ಅಂಕಣಗಳು

ಕೊಡಗಿನಲ್ಲಿದ್ದನೊಬ್ಬ ಚೆ ಗುವೆರ!

ಕೆ.ವಿ.ಸ್ಲ್ಯಾನ್ಲಿ

ಇದು ಎಂಬತ್ತರ ದಶಕದ ಕಥೆಯಲ್ಲದ ಜೀವನಗಾಥೆ. ದ್ವೀಪ ರಾಷ್ಟ್ರಸಿಂಹಳ ಮೂಲದ ಕುಟುಂಬವೊಂದು ಸಾಂಸ್ಕೃತಿಕ ಕರ್ನಾಟಕದಲ್ಲಿ ವಿಲೀನವಾಗಿ ಜೀವನ ನಡೆಸುತ್ತಿತ್ತು. ಈ ಕುಟುಂಬದಲ್ಲಿ ಜನಿಸಿದ ವಿಜಯಸಿಂಗ್ ರಾಯ್ ಡೇವಿಡ್ ಎಂಬ ಆಜಾನುಬಾಹು ಪದವೀಧರ ಯುವಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸುತ್ತಮುತ್ತ ಭೂರಹಿತರ ಪರವಾಗಿ ಹಾಗೂ ಜಮೀನ್ದಾರಿಕೆಯ ಅಟ್ಟಹಾಸದ ವಿರುದ್ಧ ಸಿಡಿದೆದ್ದು ಓಡಾಡುತ್ತಿದ್ದ. ಹಾಗೆಯೇ ಆತನ ಜೀವಕ್ಕಾಗಿ ಪಟ್ಟ ಭದ್ರ ಹಿತಾಸಕ್ತಿಗಳು ಅವನ ಹಿಂದೆ ಹೊಂಚು ಹಾಕುತ್ತಿದ್ದವು. ಆತನ ಬಡವರ ಪರವಾಗಿದ್ದ ಸಂಘಟನಾತ್ಮಕ ಹೋರಾಟ, ಬೈಕನ್ನೇರಿ ಕಾಡು – ಮೇಡುಗಳ ಓಡಾಟ, ಆತನ ಮೇಲಿನ ಹಲ್ಲೆಗಳು, ಅಪಘಾತಗಳು ಸಂಪರ್ಕ ಸಂವಹನಗಳಿಲ್ಲದ ಅಂದು ಹೇಗೋ ಗಡಿಗಳನ್ನು ದಾಟಿ ಚರ್ಚೆಯಾಗಿ ತೇಲಿ ಹರಿದಾಡುತ್ತಿದ ವು. ಕುಶಾಲನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಅಲ್ಲಿನ ವಿದ್ಯಾರ್ಥಿ ಸಂಘಟನೆ, ಕ್ರೀಡೆ, ಸಾಂಸ್ಕ ತಿಕ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಸದಾ ಸಕ್ರಿಯನಾಗಿರುತ್ತಿದ್ದೆ. ಆದರೂ ಅದುವರೆಗೂ ಯಾವುದೇ ಸಾಮಾಜಿಕ ಸೇವಾ ಸಂಸ್ಥೆಯ ಪರಿಚಯ ನನಗಿರಲಿಲ್ಲ. ಆ ಕಾಲದಲ್ಲೇ ರಾಯ್ ಡೇವಿಡ್‌ರವರ CORD (coorge organisation for rural devalopment) ಎಂಬ ಸಂಸ್ಥೆ ಕೆಲಸ ಮಾಡುತ್ತಿತ್ತು. ಪ್ರತಿದಿನ ಸುಂಟಿಕೊಪ್ಪದಿಂದ ಕುಶಾಲನಗರದ ಬಸ್ ನಿಲ್ದಾಣದಲ್ಲಿ ಇಳಿದು ಜೊತೆಗಾರರೊಂದಿಗೆ ಕಾಲ್ಚೆಂಡನ್ನು ತಳ್ಳಾಡಿಕೊಂಡು ಹಾರಂಗಿ ರಸ್ತೆಯಲ್ಲಿನ ಕಾಲೇಜು ದಾರಿ ಸವೆಸುವ ಸಮಯ ಕಾರ್ಡ್ ಸಂಸ್ಥೆಯ ಫಲಕ ನನ್ನ ಗಮನ ಸೆಳೆಯೋದು. ಏನದು ಅಂತ ತಿಳಿಯುವ ಕುತೂಹಲ ಇದ್ದರೂ ಸದ್ಯಕ್ಕೆ ಬೇಡ ಅನ್ನಿಸೋದು. ಕಾರಣ ಇದೆ. ಈ ಸಂಸ್ಥೆಯ ಸಹವಾಸ ಸ್ವಲ್ಪ ಡೇಂಜರ್! ಇವರೆಲ್ಲಾ ಗಡ್ಡ , ಜುಟ್ಟು ಇಳಿಬಿಟ್ಟು, ಜೋಳಿಗೆ ಸಂಚಿಯ ತುಂಬಾ ಪುಸ್ತಕ, ಕರಪತ್ರ ತುಂಬಿ, ಸದಾ ಕಾಡಿನೊಳಕ್ಕೆ ಓಡಾಡುವವರಂತೆ! ನಕ್ಸಲೈಟ್ ಗುಂಪುಗಳ ಒಡನಾಟವಂತೆ! ಕೈಗೆ ಸಿಕ್ಕರೆ ಮತಾಂತರ ಮಾಡಿ ಬಿಡ್ತಾರಂತೆ ! ಹೀಗೆ ನೂರಾರು ಹಾಗೆ ಹೀಗೆಗಳ, ಅಂತೆ ಕಂತೆಗಳ ಗರಿಗಳನ್ನು ಸುಟ್ಟ ಹಕ್ಕಿಗೆ ಅಂಟಿಸಿ ಕೊಡಗಿನಲ್ಲಿ ಜನ ಹಾರಿಸುತ್ತಿದ್ದರು. ಯಾರೊಬ್ಬರಿಗೂ ಅವರನ್ನು ನೇರವಾಗಿ ಅರಿಯುವ ವ್ಯವಧಾನವಿರಲಿಲ್ಲ; ಬೇಕಾಗಿಯೂ ಇರಲಿಲ್ಲ. ಕೊಡಗಿನ ಜೇನು ಕುರುಬ, ಸೋಲಿಗ, ಎರವ, ಕೊರವ ಮತ್ತಿತರ ಅರಣ್ಯ ವಾಸಿಗಳ ಸಂತತಿಯನ್ನು ಕೊಡಗಿನಲ್ಲಿನ ಉಳ್ಳವರ ಜೀತಗಯ್ಯುವುದಕ್ಕೆಂತಲೇ ಮೇಲಿನವ ಸೃಷ್ಟಿಸಿದ್ದಾನೆ ಎಂದೇ ತಿಳಿಸಿರುವ ಇಲ್ಲಿನ ಉಳ್ಳವರು ಈ ಕಟ್ಟಕಡೆಯ ಜನಗಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಜೀವಿಸುವ ಹಕ್ಕಿನ ನಿರ್ನಾಮಗಳ ಯಥಾಸ್ಥಿತಿವಾದವನ್ನು ಕಾಪಾಡಿಕೊಂಡೇ ಬಂದಿದ್ದರು. ಈ ಜನ ಸಶಕ್ತರಾ ಗುವುದು ಯಾರಿಗೂ ಬೇಡವಾಗಿತ್ತು. ಅಂತಹ ಸಂದರ್ಭದಲ್ಲಿ ಸಿಡಿದೆದ್ದು ಎಂಟ್ರಿ ಕೊಟ್ಟವರು ರಾಯ್ ಡೇವಿಡ್! ಭೂರಹಿತರ ಪರವಾದ ಹೋರಾಟಕ್ಕಾಗಿ ನಾನು ಅವರನ್ನು ಕಂಡಿರುವ ಮೊದಲೇ ಅವರ ಮೇಲೆ ಬಹಳಷ್ಟು ಹಲ್ಲೆಗಳು ನಡೆದಿದ್ದವು. ಫೀನಿಕ್ಸ್ ಹಕ್ಕಿಯಂತೆ ರಾಯ್ ಎದ್ದು ಬಂದದ್ದು ಕೊಡಗಿನ ಬುಡಕಟ್ಟು ಜನರಿಗೆ ಸಿಕ್ಕ ವರದಾನ! ಅವರನ್ನು ಇಲ್ಲವಾಗಿಸುವ ಪ್ರಯತ್ನವೊಂದರಲ್ಲಿ ನುಜ್ಜುಗುಜ್ಜಾಗಿ ಸಹಜ ಸ್ಥಿತಿಗೆ ಮರಳದ ರಾಯ್‌ರವರ ಒಂದು ಹಸ್ತ ಅಂದಿನ ಕ್ರೂರ ವ್ಯವಸ್ಥೆಯ ಕಥೆಯೊಂದನ್ನು ಹೇಳುತ್ತಿತ್ತು.

