ಹಾಡು ಪಾಡು

ಎತ್ತು ಏರಿಗೆ, ಎಮ್ಮೆ ನೀರಿಗೆ… ಕೋಣ ನೀ ಮಾತ್ರ ಮೈಸೂರಿಗಾ?

ಅಕ್ಷತಾ

‘ಐಸ್ಸೀ ಇವುಗಳೂ ಸ್ಕೂಲಿಗೆ ರೆಡಿಯಾಗಿ ನಿಂತ್ಕೊಂಡವೆ. ಕರ್ಕೊಂಡು ಹೋದ್ರೆ ಹೆಂಗಿರತ್ತೆ?’ ಬೈಲಿನಲ್ಲಿ ಮೇಯುತ್ತಿರುವ ಕೋಣಗಳನ್ನು ಕಂಡು ಗುಂಪಿನ ಪೋಕ್ರಿ ವಿನಯ ಹೇಳಿದ. ಬೆಳಗ್ಗಿನ ಎಳೆ ಬಿಸಿಲಿಗೆ ಎಣ್ಣೆ ಮಸಾಜ್ ಮಾಡಿಸ್ಕೊಂಡು ಮೇಯುತ್ತಿದ್ದ ಕೋಣಗಳು ಮಕ್ಳ ಕಣ್ಣಿಗೆ ಹೀರೋಗಳು.

ಮಾರುದ್ದ ಹಗ್ಗ ಸೇರಿಸಿ ಕಟ್ಟಿ ಹಾಕಿದ್ದ ಅವುಗಳ ಹತ್ತಿರ ಹೋಗೋ ಧೈರ್ಯ ಯಾರಿಗೂ ಇಲ್ಲ ಬಿಡಿ! ಆದ್ರೂ ಮೈಯನ್ನಾದ್ರೂ ಒಂದ್ಸಾರಿ ಮುಟ್ಬೇಕು ಅನ್ನೋ ಆಸೆಗೆ ಹತ್ರ ಹೋದರೆ ದುಡಿಪಣೆ (ಹಾಯದಂತೆ ಹಾಕುವ ಹಗ್ಗದ ಗವಸು) ನಡುವಿನಿಂದ ನೋಡುವ ನೋಟ ಮಾತ್ರ ಛಳ್ಳೆನ್ಸಿ ಸಾವಾಸಾನೇ ಬೇಡಪ್ಪಾ ಅಂಥ ದೂರದಿಂದಲೇ ಕೋಣ ಸುಖವನ್ನು ಯಾವ ಕಮೆಂಟ್ರಿಗೂ ಕಡಿಮೆಯಿಲ್ಲದಂತೆ ವಿಶ್ಲೇಷಿಸುತ್ತಿದ್ದ ವಿನಯ. ‘ಛೇ! ಲೈಫಂದ್ರೆ ಕೋಣಗಳದ್ದು ಕಣ್ರಪಾ. ಹೋಂ ವರ್ಕ್ ತಲೆಬಿಸಿನೂ ಇಲ್ಲ. ಟೀಚರ್ ಕೈಯಿಂದ ಪೆಟ್ಟು ತಿನ್ನೋ ಕಷ್ಟಾನೂ ಇಲ್ಲ. ಬೇಕಾದಷ್ಟೂ ಮೇಯತ್ವೆ, ಎಲ್ಲಾದ್ರೂ ಬಿದ್ಕೊಂಡಿರ‍್ತವೆ, ಎಂತಾ ಜೀವ್ನಾನಪ್ಪಾ. ಕೋಣ ಆಗಿಯಾದ್ರೂ ಹುಟ್ಬಾರ್ದಿತ್ತಾ? ನಮ್ದೂ ಇದೆ ಜೀವ್ನ… ಬೆಳಿಗ್ಗೆ ಏಳು, ಸ್ನಾನ ಮಾಡು, ತಿಂಡಿ ತಿನ್ನು, ಶಾಲೆಗೆ ಹೋಗು… ಮತ್ತೆ ಸಂಜೆ ಬಾ… ಹೋಂ ವರ್ಕು ಮುಗ್ಸು ಇಷ್ಟೇ ಆಯ್ತು. ಹಳ್ಳದಲ್ಲಿ ಬೀಳೋ ಸುಖಾನಾದ್ರೂ ದೇವ್ರು ಕರುಣಿ ಸ್ಬಾರ್ದಾ’ ಹೀಗೆ ಏನೇನೋ ಆಸೆಗಳು ಅವನದ್ದು. ಆಗಷ್ಟೇ ವಿನಯನ ಅಪ್ಪನಿಗೆ ನಮ್ಮ ಹಳ್ಳಿ ಪೋಸ್ಟಾಫೀಸಿಗೆ ಪೇಟೆಯಿಂದ ವರ್ಗವಾಗಿತ್ತು. ಹಳ್ಳಿ ಮತ್ತು ಅಲ್ಲಿನ ವಾತಾವರಣ ಅವ್ನಿಗೆ ಹೊಸತು.

