ಅಂಕಣಗಳು

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ಬ್ಯಾಂಕ್ ಠೇವಣಿಗಳಿಗಿಂತ ವೇಗವಾಗಿ ಸಾಲಗಳು ಬೆಳೆಯುತ್ತಿವೆ

ಪ್ರೊ.ಆರ್.ಎಂ.ಚಿಂತಾಮಣಿ

೨೦೨೫-೨೬ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಕೊನೆಯ ವೇಳೆಗೆ (ಡಿಸೆಂಬರ್೨೦೨೫) ದೇಶದಲ್ಲಿ ಉಪಭೋಗ (Consumption) ಮುಂದಾಗಿರುವ ಆರ್ಥಿಕ ಚಟುವಟಿಕೆಗಳು ದೇಶದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ಬೆಲೆಗಳು ನಿಯಂತ್ರಣದಲ್ಲಿ ಇರುವುದರಿಂದ ಹಣದುಬ್ಬರವು (Inflation)ಕೆಳಮಟ್ಟದಲ್ಲಿದೆ. ಇದೆಲ್ಲದರ ಪರಿಣಾಮವಾಗಿ ಕೈಗಾರಿಕೆಗಳು, ವ್ಯಾಪಾರೋದ್ಯಮಿಗಳು ಮತ್ತು ಸೇವಾ ವಲಯವೂ ಸೇರಿದಂತೆ ಇತರ ವಲಯಗಳಲ್ಲಿ ಹಣಕಾಸಿನ ಅವಶ್ಯಕತೆ ಹೆಚ್ಚಾಗಿದ್ದು, ಬ್ಯಾಂಕ್ ಸಾಲಗಳಿಗೆ ಬೇಡಿಕೆ ಹೆಚ್ಚಾಗಿರುವುದು ಸ್ವಾಭಾವಿಕ.

ಇದಕ್ಕೆ ಪೂರಕವೆಂಬಂತೆ ೨೦೨೫ರಲ್ಲಿ ರಿಸರ್ವ್ ಬ್ಯಾಂಕು ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ತನ್ನದೇ ಸಾಲಪತ್ರಗಳನ್ನು ಅಡವಿಟ್ಟುಕೊಂಡು ಕೊಡುವ ತಾತ್ಕಾಲಿಕ ಸಾಲಗಳ ಮೇಲೆ ಆಕರಿಸುವ ಬಡ್ಡಿದರ- ರೆಪೋದರವನ್ನು (Repossession Rate) ಮೂರು ಹಂತಗಳಲ್ಲಿ ಒಟ್ಟು ಶೇ. ೦.೭೫ ಕಡಿಮೆ ಮಾಡಿ ಶೇ.೫.೨೫ಕ್ಕೆ ನಿಲ್ಲಿಸಿದೆ. ಇದರ ಪರಿಣಾಮವಾಗಿ ಇವೆಲ್ಲ ಸಂಸ್ಥೆಗಳು ತನ್ನಲ್ಲಿ ತಾತ್ಕಾಲಿಕವಾಗಿ ಇಡುವ ವಿಶೇಷ ಠೇವಣಿಗಳ ಮೇಲೆ ತಾನು ಕೊಡುವ ಬಡ್ಡಿದರ(ರಿವರ್ಸ್ ರೆಪೋದರ) ಮತ್ತು ಬ್ಯಾಂಕುಗಳಿಗೆ ಆಪತ್ಕಾಲದಲ್ಲಿ ‘ಅಂತಿಮ ಧಣಿಯಾಗಿ ತಾನು ಕೊಡುವ ಸಾಲದ ಮೇಲಿನ ಬಡ್ಡಿದರ (ಬ್ಯಾಂಕ್ ರೇಟ್) ಅನುಕ್ರಮವಾಗಿ ಶೇ.೫.೦೦ ಮತ್ತು ಶೇ.೫.೫೦ರಲ್ಲಿ ನಿಲ್ಲುತ್ತವೆ. ಇವುಗಳನ್ನೇ (ಮೂರೂ ಬಡ್ಡಿ ದರಗಳನ್ನು) ನೀತಿ ದರಗಳು ಎನ್ನುವುದು. ಇವುಗಳ ಆಧಾರದಲ್ಲೇ ದೇಶದಲ್ಲಿಯ ಹಣಕಾಸು ವ್ಯವಸ್ಥೆಯಲ್ಲಿ ವಿವಿಧ ಬಡ್ಡಿ ದರಗಳು ನಿರ್ಧಾರವಾಗುತ್ತವೆ. ಅಲ್ಲದೇ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಗಳ ನಿರ್ದಿಷ್ಟ ಪ್ರಮಾಣದಲ್ಲಿ ತಮ್ಮಲ್ಲಿ ನಗದು ಇಟ್ಟುಕೊಳ್ಳಬೇಕು ಮತ್ತು ರಿಸರ್ವ್ ಬ್ಯಾಂಕಿನಲ್ಲಿ ಬಡ್ಡಿ ರಹಿತ ಠೇವಣಿ ಇಡಬೇಕು ಎಂದು ರಿಸರ್ವ್ ಬ್ಯಾಂಕ್ ನಿಗದಿ ಮಾಡಿರುತ್ತದೆ.

