊಟ್ಟಿತು. ನಾಲ್ಕು ಬಾರಿ ದಸರಾ ಅವಾರ್ಡ್. ರಾಜ್ಯಮಟ್ಟದ ಯುವ ಪ್ರತಿಭೆ ಅವಾರ್ಡ್. ಬೆಂಗಳೂರು, ಮೈಸೂರು, ಚಾಮರಾಜನಗರ, ಮುಂಬೈ, ಮುಂತಾದ ಕಡೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನ. ಕೊನೆಗೆ ಚಾಮರಾಜನಗರದಿಂದ ಲಲಿತಕಲಾ ಅಕಾಡೆಮಿಗೆ ಸದಸ್ಯನಾಗಿ ಆಯ್ಕೆ. ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಚಿಕ್ಕಮಾದಯ್ಯ ಮತ್ತು ನಾಗಮ್ಮ ದಂಪತಿ ಮಗನಾಗಿ ಜನಿಸಿದಂತಹ ‘ದುಂಡು ಮಾದೇವಸ್ವಾಮಿ’ ಪ್ರಸ್ತುತ ಯಳಂದೂರಿನಲ್ಲಿ ‘ದುಂಡು ಆರ್ಟ್ ಗ್ಯಾಲರಿ’ ಸ್ಥಾಪಿಸಿಕೊಂಡು ತಮ್ಮ ಕಲಾ ಸೇವೆಯನ್ನು ಮುಂದುವರಿಸಿದ್ದಾರೆ. ಶಾಲಾ ಮಕ್ಕಳಿಗೆ ಚಿತ್ರಕಲೆ ಹೇಳಿಕೊಡುತ್ತಾ, ಕೇಳಿದವರಿಗೆ ಚಿತ್ರ ಬರೆದುಕೊಡುತ್ತಾ, ತಮ್ಮ ಕಲಾಶಾಲೆಯಲ್ಲಿ ತೊಡಗಿಕೊಂಡಿದ್ದಾರೆ.

ತೈಲವರ್ಣ, ಜಲವರ್ಣಗಳಲ್ಲಿ ಪಳಗಿದ ಕೈ. ಕಲ್ಪನೆಗೆ ಮೊರೆ ಹೋಗದೆ ತಾನು ನೋಡಿದ ಸಂಗತಿಗಳನ್ನು ಕ್ಯಾನ್ವಾಸ್‌ನಲ್ಲಿ ಮೂಡಿಸಿದ್ದಾರೆ. ವ್ಯಕ್ತಿಚಿತ್ರ, ಅಮೂರ್ತ ಚಿತ್ರಗಳನ್ನು ಹೆಚ್ಚು ಬರೆಯುವ ಇವರ ಕೃತಿಗಳು, ದೇಶವಿದೇಶಕ್ಕೂ ಮಾರಾಟವಾಗಿದೆ. ನಗರ ಮತ್ತು ಗ್ರಾಮೀಣ ಬದುಕನ್ನು ಹೋಲಿಕೆ ಮಾಡಿಕೊಂಡು ಗ್ರಾಮೀಣ ಬದುಕಿನ ಮಹತ್ವವನ್ನು ಚಿತ್ರದಲ್ಲಿ ಹೆಚ್ಚು ಮೂಡಿಸಿದ್ದಾರೆ. ಇತ್ತೀಚಿನದಿನಗಳಲ್ಲಿ ದಾಸಯ್ಯನ ಅರಿಗೆಗಳನ್ನು ತಯಾರಿಸುವವರ ಸಂತತಿಯೇ ನಶಿಸುತ್ತಿರುವ ಸಂದರ್ಭದಲ್ಲಿ ಇವರು ರಚಿಸುವ ‘ಕರಿಯಣ್ಣ’, ‘ಕೆಂಚಣ್ಣ’ ಮುಖವಾಡಗಳಿಗೆ ಎಲ್ಲಿಲ್ಲದ ಬೇಡಿಕೆ. ಇವರ ಕೈಚಳಕದಿಂದ ಮೂಡಿದ ಬುದ್ದನ ವಿಧವಿಧದ ಅದೆಷ್ಟೋ ಚಿತ್ರಗಳು ಮನೆಮನೆಯನ್ನು ಅಲಂಕರಿಸಿವೆ. ಇವರು ರಚಿಸಿದ ವ್ಯಕ್ತಿ ಚಿತ್ರಗಳು ಕ್ಯಾಮೆರಾ ಕಣ್ಣನ್ನೂ ನಾಚಿಸಿವೆ.