ಆದರೆ ಹುಟ್ಟಿದ ಲಾಗಾಯ್ತು ದನ, ಕೊಟ್ಟಿಗೆ, ಎತ್ತು, ಕೋಣಗಳನ್ನು ನೋಡ್ತಿದ್ದ ನಮ್ಗೆ ಮಾತ್ರ ಒಂದಿನಾನೂ ಕೋಣಗಳದ್ದು ಸುಖದ ಬದುಕು ಅನ್ನಿಸ್ಲೇ ಇಲ್ಲ. ಕಂಬಳಕ್ಕೆ ಹೋಗುವ ಒಂದು ಜೋಡಿ ಕೋಣಗಳು ಮತ್ತು ಉಳುಮೆಗೆ ಗದ್ದೆಗಿಳಿಯುತ್ತಿದ್ದ ಕೋಣಗಳ ನಡುವೆ ಯಾವಾಗ್ಲೂ ಒಂತರಾ ಮಲತಾಯಿ ಧೋರಣೆ. ಬೆಳಗ್ಗೆದ್ದು ಕಂಬಳದ ಕೋಣಗಳಿಗೆ ಇರುತ್ತಿದ್ದ ವಿಶೇಷ ಆರೈಕೆ ಉಳುಮೆಗೆ ಇಳಿಯುತ್ತಿದ್ದ ಕೋಣಗಳಿಗೆ ಇಲ್ಲದ್ದನ್ನು ನೋಡಿ ಅದೆಷ್ಟೋ ಸರ್ತಿ “ಯಾಕಪ್ಪಾ ಹೀಗ್ಮಾಡೋದು? ಕೋಣಗಳಲ್ಲೂ ಜಾತಿಗೀತಿ ಅಂತೇನಾದ್ರೂ ಭೇದ ಮಾಡ್ಬಿಟ್ಟಿದೀರಾ?” ಕೇಳಿದ್ದೆ. ಅದರೆ ನನ್ನ ಹುಚ್ಚುಮಾತಿಗೆ ಸುಮ್ಮನೆ ನಕ್ಕ ಚಿಕ್ಕಪ್ಪನ ನಗುವಿನ ಗೂಢಾರ್ಥ ತಿಳಿದುಕೊಳ್ಳುವ ಕುತೂಹಲ ಆ ವಯಸ್ಸಿಂದಲ್ಲ.

