ಹಾಡು ಪಾಡು

ಎಂಬತ್ತರ ದಶಕದ ಮೈಸೂರಿನ ಜೆನ್ ಝೀಗಳು

ಎಸ್.ಗಂಗಾಧರಯ್ಯ

ಕಾಲೇಜು ಹಾಗೂ ಯೂನಿ ವರ್ಸಿಟಿಗಳೇ ಚಳವಳಿಗಳ ತಾಲೀಮು ರಂಗವಾಗಿದ್ದ ಕಾಲವೊಂದಿತ್ತು. ಮೇಷ್ಟ್ರುಗಳೂ ವಿದ್ಯಾರ್ಥಿಗಳನ್ನು ಚಳವಳಿಗಳಿಗೆ ಪ್ರೇರೇಪಿಸುತ್ತಿದ್ದ ಹಾಗೂ ಖುದ್ದು ಕೆಲ ಮೇಷ್ಟ್ರುಗಳು ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಕಾಲ ಅದಾಗಿತ್ತು. ಅದು ಕೇವಲ ಕುಡುಮಿಗಳಾಗಿರದೆ ಸುತ್ತಲ ಸಾಮಾಜಿಕ ಬದುಕಿನತ್ತಲೂ ಕಣ್ಣಾಯಿಸುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿತ್ತು. ನಮ್ಮಂಥ ಹಳ್ಳಿಗಾಡಿನಿಂದ ಬಂದಿದ್ದ ಕೆಲವರಿಗಂತೂ ಪಠ್ಯಗಳಿಗಿಂತ ಚಳವಳಿಗಳ ಜತೆಗಿನ ಉಸಿರಾಟವೇ ಖುಷಿಯ ಸಂಗತಿಯಾಗಿತ್ತು. ಭಿನ್ನ ಸೈದ್ಧಾಂತಿಕ ನೆಲೆಗಳು ಜೀವಂತವಾಗಿದ್ದರೂ ಅವುಗಳೆಲ್ಲಾ ಜೀವಪರವಾಗಿದ್ದವು. ರೈತ, ದಲಿತ ಹಾಗೂ ಕಮ್ಯೂನಿಸ್ಟ್ ಚಳವಳಿಗಳು ಅವುಗಳಿಗೆ ಬಲ ತುಂಬುತ್ತಿದ್ದವು. ನಾನು ಹಾಗೂ ನನ್ನ ವಾರಗೆಯವರು ಮೈಸೂರಿನಲ್ಲಿ ಓದುತ್ತಿದ್ದ ಕಾಲದಲ್ಲಿ ಮಹಾರಾಜ ಕಾಲೇಜು ಹಾಗೂ ಮಾನಸಗಂ ಗೋತ್ರಿ ಇಂಥ ಚಳವಳಿಗಳ ವೇದಿಕೆಗಳಾಗಿದ್ದವು. ಜೊತೆಗೆ ಅಲ್ಲಿ ಚಳವಳಿಗಳಿಗೆ ಬೇಕಾದ ವಾತಾವರಣವೊಂದು ಸದಾ ತುದಿಗಾಲಲ್ಲಿ ನಿಂತಿರುತ್ತಿತ್ತು. ಕೆ.ರಾಮದಾಸ್, ಡಾ.ರಾಮಲಿಂಗಂ ಹಾಗೂ ಪೋಲಂಕಿ ರಾಮಮೂರ್ತಿ ಥರದ ಮೇಷ್ಟ್ರುಗಳು ಇಲ್ಲಿದ್ದರು. ರೈತ ಹಾಗೂ ದಲಿತ ಚಳವಳಿಗಳು ಬೆಂಕಿಯುಂಡೆ ಉಗುಳುತ್ತಿದ್ದವು. ಹತ್ತಿರಕ್ಕೆ ಸುಳಿದವರೊಳಗೆ ಚಳವಳಿಯ ಕಿಡಿಯನ್ನು ಹಚ್ಚುತ್ತಿದ್ದವು.

