ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು
ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ ನಿಲುವುಗಳಿಂದ. ಅವರು ಎಷ್ಟೋ ಬಾರಿ ತಮ್ಮ ಕೃತಿ ರಚನೆಯನ್ನು ಬದಿಗಿಟ್ಟು ಜನಪದ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಹೊಂದಿದ ವ್ಯಕ್ತಿಗಳು ತೀರಿಕೊಂಡಾಗ, ಅವರುಗಳ ಬಗ್ಗೆ ಬರೆಯುವಾಗ ಅಥವಾ ಅವರ ಕಾರ್ಯ ಸಾಧನೆಗಳ ಬಗ್ಗೆ ಮಾತಾಡುವಾಗ ಒಂದು ರೀತಿಯ ದ್ವಂದ್ವತೆ ಆವರಿಸಿಕೊಳ್ಳುತ್ತದೆ, ಅವರ ನ್ಯೂನತೆಗಳನ್ನು ಮಾಫೀ ಮಾಡಿ ಬರೀ ಹೊಗಳಿಕೆಗಳನ್ನು ಶುರು ಮಾಡಿ ಬಿಡುತ್ತಾರೆ. ವಸ್ತುನಿಷ್ಠವಾಗಿ, ನಿಷ್ಠೂರವಾಗಿ ಹೇಳಲಾರ ದಂಥಾ ಸ್ಥಿತಿಯೊಂದನ್ನು ನಿರ್ಮಿಸಿ ಬಿಡುತ್ತಾರೆ.
ನಾನು ಈ ಲೇಖನ ಆರಂಭಿಸುವಾಗ ಈ ರೀತಿಯ ಒಂದು ಜಿಜ್ಞಾಸೆಗೆ ಸಿಲುಕಿಕೊಂಡೆ. ಕೆ.ಟಿ.ಶಿವಪ್ರಸಾದ್ ಅವರು ಮೂಲತಃ ಚಿತ್ರಕಲಾವಿದರಾಗಿದ್ದೂ ರೈತ ಸಂಘ, ದಲಿತ ಸಂಘರ್ಷ ಸಮಿತಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಬಾಹ್ಯ ಸಮಾಜಕ್ಕೆ ತೆರೆದುಕೊಂಡವರು. ಆಂತರ್ಯ ಮತ್ತು ಬಾಹ್ಯದ ಸಂಘರ್ಷಗಳನ್ನು, ವೈವಿಧ್ಯತೆಗಳನ್ನು ಅವರ ಬದುಕಿನುದ್ದಕ್ಕೂ ಕಾಣ ಬಹುದು. ಶ್ರೀಮಂತ ವರ್ಗದಿಂದ ಬಂದ ಅವರು ಆಯ್ದುಕೊಂಡ ಕಾರ್ಯ ಕ್ಷೇತ್ರಗಳು ಅಚ್ಚರಿಯನ್ನು ಹುಟ್ಟುಹಾಕುತ್ತವೆ. ಒಬ್ಬ ಕೈಗಾರಿಕೋದ್ಯಮಿಯ ಮಗನಾಗಿ ಹುಟ್ಟಿ, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರು ಅದನ್ನು ಅರ್ಧಕ್ಕೇ ಬಿಟ್ಟು ಮುಂಬಯಿಯ ಜೆ ಜೆ ಸ್ಕೂಲ್ ಆಫ್ ಆರ್ಟ್ಸ್ ಸೇರಿ ಕಲಾ ವ್ಯಾಸಂಗ ಮಾಡಿದರು. ಮುಂಬಯಿಯಿಂದ ಹಿಂತಿರುಗಿದ ಅವರು ಯಾವುದಾದರೊಂದು ಸಿಟಿ ಸೇರಿ ದೊಡ್ಡ ಕಲಾವಿದರಾಗಿ ಹೆಸರು ಮಾಡಬಹುದಿತ್ತು,
