ಉನ್ನತ ಶಿಕ್ಷಣ ದುಬಾರಿಯಾಗುತ್ತಿರುವುದು ದಲಿತ ವಿದ್ಯಾರ್ಥಿಗಳಿಗೆ ಮಾರಕವಾಗುತ್ತಿದೆ
ನಾ. ದಿವಾಕರ
ದಿನಗೂಲಿ ಕಾರ್ಮಿಕರ ಮಗ ಅತುಲ್ ಕುಮಾರ್ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ಹುಡುಗ. ಐಐಟಿ ಧನಬಾದ್‌ನಲ್ಲಿ ಪ್ರವೇಶ ಪಡೆಯಲು ಪರೀಕ್ಷೆಯನ್ನು ಬರೆದು ಉತ್ತೀರ್ಣನಾಗಿದ್ದರೂ, ಈತನಿಗೆ ಅಲ್ಲಿ ಪ್ರವೇಶ ಗಳಿಸಲಾಗಲಿಲ್ಲ. ಕಾರಣ ಈ ಹುಡುಗನ ಬಳಿ ೧೭,೫೦೦ ರೂ. ಗಳ ದುಬಾರಿ ಶುಲ್ಕ ಕಟ್ಟಲು ಹಣ ಇರಲಿಲ್ಲ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೊಳಗಾಯಿತು. ತದನಂತರ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿ, ತನ್ನ ವಿಶೇಷ ಅಧಿಕಾರವನ್ನು ಬಳಸಿ ಸಂವಿಧಾನ ಅನುಚ್ಛೇದ ೧೪೨ರ ಅಡಿಯಲ್ಲಿ ಈತನಿಗೆ ಪ್ರವೇಶ ದೊರಕಿಸಿಕೊಟ್ಟಿತ್ತು. ಅತುಲ್ ಕುಮಾರ್‌ನಂತಹ ಯುವಕ/ ಯುವತಿಯರು ಹೇರಳ ಸಂಖ್ಯೆಯಲ್ಲಿದ್ದಾರೆ, ದಲಿತ ವಿದ್ಯಾರ್ಥಿಗಳು ಎದುರಿಸುವ ಈ ಸವಾಲುಗಳು, ಸ್ವಾತಂತ್ರ್ಯಪೂರ್ವದಲ್ಲಿದ್ದ ಪರಿಸ್ಥಿತಿಗಳನ್ನು ನೆನಪಿಸುತ್ತವೆ. ಆ ಕಾಲಘಟ್ಟದಲ್ಲಿ ದಲಿತ ವಿದ್ಯಾರ್ಥಿಗಳು ತಮ್ಮ ಜಾತಿಯ ಕಾರಣಕ್ಕಾಗಿಯೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲಾಗುತ್ತಿರಲಿಲ್ಲ.
ವರ್ತಮಾನದಲ್ಲಿ ಪರಿಸ್ಥಿತಿಯು ಘಾತಕತನವಾಗಿ ಕಾಣುತ್ತದೆ. ತನ್ನ ‘ಆತ್ಮನಿರ್ಭರ ಭಾರತ ಅಭಿಯಾನ’ದ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣ ಸಂಸ್ಥೆಗಳ ಸ್ವಾವಲಂಬನೆಗಾಗಿ ಒತ್ತು ನೀಡುತ್ತಿದೆ. ತತ್ಪರಿಣಾಮವಾಗಿ ಅನೇಕ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಶುಲ್ಕವನ್ನು ಅತಿಯಾಗಿ ಹೆಚ್ಚಿಸಲಾಗುತ್ತಿದೆ. ಇವುಗಳ ಪೈಕಿ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ಸೇರಿವೆ. ಉದಾಹರಣೆಗೆ ೨೦೧೬ರಲ್ಲಿ ಐಐಟಿ ಆಡಳಿತ ಮಂಡಳಿಯ ಸ್ಥಾಯಿ ಸಮಿತಿಯು ಪದವಿಪೂರ್ವ ಶಿಕ್ಷಣದ ಶುಲ್ಕಗಳನ್ನು