Andolana originals

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು

-ಡಾ.ಎಂ.ಲೋಕೇಶ
ಒಮ್ಮೆ ಯೋಚಿಸಿ ನೋಡಿ… ಇಂದು ತೆಗೆದ ನಿಮ್ಮ ಒಂದು ಫೋಟೋ ನಿಮ್ಮನ್ನು ೪೦-೫೦ ವರ್ಷ ಹಿಂದಕ್ಕೆ ಕರೆದೊಯ್ದರೆ ಹೇಗಿರುತ್ತದೆ? ನೀವು ಹಳೆಯ ಕಾಲದ ಉಡುಪು ಧರಿಸಿ, ಪಕ್ಕದಲ್ಲಿ ಸೈಕಲ್ ಅಥವಾ ರೇಡಿಯೋ ಇಟ್ಟುಕೊಂಡು, ೧೯೭೦-೮೦ರ ದಶಕದ ಮನೆಯ ಮುಂದೆ ನಿಂತಿರುವಂತೆ ಕಾಣಿಸಿದರೆ? ಇದು ಈಗ ಕೇವಲ ಕಲ್ಪನೆಯಲ್ಲ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಇಂತಹ ಚಿತ್ರಗಳನ್ನು ಸುಲಭವಾಗಿ ಸೃಷ್ಟಿಸಬಹುದು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ೧೯೭೦-೮೦ರ ದಶಕದ ಶೈಲಿಯಲ್ಲಿ ತಮ್ಮ ಫೋಟೋಗಳನ್ನು ಸೃಷ್ಟಿಸಿಕೊಂಡು ಹಂಚಿಕೊಳ್ಳುವ ಹೊಸ ಟ್ರೆಂಡ್ ಜನರ ಗಮನ ಸೆಳೆಯುತ್ತಿದೆ. ಇಂದಿನ ಜೀವನದ ನಡುವೆ ಹಳೆಯ ಕಾಲದ ಉಡುಪು, ಕೇಶವಿನ್ಯಾಸ, ಮನೆ, ರಸ್ತೆ, ವಾಹನ ಮತ್ತು ಜೀವನಶೈಲಿಯನ್ನು ಚಿತ್ರಗಳಲ್ಲಿ ಮತ್ತೆ ತರುವ ಪ್ರಯತ್ನ ನಡೆಯುತ್ತಿದೆ.

ಹಳೆಯ ಕಾಲದ ಸೊಗಡಿಗೆ ಹೊಸ ಆಕಷಣೆ: ೧೯೭೦-೮೦ರ ದಶಕವನ್ನು ಅನುಭವಿಸಿದವರಿಗೆ ಆ ಕಾಲದ ಬದುಕಿನ ಶೈಲಿ ವಿಶೇಷ. ಸರಳ ಜೀವನ, ಸಾಂಪ್ರದಾಯಿಕ ಉಡುಪು, ರೇಡಿಯೋ, ಕ್ಯಾಸೆಟ್, ಸೈಕಲ್, ಹಳೆಯ ಸಿನಿಮಾಗಳು ಮತ್ತು ಕುಟುಂಬದೊಂದಿಗೆ ಕಳೆಯುತ್ತಿದ್ದ ಸಮಯ- ಇವೆಲ್ಲವೂ ಆ ಕಾಲದ ಬದುಕಿನ ಚಿತ್ರಣವನ್ನು ನೀಡುತ್ತವೆ. ಇಂದಿನ ಯುವಜನತೆಯ ಬಹುಪಾಲು ಮಂದಿ ಆ ಕಾಲವನ್ನು ನೇರವಾಗಿ ನೋಡಿಲ್ಲ. ಆದರೆ ಹಳೆಯ ಸಿನಿಮಾಗಳು, ಹಾಡುಗಳು, ಛಾಯಾಚಿತ್ರಗಳು ಹಾಗೂ ಹಿರಿಯರ ಅನುಭವಗಳ ಮೂಲಕ ಆ ಕಾಲವನ್ನು ಪರಿಚಯಿಸಿಕೊಂಡಿದ್ದಾರೆ. ಈಗ ಅದೇ ಕಾಲಘಟ್ಟವನ್ನು ತಮ್ಮದೇ ಚಿತ್ರದಲ್ಲಿ ಕಲ್ಪಿಸಿಕೊಳ್ಳುವ ಅವಕಾಶವನ್ನು ಎಐ ನೀಡಿದೆ.

ನಾಸ್ಟಾಲ್ಜಿಯಾ- ಹಳೆಯ ಕಾಲದ ಭಾವನೆ:
ಹಿಂದೆ ಕಂಡ ಅಥವಾ ಕೇಳಿಸಿಕೊಂಡಿದ್ದ ಕಾಲವನ್ನು ನೆನಪಿಸಿಕೊಂಡಾಗ ಮೂಡುವ ಭಾವನೆಯನ್ನು ‘ನಾಸ್ಟಾಲ್ಜಿಯಾ’ ಎಂದು ಕರೆಯಬಹುದು. ಇದು ಕೇವಲ ಹಳೆಯ ವಸ್ತುಗಳ ಮೇಲಿನ ಆಸಕ್ತಿಯಲ್ಲ; ಒಂದು ಕಾಲಘಟ್ಟದ ಜೀವನಶೈಲಿ, ವಾತಾವರಣ ಮತ್ತು ಅನುಭವಗಳೊಂದಿಗೆ ಬೆಸೆದುಕೊಂಡಿರುವ ಭಾವನೆಯಾಗಿದೆ. ಇದೇ ಕಾರಣಕ್ಕೆ ಹಳೆಯ ಕಾಲದ ಫ್ಯಾಷನ್, ಸಂಗೀತ, ಮನೆಗಳ ವಿನ್ಯಾಸ ಮತ್ತು ಛಾಯಾಚಿತ್ರಗಳ ಶೈಲಿ ಇಂದಿಗೂ ಜನರನ್ನು ಆಕರ್ಷಿಸುತ್ತವೆ. ಈ ಭಾವನೆಗೆ ಎಐ ಬಳಸಿಕೊಂಡು ಹೊಸ ಡಿಜಿಟಲ್ ರೂಪ ನೀಡಲಾಗುತ್ತಿದೆ. ಹಳೆಯ ಕಾಲವನ್ನು ನೋಡಿರದವರೂ ಅದರ ಸೌಂದರ್ಯ ಮತ್ತು ವಾತಾವರಣವನ್ನು ತಮ್ಮ ಕಲ್ಪನೆಯ ಮೂಲಕ ಅನುಭವಿಸುವಂತಾಗಿದೆ. ಹೀಗಾಗಿ ರೆಟ್ರೋ ಫೋಟೋಗಳ ಜನಪ್ರಿಯತೆಯ ಹಿಂದೆ ತಂತ್ರಜ್ಞಾನದ ಕುತೂಹಲದ ಜೊತೆಗೆ ನಾಸ್ಟಾಲ್ಜಿಯಾದ ಸೆಳೆತವೂ ಇದೆ.

ಎಐ ಬದಲಿಸುತ್ತಿರುವ ಫೋಟೋ ಪ್ರಪಂಚ:
ಹಿಂದೆ ಒಂದು ರೆಟ್ರೋ ಫೋಟೋ ಸೃಷ್ಟಿಸಲು ಹಳೆಯ ಕಾಲದ ಉಡುಪು, ಮೇಕಪ್, ಸೂಕ್ತ ಸ್ಥಳ, ಕ್ಯಾಮೆರಾ ಮತ್ತು ಛಾಯಾಗ್ರಾಹಕರ ಅಗತ್ಯವಿತ್ತು. ಈಗ ಎಐ ಆಧಾರಿತ ಚಿತ್ರ ತಂತ್ರಜ್ಞಾನದಿಂದ ಕೆಲವೇ ಸೂಚನೆಗಳನ್ನು ನೀಡಿ ಇಂತಹ ದೃಶ್ಯವನ್ನು ಸೃಷ್ಟಿಸಬಹುದು. ಬಳಕೆದಾರರು ತಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿ, ಬೇಕಾದ ಕಾಲಘಟ್ಟ, ಉಡುಪು, ಹಿನ್ನೆಲೆ, ಬೆಳಕು ಮತ್ತು ಚಿತ್ರದ ಗುಣಮಟ್ಟವನ್ನು ಸೂಚಿಸಬಹುದು. ಎಐ ಅವುಗಳನ್ನು ಸಂಯೋಜಿಸಿ ಹೊಸ ಚಿತ್ರವನ್ನು ಸೃಷ್ಟಿಸುತ್ತದೆ. ಛಾಯಾಚಿತ್ರ ರಚನೆಯ ಪ್ರಕ್ರಿಯೆ ಸರಳವಾಗಿದ್ದು, ಸಾಮಾನ್ಯ ಬಳಕೆದಾರರೂ ಸೃಜನಾತ್ಮಕ ಪ್ರಯೋಗಗಳನ್ನು ಮಾಡಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರೆಟ್ರೋ ಫೋಟೋಗಳ ಸದ್ದು
ಒಂದು ಕಾಲದಲ್ಲಿ ಹಳೆಯ ಫೋಟೋ ಆಲ್ಬಮ್‌ಗಳಲ್ಲಿದ್ದ ೧೯೭೦-೮೦ರ ದಶಕದ ಸೊಗಡು, ಇದೀಗ ಮೊಬೈಲ್ ಪರದೆಗಳಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಯುವಜನತೆ ಇದನ್ನು ಡಿಜಿಟಲ್ ಸೃಜನಶೀಲತೆಯಾಗಿ ಬಳಸುತ್ತಿದ್ದಾರೆ. ಚಲನಚಿತ್ರರಂಗದ ಬಹತೇಕ ನಟ-ನಟಿಯರೂ ಈ ಟ್ರೆಂಡ್‌ಗೆ ಮಾರುಹೋಗಿದ್ದು, ರೆಟ್ರೋ -ಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಲೆಮಾರುಗಳನ್ನು ಬೆಸೆಯುವ ಡಿಜಿಟಲ್ ಸೇತುವೆ
ರೆಟ್ರೋ ಚಿತ್ರಗಳು ಕುಟುಂಬದ ಹಳೆಯ ಛಾಯಾಚಿತ್ರಗಳನ್ನು ಡಿಜಿಟಲ್ ರೂಪದಲ್ಲಿ ಮರುಪರಿಶೀಲಿಸಲು ಒಂದು ಕಾರಣವಾಗುತ್ತಿವೆ. ಹಳೆಯ ಫೋಟೋಗಳನ್ನು ಸ್ಕ್ಯಾನ್ ಮಾಡಿ ಸಂಗ್ರಹಿಸುವುದು, ಹಾಳಾದ ಚಿತ್ರಗಳನ್ನು ಸುಧಾರಿಸುವುದು ಮತ್ತು ಅವುಗಳಿಗೆ ಸಂಬಂಽಸಿದ ಮಾಹಿತಿಯನ್ನು ದಾಖಲಿಸುವ ಆಸಕ್ತಿಯೂ ಹೆಚ್ಚುತ್ತಿದೆ. ಇದರ ಮೂಲಕ ಕುಟುಂಬದ ಛಾಯಾಚಿತ್ರಗಳು ಕೇವಲ ವೈಯಕ್ತಿಕ ನೆನಪುಗಳಾಗಿರದೆ, ಒಂದು ಕಾಲದ ಉಡುಪು, ವಾಸ್ತುಶೈಲಿ, ಸಾಮಾಜಿಕ ಜೀವನ ಮತ್ತು ಸ್ಥಳೀಯ ಸಂಸ್ಕೃತಿಯ ದೃಶ್ಯ ದಾಖಲೆಗಳಾಗಿಯೂ ಉಳಿಯಬಹುದು.

