Andolana originals

ಅಹಿಂಸಾ ಚಳವಳಿಯಿಂದಲೇ ಬ್ರಿಟಿಷರನ್ನು ನಡುಗಿಸಿದವರು ಗಾಂಧೀಜಿ: ಅರವಿಂದ ಚೊಕ್ಕಾಡಿ

‘ಗಾಂಧಿ ವ್ಯಕ್ತಿತ್ವ ಮತ್ತು ವಿಚಾರ: ಸಮಕಾಲೀನ ಸಂದರ್ಭ’ ಕುರಿತು ವಿಷಯ ಮಂಡನೆ ಮಾಡಿದ ಹಿರಿಯ ಲೇಖಕರ ಅಭಿಮತ

ಮೈಸೂರು: ವಿವಿಧ ಸಂಸ್ಥಾನಗಳು, ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ವ್ಯವಸ್ಥೆಗಳಿಂದ ವಿಭಜಿತವಾಗಿದ್ದ ಭಾರತವನ್ನು ಒಗ್ಗೂಡಿಸುವಲ್ಲಿ ಗಾಂಧೀಜಿ ಅವರ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಹಿರಿಯ ಲೇಖಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.

‘ಆಂದೋಲನ’ ದಿನಪತ್ರಿಕೆ, ಮೈಸೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗಾಂಧಿಜಿ ಅವರ ಆತ್ಮಕಥೆ- ನನ್ನ ಸತ್ಯಾನ್ವೇಷಣೆ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಎಂಬ ಎರಡು ದಿನಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಶನಿವಾರ ‘ಗಾಂಧಿ ವ್ಯಕ್ತಿತ್ವ ಮತ್ತು ವಿಚಾರ: ಸಮಕಾಲೀನ ಸಂದರ್ಭ’ ಕುರಿತು ಅವರು ವಿಷಯ ಮಂಡನೆ ಮಾಡಿದರು.

ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಕೆಲ ಪ್ರಾಂತ್ಯಗಳು ಬ್ರಿಟಿಷರ ಆಳ್ವಿಕೆಯಲ್ಲಿ ಹಾಗೂ ಹಲವು ಪ್ರಾಂತ್ಯಗಳು ರಾಜರ ಆಡಳಿತದಲ್ಲಿ ಇದ್ದರೂ ಸಾರ್ವಜನಿಕರ ಆಶಯ ಒಂದೇ ಆಗಿತ್ತು. ಇದಕ್ಕೆ ಗಾಂಧಿಜಿ ಅವರ ಚಿಂತನೆಗಳು ಹಾಗೂ ಆದರ್ಶಗಳು ಮೂಲ ಕಾರಣವಾಗಿದ್ದವು ಎಂದು ಹೇಳಿದರು. ಗಾಂಧೀಜಿ ಅವರು ದಲಿತೋದ್ಧಾರ ಕಾರ್ಯಗಳು, ನೈರ್ಮಲ್ಯ ಪ್ರಜ್ಞೆ, ಸ್ವಾವಲಂಬನೆ ಇತ್ಯಾದಿ ಅಂಶಗಳ ಕುರಿತು ಜನರಲ್ಲಿ ಮೂಡಿಸಿದ ಪ್ರಜ್ಞೆಯೇ ಸಂಪೂರ್ಣ ಸ್ವಾತಂತ್ರ್ಯಕ್ಕೆ ಜನರ ಬೆಂಬಲ ನೀಡುವಂತಾಯಿತು. ಗಾಂಧಿಜಿ ರೂಪಿಸಿದ ಸಾಮಾನ್ಯ ಅಭ್ಯುದಯದ ಚಿಂತನೆ ಅಹಿಂಸೆ, ಸತ್ಯಾಗ್ರಹ ಮತ್ತು ಸ್ವಾವಲಂಬನೆಯ ಮೂಲಕ ಜನರನ್ನು ಒಂದೇ ವೇದಿಕೆಗೆ ತರುವ ಮೂಲಕ ಗಾಂಧಿಜಿ ಅವರು ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಸಫಲರಾದರು.

ಚರಕ ಚಳವಳಿ: ಚರಕ ಚಳವಳಿಯು ಕೇವಲ ನೂಲುವ ಅಥವಾ ಬಟ್ಟೆ ತಯಾರಿಸುವ ಚಟುವಟಿಕೆಯಾಗಿರಲಿಲ್ಲ. ಅದು ಬ್ರಿಟಿಷರ ಆರ್ಥಿಕ ಶಕ್ತಿಗೆ ಸವಾಲೊಡ್ಡಿದ ಸ್ವಾವಲಂಬನೆಯ ಚಳವಳಿಯಾಗಿತ್ತು. ಭಾರತದಿಂದ ಹತ್ತಿಯನ್ನು ಇಂಗ್ಲೆಂಡಿಗೆ ಕೊಂಡೊಯ್ದು, ಅಲ್ಲಿ ಬಟ್ಟೆ ತಯಾರಿಸಿ ಮತ್ತೆ ಭಾರತಕ್ಕೆ ತಂದು ಮಾರಾಟ ಮಾಡಲಾಗುತ್ತಿತ್ತು. ಶೇ.೫೦- ೬೦ರಷ್ಟು ಭಾರತೀಯರು ತಮ್ಮ ಬಟ್ಟೆಯನ್ನು ತಾವೇ ತಯಾರಿಸಿಕೊಳ್ಳುವುದನ್ನು ಕಲಿತಾಗ ಬ್ರಿಟಿಷರ ಜವಳಿ ಉದ್ಯಮಕ್ಕೆ ಹೊಡೆತ ಬಿತ್ತು. ಹೀಗೆ ಬ್ರಿಟಿಷರ ಆರ್ಥಿಕ ಹಿಡಿತ ದುರ್ಬಲಗೊಳ್ಳಲು ಗಾಂಧೀಜಿಯವರ ಚರಕ ಚಳವಳಿ ಮಹತ್ವದ ಕೊಡುಗೆ ನೀಡಿತು ಎಂದು ವಿಶ್ಲೇಷಿಸಿದರು.

ಅಹಿಂಸತ್ಮಾಕ ಹೋರಾಟ: ಅಹಿಂಸಾತ್ಮಕ ಹೋರಾಟದ ಮಹತ್ವವನ್ನು ವಿವರಿಸಿದ ಅವರು, ಗಾಂಧಿಜಿಯವರ ಆಗಮನಕ್ಕೂ ಮುನ್ನ ವೀರಪಾಂಡ್ಯ ಕಟ್ಟಬೊಮ್ಮನ್, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕರು ಸಶಸ ಹೋರಾಟ ನಡೆಸಿದ್ದರು. ಆದರೆ ಪ್ರಬಲ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸುವುದು ಸುಲಭವಾಗಿರ ಲಿಲ್ಲ. ಹಿಂಸಾತ್ಮಕ ಹೋರಾಟದಲ್ಲಿ ಭಾಗವಹಿಸುವವರಿಗೆ ಮರಣ ದಂಡನೆ ಅಥವಾ ದೀರ್ಘಕಾಲದ ಜೈಲು ಶಿಕ್ಷೆಯ ಅಪಾಯ ವಿತ್ತು. ಆದರೆ ಅಹಿಂಸಾತ್ಮಕ ಸತ್ಯಾಗ್ರಹದಲ್ಲಿ ಭಾಗ ವಹಿಸು ವವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಲು ಅವಕಾಶ ವಿತ್ತು.

ಹೀಗಾಗಿ ಸಾಮಾನ್ಯ ಜನರೂ ನಿರ್ಭೀತಿಯಿಂದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು ಎಂದರು. ಅಲ್ಲದೆ, ಬ್ರಿಟಿಷರ ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಕಾರ್ಯನಿರ್ವಹಿಸುತ್ತಿದ್ದರು. ಹಿಂಸಾತ್ಮಕ ಹೋರಾಟಕ್ಕೆ ಮುಂದಾದರೆ ಭಾರತೀಯರೇ ಭಾರತೀಯರ ವಿರುದ್ಧ ಹೋರಾಡಿ ಜೀವ ತೆಗೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಅಪಾಯವನ್ನು ತಪ್ಪಿಸುವಲ್ಲಿ ಅಹಿಂಸಾತ್ಮಕ ಹೋರಾಟ ಪ್ರಮುಖ ಪಾತ್ರ ವಹಿಸಿತು. ಸತ್ಯಾಗ್ರಹದ ನೈತಿಕ ಶಕ್ತಿಯ ಮೂಲಕ ಬ್ರಿಟಿಷರ ಆಡಳಿತಕ್ಕೆ ಪ್ರತಿರೋಧ ಒಡ್ಡಲು ಗಾಂಧಿಜಿ ಜನರಿಗೆ ಮಾರ್ಗ ತೋರಿಸಿದರು ಎಂದು ಹೇಳಿದರು.

