ಹಾಡು ಪಾಡು

ಅರಕೆರೆಯ ಚನ್ನಕೇಶವ ದೇವರಿಗೆ ಸುಧಾ ಅವರದೇ ನಿತ್ಯ ಸೇವೆ

ಅಕ್ಷತಾ

“ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರಿಲ್ಲ. ದೀಪ ಹಚ್ಚಲು ಎಣ್ಣೆ ತಂದುಕೊಡುವವರಿಲ್ಲ. ದೇವಸ್ಥಾನವನ್ನು ಸ್ವಚ್ಛಗೊಳಿಸಲು ಯಾರೂ ಮುಂದೆ ಬರುವುದಿಲ್ಲ. ದೇವಸ್ಥಾನದ ಎದುರೇ ನಡೆದುಕೊಂಡು ಹೋದರೂ ಇತ್ತ ಗಮನವಿಲ್ಲ. ಆದರೂ ಚನ್ನಕೇಶವ ಊರು ಕಾಯೋದು ನಿಲ್ಲಿಸಿಲ್ಲ”

ಇದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆಯ ಸುಧಾ ಮರಿಗೌಡರ ಮಾತು. ಒಂದು ಕಾಲದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತಿದ್ದ ದೇವಸ್ಥಾನದಲ್ಲಿ ಇಂದು ನಿತ್ಯದೀಪ ಬೆಳಗುತ್ತಿರುವುದರ ಹಿಂದೆ ಸುಮಾರು ೨೦ ವರ್ಷಗಳಿಂದ ದೇವರ ಸೇವೆಯನ್ನೇ ತಮ್ಮ ಬದುಕಿನ ಭಾಗವಾಗಿಸಿಕೊಂಡ ಸುಧಾ ಅವರ ನಿಸ್ವಾರ್ಥ ಸೇವೆಯಿದೆ.

ಈ ದೇವಸ್ಥಾನಕ್ಕೆ ಅರ್ಚಕರಿಲ್ಲ! ಹಿಂದೆ ಅರ್ಚಕರನ್ನು ನೇಮಿಸಿ ಸಂಬಳ ನೀಡುವ ಪ್ರಯತ್ನ ನಡೆದಿತ್ತಾದರೂ ಭಕ್ತರ ಸಂಖ್ಯೆ ಕಡಿಮೆ ಇದ್ದುದರಿಂದ ಅರ್ಚಕರು ಉಳಿಯುತ್ತಿರಲಿಲ್ಲ. ಗುಡಿಯ ದೇವರಿಗೆನಿತ್ಯಪೂಜೆಯ ಸೊಬಗಿಲ್ಲದೆ ಖಾಲಿ ಉಳಿಯುವ ಸ್ಥಿತಿಗೆ ನೊಂದ ಸುಧಾ ತಾನೇ ಪೂಜೆಯ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ.

ಬೆಳಿಗ್ಗೆ ಐದೂವರೆಗೆ ಎದ್ದು ದೇವಸ್ಥಾನದ ಬಾಗಿಲು ತೆರೆಯುವುದು, ಆವರಣ ಸ್ವಚ್ಛಗೊಳಿಸುವುದು, ನೀರು ತಂದು ದೇವಸ್ಥಾನ ತೊಳೆಯುವುದು, ದೇವರಿಗೆ ಹೂವು ಅರ್ಪಿಸಿ ದೀಪ ಹಚ್ಚುವುದು ಇದು ಅವರ ನಿತ್ಯದ ಕಾಯಕವಾಗಿದ್ದು ದೇವಸ್ಥಾನದ ಸುತ್ತ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಅಷ್ಟೇ ಅಲ್ಲ, ತೆಂಗಿನ ಸಸಿಗಳನ್ನು ನೆಟ್ಟಿದ್ದು ಅದರಿಂದ ಸಿಗುವ ತೆಂಗಿನಕಾಯಿಗಳನ್ನು ಮಾರಿ ಬಂದ ಹಣದಿಂದ ದೀಪಕ್ಕೆ ಎಣ್ಣೆ ಖರೀದಿಸುತ್ತಾರೆ. ಹಬ್ಬದ ಸಂದರ್ಭಗಳಲ್ಲಿ ದೇವರಿಗೆ ಹೊಸ ಬಟ್ಟೆ ತಂದು ವಿಶೇಷ ಪೂಜೆ ಮಾಡುವುದು ಸುಧಾರ ನೆಚ್ಚಿನ ಸೇವೆಯಲ್ಲೊಂದು.