ಅಪ್ಪ ಚಿಕ್ಕಪ್ಪಂದಿರು ಹಸು – ಕರು, ಎತ್ತು; ಕೋಣಗಳೊಡನೆಯೇ ಬದುಕು ಕಟ್ಟಿಕೊಂಡವರು. ದಿನ ಬೆಳಗಾದರೆ ಕೊಟ್ಟಿಗೆ ಒಲೆಯ ದೊಡ್ಡ ಹಂಡೆಯಲ್ಲಿ ಬೇಯುತ್ತಿದ್ದ ಹುರುಳಿ ಕಾಳಿನ ಘಮ ಒಂದು ಕಡೆಯಾದರೆ, ಅವುಗಳಿಗೆಂದೇ ಹಿಂಡಿ ಬೂಸಾ ಇಡುವ ಕೋಣೆಯಲ್ಲಿ ಇಲಿಗಳದ್ದೇ ಕಾರುಬಾರು! ಹುರುಳಿ ಬೇಯಿಸ ಹೊರಟಿದ್ದಾರೆಂದರೆ ನಮಗಂತೂ ಹಬ್ಬ. ಬೆಂದ ಹುರುಳಿಕಾಳಿನ ಮೇಲಿನ ತಿಳಿನೀರನ್ನು ತೆಗೆದು ಮೆಣಸು ಅರೆದು ಮಾಡುತ್ತಿದ್ದ ಸಾರು ಅನ್ನಕ್ಕೆ ಪಕ್ಕಾ ಜೋಡಿ. ಬೋಗುಣಿ ಹಿಡಿದು ಊಟಕ್ಕೆ ಕೂರುತ್ತಿದ್ದ ಮಕ್ಕಳಿಗೆ ಒಂದೊಂದೇ ಸೌಟು ಸಾರು ಬಡಿಸುತ್ತಿದ್ದ ಅಜ್ಜಿಯಲ್ಲಿ – ಇನ್ನೊಂದು ಸೌಟು ಬಡ್ಸೇ ಅಬ್ಬೆ? ಅಂದ್ರೆ – ಸಾಕು,ನಿಮ್ಮನ್ನೆಲ್ಲ ಯಾವ ಕಂಬಳಕ್ಕೆ ಓಡ್ಸೋದಿದೆ? ಎಂದು ರೇಗುತ್ತಿದ್ದಳು. ಉಳುಮೆಯ ಕೋಣಗಳ ಆರೈಕೆ ಒಂದು ತೆರನಾದರೆ, ಕಂಬಳದ ಓಟದ ಕೋಣ ಮನೆತನದ ಪ್ರತಿಷ್ಠೆಯ ಹೆಗ್ಗುರುತು. ಭತ್ತದ ಕೊಯ್ಲಿನ ನಂತರ ಚಳಿಗಾಲದಲ್ಲಿ ಆರಂಭವಾಗಿ ಬೇಸಿಗೆಯ ಕೊನೆಯ ತನಕ ನಡೆಯುತ್ತಿದ್ದ ಕಂಬಳದಲ್ಲಿ ಕೋಣಗಳನ್ನು ಸ್ಪರ್ಧಾ ಕಣಕ್ಕೆ ಇಳಿಸುವುದು ಮಾಲೀಕನಿಗೆ ಹೆಮ್ಮೆಯಾದರೆ, ಪದಕದತ್ತ ದೃಷ್ಟಿ ಕೋಣ ಓಡಿಸುವವನದ್ದು. ಗೆದ್ದ ಕೋಣಗಳನ್ನು ಸಾಕುವ ಬಾಬ್ತು ಮೊತ್ತವನ್ನು ವಿಜೇತ ಕೋಣಗಳಿಗೆ ಕೊಟ್ಟು ಪದಕವನ್ನು ಕೊರಳಿಗೆ ಹಾಕಿದರೆ ಮನೆತನಕ್ಕೊಂದು ಬಹುಮಾನದ ಮನ್ನಣೆ. ಆದರೆ ಅಲ್ಲೀವರೆಗಿನ ಸಾಕುವ ತಾಪತ್ರಯಗಳು ಮಾತ್ರ ಅಷ್ಟಿಷ್ಟೇ?

