ಹಾಡು ಪಾಡು

ಮುತ್ತಾತ ಕೆಂಚಪ್ಪನವರ ನೆಲದ ಮೇಲೂ ಸರ್ಕಾರದ ಕೆಂಗಣ್ಣು

ಗೋಳೂರು ನಾರಾಯಣಸ್ವಾಮಿ

ನಾವು ಅಣ್ಣ-ತಮ್ಮಂದಿರು ಓದು-ಬರಹ ಮುಗಿಸಿ ಕೆಲಸಕ್ಕೆ ಅಂತ ನಂಜನಗೂಡು-ಮೈಸೂರು ಅಲೆದು, ದುಡಿದು ತಿನ್ನುತ್ತಿದ್ದ ಕಾಲದಲ್ಲಿ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿದ್ದದ್ದು ನಮ್ಮ ಒಂದು ಎಕರೆ ಹೊಲ! ನಮ್ಮ ಹೊಲಗಳು ಬಹಳ ಫಲವತ್ತಾದ ಭೂಮಿ. ಹತ್ತು ಅಡಿ ಮಣ್ಣು ತೆಗೆದರೂ ಒಂದು ಸಣ್ಣ ಕಲ್ಲೂ ಸಿಗದ ಕುಂಕುಮದಂತಹ ಕೆಮ್ಮಣ್ಣು. ಒಂದು ಕಾಳು ಎಡಗೈನಲ್ಲಿ ಎರಚಿದರೂ ಸೊಂಪಾಗಿ ಬೆಳೆಯಬಲ್ಲ ಫಲವತ್ತಾದ ನೆಲ.

ನಮ್ಮ ಮುತ್ತಾತ ಕೆಂಚಪ್ಪನವರಿಂದ ಅಪ್ಪ ಮಹದೇವುವರೆಗೆ ಹಲವು ವರ್ಷಗಳ ಕಾಲ ಹುರುಳಿ, ಅಲಸಂದೆ, ಜೋಳ, ಉದ್ದು, ಹೆಸರು, ರಾಗಿ, ಕಡಲೆಕಾಯಿ, ಹರಳು ಮುಂತಾದ ಖುಷ್ಕಿ ಬೆಳೆಗಳನ್ನು ಬೆಳೆಯುತ್ತಾ ಬಂದರು. ನಮ್ಮ ಬೆಳೆಗೆ ಮಳೆಯೇ ಆಶ್ರಿತ. ನಮ್ಮ ಹೊಲದ ಪಡುವಣಕೆ ಗುಂಡ್ಲ-ಚೂರ್ಣಾವತಿ ಹೊಳೆಗಳು; ಬಡಗಣಕೆ ಕಪನಿ ಹೊಳೆ ಹರಿಯುತ್ತವೆ. ಇದಲ್ಲದೆ ಹುಲ್ಲಹಳ್ಳಿ ನಾಲೆ ಹಾಗೂ ತಗಡೂರು ರಾಮಚಂದ್ರ ರಾವ್ ನಾಲೆ ನಮ್ಮ ಹೊಲವನ್ನು ಸುತ್ತುವರಿದು ಕಾಲಕಾಲಕ್ಕೆ ನೀರು ಹರಿಯುತ್ತದೆ. ಇಂತಹ ಉತ್ತಮವಾದ ವಾತಾವರಣ ಇದ್ದು, ಮಳೆ ಹುಟ್ಟಿದ ತಕ್ಷಣ ನಮ್ಮ ಕಾಡಿಗೆ ಅಪಾರವಾಗಿ ಮಳೆ ಸುರಿಯುತ್ತಿತ್ತು.

ನೋಡು ನೋಡುತ್ತಿದ್ದಂತೆಯೇ ನಮ್ಮ ಕಾಲಕ್ಕೆ ಗುಂಡ್ಲ-ಚೂರ್ಣಾವತಿ ಹೊಳೆಗಳ ಹರಿವಿನ ಪ್ರಮಾಣ ಇಳಿಮುಖವಾಯಿತು. ಅಪರಿಮಿತವಾದ ನೀರಿನ ಬಳಕೆ, ಮರಳು ದಂಧೆ, ಮರಗಳ ಮಾರಣ ಹೋಮದಿಂದ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆ ಆಯಿತು. ನಂಜನಗೂಡಿನಿಂದ ಚಾಮರಾಜನಗರಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಬೃಹದಾಕಾರದ ಆಲ, ಹುಣಸೆ, ಹಿಪ್ಪೆ ಮರಗಳು ರಸ್ತೆಯ ಅಗಲೀಕರಣಕ್ಕೆ ಬಲಿಯಾದವು. ನೂರಾರು ಕಾರ್ಖಾನೆಗಳಾದವು. ಇದೆಲ್ಲದರ ಪರಿಣಾಮ ಮುಂಗಾರು ಕಡಿಮೆಯಾಗಿ, ಹಿಂಗಾರು ಇಲ್ಲದಾಯಿತು. ‘ಆರ್ದ್ರಮಳೆಯು ಅರ್ದಾಕ್ದಂಗೆ ಉಯ್ದರೆ, ಈ ಹಾಳಾದ ಜನ್ಮ ಹೆಣ್ಣಾಗಬಾರದಿತ್ತ ಅಂತಿತಂತ’ ಎಂಬ ನಮ್ಮ ಕಾಡಿನ ಗಾದೆ ಮಾಯವಾಯಿತು.