ದೇವಸ್ಥಾನದ ಗರ್ಭಗುಡಿಗೆ ಹೆಂಗಸರು ಹೋಗಬಹುದೇ? ಎಂಬ ಚೋದ್ಯವಿದ್ದ ಕಾಲದಲ್ಲಿ ಈ ಪ್ರಶ್ನೆ ಸುಧಾರನ್ನೂ ಕಾಡದೆ ಬಿಟ್ಟಿಲ್ಲ. ನೂರು ಸಲ ಯೋಚಿಸಿ, ಹಲವರ ಸರಿತಪ್ಪುಗಳ ತಕ್ಕಡಿಯಲ್ಲಿ ಕುಳಿತ ನಂತರವಷ್ಟೇ ಈ ದಿಟ್ಟತನಕ್ಕೆ ಮುಂದಾದ ಸುಧಾರಲ್ಲಿ “ಆ ಕಾಲಕ್ಕೆ ನಿಮ್ಮ ಈ ನಿಲುವಿನ ಕುರಿತು ಪ್ರಶ್ನೆಗಳು ಹುಟ್ಟಲಿಲ್ವೇ?” ಎಂದು ಕೇಳಿದರೆ “ಸ್ವಾಮಿಗೆ ಯಾವ ಹೆಣ್ಣು ಗಂಡು? ಎಲ್ರೂನೂ ಅವ್ನದ್ದೇ ಸೃಷ್ಟಿಯಲ್ವ!” ಎನ್ನುತ್ತಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಗಂಡನ ಧೈರ್ಯವೂ ಸುಧಾರಿಗೆ ಒತ್ತಾಸೆಯಾದ್ದರಿಂದ ಆರಂಭಿಸಿದ ಪೂಜಾ ಕೈಂಕರ್ಯ ನಿಂತದ್ದಿಲ್ಲ. ನಲವತ್ತರ ಆಸುಪಾಸಿನಲ್ಲಿ ದೇವರ ಸೇವೆ ಆರಂಭಿಸಿದವರದ್ದು ಈಗ ೬೦ರ ಪ್ರಾಯ. ಕಳೆದುಹೋಗುವ ವಯಸ್ಸಿನ ಎದುರಾಗಿ ಈಜುವುದು ಸುಲಭದ ಮಾತಲ್ಲ. ವಯೋಸಹಜ ದೈಹಿಕ ನಿಶ್ಶಕ್ತಿಯನ್ನು ಮೀರಿ, ನೀರು ಎತ್ತಿ ದೇವಸ್ಥಾನ ತೊಳೆದು, ಹೂವಿನ ಅಲಂಕಾರ ಮಾಡಿ ದೀಪ ಹಚ್ಚುವುದನ್ನು ನಿಲ್ಲಿಸದ ಸುಧಾರ ಆರೋಗ್ಯ ಒಂದೆರಡು ದಿನ ಹದಗೆಟ್ಟರೆ ಅರಕೆರೆಯ ಚನ್ನಕೇಶವನಿಗೂ ಕತ್ತಲು! ಚೋಳರ ಕಾಲದ್ದು ಎಂದು ಹೇಳಲಾಗುವ ಜಿಲ್ಲೆಯ ಅತಿ ಪುರಾತನ ದೇವಾಲಯಗಳಲ್ಲಿ ಒಂದಾದ ಅರಕೆರೆ ಚನ್ನಕೇಶವ ದೇವಸ್ಥಾನದ ಎದುರು ಒಮ್ಮೆ ನಿಂತು ನೋಡಿದರೆ ಮಳೆಗೆ ಸೋರುವ ಛಾವಣಿ ಕಣ್ಣೀರು ಹಾಕಿದಂತೆ ಕಾಣುತ್ತದೆ.

