ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು. ಅವರು ನನ್ನೊಂದಿಗೆ ಭಗವದ್ಗೀತೆಯನ್ನು ಕುರಿತು ಮಾತನಾಡಿದರು. ಅವರು ಸರ್ ಎಲ್ವಿನ್ ಆರ್ನಾಲ್ಡ್‌ರ ಭಗವದ್ಗೀತೆಯ ಅನುವಾದವನ್ನು ಓದುತ್ತಿದ್ದರು. ನನ್ನನ್ನೂ ತಮ್ಮೊಂದಿಗೆ ಭಗವದ್ಗೀತೆಯ ಮೂಲವನ್ನು ವ್ಯಾಸಂಗ ಮಾಡಲು ಅವರು ಆಹ್ವಾನಿಸಿದರು. ನಾನು ಭಗವದ್ಗೀತೆಯನ್ನು ಸಂಸ್ಕ ತ ದಲ್ಲಾಗಲಿ, ಗುಜರಾತಿಯಲ್ಲಾಗಲಿ ಓದಿರಲಿಲ್ಲ. ನನಗೆ ನಾಚಿಕೆಯಾಯಿತು. ನಾನು ಅವರಿಗೆ ಹೇಳಿದೆ. ‘ನಾನು ಭಗವದ್ಗೀತೆಯನ್ನು ಓದಿಲ್ಲ. ನನ್ನ ಸಂಸ್ಕೃತ ಜ್ಞಾನ ಅಷ್ಟೇನೂ ಹೆಚ್ಚು ಇಲ್ಲದಿದ್ದರೂ, ಮೂಲಕ್ಕೂ ಅನುವಾದಕ್ಕೂ ವ್ಯತ್ಯಾಸ ಎಲ್ಲಿದೆ ಎಂಬುದನ್ನು ಹೇಳಬಲ್ಲೆ’. ಅದರಂತೆ ನಾನು ಗೀತೆಯನ್ನು ಅವರ ಜತೆಯಲ್ಲಿ ಓದಲು ಪ್ರಾರಂಭಿಸಿದೆ. ಎರಡನೆಯ ಅಧ್ಯಾಯದಲ್ಲಿರುವ ಧ್ಯಾಯತೋ ವಿಷಯಾನ್ ಪುಂಸಃ ಸಂಗಸೂಪಜಾಯತೇ ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸೃ ತಿವಿಭ್ರಮ: ಸ್ಮ ತಿಭ್ರಂಶಾದ್ಭುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ‘ಮನುಷ್ಯ ವಿಷಯಗಳ ಚಿಂತನೆ ಮಾಡುತ್ತಿದ್ದರೆ ಅವುಗಳಲ್ಲಿ ಅವನಿಗೆ ಆಸಕ್ತಿ ಹುಟ್ಟುತ್ತದೆ. ಆಸಕ್ತಿಯಿಂದ ಕಾಮ, ಕಾಮದಿಂದ ಕ್ರೋಧ ಉತ್ಪನ್ನವಾಗುತ್ತದೆ. (ಕಾಮವುಳ್ಳವನಿಗೆ ಕ್ರೋಧ ಅನಿವಾರ್ಯ. ಏಕೆಂದರೆ, ಕಾಮಕ್ಕೆ ತೃಪ್ತಿಯೆಂಬುದೇ ಇಲ್ಲ. ) ಕ್ರೋಧದಿಂದ ಸಂಮೋಹ ಅಥವಾ ವಿವೇಕರಾಹಿತ್ಯವುಂಟಾಗುತ್ತದೆ. ಸಂಮೋಹದಿಂದ ಸ್ಮತಿಭ್ರಮಣೆಯೂ, ಸ್ಮತಿಭ್ರಮಣೆಯಿಂದ ಬುದ್ಧಿ ನಾಶವೂ ಉಂಟಾಗುತ್ತದೆ.