ನಮ್ಮ ಬಯಲಿನ ಹೊಲಗಳಲ್ಲಿ ಖುಷ್ಕಿ ಬೆಳೆಗಳ ಜೊತೆಗೆ ತರಕಾರಿ, ತೆಂಗು, ಅಡಕೆ ತೋಟಗಳನ್ನು ಹಲವು ರೈತರು ಮಾಡಿದ್ದರು. ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಹಣವುಳ್ಳ ರೈತರು ಕೊಳವೆಬಾವಿ ಕೊರೆಸಿಬೆಳೆಗಳನ್ನು ಉಳಿಸಿಕೊಂಡರು. ಟ್ರಾಕ್ಟರ್, ಟಿಲ್ಲರ್ ತೆಗೆದುಕೊಂಡು ಚೆನ್ನಾಗೇ ಕೃಷಿ ಮಾಡಿ ನೆಮ್ಮದಿಯ ಜೀವನವನ್ನು ಕಟ್ಟಿಕೊಂಡರು. ನಮ್ಮಂತಹ ಬಹುತೇಕ ರೈತರ ಹೊಲಗಳು ಮಳೆ ಇಲ್ಲದೆ ಬಿಸಿಲಿಗೆ ಒಣಗಲು ಶುರು ಮಾಡಿದವು. ಜನರು ನಿಧಾನವಾಗಿ ಕೃಷಿ ಚಟುವಟಿಕೆಯಿಂದ ವಿಮುಖರಾದರು. ನೂರಾರು ಕುಟುಂಬಗಳು ಕೊಡಗಿಗೆ ವಲಸೆ ಹೋದರು. ಅಲ್ಲಿ ಕಾಫಿ ತೋಟದ ಲೈನ್‌ಮನೆಗಳನ್ನು ಸೇರಿದರು. ಅವರೊಂದಿಗೆ ಹೋದ ಸಣ್ಣ ಮಕ್ಕಳ ವಿದ್ಯಾಭ್ಯಾಸ ಮೊಟಕಾಗಿ ಅವರೂ ಕಾಸು ದುಡಿಯುವ ಕೂಲಿಗಳಾದರು.

ಇತ್ತ ಕೆಲವು ರೈತರು ಹೊಲಗಳನ್ನು ಮನೆ-ಮದುವೆಗಾಗಿ ಮಾರಾಟ ಮಾಡಲು ಶುರುಮಾಡಿದರು. ಹಣದ ಆಮಿಷಕ್ಕೆ ಬಲಿಯಾಗಿ ದಲ್ಲಾಳಿಗಳ ದಾಳದಲ್ಲಿ ಸಿಲುಕಿ ಇನ್ನೊಂದಷ್ಟು ರೈತರು ಹೊಲ ಕಳೆದುಕೊಂಡರು. ಈ ದಲ್ಲಾಳಿಗಳು ಎಷ್ಟೇ ಪುಸಲಾಯಿಸಿದರೂ ಭೂಮಿ ಕೊಡದ ಅಪ್ಪ ಹೊಲ ಉಳಿಸಿದರು. ಈ ಹೊತ್ತಿಗೆ ನಮ್ಮ ಓದು ಮುಗಿದು ಕಾಲನ ಹೊಡೆತಕ್ಕೆ ಸಿಲುಕಿ ತಮ್ಮನು ಕಾರ್ಖಾನೆಯಲ್ಲೂ, ನಾನು ಅತಿಥಿ ಶಿಕ್ಷಕನಾಗಿಯೂ, ಮುಂದೆ ಮುದ್ರಣ ಮಾಧ್ಯಮದಲ್ಲೂ ಕೆಲಸ ಮಾಡುವ ಅನಿವಾರ್ಯತೆ ಉಂಟಾಯಿತು. ಹೀಗೆ ಹತ್ತಾರು ಸಂಕ್ರಾಂತಿ ಕಳೆಯುವಷ್ಟರಲ್ಲಿ ಮದುವೆ-ಮಕ್ಕಳ ಜವಾಬ್ಧಾರಿ ಹೆಗಲಿಗೆ ಬಂತು. ಇವೆಲ್ಲಾ ಸಂಕೋಲೆಗಳಿಂದ ಬಿಡಿಸಿಕೊಂಡು ಒಂದಷ್ಟು ಹಣ ಸಂಪಾದಿಸಿದೆವು.