ಅವರಿಗೆ ಹಣ, ಆಸ್ತಿಯ ಕೊರತೆ ಏನಿರಲಿಲ್ಲ. ಆದರೆ ಅವರು ವಾಪಸ್ ಆಗಿದ್ದು ಹಾಸನಕ್ಕೆ. ಹಾಸನದಲ್ಲಿದ್ದುಕೊಂಡೇ ತಮ್ಮ ಕಲಾ ಕೃಷಿಯನ್ನು ಆರಂಭಿಸಿದ ಅವರಿಗೆ, ಪ್ರೊಫೆಸರ್ ನಂಜುಂಡ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಮತ್ತು ಲಂಕೇಶರ ಸಂಪರ್ಕದಿಂದಾಗಿ ಬದುಕನ್ನು ನೋಡುವ, ಗ್ರಹಿಸುವ ಕ್ರಮವೇ ಬದಲಾಗಿಬಿಟ್ಟಿತು. ಈ ರೀತಿಯ ವಿಸ್ಮಯಗಳು ಜಗತ್ತಿನ ಹಲವೆಡೆ ನಡೆದ ಉದಾಹರಣೆಗಳು ಸಾಕಷ್ಟಿವೆ. ಆದರೆ ಭಾರತದಲ್ಲಿ ವಿರಳ. ಜಗತ್ಪ್ರಸಿದ್ಧ ಜರ್ಮನ್ ಕವಿ ರಿನೆ ಮಾರಿಯಾ ರಿಲ್ಕೆ ಜಗತ್ಪ್ರಸಿದ್ಧ ಫ್ರೆಂಚ್ ಶಿಲ್ಪಿ ರೊಡನ್ ಮತ್ತು ಫ್ರೆಂಚ್ ಚಿತ್ರಗಾರ ಸೇಝಾನ್‌ರ ಸಂಪರ್ಕಕ್ಕೆ ಬಂದ ನಂತರ ತನ್ನ ನೋಡುವ ದೃಷ್ಟಿಕೋನವನ್ನೇ ಬದಲಿಸಿಕೊಂಡು ಶ್ರೇಷ್ಠ ಕವಿಯಾದ. ಹೀಗೆ ಒಬ್ಬರು ಇನ್ನೊಬ್ಬರನ್ನು ಸೇರುವುದರಿಂದ ಇನ್ನೇನೋ ಆಗುವುದು ಈ ಬದುಕಿನ ಸೋಜಿಗ. ಶಿವಪ್ರಸಾದರು ಚಿತ್ರಕಲೆಗಷ್ಟೇ ತಮ್ಮನ್ನು ತಾವು ಮಿತಿಗೊಳಿಸದೆ ಫೋಟೋಗ್ರಫಿ ಮತ್ತು ವಾಸ್ತುಶಿಲ್ಪದವರೆಗೂ ತಮ್ಮ ಕಲಾ ಕ್ಷೇತ್ರವನ್ನು ಹಿಗ್ಗಿಸಿಕೊಂಡರು. ಹಾಗೇ ರೈತ ಚಳವಳಿ, ದಲಿತ ಚಳವಳಿಗಳವರೆಗೆ.ಕನ್ನಡ ಸಾಹಿತ್ಯದ ನವೋದಯ, ನವ್ಯ, ನವ್ಯೋತ್ತರ ಚಳವಳಿಗೆ ಹೋಲಿಸಿದರೆ ಕರ್ನಾಟಕ ಚಿತ್ರಕಲೆಯಲ್ಲಿ ನವೋದಯ, ನವ್ಯ, ನವ್ಯೋತ್ತರ ಎನ್ನುವ ಪರಿಕಲ್ಪನೆಯೇ ಇರಲಿಲ್ಲವೇನೋ ಅಥವಾ ಅದನ್ನು ತಪ್ಪಾಗಿ ಅರ್ಥೈಸಿದ್ದರೆಂದು ಕಾಣುತ್ತದೆ. ಕೆ.ಟಿ.ಶಿವಪ್ರಸಾದ್‌ರ ಬಗ್ಗೆ ಬರೆಯುವಾಗ ಅನಿವಾರ್ಯವಾಗಿ ಮತ್ತೆ ಮತ್ತೆ ಕನ್ನಡ ಸಾಹಿತ್ಯವನ್ನು ಒಳಗೊಂಡಂತೆ ಇತರೆ ಚಳವಳಿಗಳಾದ ರೈತ ಸಂಘದ ಚಳವಳಿಗಳು, ದಲಿತ ಪರ ಹೋರಾಟಗಳಿಗೆ ಮರಳಬೇಕಾಗುತ್ತದೆ. ಆ ಸಂಬಂಧಗಳ ಮೂಲಕ ಅವರ ಕೃತಿಗಳನ್ನು ನೋಡುವುದು ಬಹುಮುಖ್ಯವಾಗುತ್ತದೆ. ಕನ್ನಡ ಸಾಹಿತ್ಯವನ್ನು ನಾವು ಹೇಗೆ ನವೋದಯ , ನವ್ಯ ಮತ್ತು ನವ್ಯೋತ್ತರ ಎಂದು ಮೂರು ಭಾಗಗಳಾಗಿ ಸಾಹಿತ್ಯಕ ಬೆಳವಣಿಗೆಗಳನ್ನು ಅಧ್ಯಯನ ಮಾಡುವ ರೀತಿಯಲ್ಲಿ ಕನ್ನಡ ಕಲಾ ಇತಿಹಾಸವನ್ನು ವಿಭಜಿಸಲಾಗದು. ಕನ್ನಡದಲ್ಲಿ ಆ ರೀತಿಯ ಸಮಗ್ರ ಕಲಾ ಅಧ್ಯಯನ ನಡೆಯಲೇ ಇಲ್ಲವೇನೋ. ಸಾಹಿತ್ಯದಲ್ಲಾದಂತೆ ಪಾಶ್ಚಿಮಾತ್ಯದ ಪ್ರಭಾವಕ್ಕೊಳಗಾ ದರೂ ಕನ್ನಡತನವನ್ನು ತಮ್ಮ ಕೃತಿಗಳಲ್ಲಿ ಉಳಿಸಿಕೊಂಡಂಥಾ ಕಲಾವಿದರ ಉದಾಹರಣೆಗಳು ತುಂಬಾ ವಿರಳ. ಆ ನಿಟ್ಟಿನಲ್ಲಿ ಶಿವಪ್ರಸಾದ್‌ರ ಕೃತಿಗಳು ತುಂಬಾ ಮಹತ್ವದ್ದಾದವುಗಳು.
ಚಳವಳಿಗಳಲ್ಲಿ ಗುರುತಿಸಿಕೊಂಡ ಸಾಹಿತಿಗಳ ಅಥವಾ ಕಲಾವಿದರ ಕೃತಿಗಳನ್ನು ಮೌಲ್ಯಮಾಪನ ಮಾಡುವ ವಿಮರ್ಶಕರು ಹಾದಿ ತಪ್ಪುವುದೇ ಹೆಚ್ಚು ಇಲ್ಲಾ ಕಲಾವಿದರೇ ಆ ಹಾದಿ ಹಿಡಿಯುವ ಅಪಾಯವೂ ಉಂಟು. ಉದಾಹರಣೆಗೆ ಶಿವಪ್ರಸಾದ್‌ರ ಕೃತಿಗಳನ್ನು “ಸೋಷಿಯಲ್ ರಿಯಾಲಿಸಂ” ಎಂಬ ಹಣೆಪಟ್ಟಿಯಿಂದ ಮಿತಿಗೊಳಿಸುವುದು ನಮ್ಮ ಕಲಾವಿಮರ್ಶಕರ ವೈಚಾರಿಕ ಬೌದ್ಧಿಕ ಮಿತಿಗಳನ್ನು ತೋರಿಸುತ್ತದೆ. ಒಂದು ಸೈದ್ಧಾಂತಿಕ ಪ್ರಭಾವಕ್ಕೊಳಗಾದ ಯಾವುದೇ ಕಲಾವಿದನಿಗಾದರೂ ಈ ರೀತಿಯ ಹಣೆಪಟ್ಟಿ ಗಳಿಂದ ಬಿಡಿಸಿಕೊಳ್ಳಲು ಸೆಣಸಾಡಬೇಕಾಗುತ್ತದೆ. ಸಾಹಿತ್ಯ ಬರೀ ಘೋಷಣೆಯಾಗದೆ ಪೇಂಟಿಂಗ್ ಬ್ಯಾನರ್ ಆಗದೇ ಉಳಿಯುವಂತಹ ಕ್ರಿಯೆ ಇಲ್ಲಿ ಬಹುಮುಖ್ಯ. ಈ ಎಲ್ಲಾ ಗುಣಗಳು ಶಿವಪ್ರಸಾದ್‌ರ ಕೃತಿಗಳಲ್ಲಿ ಇರುವುದರಿಂದ ಇವರು ಯಾವುದೇ ರಾಜಕೀಯ , ಸಾಮಾಜಿಕ ಮತ್ತು ಸಾಂಸ್ಕ ತಿಕ ಚಳವಳಿಗಳಲ್ಲಿದ್ದರೂ, ಇವರ ಕೃತಿಗಳು ಬರೀಯ ಘೋಷಣೆಯಾಗದೆ ಕಲಾವಂತಿಕೆಯಿಂದ ತಮ್ಮ ಮೂಲ ಆಸ್ತಿತ್ವವನ್ನು ಉಳಿಸಿಕೊಂಡಿವೆ. ಪ್ರಸ್ತುತ ಕನ್ನಡ ಕಲಾವಲಯದಲ್ಲಿ ಶಿವಪ್ರಸಾದ್‌ರು ಮುಖ್ಯವಾಗುವುದು ಅವರ ಕೃತಿಗಳಲ್ಲಿನ ಸಾಂದ್ರತೆಯಿಂದ. ತಮ್ಮ ಸಮಕಾಲೀನ ಕಲಾವಿದರಂತೆ ಶೈಲಿಗೆ ಅಥವಾ ಮೈವಳಿಕೆಗೆ ಸೀಮಿತವಾಗದೇ ತಮ್ಮ ಚಿಂತನೆಗಳಿಂದ ಸುತ್ತಮುತ್ತ ಆಗುತ್ತಿರುವ ಜಾಗತಿಕ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುವ ಮೂಲಕ ಅವರು ಬೇರೊಂದು ನೆಲೆಯಲ್ಲಿ ನಿಲ್ಲುತ್ತಾರೆ. ಉದಾಹರಣೆಗೆ ಅವರು ತೊಂಬತ್ತರ ದಶಕದ ಕೊನೇ ಭಾಗದಲ್ಲಿ ಕರ್ನಾಟಕದ ತೊಗಲುಗೊಂಬೆಯ ಆಕೃತಿಗಳನ್ನು