ಕುಸುಮ ಆಯರಹಳ್ಳಿ

ಈ ಊರ ಹಳೇ ಹೆಸರೇನೇಳಿ? ಮಹಿಷ ಮಂಡಲ, ಮಯಿಸನಾಡು, ಮೈಸಾಪುರ… ಆ ಮೈಸಾಪುರವೇ ನಂತರ ಮೈಸೂರು ಆಯ್ತು ಅಂತ ಹೇಳ್ತಾರೆ. ಇಷ್ಟಕ್ಕೂ ಮೈಸಾ ಅಂದರೆ ಎಮ್ಮೆ – ಕೋಣ ಅಂತ ಅರ್ಥವಂತೆ. ಅಲ್ಲಿಗೆ ನಮ್ಮ ಊರಿಗೂ ಕ್ವಾಣಕ್ಕೂ ಕೊನೆಯಿಲ್ಲದ ನಂಟು. ಈ ನಂಟನ್ನು ಪುನರ್ ಸ್ಥಾಪನೆ ಮಾಡಬೇಕು ಅಂತ ಪುತ್ತೂರಿನ ಶಾಸಕರೊಬ್ಬರ ಕನಸಲ್ಲಿ ಸ್ವತಃ ಕೋಣವೇ ಬಂದು ಹೇಳಿತಂತೆ. ರಾತ್ರಿ ಗಾಢ ನಿದ್ದೆಯಲ್ಲಿದ್ದ ಅವರನ್ನು ತನ್ನ ಎರಡೂ ಕೊಂಬುಗಳಲ್ಲಿ ತಿವಿದೆಬ್ಬಿಸಿ, “ಎದ್ದೋಗು, ಡಿಕೆಶಿಗೆ ನಾ ಹೇಳ್ದೆ ಅಂತ ಹೇಳು. ಈ ಸಲ ಮೈಸೂರು ದಸರಾದಲ್ಲಿ ಕಂಬಳ ಆಗಬೇಕು” ಅಂತಂತೆ. ಶಾಸಕರು ಸೀದಾ ಹೋದ್ದೇ ಮುಖ್ಯಮಂತ್ರಿಗಳಿಗೆ ಹೇಳಿದರಂತೆ. ಆಗ ಪಕ್ಕದಲ್ಲಿದ್ದ ಯಾರೋ, “ಸಾರ್, ಮೊದಲೇ ಬರಗಾಲ. ಮಳೆ ಇಲ್ಲ, ಬೆಳೆ ಇಲ್ಲ. ಕಾಳಿಲ್ಲ, ಕಡ್ಡಿ ಇಲ್ಲ. ದನಗಳಿಗೆ ಮೇವಿಗೂ ಕಷ್ಟ. ಹಿಂದೆಲ್ಲ ಹೀಗೆ ಬರಗಾಲ ಬಂದ್ರೆ ಸರಳ ದಸರಾ ಮಾಡೋರು” ಅಂದ್ರಂತೆ. ಮುಮಂಗಳು “ಸರಳ ಪರಳ ಎಲ್ಲ ಬೇಡ್ರೀ. ನಾವ್ ಅಧಿಕಾರದಲ್ಲಿರೋವಾಗ ಎಲ್ಲ ಅದ್ಧೂರಿಯಾಗೇ ಆಗಬೇಕು ಬರಗಾಲಕ್ಕೇನು ಬತ್ತದೆ ಓಯ್ತದೆ” ಅಂದ್ರಂತೆ. “ಈ ಕಂಬಳ ಅಂದ್ರೆ ಎಕ್ಸ್ರ್ಟಾ ಖರ್ಚಾಗತ್ತಲ್ಲ ಸಾರ್” ಅಂದ್ರಂತೆ. ಅಷ್ಟರಲ್ಲಿ ಉಡುಪಿ  ಶಾಸಕರು “ಹೆಚ್ಗೆ ಏನಿಲ್ಲ ಸರ್, ಬರೀ ೮ ಕೋಟಿ ರೂ. ಅಷ್ಟೇ ಅಂದ್ರಂತೆ. ನಮ್ ಮುಖ್ಯಮಂತ್ರಿಗಳು ನಕ್ಕು, ಬಿಟ್ಟಾಕ್ರಿ ಅದ್ಯಾವ್ ಮಹಾಖರ್ಚು ಅಂದೋರೇ, “ರೀ ಪುತ್ತೂರು ಶಾಸಕರೇ, ಅದೇನ್ ಬೇಕೆಲ್ಲಾ ತಯಾರಿ ಮಾಡ್ಕಳ್ರೀ, ಅದೂ ಒಂದ್ ಮಾಡೇಬಿಡಣ ಅತ್ಲಾಗೆ” ಅಂದು ಇನ್ಯಾವ್ದೋ ಮೀಟಿಂಗಿಗೆ ಹೋದರಂತೆ.

