ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ವಿದ್ಯಾರ್ಥಿಗಳ ಹೋರಾಟಕ್ಕೆ ಕಿವುಡಾದ ಬಿಜೆಪಿ ಆಡಳಿತ

ವೈದ್ಯಕೀಯ ಶಿಕ್ಷಣ ಎಂಬಿಬಿಎಸ್ ಮತ್ತು ಅದರ ಸಂಬಂಧಿತ ಬಿಡಿಎಸ್, ಬಿಎಎಂಎಸ್ ಹಾಗೂ ಬಿಎಚ್‌ಎಂಎಸ್ ಪದವಿ ಶಿಕ್ಷಣದ ಪ್ರವೇಶಕ್ಕೆ ಅರ್ಹತೆಯನ್ನು ಪರೀಕ್ಷಿಸುವ ಮತ್ತು ಪ್ರವೇಶ ನೀಡುವ (ನೀಟ್ ) ಪರೀಕ್ಷೆಯು ಕಳೆದ ಮೇ ೧೨ರಂದು ನಡೆಯಬೇಕಿತ್ತು. ಪರೀಕ್ಷೆಗೂ ಮುನ್ನ ಸಿದ್ಧವಾಗಿದ್ದ ಪ್ರಶ್ನೆ ಪತ್ರಿಕೆಗಳು ಬಿಸಿ ಬಿಸಿ ಬಜ್ಜಿಯಂತೆ ದೇಶದ ಅನೇಕ ಕಡೆಗಳಲ್ಲಿ ವಿಶೇಷವಾಗಿ ಟ್ಯೂಷನ್ ಕೇಂದ್ರಗಳಲ್ಲಿ ಮಾರಾಟವಾಗಿ ಪರೀಕ್ಷೆಯ ಪಾವಿತ್ರ್ಯವನ್ನೇ ಹಾಳುಗೆಡವಿತು. ಈ ಪರೀಕ್ಷೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿಕೊಟ್ಟು ಅವುಗಳನ್ನು ರಹಸ್ಯವಾಗಿ ಮಾರಾಟ ಮಾಡಿ ಪರೀಕ್ಷೆಯ ಪಾವಿತ್ರ್ಯವನ್ನೇ ಹಾಳುಗೆಡವಿದ ಘಟನೆ ದೇಶದ ಯುವಜನರ ಭವಿಷ್ಯಕ್ಕೇ ಕೊಳ್ಳಿ ಇಟ್ಟಿತ್ತು. ಈ ಹೇಯ ಕೃತ್ಯದಲ್ಲಿ ಪಾಲುದಾರರಾದ ಮಹಾರಾಷ್ಟ್ರದ ಲಾಠೂರ್, ಪುಣೆ ಮುಂತಾದ ಕಡೆಗಳ ೧೩ ಮಂದಿ ಅಧ್ಯಾಪಕರುಗಳನ್ನು ಸಿಬಿಐ ಬಂಧಿಸಿದ್ದು ಈಗ ಇತಿಹಾಸ..

ಮೇ ೩ರಂದು ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಮಂಕು ಮಾಡಿತ್ತು. ಪ್ರಶ್ನೆ ಪತ್ರಿಕೆಗಳು ರಾಜಸ್ತಾನ ಮುಂತಾದ ಕಡೆಗಳಲ್ಲಿ ಪರೀಕ್ಷೆಗೂ ಮುನ್ನ ನೂರಾರು ಮಂದಿ ವಿದ್ಯಾರ್ಥಿಗಳ ಕೈ ಸೇರಿತ್ತು. ಈ ಸೋರಿಕೆಯಿಂದ ಮೇ ೧೨ ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನೇ ರದ್ದು ಮಾಡಲಾಯಿತು. ಎನ್ ಟಿ ಎ ಅಧಿಕಾರಿಯೊಬ್ಬರು ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿಲ್ಲ, ಕೆಲವು ಪ್ರಶ್ನೆಗಳು ಕೆಲವು ವಿದ್ಯಾರ್ಥಿಗಳ ಕೈಸೇರಿದೆ ಅಷ್ಟೆ ಎನ್ನುವ ಬೇಜವಾಬ್ದಾರಿ ಉತ್ತರವನ್ನೂ ಕೊಟ್ಟದ್ದು ನಾಚಿಕೆಗೇಡು.