(ಬುದ್ಧಿ ಎಂದರೆ ಜ್ಞಾನ) ಬುದ್ಧಿ ನಷ್ಟವಾದ ಮೇಲೆ ಮನುಷ್ಯನು ಪೂರ್ತಿ ನಾಶವಾದಂತೆಯೇ. ಈ ಶ್ಲೋಕಗಳು ನನ್ನ ಹೃದಯವನ್ನು ಮುಟ್ಟಿದ್ದವು. ಅವು ಈಗಲೂ ನನ್ನ ಕಿವಿಯಲ್ಲಿ ಧ್ವನಿಸುತ್ತಿವೆ. ಭಗವದ್ಗೀತೆ ಅಮೂಲ್ಯ ಗ್ರಂಥವೆಂದು ನನಗೆ ಆಗ ತೋರಿತು. ಆ ಭಾವನೆ ನನ್ನ ಮನಸ್ಸಿನಲ್ಲಿ ಒಂದೇ ಸಮನೆ ಬೆಳೆಯುತ್ತಲೇ ಬಂದಿದೆ. ಸತ್ಯದ ಜ್ಞಾನ ಸಂಪಾದನೆಗೆ ಆ ಗ್ರಂಥ ಸರ್ವೋತ್ಕ ಷ್ಟ ವಾದುದೆಂದು ನಾನು ಇಂದು ಭಾವಿಸುತ್ತೇನೆ. ನನ್ನ ನಿರಾಸೆಯ ಸಂದರ್ಭಗಳಲ್ಲೆಲ್ಲ ಈ ಗ್ರಂಥ ನನಗೆ ಅಮೂಲ್ಯವಾದ ಸಹಾಯವನ್ನು ಮಾಡಿದೆ.
ಭಗವದ್ಗೀತೆಯ ಎಲ್ಲ ಇಂಗ್ಲಿಷ್ ಅನುವಾದಗಳನ್ನೂ ನಾನು ಓದಿದ್ದೇನೆ. ಸರ್ ಎಡ್ರಿನ್ ಆರ್ನಾಲ್ಡ್‌ರ ಅನುವಾದ ಅತ್ಯುತ್ತಮವಾದುದೆಂದು ನನ್ನ ಅಭಿಪ್ರಾಯ. ಆತ ಮೂಲಗ್ರಂಥದ ಭಾವಗಳನ್ನು ತನ್ನ ಭಾಷಾಂತರದಲ್ಲಿ ಪೂರ್ಣವಾಗಿ ತಂದಿದ್ದಾರೆ. ಅದು ಅನುವಾದದಂತೆ ತೋರುವುದೇ ಇಲ್ಲ. ಆ ಸ್ನೇಹಿತರ ಜತೆಯಲ್ಲಿ ನಾನು ಆಗ ಭಗವದ್ಗೀತೆಯನ್ನು ಓದಿದರೂ, ಆಗ ಅದನ್ನು ನಾನು ಅಧ್ಯಯನ ಮಾಡಿದೆನೆಂದು ಹೇಳಲಾರೆ. ಆದಾದ ಅನೇಕ ವರ್ಷಗಳ ನಂತರವೇ ಅದು ನನಗೆ ನಿತ್ಯದ ಅಧ್ಯಯನ ಗ್ರಂಥವಾದುದು. ಆ ಸಹೋದರರು, ಎಡ್ರಿನ್ ಆರ್ನಾಲ್ಡ್‌ರ ‘ಲೈಟ್ ಆಫ್ ಏಷ್ಯಾ’ (ಬುದ್ಧ ಚರಿತ್ರೆ) ಗ್ರಂಥವನ್ನು ನಾನು ಓದಬೇಕೆಂದು ಸೂಚಿಸಿದರು.
