ಹಾಡು ಪಾಡು

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ

ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ ನಿರ್ವಹಿಸಿದವರು. ತಂದೆ ಬಿ.ಹುಸೇನ್ ಬೇಗ್ ಕೂಡ ಮಹಾರಾಜರ ಸೇನೆಯಲ್ಲಿ ದುಡಿದವರು. ದೇಶ ಭಕ್ತಿ, ಹುಟ್ಟಿದ ಮಣ್ಣಿನ ಪ್ರೀತಿ ರಕ್ತಗತವಾಗಿ ಬಂದುದರಿಂದಲೋ ಏನೋ ಹೈದರ್ ಬೇಗ್ ತಮ್ಮ ೧೮ನೇ ವಯಸ್ಸಿಗೆ ಸೈನ್ಯವನ್ನು ಸೇರಿದವರು. ೧೯೯೯ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಹೈದರ್ ಬೇಗ್ ಅವರಿಗೆ ಯುದ್ಧದ ನೆನಪು ಕೇಳಿದರೆ ನನ್ನೆದುರು ‘ಹೆತ್ತ ಅಮ್ಮ ಹಾಗೂ ಹೊತ್ತ ಅಮ್ಮ’ನ ಆಯ್ಕೆ ಇತ್ತು ಎನ್ನುತ್ತಾರೆ.

೨೮ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಹೈದರ್ ಬೇಗ್ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದಾಗ ೩೩ರ ಯುವಕ. ಕಾರ್ಗಿಲ್ ಯುದ್ಧ ಘೋಷಣೆಗೂ ಮೊದಲು ವಾರ್ಷಿಕ ರಜೆಯ ನಿಮಿತ್ತ ಊರಿಗೆ ಬಂದಿದ್ದಾಗ ತಾಯಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಕುಟುಂಬ ಆರ್ಥಿಕವಾಗಿ ಸಬಲರಾಗಿರದಿದ್ದ ಹೈದರ್ ಬೇಗ್ ಅವರ ಮನೆಯ ಜವಾಬ್ದಾರಿ ಹೊತ್ತಿದ್ದವರು ಅವರ ಅಣ್ಣನಾದರೂ, ದೇಶ ಸೇವೆಯೊಡನೆ ಸಂಸಾರದ ಜವಾಬ್ದಾರಿಗೂ ಹೆಗಲು ಕೊಟ್ಟಿದ್ದ ಹೈದರ್ ಅವರಿಗೆ ಎರಡನ್ನೂ ಸರಿತೂಗಿಸುವ ಅನಿವಾರ್ಯತೆ ಬಹಳಷ್ಟಿತ್ತು.

