ಎಡಿಟೋರಿಯಲ್

ನಗರಪಾಲಿಕೆಯಲ್ಲಿ ಪೂರ್ಣಾಧಿಕಾರ ಪಡೆದ ಬಿಜೆಪಿ ಹೆಗಲ ಮೇಲೆ ಪೂರ್ಣ ಜವಾಬ್ದಾರಿಯೂ ಇದೆ!

ರಾಜ್ಯ, ದೇಶದಲ್ಲಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿದರೂ ಹಲ–ವಾರು ವರ್ಷಗಳಿಂದ ಮೈಸೂರು ಮಹಾನಗರ–ಪಾಲಿಕೆಯಲ್ಲಿ ಮಹಾಪೌರ ಸ್ಥಾನ ಹಿಡಿಯಲು ಸಾಧ್ಯವಾಗಿಲ್ಲ ಎನ್ನುವ ಕೊರಗನ್ನು ಕಳೆದ ಬಾರಿ ದೂರ ಮಾಡಿಕೊಂಡಿದ್ದ ಬಿಜೆಪಿಯು ಮೊಟ್ಟ ಮೊದಲ ಬಾರಿಗೆ ಮಹಾಪೌರ- ಉಪ ಮಹಾಪೌರಎರಡೂ ಸ್ಥಾನಗಳನ್ನು ಅಲಂಕರಿಸಿ ಪಾರುಪಥ್ಯ ಮೆರೆದಿದೆ. ಮುಂದಿನ ಚುನಾವಣೆ ದೃಷ್ಟಿ ಇಟ್ಟುಕೊಂಡು ಮೈತ್ರಿ ಮಾತುಕತೆಯೇ ಇಲ್ಲ ಎನ್ನುತ್ತಲೇ ಬಂದಿದ್ದ ಜಾ.ದಳ ನಾಯಕರು ಬಿಜೆಪಿ–ಯೊಂ–ದಿಗೆ ಆಂತರಿಕವಾಗಿ ಒಳ ಒಪ್ಪಂದ ಮಾಡಿಕೊಂಡು ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡರೂ ತನ್ನ ಪಕ್ಷಕ್ಕೆ ಸಿಗಬೇಕಾದ ಉಪ ಮಹಾಪೌರ ಸ್ಥಾನವು ಸಿಗದೆ ತೀವ್ರ ನಿರಾಶೆಗೊಂಡಿದ್ದಾರೆ.

ಜಾ.ದಳದೊಂದಿಗೆ ಮೈತ್ರಿ ಮಾಡಿಕೊಂಡು ಐದು ವರ್ಷಗಳ ಕಾಲ ಉಪಮಹಾಪೌರ ಸ್ಥಾನ ಅಲಂಕರಿಸಿದ್ದ ಬಿಜೆಪಿ ಕಳೆದ ಬಾರಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರಿಂದಾಗಿ ಮಹಾಪೌರ ಸ್ಥಾನ ಅಲಂಕರಿಸಿತ್ತು. ಆದರೆ, ಕಳೆದ ಬಾರಿ ಸಹಕಾರ ನೀಡಿದ್ದಕ್ಕಾಗಿ ಈ ಬಾರಿ ಮಹಾಪೌರ ಸ್ಥಾನವನ್ನು ಜಾ.ದಳಕ್ಕೆ ಬಿಟ್ಟುಕೊಡಬೇಕೆಂಬ ಷರತ್ತಿನೊಂದಿಗೆ ವಿಶ್ವಾಸವನ್ನಿಟ್ಟು ಕಾದಿದ್ದರು. ಅದೇ ರೀತಿ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಬದಲಿಸದೆ ಇರುವ ಜತೆಗೆ ಮಹಾಪೌರ ಸ್ಥಾನ ಕೊಟ್ಟರಷ್ಟೇ ಉಳಿದಿದ್ದು ಎನ್ನುವ ಸಂದೇಶ ರವಾನಿಸಿತ್ತು. ಸದ್ದಿಲ್ಲದೆ ಜಾ.ದಳದ ಒಬ್ಬರು ಸದಸ್ಯರು, ಬಿಎಸ್ಪಿಯ ಒಬ್ಬರು ಸದಸ್ಯರನ್ನು ತಮ್ಮತ್ತ ಸೆಳೆದುಕೊಂಡು ಮಹಾಪೌರ ಸ್ಥಾನ ಹಿಡಿಯಲು ಕಾಂಗ್ರೆಸ್ ನಡೆಸಿದ್ದ ತಂತ್ರ ಗೊತ್ತಾಗು–ತ್ತಿದ್ದಂತೆ ಜಾ.ದಳ ನಾಯಕರು ತನ್ನ ಅಧಿಕೃತ ಅಭ್ಯರ್ಥಿಯನ್ನೇ ಕಣದಿಂದ ಹಿಂದೆ ಸರಿಯುವಂತೆ ಮಾಡಿ ಬಿಜೆಪಿಗೆ ಮಹಾಪೌರ ಸ್ಥಾನ ದೊರೆಯುವಂತೆ ಮಾಡಿದರು.