ಅಲ್ಲಿಯವರೆಗೆ ನನಗೆ ಎಡ್ರಿನ್ ಅರ್ನಾಲ್ಡ್‌ರ ‘ಭಗವದ್ಗೀತೆಯ’ ಅನುವಾದಕರೆಂದು ಮಾತ್ರ ಗೊತ್ತಾಗಿದ್ದಿತು. ಭಗವದ್ಗೀತೆಯ ಅನುವಾದಕರೆಂದು ಹೆಚ್ಚು ಉತ್ಸಾಹದಿಂದ ಅದನ್ನು ಓದತೊಡಗಿದೆ. ಓದುವುದಕ್ಕೆ ಪ್ರಾರಂಭಿಸಿದ ಮೇಲೆ ಅದನ್ನು ಬಿಡುವುದಕ್ಕೆ ಮನಸ್ಸು ಬರಲಿಲ್ಲ. ಆ ಮಿತ್ರರು ನನ್ನನ್ನು ಒಂದು ಸಲ ಬ್ಲಾವಾಟ್ಸ್ಕಿ ಲಾಡ್ಜ್‌ಗೆ ಕರೆದುಕೊಂಡು ಹೋದರು. ನನಗೆ ಶ್ರೀಮತಿ ಬ್ಲಾವಾಟ್ಸ್ಕಿ ಮತ್ತು ಶ್ರೀಮತಿ ಅನಿ ಬೆಸೆಂಟರ ಪರಿಚಯವಾಯಿತು. ಬೆಸೆಂಟರು ಆಗತಾನೆ ಥಿಯಾಸಾಫಿಕಲ್ ಸೊಸೈಟಿಗೆ ಸೇರಿದ್ದರು. ಅವರ ಮತಾಂತರವನ್ನು ಕುರಿತು ಪತ್ರಿಕೆಗಳಲ್ಲಿ ಬರುತ್ತಿದ್ದ ಚರ್ಚೆಯನ್ನು ನಾನು ತುಂಬಾ ಉತ್ಸಾಹದಿಂದ ಓದುತ್ತಿದ್ದೆ. ಆ ಮಿತ್ರರು, ನಾನೂ ಥಿಯಾಸಾಫಿಕಲ್ ಸೊಸೈಟಿಗೆ ಸೇರಬೇಕೆಂದು ಉಪದೇಶಿಸಿದರು. ನಾನು ನಮ್ರನಾಗಿ ಅವರ ಸಲಹೆಯನ್ನು ತಿರಸ್ಕರಿಸಿದೆ. ‘ನನಗೆ ನನ್ನ ಧರ್ಮದ ವಿಚಾರವೇ ಏನೇನೂ ತಿಳಿಯದು. ಆದುದರಿಂದ ನಾನು ಯಾವ ಧಾರ್ಮಿಕ ಸಂಸ್ಥೆಗೂ ಸೇರಲು ಇಚ್ಛೆಪಡುವುದಿಲ್ಲ’ ಎಂದು ಹೇಳಿದೆನು. ಆ ಭ್ರಾತೃಗಳ ಸಲಹೆಯಂತೆ ನಾನು, ಬ್ಲಾವಾಟ್ಸ್ಕಿಯವರ ‘ಕೀ ಟು ಥಿಯಾಸಫಿ’ ಎಂಬ ಗ್ರಂಥವನ್ನು ಓದಿದ ಜ್ಞಾಪಕವಿದೆ. ಆ ಪುಸ್ತಕ, ಹಿಂದೂ ಧರ್ಮವನ್ನು ಕುರಿತು ಗ್ರಂಥಗಳನ್ನು ಓದುವ ಆಸೆ ನನ್ನಲ್ಲಿ ಅಂಕುರಿಸಿತು. ಅದನ್ನು ಓದಿ, ಹಿಂದೂ ಧರ್ಮ, ಬರಿ ಮೂಢನಂಬಿಕೆಗಳ ತವರು ಎಂಬುದಾಗಿ, ಕ್ರಿಸ್ತ ಪಾದ್ರಿಗಳು ಪ್ರಚಾರ ಮಾಡಿದ್ದ ಭಾವನೆ ನನ್ನ ಮನಸ್ಸಿನಿಂದ ದೂರವಾಯಿತು. ಅದೇ ಕಾಲದಲ್ಲಿ ನನಗೆ, ಒಂದು ಶಾಕಾಹಾರಿ ಭೋಜನ ಮಂದಿರದಲ್ಲಿ ಮ್ಯಾಂಚೆಸ್ಟರಿನ ಒಬ್ಬ ಉತ್ತಮ ಕ್ರೈಸ್ತನ ಭೇಟಿಯಾಯಿತು. ಆತ, ನನ್ನೊಂದಿಗೆ ಕ್ರೈಸ್ತಮತವನ್ನು ಕುರಿತು ಮಾತನಾಡಿದ. ರಾಜಕೋಟೆಯಲ್ಲಿಯ ನನ್ನ ಅನುಭವಗಳನ್ನು ಆತನಿಗೆ ಹೇಳಿದೆ. ಅದನ್ನು ಕೇಳಿ ಆತನಿಗೆ ದುಃಖವಾಯಿತು. ಆತ ಹೀಗೆ ಹೇಳಿದ. “ನಾನು ಶಾಕಾಹಾರಿ, ಮದ್ಯಪಾನ ಮಾಡುವುದಿಲ್ಲ. ಅನೇಕ ಕ್ರೈಸ್ತರು ಮಾಂಸವನ್ನೂ ತಿನ್ನುತ್ತಾರೆ, ಮದ್ಯವನ್ನೂ ಕುಡಿಯುತ್ತಾರೆ ಎಂಬುದು ನಿಜ. ಆದರೆ ಈ ಎರಡರಲ್ಲಿ ಯಾವುದನ್ನಾದರೂ ತೆಗೆದುಕೊಳ್ಳಬೇಕೆಂದು ನಮ್ಮ ಧರ್ಮಗ್ರಂಥ ಕಟ್ಟಪ್ಪಣೆ ಮಾಡಿಲ್ಲ. ದಯವಿಟ್ಟು ಬೈಬಲ್ ಓದಿ ‘ನಾನು ಆತನ ಸಲಹೆಯನ್ನು ಅಂಗೀಕರಿಸಿದೆ. ಆತನೇ ನನಗೆ ಬೈಬಲಿನ ಒಂದು ಪ್ರತಿ ತಂದುಕೊಟ್ಟ, ಆತನೇ ಬೈಬಲಿನ ಪ್ರತಿಗಳನ್ನು ಮಾರುತ್ತಿದ್ದನೆಂದೂ ಆತನಿಂದ ನಾನು ನಕಾಶೆ ಅನುಕ್ರಮಣಿಕೆ ಮುಂತಾದವುಗಳಿಂದ ಒಡಗೂಡಿದ ಒಂದು ಪ್ರತಿಯನ್ನು ಕೊಂಡುಕೊಂಡನೆಂದೂ ಅಲ್ಪಸ್ವಲ್ಪ ಜ್ಞಾಪಕ. ನಾನು ಅದರ ವ್ಯಾಸಂಗವನ್ನು ಪ್ರಾರಂಭಿಸಿದೆ. ಆದರೆ ಓಲ್ಡ್ ಟೆಸ್ಟ್‌ಮೆಂಟ್ (ಪೂರ್ವಾರ್ಧದ) ಕಥೆಯನ್ನು ಕಡೆಯವರೆಗೆ ಓದುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ. ಜೆನೆಸಿಸ್ (ಸೃಷ್ಟಿ ಕ್ರಮ) ಅನ್ನು ಓದಿದೆ. ಅದರ ಮುಂದಿನ ಅಧ್ಯಾಯಗಳನ್ನು ಓದುವಾಗ ನನಗೆ ತನ್ನೆದೆ ನಿದ್ರೆ ಬರುತ್ತಿತ್ತು. ಆದರೆ ‘ನಾನೂ ಓದಿದ್ದೇನೆ’, ಎಂದು ಹೇಳುವುದಕ್ಕಾಗಿ ನಾನು ಇತರ ಭಾಗಗಳನ್ನು ಅತಿ ಕಷ್ಟದಿಂದಲೂ ನಿರುತ್ಸಾಹದಿಂದಲೂ ಅರ್ಥವನ್ನೇ ಮಾಡಿಕೊಳ್ಳದೆ ಓದಿದೆ. ಸಂಖ್ಯಾಧ್ಯಾಯವೆಂಬುದನ್ನು ಓದಲು ನನಗೆ ಬಹಳ ಬೇಸರಿಕೆಯಾಯಿತು.
