ಅಭ್ಯುದಯ

ತುಳುನಾಡು ಕೃಷಿಯನ್ನು ಬಹುವಾಗಿ ಅವಲಂಬಿಸಿದೆ. ಪಶ್ಚಿಮ ಘಟ್ಟಗಳ ಸೆರಗಿನಿಂದ ಧುಮ್ಮಿಕ್ಕಿದ ನೀರು ಇನ್ನಷ್ಟು ಪಶ್ಚಿಮಕ್ಕೆ, ಅರಬ್ಬೀ ಸಮುದ್ರಕ್ಕೆ ಧಾವಿಸಲು ಅನುವು ಮಾಡಿಕೊಡುವ ಇಲ್ಲಿನ ಮಣ್ಣು ಫಲವತ್ತಾದದ್ದು. ಬಯಲು ಬೆಟ್ಟಗಳ ತಗ್ಗು ಏರುಗಳಿಂದ ಹರಿದು ಹೋಗುವ ಝರಿ, ತೋಡು, ನದಿಗಳು ಇಲ್ಲಿನ ಜನ ಕೃಷಿಯನ್ನು ನೆಚ್ಚಿಕೊಂಡು ಬಾಳುವಂತೆ ಮಾಡಿವೆ. ಒಂದು ಬದಿಗೆ ಸಮುದ್ರ, ಸುತ್ತಲೂ ಆವೃತವಾಗಿರುವ ಸಹ್ಯಾದ್ರಿಯ ಕೋಟೆ, ಹೆಚ್ಚು ಬೀಳುವ ಮಳೆ, ಹಿಂಬಾಲಿಸುವ ಬಿಸಿಲು ಕೃಷಿ ಸಂಸ್ಕ ತಿಯನ್ನು ಬೆಳೆಸಿವೆ.

ಇಂತಹ ವರ್ಣಮಯ ಭೌಗೋಳಿಕ ಪ್ರದೇಶದ ಪ್ರಧಾನ ಬೆಳೆ ಭತ್ತ. ಆಹಾರ ಮತ್ತು ಆರ್ಥಿಕತೆಯ ಅಡಿಪಾಯವಾದ ಭತ್ತ ಬೆಳೆವ ಗದ್ದೆಗಳು ತುಳುನಾಡಿ ನುದ್ದಕ್ಕೂ ಕಾಣಿಸುತ್ತವೆ. ಆಹಾರವನ್ನು ಬೆಳೆವ ಇದೇ ಹೊಲಗಳು ಮಳೆ ಗಾಲದ ತುದಿಯಲ್ಲಿ ಯಕ್ಷಗಾನದ ರಂಗಸ್ಥಳಗಳಾಗುತ್ತವೆ. ಮಣ್ಣಿನ ಮಕ್ಕಳ ಸಾಂಸ್ಕ ತಿಕ ಹಸಿವನ್ನು ತಣಿಸುವ ಈ ಗದ್ದೆ ಬಯಲುಗಳಲ್ಲಿ ಉಳುಮೆಗೆ ಸಹಕರಿಸುವ ಪ್ರಾಣಿ – ಪರಿಕರಗಳನ್ನು ಬಳಸಿಕೊಂಡು ನಡೆಯುವ ಅಪರೂಪದ ಕ್ರೀಡೆ ಕಂಬಳ. ಕರಾವಳಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ನಡೆಯುವ ಓಟದ ಕೋಣಗಳ ಸ್ಪರ್ಧೆಯನ್ನು ಕಂಬಳ ಎನ್ನುತ್ತಾರೆ.

ಕಂಬಳವನ್ನು ಕ್ರೀಡೆಯೆಂದೂ, ಸಾಂಸ್ಕ ತಿಕ ಆಚರಣೆಯೆಂದೂ ಪರಿಗಣಿಸಲಾಗುತ್ತದೆ. ಇದಕ್ಕಿರುವ ಜನಪ್ರಿಯತೆಯಿಂದಾಗಿ ನಾವು ಕೋಣಗಳ ಓಟದ ಪಂಥವನ್ನು ಕಂಬಳವೆಂದು ಕರೆದರೂ ಕೂಡ, ವಿಶಾಲವಾದ ಗದ್ದೆ ಬಯಲಿಗೂ ಈ ಹೆಸರಿದೆ. ಕಂಬಳ ಇಲ್ಲವೆ ಕಂಬುಲ ಎಂದು ಕರೆಯಲಾಗುವ ಗದ್ದೆಗಳು ಪ್ರಾಕೃತಿಕ ಸೌಕರ್ಯಗಳನ್ನು ಬೆಳೆಸಿಕೊಂಡು ನಿರ್ಮಿಸಿದವುಗಳಾಗಿರುತ್ತವೆ. ಕೋಣಗಳ ಓಟಕ್ಕೂ ಅದು ಅನುಕೂಲಕರವಾಗಿರುತ್ತದೆ.