ರಾಯ್ ಮತ್ತು ಅವರ ಸಂಗಾತಿಗಳನ್ನು ಕಂಡ ಮೇಲೆ ಮಾನವೀಯ ಮೌಲ್ಯಗಳನ್ನಾಧರಿಸಿ ದಲಿತಪರ ಚಳವಳಿಯೊಂದನ್ನು ಕಟ್ಟುತ್ತಿದ್ದ ಸಂಸ್ಥೆಯೊಂದರ ಸಂಪೂರ್ಣ ಪರಿಚಯ ನನಗೆ ಸಿಕ್ಕಿತ್ತು. ಕೊಡಗಿನ ಅಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲವು ಎಡಪಂಥೀಯ ಕಾರ್ಮಿಕ ಸಂಘಟನೆಗಳನ್ನು ಹೊರತುಪಡಿಸಿ ಸಾಮಾಜಿಕ ಸಂಘಟನೆಗಳು ಅಂದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪವಾಗಿದ್ದವು. ಅಂಥದ್ದರಲ್ಲಿ ರಾಯ್ ಕಾರ್ಡ್ ಸಂಸ್ಥೆಯನ್ನು ಹುಟ್ಟು ಹಾಕಿ, ಹಲ್ಲೆ, ಅವಮಾನ, ಅನುಮಾನಗಳನ್ನು ಮೆಟ್ಟಿ ನಿಂತು ಬುಡಕಟ್ಟು ಜನರ ಧ್ವನಿಯಾಗಿ ಬದುಕಿದ್ದು ಒಂದು ದಂತಕತೆ! ಅವರ ಹೋರಾಟ ಕ್ಯೂಬಾ ದೇಶದ ಕ್ರಾಂತಿಕಾರಿ ಚೆ ಗುವೆರ ಅವರ ಮಾದರಿಯಲ್ಲಿತ್ತು. ಹಾಗಾಗಿ ಡೇವಿಡ್ ಅವರನ್ನು ಕೊಡಗಿನ ಚೆ ಗುವೆರ ಎಂದರೆ ಉತ್ಪ್ರೇಕ್ಷೆ ಅನಿಸದು.

