ಹಾಡು ಪಾಡು

ಅಮೆರಿಕ ಎಂಬ ಪ್ರಯೋಗಕ್ಕೆ ಇನ್ನೂರೈವತ್ತು ವಸಂತಗಳು

ಶೇಷಾದ್ರಿ ಗಂಜೂರು

ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ ನಾಯಕರು ಘೋಷಣೆಯೊಂದಕ್ಕೆ ಸಹಿ ಹಾಕುತ್ತಾರೆ. ಈ ಸಹಿ ಒಂದು ಬಂಡಾಯದ ಕೃತ್ಯದ ಜೊತೆಗೆ, ಹೊಸದೊಂದು ಕಲ್ಪನೆಯ ಅಭಿವ್ಯಕ್ತಿಯೂ ಆಗಿರುತ್ತದೆ. ಈ “ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್”, ಬ್ರಿಟಿಷ್ ಸಾಮ್ರಾಜ್ಯದ ನೊಗದಿಂದ ಸ್ವತಂತ್ರರಾಗಿರುವ ಘೋಷಣೆ ಮಾತ್ರವಲ್ಲ ಮತ್ತು ಮಾನವ ಇತಿಹಾಸದಲ್ಲೇ ಅದ್ಭುತವಾದ ಆಲೋಚನೆಯೊಂದರ ಘೋಷಣೆಯೂ ಆಗಿರುತ್ತದೆ:

“ಎಲ್ಲ ಮನುಷ್ಯರೂ ಸಮಾನರು ಮತ್ತು ಪ್ರತಿ ವ್ಯಕ್ತಿಗೂ ಯಾರಿಂದಲೂ ಕಸಿಯಲಾಗದ ಕೆಲ ಹಕ್ಕುಗಳಿವೆ”. ಆದರೆ ಆ ಘೋಷಣೆಯ ಆದರ್ಶದ ಹಿಂದೆ ಕಣ್ಣಿಗೆ ರಾಚುವ ವಿರೋಧಾಭಾಸಗಳೂ ಇರುತ್ತವೆ. ಸಮಾನತೆಯ ಘೋಷಣೆಗೆ ಸಹಿ ಹಾಕಿದವರಲ್ಲಿ ಅನೇಕರು ಗುಲಾಮಗಿರಿ ಮತ್ತು ಜನಾಂಗೀಯ ವಾದದ ಪ್ರತಿಪಾದಕರಾಗಿರುತ್ತಾರೆ; ಮಹಿಳೆಯರಿಗೆ, ಮತ ಚಲಾವಣೆ ಸೇರಿದಂತೆ, ಯಾವುದೇ ರಾಜಕೀಯ ಹಕ್ಕುಗಳಿರುವುದಿಲ್ಲ; ಸ್ಥಳೀಯ ಅಮೆರಿಕನ್ನರ ದಮನ ಮುಂದುವರಿದೇ ಇರುತ್ತದೆ. ಹೀಗಾಗಿ ಸಮಾನತೆಯ ಅವರ ಆ ಘೋಷಣೆ, ಆ ಕಾಲದ ವಾಸ್ತವದ ಬದಲಾಗಿ ಮುಂದೊಂದು ದಿನದ ಆಶ್ವಾಸನೆಯಾಗಷ್ಟೇ ಉಳಿದಿರುತ್ತದೆ. ಆದರೂ, ಕೆಲವೊಮ್ಮೆ ಕೆಲ ಆಲೋಚನೆಗಳು ಅವನ್ನು ಹೊರತಂದ ವ್ಯಕ್ತಿಗಳ ವೈಯಕ್ತಿಕ ನ್ಯೂನತೆ-ಮಿತಿಗಳನ್ನು ಮೀರಿ ಸಾರ್ವತ್ರಿಕ ಆದರ್ಶಗಳಾಗಿ ರೂಪುಗೊಳ್ಳುತ್ತವೆ. ಅಮೆರಿಕದ ಸ್ವಾತಂತ್ರ್ಯದ ಘೋಷಣೆ ಅಂತಹದಕ್ಕೊಂದು ಉದಾಹರಣೆ.