ಎಐ ರೆಟ್ರೋ ಚಿತ್ರಗಳು ಆಕರ್ಷಕವಾಗಿದ್ದರೂ ಕೆಲವು ವಿಷಯಗಳನ್ನು ಗಮನಿಸಬೇಕು. ಎಐ ಸೃಷ್ಟಿಸಿದ ಚಿತ್ರವು ನಿಜವಾದ ಹಳೆಯ ಛಾಯಾಚಿತ್ರವಾಗಿರುವುದಿಲ್ಲ. ಅದು ತಂತ್ರಜ್ಞಾನದಿಂದ ಸೃಷ್ಟಿಸಿದ ಕಲ್ಪಿತ ಚಿತ್ರವಾಗಿರಬಹುದು. ಆದ್ದರಿಂದ ಅಂತಹ ಚಿತ್ರಗಳನ್ನು ನಿಜವಾದ ಐತಿಹಾಸಿಕ ದಾಖಲೆ ಎಂದು ತಪ್ಪಾಗಿ ಹಂಚಿಕೊಳ್ಳಬಾರದು. ಅದೇ ರೀತಿ, ಬೇರೆಯವರ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಎಐ ಮೂಲಕ ಬದಲಿಸಿ ಹಂಚಿಕೊಳ್ಳುವುದು ಸರಿಯಲ್ಲ. ಗೌಪ್ಯತೆ, ಅನುಮತಿ ಮತ್ತು ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ಬಳಕೆದಾರರು ಜಾಗರೂಕರಾಗಿರಬೇಕು.

ಕೇವಲ ಟ್ರೆಂಡ್ ಅಲ್ಲ:
೧೯೭೦-೮೦ರ ದಶಕದ ರೆಟ್ರೋ ಫೋಟೋಗಳ ಜನಪ್ರಿಯತೆ ತಂತ್ರಜ್ಞಾನವು ಚಿತ್ರರಚನೆಯ ವಿಧಾನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದಕ್ಕೂ ಉದಾಹರಣೆಯಾಗಿದೆ. ಹಿಂದೆ ವಿಶೇಷ ಸಾಧನಗಳು ಮತ್ತು ಪರಿಣಿತರ ಅಗತ್ಯವಿದ್ದ ಕೆಲಸಗಳು ಇಂದು ಸಾಮಾನ್ಯ ಬಳಕೆದಾರರ ಕೈಗೆ ಬಂದಿವೆ. ಕಾಲ ಹಳೆಯದು, ತಂತ್ರಜ್ಞಾನ ಹೊಸದು; ಈ ಎರಡರ ಸಂಯೋಜನೆಯೇ ರೆಟ್ರೋ ಫೋಟೋಗಳ ಹೊಸ ಆಕರ್ಷಣೆಗೆ ಕಾರಣವಾಗಿದೆ.
(ಲೇಖಕರು, ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಗ್ರಂಥಪಾಲಕರು)

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

29 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

44 mins ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

1 hour ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

1 hour ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

1 hour ago

ಓದುಗರ ಪತ್ರ | ಮತದಾನ ಪದ್ಧತಿಯಲ್ಲೂ ಮಾರ್ಪಾಡಾಗಲಿ

ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ನಾವು ಅಗಾಧ ಸಾಧನೆ ಮಾಡಿದ್ದೇವೆ. ಹಾಗಾಗಿ ಇವತ್ತು ಜಗತ್ತು ಭಾರತದತ್ತ ತಿರುಗಿ…

1 hour ago