ಇದನ್ನೇ ‘ನಗದು ನಿಧಿ ಪ್ರಮಾಣ’ ಎನ್ನುವರು(Cash Reserve Ratio) ಇದನ್ನು ಕಳೆದ ವರ್ಷ ಶೇ.೪.೦೦ರಿಂದ ೩.೦೦ಕ್ಕೆ ಇಳಿಸಿದ್ದರಿಂದ ಬ್ಯಾಂಕುಗಳಿಗೆ ಸಾಲ ಕೊಡಲು ಹೆಚ್ಚು ನಗದು ಉಳಿಯುತ್ತದೆ. ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರ ಸರಕುಗಳ ಮತ್ತು ಸೇವೆಗಳ ತೆರಿಗೆಯಲ್ಲಿ (Goods and Services Tax ಜಿಎಸ್‌ಟಿ) ಸುಧಾರಣೆ ತಂದು ಹಲವು ನಿತ್ಯೋಪಯೋಗಿ ಮತ್ತು ಸೌಖ್ಯದ ಉತ್ಪನ್ನಗಳು ಮತ್ತು ಸೇವೆಗಳನ್ನು ಕೆಳಮಟ್ಟದ ದರಗಳ ಗುಂಪಿಗೆ ಸೇರಿಸಿದೆ. ಇದರಿಂದ ಅವುಗಳು ಕಡಿಮೆ ಬೆಲೆಯಲ್ಲಿ ದೊರೆಯುವಂತಾಗಿದೆ. ಅಂಥವುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬ್ಯಾಂಕ್ ಸಾಲಗಳಿಗೆ ಬೇಡಿಕೆ ಹೆಚ್ಚಾಗಲು ಇದೂ ಒಂದು ಕಾರಣ. ಬ್ಯಾಂಕ್ ಠೇವಣಿಗಳು ಮತ್ತು ಸಾಲಗಳು ಬ್ಯಾಂಕರರು ಬೇರೆಯವರ ಹಣದಲ್ಲಿ ವ್ಯವಹರಿಸುತ್ತಾರೆ ಮತ್ತು ಅದನ್ನು ತಮ್ಮದೆಂಬಂತೆ ವ್ಯವಹರಿಸುತ್ತಾರೆ ಎಂದು ಅರ್ಥಶಾಸಜ್ಞರು ಬಹಳ ಹಿಂದೆಯೇ ಹೇಳಿದ್ದಾರೆ. ಠೇವಣಿದಾರರು ಇಟ್ಟ ವಿವಿಧ ಠೇವಣಿಗಳೇ ಬ್ಯಾಂಕುಗಳಿಗೆ ಸಾಲ ಕೊಡಲು ಮತ್ತು ಶಾಸನಬದ್ಧ ಹೂಡಿಕೆಗಳನ್ನು ಮಾಡಲು ಅತಿ ಮುಖ್ಯ ಬಡವಾಳ. ಬ್ಯಾಂಕುಗಳ ಸ್ವಂತ ಬಂಡವಾಳ ಅತಿ ಕಡಿಮೆ ಮತ್ತು ನಗಣ್ಯ.