ಶೇ. ೨೦೦ರಷ್ಟು ಹೆಚ್ಚಿಸಲು ನಿರ್ಧರಿಸಿತ್ತು. ಶುಲ್ಕ ಹೆಚ್ಚಳದ ಬಗ್ಗೆ ಕೇಳಿಬಂದ ವ್ಯಾಪಕ ಟೀಕೆಗಳಿಗೆ ಪ್ರತಿಕ್ರಿಯಿಸಿ ಸರ್ಕಾರವು ನೇಮಿಸಿದ ಸಮಿತಿಯು, ಅಂಚಿನಲ್ಲಿರುವ ವಿದ್ಯಾರ್ಥಿಗಳಿಗೆ ಬಡ್ಡಿರಹಿತ-ಸ್ಕಾಲರ್‌ಶಿಪ್ ದೊರೆಯುವ ‘ವಿದ್ಯಾಲಕ್ಷ್ಮಿ’ ಯೋಜನೆ ನೆರವಾಗುತ್ತದೆ ಎಂದು ಹೇಳಿತ್ತು. ಸರ್ಕಾರದ ಈ ಉಪಕ್ರಮವು ಉಪಯುಕ್ತವಾಗಿದ್ದರೂ, ಶುಲ್ಕಗಳು ನಿರಂತರವಾಗಿ ಏರುತ್ತಲೇ ಇರುವುದರಿಂದ, ವಿದ್ಯಾರ್ಥಿಗಳು ಎದುರಿಸುವ ಹಣಕಾಸಿನ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಮರ್ಪಕವಾಗುತ್ತಿಲ್ಲ. ಏಳು ಐಐಎಂಗಳಲ್ಲಿ ಟ್ಯೂಷನ್ ಶುಲ್ಕವನ್ನು ಕನಿಷ್ಠ ಶೇ. ೫ರಿಂದ ಗರಿಷ್ಟ ಶೇ. ೩೦ರವರೆಗೆ ಹೆಚ್ಚಿಸಲಾಗಿದೆ. ಐಐಟಿ ದಿಲ್ಲಿ ಪೂರ್ಣಾವಧಿ ಎಂ. ಟೆಕ್. ವಿದ್ಯಾರ್ಥಿಗಳಿಗೆ ೨೦೨೨-೨೩ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕವನ್ನು ೨೬,೪೫೦ ರೂ. ಗಳಿಂದ ಶೇ. ನೂರರಷ್ಟು ಹೆಚ್ಚಳ ಮಾಡಿತ್ತು. ಪದೇ ಪದೇ ಶುಲ್ಕಗಳನ್ನು ಹೆಚ್ಚಿಸುತ್ತಿರುವುದರಿಂದ ಅಂಚಿನಲ್ಲಿರುವ ಸಮುದಾಯದ ವಿದ್ಯಾರ್ಥಿಗಳಿಗೆ, ಸಾಲ ಪಡೆದರೂ ಉನ್ನತ ಶಿಕ್ಷಣ ಪಡೆಯುವುದೇ ದುಸ್ತರವಾಗಿದೆ. ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೆಚ್ಚ ದುಬಾರಿಯಾಗುತ್ತಿರುವುದರಿಂದ ಅಂಚಿನಲ್ಲಿರುವ ಸಮುದಾಯಗಳ ಶಿಕ್ಷಣಾರ್ಥಿಗಳು, ಉತ್ತಮ ಅಂಕಗಳನ್ನು ಗಳಿಸಿದ್ದರೂ ಐಐಟಿ ಮತ್ತು ಐಐಎಂ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶಿಸುವ ಆಕಾಂಕ್ಷೆಯನ್ನೂ ಇಟ್ಟುಕೊಳ್ಳಲಾಗುತ್ತಿಲ್ಲ. ೨೦೨೧ರ ಒಂದು ದತ್ತಾಂಶದ ಅನುಸಾರ ಹಿಂದಿನ ಏಳು ವರ್ಷಗಳಲ್ಲಿ ಐಐಟಿ ಮತ್ತು ಐಐಎಂಗೆ ಸೇರಿದ ೧೨೨ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದರು. ಇದಕ್ಕೆ ದುಬಾರಿ ಶುಲ್ಕಗಳಿಂದ ಉಂಟಾಗುವ ಹಣಕಾಸು ಬಿಕ್ಕಟ್ಟು ಒಂದು ಕಾರಣವಾದರೆ ಉದ್ಯೋಗ ಪಡೆಯುವ ಆತಂಕ ಮತ್ತೊಂದು ಕಾರಣ.