ಕಂಬಳ ಎಂಬ ಹೆಸರಿನ ಮೂಲದ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಕಂಬುಲ ಪದವನ್ನು ಒಡೆದರೆ ‘ಕಂಪ’ ಮತ್ತು ‘ಪುಲ’ ಆಗುತ್ತದೆ. ಕಂಪ ಎಂದರೆ ಕೆಸರು. ತುಳುವಿನಲ್ಲಿ ‘ಕಂಪ ಕಂಡ’ ಎಂದರೆ ಕೆಸರುಗದ್ದೆ.‘ಪುಲ’ ಎಂಬ ಶಬ್ದ ದ್ರಾವಿಡ ಮೂಲದ್ದಾಗಿದೆ. ಆ ಪುಲವೇ ಪೊಲ – ಹೊಲವಾಗಿರಬಹುದು. ಹೀಗಾಗಿ ‘ಕಂಬುಲ’ದ ಪದನಿಷ್ಪತ್ತಿ ಕೆಸರುಗದ್ದೆಯನ್ನೇ ಸೂಚಿಸುತ್ತಿರಬಹುದು ಎಂದು ನಾವು ತಿಳಿಯಬಹುದು. ‘ಕಂಬುಲದ ಪೂಕರೆ’ ಎಂಬುದು ತುಳುವಿನ ಪ್ರಮುಖ ನುಡಿಗಟ್ಟು. ಬದು ಕಟ್ಟಿ ನೀರುನಿಂತ ಗದ್ದೆಯ ನಡುವಿನಲ್ಲಿ ಪೂಕರೆ ನೆಡುವುದು ಕಂಬಳದ ಪ್ರಮುಖ ಘಟ್ಟ. ತೇರಿನ ಆಕೃತಿಯಂತೆ ತಯಾರು ಮಾಡಿದ ಉದ್ದನೆಯ ಕಂಬವನ್ನು ಪೂಕರೆ ಎನ್ನುತ್ತಾರೆ. ಹೆಸರಿಗೆ ಅನ್ವರ್ಥವಾಗಿ ಈ ಕೋಲಿನ ಅಂಚುಗಳನ್ನು ಹಳದಿ ಹೂಗಳಿಂದ ಸಿಂಗರಿಸಲಾಗುತ್ತದೆ.

ಈ ಪೂಕರೆ ಉತ್ಸವದ ದಿನ ಉಳುಮೆಗೆ ಬಳಸುತ್ತಿದ್ದ ಕೋಣಗಳನ್ನು ಮೋಜಿಗಾಗಿ ಓಡಿಸುವ ಪದ್ಧತಿ ಇತ್ತು. ಕಂಬಳದ ಕೋರಿ ಎಂದು ಇದನ್ನು ವಿಶೇಷವಾಗಿ ಗುರುತಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಅಳದಂಗಡಿಯ ಆರ್ಕಿಜೆ, ಪಟ್ಟದ ಕಂಬಳಗಳಲ್ಲಿ, ಕೊಕ್ಕಡದ ಕೋರಿ ಜಾತ್ರೆಯಲ್ಲಿ ಈಗಲೂ ಈ ಬಗೆಯ ಕೋಣಗಳ ಓಟ ಸಾಂಕೇತಿಕವಾಗಿ ನಡೆಯುತ್ತದೆ. ಇಲ್ಲಿ ಸ್ಪರ್ಧೆ ಇಲ್ಲ. ಆರಂಭದಲ್ಲಿ ಪೂಕರೆ ಆಚರಣೆಯ ಭಾಗವಾಗಿದ್ದ ಕೋಣಗಳ ಓಟ ವರ್ತಮಾನದಲ್ಲಿ ಸ್ಪರ್ಧೆಯಾಗಿ ವಿಕಸನಗೊಂಡಿದೆ. ಕೃಷಿಯ ಚಟುವಟಿಕೆಯನ್ನು ಅವಲಂಬಿಸಿರುವ ಈ ಸ್ಪರ್ಧೆ ನಡೆಯುವುದು ಚಳಿಗಾಲದಲ್ಲಿ. ಜಿಲ್ಲೆಯ ವಿವಿಧೆಡೆಗಳಲ್ಲಿ ಕಂಬಳ ಓಟದ ಸ್ಪರ್ಧೆ ದೀಪಾವಳಿಯ ನಂತರ ಆರಂಭವಾಗಿ ಶಿವರಾತ್ರಿಯ ಹೊತ್ತಿಗೆ ಮುಕ್ತಾಯವಾಗುತ್ತದೆ. ತುಳುವಿನ ಕಾಲಮಾನದಲ್ಲಿ ಕರ್ಮದಲ್ಲಿ ಜಾರ್ದೆ ತಿಂಗಳಿಂದ ಸುಗ್ಗಿ ತಿಂಗಳ ಮಧ್ಯೆ ನೆರವೇರುತ್ತದೆ.

