ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು

ಎಸ್.ಗಂಗಾಧರಯ್ಯ

ಎನ್.ಎಸ್.ಶಂಕರ್ ನನಗೆ ಮೊದಲು ಪರಿಚಯ ಆಗಿದ್ದು ಗೆಳೆಯ ಕೆ.ಎಸ್. ಕೇಶವಪ್ರಸಾದ್‌ನ ರೂಮಿನಲ್ಲಿ. ನಾನಾಗ ಮೈಸೂರಿನ ಮಾನಸಗಂಗೋತ್ರಿಯಲ್ಲಿದ್ದೆ. ಅವತ್ತೊಂದಿನ ಕ್ಲಾಸ್ ಮುಗಿಸಿಕೊಂಡು ಗೆಳೆಯನ ರೂಮಿಗೆ ಬರುವ ಹೊತ್ತಿಗೆ ಎನ್. ಎಸ್.ಶಂಕರ್ ಅಲ್ಲಿದ್ದರು.

‘ಇವ್ರು ಎನ್.ಎಸ್. ಶಂಕರ್. ಇಬ್ರೂ ‘ಮುಂಗಾರು’ ಪತ್ರಿಕೇಲಿ ಒಂದಷ್ಟು ದಿನ ಒಟ್ಗೇ ಕೆಲ್ಸ ಮಾಡಿದ್ವಿ’ ಅಂತ ಪ್ರಸಾದ್ ಪರಿಚಯಿಸಿದ್ದ. ಆ ದಿನ ಶಂಕರ್ ಅಲ್ಲೇ ಉಳಿದಿದ್ದರು. ಸಾಹಿತ್ಯ, ಸಿನೇಮಾ, ಚಳವಳಿ, ಗಾಂಧಿ, ಅಂಬೇಡ್ಕರ್, ‘ಮುಂಗಾರು’ವಿನ ದಿನಗಳು ಮುಂತಾಗಿ ಸರ‍್ಹೊತ್ತಿನವರೆಗೂ ಮಾತುಕತೆ ಸಾಗಿತ್ತು. ಹಿಂಗೆ ಶುರುವಾಗಿದ್ದ ಗೆಳೆತನಕ್ಕೆ ಯಾವ ಹಮ್ಮು ಬಿಮ್ಮುಗಳಿರಲಿಲ್ಲ. ಎಷ್ಟೋ ವರ್ಷಗಳಿಗೊಮ್ಮೆ ನಮ್ಮ ಭೇಟಿಯಾಗುತ್ತಿತ್ತು. ಪ್ರತಿ ಭೇಟಿಯಲ್ಲೂ ನನಗೆ ಮೊದಲ ದಿನದ ಅದೇ ಶಂಕರ್ ಸಿಗುತ್ತಿದ್ದರು. ಅದೇ ಆ ನಗು. ಅದೇ ಮೆಲುದನಿ. ಅದೇ ಆ ಪ್ರೀತಿ ತುಂಬಿದ ಮೊಗ. ಅಪಾರ ಓದು, ಹೊಸ ಹುಡುಕಾಟಗಳು, ಸ್ಪಷ್ಟ ತಿಳಿವಳಿಕೆ, ತಾತ್ವಿಕ ನಿಲುವು, ಮಾತು ಮತ್ತು ಬರವಣಿಗೆಯಲ್ಲಿನ ನಿಖರತೆ, ಚಂದದ ಗದ್ಯ, ಅನುವಾದದ ಆಯ್ಕೆ, ಸಾಮಾಜಿಕ ಬದ್ಧತೆ, ಭಿನ್ನವಿಲ್ಲದ ನಡೆ ನುಡಿ, ಜನಪರ ಮತ್ತು ಜೀವಪರ ತುಡಿತದ ಕಾರಣಕ್ಕೆ ಅವರು ನನ್ನಂಥವರಿಗೆ ಅಂತರಂಗದ  ಗೆಳೆಯರಾಗಿಬಿಡುತ್ತಿದ್ದರು. ಆದರೆ ಈ ಯಾವುದೂ ಅವರಿಗೆ ತೋರ್ಪಡಿಕೆಯ ಸಂಗತಿಗಳಾಗಿರಲಿಲ್ಲ. ಬದುಕು ಮತ್ತು ಆಲೋಚನಾ ಕ್ರಮಗಳಾಗಿದ್ದವು. ಒಬ್ಬ ಒಳ್ಳೆಯ ಲೇಖಕ, ಒಂದು ಜನಪರ ಮನಸ್ಸು, ಒಬ್ಬ ನಿಜ ಪತ್ರಕರ್ತ ಹೆಂಗಿರಬೇಕು, ಒಬ್ಬ ಒಳ್ಳೆಯ ಸಾಕ್ಷ್ಯ ಚಿತ್ರಕಾರ, ಒಬ್ಬ ಒಳ್ಳೆಯ ಸಿನೇಮಾ ನಿರ್ದೇಶಕ, ಒಬ್ಬ ನಿಡುಗಾಲದ ಚಳವಳಿಯ ಸಖ, ಒಬ್ಬ ಅತ್ಯುತ್ತಮ ಓದುಗ ಹೆಂಗಿರಬೇಕು ಅನ್ನುವುದಕ್ಕೆ ಶಂಕರ್ ನಿದರ್ಶನವಾಗಿದ್ದರು. ಅವರ ‘ಚಂಚಲೆ’, ‘ಹುಡುಕಾಟ’ ‘ಅರಸು ಯುಗ’ ‘ಉಸಾಬರಿ’ ‘ಚಿತ್ರ ಸಲ್ಲಾಪ’ ಮುಂತಾದ ಬರಹಗಳು, ‘ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆಗಳು’, ‘ಬಾಪೂ’ ಮತ್ತು ರೈತರ ಆತ್ಮಹತ್ಯೆಗಳನ್ನಾಧರಿಸಿದ ‘ರೈತ ಬಲಿ’ ಸಾಕ್ಷ್ಯ ಚಿತ್ರಗಳ ಸರಣಿಗಳು, ‘ಉಲ್ಟಾ ಪಲ್ಟಾ’ದಂಥ ಸಿನೇಮಾ, ‘ಮುಟ್ಟಿಸಿಕೊಂಡವನು’ ಥರದ ಕಿರುಚಿತ್ರಗಳು, ‘ಬ್ರಾಹ್ಮಣ ಧರ್ಮದ ದಿಗ್ವಿಜಯ’ ಮುಂತಾದ ಅನುವಾದಗಳು, ‘ಲಂಕೇಶ್ ಪತ್ರಿಕೆ’ಯ ತೀಕ್ಷ್ಣ ವರದಿಗಳು ಶಂಕರ್‌ರ ಅಗಾಧ ಪ್ರತಿಭೆಯ ಕೈಮರಗಳು.

ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರನ್ನೂ ಮಹಾನದಿಗಳೆಂದು ನಂಬಿದ್ದವರು. ಇವರಿಬ್ಬರ ಬಗ್ಗೆ ಅಗಾಧ ಒಳನೋಟಗಳನ್ನು ಹೊಂದಿದ್ದವರು. ಯಾವತ್ತೂ ಅವರು ತೋರಿಕೆಯ ಬದುಕು ಬದುಕಲಿಲ್ಲ. ಆದರೆ ನೆಲದ ಹೂವಿನಂಥ ಘಮವನ್ನು ಕಳೆದುಕೊಳ್ಳಲಿಲ್ಲ. ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ಹೇಳಿಕೊಳ್ಳುವಷ್ಟು ಅಸೂಕ್ಷ್ಮತೆಯೂ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು. ಅಧಿಕಾರ, ಪ್ರಶಸ್ತಿಗಳಿಗಾಗಿ ವಶೀಲಿಗಿರಿ ಮಾಡಿದವರಲ್ಲ. ಎದೆಯ ದನಿಯನ್ನೇ ದಾರಿದೀಪವಾಗಿಸಿಕೊಂಡು ತಮ್ಮ ಅಗಾಧ ಜೀವನ ಪ್ರೀತಿ ಮತ್ತು ಜೀವಪರತೆಯಿಂದಾಗಿ ತಾವು ತೊಡಗಿಸಿಕೊಂಡಿದ್ದ ಅಷ್ಟೂ ಕ್ಷೇತ್ರಗಳಲ್ಲಿ ಆತ್ಮಸಾಕ್ಷಿ, ಕುತೂಹಲ ಮತ್ತು ಎಚ್ಚರದ ಕಣ್ಣುಗಳು ಬಳಲದಂತೆ ಕಾಪಾಡಿಕೊಂಡಿದ್ದರು.

