ಡಾ.ಮೈಸೂರು ಉಮೇಶ್
ಸೋಬಾನೆ ಪದಗಳು ಗ್ರಾಮೀಣ ಮಹಿಳೆಯರಿಗೆ ಒಲಿದು ಬಂದಿರುವ ಜನಪದ ಗಾಯನ ಪ್ರಕಾರ. ಇದಕ್ಕೆ ಅಪವಾದವೆಂಬಂತೆ ಮಂಡ್ಯ ಜಿಲ್ಲೆಯ ಲಕ್ಷ್ಮೀಸಾಗರದ ಸೋಬಾನೆ ಕೃಷ್ಣೇಗೌಡ ಮತ್ತು ಹೆಗ್ಗಡಹಳ್ಳಿಯ ಸೋಬಾನೆ ಕೃಷ್ಣೇಗೌಡ ಎಂಬ ಒಂದೇ ಹೆಸರಿನ ಪುರುಷರಿಬ್ಬರಿಗೆ ಒಲಿದದ್ದು ಆಶ್ಚರ್ಯ. ಯಥಾವತ್ ಮಹಿಳಾ ಧ್ವನಿಯಲ್ಲೇ ಹಾಡುವ ಈ ಗಾಯಕರು ಮಂಡ್ಯ ಜಿಲ್ಲೆಯ ಜಾನಪದ ಸಿರಿವಂತಿಕೆಯ ವಕ್ತಾರರು. ಲಕ್ಷ್ಮೀಸಾಗರದ ಕೃಷ್ಣೇಗೌಡ್ರು, ಹೆಗ್ಗಡಹಳ್ಳಿ ಕೃಷ್ಣೇಗೌಡ್ರಿಗಿಂತ ಹಿರಿಯರು. ‘ಕಿರಿಯನ ಏಳಿಗೆಯನ್ನು ಸಹಿಸದೆ ಗುರುಗಳೇ ನನ್ನಿಂದ ದೂರವಾದರು. ಈಗ ಅವರು ಭೂಮೀಲಿ ಇಲ್ಲ’ ಎಂದು ಕಡುದುಃ ಖದಿಂದ ನೆನೆಯುತ್ತಾರೆ ಹೆಗ್ಗಡಹಳ್ಳಿ ಕೃಷ್ಣೇಗೌಡ.
‘ಸುಮಾರು ನನಗೆ ಐದೋ ಆರೋ ವರ್ಷ. ನಮ್ಮವ್ವ ಸಂತೇಲಿ ಅಲ್ಲದೆ ಮನೆಮನೆಗೆ ಹೋಗಿ ವೀಳ್ಯದೆಲೆ ಮಾರೋರು. ನಮ್ಮ ನೇಲೂವೆ ವೀಳ್ಯದೆಲೆ ಬೆಳೀತಾಯಿದ್ದೊ. ಮದುವೆ ಮನೇಗೆ ಹೋದ್ರೆ, ಅಲ್ಲೆಲ್ಲ ಆಗ ಸೋಬಾನೆ ಪದಗಳನ್ನು ಹಾಡ್ತಾಯಿದ್ರು. ನಾನು ಸುಮ್ನೆ ಅದನ್ನೆಲ್ಲಾ ಕೇಳಿಸ್ಕತಾ ಕುಂತಿರ್ತಾಯಿದ್ದೆ. ನಮ್ಮ ಮನೆ ಹತ್ರ ಪುಟ್ನಿಂಗಮ್ಮ ಅಂತ ಇದ್ರು. ಸಾಸ್ತ್ರದ ಪದಗಳನ್ನ ತುಂಬಾ ಚೆನ್ನಾಗಿ ಹಾಡ್ತಾಯಿದ್ರು. ಆ ಎಳೇ ವಯಸ್ಸಿಗೇ ನನಗೆ ಆ ಪದ ಗಳೆಲ್ಲಾ ಬಾಯಿಗೆ ಬಂದೊ. ಹೆಂಗಸರು ಹಾಡೋ ಪದ ಅಲ್ವಾ, ಹಂಗೇ ಹಾಡ್ಬೇಕು ಅಂತ ಹೆಣ್ದನಿಲೆ ಹಾಡೋಕೆ ಶುರುಮಾಡ್ದೆ.