ಆದರೆ ನ್ಯೂಟೆಸ್ಟ್‌ಮೆಂಟ್ (ಹೊಸ ಒಡಂಬಡಿಕೆ) ನನ್ನ ಮೇಲೆ ಬೇರೆ ಪರಿಣಾಮವನ್ನುಂಟು ಮಾಡಿತು. ಅದರಲ್ಲಿಯೂ ಸೆರ್ಮನ್ ಆನ್ ದಿ ಮೌಂಟ್ (ಬೆಟ್ಟದ ಮೇಲಿನ ಪ್ರವಚನ) ನೇರವಾಗಿ ನನ್ನ ಹೃದಯವನ್ನೇ ಮುಟ್ಟಿತು. ನಾನು ಅದನ್ನು ಭಗವದ್ಗೀತೆಯ ಶ್ಲೋಕಗಳೊಂದಿಗೆ ಹೋಲಿಸಿದೆ. “ನಾನು ನಿಮಗೆ ಹೇಳುವುದೇನೆಂದರೆ, ಕೆಡಕಿಗೆ ಪ್ರತಿಯಾಗಿ ಕೆಡಕು ಮಾಡಬೇಡಿ, ನಿಮ್ಮ ಬಲಗೆನ್ನೆಗೆ ಯಾರಾದರೂ ಹೊಡೆದರೆ ಎಡಗೆನ್ನೆಯನ್ನೂ ತೋರಿಸಿ. ನಿಮ್ಮ ಅಂಗಿಯನ್ನು ಯಾರಾದರೂ ಕಿತ್ತುಕೊಂಡರೆ, ಅವನಿಗೆ ನಿಮ್ಮ ನಿಲುವಂಗಿಯನ್ನೂ ಕೊಡಿ” ಇವು ನನಗೆ ಅಮಿತವಾದ ಆನಂದವನ್ನುಂಟುಮಾಡಿದುದಲ್ಲದೆ ಶಾಮಲಭಟ್ಟನ “ಒಂದು ಬಟ್ಟಲು ನೀರು ಕೊಟ್ಟವರಿಗೆ ಊಟ ನೀಡು” ಎಂಬ ವಾಕ್ಯವನ್ನು ನೆನಪಿಗೆ ತಂದವು. ನನ್ನ ಎಳೆ ಮನಸ್ಸು ಭಗವದ್ಗೀತೆ, ಬುದ್ಧಚರಿತೆ, ಬೆಟ್ಟದ ಮೇಲಿನ ಪ್ರವಚನ ಇವೆಲ್ಲವುಗಳ ಬೋಧನೆಗಳಲ್ಲಿ ಏಕಭಾವವನ್ನು ಕಾಣಲು ಪ್ರಯತ್ನಿಸಿತು. ತ್ಯಾಗವೇ ಅತ್ಯುತ್ತಮವಾದ ಧರ್ಮವೆಂಬುದು ನನ್ನ ಮನಸ್ಸಿಗೆ ಬಹಳ ಹಿಡಿಸಿತು.
ಈ ವ್ಯಾಸಂಗದಿಂದ, ಇತರ ಧರ್ಮ ಪ್ರವರ್ತಕರ ಕೃತಿಗಳನ್ನು ಓದುವ ನನ್ನ ಆಸೆ ತೀವ್ರವಾಯಿತು. ಒಬ್ಬ ಮಿತ್ರರು ಕಾರ್ಲೆಲನ “ವಿಭೂತಿ ಪುರುಷರು ಮತ್ತು ಅವರ ಪೂಜೆ” (ಹೀರೋಸ್ ಅಂಡ್ ಹೀರೊ ವರ್ಷಿವ್) ಎಂಬ ಗ್ರಂಥವನ್ನು ಓದಬೇಕೆಂದು ಹೇಳಿದರು. ಅದರಲ್ಲಿ ಮೊಹಮ್ಮದ್ ಪೈಗಂಬರರ ವಿಷಯವನ್ನು ಓದಿದೆನು. ಅವರ ಮಹತ್ತ್ವ, ಧೀರತನ, ತಪಸ್ಸು ಇವೆಲ್ಲವುಗಳ ಪರಿಚಯ ನನಗೆ ಆಯಿತು.
