Andolana originals

‘ಇಂದಿನ ಯುವಜನರಿಗೆ ಸೂಕ್ತ ವೇದಿಕೆ ಅಗತ್ಯʼ

ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ಪ್ರಸನ್ನಕುಮಾರ್ ಕೆರಗೋಡು ಅಭಿಮತ

ಮೈಸೂರು: ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ಆಲೋಚಿಸುವ ಮನೋಭಾವ ಹೆಚ್ಚುತ್ತಿದ್ದು, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರಸನ್ನಕುಮಾರ್ ಕೆರಗೋಡು ಅಭಿಪ್ರಾಯಪಟ್ಟರು.

೨೦೨೬ನೇ ಸಾಲಿನಲ್ಲಿ ಮಹಾತ  ಗಾಂಧಿಜಿ ಮತ್ತು ಜೈ ಭೀಮ್ ಅವರ ಕುರಿತಾದ ವಿಚಾರಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಜೆನ್‌ಝೀ ಹಾಗೂ ಜೆನ್ ಆಲಾ ತಲೆಮಾರಿನ ಯುವಜನತೆಯು ತಮ್ಮ ಪಾತ್ರ ಮಹತ್ವದ್ದಾಗಿದೆ. ಅಹಿಂಸೆಯ ಹಾದಿಯಲ್ಲಿ ಪ್ರತಿಭಟನೆ ನಡೆಸುವ ಮತ್ತು ಪ್ರಶ್ನೆ ಕೇಳುವ ಧೋರಣೆ ಹೊಸ ತಲೆಮಾರಿನಲ್ಲಿ ಗೋಚರಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕ- ಯುವತಿಯರು ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹಂಚಿ ಕೊಳ್ಳುತ್ತಿದ್ದಾರೆ. ಆದ್ದರಿಂದ ಯುವಜನತೆಯು ತಮ್ಮ ಅಭಿಪ್ರಾ ಯವನ್ನು ಹಂಚಿಕೊಳ್ಳಲು ಪತ್ರಿಕೆಗಳು ಅವಕಾಶ ಮಾಡಿಕೊಡಬೇಕಾಗಿದೆ ಎಂದರು.

ಅರಸೀಕೆರೆಯ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ಗಾಂಧೀಜಿ ಅವರನ್ನು ಕುರಿತ ಲೇಖನಗಳನ್ನು ಒಳಗೊಂಡಿರುವ ಅರವಿಂದ ಚೊಕ್ಕಾಡಿ ಅವರ ‘ಆಸು ಪಾಸಿನಲ್ಲಿ ಗಾಂಧಿ’ ಎಂಬ ಪುಸ್ತಕವು ಇಂದಿನ ಯುವಜನತೆಗೆ ಬೇಕಾಗಿರುವ ಸೂಕ್ತ ಪುಸ್ತಕವಾಗಿದೆ. ಇಂತಹ ಪುಸ್ತಕಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾಗಿದೆ. ಆದರೆ, ಇಂದಿನ ಮಕ್ಕಳಿಗೆ ಸಮಾಧಾನವಾಗಿ ಕುಳಿತುಕೊಳ್ಳುವ ವ್ಯವಧಾನವು ಇಲ್ಲವಾಗಿದೆ. ಆದ್ದರಿಂದ ಶಿಕ್ಷಕರು ಬದುಕನ್ನು ರೂಪಿಸಿಕೊಳ್ಳುವ ಶಿಕ್ಷಣವನ್ನು ನೀಡಬೇಕಾಗಿದೆ ಎಂದರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ, ಗಾಂಧೀಜಿಯವರ ಬದುಕು, ತಾತ್ವಿಕತೆಯ ಸಾಧನೆ ಅಥವಾ ದೇಶಕ್ಕೆ ಅವರ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳಲು ಹಲವು ದಾರಿಗಳಿವೆ. ಮುಖ್ಯವಾಗಿ ಅವರ ಆತ್ಮಕಥೆ, ಅವರೇ ಬರೆದ ಕೃತಿಗಳು, ಲೇಖನಗಳು, ಪತ್ರಗಳು, ಭಾಷಣಗಳ  ಜೊತೆಗೆ ಇವರನ್ನು ಕುರಿತು ಬೇರೆಯವರು ಬರೆದಿರುವ ಬರಹಗಳ ಮೂಲಕ ಅರ್ಥಮಾಡಿಕೊಳ್ಳಬಹುದಾಗಿದೆ ಎಂದರು. ವಿದ್ಯಾರ್ಥಿಗಳಾದ ವರುಣ್, ಗಾನವಿ ಮತ್ತು ತೃಪ್ತಿ ಅವರು ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿದರು.