ನನ್ ಪದವ ಕೇಳೋ ಜನ, ನಾನ್ ಹಿಂಗೆ ಹಾಡೋದನ್ನೆ ಇಷ್ಟಪಟ್ರು. ಹಂಗೆ ಹಾಡ್ತಾ ಬರ್ತಾಯಿದೀನಿ. ಆರಂಭದ ದಿನಗಳಲ್ಲಿ ನಾನು ಹೆಣ್ದನೀಲಿ ಹಾಡೋದನ್ನ ಕೇಳಿ ನಮ್ಮೂರಲ್ಲೇ ಸುಮಾರ್ ಜನ ಆಡ್ಕಳ್ಳರು. ನಾನು ಅದಕ್ಕೆ ಸೊಪ್ ಹಾಕ್ದೆ, ನನ್ ಪಾಡಿಗೆ ನಾನು ಹಾಡ್ಕಂಡು ಬಂದಿದೀನಿ’.
‘ಹಂಗೇ ನಾನು ಕೊರವಂಜಿ ವೇಷದಲ್ಲಿ ಸೀರೆನೂ ಉಟ್ಕಂಡು ಕುಣಿದಿದ್ದೀನಿ. ನನಗೆ ನಾಚ್ಗೆ ಪಾಚ್ಗೆ ಆಗಲ್ಲ. ಕಲೆಗೆ ಗಂಡು ಹೆಣ್ಣು ಅನ್ನೋ ಭೇದ ಇಲ್ಲ. ಜನರಿಗೆ ರಂಜನೆ ನೀಡೋದಷ್ಟೆ ನಮ್ಮ ಕೆಲಸ. ಊರೂರಿಗೆ ಹೋಗಿ ಹಾಡೋದಷ್ಟೇ ಅಲ್ಲ. ನಮ್ಮೂರಲ್ಲಿ ನನಗೂ ಒಸಿ ಜಮೀನೈತೆ. ಯಾವುದೂ ಪ್ರೋಗ್ರಾಮ್ ಇಲ್ಲಾ ಅಂದಾಗ ಆರಂಭ ಮಾಡ್ತೀನಿ. ಒಂದನ್ನೇ ನೆಚ್ಕಳ್ಳಕ್ಕಾಗಲ್ವಲ್ಲ? ನನ್ನ ಗುರು ಲಕ್ಷೀಸಾಗರದ ಸೋಬಾನೆ ಕೃಷ್ಣೇಗೌಡ್ರಿಂದ ಕೋಲಾಟ ಕಲ್ತಿದ್ನಲ್ಲ, ನಾನೂವೆ ಹದಿನೈದು ಇಪ್ಪತ್ತು ಜನ ಇರೋ ಕೋಲಾಟದ ತಂಡ ಕಟ್ಟಿದ್ದೀನಿ. ಪಟಕುಣಿತ, ಗಾರುಡಿಗೊಂಬೆ, ರಂಗದ ಕುಣಿತ ಇವುನ್ನ ಮೈಸೂರು ದಸರಾ ಅಲ್ದೆ, ಕರ್ನಾಟಕದ ಬೇರೆ ಬೇರೆ ಕಡೆ ಕರ್ಕಂಡು ಹೋಗಿದ್ದೀನಿ.
ಸುಮಾರು ವರ್ಷಗಳ ಹಿಂದೆ ಚೆನ್ನೈನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೀತು. ಅಲ್ಗೂವೆ ನಮ್ ತಂಡ ಕರ್ಕಂಡು ಹೋಗಿದ್ದೆ. ಕನ್ನಡ ಮತ್ತು ಸಂಸ್ಕ ತಿ ಇಲಾಖೆ, ಜಾನಪದ ಲೋಕ, ಜಾನಪದ ಪರಿಷತ್ತುಗಳಲ್ದೆ, ಬೇರೆ ಬೇರೆ ಸಂಘಸಂಸ್ಥೆಗಳು ನನ್ನನ್ನ ಬೆಳೆಸಿದ್ದಾವೆ. ಅವುಗಳ ಋಣ ನನ್ ಮೇಲಿದೆ. ಜನಪದ ಸರಸ್ವತಿ ನನಗೆ ಕೀರ್ತಿ, ಸಂಪತ್ತು ಎಲ್ಲಾ ಕೊಟ್ಟಿದ್ದಾಳೆ.
