ಅಂಕಣಗಳು

ಮುನ್ನೆಲೆಗೆ ಬಂದ ಮಾನವ – ವನ್ಯಜೀವಿ ಸಂಘರ್ಷ ಚರ್ಚೆ

ಮನುಷ್ಯರಿಗೆ ಅಭಿವೃದ್ಧಿ, ಆನೆಗಳಿಗೆ ಅತಿಕ್ರಮಣ

ದೇವನೂರು, ವನ್ಯಜೀವಿ ಛಾಯಾಗ್ರಾಹಕ

ಮೇ ೧೮ರಂದು ಕರ್ನಾಟಕದ ದುಬಾರೆ ಶಿಬಿರದಲ್ಲಿ ನಡೆದ ಆನೆಗಳ ಕಾಳಗ; ಪ್ರವಾಸಿ ಮಹಿಳೆಯೊಬ್ಬರ ಸಾವು, ಮೇ ೧೯ರಂದು ಕಾಳಗದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆಯೂ ಸಾವಿಗೀಡಾಗಿದ ಘಟನೆಯು ಮತ್ತೆ ಮಾನವ ಮತ್ತು ವನ್ಯಜೀವಿಗಳ ನಡುವಿನ ಸೂಕ್ಷ್ಮ ಸಂಬಂಧದ ಗಂಭೀರ ಚರ್ಚೆಯ ಅಗತ್ಯವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ.

ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಹರಿದಾಡಿದ ವಿಡಿಯೋಗಳು ಜನರಲ್ಲಿ ಭಯ, ಕೋಪ, ಕರುಣೆ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದವು. ಕೆಲವರು ಅರಣ್ಯ ಇಲಾಖೆಯ ಕ್ರಮಗಳನ್ನು ಪ್ರಶ್ನಿಸಿದರು. ಇನ್ನೂ ಕೆಲವರು ಆನೆಯ ಸ್ಥಿತಿಗೆ ಬೇಸರಪಟ್ಟರು. ಆದರೆ ಈ ಘಟನೆಯ ಹಿಂದೆ ಇರುವ ನಿಜವಾದ ಕಥೆ ಇನ್ನಷ್ಟು ಆಳವಾದದ್ದು-ಅರಣ್ಯವನ್ನು ಕಳೆದುಕೊಳ್ಳುತ್ತಿರುವ ಜಗತ್ತಿನಲ್ಲಿ ಮನುಷ್ಯ ಮತ್ತು ಆನೆ ಇಬ್ಬರೂ ಬದುಕಿಗಾಗಿ ಹೋರಾಡುತ್ತಿದ್ದಾರೆ.

ಅರಣ್ಯ ಇಲಾಖೆಯ ದೃಷ್ಟಿಯಿಂದ ನೋಡಿದರೆ ಇಂತಹ ಘಟನೆಗಳು ಅತ್ಯಂತ ಸಂಕೀರ್ಣವಾದವು. ಗ್ರಾಮಗಳಿಗೆ ನುಗ್ಗಿದ ಅಥವಾ ಆತಂಕಗೊಂಡ ಆನೆಯನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ಒಂದು ಕ್ಷಣದ ತಪ್ಪು ನಿರ್ಧಾರ ಮಾನವ ಜೀವಕ್ಕೂ, ಪ್ರಾಣಿಯ ಜೀವಕ್ಕೂ ಅಪಾಯ ಉಂಟುಮಾಡಬಹುದು. ಜನರ ಸುರಕ್ಷತೆ ಮತ್ತು ವನ್ಯಜೀವಿಗಳ ರಕ್ಷಣೆಯನ್ನು ಒಂದೇ ಸಮಯದಲ್ಲಿ ಕಾಪಾಡಬೇಕಾದ ಹೊಣೆಗಾರಿಕೆ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಿದೆ.

ಆನೆಗಳ ಕಾಳಗ ಅಥವಾ ವನ್ಯಜೀವಿ ಮತ್ತು ಮಾನವರ ಸಂಘರ್ಷದಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಭಾರೀ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಾರೆ. ಸುತ್ತಮುತ್ತ ಜನರ ಗದ್ದಲ, ಮೊಬೈಲ್ ಕ್ಯಾಮೆರಾಗಳು, ವಾಹನಗಳ ಹಾರ್ನ್, ಕೂಗಾಟ, ಆತಂಕ – ಇವೆಲ್ಲದರ ನಡುವೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಹಲವಾರು ಅರಣ್ಯ ಸಿಬ್ಬಂದಿ ರಾತ್ರಿಯಿಡೀ ಕಾಡು, ತೋಟ, ಗ್ರಾಮಗಳಲ್ಲಿ ಆನೆಗಳ ಚಲನವಲನ ಗಮನಿಸುತ್ತಾ ಜನರು ಮತ್ತು ಪ್ರಾಣಿಗಳ ಮಧ್ಯೆ ಸಂಘರ್ಷ ತಪ್ಪಿಸಲು ಪ್ರಯತ್ನಿಸುತ್ತಾರೆ. ಅವರ ಕೆಲಸ ಕೇವಲ ಒಂದು ಕರ್ತವ್ಯವಲ್ಲ; ಅದು ಜೀವ ಪಣಕ್ಕಿಟ್ಟ ಸೇವೆ.