೧೯೮೫ರಲ್ಲಿ ಸರ್ಕಾರ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲು ನಿರ್ಧರಿಸಿತ್ತು. ಶಿವರಾಮ ಕಾರಂತರದ್ದು ಅಧ್ಯಕ್ಷತೆ. ಕುವೆಂಪು ಅವರದ್ದು ಉದ್ಘಾಟನೆ. ಆಗ ಇಡೀ ನಾಡು ಬರಗಾಲದ ಬೇಗೆಯಲ್ಲಿ ಬೇಯುತ್ತಿತ್ತು. ಆದರೂ ಸಮ್ಮೇಳನಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲು ಹೊರಟಿತ್ತು. ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸುವ ಬಗ್ಗೆ ಪ್ರಗತಿಪರರ ಪ್ರತಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಕಾರಂತರು ತುಂಬಾ ಹಗುರವಾಗಿ ಮಾತನಾಡಿದ್ದರು. ಆ ಕಾರಣಕ್ಕೇ “ವಿಶ್ವ ಕನ್ನಡ ಸಮ್ಮೇಳನ ವಿರೋಧಿ ಒಕ್ಕೂಟ”ವೊಂದು ಮೈಸೂರಿನಲ್ಲಿ ಹುಟ್ಟಿ ಕೊಂಡಿತ್ತು. ಇದರಲ್ಲಿ ಮೇಷ್ಟ್ರುಗಳು, ಸಾಹಿತಿಗಳು, ಚಿಂತಕರುಗಳು ನೇತೃತ್ವ ವಹಿಸಿದ್ದರೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದರು. ಸಮ್ಮೇಳನದ ವಿರುದ್ಧವಾಗಿ ಹಾಗೂ ಸಮ್ಮೇಳನವನ್ನು ನಿಲ್ಲಿಸುವಂತೆ ಮೈಸೂರಿನಾದ್ಯಂತ ಪ್ರತಿಭಟನೆಗಳಾದವು. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಸರ್ಕಾರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮೊಂಡಾಟಕ್ಕಿಳಿದಿತ್ತು. ಅಂತೆಯೇ ಪ್ರತಿಭಟನೆ ಯನ್ನು ಹತ್ತಿಕ್ಕುವ ಕೆಲಸಕ್ಕಿಳಿದಿತ್ತು. ಹಾಗಾಗಿ ಸಮ್ಮೇಳನಕ್ಕೆ ಒಂದೆರಡು ದಿನ ಇದೆ ಎನ್ನುತ್ತಿರುವಾಗಲೇ ಪ್ರತಿಭಟನಾ ಕಾರರನ್ನು ಹುಡುಕಿ ಹುಡುಕಿ ಜೈಲಿಗಟ್ಟಿತ್ತು.