ಇದಾಗಿ ಒಂದು ವಾರಕ್ಕೆ ಪುತ್ತೂರು ಶಾಸಕರು ಮತ್ತೆ ಮುಖ್ಯಮಂತ್ರಿಗಳ ಕಚೇರಿಗೆ ಹೋದಾಗ ಅಲ್ಲಿ ಮೈಸೂರಿನ ಶಾಸಕರೂ ಇದ್ರಂತೆ. ಅಕ್ಕಪಕ್ಕ ಕೂತಿದ್ದ ಇಬ್ರೂ ಪರಸ್ಪರ ಇಣುಕಿದರೆ ಇಬ್ರ ಕೈಲೂ “ದಸರೆಯಲ್ಲಿ ಕಂಬಳ” ಅಂತ ಬರೆದ ಫೈಲು!

ಮೈ.ಶಾ: ಅಲ್ರೀ, ನಮ್ ಜನ ಎಲ್ಲ ನನ್ನತ್ರ ದೂರ್ ಕೊಟ್ಟಿದಾರೆ. ಈ ಕಂಬಳ ಯಾಕ್ ಬೇಕೂಂತ.

ಪು.ಶಾ: ಯಾಕ್ ಬೇಡ ಹೇಳಿ ಮಾರ್ರೆ.

ಮೈ.ಶಾ: ನೋಡಿ, ಇದ್ರಲ್ಲಿ ಬರ್ಕೊಟ್ಟಿದ್ದಾರೆ ನಮ್ ಜನ. ನೀವು ಈ ಕಂಬಳ ಮಾಡೋಕೆ ೪೦೦ ಕೋಣಗಳನ್ನ ನೂರಾರು ಕಿಲೋಮೀಟರು ನಡೆಸಿಕೊಂಡು ಬರ್ತೀರಂತೆ, ಒಂದೊಂದು ಕೋಣ ನೋಡ್ಕಳಕೆ ೫೦ ಜನರಂತೆ. ಅಂದ್ರೆ ಒಟ್ಟು ೨೦ ಸಾವ್ರ ಜನ. ಅಲ್ರೀ ಆ ಕೋಣ ನಡೆಸಿಕೊಂಡು, ಅಲ್ಲಿಂದ ಇಲ್ಲಿಗ್ಯಾಕ್ರೀ ಬರಬೇಕು? ಇಲ್ಲಿ ಬಂದು ಈ ವಾತಾವರಣಕ್ಕೆ ಹೊಂದ್ಕೊಳಕ್ ಮುಂಚೆ ಓಡಬೇಕು ಅವು. ಅವುಗಳನ್ನ ನೋಡ್ಕೊಳೋಕ್ ಬರೋರ್ಗೆ ವ್ಯವಸ್ಥೆ ಆಗಬೇಕು. ಇಲ್ಲಿ ೨೭ ಎಕರೆ ಜಾಗಾನೂ ಕಂಬಳಕ್ಕೆ ಅಂತ ಇಲ್ಲಿ ಮರಗಿಡ ಕಡಿದು, ಅವುಗಳ ಮೇಲೆ ಆಶ್ರಯ ಪಡೆದಿದ್ದ ಪಕ್ಷಿಗಳನ್ನ ಓಡ್ಸಿ, ಕಂಬಳ ನೋಡಕ್ ಬರೋ ಜನ ಅಲ್ ಗಲೀಜು ಮಾಡಿ… ಬೇಕಾ ಇವೆಲ್ಲ? ಅಲ್ರೀ ಈ ಬರಗಾಲದಲ್ಲಿ ಯಾಕ್ರೀ ಇದೆಲ್ಲ?