ಗಾಂಧೀಜಿಯವರ ಮಹತ್ವವನ್ನು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತಗೊಳಿಸಬಾರದು. ಅವರು ಇರದಿದ್ದರೂ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಸಾಧ್ಯತೆ ಇತ್ತು. ಆದರೆ ಇಂದು ಕಾಣುವ ಸಂಘಟಿತ ಮತ್ತು ಏಕೀಕೃತ ಭಾರತದ ನಿರ್ಮಾಣದಲ್ಲಿ ಗಾಂಧಿಜಿಯವರ ಕೊಡುಗೆ ಮಹತ್ವದ್ದಾಗಿದೆ. ದೇಶದ ಜನರನ್ನು ಒಂದೇ ಚಿಂತನೆಯಡಿ ಸಂಘಟಿಸುವುದರ ಜೊತೆಗೆ ಸ್ವಾವಲಂಬನೆಯ ಬದುಕಿನ ಮಹತ್ವವನ್ನೂ ಅವರು ಕಲಿಸಿದರು ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಪ್ರತಿಯೊಂದಕ್ಕೂ ಭೌತಿಕ ವಸ್ತುಗಳ ಮೇಲೆ ಅವಲಂಬಿತರಾಗುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಸೌಲಭ್ಯಗಳಿಲ್ಲದಿದ್ದರೂ ಬದುಕುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಕುರ್ಚಿ ಇಲ್ಲದಿದ್ದರೆ ನೆಲದ ಮೇಲೆ ಕುಳಿತುಕೊಳ್ಳುವ, ಮೈಕ್ ಇಲ್ಲದಿದ್ದರೂ ಮಾತನಾಡುವ ಸಾಮರ್ಥ್ಯ ಇರಬೇಕು. ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕುವುದೇ ಗಾಂಧೀಜಿಯವರ ಚಿಂತನೆಗಳ ಇಂದಿನ ಪ್ರಸ್ತುತತೆಯಾಗಿದೆ ಎಂದು ವಿವರಿಸಿದರು.

ಉಪ್ಪಿನ ಸತ್ಯಾಗ್ರಹ: ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದ ಕಚ್ಚಾ ವಸ್ತುಗಳನ್ನು ಬ್ರಿಟನ್‌ಗೆ ಕೊಂಡೊಯ್ದು, ಅಲ್ಲಿ ಸಿದ್ಧಪಡಿಸಿದ ಉತ್ಪನ್ನಗಳನ್ನು ಮತ್ತೆ ಭಾರತಕ್ಕೆ ತಂದು ಮಾರಾಟ ಮಾಡುವ ಮೂಲಕ ಬ್ರಿಟಿಷರು ವ್ಯಾಪಾರ ನಡೆಸುತ್ತಿದ್ದರು. ಈ ವ್ಯಾಪಾರ ವ್ಯವಸ್ಥೆಯ ಭಾಗವಾಗಿ ಭಾರತದಲ್ಲಿ ಉಪ್ಪು ಉತ್ಪಾದನೆ ಮತ್ತು ಮಾರಾಟದ ಮೇಲೆಯೂ ನಿರ್ಬಂಧ ವಿಧಿಸಲಾಗಿತ್ತು. ಭಾರತೀಯರು ಸ್ವತಃ ಉಪ್ಪು ತಯಾರಿಸದಂತೆ ಕಾನೂನು ರೂಪಿಸಿ, ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದ ಉಪ್ಪಿಗೆ ಮಾರುಕಟ್ಟೆ ಸೃಷ್ಟಿಸುವುದು ಬ್ರಿಟಿಷರ ಉದ್ದೇಶವಾಗಿತ್ತು. ಅತಿ ಕಡಿಮೆ ಬೆಲೆಯ ಉಪ್ಪನ್ನು ತಯಾರಿಸುವುದು, ಸಾಗಿಸುವುದು ಅಥವಾ ಮಾರಾಟ ಮಾಡುವುದಕ್ಕೂ ಕಠಿಣ ದಂಡ ವಿಧಿಸಲಾಗುತ್ತಿತ್ತು. ಇಂತಹ ಅನ್ಯಾಯದ ಕಾನೂನಿನ ವಿರುದ್ಧ ಗಾಂಧಿಜಿ ಉಪ್ಪಿನ ಸತ್ಯಾಗ್ರಹವನ್ನು ರೂಪಿಸಿದರು.