ಸಾಲದ್ದಕ್ಕೆ ಹಲವಾರು ಕೇಸುಗಳನ್ನು ಹಾಕುವ ಮೂಲಕ ಸಮ್ಮೇಳನ ಮುಗಿದು ಎರಡು ದಿನಗಳಾದರೂ ಬಿಡುಗಡೆಯಾಗದಂತೆನೋಡಿಕೊಂಡಿತ್ತು. ಆಗ ಬಿ.ರಾಚಯ್ಯ ಗೃಹ ಮಂತ್ರಿಯಾಗಿ ದ್ದರು. ಕೆ. ರಾಮದಾಸ್, ರಾಮಲಿಂಗಂ, ಸಾಕೇತ್ ರಾಜನ್, ಅಬ್ದುಲ್ ರಶೀದ್, ಕೇಶವ ಪ್ರಸಾದ್, ಬಂಜಗೆರೆ ಜಯ ಪ್ರಕಾಶ್ ಹಾಗೂ ನಾನೂ ಸೇರಿದಂತೆ ಹಲವರು ಸುಮಾರು ಐದು ದಿನಗಳ ಕಾಲ ಮೈಸೂರಿನ ಜೈಲಿನಲ್ಲಿ ಕಳೆದಿದ್ದೆವು. ಹಿಂಗೆ ಐದು ದಿನಗಳ ಕಾಲ ಜೈಲಿನೊಳಗಿದ್ದ ಸಂದರ್ಭದಲ್ಲಿ ಜೈಲಿನ ತುಂಬಾ ಅಡ್ಡಾಡುವ ಹೊತ್ತಲ್ಲಿ ನಾವು ಕೆಲವರು ಸಿಂಗಲ್ ಸೆಲ್‌ನಲ್ಲಿದ್ದ ಸರಣಿ ಹಂತಕ ಕೈದಿಯೊಬ್ಬನನ್ನು ಭೇಟಿ ಮಾಡಿದ್ದೆವು. ಅವನು ನಮ್ಮನ್ನು ನೋಡುತ್ತಲೇ ಜೈಲಿಗೆ ಬಂದಿರುವ ಕಾರಣ ಕೇಳಿದ್ದ. ನಾವು ವಿಶ್ವ ಕನ್ನಡಸಮ್ಮೇಳವನ್ನು ವಿರೋಧಿಸಿ ಅಂತ ಹೇಳುತ್ತಲೇ, “ಹಿಂಗೆ ಬರೀ ಪ್ರತಿಭಟನೆ ಮಾಡೋದ್ರಿಂದ ಏನು ಬೇಳೆಕಾಳು ಆಗುತ್ತೆ?” ಅಂತ ಉಡಾಫೆ ಮಾಡಿ “ಉಡಾಯಿಸ್ಬೇಕು ಸಿಕ್ಕಿ ದವ್ರನ್ನೆಲ್ಲಾ” ಅಂತ ಅಂದಿದ್ದ. ಜೈಲಿನಲ್ಲಿರುವಷ್ಟೂ ದಿನ ನಮಗೆ ಒಂದೊಂದು ಹೊಸ ತರಹದ ಅನುಭವಗಳಾ ಗಿದ್ದವು. ಗಾಂಧಿಯ ಅಹಿಂಸಾ ಮಾರ್ಗ ಹಾಗೂ ಅಂಬೇಡ್ಕರ್ ಆಲೋಚನಾ ಕ್ರಮಗಳು ಪ್ರಧಾನವಾಗಿ ಆ ಕಾಲದ ಯುವ ಸಮುದಾಯದ ಚಳವಳಿಗಳನ್ನು ಪ್ರಭಾವಿಸಿದ್ದರೂ ಕೆಲವೊಮ್ಮೆ ಅಪಾರ ಉತ್ಸಾಹ, ಅಪರಿಮಿತ ತುಡಿತಗಳು ಅದಕ್ಕೆ ವಿರುದ್ಧವಾದ ದಿಕ್ಕಿನ ಚಳವಳಿಯಲ್ಲೂ ಹೆಜ್ಜೆ ಹಾಕುವಂತೆ ಮಾಡಿದ್ದವು.