ಮೇ ತಿಂಗಳಲ್ಲಿ ಕಾರ್ಗಿಲ್ ಯುದ್ಧದ ಕರೆ ಬಂದಾಗ ಅಸೌಖ್ಯದಲ್ಲಿದ್ದ ಅಮ್ಮನನ್ನು ಬಿಟ್ಟು ಉನ್ನತಾಽಕಾರಿಗಳ ಆದೇಶದಂತೆ ಯುದ್ಧ ಸನ್ನದ್ಧರಾಗಿ ಹೊರಟವರು ತಲುಪಿದ್ದು ಶರಾಜ್‌ನ ಮಿಸೈಲ್ ಲಾಂಜ್! ಉಸಿರಾಡುವುದಕ್ಕೂ ಕಷ್ಟ ಎನಿಸುವ, ತೀವ್ರ ಚಳಿಯ ಹಿಮಾವೃತ ಪರ್ವತ ಏರಿ ಕಾರ್ಯ ಪ್ರವೃತ್ತರಾದರೂ ಬೆಚ್ಚಗಿರಿಸಿದ್ದು ಅಮ್ಮನೂರಿನ ನೆನಪು! ೧೯೯೯ರ ಮೇ ೨೮ “ಆ ದಿನ ನಾನು ಕಾಶ್ಮೀರದ ದ್ರಾಸ್‌ನ ಟೈಗರ್ ವ್ಯಾಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಕರ್ನಲ್ ರಂಜಿತ್ ಸಿಂಗ್ ಅವರಿಂದ ಒಂದು ವಯರ್  ಲೆಸ್ ಕಾಲ್ ಬಂತು. ‘ಹೈದರ್ ನೀನು ಚೆನ್ನಾಗಿ ಕೆಲ್ಸ ಮಾಡುತ್ತಿದ್ದಿ. ಮುಂದೆಯೂ ಮಾಡುವೆ ಎನ್ನುವ ವಿಶ್ವಾಸವಿದೆ. ಆದರೆ ಈ ಕ್ಷಣಕ್ಕೆ ನೀನು ನಿನ್ನ ಹೃದಯವನ್ನು ಗಟ್ಟಿ ಮಾಡ್ಕೋ. ನಿನ್ನಣ್ಣ ಮಲ್ಲಿಕ್ ಬೇಗ್ ಅವರು ನಿನ್ನ ತಾಯಿ ತೀರಿಕೊಂಡಿರುವ ಸುದ್ದಿ ಕಳುಹಿಸಿದ್ದಾರೆ. ದುಃಖಪಡಬೇಡ, ಮನೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ’ ಹೀಗೆಂದಾಗ ಆ ಕ್ಷಣಕ್ಕೆ ಬಹಳ ನೋವಾಯಿತು, ಅತ್ತೆ. ಮರುಕ್ಷಣವೇ ಕರ್ತವ್ಯ ಜಾಗೃತವಾಯಿತು. ಭಾರತ ಮಾತೆಯ ರಕ್ಷಣೆ ಹೆತ್ತಮ್ಮನಷ್ಟೇ ಮುಖ್ಯ ಎಂದುಕೊಂಡು ಯುದ್ಧ ಸನ್ನದ್ಧನಾದೆ. ಹತ್ತು ದಿನಗಳ ನಂತರ ಊರಿಗೆ ಬರುವ ವ್ಯವಸ್ಥೆ ಮಾಡಿದರು. ಆದರೆ ನಾನು ಊರಿಗೆ ಬರುವಷ್ಟರಲ್ಲಿ ಅಂತ್ಯಸಂಸ್ಕಾರ ವಿಧಿ ಮುಗಿದಿತ್ತು. ಖಬರ್ ಸ್ತಾನಕ್ಕೆ ಹೋಗಿ ನಮಸ್ಕರಿಸಿ ಬಂದೆ” ಎನ್ನುವ ಹೈದರ್ ಬೇಗ್, “ಈ ಮನೆಯನ್ನು ಉಳಿಸಿಕೋ, ಬಿಟ್ಟು ಹೋಗಬೇಡ” ಎಂದು ಸೇನೆಗೆ ತೆರಳುವ ವೇಳೆ ಅಮ್ಮನಾಡಿದ ಕೊನೆಯ ಮಾತು ನೆನಪಿಸಿಕೊಂಡು ಭಾವುಕರಾಗುತ್ತಾರೆ.