ಬುಡಕಟ್ಟು ಜನಾಂಗಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಸ್ತಿತ್ವ ಮತ್ತು ಅಸ್ಮಿತೆಗಳ ಮಂಡನೆ ಮುಖ್ಯವಾಹಿನಿಯ ಮುಂದೆ ಪ್ರಬಲವಾಗಿ, ಪ್ರಖರವಾಗಿ ಸಾಬೀತುಪಡಿಸುವಲ್ಲಿ ರಾಯ್ ದರ್ಪಣದಂತೆ ಕಾರ್ಯ ನಿರ್ವಹಿಸುತ್ತಾ ಬಂದರು. ಕೇವಲ ಕೊಡಗು ಮಾತ್ರ ಅವರ ಕಾರ್ಯಕ್ಷೇತ್ರವಾಗಿ ಉಳಿಯಲಿಲ್ಲ. ಕರ್ನಾಟಕದ ಅಷ್ಟೂ ಅರಣ್ಯವಾಸಿಗಳು ಒಟ್ಟಾಗಿ ಆಳುವ ವರ್ಗಗಳಿಂದ ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ಟ್ರೈಬಲ್ ಜಾಯಿಂಟ್ ಆಕ್ಷನ್ ಫೋರಂ, ದಕ್ಷಿಣ ಭಾರತದ ಬುಡಕಟ್ಟು ಜನರ ‘ಸಂಗಮ’ ರಾಷ್ಟ್ರೀಯ ಬುಡಕಟ್ಟು ಜನ ಸಂಘಟನೆ ಮತ್ತಿತರ ಮಹತ್ತರ ರಾಜಕೀಯ ವೇದಿಕೆಗಳಿಗೆ ಸ್ಥಳೀಯ ಯುವಕರನ್ನು ಪರಿಚಯಿಸುತ್ತಾ ನಾಯಕತ್ವವನ್ನು ಬೆಳೆಸುತ್ತಾ ಸಾಗಿದರು. ನಾನು ಕಂಡಂತೆ ನಾಗರಹೊಳೆ ಅಭಯಾರಣ್ಯದ ನಡುವೆ ಅಂದಿನ ಸರ್ಕಾರ ರೆಸಾರ್ಟ್ ನಿರ್ಮಿಸಲು ತಾಜ್ ಕಂಪೆನಿಗೆ ಅವಕಾಶ ನೀಡಿದಾಗ ಕಾಡು ಕುರುಬರು ಹೆಜ್ಜೇನು ಹುಟ್ಟಂತೆ ಸದ್ದು ಮಾಡುತ್ತಾ ಎದ್ದಿದ್ದರು. ಆ ಪ್ರತಿಭಟನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವಲ್ಲಿ ಹಾಗೂ ಸ್ಥಳೀಯವಾಗಿ ನಿರ್ವಹಿಸುವಲ್ಲಿ ರಾಯ್ ಡೇವಿಡ್ ರವರ ಪಾತ್ರ ಮಹತ್ತರವಾದದ್ದು. ಈ ಪ್ರಕರಣದಲ್ಲಿ ರಾಯ್, ಡೀಡ್ ಸಂಸ್ಥೆಯ ಶ್ರೀಕಾಂತ್ ಮತ್ತಿತರರು ಜೈಲು ಪಾಲಾಗಿದ್ದರು. ಕಾಡು ಕುರುಬರಿಗೆ ಭೂಮಿಯ ಹಕ್ಕು ಕೊಡಿಸುವಲ್ಲಿ, ಹಲವಾರು ಕಾಡು ಕುರುಬ ಯುವಕರು ರಾಜ್ಯ ಹಾಗೂ ಸ್ಥಳೀಯ ರಾಜಕಾರಣದಲ್ಲಿ ಕಾಣಿಸಿಕೊಳ್ಳುವಲ್ಲಿ ಕಾರ್ಡ್ ಸಂಸ್ಥೆಯ ಪಾತ್ರವನ್ನು ಮರೆಯುವಂತಿಲ್ಲ. ಬುಡಕಟ್ಟು ಜನರ ಸಮಸ್ಯೆಗಳಷ್ಟೇ ಅಲ್ಲದೆ ರಾಯ್ ಪರಿಸರಕ್ಕಾಗಿ, ಸಂವಿಧಾನದ ಆಶಯಗಳ ಉಳಿವಿಗಾಗಿ, ರಾಷ್ಟ್ರೀಯ ಮತ್ತು ಜಾಗತಿಕ ರಾಜಕಾರಣದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಓಡಾಡುತ್ತಿದ್ದರು. ಈ ವಿಚಾರಗಳ ಕಾರಣ ಜಗತ್ತಿನ ಘಟಾನುಘಟಿ ವಿಚಾರವಂತರ ಮಹಾ ಸಮೂಹವೇ ಅವರ ಸಖ್ಯದಲ್ಲಿತ್ತು. ಅಂದಿನ ದಿನಗಳಲ್ಲಿ ಮಹಾನ್ ಚಿಂತಕರನ್ನು ಹೊಂದಿದ್ದ INSAF (ಇಂಡಿಯನ್ ನ್ಯಾಷನಲ್ ಸೋಶಿಯಲ್ ಆಕ್ಷನ್ ಫೋರಂ) ಅನ್ನು ಕರ್ನಾಟಕಕ್ಕೆ ವಿಸ್ತರಿಸಿ, ನಾವೆಲ್ಲರೂ ಒಳಗೊಳ್ಳುವಂತೆ ಮಾಡಿದ ಖ್ಯಾತಿ ರಾಯ್‌ರವರದ್ದು.