ರಾಷ್ಟ್ರೀಯ ಮಟ್ಟದ ಈ ಅರ್ಹತಾ ಪರೀಕ್ಷೆ ನಡೆಸುವ ಹೊಣೆಗಾರಿಕೆಯ ನೈತಿಕತೆ ಕೇಂದ್ರ ಶಿಕ್ಷಣ ಮಂತ್ರಿಯದ್ದು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಆಡಳಿತ ವೈಫಲ್ಯವನ್ನು ಹೊತ್ತುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಹಜವಾಗಿ ವಿದ್ಯಾರ್ಥಿಗಳು ಮತ್ತು ಪ್ರತಿಪಕ್ಷಗಳ ನಾಯಕರು, ವಿವಿಧ ಶಿಕ್ಷಣ ಕ್ಷೇತ್ರಗಳ ತಜ್ಞರು ದೇಶದಾದ್ಯಂತ ಒಕ್ಕೂರಲಿನಿಂದ ಒತ್ತಾಯಿಸಿದರು. ನೀಟ್ ಪರೀಕ್ಷೆಗೆ ಪಕ್ಕಾ ಸಿದ್ಧವಾಗಿದ್ದ ಹತ್ತಾರು ಮಂದಿ ಅಮಾಯಕ ವಿದ್ಯಾರ್ಥಿಗಳು ತಮಗಿನ್ನು ನ್ಯಾಯ ಸಿಗದು ಎಂದು ಆತ್ಮಹತ್ಯೆಗೆ ಶರಣಾದರು. ಆದರೂ ಶಿಕ್ಷಣ ಮಂತ್ರಿಯ ಮನಸ್ಸು ಕರಗಲಿಲ್ಲ.ವಿದ್ಯಾರ್ಥಿಗಳ ಕೂಗಿಗೂ ಕಿವಿಗೊಡಲಿಲ್ಲ.

ಈ ಅರ್ಹತಾ ಪರೀಕ್ಷೆ ನಡೆಸುವ ಅಧಿಕಾರವನ್ನು ರಾಜ್ಯಗಳಿಗೇ ನೀಡಿ ಎನ್ನುವ ಬೇಡಿಕೆಯನ್ನು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದವಾದರೂ, ಈ ಮನವಿಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಿವುಡಾಯಿತು. ದೇಶದಾದ್ಯಂತ ವಿದ್ಯಾರ್ಥಿಗಳ ಈ ಆಕ್ರಂದನವು ಹೆಚ್ಚಾಯಿತು. ಈ ಘಟನೆಗೆ ಕಾಕತಾಳೀಯ ಎನ್ನುವಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರು ಮೊಕದ್ದಮೆ ವಿಚಾರಣೆ ವೇಳೆ ಯುವಜನರನ್ನು ಉಖಿಸಿ ನಿರುದ್ಯೋಗಿ ಯುವಕರು ಒಂದು ರೀತಿಯಲ್ಲಿ ಜಿರಳೆಗಳು ಮತ್ತು ಪರಾವಲಂಬಿಗಳಿದ್ದಂತೆ ಎಂದು ಕರೆದು ಬಿಟ್ಟರು. ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರದ ವಿದ್ಯಾರ್ಥಿ ಅಭಿಜೀತ್ ದಿಪ್ಕೆ ಎನ್ನುವ ವಿದ್ಯಾರ್ಥಿ ತನ್ನ ದೇಶದ ಅಮಾಯಕ ವಿದ್ಯಾರ್ಥಿಗಳ ಕೂಗಿಗೆ ದನಿಯಾದದ್ದು ಕಾಕತಾಳೀಯ. ನೀಟ್ ಅಕ್ರಮದ ವಿರುದ್ಧ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಲು ಕಾಕ್ರೋಜ್ ಜನತಾ ಪಾರ್ಟಿ ಎಂದು ವಿದ್ಯಾರ್ಥಿಗಳ ಚಳವಳಿಗೆ ದಿಪ್ಕೆ ಕರೆಕೊಟ್ಟಿದ್ದೇ ತಡ ಈ ಜೆನ್ ಜಿ ಎಂದು ಖ್ಯಾತಿ ಪಡೆದ ೧೯೯೦ರ ದಶಕದ ನಂತರ ಹುಟ್ಟಿದ ಯುವಕರು ಬೀದಿಗಿಳಿದೇ ಬಿಟ್ಟರು. ವ್ಯವಸ್ಥೆಯನ್ನು ಅಣಕಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ ಎಂಬ ಅಸಂಘಟಿತ ವಿದ್ಯಾರ್ಥಿ ಕೂಟ ಧುತ್ತನೆ ಕಾಣಿಸಿಕೊಂಡದ್ದು ವಿಶೇಷ. ಶ್ರೀಲಂಕಾ, ನೇಪಾಳದಲ್ಲಿ ನಡೆದಂತಹ ಬದಲಾವಣೆಯ ವ್ಯವಸ್ಥೆಗೆ ಈ ವಿದ್ಯಾರ್ಥಿ ಚಳವಳಿ ಒಂದು ಉತ್ತಮ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದೆ ಎನ್ನುವ ಆಶಾಭಾವನೆಯನ್ನು ಹುಟ್ಟುಹಾಕಿತು. ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ , ಕಿತ್ತು ತಿನ್ನುವ ಬಡತನದ ವಿರುದ್ಧ ಈ ನಿರುದ್ಯೋಗಿ ಪಡೆ ಬೀದಿಗಿಳಿಯಲಿದೆ ಎನ್ನುವ ಭರವಸೆ ದೇಶದಲ್ಲಿ ಹೊಸದೊಂದು ಸಂಚಲನ ಉಂಟು ಮಾಡಿತು.