ಪು.ಶಾ: ಕೋಣಗಳಿಗೆ ಏನೂ ಆಗಲ್ಲ ಮಾರ್ರೆ. ನಾವು ತಂದ ಕೋಣಗಳನ್ನ ಮೈಸೂರು ರಸ್ತೇಲಿ ಬಿಟ್ಟು ಸಹ ಹೋಗಲ್ಲ, ನಮ್ಮ ಊರಿಗೆ ವಾಪಸ್ ತೆಕ್ಕೊಂಡು ಹೋಗ್ತೇವೆ.

ಮೈ.ಶಾ: ತಗಂಡೋಯ್ತೀರ. ಅದ್ ನಮಗೂ ಗೊತ್ತು. ಅತ್ತಿಂದ ಇತ್ತಿಂದ ಓಡಾಡ್ಸಿ, ಆ ಕೋಣಗಳಿಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ? ಆಗೇನು ಮಾಡ್ತೀರ್ರೀ?

ಪು.ಶಾ : ಅವುಗಳಿಗೆ ಎಂತ ಸಾ ಆಗುದಿಲ್ಲ ಮಾರ್ರೆ. ಕ್ವಾಣಗಳಿಗೇನಾಗ್ತದೆ? ಬೆಂಗಳೂರಲ್ಲಿ ಒಮ್ಮೆ ಮಾಡಿದ್ದೇವಲ್ಲ.

ಮೈ.ಶಾ: ಆಗ ಕೋಣಗಳು ಬಾಳ ಕಷ್ಟಪಟ್ವಂತಲ್ಲ, ಸಾಂಪ್ರದಾಯಿಕ ದಸರಾದಲ್ಲಿ ಅದನ್ನ ತಂದು, ಈ ಸಾಂಸ್ಕ ತಿಕ ಕಲಬೆರೆಕೆ ಯಾಕೆ ಮಾಡ್ತೀರಿ?

ಪು.ಶಾ: ಎಂತ ಸಾಂಪ್ರದಾಯಿಕ ದಸರಾ ಬಿಡಿ ಮಾರ್ರೆ. ಏರ್ ಷೋ ಮಾಡುದಿಲ್ವ ನೀವು? ಯುವ ದಸರಾ ಮಾಡಿ ಕುಣೀತೀರಿ. ಅದೆಲ್ಲ ಎಂತದಾ?

ಮೈ.ಶಾ: ರೀ, ಅದೆಲ್ಲ ಮನರಂಜನೆ. ಅದನ್ನೂ ಮಾಡೀಂತ ನಾವೇನೂ ಕೇಳಿಲ್ಲ. ಯಾರೋ ತುರುಕಿದಾರೆ. ಪ್ರತಿವರ್ಷ ರಾಶಿ ಕಸ ಸುರಿದು ಹೋಗ್ತಾರೆ. ನಾವಿಲ್ಲಿ ಕ್ಲೀನು ಮಾಡ್ತಾ ಇರಬೇಕು. ಇಷ್ಟಕ್ಕೂ ಮೈಸೂರು ದಸರಾದಲ್ಲಿ ಕರಾವಳಿ ಕಂಬಳ ಯಾಕ್ರೀ ಮಾಡಬೇಕು? ಕಂಬಳಕ್ಕೆ ಅದರದೇ ಆದ ಹಿನ್ನಲೆ, ಆಚರಣೆ ಐತೆ ತಾನೇ?

ಪು.ಶಾ: ಅದು ಹಾಗಲ್ಲ ಮಾರ್ರೆ. ನಮ್ಮ ಊರಲ್ಲಿ ಆಗುವ ಕಂಬಳ ಮಸ್ತ್ ಇರ್ತದೆ. ಅದನ್ನ ಕುಟುಂಬ ಸಮೇತ ನೋಡಲಿಕ್ಕೆ ನಿಮ್ಮ ಜನರಿಗೆ ಆಗುದಿಲ್ಲವಲ್ಲ, ಅದಕ್ಕೆ ಇಲ್ಲಿಯೇ ತೋರ್ಸುವಾಂತ.