ಶ್ರೀಲಂಕಾದಲ್ಲಿ ಹೈದರ್ ಬೇಗ್ ಅವರ ವೃತ್ತಿಯ ಮೊದಲ ದಿನಗಳು! ಹದಿನೆಂಟರ ಹರಯದಲ್ಲಿ ತಿರುವನಂತಪುರದಲ್ಲಿ ಮೊದಲ ಸಲ ಸೇನಾ ಕರ್ತವ್ಯಕ್ಕೆ ಹಾಜರಾದ ಹೈದರ್ ತದನಂತರ ೧೯೮೭ರಿಂದ ೧೯೯೦ರವರೆಗೆ ಶ್ರೀಲಂಕಾದಲ್ಲಿ ಆಂತರಿಕ ಸಂಘರ್ಷ ಹೆಚ್ಚಾದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತ ಸರ್ಕಾರದ ಐ.ಪಿ.ಕೆ.ಎಫ್. (ಭಾರತೀಯ ಶಾಂತಿ ಪಾಲನಾ ಪಡೆ) ಸಿಬ್ಬಂದಿಯಾಗಿ ಶ್ರೀಲಂಕಾಕ್ಕೆ ಹೋಗುತ್ತಾರೆ. ಅದು ಎಲ್.ಟಿ.ಟಿ.ಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಮ್) ಸಕ್ರಿಯರಾಗಿದ್ದ ಸಮಯ. “ಅಂದು ಡಿಸ್‌ಮೌಂಟ್ ಜೀಪನ್ನೇರಿ ಒಬ್ಬ ಕ್ಯಾಪ್ಟನ್, ಒಬ್ಬ ಮೇಜರ್, ಒಬ್ಬ ಸುಬೇದಾರ್ ಮತ್ತು ಒಬ್ಬ ಸಿಪಾಯಿ ಗಸ್ತು ತಿರುಗುತ್ತಿದ್ದಾಗ ಜೀಪ್ ಮೇಲೆ ಬಾಂಬ್ ದಾಳಿ ಆಯಿತು. ನಮ್ಮ ಪುಣ್ಯಕ್ಕೆ ಜೀಪ್ ಮುಂಭಾಗಕ್ಕೆ ಹೆಚ್ಚು ಹಾನಿಯಾದ್ದರಿಂದ ಹಿಂಭಾಗದಲ್ಲಿದ್ದ ನಾವು ಬಚಾವ್ ಆದೆವು. ಆದರೆ ನನ್ನ ಸ್ಥಿತಿ ಮಾತ್ರ ಸ್ವಲ್ಪ ಗಂಭೀರವಾಯಿತು. ಪರಿಸ್ಥಿತಿ ಮನಗಂಡು ನನ್ನನ್ನು ಚೆನ್ನೈ ಮಿಲಿಟ್ರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಚಿಕಿತ್ಸೆ ಪಡೆದು ಒಂದು ತಿಂಗಳ ನಂತರ ಮತ್ತೆ ಶ್ರೀಲಂಕಾಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾದೆ” ಎನ್ನುವ ಹೈದರ್ ಬೇಗ್ ಅವರ ಯುದ್ಧಭೂಮಿಯ ಸ್ವಾನುಭವ ಪ್ರತೀ ದೇಶಭಕ್ತನಿಗೂ ರೋಮಾಂಚನಕಾರಿ!