ಹಲವು ನಿಷಿದ್ಧ – ಬದ್ಧಗಳ ನಡುವಿನ ಕೋಣಗಳದ್ದು ಮಾತ್ರ ರಾಜ ಠೀವಿ! ಕಂಬಳದ ಗದ್ದೆಗೆ ಹೊರಟು ನಿಂತ ಕೋಣಗಳನ್ನು ಕೊಂಬು ವಾದ್ಯಗಳೊಂದಿಗೆ ಆರತಿ ಎತ್ತಿ ಬೀಳ್ಕೊಡುತ್ತಿದ್ದುದಷ್ಟೇ ಚಿಕ್ಕಂದಿನ ಕಂಬಳದ ನೆನಪು. ಅದ್ಯಾವಾಗ್ಲೋ ಒಂದ್ಸಲ ಕಂಬಳಕ್ಕೆ ಹೊರಟು ನಿಂತ ಅಪ್ಪನೊಡನೆ ಹೋಗಲು ರಚ್ಚೆ ಹಿಡಿದಾಗ ‘ಮಕ್ಳು, ಹೆಂಗಸ್ರು ಕಂಬ್ಳ ನೋಡೋ ಹಾಗಿಲ್ಲ. ಹೋದ್ರೆ ಕಾಲು ಮುರೀತೇನೆ’ ಬೈದ ಅಜ್ಜಿಯಲ್ಲಿ ‘ಯಾಕೆ ಹೋಗ್ಬಾರ್ದು?’ ಮೊಂಡು ಹಠ ಬಿಡದೆ ಕೇಳಿದೆ. ‘ಹೋಗ್ಬಾರ್ದು ಅಂದ್ರೆ ಹೋಗ್ಬಾರ್ದು’ ಕಡ್ಡಿ ಮುರಿದಂತೆ ಹೇಳಿದ ಅಜ್ಜಿಯ ಬಾಯಿಗೆ ಹೆದರಿ ಸುಮ್ಮನಾದರೂ ‘ಯಾಕೆ ಹೋಗಬಾರದು’ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಬಾಲ್ಯದ ಪೊರೆ ಕಳಚಿಕೊಂಡ ನಂತರವೇ. ಎಣ್ಣೆ ಮಸಾಜಿನ ಕೋಣಗಳ ಮೈಮೇಲಿದ್ದ ಬಾರುಕೋಲಿನ ಏಟಿನ ಗುರುತು ಸಣ್ಣವರಿದ್ದಾಗ ಎಂದೂ ಕಾಣಲೇ ಇಲ್ಲ. ಗತ್ತಿನ ಕೋಣಗಳ ಬದುಕಿನ ಇನ್ನೊಂದು ಮುಖ ಕಂಬಳಕ್ಕೆ ಹೊರಟು ನಿಂತ ವಾದ್ಯಘೋಷಗಳಷ್ಟು ಇಂಪಾಗಿರದೆ ಕಡು ನೋವು ಮಡುಗಟ್ಟಿದ ಬೊಬ್ಬೆಗಳೆಂದು ಗೊತ್ತಾಗುವ ವೇಳೆ ಕಂಬಳ ಮನರಂಜನೆ ಅನ್ನಿಸುವ ಬದಲಾಗಿ ಮನಸ್ಸನ್ನು ಕಸಿವಿಸಿಗೊಳಿಸುವ ಆಟವಾಯಿತು.