ಅಮೆರಿಕದ ಸ್ವಾತಂತ್ರ್ಯದ ಘೋಷಣೆ ಮಾಡಿದವರು ಮತ್ತು ಮೈಸೂರಿನ ನಡುವೆ –ಇತಿಹಾಸಕಾರರು ಅಷ್ಟಾಗಿ ಗಮನಿಸದ ಅಸ್ಪಷ್ಟ — ಸಂಪರ್ಕಗಳೂ ಇವೆ. ೧೭೭೬ರ ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ, ಅಮೆರಿಕನ್ ಕ್ರಾಂತಿಕಾರರು ಮತ್ತು ದಕ್ಷಿಣ ಭಾರತದಲ್ಲಿ ಹೈದರಾಲಿ, ಇಬ್ಬರೂ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸೆಣಸುತ್ತಿದ್ದವರು. ಅಮೆರಿಕನ್ ಕ್ರಾಂತಿಯ ನೇತೃತ್ವದಲ್ಲಿದ್ದ ಜಾನ್ ಆಡಮ್ಸ್, ಥಾಮಸ್ ಜೆಫರ್ಸನ್ ಅಂತಹವರು, ತಮ್ಮ ಸಾಮಾನ್ಯ ಶತ್ರುವಿನ ವಿರುದ್ಧ ಸಹಕಾರದ ಸಾಧ್ಯತೆಗಳನ್ನು ಅನ್ವೇಷಿಸುತ್ತಾ ಹೈದರಾಲಿಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು ಎಂದು ಐತಿಹಾಸಿಕ ದಾಖಲೆಗಳು ಸೂಚಿಸುತ್ತವೆ. ನಂತರ, ಅಮೆರಿಕನ್ನರು ಟಿಪ್ಪು ಸುಲ್ತಾನನ ಹೋರಾಟಗಳನ್ನು ಕುತೂಹಲದಿಂದ ಗಮನಿಸಿದ್ದಕ್ಕೂ ದಾಖಲೆಗಳಿವೆ. ಈ ಸಂಪರ್ಕಗಳಿಂದ ಅಂತಹ ಮಹತ್ವದ್ದೇನೂ ಸಾಧಿಸಲಾಗದಿದ್ದರೂ, ಶ್ರೀರಂಗಪಟ್ಟಣದಲ್ಲಿನ ಬ್ರಿಟಿಷರ ವಿರುದ್ಧದ ಗರ್ಜನೆ ದೂರದ ಫಿಲಡೆಲ್ಛಿಯಾದಲ್ಲಿ ಪ್ರತಿಧ್ವನಿಸಿದ್ದು ಮಾತ್ರ ನಿಜ.