ದೆಹಲಿ ಮತ್ತು ಕೆಲವು ಪ್ರಮುಖ ನಗರಗಳಲ್ಲಿ ನಿರುದ್ಯೋಗಿಗಳ ಮತ್ತು ಈಗಿನ ವ್ಯವಸ್ಥೆಯಿಂದ ರೋಸಿಹೋಗಿರುವವರು ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ನಿಂತರು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಜವಾಬ್ದಾರಿ ಹೊತ್ತು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಗಳು ಕೇಳಿಬಂದವು. ತಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಕಿವುಡಾದಾಗ ಕಾಕ್ರೋಜ್ ಜನತಾ ಪಾರ್ಟಿ (ಸಿಜೆಪಿ ಅಸಂಘಟಿತ ವಿದ್ಯಾರ್ಥಿಕೂಟ )ಯ ನಾಯಕರಾಗಿ ಆಯ್ಕೆಯಾಗಿದ್ದ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ಹೋರಾಟ ಶುರುವಾಯಿತು. ಈ ಹೋರಾಟಕ್ಕೆ ಆಳುವ ಪಕ್ಷದೊಡನೆ ಸಂಪರ್ಕ ಮತ್ತು ಸಹಾನೂಭೂತಿ ಹೊಂದಿದ್ದಾರೆನ್ನಲಾದ ಕೆಲವರು ಅಭಿಜೀತ್ ದಿಪ್ಕೆ ಮುಂತಾದವರ ವಿರುದ್ಧ ಹ ನಡೆಸಿ ಮುಖಕ್ಕೆ ಕಪ್ಪು ಮಸಿ ಬಳಿದ ಪ್ರಸಂಗವೂ ನಡೆದು ಹೋಯಿತು. ಈ ಪ್ರತಿದಾಳಿ ಈಗಲೂ ಮುಂದುವರಿದಿರುವುದು ವಿಪರ್ಯಾಸ.

ಈ ಎಲ್ಲದರ ನಡುವೆ ಎನ್ ಟಿ ಎ ಜೂನ್ ೨೧ ರಂದು ನೀಟ್ ಪರೀಕ್ಷೆ ನಡೆಸಿ ತನ್ನ ಫಲಿತಾಂಶವನ್ನೂ ಪ್ರಕಟಿಸಿತು. ಇತ್ತ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಈ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲವಾಗಿ ನಿಂತು ಲಡಾಕ್‌ನ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್‌ಚುಕ್ ಕಳೆದ ಜೂನ್ ೨೮ರಂದು ಅನಿರ್ದಿಷ್ಟ ಕಾಲದ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು. ಈ ಇಪ್ಪತ್ತು ದಿನಗಳ ಉಪವಾಸ ಮುಷ್ಕರದಿಂದ ಸೋನಂ ವಾಂಗ್ ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದಂತೆ ದೆಹಲಿ ಹೈಕೋರ್ಟ್‌ಗೆ ಈ ಪ್ರಕರಣ ಮುಟ್ಟಿತು. ದೇಶದ ಪ್ರತಿಯೊಬ್ಬರ ಪ್ರಾಣವೂ ಮುಖ್ಯ.