ಕೋಣಗಳಿಗೇನು ಗೊತ್ತು ಬಹುಮಾನ, ಹಾರ, ತುರಾಯಿಗಳ ಮರ್ಮ..? ಬೆನ್ನಿಗೆ ಬೀಳುವ ಏಟಿಗೆ ಹಿಂದೆಮುಂದೆ ನೋಡದೆ ಓಡುವವುಗಳಿಗೆ ಪೆಟ್ಟು ತಪ್ಪಿಸುವುದೊಂದೇ ಗುರಿ! ಈಗೀಗ ಕಂಬಳದ್ದೇ ಸುದ್ದಿ! ಕರಾವಳಿ ಭಾಗದಲ್ಲಷ್ಟೇ ನಡೆಯುತ್ತಿದ್ದ ಕಂಬಳ ರಾಜ ಮೆರುಗಿನಿಂದ ರಾಜಕೀಯ ಮೆರುಗಿನತ್ತ ವಾಲಿದೆ. ಹೊಲ, ಗದ್ದೆಗಳ ಜಾಗದಲ್ಲಿ ಸೈಟು, ಫ್ಲ್ಯಾಟುಗಳು ತಲೆಯೆತ್ತಲಾರಂಭಿಸಿ ಬೇಸಾಯದ ದಣಿವು ತಣಿಸುವ ಜಾನಪದ ಕ್ರೀಡೆಯ ರೂಪುರೇಷೆಯೂ ಬದಲಾ ಯಿತು. ಹಳ್ಳಿ ತೊರೆದು ಪಟ್ಟಣ ಸೇರುವ ಹಿಂಡಿನೊಡನೆ ಕಂಬಳ ದಂತಹವುಗಳೂ ಸೇರಿಕೊಂಡವು ಎಂದುಕೊಳ್ಳುತ್ತಿದ್ದಾಗ ‘ಕೋಣಗಳೆಷ್ಟು ಸುಖಿಗಳು’ ಅನ್ನುತ್ತಿದ್ದ ಗೆಳೆಯ ವಿನಯ ನೆನಪಾದ. ಈಗಲೂ ಹಾಗೆಂದು ಕೊಳ್ಳುತ್ತಿರಬಹುದೇ ಎಂದು ಯೋಚಿಸಿ ಕರೆ ಮಾಡಿದೆ. ‘ನೋಡಪಾ ನಮ್ಮೂರಿನ ಕೋಣಗಳು ನಿಮ್ಮೂರಿಗೆ ಬರ್ತಿವೆ. ವೆಲ್ಕಮ್ ಮಾಡ್ಕೋಪಾ’ ಅಂದೆ. ಅವ್ರು ‘ಅಲ್ಲ ಐದಾರು ತಾಸು ಬಸ್ಸಿನಲ್ಲೋ, ಕಾರಿನಲ್ಲೋ ಕುಳಿತು ಪ್ರಯಾಣಿಸುವ ನಮ್ಗೇ ಸುಸ್ತು ಹೋಗಲ್ಲ. ಇನ್ನು ಈ ಕೋಣಗಳ ಗತಿಯೇನು?’ ಅಂದ. ‘ತಿಂಗ್ಳ ಮೊದ್ಲು ಬರ್ತಾವಪ್ಪ ನೋಡ್ಕೋ’ ಕಿಚಾಯಿಸಿದೆ. ‘ಬಂದು ಇಲ್ಲಿ ಮಾಡೋದೇನು! ಕುಚ್ಚಲಕ್ಕಿ ಗಂಜಿ, ಚಟ್ನಿ ಉಣ್ಣೋ ಇಷ್ಟು ಸಣ್ಣ ಹೊಟ್ಟೆಯ ನಂಗೆ ನಿಂಗೇ ಫುಡ್ ಪಾಯ್ಸನ್ನು ತಪ್ಪಿಲ್ಲ. ಇನ್ನು ಹಂಡೆಗಟ್ಲೆ ಹುರುಳಿಕಾಳು ತಿನ್ನೋ ಅವುಗಳ ಗತಿಯೇನು?’ ಅಂತ ಹೇಳಿದ. ‘ಹೌದಲ್ವ!’ ಯೋಚ್ನೆ ನಂಗೂ ಬಂತು. ‘ಕೋಣಗಳೇ ಸುಖಿಗಳು… ಅವುಗಳ ಸುಖ ನಮ್ಗಾದ್ರೂ ಇರ್ಬಾರ್ದಾ ಅಂತಿದ್ಯಲ್ಲ. ಈಗ್ಲೂ ಹಾಗೇ ಹೇಳ್ತೀಯಾ?’ ಕೇಳಿದೆ. ‘ದಮ್ಮಯ್ಯಾ ಬಿಟ್ಬಿಡೇ….ಕೋಣಗಳ ಪಾಡು ಕೇಳೋರು ಯಾರು? ಮಾತೇನಾದ್ರೂ ಬರ್ತಿದ್ರೆ ಉಗ್ದು ಉಪ್ಪಿನ್ಕಾಯಿ ಹಾಕ್ತಿದ್ವು. ‘ಎತ್ತು ಏರಿಗೆ, ಎಮ್ಮೆ ನೀರಿಗೆ’ ಅನ್ನೋದೇನೋ ಸರಿ, ಆದ್ರೆ ಈ ಕೋಣಗಳು ಯಾವೂರಿಗೆ? ಹೇಳು ನೋಡಣ. ಹಳ್ಳಿಯಿಂದ ದಿಲ್ಲಿಗೆ ಹೊರಟ ಕೋಣಗಳು ಅತ್ಲಾಗಿ ಅಲ್ಲೂ, ಇತ್ಲಾಗಿ ಇಲ್ಲೂ ಇರಲಾರದೆ ನಮ್ಹಾಗೆ ಒದ್ದಾಡೋ ದಿನ ದೂರ ಇಲ್ಲ ನೋಡು ಮತ್ತೆ? ಅಂತಂದ. ‘ಹ್ಮ್ ಕೋಣಗಳೇ ನೀವೇ ಭಾಗ್ಯವಂತರು. ಇನ್ನೂರು ಮುನ್ನೂರು ಕಿಲೋಮೀಟರ್ ಪ್ರಯಾಣಿಸುವ ತನಕ. ಚಪ್ಪಾಳೆ ಮೈಕು ಸೆಟ್ಟಿನ ನಡುವೆ ಕಳೆದು ಹೋಗುವ ತನಕ! ಬೀಳೋ ಪೆಟ್ಟಿಗೆ ಸೆಟೆದು ನಿಲ್ಲುವ ತನಕ! ಯಾವೂರಿಗೋ ಪಯಣ ಬಲ್ಲವರಾರು?’