ಆದರೆ ಇಂತಹ ಘಟನೆಗಳಲ್ಲಿ ಆನೆಯ ಮಾನಸಿಕ ಸ್ಥಿತಿಗತಿ ಅಥವಾ ದೃಷ್ಟಿಕೋನವನ್ನೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆನೆ ಬೃಹತ್ ಪ್ರಾಣಿ ಮಾತ್ರವಲ್ಲ. ಅದು ಅತ್ಯಂತ ಬುದ್ಧಿವಂತ, ಭಾವನೆಗಳನ್ನು ಹೊಂದಿರುವ, ನೆನಪುಗಳನ್ನು ಉಳಿಸಿಕೊಳ್ಳುವ ಜೀವಿ. ತನ್ನ ಹಿಂಡಿನೊಂದಿಗೆ ಸಾಗುವ ಆನೆಗೆ ಕಾಡು ಕೇವಲ ವಾಸಸ್ಥಳವಲ್ಲ; ಅದು ಅದರ ಜೀವನದ ಅಸ್ತಿತ್ವ. ಆದರೆ ಇಂದು ಆ ಕಾಡಿನ ಮಾರ್ಗಗಳು ರಸ್ತೆಗಳಿಂದ, ರೆಸಾರ್ಟ್‌ಗಳಿಂದ, ರೈಲು ಹಳಿಗಳಿಂದ, ತೋಟಗಳಿಂದ ಮತ್ತು ಮಾನವರ ವಸತಿಗಳಿಂದ ತುಂಡಾಗುತ್ತಿವೆ. ಮನುಷ್ಯ “ಅಭಿವೃದ್ಧಿ” ಎಂದು ಕರೆಯುವುದನ್ನು ಆನೆ “ಅತಿಕ್ರಮಣ” ಎಂದು ಭಾವಿಸುತ್ತಿದೆ.

ಒಮ್ಮೆ ಯೋಚಿಸಿ ನೋಡಿ – ತನ್ನ ಹಿಂಡಿನಿಂದ ದೂರವಾದ ಒಂದು ಆನೆ, ಸುತ್ತಮುತ್ತ ಜನರ ಕೂಗಾಟ, ಬೆಳಕು, ವಾಹನಗಳ ಶಬ್ದ, ಪಟಾಕಿ, ಮೊಬೈಲ್ ಫ್ಲ್ಯಾಶ್‌ಗಳ ನಡುವೆ ಸಿಲುಕಿಕೊಂಡರೆ ಅದರ ಮನಸ್ಥಿತಿ ಹೇಗಿರಬಹುದು? ಮಾನವರು “ಕ್ರೋಧ” ಎಂದು ನೋಡುವ ವರ್ತನೆ ಬಹುಶಃ ಆನೆಯ ಭಯ, ಗೊಂದಲ ಅಥವಾ ಅಸಹನೆಯ ಪ್ರತಿಕ್ರಿಯೆಯಾಗಿರಬಹುದು. ಹಿಡಿದು ಪಳಗಿಸಿದ ಆನೆಗಳಿಗೂ ಒತ್ತಡ ಇರುತ್ತದೆ. ಏಕೆಂದರೆ ಕಾಡಿನ ಸ್ವಭಾವವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಕಾಡುತನವು ಅದರೊಳಗೆ ಸದಾ ಜೀವಂತವಾಗಿರುತ್ತದೆ.

ದುರದೃಷ್ಟವಶಾತ್, ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ನಿಧಾನವಾಗಿ ಮನರಂಜನೆಯ ಒಂದು ಭಾಗವಾಗುತ್ತಿವೆ. ಎಲ್ಲಿಯಾದರೂ ಆನೆ ಕಾಣಿಸಿಕೊಂಡರೆ ಜನರು ವಿಡಿಯೋ ತೆಗೆಯಲು ಓಡುತ್ತಾರೆ. ಕೆಲವರು ಸೆಲ್ಛಿ ತೆಗೆದುಕೊಳ್ಳಲು ಹತ್ತಿರ ಹೋಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉತ್ಸಾಹದಲ್ಲಿ ಎದುರಿನಲ್ಲಿ ನಿಂತಿರುವ ಕಾಡು ಪ್ರಾಣಿ ಒತ್ತಡದಲ್ಲಿ ನಿಂತಿರಬಹುದು ಎಂಬುದನ್ನೇ ಮರೆತುಬಿಡುತ್ತಾರೆ.