ಈ ಬಗೆಗೆ ಸರ್ಕಾರ ಗಮನ ಕೊಡಬೇಕೆಂದು ನ್ಯಾಯಾಲಯ ಹೇಳಿತು. ಇದನ್ನೇ ನೆಪಮಾಡಿಕೊಂಡು ಅಪಾಯದ ಸ್ಥಿತಿಗೆ ತಲುಪುತ್ತಿದ್ದ ವಾಂಗ್ ಚುಕ್ ಅವರ ಗಂಭೀರ ಸ್ಥಿತಿಯನ್ನು ಗಮನಿಸಿ ಶನಿವಾರ ದೆಹಲಿ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸ-ರ್‌ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ, ವಾಂಗ್‌ಚುಕ್ ಅವರು ಪೊಲೀಸ್ ಮತ್ತು ವೈದ್ಯರ ಒತ್ತಾಯಕ್ಕೆ ಮಣಿಯದೆ ಆಹಾರ ಸೇವನೆ ಮಾಡದೆ ತಮ್ಮ ನಿರಶನವನ್ನು ಮುಂದುವರಿಸಿರುವುದಾಗಿ ಅವರ ಪತ್ನಿ ಹೇಳಿಕೊಂಡಿದ್ದಾರೆ.

ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟದ ಅಸಗಳು ಹಲವು ಇವೆ. ಅದರಲ್ಲಿ ದೇಶಕ್ಕೆ ಅಹಿಂಸಾತ್ಮಕ ಹೋರಾಟಕ್ಕೆ ಮಹಾತ್ಮ ಗಾಂಧಿ ಅವರು ನೀಡಿದ ಅಸ ಉಪವಾಸ ಸತ್ಯಾಗ್ರಹ. ತಮ್ಮನ್ನು ತಾವೇ ನಿಗ್ರಹಿಸಿಕೊಂಡು ಆಳುವ ವ್ಯವಸ್ಥೆಯ ಗಮನ ಸೆಳೆಯುವ ಈ ಉಪವಾಸ ಸತ್ಯಾಗ್ರಹ ಎನ್ನುವ ಅಸಕ್ಕೆ ಹಿಂದಿನ ಆಳುವ ಸರ್ಕಾರಗಳು ಹೆದರುತ್ತಿದ್ದವು.