ಅಮೆರಿಕ ಸ್ವಾತಂತ್ರ್ಯ ಪಡೆದ ನಂತರ, ತನ್ನ ಪ್ರಥಮ ಭಾಷಣದಲ್ಲಿ, “ಸಮಾನತೆ-ಸ್ವಾತಂತ್ರ್ಯಗಳೆಡೆಗಿನ ತುಡಿತವನ್ನು” ನಂದದಂತೆ ಕಾಪಾಡಿಕೊಳ್ಳಬೇಕಿರುವ “ಪವಿತ್ರ ಜ್ವಾಲೆ” ಎನ್ನುವ ಅಮೆರಿಕದ ಪ್ರಪ್ರಥಮ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್, ಅಮೆರಿಕನ್ ಗಣತಂತ್ರ ವ್ಯವಸ್ಥೆಯನ್ನು “ಒಂದು ಪ್ರಯೋಗ”ವೆನ್ನುತ್ತಾನೆ. ಹೀಗೆ ಪ್ರಯೋಗಾತ್ಮಕವಾಗಿ ಉದಯಿಸಿದ ಅಮೆರಿಕದ ಭವಿಷ್ಯ ೧೮ನೆಯ ಶತಮಾನದ ಅಂತ್ಯದ ವೇಳೆಗೆ ಅನಿಶ್ಚಿತವಾಗಿಯೇ ಇರುತ್ತದೆ. ೧೯ನೆಯ ಶತಮಾನದಲ್ಲೂ, ಆಂತರಿಕ ವಿರೋಧಾಭಾಸಗಳು ಮತ್ತು ಯೂರೋಪಿಯನ್ ಸಾಮ್ರಾಜ್ಯಶಾಹಿ ಶಕ್ತಿಗಳ ಮಧ್ಯೆ ಈ “ಅಮೆರಿಕನ್ ಪ್ರಯೋಗ”ವನ್ನು ಮುಂದುವರಿಸುವುದು ಸುಲಭದ ಕೆಲಸವೇನಾಗಿರಲಿಲ್ಲ. ೧೯ನೆಯ ಶತಮಾನದ ಅಂತ್ಯದಲ್ಲೂ ಸಹ, ಅಟ್ಲಾಂಟಿಕ್ ಸಾಗರದ ಅಂಚಿನಲ್ಲಿದ್ದ ಈ ಯುವ ಗಣರಾಜ್ಯವು ಆಧುನಿಕ ಇತಿಹಾಸದ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಲಿದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ.