ಈ ಮನೋಭಾವ ಮಾನವ ಮತ್ತು ವನ್ಯಜೀವಿ ಇಬ್ಬರಿಗೂ ಅಪಾಯಕಾರಿ. ಕಾಡುಗಳು ಈಗ ಮೌನದ ನೆಲೆಗಳಾಗಿಲ್ಲ. ಪ್ರವಾಸೋದ್ಯಮದ ಒತ್ತಡ, ಜೋರಾದ ಸಂಗೀತ, ವಾಹನಗಳ ಗದ್ದಲ, ಪ್ಲಾಸ್ಟಿಕ್ ತ್ಯಾಜ್ಯ, ನಿರಂತರ ಮಾನವನ ಚಟುವಟಿಕೆ – ಇವೆಲ್ಲವೂ ವನ್ಯಜೀವಿಗಳ ಶಾಂತಿಯನ್ನು ಕದಡುತ್ತಿವೆ. ಮೊದಲು ಮನುಷ್ಯರಿಂದ ತಪ್ಪಿಸಿಕೊಳ್ಳುತ್ತಿದ್ದ ಪ್ರಾಣಿಗಳು ಈಗ ಬದುಕಿಗಾಗಿ ಮಾನವ ಪ್ರದೇಶಗಳತ್ತ ಲಗ್ಗೆ ಇಡುತ್ತಿವೆ.

ಆನೆಗಳು ಕಾಡಿನ ಸಮತೋಲನವನ್ನು ಉಳಿಸುವ ಪ್ರಮುಖ ಜೀವಿಗಳು. ಆನೆಗಳ ಮೇಲೆ ಉಂಟಾಗುವ ಒತ್ತಡವು ಪ್ರಕೃತಿಯ ಮೇಲಿನ ಒತ್ತಡದ ಪ್ರತಿಬಿಂಬವೇ ಆಗಿದೆ.

ನಿಜವಾದ ಸಮಸ್ಯೆ ಒಂದು ಆನೆ ಅಥವಾ ಒಂದು ಘಟನೆ ಮಾತ್ರವಲ್ಲ. ಅದು ಮಾನವ ವಿಸ್ತರಣೆ ಮತ್ತು ಕುಗ್ಗುತ್ತಿರುವ ಅರಣ್ಯದ ನಡುವಿನ ದೊಡ್ಡ ಸಂಘರ್ಷ. ಗ್ರಾಮಸ್ಥರು ತಮ್ಮ ಬೆಳೆ ರಕ್ಷಣೆ ಮಾಡಬೇಕಾದ ಆತಂಕ ಮತ್ತು ಜೀವದ ಭಯದಲ್ಲಿದ್ದಾರೆ. ಅರಣ್ಯ ಇಲಾಖೆ ಪರಿಸ್ಥಿತಿ ನಿಯಂತ್ರಿಸಲು ಹೋರಾಡುತ್ತಿದೆ. ಆನೆಗಳು ತಮ್ಮ ಪುರಾತನ ವಾಸಸ್ಥಳ ಕಳೆದುಕೊಂಡು ಅಲೆದಾಡುತ್ತಿವೆ. ಈ ಮೂವರೂ ಕೂಡ ಬದಲಾಗುತ್ತಿರುವ ಪ್ರಕೃತಿಯ ಬಲಿಗಳು.

ಈ ಸಂಘರ್ಷಕ್ಕೆ ಪರಿಹಾರ ದೋಷಾರೋಪಣೆಯಲ್ಲಿ ಇಲ್ಲ. ಬದಲಾಗಿ ವೈಜ್ಞಾನಿಕ ಯೋಜನೆ, ಆನೆ ಕಾರಿಡಾರ್‌ಗಳ ರಕ್ಷಣೆ, ಜವಾಬ್ದಾರಿಯುತ ಪ್ರವಾಸೋದ್ಯಮ, ಜನಜಾಗೃತಿ ಮತ್ತು ವನ್ಯಜೀವಿಗಳ ಬಗ್ಗೆ ಗೌರವ ಅಗತ್ಯ. ಪ್ರತಿಯೊಂದು ವನ್ಯಜೀವಿ ಘಟನೆಯನ್ನೂ “ಪ್ರದರ್ಶನ” ಎಂದು ನೋಡುವ ಮನಸ್ಥಿತಿಯಿಂದ ನಾವು ಹೊರಬರಬೇಕು.

ಆನೆಗಳಿಗೆ ಕಾಡೇ ಮನೆ. ಕಾಡಿನ ಕೂಗನ್ನು ನಾವು ಮನರಂಜನೆಯಾಗಿ ನೋಡದೇ, ಅರ್ಥಮಾಡಿಕೊಳ್ಳುವ ಮನಸ್ಸು ಬೆಳೆಸಿದಾಗ ಮಾತ್ರ ಮಾನವ ಮತ್ತು ಪ್ರಕೃತಿ ನಡುವೆ ನಿಜವಾದ ಸಹಬಾಳ್ವೆ ಸಾಧ್ಯವಾಗುತ್ತದೆ.

ಆಂದೋಲನ ಡೆಸ್ಕ್

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

8 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

9 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

11 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

11 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

15 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

15 hours ago