ಸುಮಾರು ಹನ್ನೆರೆಡು ವರ್ಷಗಳ ಕಾಲದಿಂದ ಕೊಳವೆ ಬಾವಿ ತೆಗೆಸಲು ಹಣವಿಲ್ಲದ ಕಾರಣ ಹಾಗೆಯೇ ಒಣಗುತ್ತಾ ಬಿದ್ದಿದ್ದ ಹೊಲದಲ್ಲಿ ಸ್ವ ಉದ್ಯೋಗ ಮಾಡುವುದಾಗಿ ಅಪ್ಪನ ಬಳಿ ಮಾತನಾಡಿದೆವು. ನಾವು ಎಷ್ಟೂ ಅಂತ ಹೊರಗಡೆ ಕೆಲಸ ಮಾಡೋದಕ್ಕೆ ಆಗತ್ತೆ. ಮನೆನೂ ಚಿಕ್ಕದು; ಸಂಸಾರ ದೊಡ್ಡದಾಯಿತು. ಹೊಲದಲ್ಲೇ ಮನೆ ಮಾಡಿ, ಆಡು, ಕುರಿ, ಕೋಳಿ ಸಾಕೋದಾಗಿ ಮಾತಾಯಿತು. ಅಪ್ಪ ಹಸು, ಕುರಿ, ಸಾಕಿ; ಆದರೆ ಆಡು ಬೇಡ. ಅದು ಮೊದ ಮೊದಲಿಗೆ ಕಷ್ಟ ಅಂತ ಸಲಹೆ ಕೊಟ್ಟರು. ‘ಆಡು ಅಂದ್ರ ಅದು ಯಾವಾಗ್ಲೂ ಅತ್ಕಂಡು ಆಕಾಶ ನೋಡುತ್ತ; ಆದ್ರ ಕುರಿ ಹಂಗಲ್ಲ, ಬಕ್ಕಂಡು ಭೂಮಿ ನೋಡುತ್ತಾ. ಭೂಮ್ತಾಯಿ ನಂಬಿದೋರ ಕೈ ಬಿಡಲ್ಲ ಮಾಡ್ರಪ್ಪ ಅಂತ ಹೇಳಿದರು.

ಕೊಳವೆ ಬಾವಿ ಕೊರೆಸಲು ನಂಜನಗೂಡು ಬೋರ್‌ವೆಲ್ ಕಂಪೆನಿಯವರಿಗೆ ಭೇಟಿ ಮಾಡಿ ಮುಂಗಡ ಹಣ ಕೊಟ್ಟು ಬಂದೆವು. ವಿದ್ಯುತ್ ಸಂಪರ್ಕ ಪಡೆಯಲು ವಿದ್ಯುತ್ ಸರಬರಾಜು ನಿಗಮಕ್ಕೆ ಹೋದಾಗ ನಮಗೆ ದೊಡ್ಡ ಆತಂಕದ ಸುದ್ದಿ ತಿಳಿಯಿತು. ನಿಮ್ಮ ೧೪೪/೩B ಸೇರಿದಂತೆ ಒಟ್ಟು ಸುಮಾರು ೫೦೦ ಎಕರೆಗೆ KIADB ಅವರು ಹಾಗೂ KHB ಅವರು ಭೂ ಸ್ವಾಧೀನಕ್ಕಾಗಿ ನೋಟಿಸ್ ನೀಡಿ ಭೂಸ್ವಾಧೀನ ಪ್ರಕ್ರಿಯೆ ಜಾರಿಗೊಳಿಸಿದ್ದಾರೆ. ಇದರಿಂದ ನಿಮಗೆ ನಾವು ವಿದ್ಯುತ್ ಸಂಪರ್ಕ ಕಲ್ಪಿಸಲು ಆಗುವುದಿಲ್ಲ ಎಂದು ತಿಳಿಸಿದರು.