“ಸುಧಾರ ಮುತುವರ್ಜಿಯಿಂದ ಇಷ್ಟಾದರೂ ಸವೆದ ಜೀವದೊಂದಿಗೆ ಉಳಿದುಕೊಂಡಿದ್ದೇನೆ, ಮುಂದೆ ಗತಿಯೇನು?” ಎಂಬ ನೋವು ತೋಡಿಕೊಂಡಂತೆ ಭಾಸವಾಗುತ್ತದೆ.

“ನಮಗೂ ವಯಸ್ಸಾಗ್ತಿದೆ. ದೇವಸ್ಥಾನಕ್ಕೆ ಒಬ್ಬ ಅಯ್ನೋರನ್ನು ನೇಮಿಸಿ ಪೂಜೆ ಮಾಡ್ಸಿದ್ರೆ ಸಾಕು. ದೇವರಿಗೆ ದೀಪ ಹಚ್ಚಿದರೆ ನನಗೆ ಖುಷಿ, ನೆಮ್ಮದಿ” ಎನ್ನುವ ಅವರ ಮಾತಿನಲ್ಲಿ ನಾಳಿನ ಚಿಂತೆ ದಟ್ಟವಾಗಿದೆ. ತಮ್ಮ ವೈಯಕ್ತಿಕ ಬದುಕಿಗೆ ಏನನ್ನೂ ಬಯಸದ ಸುಧಾ ಅವರ ಏಕೈಕ ಆಸೆ ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆಯಬೇಕು ಎಂಬುದಷ್ಟೇ. “ಒಂದ್ವೇಳೆ ಅಯ್ನೋರು ಬಂದ್ರೆ ನಿಮ್ಗೆ ಪೂಜೆ ಮಾಡೋ ಅವಕಾಶ ತಪ್ಪುತ್ತಲ್ಲ” ಎಂದರೆ “ಹೊರಗಿಂದ ಕೈ ಮುಗೀತೀನಿ ಕಣಮ್ಮ, ನಮ್ ನಂತ್ರ ಚೆನ್ನ ಕೇಶವನಿಗೆ ಕತ್ಲಾಗದಿದ್ರೆ ಸಾಕು” ಎಂಬ ಸುಧಾರ ಮಾತು ಎರಡು ದಶಕಗಳ ಅವರ ಸೇವೆ, ನಿಸ್ವಾರ್ಥ ಭಕ್ತಿಗೆ ಹಿಡಿದ ಕೈಗನ್ನಡಿ.

ಮೂಲತಃ ಈ ಚನ್ನಕೇಶವ ದೇವಸ್ಥಾನದ ಜವಾಬ್ದಾರಿ ಸುಧಾರದ್ದಲ್ಲ. ಮೈಸೂರಿನಲ್ಲಿ ನೆಲೆಸಿರುವ ವಾರಸ್ದಾರರು ವರ್ಷಕ್ಕೊಮ್ಮೆ ವಿಜಯದಶಮಿ ಪೂಜೆಗೆ ಇಲ್ಲಿಗೆ ಬಂದು ಸೇವೆ ಸಲ್ಲಿಸಿ ಹೋದರೆ ವರ್ಷಪೂರ್ತಿ ಮೂರು ಹೊತ್ತಿನ ಪೂಜೆಯ ಜವಾಬ್ದಾರಿ ಸುಧಾರದ್ದು. “ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಸ್ಥಾನ ಮುಂದಾದರೂ ಸಂಬಂಧಪಟ್ಟವರ ಮುತುವರ್ಜಿಗೆ ಸಿಕ್ಕಿ ಅರಕೆರೆ ಚನ್ನಕೇಶವನ ಗುಡಿಯಲ್ಲಿ ಘಂಟೆನಾದ ಅನುರಣಿಸಲಿ” ಎನ್ನುವ ಸುಧಾರ ಕನಸಿಗೆ ರೆಕ್ಕೆ ಮೂಡಬೇಕಾಗಿದೆ.