ಒಬ್ಬ ಪರಿಪೂರ್ಣ ಮಾನವತಾವಾದಿಯಾಗಿದ್ದ ರಾಯ್ ಡೇವಿಡ್‌ರಿಗೆ ಪರಿಸರದಲ್ಲಿನ ಪ್ರತಿಯೊಂದನ್ನೂ, ಪ್ರತಿಯೊಬ್ಬರನ್ನೂ, ಪ್ರೀತಿಸುವ, ಗೌರವಿಸುವ ಸೂಕ್ಷ್ಮ ಸಂವೇದನೆ ಹುಟ್ಟಿನಿಂದಲೇ ಬಂದಿತ್ತು ಅನಿಸುತ್ತೆ. ಅದರಲ್ಲೂ ದಲಿತರ ಮತ್ತು ಬುಡಕಟ್ಟು ಜನರ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ಇವೆಲ್ಲವನ್ನೂ ಅರೆದು ಕುಡಿದು ತನ್ನದಾಗಿಸಿಕೊಂಡಿದ್ದರು. ಈ ದೇಶವನ್ನು ಬಾಽಸುತ್ತಿರುವ ಧರ್ಮ ಅಸಹಿಷ್ಣುತೆ, ಜಾತಿ ವ್ಯವಸ್ಥೆ, ಭ್ರಷ್ಟ ರಾಜಕಾರಣ, ಅವಕಾಶ ವಂಚಿತರನ್ನು ನಡೆಸಿಕೊಳ್ಳುವ ಸಮಾಜದ ಕ್ರೌರ್ಯದ ವಿರುದ್ಧ ಅವರ ರಕ್ತ ಸದಾ ಕುದಿಯುತ್ತಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಕೊಂಕಣಿ, ಸ್ಥಳೀಯ ಕೊಡವ ಭಾಷೆ, ಅರೆ ಭಾಷೆ, ಮಲಯಾಳಂ, ತಮಿಳು, ತುಳು, ಬುಡಕಟ್ಟು ಜನರ ಜೇನು ನುಡಿ, ಸೋಲಿಗರ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡ ಬಲ್ಲವರಾಗಿ, ವಿವಿಧ ಆಹಾರ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡಿದ್ದುದು ಅವರ ಬಹುಜನ ಪ್ರೀತಿಯನ್ನು ತೋರುತ್ತಿತ್ತು. ವರ್ತಮಾನದಲ್ಲಿ ಬದುಕುತ್ತಿದ್ದ ರಾಯ್ ಆಧುನಿಕ ಬದುಕಿಗೆ ಬೇಕಾದ ತಾಂತ್ರಿಕತೆಗೆ ಹೊಂದಿಕೊಂಡು ತಮ್ಮ ಹೋರಾಟ, ಓಡಾಟದ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡಿದ್ದರು. ಹೊಸದಾಗಿ ಮಾರುಕಟ್ಟೆಗಿಳಿಯುವ ಜೀಪುಗಳು, ಕ್ಯಾಮೆರಾ ಪರಿಕರಗಳು (ಛಾಯಾಗ್ರಹಣ ಅವರ ನೆಚ್ಚಿನ ಹವ್ಯಾಸ), ಕಂಪ್ಯೂಟರ್ ಇವೆಲ್ಲವೂ ಅವರ ಬೆರಳ ನಡುವಿನ ಸಿಗರೇಟಿನಂತೆಯೇ ಅವರ ಬದುಕಿನ ಭಾಗವಾಗಿದ್ದವು. ಬರವಣಿಗೆ ಯನ್ನು ಹೊರತುಪಡಿಸಿದ್ದಲ್ಲಿ, ಅಧ್ಯಯನಶೀಲತೆ, ವೈಜ್ಞಾನಿಕ ಹಾಗೂ ಸಾಂವಿಧಾನಿಕ ನಿಲುವು, ಸ್ವಯಂ ನಿರ್ಧಾರ, ಕಾಡು – ಮೇಡು ಪರಿಸರದ ಪ್ರೇಮ, ಕೃಷಿಯ ಕಡೆಗಿನ ಒಲವು, ಸದಾ ಪ್ರವಹಿಸುತ್ತಿದ್ದ ಪ್ರಯಾಣದ ಹುಚ್ಚು, ತನ್ನಿಚ್ಛೆಯ ಮಿತವಾದ ಆಹಾರ ಸೇವನೆ, ಹಿತವಾದ ಉಡುಗೆ, ಅದಮ್ಯ ಜೀವನ ಪ್ರೀತಿ, ತಾಂತ್ರಿಕ ಜಗತ್ತು ಮತ್ತು ಆಧುನಿಕ ಪೀಳಿಗೆಗೆ ಸದಾ ತೆರೆದುಕೊಂಡಿರುತ್ತಿದ್ದ ರಾಯ್ ಡೇವಿಡ್ ರವರ ಜೀವನ ಪೂರ್ಣಚಂದ್ರ ತೇಜಸ್ವಿ ರವರ ಜೀವನದಷ್ಟೇ ಸುಂದರವಾದದ್ದು. ರಾಯ್ ಜೊತೆ ಪ್ರಯಾಣ ಹೋಗುವುದೆಂದರೆ ನಾವು ಎಲ್ಲವನ್ನೂ ಮರೆತಂತೆಯೇ! ವಾಪಸು ಬರುವ ದಿನ ನಿಗದಿಯಾಗಿರುತ್ತಿರಲಿಲ್ಲ. ಅನಿರೀಕ್ಷಿತವಾಗಿ ದೇಶದ ಮಾತ್ಯಾವುದೋ ದಿಕ್ಕಿನೆಡೆ ವಾಹನ ಚಲಿಸುತ್ತಿತ್ತು. ಎರಡು ಬಾರಿ ಹೃದಯಾಘಾತಗಳನ್ನು ಎದೆಯೊಡ್ಡಿ ಅನುಭವಿಸಿದ್ದ ರಾಯ್ ಚೇತರಿಸಿಕೊಂಡಿದ್ದರು, ಹೋರಾಟ, ಜನರ ಸಾಮೀಪ್ಯವಿಲ್ಲದ ಬದುಕೊಂದು ಬದುಕೇ? ಎನ್ನುತ್ತಾ ಕಳೆದ ವಾರ ಮತ್ತೆ ಪ್ರಯಾಣಕ್ಕಿಳಿದು ಶಿವಮೊಗ್ಗ ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ತೆರಳಿ ಅಲ್ಲಿಂದ ಮತ್ತೆ ಬೆಂಗಳೂರಿನ ಸಭೆಗೆಂದು ಹೋಗಿದ್ದರು. ತಮಗಾಗಿ ತಮ್ಮ ಪರಿವಾರಕ್ಕಾಗಿ ರಾಯ್ ತಮ್ಮ ನಿರ್ಧಾರದ ಬಗ್ಗೆ ಮರು ಯೋಚಿಸಬೇಕಾಗಿತ್ತು ಎಂಬುದು ಪ್ರಯೋಜನಕ್ಕೆ ಬಾರದ ವಿಷಯ. ಆದರೆ ಹೀಗೆ ದಣಿದು ಮತ್ತೊಮ್ಮೆ ಹೃದಯಾಘಾತಕ್ಕೊಳಗಾದ ಹೃದಯವಂತ ಅಪಾರ ಸ್ನೇಹವಲಯವನ್ನು ಅಗಲಿ ಹೋದದ್ದು ಅತೀವ ದುಃಖವನ್ನು ತರಿಸಿದೆ. ಕಾಲೇಜು ದಿನಗಳಿಂದ ನಾನು ಕಂಡ, ಪ್ರೀತಿಸಿದ, ಅವರ ಸಾಮಾಜಿಕ ಕಾಳಜಿಯನ್ನು ಗೌರವಿಸಿ ಅವರೊಂದಿಗೆ ನೂರಾರು ಹಗಲು ರಾತ್ರಿಗಳನ್ನು ಕಳೆದ ಹುಟ್ಟು ಹೋರಾಟಗಾರ, ಹಸನ್ಮುಖಿ, ಮೃದು ಹಾಸ್ಯಪ್ರಿಯ, ಸ್ನೇಹಕ್ಕಾಗಿ ಕಾತರಿಸುತ್ತಾ ಜೀವನ್ಮುಖಿಯಾಗಿದ್ದ ರಾಯಣ್ಣಾ, ನೀವು ಇದ್ದಷ್ಟು ದಿನ ರಾಜಿಯಿಲ್ಲದ, ಲಾಬಿಯಿಲ್ಲದ ಸೇವೆ ಸಲ್ಲಿಸಿ ಪ್ರಾಮಾಣಿಕವಾದ ಧ್ವನಿಯಾಗಿ ಉಳಿದಿರಿ. ಸಾರ್ಥಕ ಜೀವನ ನಡೆಸಿದ್ದೀರಿ. ಇನ್ನು ಮುಂದೆ ನಿಮ್ಮನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾದದ್ದು ಈ ಸಮಾಜದ ಜವಾಬ್ದಾರಿಯಷ್ಟೇ. ಹೋಗಿ ಬನ್ನಿ. .

ಆಂದೋಲನ ಡೆಸ್ಕ್

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

9 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

10 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

12 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

12 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

15 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

16 hours ago