ಗಾಂಧಿ ವಿಚಾರ ಪ್ರಸ್ತುತ:  ಇಂತಹ ಕಾರ್ಯಕ್ರಮದಿಂದ ಗಾಂಧಿಯವರ ವಿಷಯಗಳಿಗೆ ದೊಡ್ಡ ವ್ಯಾಪ್ತಿ ಸಿಗುತ್ತದೆ.  ‘ಆಂದೋಲನ’ ದಿನಪತ್ರಿಕೆ ಇಂತಹ ಕಾರ್ಯಕ್ರಮವನ್ನು ಮುಂದುವರಿಸಬೇಕು. ಮಕ ಳಿಗೆ ಹೆಚ್ಚು ಮುಟ್ಟಬೇಕು. ಮುಂದಿನ ತಲೆಮಾರಿಗೆ ಗಾಂಧಿ ವಿಚಾರ ಪ್ರಸ್ತುತ.

-ಡಾ.ಕೆ.ಸಿ.ಬಸವರಾಜು, ನಿವೃತ್ತ ಪ್ರಾಧ್ಯಾಪಕ

ಅಭಿನಂದನಾರ್ಹ ಕೆಲಸ:  ‘ಆಂದೋಲನ’ ದಿನಪತ್ರಿಕೆ ಗಾಂಧಿಜಿಯವರ ಕುರಿತು ವರ್ಷದಿಂದ ಉತ್ತಮ ಲೇಖನವನ್ನು ಪ್ರಕಟಿಸಿದೆ. ಜೆನ್‌ಝೀ ಸಮುದಾಯಕ್ಕೆ ತಲುಪುವ ಕಾರ್ಯ ಮಾಡಿರುವುದು ಬಹಳ ಅಭಿನಂದನಾರ್ಹವಾಗಿದೆ.

-ದಯಾನಂದ ಸಾಗರ್, ಸಂಚಾಲಕ,  ಮೈಸೂರು ಗ್ರಾಹಕ ಪರಿಷತ್

ಗಾಂಧಿಜಿ ವಿಚಾರಧಾರೆ ಅಗತ್ಯ: ಪ್ರಸ್ತುತ ಸಮಾಜಕ್ಕೆ ಗಾಂಧೀಜಿಯವರ ವಿಚಾರಧಾರೆಗಳು ಅಗತ್ಯವಾಗಿವೆ. ಸಮಾಜವು ಶಾಂತಿಯುತವಾಗಿ ಸಾಗಲು ಗಾಂಧಿಜಿಯವರ ಸಂದೇಶಗಳನ್ನು ತಿಳಿಯಬೇಕಿದೆ.

-ಸುಪ್ರೀತ್ ಕುಮಾರ್, ಸಂಶೋಧನಾ ವಿದ್ಯಾರ್ಥಿ,

ಗಾಂಧಿ ಅಧ್ಯಯನ ಕೇಂದ್ರ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ:  ‘ಆಂದೋಲನ’ ದಿನಪತ್ರಿಕೆ ಹಾಗೂ ಗಾಂಧಿ ಅಧ್ಯಯನ ಕೇಂದ್ರ ಸೇರಿ ಮಾಡಿರುವ ಈ ಕಾರ್ಯಕ್ರಮವು ಮಕ ಳ ಮನಸ್ಸಿಗೆತುಂಬಾ ಪರಿಣಾಮಕಾರಿಯಾದ ಸಂದೇಶ ನೀಡುತ್ತದೆ.

-ಎಸ್.ಶಿವಪ್ಪ, ಅಧ್ಯಕ್ಷ ,ಜನಪರ ವೇದಿಕೆ

ಇಂತಹ ಕಾರ್ಯಕ್ರಮ ಅತ್ಯಗತ್ಯ:  ಮಹಾತ್ಮ ಗಾಂಧಿಜಿಯವರ ಹೋರಾಟ ಹಾಗೂ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ,  ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ. ‘ಆಂದೋಲನ’ ಪತ್ರಿಕೆ ಹಾಗೂ ಗಾಂಧಿ ಅಧ್ಯಯನ ಕೇಂದ್ರ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿವೆ.

-ವಿಜಯಕುಮಾರ್, ನಿವೃತ್ತ ಬ್ಯಾಂಕ್ ‌ನೌಕರ

ಗಾಂಧೀಜಿ ಚಿಂತನೆ ಇಂದು ಅನಿವಾರ್ಯ:  ಯುದ್ಧದ ಭೀತಿಯಲ್ಲಿ ನಲುಗುತ್ತಿರುವ ಪ್ರಪಂಚಕ್ಕೆ ಗಾಂಧೀಜಿ ಅವರ ಚಿಂತನೆ ಅತ್ಯಂತ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಪ್ರೇರಣೆಯಾಗಲಿವೆ. ಯುವಜನರ ಮನಸ್ಸಿನಲ್ಲಿ ಗಾಂಧೀಜಿ ಅವರ ಆಲೋಚನೆಗಳು ನೆಲೆಗೊಳ್ಳಲಿ.

-ಪ್ರೊ.ಡಿ.ಆನಂದ್, ನಿವೃತ್ತ ಪ್ರಾಧ್ಯಾಪಕ

ಅರ್ಥಪೂರ್ಣ ಕಾರ್ಯಕ್ರಮ:  ಮಹಾತ್ಮ ಗಾಂಧೀಜಿಯವರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಾಲದಲ್ಲಿ ‘ಆಂದೋಲನ’ ದಿನಪತ್ರಿಕೆ ಹಾಗೂ ಗಾಂಧಿ ಅಧ್ಯಯನ ಕೇಂದ್ರ ಸೇರಿ ಗಾಂಧಿಜಿಯವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ.

-ಚಿನ್ನಸ್ವಾಮಿ ವಡ್ಡಗೆರೆ, ಚಿಂತಕ

ಗಾಂಧೀಜಿ ವಿಚಾರ ಅರಿತುಕೊಳ್ಳಿ:  ಗಾಂಧೀಜಿ ವಿಚಾರಧಾರೆಗಳನ್ನು ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಬೇಕಿದೆ.  ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಅವರು ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡರೆ ಸಮಾಜಕ್ಕೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಲಿದೆ.

-ಎಂ.ಯೋಗೇಂದ್ರ,  ಅಂತಾರಾಷ್ಟ್ರೀಯ ಹಿರಿಯ ಅಥ್ಲೀಟ್

ನಿರಂತರವಾಗಿ ಮುಂದುವರಿಯಲಿ:  ‘ಆಂದೋಲನ’ ದಿನಪತ್ರಿಕೆ ಹಾಗೂ ಗಾಂಧಿ ಅಧ್ಯಯನ ಕೇಂದ್ರ ಸೇರಿ ಮಾಡಿರುವ ಈ ಕಾರ್ಯಕ್ರಮ ವಿನೂತನವಾದದ್ದು; ಈ ಪ್ರಯತ್ನ ಮೈಸೂರಿ ನಿಂದ ಆರಂಭವಾಗಿದೆ.  ವಿದ್ಯಾರ್ಥಿಗಳ ಮನಸ್ಸನ್ನು ಇಂತಹ ವಿಚಾರಗಳು ತಲುಪಬೇಕು. ಈ ಕಾರ್ಯಕ್ರಮ ನಿರಂತರವಾಗಿ ಮುಂದುವರಿದು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು.