ಕಾರ್ಗಿಲ್ ಕದನದ ವೀರ ಸೇನಾನಿ ಹೈದರ್ ಬೇಗ್ !:  “ನಮ್ಮ ತುಕಡಿಗಳು ಲೇಹ್ ಲಡಾಖ್‌ನಲ್ಲಿತ್ತು. ಅಲ್ಲಿಂದ ನಮ್ಮನ್ನುದ್ರಾಸ್ ಟೈಗರ್ ವ್ಯಾಲಿಗೆ ಕಳುಹಿಸಿದ್ದರು. ಅಲ್ಲಿ ಮೈನಸ್ ಮುವ್ವತ್ತೈದು ಡಿಗ್ರಿಯ ಕೊರೆಯುವ ಚಳಿ. ಸೇನೆಯೆಂಬುದು ಜಾತಿ, ಮತ, ಧರ್ಮ ಇದ್ಯಾವುದೂ ಇಲ್ಲದ ಒಂದು ನಿಷ್ಕಲ್ಮಶ ಪ್ರಪಂಚ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಆದರೆ ನೋವಿನ ಸಂಗತಿಯೆಂದರೆ ನಮ್ಮ ಸಹಯೋಧರೇ ಆತ್ಮೀಯ ಗೆಳೆಯರಾಗಿದ್ದರೂ ಯುದ್ಧ ಯಾರ ಬದುಕನ್ನು ಯಾವಾಗ ಕೊನೆಗೊಳಿಸುತ್ತದೆಯೆಂದು ಹೇಳಲಾಗದು. ರಾಜೇಂದರ್ ಎಂಬ ನನ್ನೊಬ್ಬ ಒಳ್ಳೆಯ ಮಿತ್ರನನ್ನು ಈ ಕಾರ್ಗಿಲ್ ಯುದ್ಧದಲ್ಲಿ ಕಳೆದುಕೊಂಡೆ. ಯುದ್ಧವೆಂದ ಮೇಲೆ ಇಂತಹ ಸಾವು ನೋವು ನಿರೀಕ್ಷಿತವಾಗಿದ್ದರೂ ಜೊತೆಯಲ್ಲೇ ಇದ್ದವರ ಶವವನ್ನು ಕಂಡಾಗ ಕರುಳು ಹಿಂಡಿದಂತಾದರೂ, ‘ಇದು ದೇಶಕ್ಕಾಗಿ ಅರ್ಪಣೆ’ ಎಂದು ಪ್ರತಿಯೊಬ್ಬ ಸೇನಾನಿಯ ಅಂತರಂಗ ಎಚ್ಚರಿಸುತ್ತದೆ” ಹೈದರ್ ಬೇಗ್ ಹೇಳಿದ್ದು ಸರಳವಾಗಿ ಆದರೂ ಸಂಬಂಧಗಳನ್ನು ಒರೆಗೆ ಹಚ್ಚುವ ಸೈನ್ಯ “ಅವರು ಮಿಲಿಟ್ರಿಯಲ್ಲಿದ್ದಾರೆ” ಎಂದು ದೂರ ಕುಳಿತು ಹೇಳುವಷ್ಟು ಸುಲಭದ ಮಾತಲ್ಲ.