ಇದಕ್ಕಿಂತ ಹೆಚ್ಚಾಗಿ ಧರ್ಮದ ವಿಷಯಗಳನ್ನು ತಿಳಿದುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ನನ್ನ ಪರೀಕ್ಷೆಗೆ ನಾನು ಓದಬೇಕಾಗಿದ್ದುದರಿಂದ ಬೇರೆ ವಿಷಯಗಳಿಗೆ ನನಗೆ ಸ್ವಲ್ಪವೂ ಕಾಲವೇ ಸಿಕ್ಕುತ್ತಿರಲಿಲ್ಲ. ಆದರೆ ನಾನು ಇನ್ನೂ ಹೆಚ್ಚು ಧಾರ್ಮಿಕ ಗ್ರಂಥಗಳನ್ನು ಓದಬೇಕು, ಜಗತ್ತಿನ ಎಲ್ಲ ಮುಖ್ಯ ಮತಗಳ ಪರಿಚಯವನ್ನೂ ಮಾಡಿಕೊಳ್ಳಬೇಕು ಎಂಬುದಾಗಿ ದೃಢನಿಶ್ಚಯ ಮಾಡಿಕೊಂಡೆ.
ಇದರ ಜತೆಯಲ್ಲಿ, ನಾಸ್ತಿಕತೆಯ ಪರಿಚಯವೂ ಅಲ್ಪ ಸ್ವಲ್ಪ ಆಗದಿರಲು ಹೇಗೆ ಸಾಧ್ಯ? ಬ್ರಾಡ್ತಾರವರ ಹೆಸರೂ, ಅವರ ನಾಸ್ತಿಕವಾದವೂ ಎಲ್ಲ ಭಾರತೀಯರಿಗೂ ತಿಳಿದ ಅಂಶ. ನಾನು ಈ ವಿಷಯದ ಮೇಲೆ ಕೆಲವು ಪುಸ್ತಕಗಳನ್ನು ಓದಿದೆ. ಈಗ ಅವುಗಳ ಹೆಸರುಗಳು ಜ್ಞಾಪಕವಿಲ್ಲ. ಅದರಿಂದ ನನ್ನ ಮೇಲೆ ಏನೂ ಪರಿಣಾಮವಾಗಲಿಲ್ಲ. ಏಕೆಂದರೆ ನಾನು ಆಗಲೇ ನಾಸ್ತಿಕವಾದದ ಮರಳುಗಾಡನ್ನು ದಾಟಿದ್ದೆ. ಆಗ ಅತ್ಯಂತ ಪ್ರಸಿದ್ಧರಾಗಿದ್ದ ಶ್ರೀಮತಿ ಬೆಸೆಂಟರು ನಾಸ್ತಿಕವಾದದಿಂದ ಆಸ್ತಿಕವಾದಕ್ಕೆ ಪರಿವರ್ತಿತರಾಗಿದ್ದರು. ಆ ಸಂಗತಿಯಿಂದ ಸಹ ನಾಸ್ತಿಕವಾದಕ್ಕೆ ನನ್ನ ಔದಾಸೀನ್ಯ ಇನ್ನೂ ಹೆಚ್ಚಾಯಿತು. “ನಾನು ಥಿಯಾಸಫಿಸ್ಟ್ ಆದುದು ಹೇಗೆ? “, ಎಂದು ಆಕೆ ಬರೆದಿದ್ದ ಪುಸ್ತಕವನ್ನೂ ನಾನು ಓದಿದೆ.(ಪುಟ.72-75)
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…
ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ನಾವು ಅಗಾಧ ಸಾಧನೆ ಮಾಡಿದ್ದೇವೆ. ಹಾಗಾಗಿ ಇವತ್ತು ಜಗತ್ತು ಭಾರತದತ್ತ ತಿರುಗಿ…