ನಗರದ ನಾಜೂಕುತನದಿಂದ ಸದಾ ದೂರ ಉಳಿಯಲು ಬಯಸುವ, ಯಾವಾಗಲೂ ಹಳ್ಳಿಯನ್ನೇ ಧ್ಯಾನಿಸುತ್ತಾ ತನ್ನ ನಡೆನುಡಿಯಲ್ಲಿ ಹಳ್ಳಿ ಹುಡುಗನನ್ನೇ ಆವಾಹಿಸಿ ಕೊಂಡು ತನ್ನ ಚಾಮರಾಜನಗರದ ಸೊಗಡಿನ ಭಾಷೆ ಯಲ್ಲೇ ಮಾತ ನಾಡುತ್ತಾ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ. ತಾನು ದೇವರಗುಡ್ಡ ಆಗಬೇಕೆಂದು ಕಲಿತ ಜನಪದ ನುಡಿಗಟ್ಟು ಗಳನ್ನು ಮಾತಿನ ಮಧ್ಯೆ ತೇಲಿಸುತ್ತಾ ಕೇಳು ಗರಿಗೆ ಬೆರಗನ್ನುಂಟು ಮಾಡುತ್ತಾರೆ. ಮೊದಲೆಲ್ಲ ಜನರಿಗೆ ಒಂದು ಹೊತ್ತಿನ ಊಟಕ್ಕೆ ಕಷ್ಟವಾಗುತಿತ್ತು. ಆ ಸಮಯದಲ್ಲಿ ಕಲೆ ಯಿಂದ ಹೋದರೆ ಬದುಕು ಅಧ್ವಾನವಾಗಿ ಬಿಡುವ ಸಾಧ್ಯತೆ ಇತ್ತು. ಅಂತಹ ಕಷ್ಟ ದಲ್ಲೂ ಜನರು ಕಲೆಯನ್ನು ಕೈ ಬಿಡಲಿಲ್ಲ. ಆದರೆ ಈಗ ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ. ವಿದ್ಯಾರ್ಥಿ ಗಳು, ಯುವಕರು ಕಲೆಯನ್ನು ನಂಬಿಕೊಂಡು ಕೂಡ ಜೀವನ ಕಟ್ಟಿಕೊಳ್ಳ ಬಹುದು. ಪ್ರಾಮಾ ಣಿಕವಾಗಿ ಅದರತ್ತ ಪ್ರಯತ್ನಿಸಿದರೆ ಹಣ, ಕೀರ್ತಿ ಎರಡೂ ದಕ್ಕುತ್ತವೆ. ತನ್ನ ಮೂಲ ಪರಂಪರೆ, ಜನ್ಮದಾತವಾಗಿ ಬಂದಿರುವ ಪ್ರತಿಭೆಯನ್ನು ಬದಿಗಿಕ್ಕಿ ನಾಲ್ಕು ಕಾಸು ಸಂಪಾದನೆಯನ್ನೇ ಜೀವನ ಎಂದು ಕೊಂಡು ಬದುಕುವ ಅದರ ಮೂಲಕ ಕಲೆಯನ್ನು ನಾಶಪಡಿಸುವ ಮನಸ್ಥಿತಿಯನ್ನು ಇವರು ವಿರೋಽಸುತ್ತಾರೆ. ಮದುವೆ ಆಗು ತ್ತೀರೋ? ಇಲ್ಲ, ಚಿತ್ರಗಿತ್ರ ಬರ‍್ಕೊಂಡು ಇಂಗೆ ಕಾಲ ಕಳೆದುಬಿಡ್ತೀರೋ ಎಂದು ರೇಗಿಸಿದರೆ ನನ್ನ ಕಲೆಗೆ ಸಾಥ್ ಕೊಡೋ ಹುಡುಗಿ ಯಾರಾದರೂ ಅಗಿರಲಿ, ತಂದು ನಿಲ್ಲಿಸಿ, ಹೇಳದೇ ಕೇಳದೇ ತಾಳೀ ಕಟ್ಟಿ ಬಿಡ್ತೀನಿ ಎನ್ನುವ ಇವರು ಸದ್ಯ ಬಾಳಸಂಗಾತಿಯ ಹುಡುಕಾಟದಲ್ಲಿದ್ದಾರೆ.

” ನಗರದ ನಾಜೂಕುತನದಿಂದ ಸದಾ ದೂರ ಉಳಿಯಲು ಬಯಸುವ ಈ ಕಲಾವಿದ ತನ್ನ ನಡೆನುಡಿಯಲ್ಲಿ ಸದಾ ಹಳ್ಳಿ ಹುಡುಗನನ್ನೇ ಆವಾಹಿಸಿಕೊಂಡು ಚಾಮರಾಜನಗರದ ಸೊಗಡಿನ ಭಾಷೆಯನ್ನೇ ಮಾತನಾಡುತ್ತಾ ಸಂತೋಷವಾಗಿದ್ದಾರೆ ”

 

 

ಆಂದೋಲನ ಡೆಸ್ಕ್

Recent Posts

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

55 seconds ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

4 mins ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

9 mins ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

16 mins ago

ಓದುಗರ ಪತ್ರ | ಮತದಾನ ಪದ್ಧತಿಯಲ್ಲೂ ಮಾರ್ಪಾಡಾಗಲಿ

ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ನಾವು ಅಗಾಧ ಸಾಧನೆ ಮಾಡಿದ್ದೇವೆ. ಹಾಗಾಗಿ ಇವತ್ತು ಜಗತ್ತು ಭಾರತದತ್ತ ತಿರುಗಿ…

20 mins ago

ಓದುಗರ ಪತ್ರ | ಎಸ್‌ಐಆರ್ ಗೊಂದಲ ಪರಿಹರಿಸಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಲ್ಲಿ ಸಮರ್ಪಕ ಮಾಹಿತಿ ಇಲ್ಲದ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಕರುಡು…

24 mins ago