ʼ ದೇವರಿಗೆ ಹೂವು ಅರ್ಪಿಸಿ ದೀಪ ಹಚ್ಚುವುದು ಇವರ ನಿತ್ಯದ ಕಾಯಕ. ದೇವಸ್ಥಾನದ ಸುತ್ತ ಹೂವಿನ ಗಿಡಗಳನ್ನು ಬೆಳೆಸಿ, ತೆಂಗು ನೆಟ್ಟು, ಕಾಯಿ ಮಾರಿದ ಹಣದಿಂದ ದೀಪಕ್ಕೆ ಎಣ್ಣೆ ಖರೀದಿಸುತ್ತಾರೆ”

 

 

ಆಂದೋಲನ ಡೆಸ್ಕ್

Recent Posts

ಬೆಟ್ಟ ಕುರುಬರ ಪುಟ್ಟಮ್ಮನವರ ಜೊತೆ ಒಂದಿಷ್ಟು ಹೊತ್ತು

ಸೂರ್ಯಪುತ್ರ ಹೆಗ್ಗಡದೇವನಕೋಟೆ ಎಲಚಿಕಟ್ಟೆ ಹಾಡಿಯ ಬೆಟ್ಟಕುರುಬರ ಪುಟ್ಟಮ್ಮನ ಕುಟುಂಬ ಬಹಳ ಹಿಂದಿನಿಂದಲೂ ಕಾಡನ್ನೇ ನೆಚ್ಚಿ ಬದುಕಿದವರು. ಕಾಡಿನಲ್ಲೇ ಹುಟ್ಟಿ ಬೆಳೆದ…

9 mins ago

ಮುತ್ತಾತ ಕೆಂಚಪ್ಪನವರ ನೆಲದ ಮೇಲೂ ಸರ್ಕಾರದ ಕೆಂಗಣ್ಣು

ಗೋಳೂರು ನಾರಾಯಣಸ್ವಾಮಿ ನಾವು ಅಣ್ಣ-ತಮ್ಮಂದಿರು ಓದು-ಬರಹ ಮುಗಿಸಿ ಕೆಲಸಕ್ಕೆ ಅಂತ ನಂಜನಗೂಡು-ಮೈಸೂರು ಅಲೆದು, ದುಡಿದು ತಿನ್ನುತ್ತಿದ್ದ ಕಾಲದಲ್ಲಿ ನಮ್ಮನ್ನು ಇನ್ನಿಲ್ಲದಂತೆ…

14 mins ago

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ಗ್ರಹಣ

ದಾಸೇಗೌಡ ಸರಗೂರು: ಅಕ್ಕಿ ಕೊಟ್ಟರೆ ರಾಗಿ ಇಲ್ಲ, ರಾಗಿ ಕೊಟ್ಟರೆ ಅಕ್ಕಿ ಇಲ್ಲ ಎಂಬುದು ಗ್ರಾಹಕರ ಆರೋಪ  ಸರಗೂರು: ಪಟ್ಟಣದ…

20 mins ago

‘ಇಂದಿನ ಯುವಜನರಿಗೆ ಸೂಕ್ತ ವೇದಿಕೆ ಅಗತ್ಯʼ

ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ಪ್ರಸನ್ನಕುಮಾರ್ ಕೆರಗೋಡು ಅಭಿಮತ ಮೈಸೂರು: ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ಆಲೋಚಿಸುವ ಮನೋಭಾವ ಹೆಚ್ಚುತ್ತಿದ್ದು,…

26 mins ago

‘ಗಾಂಧೀಜಿ ಬದುಕೇ ಯುವ ಸಮೂಹಕ್ಕೆ ಪಾಠ’

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ ವಿಚಾರ ಮಂಥನ, ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ…

1 hour ago

ಅಹಿಂಸಾ ಚಳವಳಿಯಿಂದಲೇ ಬ್ರಿಟಿಷರನ್ನು ನಡುಗಿಸಿದವರು ಗಾಂಧೀಜಿ: ಅರವಿಂದ ಚೊಕ್ಕಾಡಿ

‘ಗಾಂಧಿ ವ್ಯಕ್ತಿತ್ವ ಮತ್ತು ವಿಚಾರ: ಸಮಕಾಲೀನ ಸಂದರ್ಭ’ ಕುರಿತು ವಿಷಯ ಮಂಡನೆ ಮಾಡಿದ ಹಿರಿಯ ಲೇಖಕರ ಅಭಿಮತ ಮೈಸೂರು: ವಿವಿಧ ಸಂಸ್ಥಾನಗಳು,…

1 hour ago