ಅದು ೧೯೮೪. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಂಗ್ರೆಸ್ ವತಿಯಿಂದ ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಸ್ಪರ್ಧೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು ಅವರು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಅವರಿಗೆ ಮತ ನೀಡದಂತೆ ತಮಟೆ, ದಮಡಿಗಳನ್ನು ಬಡಿದುಕೊಂಡು ರಾಜಪ್ರಭುತ್ವದ ವಿರುದ್ಧದ ಹಾಡುಗಳನ್ನು ಹಾಡಿಕೊಂಡು ಸಂಜೆಯ ಹೊತ್ತಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಪ್ರಚಾರ ನಡೆಸಿತ್ತು. ರಾಜ ಪ್ರಭುತ್ವದ ಮನಸ್ಸೊಂದು ಪ್ರಜಾಪ್ರಭುತ್ವಕ್ಕೆ ಬರುವುದು ಅಪಾಯಕಾರಿ ಅಂತ ಸಮಾಜವಾದ, ಕಮ್ಯೂನಿಸಂ, ರೈತ, ದಲಿತ ಪರವಿದ್ದ ಮನಸ್ಸುಗಳಿಗೆ ಅನಿಸಿತ್ತು. ಹಂಗಾಗಿ ವಿರೋಧಿಸಿದ್ದೆವು. ಚಳವಳಿ ಅಥವಾ ವ್ಯವಸ್ಥೆಯ ವಿರುದ್ಧದ ಪ್ರತಿರೋಧ ದನಿಗೆ ಯುವ ಪೀಳಿಗೆಯನ್ನು ಪಠ್ಯಗಳಿಗಿಂತಲೂ ಹೆಚ್ಚು ಜಾತ್ಯತೀತ, ಧರ್ಮಾತೀತರನ್ನಾಗಿ ಯೋಚಿ ಸುವಂತೆ ಮಾಡಬಲ್ಲ ಶಕ್ತಿಯಿತ್ತು. ಇದಕ್ಕೆ ಉದಾಹರಣೆ ಯಾಗಿ ಆಗಿನ ಮಾನಸಗಂಗೋತ್ರಿಯ  ಗಾಂಧಿ ಭವನದಲ್ಲಿ ನಡೆಯುತ್ತಿದ್ದ ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ಸರಳ ವಿವಾಹಗಳು ಇಂದಿಗೂ ಜಾತಿ, ಧರ್ಮಾಂಧ ಮನಸ್ಸುಗಳನ್ನು ಹಣಿಯಲು ಇರುವ ಬಲು ದೊಡ್ಡ ಮಾರ್ಗದಂತೆ ಕಾಣುತ್ತದೆ. ರೈತ ಸಂಘದ ಯುವ ಘಟಕ ವಾಗಿ ಕಾರ್ಯನಿರ್ವಹಿಸುತ್ತಿದ್ದ “ರೈತ ವಿದ್ಯಾರ್ಥಿ ಒಕ್ಕೂಟ” ಕೆ.ಎಸ್.ಕೇಶವಪ್ರಸಾದ್ ನೇತೃತ್ವದಲ್ಲಿ ಗಾಂಧಿ ಭವನದಲ್ಲಿ ನಡೆಯುತ್ತಿತ್ತು. ಇಲ್ಲಿನ ಕಾರ್ಯಕ್ರಮಗಳು ಕೇವಲ ರೈತ ವಿದ್ಯಾರ್ಥಿ ಒಕ್ಕೂಟದ ಆಶಯಗಳನ್ನಲ್ಲದೆ ದಲಿತ ಸಂಘರ್ಷ ಸಮಿತಿಯ ಆಶಯಗಳನ್ನೂ ಒಳಗೊಂಡಿರುತ್ತಿದ್ದವು. ಇವು ನಮ್ಮಂಥವರಿಗೆ ಬದುಕಿನ ಬಹು ಮುಖ್ಯ ಪಠ್ಯಗಳಂತೆ ಕಾಣುತ್ತಿದ್ದವು. ಅಂದು ಪ್ರಖರವಾಗಿದ್ದ ಯಾವುದೇ ಚಳವಳಿಗೆ ಹಾಗೂ ಅವುಗಳನ್ನು ಅಪ್ಪಿಕೊಂಡವರನ್ನು ಕಾಪಾಡುವ ತಾಯ್ತನದ ಗುಣವಿತ್ತು. ಪ್ರಾಮಾಣಿಕತೆ ಎಂಬುದು ಅವುಗಳ ಅಸ್ತ್ರವಾಗಿತ್ತು. ಆ ಕಾರಣಕ್ಕೆ ಚಳವಳಿಗಳ ಭಾಗವಾಗಿದ್ದವರಿಗೆ ಪೊಲೀಸರು ಅಥವಾ ವ್ಯವಸ್ಥೆಯನ್ನು ಲೆಕ್ಕಿಸದೆ ಮುನ್ನುಗ್ಗುವ ಧೈರ್ಯವಿತ್ತು. ಕ್ರಾಂತಿಗೀತೆಗಳು, ರೈತ ಗೀತೆಗಳು ಚಳವಳಿಗಾರರ ಎದೆಯ ಹಾಡುಗಳಾಗಿದ್ದವು.