 – ಡಾ.ಡಿ.ಮಾದೇಗೌಡ,  ವಿಧಾನ ಪರಿಷತ್ ಮಾಜಿ ಸದಸ್ಯರು

ಉತ್ತಮ ಸಂದೇಶ ನೀಡುವ ಕಾರ್ಯಕ್ರಮ:  ‘ಆಂದೋಲನ’ ದಿನಪತ್ರಿಕೆ ಹಾಗೂ ಗಾಂಧಿ ಆಧ್ಯಯನ ಕೇಂದ್ರ ಸೇರಿ ಮಾಡಿರುವ ಈ ಕಾರ್ಯಕ್ರಮವು ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ.  ‘ಆಂದೋಲನ’ ದಿನಪತ್ರಿಕೆ ಸಂಪಾದಕರಾದ ರವಿ ಕೋಟಿ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನರೇಂದ್ರಕುಮಾರ್ ಅವರು ಒಳ್ಳೆಯ ಚಿಂತನೆ ಇಟ್ಟುಕೊಂಡು ಕಾರ್ಯಕ್ರಮವನ್ನುಚೆನ್ನಾಗಿ ರೂಪಿಸಿದ್ದಾರೆ. ಇದರಿಂದ ಮಕ್ಕಳ ಮನಸ್ಸಿಗೂ ಉತ್ತಮ ಸಂದೇಶ ತಲುಪಿದೆ.

-ಕೆ.ಟಿ.ವೀರಪ್ಪ, ಹಿರಿಯ ಗಾಂಧಿವಾದಿ

ಗಾಂಧೀಜಿ ಚಿಂತನೆ ಸಮಾಜಕ್ಕೆ ಪ್ರಸ್ತುತ: ಸತ್ಯ ಎನ್ನುವುದು ಸೊರಗಿ ಹೋಗಿದೆ. ಹೀಗಾಗಿ ಗಾಂಧೀಜಿ ಯವರ ಚಿಂತನೆಗಳು ಹಾಗೂ ಸಂದೇಶಗಳು ಸಮಾಜಕ್ಕೆ ಪ್ರಸ್ತುತವಾಗಿವೆ. ಮತೀಯ ವಿಷಬೀಜ ಬಿತ್ತಲಾಗುತ್ತಿದೆ.  ಇದರ ಬಗ್ಗೆ ಜನ ಜಾಗೃತಿ ವಹಿಸಬೇಕಿದೆ. ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜಕ್ಕೆ ರಕ್ಷಕ ಯೋಧರಂತೆ ಸಂದೇಶ ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಗಾಂಧೀಜಿಯವರ ಸಂದೇಶವನ್ನು ಸಮಾಜದಲ್ಲಿ ಬಿತ್ತಬೇಕು.

-ಪ್ರೊ.ಕುಮಾರಸ್ವಾಮಿ ಕೂಡ್ಲಾಪುರ, ನಿವೃತ್ತ ಪ್ರಾಂಶುಪಾಲ

ಗಾಂಧೀಜಿ ಭಾರತದ ಅಸ್ಮಿತೆ: ಇವತ್ತಿನ ಕಾಲಘಟ್ಟದಲ್ಲಿ ಈ ಕಾರ್ಯಕ್ರಮ ತುಂಬಾ ಪ್ರಸ್ತುತವಾದದ್ದು, ಗಾಂಧಿ ಎನ್ನುವುದು ದೇಶದ ಅಸ್ಮಿತೆ, ಆ ಆಸ್ಮಿತೆ ಅಲ್ಲಾಡುವ ಸ್ಥಿತಿ ಬಂದಿದೆ. ಮತೀಯ ಶಕ್ತಿಗಳು ,ತಿಳಿವಳಿಕೆ ಇಲ್ಲದೇ ಇರುವ ಜನ ಇವತ್ತು ಪ್ರಪಂಚದ ಮುಂದೆ ನಾವೆಲ್ಲ ತಲೆತಗ್ಗಿಸುವ ರೀತಿಯಲ್ಲಿ ಗಾಂಧಿಯವರನ್ನು ಪ್ರತಿ ದಿವಸ ಕೊಲೆ ಮಾಡುತ್ತಿದ್ದಾರೆ.  ಇದನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ.