ಉಪ್ಪು ಪ್ರತಿಯೊಬ್ಬರಿಗೂ ಪರಿಚಿತವಾದ ವಸ್ತು. ಅದರ ಅಗತ್ಯವನ್ನು ವಿವರಿಸಲು ದೊಡ್ಡ ತಾತ್ವಿಕ ಭಾಷಣಗಳ ಅಗತ್ಯ ವಿರಲಿಲ್ಲ. ಅಡುಗೆ ಮನೆಯಿಂದ ಸಾಮಾನ್ಯ ಜನರ ಬದುಕಿನವರೆಗೆ ಹಾಸುಹೊಕ್ಕಾಗಿದ್ದ ಉಪ್ಪನ್ನೇ ಸ್ವಾತಂತ್ರ್ಯ ಹೋರಾಟದ ಸಂಕೇತವನ್ನಾಗಿ ಗಾಂಧಿಜಿ ಬಳಸಿಕೊಂಡರು. ದುಬಾರಿ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಿದರೂ ಒಂದು ಚಿಟಿಕೆ ಉಪ್ಪಿಲ್ಲದೆ ರುಚಿ ಬರುವುದಿಲ್ಲ. ಅದೇ ರೀತಿ ಸ್ವಾತಂತ್ರ್ಯವಿಲ್ಲದ ಬದುಕು ಎಷ್ಟೇ ಶ್ರೀಮಂತಿಕೆಯಿಂದ ಕೂಡಿದ್ದರೂ ಅದಕ್ಕೆ ನಿಜವಾದ ಅರ್ಥವಿರುವುದಿಲ್ಲ ಎಂಬ ತಾತ್ವಿಕ ಸಂದೇಶವನ್ನು ಉಪ್ಪಿನ ಮೂಲಕ ಗಾಂಧಿಜಿ ಅವರು ಸಾರಿದರು ಎಂದರು. ಉಪ್ಪಿನ ಸತ್ಯಾಗ್ರಹವು ಮಹಿಳೆಯರನ್ನು ಸಾರ್ವಜನಿಕ ಹೋರಾಟದ ಕ್ಷೇತ್ರಕ್ಕೆ ಕರೆತರುವಲ್ಲಿ ಇದು ಪ್ರಮುಖ ಪಾತ್ರವಹಿಸಿತು. ದೆಹಲಿಯೊಂದರ ಸುಮಾರು ೬ ಸಾವಿರ ಮಹಿಳೆಯರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಎಂಬುದನ್ನು ಅವರು ಉಖಿಸಿದರು.

ಸಣ್ಣ ಸಣ್ಣ ಸಂಗತಿಗಳಲ್ಲಿಯೂ ದೊಡ್ಡ ತಾತ್ವಿಕ ಅರ್ಥವನ್ನು ಕಂಡುಕೊಳ್ಳುವ, ವಿರೋಧಿಗಳನ್ನೂ ಗೌರವದಿಂದ ಕಾಣುವ, ಅಪಾಯದ ಎದುರು ಧೈರ್ಯದಿಂದ ನಿಲ್ಲುವ ಹಾಗೂ ಸಾಮಾನ್ಯ ಜನರ ಬದುಕಿನೊಂದಿಗೆ ಹೋರಾಟವನ್ನು ಬೆಸೆಯುವ ಗಾಂಧೀಜಿಯವರ ವ್ಯಕ್ತಿತ್ವ ಇಂದಿಗೂ ಪ್ರಸ್ತುತವಾಗಿದೆ. ಇಂತಹ ನಾಯಕತ್ವ ಮತ್ತು ಚಿಂತನೆ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.