ಹೊರಬೀಳುವವರ ಸಮಸ್ಯೆ: ಮತ್ತೊಂದು ಕಟು ವಾಸ್ತವ ಸಂಗತಿ ಎಂದರೆ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅನೇಕ ಶಿಕ್ಷಣಾರ್ಥಿಗಳು, ಹೆಚ್ಚಿನ ಶುಲ್ಕಗಳನ್ನು ಭರಿಸಲಾಗದೆ ಮಧ್ಯದಲ್ಲೇ ವ್ಯಾಸಂಗ ತೊರೆಯುತ್ತಾರೆ. ಕೇಂದ್ರ ಮಾನವ ಅಭಿವೃದ್ಧಿ ಸಚಿವಾಲಯದ ವರದಿಯ ಅನುಸಾರ ೨೦೧೭ ಮತ್ತು ೨೦೧೮ರಲ್ಲಿ ಐಐಟಿಯಿಂದ ೨,೪೬೧ ವಿದ್ಯಾರ್ಥಿಗಳು ವ್ಯಾಸಂಗ ತೊರೆದಿದ್ದಾರೆ. ಹಿಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದ ಕೇಂದ್ರೀಯ ವಿಶ್ವ ವಿದ್ಯಾಲಯ, ಐಐಟಿ ಮತ್ತು ಐಐಎಂ ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯ ಗಳಿಗೆ ಸೇರಿದ ೧೩,೫೦೦ ಶಿಕ್ಷಣಾರ್ಥಿಗಳು ನಡುವಿನಲ್ಲೇ ವ್ಯಾಸಂಗ ತೊರೆದಿದ್ದಾರೆ. ಸರ್ಕಾರದ ದಾಖಲೆಗಳ ಪ್ರಕಾರ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ೪,೫೯೬ ಒಬಿಸಿ, ೨,೪೨೪ ಎಸ್‌ಸಿ, ೨,೬೨೨ ಎಸ್‌ಟಿ ವಿದ್ಯಾರ್ಥಿಗಳು ಈ ಅವಧಿಯಲ್ಲಿ ವ್ಯಾಸಂಗ ತೊರೆದಿದ್ದಾರೆ. ಐಐಟಿಗಳಲ್ಲಿ ಇದರ ಪ್ರಮಾಣ ಕ್ರಮವಾಗಿ ೨,೦೬೬, ೧,೦೬೮ ಮತ್ತು ೪೦೮ರಷ್ಟಿದೆ. ಇದೇ ರೀತಿ ಐಐಎಂಗಳಲ್ಲಿ ೧೬೩, ಒಬಿಸಿ, ೧೮೮ , ೯೧ ವಿದ್ಯಾರ್ಥಿಗಳು ಹೊರಬಿದ್ದಿದ್ದಾರೆ.
ದಲಿತ ಸಮುದಾಯಗಳ ದುರ್ಭರ ಆರ್ಥಿಕ ಸ್ಥಿತಿಗತಿಗಳಿಗೆ ಒಂದು ಪ್ರಮುಖ ಕಾರಣ ಎಂದರೆ, ಅವರ ಅಸ್ಮಿತೆಯನ್ನು ಭಾರತದಲ್ಲಿ ಇಂದಿಗೂ ಜಾತಿಯ ನೆಲೆಯಲ್ಲೇ ನಿರ್ವಚಿಸಲಾಗುತ್ತದೆ. ಸಮಾಜದಲ್ಲಿ ಇತರ ಜಾತಿಯವರೊಂದಿಗೆ ಸಮಾನವಾಗಿ ದುಡಿಯುವ ಅವಕಾಶವನ್ನು ದಲಿತರಿಗೆ ನಿರಾಕರಿಸಲಾಗುತ್ತಿದೆ. ಚಾರಿತ್ರಿಕವಾಗಿ ನೋಡಿದಾಗ ಅಸ್ಪೃಶ್ಯರು ಎಂಬ ಕಳಂಕವೇ ದಲಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತದೆ. ಇತ್ತೀಚೆಗೆ ನಡೆಸಲಾದ ೨೯ ರಾಜ್ಯಗಳ ಸಮೀಕ್ಷೆಯೊಂದರಲ್ಲಿ ಒಳಚರಂಡಿ ಮತ್ತು ನಗರಗಳ ಮಲಗುಂಡಿಗಳನ್ನು ನಿರ್ವಹಿಸುವ ಕಾರ್ಮಿಕರ ಪೈಕಿ ಶೇ. ೯೨ರಷ್ಟು ಎಸ್‌ಸಿ, ಎಸ್‌ಟಿ/ಒಬಿಸಿ ಸಮುದಾಯಗಳವರೇ ಇರುವುದನ್ನು ಗುರುತಿಸಲಾಗಿದೆ. ೨೦೧೯ರಲ್ಲಿ ಕೇಂದ್ರ ಸಚಿವ ರಮೇಶ್ ಪೊಕ್ರಿಯಾಲ್ ಮಂಡಿಸಿದ ವರದಿಯ ಅನುಸಾರ ಐಐಟಿಗಳಲ್ಲಿ ಬೋಧಕ ವೃತ್ತಿಯನ್ನು ನಿರ್ವಹಿಸುವವರ ಪೈಕಿ ಶೇ. ೯೫ರಷ್ಟು ಮೇಲ್ಜಾತಿಯವರೇ ಇದ್ದಾರೆ. ಉಳಿದ ಶೇ. ೫ರಷ್ಟನ್ನು, ಎಸ್‌ಸಿ/ ಎಸ್‌ಟಿ/ಒಬಿಸಿ ಸಮುದಾಯಗಳಿಗೆ ನೀಡಲಾಗಿದೆ. ಐಐಟಿ-ಮುಂಬೈನಲ್ಲಿ ೨೪ ವಿಭಾಗಗಳಲ್ಲಿ ಎಸ್‌ಸಿ ೧೫ ವಿಭಾಗಗಳಲ್ಲಿ ಎಸ್‌ಟಿ, ೯ ವಿಭಾಗಗಳಲ್ಲಿ ಒಬಿಸಿಗಳೇ ಇಲ್ಲ.