ಎಲ್ಲೆಲ್ಲೂ ಇದೇ ಮಾತಾಯಿತು. ಒಂದು ವಾರದ ಬಳಿಕ ನೋಟಿಸ್ ಬಂತು! ಅಲ್ಲಿ ‘ನಿಮ್ಮ ಜಮೀನನ್ನು ಕೈಗಾರಿಕಾಭಿವೃದ್ಧಿಗಾಗಿ ಸರ್ಕಾರ ಭೂಸ್ವಾಧೀನ ಮಾಡಲಾಗಿದೆ. ನಿಮ್ಮ ಆಕ್ಷೇಪಣೆ ಇದ್ದಲ್ಲಿ ಮೂವತ್ತು ದಿನಗಳೊಳಗೆ ತಲುಪಿಸಿ’ ಎಂದಿತ್ತು. ಆಕ್ಷೇಪಣೆ ಸಲ್ಲಿಸಿದ್ದೇವೆ. ಭೂಮಿ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ‘ಹೋರಾಟ ನಮಗೇನೂ ಹೊಸದಲ್ಲ: ಅದು ರಕ್ತದಲ್ಲೇ ಇದೆ’ ಹೋರಾಡುತ್ತೇವೆ.

” ಆಕ್ಷೇಪಣೆ ಸಲ್ಲಿಸಿದ್ದೇವೆ. ಭೂಮಿ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ‘ಹೋರಾಟ ನಮಗೇನೂ ಹೊಸದಲ್ಲ: ಅದು ರಕ್ತದಲ್ಲೇ ಇದೆ’ ಹೋರಾಡುತ್ತೇವೆ..”

 

 

 

ಆಂದೋಲನ ಡೆಸ್ಕ್

Recent Posts

ಬೆಟ್ಟ ಕುರುಬರ ಪುಟ್ಟಮ್ಮನವರ ಜೊತೆ ಒಂದಿಷ್ಟು ಹೊತ್ತು

ಸೂರ್ಯಪುತ್ರ ಹೆಗ್ಗಡದೇವನಕೋಟೆ ಎಲಚಿಕಟ್ಟೆ ಹಾಡಿಯ ಬೆಟ್ಟಕುರುಬರ ಪುಟ್ಟಮ್ಮನ ಕುಟುಂಬ ಬಹಳ ಹಿಂದಿನಿಂದಲೂ ಕಾಡನ್ನೇ ನೆಚ್ಚಿ ಬದುಕಿದವರು. ಕಾಡಿನಲ್ಲೇ ಹುಟ್ಟಿ ಬೆಳೆದ…

1 min ago

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ಗ್ರಹಣ

ದಾಸೇಗೌಡ ಸರಗೂರು: ಅಕ್ಕಿ ಕೊಟ್ಟರೆ ರಾಗಿ ಇಲ್ಲ, ರಾಗಿ ಕೊಟ್ಟರೆ ಅಕ್ಕಿ ಇಲ್ಲ ಎಂಬುದು ಗ್ರಾಹಕರ ಆರೋಪ  ಸರಗೂರು: ಪಟ್ಟಣದ…

13 mins ago

‘ಇಂದಿನ ಯುವಜನರಿಗೆ ಸೂಕ್ತ ವೇದಿಕೆ ಅಗತ್ಯʼ

ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ಪ್ರಸನ್ನಕುಮಾರ್ ಕೆರಗೋಡು ಅಭಿಮತ ಮೈಸೂರು: ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ಆಲೋಚಿಸುವ ಮನೋಭಾವ ಹೆಚ್ಚುತ್ತಿದ್ದು,…

19 mins ago

‘ಗಾಂಧೀಜಿ ಬದುಕೇ ಯುವ ಸಮೂಹಕ್ಕೆ ಪಾಠ’

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ ವಿಚಾರ ಮಂಥನ, ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ…

54 mins ago

ಅಹಿಂಸಾ ಚಳವಳಿಯಿಂದಲೇ ಬ್ರಿಟಿಷರನ್ನು ನಡುಗಿಸಿದವರು ಗಾಂಧೀಜಿ: ಅರವಿಂದ ಚೊಕ್ಕಾಡಿ

‘ಗಾಂಧಿ ವ್ಯಕ್ತಿತ್ವ ಮತ್ತು ವಿಚಾರ: ಸಮಕಾಲೀನ ಸಂದರ್ಭ’ ಕುರಿತು ವಿಷಯ ಮಂಡನೆ ಮಾಡಿದ ಹಿರಿಯ ಲೇಖಕರ ಅಭಿಮತ ಮೈಸೂರು: ವಿವಿಧ ಸಂಸ್ಥಾನಗಳು,…

56 mins ago

ಗಾಂಧೀಜಿ ಚಿಂತನೆಗೆ ಒರೆಗಲ್ಲಾದ ಸತ್ಯಾನ್ವೇಷಣೆ

‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹಿರಿಯ ಗಾಂಧಿವಾದಿಗಳು, ವಿದ್ಯಾರ್ಥಿಗಳು ಮೈಸೂರು: ಮಧ್ಯಪ್ರಾಚ್ಯದೇಶಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ತನ್ನ…

1 hour ago