ಠೇವಣಿಗಳಲ್ಲಿ ‘ಕಾಸಾ’ ಎಂದೇ ಕರೆಯಲ್ಪಡುವ ಕರೆಂಟ್ ಅಕೌಂಟ್ ಮತ್ತು ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಠೇವಣಿಗಳು ಅತಿ ಕಡಿಮೆ ಬಡ್ಡಿ ವೆಚ್ಚದಲ್ಲಿ ಲಭ್ಯವಾಗುವ ಸಂಪನ್ಮೂಲ. ವಿವಿಧ ಸಾವಧಿ (Fixed Period) ಠೇವಣಿಗಳಿಗೆ ಅವಧಿ ಮತ್ತು ಇತರ ಕರಾರುಗಳಿಗನುಗುಣವಾಗಿ ಬೇರೆ ಬೇರೆ ದರಗಳಲ್ಲಿ ಬಡ್ಡಿ ಕೊಡಬೇಕಾಗುತ್ತದೆ. ಇವುಗಳ ಬಡ್ಡಿ ವೆಚ್ಚ ಹೆಚ್ಚು. ಒಟ್ಟು ಠೇವಣಿಗಳಲ್ಲಿ ‘ಕಾಸಾ’ ಖಾತೆಗಳ ಠೇವಣಿಗಳ ಪ್ರಮಾಣ ಹೆಚ್ಚಿದ್ದಷ್ಟೂ ಕೊಡುವ ಬಡ್ಡಿ ವೆಚ್ಚ ಕಡಿಮೆ ಇರುತ್ತದೆ. ಸಾವಧಿ ಠೇವಣಿಗಳ ಪ್ರಮಾಣ ಹೆಚ್ಚಾದಷ್ಟೂ ಬಡ್ಡಿ ವೆಚ್ಚ ಒಟ್ಟು ಠೇವಣಿಗಳ ಮೇಲೆ ಹೆಚ್ಚಾಗುತ್ತದೆ. ಪ್ರತಿಯೊಂದು ಬ್ಯಾಂಕಿನ ನೀತಿಯಂತೆ ಅದರ ಆರೋಗ್ಯಕರ ‘ಕಾಸಾ’ ಮತ್ತು ಸಾವಽ ಠೇವಣಿಗಳ ಪ್ರಮಾಣವನ್ನು ನಿಗದಿ ಮಾಡಿಕೊಳ್ಳಬೇಕಾಗುತ್ತದೆ.

ಎಲ್ಲ ಠೇವಣಿಗಳ ಮೇಲೆ ಕೊಡುವ ಬಡ್ಡಿ ವೆಚ್ಚ ಮತ್ತು ಹೂಡಿಕೆಗಳು ಮತ್ತು ಎಲ್ಲ ಸಾಲಗಳಿಂದ ಬರುವ ಒಟ್ಟು ಆದಾಯ ಇವೆರಡರ ನಡುವಿನ ಅಂತರವೇ ನಿವ್ವಳ ಬಡ್ಡಿ ಆದಾಯ(Net Interest Margin – ಎನ್.ಐ.ಎಂ.) ಎನ್‌ಐಎಂ  ಹೆಚ್ಚಿದಷ್ಟೂ ವ್ಯವಹಾರ ಸುಸ್ಥಿರ ಮತ್ತು ಸುರಕ್ಷಿತವಾಗಿದೆ ಎಂದು ಅರ್ಥೈಸಬಹುದು. ಠೇವಣಿಗಳು ಮತ್ತು ಸಾಲಗಳ ಸಂಬಂಧದ ಬಗ್ಗೆ ಒಂದು ಮಾತು ಹೇಳುವುದಾದರೆ ಒಟ್ಟು ಠೇವಣಿಗಳ ಶೇ.೭೫.೦೦ರ ಆಸು ಪಾಸಿನಲ್ಲಿ ಒಟ್ಟು ಸಾಲಗಳಿದ್ದರೆ ಅದು ಒಂದು ಮಾದರಿ ಸ್ಥಿತಿ ಎಂದು ತಜ್ಞರು ಹೇಳುತ್ತಾರೆ. ಸಾಲಗಳು ಇದಕ್ಕಿಂತಲೂ ಹೆಚ್ಚಾದರೆ ಬ್ಯಾಂಕುಗಳು ನಗದು ಕೊರತೆ ಅನುಭವಿಸಬೇಕಾದ ಸ್ಥಿತಿ ಉಂಟಾಗಿ ಹೆಚ್ಚು ವೆಚ್ಚ ಮಾಡಿ ಹಣ ಒದಗಿಸಬೇಕಾಗುತ್ತದೆ. ಒಂದು ವೇಳೆ ಅದಕ್ಕಿಂತ ಕಡಿಮೆಯಾದರೆ ದುಡಿಯದೇ ಇರುವ ನಗದು ಉಳಿದು ಆದಾಯ ಖೋತಾ ಆಗುತ್ತದೆ.