ಜೀವಂತ ಅಡ್ಡಗೋಡೆಗಳು : ಭಾರತದ ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ಮತ್ತು ಅದರಡಿಯಲ್ಲೆ ಜಾರಿಗೊಳಿಸಲಾದ ಜನಕಲ್ಯಾಣ ಯೋಜನೆಗಳ ಫಲವಾಗಿ ಕಾಲ ಕಳೆದಂತೆ ದಲಿತರ ಶಾಲಾ ಪ್ರವೇಶದ ಪ್ರಮಾಣ ಹೆಚ್ಚಾಗಿದೆ. ಆದರೆ, ಶಿಕ್ಷಣದಲ್ಲಿ ದಲಿತ ಶಿಕ್ಷಣಾರ್ಥಿಗಳು ಬಡತನ, ದಾರಿದ್ರ್ಯ, ಸಾಮಾಜಿಕ ತಾರತಮ್ಯಗಳು, ಜಾತಿ ಅಧಾರಿತ ಪೂರ್ವಗ್ರಹಗಳಂತಹ ತಡೆಗೋಡೆಗಳನ್ನು ಎದುರಿಸಬೇಕಿದೆ. ಅನೇಕ ಸಂದರ್ಭಗಳಲ್ಲಿ ದಲಿತ ಶಿಕ್ಷಣಾರ್ಥಿಗಳನ್ನು ಅವರು ಧರಿಸುವ ಉಡುಪಿನಿಂದ, ಭಾಷೆಯಿಂದ, ಇತರ ಚಿಹ್ನೆಗಳಿಂದ ಗುರುತಿಸಲಾಗುತ್ತದೆ. ಹಾಗಾಗಿ ಅವರಿಗೆ ಮೇಲ್ಜಾತಿ ಸಹಪಾಠಿಗಳೊಡನೆ ಬೆರೆಯುವುದು ದುಸ್ತರವಾಗುತ್ತದೆ.
ಅನೇಕ ಪ್ರಸಂಗಗಳಲ್ಲಿ ಜಾತಿ ಆಧಾರಿತ ಟೀಕೆ/ಹೇಳಿಕೆಗಳು ಮತ್ತು ತಾರತಮ್ಯಗಳು ಈ ವಿದ್ಯಾರ್ಥಿಗಳನ್ನು ಘಾಸಿಗೊಳಿಸುತ್ತವೆ, ತತ್ಪರಿಣಾಮವಾಗಿ ಪ್ರತ್ಯೇಕತೆಗೊಳಪಡುತ್ತಾರೆ. ಕೆಲವು ವಿದ್ಯಾರ್ಥಿಗಳು ಈ ಪೂರ್ವಗ್ರಹಗಳ ಪ್ರಭಾವದಿಂದ ಭಾವನಾತ್ಮಕವಾಗಿ ಬಲಿಯಾಗುತ್ತಾರೆ. ಮಹಾರಾಷ್ಟ್ರದ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ, ಐಐಟಿ ಬಾಂಬೆ ಮತ್ತು ಐಐಟಿ ದಿಲ್ಲಿಯ ಇಬ್ಬರು ವಿದ್ಯಾರ್ಥಿಗಳ ಕರಾಳ ಅನುಭವ ಇದರ ವಾಸ್ತವತೆಯನ್ನು ಬಿಂಬಿಸುತ್ತದೆ. ಅನೇಕ ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಆಕಾಂಕ್ಷೆಯ ಮೇಲೆ ಜಾತಿವಾದ ಮತ್ತು ತತ್ಸಂಬಂಧಿತ ಕಿರುಕುಳಗಳ ಕರಾಳ ಛಾಯೆ ಆವರಿಸಿರುವುದನ್ನು ಈ ಪ್ರಕರಣಗಳು ಸ್ಪಷ್ಟವಾಗಿ ಬಿಂಬಿಸುತ್ತವೆ. ಈ ಪ್ರಕ್ಷುಬ್ಧ ಸನ್ನಿವೇಶವು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಹೇಗೆ ನಿಭಾಯಿಸುತ್ತವೆ, ತನ್ಮೂಲಕ ಎಲ್ಲ ಶಿಕ್ಷಣಾರ್ಥಿಗಳನ್ನೂ ಒಳಗೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಲು ಸಾಧ್ಯವೇ?