ಗಾಂಧೀಜಿ ಮತ್ತು ಹಾಸ್ಯಪ್ರಜ್ಞೆ ಗಾಂಧಿಜಿಯವರಿಗೆ ಉತ್ತಮ ಹಾಸ್ಯಪ್ರeಯೂ ಇತ್ತು. ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಿಟೀಲು ಚೌಡಯ್ಯ ಅವರನ್ನು ಪರಿಚಯಿಸಿದಾಗ, ‘ಹಿ ಈಸ್ ಎ ವಯಲಿನಿ’ ಎಂದು ಹೇಳಿದಕ್ಕೆ, ಗಾಂಧೀಜಿ ತಕ್ಷಣವೇ ‘ಐ ಆಮ್ ಎ ನಾನ್ ವಯಲಿನಿ’ ಎಂದು ತಮಾಷೆಯಾಗಿ ಉತ್ತರಿಸಿದ್ದರು. ಇನ್ನೊಂದು ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭೇಟಿಯಾದಾಗ, ಅವರಿಗೆ ಇಂಗ್ಲಿಷ್ ಬರುವುದಿಲ್ಲವಲ್ಲ ಎಂದು ಗಾಂಧಿಜಿ ತಮಾಷೆಯಾಗಿ ಪ್ರಶ್ನಿಸಿದರಂತೆ. ಅದಕ್ಕೆ ನಾರಾಯಣ ಗುರುಗಳು, ಮಹಾತ್ಮರಿಗೆ ಸಂಸ್ಕೃತ ಬರುವುದಿಲ್ಲ ಎಂದು ನಾನೂ ಕೇಳಿದ್ದೇನೆ ಎಂದು ಅಷ್ಟೇ ಚುರುಕಾಗಿ ಪ್ರತಿಕ್ರಿಯಿಸಿದ್ದರಂತೆ. ಇಂತಹ ಸಂಭಾಷಣೆಗಳು ಗಾಂಧೀಜಿಯವರ ಸರಳತೆ ಮತ್ತು ಹಾಸ್ಯಪ್ರeಗೆ ಸಾಕ್ಷಿಯಾಗಿವೆ ಎಂದು ಅರವಿಂದ ಚೊಕ್ಕಾಡಿ ಉಲ್ಲೇಖಿಸಿದರು.

 

 

ಆಂದೋಲನ ಡೆಸ್ಕ್

Recent Posts

‘ಗಾಂಧೀಜಿ ಬದುಕೇ ಯುವ ಸಮೂಹಕ್ಕೆ ಪಾಠ’

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ ವಿಚಾರ ಮಂಥನ, ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ…

17 mins ago

ಗಾಂಧೀಜಿ ಚಿಂತನೆಗೆ ಒರೆಗಲ್ಲಾದ ಸತ್ಯಾನ್ವೇಷಣೆ

‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹಿರಿಯ ಗಾಂಧಿವಾದಿಗಳು, ವಿದ್ಯಾರ್ಥಿಗಳು ಮೈಸೂರು: ಮಧ್ಯಪ್ರಾಚ್ಯದೇಶಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ತನ್ನ…

39 mins ago

ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಲೋಕಸಭಾ ಸ್ಥಾನಗಳ ಸಂಖ್ಯೆ…

18 hours ago

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಇಂಡಿಯಾ ಮೈತ್ರಿಕೂಟದ ವಿರೋಧ | ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ನವದೆಹಲಿ: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ವಿರೋಧಿಸುವುದಾಗಿ ಇಂಡಿಯಾ ಮೈತ್ರಿಕೂಟ ಘೋಷಿಸಿದೆ. ನವೆಂಬರ್ 30ರಂದು ಲೋಕಸಭೆಯಲ್ಲಿ ಮಸೂದೆ ಚರ್ಚೆಗೆ ಬರುವ ನಿರೀಕ್ಷೆಯಿದೆ. ಲೋಕಸಭೆಯ…

18 hours ago

ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ | ಭರವಸೆ ಈಡೇರಿಸಲು ಬದ್ಧ ಎಂದ ಮೋದಿ

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು…

19 hours ago