” ಕೋಣಗಳೇ ನೀವೇ ಭಾಗ್ಯವಂತರು. ಇನ್ನೂರು ಮುನ್ನೂರು ಕಿಲೋಮೀಟರ್ ಪ್ರಯಾಣಿಸುವ ತನಕ… ಚಪ್ಪಾಳೆ ಮೈಕು ಸೆಟ್ಟಿನ ನಡುವೆ ಕಳೆದು ಹೋಗುವ ತನಕ! ಬೀಳೋ ಪೆಟ್ಟಿಗೆ ಸೆಟೆದು ನಿಲ್ಲುವ ತನಕ!”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಫುಟ್‌ಪಾತ್ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿ

ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟಿನ ಆದೇಶವು ಕಾರಣವಾಗಿದೆ, ನಿಜ. ಆದರೆ ತೆರವಿಗೆ ಮುನ್ನ ಇಂತಹ ವ್ಯಾಪಾರಿಗಳಿಗೆ ಬದಲಿ ಶಾಶ್ವತ…

5 hours ago

ಓದುಗರ ಪತ್ರ: ಗೋಲ್ಡನ್ ಪಾಸ್‌ನ ‘ಗೌರವ’ ಕಾಪಾಡಿ

ವಿಶ್ವವಿಖ್ಯಾತ ಮೈಸೂರಿನ ದಸರಾದಲ್ಲಿ ಕಳೆದ ಬಾರಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸಾವಿರಾರು ರೂಪಾಯಿಗಳ ದರ ನಿಗದಿಪಡಿಸಿ ಗೋಲ್ಡನ್ ಪಾಸ್‌ಗಳನ್ನು ವಿತರಣೆ…

5 hours ago

ಓದುಗರ ಪತ್ರ: ರೈತರ ವಿರೋಧ ಕಟ್ಟಿಕೊಳ್ಳುವುದೇಕೆ?

ಬಿಡದಿ ಟೌನ್‌ಶಿಪ್ ನಿರ್ಮಾಣವನ್ನು ಮಾಡೇ ತೀರುತ್ತೇವೆ ಎನ್ನುವಂತಹ ಹಠಕ್ಕೆ ಬಿದ್ದಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಆದರೆ ಈಗಾಗಲೇ ವಿರೋಧ ಪಕ್ಷಗಳಲ್ಲದೆ…

5 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ವಿದ್ಯಾರ್ಥಿಗಳ ಹೋರಾಟಕ್ಕೆ ಕಿವುಡಾದ ಬಿಜೆಪಿ ಆಡಳಿತ

ವೈದ್ಯಕೀಯ ಶಿಕ್ಷಣ ಎಂಬಿಬಿಎಸ್ ಮತ್ತು ಅದರ ಸಂಬಂಧಿತ ಬಿಡಿಎಸ್, ಬಿಎಎಂಎಸ್ ಹಾಗೂ ಬಿಎಚ್‌ಎಂಎಸ್ ಪದವಿ ಶಿಕ್ಷಣದ ಪ್ರವೇಶಕ್ಕೆ ಅರ್ಹತೆಯನ್ನು ಪರೀಕ್ಷಿಸುವ…

5 hours ago

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ಪಶ್ಚಿಮ ಘಟ್ಟದ ಸಕಲೇಶಪುರ ರೈಲು ಮಾರ್ಗದಲ್ಲಿ ಶೀಘ್ರವೇ ವಂದೇ ಭಾರತ್ ಪ್ರಯಾಣಿಕರ ರೈಲು ಸಂಚಾರ ಆರಂಭಿಸಲು…

5 hours ago

ಈ ಕಂಬಳ ಯಾಕ್ ಬೇಕೂಂತ?

ಕುಸುಮ ಆಯರಹಳ್ಳಿ ಈ ಊರ ಹಳೇ ಹೆಸರೇನೇಳಿ? ಮಹಿಷ ಮಂಡಲ, ಮಯಿಸನಾಡು, ಮೈಸಾಪುರ... ಆ ಮೈಸಾಪುರವೇ ನಂತರ ಮೈಸೂರು ಆಯ್ತು…

5 hours ago