ಆದರೆ, ೨೦ನೆಯ ಶತಮಾನವನ್ನು ಅಮೆರಿಕನ್ ಯುಗ ಎನ್ನಬಹುದು. ಕಳೆದೊಂದು ಶತಮಾನದಲ್ಲಿ ಅಮೆರಿಕದಷ್ಟು ಪ್ರಬಲವಾಗಿ ಜಗತ್ತನ್ನು ರೂಪಿಸಿದ ಮತ್ತೊಂದು ದೇಶವಿಲ್ಲ.ವಿದ್ಯುತ್ ದೀಪ, ವಿಮಾನ, ಸೆಮಿಕಂಡಕ್ಟರ್, ಇಂಟರ್‌ನೆಟ್, ಪರ್ಸನಲ್ ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆ (ಅಐ) ಇವೆಲ್ಲವೂ ಅಮೆರಿಕದ ಸಂಸ್ಥೆಗಳು ಮತ್ತು ಉದ್ಯಮಿಗಳ ಕೊಡುಗೆಗಳೇ. ನಾವಿಂದು ಬಳಸುವ ಸಾಧನಗಳು, ಸೇವಿಸುವ ಔಷಧಗಳು ಮತ್ತು ನಾವಿಂದು ಬದುಕುತ್ತಿರುವ ಡಿಜಿಟಲ್ ಪ್ರಪಂಚ ಎಲ್ಲವೂ ಅಮೆರಿಕನ್ ಪ್ರಯೋಗಶಾಲೆಯ ಕುಲುಮೆಯಲ್ಲಿ ರೂಪುಗೊಂಡಿರುವುವೇ. ಹಾಗೆಂದು, ಅದರ ಪ್ರಭಾವ ಕೇವಲ ತಾಂತ್ರಿಕ-ವೈಜ್ಞಾನಿಕ ಆವಿಷ್ಕಾರಗಳಿಗಷ್ಟೇ ಸೀಮಿತವಾಗಿಲ್ಲ. ಸಾಂವಿಧಾನಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಸಿನೆಮಾ, ಟಿ.ವಿ., ಸಂಗೀತ, ಸಾಹಿತ್ಯ, ವಾಣಿಜ್ಯ, ಆಹಾರ ಪದ್ಧತಿ, ಕೊನೆಗೆ ನಮ್ಮ ಜೀವನ ಶೈಲಿ ಹೀಗೆ ಎಲ್ಲದರಲ್ಲೂ ಗಾಢವಾದ ಅಮೆರಿಕನ್ ಪ್ರಭಾವವಿದೆ. ಕಳೆದ ನೂರು ವರ್ಷಗಳಲ್ಲಿ, “ಸಮಾನತೆ-ಸ್ವಾತಂತ್ರ್ಯಗಳ” ಅಮೆರಿಕನ್ “ಪವಿತ್ರ ಜ್ವಾಲೆ” ಆಯಸ್ಕಾಂತದಂತೆ ಕೆಲಸ ಮಾಡಿದ್ದು ಆಕಸ್ಮಿಕವೇನಲ್ಲ. ಜರ್ಮನಿಯ ಐನ್‌ಸ್ಟ್ತ್ಯೈನ್; ಇಟಲಿಯ ಎನ್ರಿಕೋ ಫೆರ್ಮಿ; ಭಾರತದ ಸುಬ್ರಹ್ಮಣ್ಯಂ ಚಂದ್ರಶೇಖರ್ ಅಂತಹ ಮಹಾನ್ ಪ್ರತಿಭಾವಂತರು, ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕದ ಲಕ್ಷಾಂತರ ಸಾಮಾನ್ಯ ಕಾರ್ಮಿಕರು, ಫ್ಯಾಸಿಸಂನಿಂದ ಪಲಾಯನ ಮಾಡಿದ ಯೂರೋಪಿಯನ್ ಯೆಹೂದಿಗಳು, ಭಾರತ ಮತ್ತು ಚೀನಾದ ಇಂಜಿನಿಯರ್ ಗಳು-ವೈದ್ಯರು… ಹೀಗೆ ಜಗತ್ತಿನ ಎಲ್ಲ ಮೂಲೆ-ಮೂಲೆಗಳವರೂ ಅಮೆರಿಕದಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಹೀಗೆ ನೆಲೆಯರಸಿ ಬರುವವರ ಈ ನಿರಂತರ ಅಳವಡಿಕೆಯೇ ಅಮೆರಿಕನ್ ಅಸ್ಮಿತೆಯನ್ನು ಬದಲಾಯಿಸುತ್ತಲೇ ಇನ್ನಷ್ಟು ಪ್ರಭಾವಶಾಲಿಯಾಗಿಯೂ ಮಾಡಿದೆ. ಇಪ್ಪತ್ತನೇ ಶತಮಾನದ ಮಹಾನ್ ಸೈದ್ಧಾಂತಿಕ ಹೋರಾಟಗಳಲ್ಲಿ–ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ಯಾಸಿಸಂ ವಿರುದ್ಧ ಮತ್ತು ಶೀತಲ ಸಮರದ ಸಮಯದಲ್ಲಿ ಸೋವಿಯತ್ ಕಮ್ಯುನಿಸಂ ವಿರುದ್ಧ– ಉದಾರ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸರ್ಕಾರಗಳ ವಿಜಯಗಳ ಹಿಂದೆ, ಅಮೆರಿಕದ ಈ ನಿರಂತರ ಬದಲಾವಣೆಯ ಅಸ್ಮಿತೆ ಮಹತ್ತರ ಪಾತ್ರ ಪಡೆದಿದೆ. ಈ ವಿಜಯಗಳು ಅಮೆರಿಕವನ್ನು ಇನ್ನಷ್ಟು ಬಲಶಾಲಿಯಾಗಿ ಸಿದ್ದಲ್ಲದೇ, ಅಮೆರಿಕನ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದ್ದೂ ನಿಜ. ಇಂತಹ ನಂಬಿಕೆಯೇ ಅಮೆರಿಕದ ಡಾಲರ್, ಅಂತರರಾಷ್ಟ್ರೀಯ ವಾಣಿಜ್ಯದ ಕರೆನ್ಸಿಯಾಗಿ ರೂಪುಗೊಳ್ಳಲು ಕಾರಣ.