ಕಳೆದ ಏಪ್ರಿಲ್ ತಿಂಗಳಿನಿಂದಲೂ ಬ್ಯಾಂಕಿಂಗ್ ವಲಯದಲ್ಲಿ ಸಾಲಗಳ ಬೆಳವಣಿಗೆಯ ಪ್ರಮಾಣದಲ್ಲಿ ಠೇವಣಿಗಳು ಬೆಳೆಯುತ್ತಿಲ್ಲ ಎಂಬ ಕೂಗು ಕೇಳಿಬರುತ್ತಲೇ ಇತ್ತು. ಅದು ಡಿಸೆಂಬರ್ ಕೊನೆಯಲ್ಲಿ ಮುಗಿಯುವ ಮೂರನೇ ತ್ರೈಮಾಸಿಕದ ವರೆಗೂ ಮುಂದುವರಿದಿದೆ ಎಂದು ಈಚೆಗೆ ತಿಳಿದು ಬಂದಿದೆ. ಇಲ್ಲಿ ಕೊಟ್ಟಿರುವ ಪ್ರಮುಖ ಬ್ಯಾಂಕುಗಳಿಗೆ ಸಂಬಂಧಿಸಿರುವ ಸಂಖ್ಯಾಪಟ್ಟಿಯನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಒಂದು ಮಾತು: ಠೇವಣಿಗಳನ್ನು ಹೆಚ್ಚಿಸಲು ಬ್ಯಾಂಕುಗಳು ಕ್ರಮಗಳನ್ನು  ಕೈಗೊಳ್ಳಬೇಕಾಗುತ್ತದೆ. ಕೂಡಲೇ ಠೇವಣಿಗಳು ಹೆಚ್ಚಬೇಕು.

 

 

 

ಆಂದೋಲನ ಡೆಸ್ಕ್

Recent Posts

ಪ್ರೀತ್ಸೆ ಅಂತ ಹಿಂದೆ ಬಿದ್ದ ಪ್ರೇಮಿ : ಅಪ್ರಾಪ್ತೆ ನೇಣಿಗೆ ಶರಣು

ನಂಜನಗೂಡು : ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಗೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿಧ್ಯಾರ್ಥಿನಿ…

32 mins ago

ಚಾಮರಾಜ ಕ್ಷೇತ್ರದಲ್ಲೇ ಮನೆ, ಕಚೇರಿ ತೆರೆಯುವೆ : ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು : ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ರಾಷ್ಟ್ರ ಮಟ್ಟಕ್ಕೆ ಹೋಗಲಿಲ್ಲ ಅಂದ್ರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಆಗುತ್ತಾ?…

1 hour ago

ಅಭಿವೃದ್ಧಿಯಲ್ಲಿ ಸಿಎಂ ವಿಫಲ : ಸಂಸದ ಯದುವೀರ್‌

ಮೈಸೂರು : ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ…

1 hour ago

ರಂಗಾಯಣ | ಜ.11ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ; 24 ನಾಟಕಗಳ ಪ್ರದರ್ಶನ

ಮೈಸೂರು : ರಂಗಾಯಣದ ಮಹತ್ವಾಕಾಂಕ್ಷೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ‘ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಆಶಯದಡಿ ಜ.11 ರಿಂದ…

2 hours ago

ಕೋರ್ಟ್‌ನಿಂದ ತಡೆಯಾಜ್ಞೆ ತಂದು ರಾಜಕಾರಣ ಮಾಡ್ತಿಲ್ಲ : ಪ್ರತಾಪ್‌ ಸಿಂಹ ವಿರುದ್ಧ ಮಾಜಿ ಶಾಸಕ ಎಲ್‌.ನಾಗೇಂದ್ರ ಕಿಡಿ

ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಿನ್ನೆ(ಜ.6) ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಂಸದ ಪ್ರತಾಪ್…

2 hours ago

ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಸಾಟಿ ಇಲ್ಲ: ಎಂಎಲ್‌ಸಿ ಎಚ್.ವಿಶ್ವನಾಥ್‌

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತದೆಯೋ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು…

4 hours ago