ಈ ಸತ್ಯಾಗ್ರಹದ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಂಡು ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರಗಳು ಸ್ಪಂದಿಸುತ್ತಿದ್ದವು. ಆದರೆ ಗಾಂಧಿ ತತ್ವಗಳು ಮತ್ತು ಅವರ ಸತ್ಯಾಗ್ರಹ , ಅಹಿಂಸಾತ್ಮಕ ಹೋರಾಟದ ಬಗೆಗೆ ನಂಬಿಕೆ ಇಲ್ಲದ ಬಿಜೆಪಿ ನೇತೃತ್ವದ ಸರ್ಕಾರ ಸೋನಂ ವಾಂಗ್‌ಚುಕ್ ಹೋರಾಟಕ್ಕೆ ಚಿಕ್ಕಾಸು ಬೆಲೆ ಕೊಡಲಿಲ್ಲ. ಯಾರ ಮಾತಿಗೂ ಯಾರ ಒತ್ತಡಕ್ಕೂ ಮಣಿಯದೆ ವಾಂಗ್ಚುಕ್ ನಿರಶನದತ್ತ ಕಿವಿಗೊಡಲಿಲ್ಲ. ಬಿಜೆಪಿ ಮತ್ತದರ ಮಿತ್ರಪಕ್ಷಗಳ ಯಾವ ನರಪಿಳ್ಳೆಗಳೂ ಇತ್ತ ತಲೆ ಹಾಕಲಿಲ್ಲ. ಆಂದೋಲನ ಜೀವಿಗಳ ಹೋರಾಟಕ್ಕೆ ಯಾವ ಕಿಮ್ಮತ್ತೂ ಸಿಗಲಿಲ್ಲ. ಈ ನಗರ ನಕ್ಸಲರು ಸತ್ತರೆ ಸಾಯಲಿ ಎನ್ನುವ ಧೋರಣೆ ಈ ಸರ್ಕಾರದ್ದು ಎನ್ನುವ ಸತ್ಯ ಅನಾವರಣಗೊಂಡದ್ದು ಈ ಕಾಲದ ಪ್ರಜಪ್ರಭುತ್ವ ದೇಶದ ಬಹುದೊಡ್ಡ ದುರಂತ! ಇಷ್ಟು ಮಾತ್ರವಲ್ಲ ರಾಮಮಂದಿರ ಹೋರಾಟದಿಂದಲೇ ಲಕ್ಷಾಂತರ ಹಿಂದೂ ಜನರನ್ನು ವಶೀಕರಣ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ, ರಾಮಮಂದಿರದಲ್ಲಿ ಭಕ್ತರು ಹುಂಡಿಗೆ ಹಾಕಿದ ಕೋಟ್ಯಂತರ ರೂಪಾಯಿ ಹಣದ ಲೂಟಿ ನಡೆದಿದ್ದರೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಾಯಿ ತೆಗೆದಿಲ್ಲ.ಈ ಎಲ್ಲ ಘಟನೆಗಳನ್ನೂ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ. ಅವರ ಈ ಮೌನ ಹತ್ತಾರು ಲೆಕ್ಕಾಚಾರ ಹಾಕುತ್ತಿರುವಂತೆ ರಹಸ್ಯವಾಗಿಯೇ ಉಳಿದಿದೆ. ಡಾ.ಮನಮೋಹನ್ ಸಿಂಗ್ ಅವರು ತಮ್ಮ ಆಡಳಿತದಲ್ಲಿನ ಅನೇಕ ವಿಷಯಗಳ ಬಗೆಗೆ ಮೌನವಾಗಿರುತ್ತಿದ್ದದ್ದನ್ನೇ ವ್ಯಂಗ್ಯ ಮತ್ತು ಗೇಲಿ ಮಾಡುತ್ತಿದ್ದ ನರೇಂದ್ರ ಮೋದಿ ಈಗ ಅದೇ ಜಣಮೌನವನ್ನೇ ಮುಂದುವರಿಸಿರುವುದು ಇತಿಹಾಸದ ವ್ಯಂಗ್ಯ.