ಆದರೆ ಅಮೆರಿಕದ ಇತಿಹಾಸ ವಿರೋಧಾಭಾಸಗಳ ಇತಿಹಾಸವೂ ಹೌದು. ೧೭೭೬ರಲ್ಲೇ ಸರ್ವ ಸಮಾನತೆಯ ಸ್ವಾತಂತ್ರ್ಯ ಘೋಷಿಸಿದ ಅಮೆರಿಕಕ್ಕೆ, ಗುಲಾಮಗಿರಿ ಪದ್ಧತಿಯನ್ನು ನಿಷೇಧಿಸಲು ಇನ್ನೂ ನೂರು ವರ್ಷ ಬೇಕಾಯಿತು; ರಕ್ತಸಿಕ್ತ ಅಂತರ್ಯುದ್ಧದಲ್ಲಿ ಲಕ್ಷಾಂತರ ಜನರ ಮಾರಣಹೋಮವೂ ಅನಿವಾರ್ಯವಾಯಿತು. ಜನಾಂಗೀಯವಾದದ ಹಿಂಸೆ-ಅಸಮಾನತೆಗಳನ್ನು ಬುಡಸಮೇತ ಕಿತ್ತು ಹಾಕುವಲ್ಲಿ, ಡಾ.ಮಾರ್ಟಿನ್ ಲೂಥರ್ ಕಿಂಗ್ ಅಂತಹವರ ಬಲಿ ತೆಗೆದುಕೊಂಡ ನಂತರವೂ, ಅಮೆರಿಕ ಇಂದೂ ಇನ್ನೂ ಯಶ ಕಂಡಿಲ್ಲ. ಪ್ರಜಾಪ್ರಭುತ್ವದ ಆಕಾಂಕ್ಷೆಗಳಿಗೆ ಸ್ಛೂರ್ತಿಯಾಗಿರುವ ಅಮೆರಿಕವೇ, ಭೌಗೋಳಿಕ ರಾಜಕೀಯ ಹಿತಾಸಕ್ತಿಗಳು ಬಯಸಿದಾಗ ಸರ್ವಾಧಿಕಾರಿಗಳನ್ನು ಬೆಂಬಲಿಸಿದೆ, ಅಮೆರಿಕನ್ ಶಕ್ತಿಯ ದುಸ್ಸಾಹಸಗಳು ಜಗತ್ತಿನಾದ್ಯಂತ ಕೋಟ್ಯಂತರ ಮಂದಿಯ ಸಾವು-ನೋವುಗಳಿಗೂ ಕಾರಣವಾಗಿದೆ. ಸೌತ್ ಆಫ್ರಿಕಾ ಸಂಜಾತ ಇಲಾನ್ ಮಸ್ಕ್, ವಿಶ್ವದ ಮೊಟ್ಟ ಮೊದಲ ಟ್ರಿಲಿಯನೇರ್ ಆಗಿದ್ದು ಅಮೆರಿಕದಲ್ಲೇ ಎನ್ನುವುದು ಕೇವಲ ಕಾಕತಾಳೀಯ ವೇನಲ್ಲ; ಮುಕ್ತ ಮಾರುಕಟ್ಟೆಯ ಚಾಂಪಿಯನ್ ಆಗಿರುವ ಅಮೆರಿಕ ಅದ್ಭುತ ಸಂಪತ್ತನ್ನು ಸೃಷ್ಟಿಸಿದೆ, ನಿಜ, ಆದರೆ ಅದೇ ಸಮಯದಲ್ಲಿ ಅಮೆರಿಕವೂ ಸೇರಿದಂತೆ ವಿಶ್ವದೆಲ್ಲೆಡೆ ಅಪಾರ ಅಸಮಾನತೆಯನ್ನೂ ಸೃಷ್ಟಿಸಿದೆ. ಇಂದು, ಅಮೆರಿಕವು ೨೫೦ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಅಲ್ಲಿ ರಾಜಕೀಯ ಧ್ರುವೀಕರಣ ಹೆಚ್ಚಾಗಿದೆ. ಅಲ್ಲಿನ ವ್ಯವಸ್ಥೆ-ಸಂಸ್ಥೆಗಳ ಮೇಲಿನ ನಂಬಿಕೆ ಅಮೆರಿಕನ್ನರಲ್ಲೇ ಕಡಿಮೆಯಾಗಿದೆ. ಜನಾಂಗೀಯತೆ, ವಲಸೆ ಮತ್ತು ಅಸ್ಮಿತೆಗಳ ಬಗೆಗಿನ ಚರ್ಚೆಗಳು ಹಿಂಸೆ, ಬೆದರಿಕೆ, ಪೊಲೀಸರ ದಬ್ಬಾಳಿಕೆಯಾಗಿ ಬದಲಾಗುತ್ತಿವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಹುಚ್ಚಾಟದ ರೀತಿ-ನೀತಿಗಳು, ಅಸಾಂವಿಧಾನಿಕ ನಡೆಗಳು ಮತ್ತು ಭ್ರಷ್ಟಾಚಾರ ಅಮೆರಿಕನ್ನರಲ್ಲಿ ತಲ್ಲಣ ಮೂಡಿಸಿವೆ. ಹಾಗಿದ್ದರೂ, ಅಮೆರಿಕನ್ ಪ್ರಯೋಗದ ಅಂತ್ಯವನ್ನು ಈಗಲೇ ಘೋಷಿಸುವುದು ತಪ್ಪಾಗುತ್ತದೆ. ಅದರ ಇತಿಹಾಸ ನಿರಂತರ ಮರುಶೋ ಧನೆಯ ಇತಿಹಾಸವಾಗಿದೆ. ಅಂತರ್ಯುದ್ಧ, ಆರ್ಥಿಕ ಕುಸಿತಗಳು ಮತ್ತು ಸಾಮಾಜಿಕ ಕ್ರಾಂತಿ ಗಳನ್ನು ದಾಟಿ ಬಂದಿರುವ ಅಮೆರಿಕ, ತನ್ನ ದಾರಿ ತಿದ್ದುಕೊಳ್ಳುವ ಗಮನಾರ್ಹ ಸಾಮರ್ಥ್ಯವನ್ನು ಪದೇ ಪದೇ ಸಾಬೀತುಪಡಿಸಿದೆ