ಕ್ಯಾನ್ವಾಸಿನ ಮೇಲಿನ ದೃಶ್ಯದ ಮೇಲೆ ತೂಗು ಹಾಕಿದ ಹಾಗೆ ಬಳಸತೊಡಗಿದರು ಮತ್ತು ಆ ಕೃತಿಗಳನ್ನು ಯಾವುದೇ ಆಯಾಮದಿಂದಾದರೂ ನೋಡುಗ ನೋಡಬಹುದು. ತಮ್ಮ ಕೃತಿಗಳಲ್ಲಿ ಮೇಲೆ, ಕೆಳಗೆ, ಅಕ್ಕ-ಪಕ್ಕ ಎನ್ನದೆ ಯಾವುದೇ ಕಡೆಯಿಂದಾರೂ ವೀಕ್ಷಕ ಪ್ರವೇಶ ಪಡೆಯ ಬಹುದು. ಕಾಲ- ದೇಶಗಳನ್ನು ನಿರಾಕರಿಸುವ ಬೌದ್ಧ ಮೀಮಾಂಸೆಯಿಂದ ಶಿವಪ್ರಸಾದ್‌ರು ತಮ್ಮ ಕಲಾ ರಚನಾ ಕ್ರಿಯೆಯನ್ನು ವಿಶ್ಲೇಷಿಸುತ್ತಾರೆ. ಆದರೆ ಅವರು ಬಳಸುವ ಆಕೃತಿಗಳು, ಬಣ್ಣಗಳು, ಮೈವಳಿಕೆಗಳು ಮತ್ತು ರಚಿಸುವ ಕ್ರಮ ಎಲ್ಲಾ ಪಾಶ್ಚಿಮಾತ್ಯ ಪ್ರಣೀತವಾದ ಕೃತಿ ರಚನಾ ಕ್ರಮ. ಇಲ್ಲಿ ಅವರು ಅವರ ಪರಿಚಿತ ಹಳ್ಳಿ ವ್ಯಕ್ತಿಗಳ ಚಿತ್ರ ಮತ್ತು ಅವರ ಪರಿಸರವನ್ನು ಚಿತ್ರಿಸುತ್ತಿ ದ್ದರೂ ಅವರ ಕೃತಿಗಳು ಭಾರತೀಯ ಅಥವಾ ಪೌರಾತ್ಯ ಸಾಂಸ್ಕ ತಿಕ ಪರಂಪರೆಯಿಂದ ದೂರ ಸರಿದು ನಿಲ್ಲುತ್ತವೆ. ಇದು ಬರಿಯ ಶಿವಪ್ರಸಾದ್‌ರೊಬ್ಬರ ಸಮಸ್ಯೆ ಅಷ್ಟೇ ಅಲ್ಲ ಭಾರತೀಯ ಎಲ್ಲಾ ಕಲಾವಿದರ ಸಮಸ್ಯೆ. ಶಿವಪ್ರಸಾದ್‌ರವರ ಕನ್ನಡತನ ಅಲ್ಲಿನ ಜನ, ಸಂಸ್ಕ ತಿ, ಕಲೆಯ ಪ್ರತಿಮೆಗಳಲ್ಲಿ ಒಡಮೂಡಿಸಿದೆಯೇ ಹೊರತು ಅಗ್ಗದ ಶೈಲಿಯಿಂದಲ್ಲ. ತಮ್ಮ ಕಲೆಯ ಬಲವನ್ನು ಅಭಿವ್ಯಕ್ತಿಸಲು ಅವರು ಶೈಲಿಯೊಂದರಲ್ಲಿ ಸೆಟಲ್ ಆಗಬೇಕಿಲ್ಲ. ಆ ಶೈಲಿಯಲ್ಲೂ ಜಗತ್ತಿನ ಶ್ರೇಷ್ಠ ಕಲಾವಿದರ ಕೃತಿಗಳನ್ನು ಕನ್ನಡದ ನೆಲಕ್ಕೆ ಒಗ್ಗಿಸುವ ಜಾಣ ನಕಲಿಗೂ ಇಳಿಯಬೇಕಿಲ್ಲ. ಮೇಲ್ವರ್ಗದ ಜನರೊಡನೆ ಗುರುತಿಸಿಕೊಂಡು ಉಳಿಯಬೇ ಕಾದ ತಂತ್ರವೂ ಬೇಕಿಲ್ಲ. ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದ್‌ರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ ನಿಲುವುಗಳಿಂದ. ಅವರು ಎಷ್ಟೋ ಬಾರಿ ತಮ್ಮ ಕೃತಿ ರಚನೆಯನ್ನು ಬದಿಗಿಟ್ಟು ಜನಪದ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ.