ತನ್ನ ಸ್ವಯಂಕೃತ ಅಪರಾಧದಿಂದ ಉಪ ಮಹಾಪೌರ ಸ್ಥಾನವು ಸಿಗದೆ ಬಿಜೆಪಿ ಪಾಲಿಗೆ ಅದೃಷ್ಟ ರೇಖೆ ಒಲಿಯುವಂತೆ ಮಾಡಿದೆ. ತನ್ನನ್ನು ಬಿಟ್ಟು ಅಧಿಕಾರ ನಡೆಸಲು ಸಾಧ್ಯವಿಲ್ಲವೆಂದು ಬೀಗುತ್ತಿದ್ದ ಜಾ.ದಳದ ನಾಯಕರಿಗೆ ದೊಡ್ಡ ಮುಖಭಂಗವಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಜಾ.ದಳದ ಪಟ್ಟಿಗೆ ಮಣಿಯದೆ ಹೋಗಿದ್ದ ಬಿಜೆಪಿಯನ್ನೇ ಬೆಂಬಲಿಸಬೇಕಾದ ಅನಿವಾರ್ಯ ಕೊನೆಯಲ್ಲಿ ಸೃಷ್ಟಿಯಾಗಿದ್ದರಿಂದ ಆ ಪಕ್ಷದ ಪಾಲಿಕೆ ಸದಸ್ಯರು ನಾಯಕರ ವಿರುದ್ಧ ಅಸಮಾಧಾನ, ಸಿಟ್ಟು ಹೊರ ಹಾಕುವಂತೆ ಮಾಡಿದೆ. ಪಕ್ಷದ ನಾಯಕರು ಸರಿಯಾದ ಸಮಯಕ್ಕೆ ನಿರ್ಧಾರ ಕೈಗೊಳ್ಳದೆ ಮತ್ತು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳದೆ ಇರುವುದರಿಂದ ಬಿಜೆಪಿಗೆ ಅಧಿಕಾರ ಹೋಗಿದೆ. ನಮ್ಮಿಂದ ಸಹಾಯ ಪಡೆದ ಬಿಜೆಪಿಯವರು ಬಹಿರಂಗವಾಗಿ ಮೈತ್ರಿಯೇ ಆಗಿಲ್ಲ ಎನ್ನುವ ಮಾತನ್ನು ಹೇಳಿದ್ದರಿಂದಾಗಿ ನಾವು ಅಸಹಾಯಕರಾಗಿ ಕೂರುವಂತಾಗಿದೆ ಎಂಬುದು ಪಾಲಿಕೆ ಸದಸ್ಯರ ಅಳಲಾಗಿದೆ.

ಬಿಜೆಪಿಗೆ ಮಹಾಪೌರ ಸ್ಥಾನ ಸಿಗದೆ ಇದ್ದರೂ ಉಪ ಮಹಾಪೌರ ಸ್ಥಾನ ದೊರೆತರೆ ಸಾಕು ಎನ್ನುವ ಮಟ್ಟಿಗೆ ಇದ್ದ ಕೆಲವು ನಾಯಕರು ಪಕ್ಷದ ಹಿರಿಯ ಸದಸ್ಯರೊಬ್ಬರು ಮಹಾಪೌರರಾಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ಬಿಜೆಪಿಯಲ್ಲಿಯೂ ಸದ್ದಿಲ್ಲದೆ ನಡೆದಿರುವ ಬೆಳವಣಿಗೆಗಳಿಂದಾಗಿ ಅನೇಕರು ಮೂಕಪ್ರೇಕ್ಷಕರಾದರೆ, ಜಾ.ದಳದಲ್ಲಿ ಆತ್ಮಾವಲೋಕನಕ್ಕೆ ದಾರಿಮಾಡಿಕೊಟ್ಟಿದೆ.