” ಅಮೆರಿಕವು ೨೫೦ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಅಲ್ಲಿ ರಾಜಕೀಯ ಧ್ರುವೀಕರಣ ಹೆಚ್ಚಾಗಿದೆ. ಅಲ್ಲಿನ ವ್ಯವಸ್ಥೆ-ಸಂಸ್ಥೆಗಳ ಮೇಲಿನ ನಂಬಿಕೆ ಅಮೆರಿಕನ್ನರಲ್ಲೇ ಕಡಿಮೆಯಾಗಿದೆ. ಜನಾಂಗೀಯತೆ, ವಲಸೆ ಮತ್ತು ಅಸ್ಮಿತೆಗಳ ಬಗೆಗಿನ ಚರ್ಚೆಗಳು ಹಿಂಸೆ, ಬೆದರಿಕೆ, ಪೊಲೀಸರ ದಬ್ಬಾಳಿಕೆಯಾಗಿ ಬದಲಾಗುತ್ತಿವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಹುಚ್ಚಾಟದ ರೀತಿ-ನೀತಿಗಳು, ಅಸಾಂವಿಧಾನಿಕ ನಡೆಗಳು ಮತ್ತು ಭ್ರಷ್ಟಾಚಾರ ಅಮೆರಿಕನ್ನರಲ್ಲಿ ತಲ್ಲಣ ಮೂಡಿಸಿವೆ”

 

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

11 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

12 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

12 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

12 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

13 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

17 hours ago