ಈಗ ಹೇಗಿದೆ ನಿವೃತ್ತ ಸೈನಿಕ ಹೈದರ್ ಬೇಗ್ ಜೀವನ?:  “ಇಷ್ಟು ವರ್ಷಗಳ ನಂತರ ವೃತ್ತಿ ಜೀವನವನ್ನು ಮತ್ತೆ ಮೆಲುಕು ಹಾಕುವುದಾದರೆ, ತಾಯಿಯ ಕೊನೆಯ ಕ್ಷಣಗಳಲ್ಲಿ ಅವರ ಜೊತೆ ಇರಬೇಕಿತ್ತು ಎಂದು ಈಗ ಅನ್ನಿಸುತ್ತದೆಯೇ?” ಎಂದು ಕೇಳಿದರೆ, ಹೈದರ್ ಬೇಗ್ ಒಳಗಿರುವ ಜಾಗೃತ ಸೇನಾನಿ ಇಲ್ಲವೆನ್ನುತ್ತಾರೆ. “ಇವತ್ತು ನಿಂತು ನೋಡಿದರೂ ನಾನಂದು ನಡೆದುಕೊಂಡ ರೀತಿ ಸರಿಯಾಗಿಯೇ ಇದೆ. ದೇಶವನ್ನು, ಈ ಮಣ್ಣನ್ನು ಕಬಳಿಸಲು ಬಂದ ಶತ್ರುಗಳನ್ನು ಹಿಮ್ಮೆಟ್ಟಿಸುವುದು ಪ್ರತಿಯೊಬ್ಬ ದೇಶಭಕ್ತನ ಕರ್ತವ್ಯ, ಅದಕ್ಕೆ ಸೈನ್ಯಕ್ಕೇ ಸೇರಬೇಕೆಂದೇನೂ ಇಲ್ಲ. ಯಾವುದೇ ಜಾಗದಲ್ಲಿದ್ದರೂ ಮಣ್ಣು, ನೆಲ ನಮ್ಮದು, ನಮ್ಮ ತಾಯಿ ಭಾರತಮಾತೆ. ಸೈನ್ಯಕ್ಕೆ ಬಡವರ ಮಕ್ಕಳು ಮಾತ್ರ ಸೇರಬೇಕು ಅಂತಿಲ್ಲ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನೊಳಗೂ ದೇಶಭಕ್ತಿ ಆರದ ಕಾವು” ಎನ್ನುವ ಹೈದರ್ ಬೇಗ್ ಅವರಮ್ಮನ ಕೊನೆಯಾಸೆಯಂತೆ ಮನೆಯನ್ನು ಉಳಿಸಿಕೊಂಡಿದ್ದಾರೆ. ನಿವೃತ್ತಿ ನಂತರದ ಪಿಂಚಣಿ ಹಣದಲ್ಲಿ ಸ್ವಂತ ಸೂರಿನೊಳಗೆ ಬದುಕು ಸಾಗಿಸುತ್ತಿರುವ ಬೇಗ್ ಖಾಸಗಿ ಕಂಪೆನಿಯೊಂದರಲ್ಲಿ ಭದ್ರತಾ ಅಧಿಕಾರಿಯಾಗಿಯೂ ದುಡಿಯುತ್ತಿದ್ದಾರೆ. ಬದುಕು ಹೀಗೆಯೇ… ನಿಂತ ನೀರಲ್ಲ. ಹರಿವಿನೊಡನೆ ಸಾಗುವುದು ನಿತ್ಯ ನಿರಂತರವಾದರೂ ಕಟ್ಟಿಕೊಳ್ಳುವ ನೆನಪಿನ ಚೀಲ ಬಲು ದುಬಾರಿ. ಅಕ್ಷಯ ಜೋಳಿಗೆಯೊಳಗೆ ಆಗಾಗ್ಗೆ ಇಣುಕಿ ನೋಡಿದರೆ “ನೆನಪುಗಳೆಲ್ಲವೂ ಸೈನಿಕನಂತೆ” ಎಂಬ ಹೈದರ್ ಬೇಗ್ ಅವರ ಮಾತು ಸತ್ಯವೆನಿಸುತ್ತದೆ. ಕಾಲದೊಡನೆ, ಸಮಯದೊಡನೆ, ಮನಸ್ಸುಗಳೊಡನೆ, ಪರಿಸ್ಥಿತಿಗಳೊಡನೆ ಪ್ರತಿದಿನ ಹೋರಾಟ ಇದ್ದೇ ಇರುವಾಗ ಯುದ್ಧವೆಂಬುದು ಮರೆಯಾಗುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಹೈದರ್ ಬೇಗ್‌ನಂತಹ ವೀರ ಯೋಧರ ತ್ಯಾಗ, ಸಹನೆಯೂ ಮರೆಯಲಾಗದ, ಮರೆಯಬಾರದ ಜೀವನ ಪಾಠ!

“ತಾಯಿ ಮತ್ತು ತಾಯ್ನೆಲ ಎರಡರಲ್ಲಿ ಯಾವುದು ಮೊದಲು?” ಎಂದು ಕೇಳಿದರೆ “ಮೊದಲ ಆಯ್ಕೆ ನನ್ನ ಭಾರತ ಮಾತೆ” ಎಂದು ಹೇಳುತ್ತಾರೆ ಮೈಸೂರಿನ ಲಷ್ಕರ್ ಮೊಹಲ್ಲಾ ಎರೆಕಟ್ಟೆ ಬೀದಿಯ ಈ ಕಾರ್ಗಿಲ್ ವೀರ”

 

 

ಆಂದೋಲನ ಡೆಸ್ಕ್

Recent Posts

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

4 mins ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

7 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

7 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

7 hours ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

7 hours ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

7 hours ago