ಶಾಸಕರಾದ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ ಅವರಂತಹ ಅನುಭವಿ ರಾಜಕಾರಣಿಗಳು ಇದ್ದರೂ ಒಬ್ಬ ಅಭ್ಯರ್ಥಿಯ ನಾಮಪತ್ರ ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಲು ಸಾಧ್ಯವಾಗಲಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಈ ವಿಚಾರ ಅರಿಯದೆ ನಡೆದಿರುವುದೇ ಅಥವಾ ದುರುದ್ದೇಶಪೂರ್ವಕವಾಗಿ ನಡೆದಿದೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ಏಕೆಂದರೆ ಪಕ್ಷದಿಂದ ಗೆದ್ದಿದ್ದ ಸದಸ್ಯರನ್ನು ಬಿಟ್ಟು ಕಳೆದ ಬಾರಿ ಜಾ.ದಳಕ್ಕೆ ಸೇರಿದ ಸದಸ್ಯರೊಬ್ಬರನ್ನು ಮಹಾಪೌರ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಿದ ನಾಯಕರ ನಡೆಯೇ ಈಗ ಹಲವರಲ್ಲಿ ಅತೃಪ್ತಿ ಮೂಡಿಸಿದ್ದು, ಪಕ್ಷದ ವರಿಷ್ಠರು ಯಾವ ರೀತಿ ಶಮನ ಮಾಡುತ್ತಾರೋ ಕಾದು ನೋಡಬೇಕಿದೆ.

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗಟ್ಟಿಮಾಡಿಕೊಳ್ಳುವ ಜತೆಗೆ ಜಾ.ದಳದ ಸಹವಾಸವೇ ಬೇಡ ಎಂಬ ನಿಲುವಿಗೆ ಬಂದಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾದರೂ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಳ್ಳುವುದು ಖಚಿತವಾಗಿದೆ. ನಗರಪಾಲಿಕೆಯಲ್ಲಿ ನಡೆಯುವ ವಿದ್ಯಮಾನಗಳು, ಆಡಳಿತದ ವಿಚಾರದಲ್ಲಿ ಇಂಚಿಂಚೂ ಅರೆದು ಕುಡಿದಿರುವ ಕಾಂಗ್ರೆಸ್‌ನ ಹಿರಿಯ ಸದಸ್ಯರು ಬಿಜೆಪಿ ಹಾಗೂ ಜಾ.ದಳವನ್ನು ಕಟ್ಟಿ ಹಾಕುವ ಕೆಲಸ ಮಾಡಲಿದ್ದಾರೆ. ಹಾಗಾಗಿ, ಬಿಜೆಪಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ‘ಡಬಲ್ ಇಂಜಿನ್’ ಸರ್ಕಾರ ಇದೆ. ಈಗ ಮಹಾನಗರ ಪಾಲಿಕೆಯಲ್ಲೂ ಪೂರ್ಣಾಧಿಕಾರ ಹಿಡಿದಿರುವ ಬಿಜೆಪಿ ನಾಯಕರು ಮೈಸೂರನ್ನು ನಿಜವಾದ ಅರ್ಥದಲ್ಲಿ ನಂಬರ್ ೧ ಸ್ವಚ್ಛನಗರ ಮಾಡಬೇಕಿದೆ. ಸ್ವಚ್ಛತೆ ಆಡಳಿತದ ಮಟ್ಟಕ್ಕೂ ವಿಸ್ತರಿಸಬೇಕಿದೆ. ರಾಜ್ಯ ಸರ್ಕಾರಕ್ಕೆ ಅಂಟಿಕೊಂಡಿರುವ ಪರ್ಸೆಂಟೇಜ್ ಕಳಂಕದಿಂದ ಮಲೀನವಾಗ–ದಂತಹ ಆಡಳಿತ ನೀಡುವ ಜವಾಬ್ದ್ಧಾರಿ ಬಿಜೆಪಿ ನಾಯಕರ ಮೇಲಿದೆ.

ಮೇಯರ್ ಚುನಾವಣೆ ಮುಗಿದಿದೆ. ಉಳಿದ ಅವಧಿಗೆ ಎಲ್ಲ ಪಕ್ಷಗಳೂ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಭೇದ ಮರೆತು ಕೆಲಸ ಮಾಡಬೇಕಿದೆ. ಮೂರೂ ಪಕ್ಷಗಳ ಸದಸ್ಯರು ರಾಜಕೀಯವನ್ನು ಬದಿಗೊತ್ತಿ ನಗರವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಶ್ರಮಿಸಬೇಕಿದೆ.

andolana

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

6 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

6 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

6 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

6 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

6 hours ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

6 hours ago