ಶಿಕ್ಷಣಾರ್ಥಿಗಳ ಆತ್ಮಹತ್ಯೆಯಂತಹ ದುರದೃಷ್ಟಕರ ಘಟನೆಗಳು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಅವರು ಎದುರಿಸುತ್ತಿರುವ ಅತಿಯಾದ ಒತ್ತಡಗಳನ್ನು ಎತ್ತಿ ತೋರಿಸುತ್ತವೆ. ತಮ್ಮ ಮಕ್ಕಳು ಪದವಿ ಪಡೆದರೆ ಕುಟುಂಬದ ಬಡತನ ನೀಗುತ್ತದೆ ಎಂಬ ಪೋಷಕರ ಅಪೇಕ್ಷೆಗಳು ಮಕ್ಕಳ ಪಾಲಿಗೆ ಹೊರೆಯಾಗಿ ಪರಿಣಮಿಸುತ್ತವೆ. ಅದೇ ವೇಳೆ ಭಾರತದಲ್ಲಿ ನಿರುದ್ಯೋಗ ಪ್ರಮಾಣವೂ ಹೆಚ್ಚಾಗಿದೆ. ಐಐಟಿ ಮೂಲಕ ಪಡೆಯುವ ಹುದ್ದೆಗಳ ಬಗ್ಗೆ ೨೦೨೪ರಲ್ಲಿ ಸಲ್ಲಿಸಿದ ಆರ್‌ಟಿಐ ಅರ್ಜಿ ಬಿಂಬಿಸುವಂತೆ, ಈ ಸಾಲಿನಲ್ಲಿ ೨೩ ಐಐಟಿ ಕ್ಯಾಂಪಸ್‌ಗಳಿಂದ ಸುಮಾರು ೮,೦೦೦ ಶಿಕ್ಷಣಾರ್ಥಿಗಳು (ಶೇ. ೩೮) ಯಾವುದೇ ನೌಕರಿ ಗಳಿಸಲಾಗಿಲ್ಲ. ಅಂಚಿನಲ್ಲಿರುವ ಸಮುದಾಯಗಳ ಶಿಕ್ಷಣಾರ್ಥಿಗಳಿಗೆ ಈ ಸಂಘರ್ಷವು ಇನ್ನೂ ತೀವ್ರವಾಗಿರುತ್ತದೆ. ಏಕೆಂದರೆ ಅವರ ಜಾತಿ ಅಸ್ಮಿತೆ ಉದ್ಯೋಗ ಪಡೆಯುವ ಸವಾಲನ್ನು ಇಮ್ಮಡಿ ಗೊಳಿಸುತ್ತದೆ. ಈ ಜಟಿಲ ಸಮಸ್ಯೆಗಳು ಶಿಕ್ಷಣ ಮತ್ತು ಉದ್ಯೋಗ ವಲಯದಲ್ಲಿ ವ್ಯವಸ್ಥಿತ ಸುಧಾರಣೆಗಳ ಅಗತ್ಯವಿರುವುದನ್ನು ಎತ್ತಿ ತೋರಿಸುತ್ತವೆ. ಹಾಗಾದಲ್ಲಿ ಮಾತ್ರ ಶಿಕ್ಷಣಾರ್ಥಿಗಳ ಮೇಲಿನ ಒತ್ತಡ ಮತ್ತು ಜಾತಿ ಆಧಾರಿತ ತಾರತಮ್ಯಗಳನ್ನು ಕೊನೆಗಾಣಿಸಬಹುದು.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…