ತಮ್ಮ ಸುತ್ತ ಮುತ್ತಲಿನ ಹಳ್ಳಿಗರೊಂದಿಗೆ ಬೆರೆತು, ಒಂದಾಗಿ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಅದರ ಅನುಭವವನ್ನು ಕೃತಿಗಳಲ್ಲಿ ಅಭಿವ್ಯಕ್ತಿಸುವುದು ವಿಶಿಷ್ಟವಾದುದು. ಲ್ಯಾಟಿನ್ ಅಮೆರಿಕದ ಸಾಹಿತ್ಯ ಗ್ರ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನಲ್ಲಿ ಈ ರೀತಿಯ ಹೋಲಿಕೆಗಳನ್ನು ಕಾಣಬಹುದು. ಮ್ಯಾಜಿಕಲ್ ರಿಯಾಲಿಸಂ ಎಂದೇ ಖ್ಯಾತಿಯಾದ ಇವರ ಕೃತಿಗಳಲ್ಲಿ ನಮ್ಮ ತೇಜಸ್ವಿಯವರಲ್ಲಿ ಕಾಣುವ ದಿವ್ಯ ಜೀವನ ದರ್ಶನವಿದೆ. ತಮ್ಮ ನೆಲದ ಸಾರವನ್ನು ಹೀರಿದ ಸಾಂಸ್ಕ ತಿಕ ಸತ್ಯವಿದೆ. ಹೀಗಾಗಿಯೇ ತೇಜಸ್ವಿಯವರ ಆಪ್ತರಾದ ಶಿವ ಪ್ರಸಾದ್‌ರಲ್ಲೂ ಈ ಅಂಶಗಳು ಅಡಕವಾಗಿರಬೇಕು.
(ಲೇಖಕರು ಹೆಸರಾಂತ ಕಲಾವಿದ, ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಲೇಖಕ)
ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…
ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…
ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್‌ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ…
ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಾಡಹಬ್ಬ ದಸರಾ ೧೬೧೦ ರಲ್ಲಿ ಪ್ರಾರಂಭವಾಗಿ, ಇಲ್ಲಿನ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಇತ್ತೀಚಿನ…
ಆರ್.ಪಿ.ವೆಂಕಟೇಶಮೂರ್ತಿ ಬೆಂಗಳೂರು ಮತ್ತು ಸುತ್ತಮುತ್ತಲಿನ ದುಃಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆ ಇದೆ, ರಾಜಕೀಯ ನಾಯಕರು ದಯಮಾಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು.…
ಹಲವು ದಶಕಗಳ ಹೋರಾಟದಿಂದ ಎರಡೂವರೆ ವರ್ಷಗಳ ಹಿಂದೆ ನನಸಾದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀರಾಮ ಮಂದಿರದಗಿರುವ ಭಕ್ತರ ಕಾಣಿಕೆಯ…