ಶಿಕ್ಷಣ ಕ್ಷೇತ್ರದ ತ್ರಿಭಾಷಾ ಸೂತ್ರ, ಹಿಂದಿ ಹೇರಿಕೆ ಹೀಗೆ ಹತ್ತು ಹಲವು ಸಮಸ್ಯೆ ಮತ್ತು ವಿವಾದಗಳ ಬಗೆಗೆ ಎಂದೂ ಯಾರ ಮಾತನ್ನೂ ಕೇಳದ ಬಿಜೆಪಿಯ ಕೇಂದ್ರ ಸರ್ಕಾರ ತಾನು ನಡೆದದ್ದೇ ದಾರಿ ಎನ್ನುವಂತೆ, ಈಗ ನೀಟ್ ಮರು ಪರೀಕ್ಷೆಯನ್ನು ನಡೆಸಿ ಅದರ ಫಲಿತಾಂಶವನ್ನೂ ಪ್ರಕಟಪಡಿಸಿದೆ. ಇತ್ತ ಈ ವಿಷಯಕ್ಕಾಗಿ ತಮ್ಮ ಜೀವದ ಹಂಗು ತೊರೆದು ಅನಿರ್ದಿಷ್ಟ ಕಾಲದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಅವರ ಹೋರಾಟದ ನೆಲದಿಂದ ಎಬ್ಬಿಸಿ ಆಗಿದೆ. ಈ ವಿದ್ಯಾರ್ಥಿ ಚಳವಳಿಯ ನಾಯಕ ಅಭಿಜೀತ್ ದಿಪ್ಕೆ ಈಗ ಸೋನಂ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ದೆಹಲಿಯ ಪೊಲೀಸ್ ಈ ಹೋರಾಟದ ಜಗವನ್ನು ಯಾವ ಘಳಿಗೆಯದರೂ ಖಾಲಿ ಮಾಡಿಸುವ ಸಾಧ್ಯತೆಗಳು ಹೆಚ್ಚಿರುವ ಲಕ್ಷಣಗಳು ಕಾಣುತ್ತಿವೆ. ಒಂದು ಅರ್ಥದಲ್ಲಿ ಎಲ್ಲವೂ ಮುಗಿದಿದೆ. ಈಗ ಮುಂದೇನು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಭ್ರಮನಿರಸನಗೊಂಡ ಯುವ ಜನ ರೋಸಿಹೋಗಿದ್ದಾರೆ. ಅವರ ಅಸಮಾಧಾನ ಅಲ್ಲಲ್ಲಿ ಕಾಣಿಸಿಕೊಂಡಿತಾದರೂ ಅದು ಸಂಘಟಿತ ಮತ್ತು ದೇಶದ ಭವಿಷ್ಯಕ್ಕೆ ಹೊಸ ರೂಪ ನೀಡುವ ಹೋರಾಟದ ಯಾವ ನೀಲಿ ನಕ್ಷೆಯೂ ಕಾಣಲಿಲ್ಲ. ಅರಾಜಕತೆ ರೂಪದಲ್ಲಿಯೇ ಪ್ರತಿಭಟನೆಯ ದನಿ ಕೇಳಿತಾದರೂ ಇದು ಯಾಕೆ ಪರಿಣಾಮಕಾರಿಯಾಗಿ ಯುವಜನತೆಯಲ್ಲಿ ಪ್ರಭಾವ ಬೀರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಈ ಅಸಂಘಟಿತ ಚಳವಳಿ ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ವಿಜೃಂಭಿಸಿತು. ಆರಂಭದ ದಿನಗಳಲ್ಲಿ ಈ ಚಳವಳಿಯು ಮಹಾತ್ಮ ಗಾಂಽ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಆದರ್ಶ ತತ್ವಗಳನ್ನು ಮುಂದಿಟ್ಟುಕೊಂಡಿದೆ ಎಂದು ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಮುಂತಾದವರು ಹೇಳಿದರು. ಆದರೂ ಈ ಹೋರಾಟಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು, ಹಲವು ಯುವ ಸಂಘಟನೆಗಳು ಪ್ರಗತಿ ಪರ, ದಲಿತ ಆದಿವಾಸಿಗಳ ಮತ್ತು ರೈತ ಚಳವಳಿಗಳು ಏಕೆ ನಿಲ್ಲಲ್ಲಿಲ್ಲ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ದಿಕ್ಕು ತಪ್ಪುತ್ತಿರುವ ಮತ್ತು ಓಬಿರಾಯನ ಕಾಲದ ಶಿಕ್ಷಣ ನೀತಿಯ ಮರುಜರಿಯಂತಿರುವ ಇಂದಿನ ಶಿಕ್ಷಣ ನೀತಿ, ನಿರುದ್ಯೋಗ, ಎಲ್ಲೆಡೆ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬೆಲೆ ಏರಿಕೆ ಮತ್ತು ಸಂವಿಧಾನವನ್ನು ಕಡೆಗಣಿಸಿ ನಡೆಯುವ ಆಡಳಿತ ವ್ಯವಸ್ಥೆಯ ವಿರುದ್ಧ ಕಾಣಿಸಿಕೊಂಡ ಈ ವಿದ್ಯಾರ್ಥಿ ಚಳವಳಿಗೆ ಎಡಪಂಥೀಯ ಚಿಂತಕರು ದಾರಿ ತೋರಿಸಬೇಕು. ಈ ಚಳವಳಿಯು ದಾರಿ ತಪ್ಪದಂತೆ ಒಂದು ಸಂಘಟಿತ ಹೋರಾಟಕ್ಕೆ ನಾಂದಿ ಹಾಡುವಂತೆ ಈ ಅವಕಾಶವನ್ನು ವ್ಯವಸ್ಥೆಯು ಸರಿಹೋಗಬೇಕೆನ್ನುವ ಮನಸ್ಸುಗಳು ಒಂದಾಗಿ ನಿಲ್ಲಬೇಕು ಎಂಬುದು ರಾಜ್ಯದಲ್ಲಿ ಈ ಚಳವಳಿಯ ಸಭೆಗಳು ನಡೆದಾಗ ಅವುಗಳ ಜೊತೆಗೆ ಬೆರೆತು ಅಸಮಾನತೆಯ ಸಮಾಜದ ಬದಲಾವಣೆಯನ್ನು ಬಯಸುತ್ತಲೇ ದೆಹಲಿಯ ಹೋರಾಟಕ್ಕೆ ಹೊರಟಿರುವ ಮೈಸೂರಿನ ಡಾ. ಮ.ಪು. ಪೂರ್ಣಾನಂದ ಅವರ ಆಶಾಭಾವನೆ. ಇಂತಹ ನೂರಾರು ಮನಸ್ಸುಗಳಿಗೆ ಈ ಅಸಂಘಟಿತ ಹೋರಾಟ ಸಮಾಜದ ದಿಕ್ಕು ಬದಲಿಸಲು ಶಕ್ತವಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ.

” ಈ ಹೋರಾಟಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು, ಹಲವು ಯುವ ಸಂಘಟನೆಗಳು ಪ್ರಗತಿ ಪರ, ದಲಿತ ಆದಿವಾಸಿಗಳ ಮತ್ತು ರೈತ ಚಳವಳಿಗಳು ಏಕೆ ನಿಲ್ಲಲ್ಲಿಲ್ಲ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.”

 

 

ಆಂದೋಲನ ಡೆಸ್ಕ್

Recent Posts

ಚೆನ್ನಮ್ಮ ನಿಧನ: ಇಂದು, ನಾಳೆ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ…

4 mins ago

ಓದುಗರ ಪತ್ರ: ಫುಟ್‌ಪಾತ್ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿ

ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟಿನ ಆದೇಶವು ಕಾರಣವಾಗಿದೆ, ನಿಜ. ಆದರೆ ತೆರವಿಗೆ ಮುನ್ನ ಇಂತಹ ವ್ಯಾಪಾರಿಗಳಿಗೆ ಬದಲಿ ಶಾಶ್ವತ…

7 hours ago

ಓದುಗರ ಪತ್ರ: ಗೋಲ್ಡನ್ ಪಾಸ್‌ನ ‘ಗೌರವ’ ಕಾಪಾಡಿ

ವಿಶ್ವವಿಖ್ಯಾತ ಮೈಸೂರಿನ ದಸರಾದಲ್ಲಿ ಕಳೆದ ಬಾರಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸಾವಿರಾರು ರೂಪಾಯಿಗಳ ದರ ನಿಗದಿಪಡಿಸಿ ಗೋಲ್ಡನ್ ಪಾಸ್‌ಗಳನ್ನು ವಿತರಣೆ…

7 hours ago

ಓದುಗರ ಪತ್ರ: ರೈತರ ವಿರೋಧ ಕಟ್ಟಿಕೊಳ್ಳುವುದೇಕೆ?

ಬಿಡದಿ ಟೌನ್‌ಶಿಪ್ ನಿರ್ಮಾಣವನ್ನು ಮಾಡೇ ತೀರುತ್ತೇವೆ ಎನ್ನುವಂತಹ ಹಠಕ್ಕೆ ಬಿದ್ದಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಆದರೆ ಈಗಾಗಲೇ ವಿರೋಧ ಪಕ್ಷಗಳಲ್ಲದೆ…

7 hours ago

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ಪಶ್ಚಿಮ ಘಟ್ಟದ ಸಕಲೇಶಪುರ ರೈಲು ಮಾರ್ಗದಲ್ಲಿ ಶೀಘ್ರವೇ ವಂದೇ ಭಾರತ್ ಪ್ರಯಾಣಿಕರ ರೈಲು ಸಂಚಾರ ಆರಂಭಿಸಲು…

7 hours ago

ಈ ಕಂಬಳ ಯಾಕ್ ಬೇಕೂಂತ?

ಕುಸುಮ ಆಯರಹಳ್ಳಿ ಈ ಊರ ಹಳೇ ಹೆಸರೇನೇಳಿ? ಮಹಿಷ ಮಂಡಲ, ಮಯಿಸನಾಡು, ಮೈಸಾಪುರ... ಆ ಮೈಸಾಪುರವೇ ನಂತರ ಮೈಸೂರು ಆಯ್ತು…

7 hours ago