‘ಜಾತಿ ಬಿಟ್ಟು ಪ್ರೀತಿ ಮಾಡಿ’ ಮುಂತಾದ ಘೋಷಣೆಗಳು ನಮ್ಮ ಧ್ಯೇಯವಾಕ್ಯಗಳಾ ಗಿದ್ದವು. ಸಿಕ್ಕ ಸಿಕ್ಕ ಗೋಡೆಗಳು ಇಂಥಧ್ಯೇಯವಾಕ್ಯಗಳಿಗೆ, ಕ್ರಾಂತಿ ಗೀತೆಗಳಿಗೆ ಮೈಯ್ಯಾಗಿದ್ದವು. ಸರ್ಕಾರಿವಾಹನಗಳನ್ನು ಖಾಸಗಿಯಾಗಿ ಬಳಸಿಕೊಂಡರೆ ಅಂಥ ಅಧಿಕಾರಿಯನ್ನು ನಿಂತ ನಿಲುವಿನಲ್ಲೇ ತಡಕುವ ಚಳವಳಿಯೊಂದನ್ನು ರೈತ ಸಂಘ ರೂಪಿಸಿತ್ತು. ಇದು ತೀವ್ರಗೊಂಡಂತೆಲ್ಲಾ ಸರ್ಕಾರಿ ಅಧಿಕಾರಿಗಳು ಹೆದರತೊಡಗಿದ್ದರು. ಒಮ್ಮೆ ಪೊಲೀಸ್ ಅಧಿಕಾರಿಯೊಬ್ಬ ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಸರ್ಕಾರಿ ಜೀಪಿನಲ್ಲಿ ಮೈಸೂರಿನ ಸರಸ್ವತಿಪುರಂನ ತನ್ನ ನೆಂಟರ ಮನೆಗೆ ಬಂದಿದ್ದ. ಇದು ತಿಳಿಯುತ್ತಲೇ ಒಂದಷ್ಟು ಜನ ಯುವಕರು ಆ ಅಧಿಕಾರಿಯ ಎದುರಿಗೇ ವಾಹನದ ಗಾಳಿಯನ್ನು ತೆಗೆದು ಛೀಮಾರಿ ಹಾಕಿದ್ದರು. ಆಗ ಆ ಅಧಿಕಾರಿ ರಂಪಾಟ ಮಾಡುತ್ತಿದ್ದದ್ದು ತಿಳಿಯುತ್ತಲೇ ಪ್ರೊಫೆಸರ್ ನಂಜುಂಡಸ್ವಾಮಿಯವರು ಅಲ್ಲಿಗೆ ಬಂದಿದ್ದರು. ಅವರನ್ನು ಕಾಣುತ್ತಲೇ ಆ ಅಧಿಕಾರಿ ಹೆಂಡತಿ ಮಕ್ಕಳನ್ನು ಅಲ್ಲಿಯೇ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದ. ಇಂಥ ನೂರಾರು ಘಟನೆಗಳು ನಮ್ಮ ಆ ದಿನಗಳನ್ನು ಪೊರೆದಿದ್ದವು. ಇನ್ನೂ ವಿಶೇಷವೆಂದರೆ ಆಗ ಈ ಚಳವಳಿಗಳ ಕಾವು ಮತ್ತು ಕಸುವು ತೀವ್ರವಾಗಿದ್ದರ ಪರಿಣಾಮ ಮತಾಂಧ ಶಕ್ತಿಗಳು ಹಾಗೂ ಸಂಘಟನೆಗಳು ಜೀವ ಹಿಡಿದುಕೊಂಡು ಜೀವಿಸುತ್ತಿದ್ದವು. ಚಳವಳಿಗಳೆಲ್ಲಾ ಛಿದ್ರವಾಗಿ, ಇಲ್ಲ ಹಲವು ಬಣಗಳಾಗಿ ನಿತ್ರಾಣವಾಗಿರುವಂಥ ಈ ಹೊತ್ತಲ್ಲಿ, ಸರ್ಕಾರಗಳು ಜಾತಿ ಇಲ್ಲವೆ ಧರ್ಮಾಂಧತೆಯನ್ನೇ ಹಾಸಿ ಹೊದ್ದಿರುವ ಈ ಹೊತ್ತಲ್ಲಿ, ಜಾತ್ಯತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಈ ಜೆನ್ ಝೀಗಳು ಜಂತರ್ ಮಂಥರ್‌ನಲ್ಲಿ ಗರ್ಜಿಸಿ ಅದು ಲೋಕಕ್ಕೆ ಕೇಳುವಂತೆ ಮಾಡಿದ್ದಾರೆ. ಹೊಸ ರೂಪದ ಈ ಚಳವಳಿಗೆ ಲೋಕದ ಯುವ ಮನಸ್ಸುಗಳು ಸ್ಪಂದಿಸಿರುವ ರೀತಿ ಅಧಿಕಾರದಲ್ಲಿರುವವರಿಗೆ “ನಮ್ಮನ್ನು ಕಡೆಗಣಿಸಿದರೆ ಹುಷಾರ್” ಅನ್ನುವ ಸಂದೇಶ ರವಾನಿಸಿದೆ. ಅಂತೆಯೇ ಹಳೆಗಾಲದ ಚಳವಳಿಗಳೆಲ್ಲಾ ಒಗ್ಗೂಡಿ ಹೊಸಗಾಲದಲ್ಲಿ ಮರು ಹುಟ್ಟು ಪಡೆದಂತೆ ಹೊಸ ಸಾಧ್ಯತೆಯೊಂದನ್ನು ವಿನೂತನ ಬಗೆಯಲ್ಲಿ ಸಾಕಾರಗೊಳಿಸುತ್ತಿದೆ ಅನ್ನುವಂಥ ಭಾವವನ್ನು ಹುಟ್ಟು ಹಾಕಿವೆ. ವ್ಯವಸ್ಥೆಯನ್ನು ದಿಕ್ಕು ತಪ್ಪಿಸುತ್ತಿರುವವರಿಗೆ ನಿಜ ಪ್ರಜಾಪ್ರಭುತ್ವ ಆಶಯ ಹಾಗೂ ಅಹಿಂಸಾ ಮಾರ್ಗದ ಅನಿವಾರ್ಯತೆಯನ್ನು ಈ ಕಾಲದ ಜೆನ್ ಝೀಗಳು ಗಟ್ಟಿ ದನಿಯಲ್ಲಿ ಹೇಳುತ್ತಿದ್ದಾರೆ.

” ಅಂದು ಪ್ರಖರವಾಗಿದ್ದ ಆ ಚಳವಳಿಗಳಿಗೆ ಅವುಗಳನ್ನು ಅಪ್ಪಿಕೊಂಡವರನ್ನು ಕಾಪಾಡುವ ತಾಯ್ತನದ ಗುಣವಿತ್ತು. ಪ್ರಾಮಾಣಿಕತೆ ಎಂಬುದು ಅವುಗಳ ಅಸ್ತ್ರವಾಗಿತ್ತು. ಆ ಕಾರಣಕ್ಕೆ ಚಳವಳಿಗಳ ಭಾಗವಾಗಿದ್ದವರಿಗೆ ಪೊಲೀಸರು ಅಥವಾ ವ್ಯವಸ್ಥೆಯನ್ನು ಲೆಕ್ಕಿಸದೆ ಮುನ್ನುಗ್ಗುವ ಧೈರ್ಯವಿತ್ತು!”

 

 

ಆಂದೋಲನ ಡೆಸ್ಕ್

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

9 mins ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

15 mins ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

18 mins ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

21 mins ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

22 mins ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

26 mins ago