ಆ ಮೂಲಕ ಆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಮಾದರಿಯಾಗಿದ್ದರು. ಶಂಕರ್ ‘ಸುದ್ದಿ ಟಿ.ವಿ’ಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ತಿಪಟೂರಿನಲ್ಲಿ ರೈತರಿಗೆ ವರ್ತಕರು ಮಾಡುತ್ತಿದ್ದ ಮೋಸ, ಒಳ ವ್ಯವಹಾರಗಳ ವಿರುದ್ಧ ಹಾಗೂ ಕೊಬ್ಬರಿಗೆ ಬೆಂಬಲ ಬೆಲೆಗೋಸ್ಕೋರ ಇಲ್ಲಿನ ರೈತ ಸಂಘ ದೊಡ್ಡದೊಂದು ಚಳವಳಿಯನ್ನು ರೂಪಿಸಿತ್ತು. ಜೊತೆಗೆ ಬೃಹತ್ ಜಾಥಾವೊಂದನ್ನು ಆಯೋಜಿಸಿತ್ತು. ಇದು ತಿಳಿಯುತ್ತಲೇ ಜಾಥಾದ ಹಿಂದಿನ ದಿನವೇ ಶಂಕರ್ ಸಹಾಯಕರೊಂದಿಗೆ ತಿಪಟೂರಿಗೆ ಬಂದಿದ್ದರು. ಚಳವಳಿಗಳೆಲ್ಲಾ ಹಲವು ಕಾರಣಕ್ಕೆ ಬಣ್ಣ ಕಳೆದುಕೊಳ್ಳುತ್ತಿರುವಾಗ ತಿಪಟೂರಿನ ಚಳವಳಿಯು ಚಳವಳಿಗಳ ಸಖನಾಗಿದ್ದ ಶಂಕರ್‌ಗೆ ಅಪಾರ ಖುಷಿ ಮತ್ತು ಭರವಸೆಯನ್ನು ಕೊಟ್ಟಿತ್ತು. ಕಡಿದಾಳ್ ಶಾಮಣ್ಣನವರು ಜಾಥಾವನ್ನು ಉದ್ಘಾಟಿಸಿದ್ದರು.

‘ಏನ್ ಗಂಗಾಧರ್, ಇಷ್ಟು ಜನ, ಇಷ್ಟು ಇನ್ವಾಲ್‌ಮೆಂಟ್’ ಚಳವಳಿಗಳ ಕಾಲ ಮುಗ್ದ್ಹೋಯ್ತು ಅಂತ ಯಾರ್ರೀ ಹೇಳಕಾಗುತ್ತೆ ಇದನ್ನ ನೋಡಿದ್ರೆ?’ ಅಂತ ಶಂಕರ್ ಭಾವುಕರಾಗಿದ್ದರು. ಇನ್ನೇನು ಜಾಥಾ ಅಲ್ಲಿಂದ ಪ್ರಾರಂಭ ಆಗಬೇಕು ಅನ್ನುವಷ್ಟರಲ್ಲಿ ಶಂಕರ್ ತಾವೇ ಒಂದಷ್ಟು ಕೆ.ಜಿ. ಕೊಬ್ಬರಿಯನ್ನು ಗರಿಷ್ಟ ಬೆಲೆಗೆ ಕೊಂಡುಕೊಂಡು ರೈತರನ್ನು ಹುರಿದುಂಬಿಸಿದ್ದರು. ಹಿಂಗೆ ಈ ಜಾಥಾ ಎರಡು ದಿನಗಳಲ್ಲಿ ತುಮಕೂರನ್ನು ತಲುಪುವ ಹೊತ್ತಿಗೆ ರಾಜ್ಯ ರೈತ ನಾಯಕನೊಬ್ಬನ ಪಿತೂರಿಗೆ ಅದು ತುಮಕೂರಿಗೇ ಕೊನೆಗೊಂಡಿತ್ತು. ಆದರೂ ನಮ್ಮಲ್ಲಿ ಕೆಲವರನ್ನು ಸುದ್ದಿ ಟಿ.ವಿ.ಯ ಪ್ಯಾನಲ್ ಡಿಸ್ಕಷನ್‌ಗೆ ಕರೆದು ತಿಪಟೂರಿನ ಚಳವಳಿಯನ್ನು ನಾಡಿನ ಜನತೆಗೆ ತಿಳಿಸುವಂಥ ಹಾಗೂ ಆ ಮೂಲಕ ಚಳವಳಿಗಳನ್ನು ಪ್ರೇರೇಪಿಸುವಂಥ ಕೆಲಸ ಮಾಡಿದ್ದರು.ಬೆಂಗಳೂರಿನಲ್ಲಿ ನಡೆದ ಈ ಸಲದ ಅಂತರರಾಷ್ಟ್ರೀಯ ಚಿತ್ರೋತ್ಸವ ನಮ್ಮಿಬ್ಬರ ಕಟ್ಟಕಡೆಯ ಭೇಟಿಯಾಗಿತ್ತು. ಇಬ್ಬರೂ ಆಗಷ್ಟೇ ‘ನಮ್ ಸಾಲಿ’ ಸಿನೇಮಾವನ್ನು ನೋಡಿ ಆಚೆ ಬಂದಿದ್ದೆವು. ಇನ್ನಷ್ಟು ಬಿಗಿಗೊಳಿಸಬಹುದಿತ್ತು, ಇನ್ನೊಂದಷ್ಟು ಸಮಯ ಕಡಿಮೆ ಮಾಡಬಹುದಿತ್ತು ಅಂತ ಅವರಿಗೆ ಅನಿಸಿದಂತೆ ನನಗೂ ಅನಿಸಿತ್ತು. ಆ ಚಿತ್ರದಲ್ಲಿ ಅಜ್ಜಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದ, ಚಿತ್ರದ ಬಿಡುಗಡೆಗೂ ಮುನ್ನವೇ ತೀರಿಕೊಂಡಿದ್ದ ಹನುಮಕ್ಕನ ಬಗ್ಗೆ ಮಾತಾಡಿಕೊಂಡಿದ್ದೆವು. ಶಂಕರ್ ಅವರ ಉತ್ಸಾಹ ಎಂದಿನಂತಿರಲಿಲ್ಲ. ಮೈ ಮನಸ್ಸುಗಳ ದಣಿವು ಮುಖದಲ್ಲಿ ಇಣುಕಾಡುತ್ತಿತ್ತು.