ಅದನ್ನ ನನಗಷ್ಟೆ ಬಳಸಿಕೊಂಡಿಲ್ಲ. ನನ್ನ ಜೊತೆಲಿರೋ ಕಲಾವಿದರಿಗೆ ಹಂಚಿ ನಾನು ಬದುಕಿದ್ದೀನಿ. ಹಿಂದೆ ಒಂದ್ ಮದ್ವೆಗೆ ಹಾಡೋಕೆ ಹೋದ್ರೆ ನೂರ್ ರೂಪಾಯಿ ಕೊಡೋರು. ಈಗ ಐದ್ರಿಂದ ಹತ್‌ಸಾವಿರ ಕೊಡ್ತಾರೆ. ಸರ್ಕಾರ ಮತ್ತು ಯಾವುದೇ ಸಂಘಸಂಸ್ಥೆಗಳ ಸಹಕಾರವಿಲ್ಲದೆ ಮಂಡ್ಯ ಜಿಲ್ಲೆ ಸೋಬಾನೆ ಉತ್ಸವ ಮಾಡಿದ್ದೇನೆ. ನಮ್ಮೂರಲ್ಲಿ ಎರಡು ಬಯಲು ರಂಗ ಮಂದಿರ ಕಟ್ಸಿದ್ದೀನಿ. ನಮ್ಮೂರಲ್ಲದೆ ಅಕ್ಕಪಕ್ಕದ ಊರಿನ ಸುಮಾರು ಐವತ್ತರಿಂದ ಅರವತ್ತು ಜನ ಜನಪದ ಕಲಾವಿದರಿಗೆ ಮಾಶಾಸನ ಮಾಡಿಸಿದ್ದೇನೆ. ನನ್ನ ಜೊತೆ ಸಣ್ಣದ್ರಿಂದ ಒಬ್ಬ ಹುಡುಗ ಹಾಡ್ತಾ ಬರ್ತಾಯಿದ್ದ. ಇಷ್ಟು ವರ್ಷದಿಂದ ಹಾಡ್ಕಂಡು ನನ್ನ ಜೊತೆಯಿದಾನಲ್ಲಾ ಅಂದ್ಕಂಡು ಒಂದು ಸೈಟ್ ತಕ್ಕೊಟ್ಟು, ಮನೇನು ಕಟ್ಟುಸ್ಕೊಟ್ಟು, ಮದುವೇನೂ ಮಾಡ್ಕೊಟ್ಟೆ. ಅದಾದ್ ಎರಡ್ ತಿಂಗ್ಳಿಗೆ, ನನಗೆ ಸಾಲ ಹೊರ್ಸಿ ಅವನೇ ಬೇರೆ ತಂಡ ಕಟ್ಕಂಡ. ನನಗೇನೂ ಬೇಜಾರಿಲ್ಲ.
ಅವನೂ ಸ್ವತಂತ್ರವಾಗಿ ಜವಾಬ್ದಾರಿಯಿಂದ ಬದುಕೋದು ಕಲಿಯೋಕೆ ಪ್ರಾರಂಭಿಸಿದ್ನಲ್ಲ ಅನ್ನೋದೆ ಸಂತೋಷ. ನನ್ನಸಂಗಡಕಾರರಿಗೆ ಯಾವತ್ತೂ ನಾನು ಮೋಸಮಾಡಿಲ್ಲ.ನಿಯತ್ತಿನಿಂದ ಕಲಾಸೇವೆ ಮಾಡ್ತಾ ಬರ್ತಾಯಿದ್ದೀನಿ’. ‘ಈ ಜನಪದ ಹಾಡು ಕಲೆಗಳು ಮೊದಲಿನ ಥರ ಇಲ್ವಲ್ಲಾ ಅನ್ನೋ ಕೊರಗಿದೆ. ಓದಿದವರೆಲ್ಲಾ ಬೇರೆ ಬೇರೆ ಹಾಡುಗಳನ್ನ ಹಾಡ್ತಾರೆ. ಆದ್ರೆ ಸರ್ಕಾರದಿಂದ ಗುರುಶಿಷ್ಯ ಪರಂಪರೆ ಅಂಥ ಮಾಡ್ದಾಗ ಇಲ್ಲೇ ಸುಂಕಾ ತೊಣ್ಣೂರು, ನಾರಾಯಣ ಪುರ ದಲ್ಲಿದ್ದ ಓದೋ ಮಕ್ಕಳಿಗೆ ಸೋಬಾನೆ ಪದಗಳನ್ನು ಹೇಳಿಕೊಟ್ಟೆ. ಸುಮಾರಾಗಿ ಅವ್ತ್ಯ್ರು ಕಲಿತರು. ಈಗ ಅಲ್ಲಿ ಇಲ್ಲಿ ಹಾಡ್ತಾರೆ. ಇಂಥದನ್ನೆಲ್ಲ ನಿಲ್ಲಿಸಬಾರ್ದು. ನಮಗೆ ಹಿರೀಕರು ಹೇಳ್ಕೊಟ್ರು, ನಾವು ಕಲ್ತೋ. ಹಂಗೆ ಪದ ಗೊತ್ತಿರೋರು ಬೇರೆಯವರಿಗೆ ಹೇಳ್ಕೊಟ್ರೆ, ಈ ಕಲೆ ಉಳಿತದೆ.
ಇಲ್ಲಾ ಅಂದ್ರೆ ಇವೆಲ್ಲಾ ನಮ್ತಲೆಗೆ ಹೊಂಟೋಯ್ತುವೆ’ ಹೀಗೆ ಅಳಿವಿನತ್ತ ಸಾಗುತ್ತಿರುವ ಗ್ರಾಮ್ಯ ಕಲಾಸಂಸ್ಕ ತಿಯ ಬಗೆಗೆ ಕಳವಳ ವ್ಯಕ್ತಪಡಿಸುವ ಸೋಬಾನೆ ಕೃಷ್ಣೇಗೌಡ ಅವರು ಅಪ್ಪಟ ನೆಲದ ಪ್ರತಿಭೆ. ದೂರದರ್ಶನ ಚಂದನ ವಾಹಿನಿಯ ಜನಪದ ಕೋಲಾಟ ಪ್ರಕಾರದಲ್ಲಿ ಬಿ ದರ್ಜೆಯ ಕಲಾವಿದ. ಮೈಸೂರು ಆಕಾಶವಾಣಿಯ ಜನಪದ ಗೀತ ಪ್ರಕಾರದಲ್ಲಿ ಎ ದರ್ಜೆಯ ಕಲಾವಿದರಾಗಿದ್ದಾರೆ. ನಾನೊಬ್ಬ ಹಿರಿಯ ಕಲಾವಿದನೆಂಬ ಹಮ್ಮುಬಿಮ್ಮಿಲ್ಲದೆ ಯುವ ಸಮುದಾಯವನ್ನು ಹುರಿದುಂಬಿಸುತ್ತಾ, ಗ್ರಾಮೀಣ ಕಲೆ ಮತ್ತು ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ನಿಷ್ಠೆಯಿಂದ ಕಾರ್ಯತತ್ಪರರಾಗಿದ್ದಾರೆ.
ಅರವತ್ತಾದರೂ ಅಳಿಯದ ಉತ್ಸಾಹ ಇವರದು. ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿ ಪ್ರಶಸ್ತಿ, ಲೋಕ ಜಾನಪದ ಪ್ರಶಸ್ತಿಗಳಲ್ಲದೆ ಹಲವು ಸಂಘಸಂಸ್ಥೆಗಳಿಂದ ಹತ್ತಾರು ನಗದು ಪುರಸ್ಕಾರಗಳು ಇವರ ಜಾನಪದ ಸೇವೆಗೆ ಲಭಿಸಿವೆ.
” ನಾನೊಬ್ಬ ಹಿರಿಯ ಕಲಾವಿದನೆಂಬ ಹಮ್ಮುಬಿಮ್ಮಿಲ್ಲದೆ ಯುವ ಸಮುದಾಯವನ್ನು ಹುರಿದುಂಬಿಸುತ್ತಾ, ಗ್ರಾಮೀಣ ಕಲೆ ಮತ್ತು ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ನಿಷ್ಠೆಯಿಂದ ಕಾರ್ಯತತ್ಪರರಾಗಿದ್ದಾರೆ ಹೆಗ್ಗಡಹಳ್ಳಿಯ ಸೋಬಾನೆ ಕೃಷ್ಣೇಗೌಡರು”
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…
ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ: ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…
ಸೋನಿಯಾ ಎಮ್.ವಿ., ಉಪನ್ಯಾಸಕಿ, ಟೆರಿಷಿಯನ್ ಕಾಲೇಜ್ ಎಮ್. ಎನ್. ಜೋಯಿಸ್ ಮತ್ತು ಸುಬ್ಬಮ್ಮ ಜೋಯಿಸ್ ಮೈಸೂರಿನ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ…
ಪರಮಶಿವ ನಡುಬೆಟ್ಟ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು…
ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ನಾನು ಇಂಗ್ಲೆಂಡಿಗೆ ಹೋದ ಉದ್ದೇಶವನ್ನು ಬ್ಯಾರಿಸ್ಟರ್ ಆಗುವುದನ್ನು, ಕುರಿತು ನಾನು…