ಮೈ.ಶಾ: ಆಹಾಹಾಹಾ ಏನ್ರೀ ತಲೆ ನಿಮ್ದೂ. ಅಂಗಾರೆ ದಸರಾನ ನಿಮ್ಮೂರವರು ಕುಟುಂಬ ಸಮೇತ ನೋಡಕಾಗಲ್ವಲ್ಲ, ತಗಂಡೋಬುಡಿ ಅತ್ಲಾಗೆ, ಆನೆ ಅಂಬಾರಿ ಎಲ್ಲಾನೂವೇ ನಿಮ್ಮೂರ್ಗೇ. ತೋರಸ್ಕಂಡ್ ಬಂದ್ಬುಡಿ. ಖರ್ಚು ಕಡಿಮೆ ಮಾಡಕಂತೂ ಅವರು ಒಪ್ತಿಲ್ಲ. ಜಾಸ್ತಿ ಮಾಡೋದಾದ್ರೂ ಯಾಕ್ರೀ. ನಮ್ ಜನ ರೊಚ್ಗೆದ್ದು, ಮೈಸೂರ್ ದಸರಾದಲ್ಲಿ ಕಂಬಳ ಮಾಡಿ, ನಿಮ್ ಕಂಬಳ ಶುರುವಾಗೋ ಮುಂಚೆ ನಮ್ ಮಾದೇಶ್ವರನ್ ಮೆರವಣಿಗೆ ಮಾಡಿ ಅಂದ್ರೆ ಎಂಗಿರ್ತದೆ. ೨೫ ಲಕ್ಷ ಲೀಟರ್ ನೀರು ಬೇಕಂತೆ ಕಂಬಳಕ್ಕೆ. ರೀ ಸ್ವಾಮೀ, ಬರಗಾಲ ಕಣ್ರೀ, ಜನಕ್ಕೆ ಕುಡಿಯಕೇ ನೀರಿಲ್ಲ. ಈ ಟೈಮಲ್ಯಾಕ್ರೀ ಇದೆಲ್ಲ? ಮೈಸೂರ ಜನಕೂ ಇಷ್ಟ ವಿಲ್ಲ. ನಿಮ್ ಕರಾವಳಿಯವ್ರೂ ಅಲ್ಲಿ ಕಂಬಳ ಮಾಡದ್ ಬ್ಯಾಡ ಅಂತಾವ್ರೆ.

ಪು.ಶಾ: ಯಾರು ಎಂತ ಏನು ಹೇಳಿದರೂ ಸರಿ. ಈ ಸಲ ದಸರಾದಲ್ಲಿ ನಾವು ಕಂಬಳ ಮಾಡೇ ಮಾಡ್ತೇವೆ. ಮುಖ್ಯಮಂತ್ರಿಗಳು ಹೇಳಿದ ಮೇಲೆ ನಿಮ್ಮದೆಂತ ಪಿರಿಪಿರಿ ಮಾರ್ರೆ.

ಮೈ.ಶಾ: ಎಷ್ಟೇಳದ್ರೂ ಅರ್ಥಾನೇ ಆಗಲ್ವಲ್ರೀ. ಅಷ್ಟರಲ್ಲಿ ಮುಖ್ಯಮಂತ್ರಿಗಳು ಬಂದರು. ಇಬ್ಬರೂ ಕಂಬಳ ಬೇಕು, ಬೇಡ ಫೈಲುಗಳನ್ನು ಹಿಡಿದು ಮೇಲೆದ್ದರು.

” “ಅಂಗಾರೆ ದಸರಾನ ನಿಮ್ಮೂರವರು ಕುಟುಂಬ ಸಮೇತ ನೋಡಕಾಗಲ್ವಲ್ಲ, ತಗಂಡೋಬುಡಿ ಅತ್ಲಾಗೆ ಆನೆ ಅಂಬಾರಿ ಎಲ್ಲಾನೂವೇ ನಿಮ್ಮೂರ್ಗೇ. ತೋರಸ್ಕಂಡ್ ಬಂದ್ಬುಡಿ”

 

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

4 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

5 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

6 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

8 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

9 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

10 hours ago