ಸಂಗಾತಿಯನ್ನು ಕಳೆದುಕೊಂಡಿದ್ದ ನೋವಿನ ಅಧೀನತೆಯಿಂದ ಅವರಿನ್ನೂ ಆಚೆ ಬರಲಾಗಿರಲಿಲ್ಲ. ಶಂಕರ್ ಅವರ ಶ್ರೀಮತಿಯವರು ತೀರಿಕೊಂಡಾಗ ಶಂಕರ್ ಅವರನ್ನು ಕಾಣಬೇಕಿತ್ತು. ಕಡೇಪಕ್ಷ ಮಾತನಾಡಿಸಬೇಕಿತ್ತು ಅನ್ನುವ ಅಪರಾಧಿ ಭಾವವೊಂದು ಆ ಕಡೆಯ ಭೇಟಿಯಲ್ಲಿ ನನ್ನನ್ನು ಕಾಡುತ್ತಿತ್ತು. ಆದರೆ ಸಾವಿನ ನೋವಿನಲ್ಲಿರುವವರಿಗೆ ಏನು ಮಾತಾಡಿದರೂ ಅದು ತೋರಿಕೆಯ ಮಾತಾಗಿಬಿಡುತ್ತದೆ ಅನ್ನುವ ಅಳುಕು ನನ್ನನ್ನು ಕಟ್ಟಿ ಹಾಕಿತ್ತು. ಆ ನೆಪದಲ್ಲಿ ಕಡೆಯ ಸರ್ತಿ ಸಿಕ್ಕಾಗಲೂ ಅದನ್ನು ನೆನಪಿಸಿ ನೋವುಂಟು ಮಾಡಲು ಮನಸ್ಸಾಗಿರಲಿಲ್ಲ. ಸ್ವಲ್ಪ ದಿನ ಕಳೆಯಲಿ ಮತ್ತೆ ಮಾತನಾಡುವ ಅಂತ ಮುಂದಕ್ಕ್ಹಾಕಿಕೊಂಡಿದ್ದೆ. ಆದರದಕ್ಕೆ ಆಸ್ಪದವೀಯದಂತೆ ಶಂಕರ್ ಹೋಗಿಯೇಬಿಟ್ಟರು

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

11 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

12 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

12 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

13 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

13 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

17 hours ago