-ಸ್ಟ್ಯಾನ್ಲಿ, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ

ಗಾಂಧೀಜಿ ಸಂದೇಶ ಪಾಲನೆ ಮಾಡಬೇಕು:  ಗಾಂಧೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಕೊಲೆ ಮಾಡಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಆದರೆ ಒಬ್ಬ ಗಾಂಧಿ , ಇಡೀ ದೇಶಕ್ಕೆ ಸ್ವಾತಂತ್ರ್ಯ ಚಳವಳಿಯಲ್ಲಿ ರಕ್ತರಹಿತ ಕ್ರಾಂತಿ ಮೂಲಕ ೨೫ ವರ್ಷಪಟ್ಟ ಶ್ರಮ ಬಹಳ ಶ್ರೇಷ್ಠ ವಾದದ್ದು, ಬುದ್ಧನ ತತ್ವಸಿದ್ಧಾಂತವನ್ನು ಗಾಂಧೀಜಿಯವರು ಅಳವಡಿಸಿಕೊಂಡಿದ್ದರು. ದೇಶದೆಲ್ಲೆಡೆ ಗಾಂಧೀಜಿಯ ಸಂದೇಶವನ್ನು ಪಾಲನೆ ಮಾಡಬೇಕು.

-ಪುರುಷೋತ್ತಮ್, ಮಾಜಿ ಮಹಾಪೌರ

 

 

 

 

 

 

ಆಂದೋಲನ ಡೆಸ್ಕ್

Recent Posts

ಮುತ್ತಾತ ಕೆಂಚಪ್ಪನವರ ನೆಲದ ಮೇಲೂ ಸರ್ಕಾರದ ಕೆಂಗಣ್ಣು

ಗೋಳೂರು ನಾರಾಯಣಸ್ವಾಮಿ ನಾವು ಅಣ್ಣ-ತಮ್ಮಂದಿರು ಓದು-ಬರಹ ಮುಗಿಸಿ ಕೆಲಸಕ್ಕೆ ಅಂತ ನಂಜನಗೂಡು-ಮೈಸೂರು ಅಲೆದು, ದುಡಿದು ತಿನ್ನುತ್ತಿದ್ದ ಕಾಲದಲ್ಲಿ ನಮ್ಮನ್ನು ಇನ್ನಿಲ್ಲದಂತೆ…

50 seconds ago

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ಗ್ರಹಣ

ದಾಸೇಗೌಡ ಸರಗೂರು: ಅಕ್ಕಿ ಕೊಟ್ಟರೆ ರಾಗಿ ಇಲ್ಲ, ರಾಗಿ ಕೊಟ್ಟರೆ ಅಕ್ಕಿ ಇಲ್ಲ ಎಂಬುದು ಗ್ರಾಹಕರ ಆರೋಪ  ಸರಗೂರು: ಪಟ್ಟಣದ…

7 mins ago

‘ಗಾಂಧೀಜಿ ಬದುಕೇ ಯುವ ಸಮೂಹಕ್ಕೆ ಪಾಠ’

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ ವಿಚಾರ ಮಂಥನ, ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ…

48 mins ago

ಅಹಿಂಸಾ ಚಳವಳಿಯಿಂದಲೇ ಬ್ರಿಟಿಷರನ್ನು ನಡುಗಿಸಿದವರು ಗಾಂಧೀಜಿ: ಅರವಿಂದ ಚೊಕ್ಕಾಡಿ

‘ಗಾಂಧಿ ವ್ಯಕ್ತಿತ್ವ ಮತ್ತು ವಿಚಾರ: ಸಮಕಾಲೀನ ಸಂದರ್ಭ’ ಕುರಿತು ವಿಷಯ ಮಂಡನೆ ಮಾಡಿದ ಹಿರಿಯ ಲೇಖಕರ ಅಭಿಮತ ಮೈಸೂರು: ವಿವಿಧ ಸಂಸ್ಥಾನಗಳು,…

50 mins ago

ಗಾಂಧೀಜಿ ಚಿಂತನೆಗೆ ಒರೆಗಲ್ಲಾದ ಸತ್ಯಾನ್ವೇಷಣೆ

‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹಿರಿಯ ಗಾಂಧಿವಾದಿಗಳು, ವಿದ್ಯಾರ್ಥಿಗಳು ಮೈಸೂರು: ಮಧ್ಯಪ್ರಾಚ್ಯದೇಶಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ತನ್ನ…

1 hour ago