ಕಂಬಳ ಸ್ಪರ್ಧೆಯಾಗಿ ರೂಪಗೊಳ್ಳುವ ಹಿಂದಿನ ಕಾಲದಿಂದಲೂ ಕೊರಗ ಸಮುದಾಯದವರ ಪಾಲ್ಗೊಳ್ಳುವಿಕೆಯನ್ನು ನಾವು ಗಮನಿಸುತ್ತೇವೆ. ಕಂಬಳದ ಹಿಂದಿನ ದಿನವೇ ಅವರು ಡೋಲು ಬಾರಿಸುತ್ತಾ ಆ ಪರಿಸರದಲ್ಲಿ ಅಡ್ಡಾಡುತ್ತಾರೆ. ರಾತ್ರಿ ವೇಳೆಯಲ್ಲಿ ಕಂಬಳದ ಗದ್ದೆಗೆ ರಕ್ಷಣೆಯನ್ನು ಒದಗಿಸುತ್ತಾರೆ. ಇದನ್ನು ‘ಪನಿ ಕುಲ್ಲುನ’ ಎಂದು ಕರೆಯಲಾಗುತ್ತದೆ. ಈ ಆಚರಣೆಯ ಮಹತ್ವದ ಬಗ್ಗೆ ಅನೇಕ ನಿಷ್ಕರ್ಷೆಗಳು ನಡೆದಿವೆ. ನಸುಕಿನಲ್ಲಿ ಕಂಬಳದಲ್ಲಿ ಪಾಲ್ಗೊಳ್ಳಲು ಬಂದ ಕೋಣಗಳೆಲ್ಲ ಗದ್ದೆಯ ಸುತ್ತಮುತ್ತ ನೆರೆಯುತ್ತವೆ. ಓಟದ ಕಣಕ್ಕಿಳಿಯುವ ಕೋಣದ ಜೋಡಿಯನ್ನು ಅಂದವಾಗಿ ಸಿಂಗರಿಸಲಾಗುತ್ತದೆ. ಕೊರಳಿಗೆ ದೊಡ್ಡ ಗೆಜ್ಜೆಗಳನ್ನು, ಕಾಸರಕನ ಮರದ ಚಿಗುರುಗಳನ್ನು ಕಟ್ಟುತ್ತಾರೆ. ನಾಥಪಂಥದ ಪ್ರಭಾವದಿಂದ ಬೆಳೆದು ಬಂದಿತೆನ್ನಲಾಗುವ ಕಂಬಳ, ಸ್ಪರ್ಧೆಯಾಗಿ ರೂಪಾಂತರಗೊಂಡ ಮೇಲೆ ಅದರ ಜನಪ್ರಿಯತೆ ಹೆಚ್ಚಿತು. ಓಟದಲ್ಲಿ ಗೆದ್ದ ಕೋಣಗಳಿಗೆ ಪದಕಗಳನ್ನು, ಬಹುಮಾನಗಳನ್ನು ನೀಡಲಾಗುತ್ತದೆ. ಇದು ಅವುಗಳನ್ನು ಸಾಕಿದವರ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಆಧುನಿಕ ಕಾಲದಲ್ಲಿ ಕಂಬಳಗಳು ಗದ್ದೆಗಳಲ್ಲಿ ಅಷ್ಟೇ ನಡೆಯುವುದಿಲ್ಲ. ಕೋಟೆ-ಚೆನ್ನಯ್ಯ, ವಿಜಯ-ವಿಕ್ರಮ ಮುಂತಾದ ಓಟದ ಪಥಗಳನ್ನು ನದಿ ತೀರದಲ್ಲಿ ನಿರ್ಮಿಸಲಾಗುತ್ತದೆ. ಸ್ಪರ್ಧೆಯ ಪ್ರಮಾಣದಲ್ಲಿ ನಾಲ್ಕು ರೀತಿಯ ಪ್ರಭೇದಗಳನ್ನು ನಾವು ಗಮನಿಸುತ್ತೇವೆ.

ಬಲ್ಲ್‌ದವು: ‘ಬಲ್ಲ್‌ದವು’ ಎಂದರೆ ‘ಹಗ್ಗದ್ದು’ ಎಂದು ಅರ್ಥ. ಇದರಲ್ಲಿ ಕೋಣಗಳ ಹೆಗಲಿಗೆ ಮೊದಲು ನೊಗವನ್ನು ಕಟ್ಟಲಾಗುವುದು. ಆ ನೊಗದ ಮಧ್ಯಭಾಗಕ್ಕೆ ಒಂದು ಹಗ್ಗವನ್ನು ಕಟ್ಟಿ, ಅದನ್ನು ಕೋಣಗಳ ಹಿಂದುಗಡೆಗೆ ಇಳಿಬಿಡಲಾಗುವುದು. ಹಗ್ಗದ ಆ ತುದಿಯನ್ನು ಹಿಡಿದುಕೊಂಡು ಒಬ್ಬಾತನು ಕೋಣಗಳನ್ನು ಓಡಿಸುತ್ತಾನೆ. ಈ ಓಟದಲ್ಲಿ ಕೋಣಗಳಿಗೆ ಅತ್ಯಂತ ವೇಗವಾಗಿ ಓಡಲು ಸಾಧ್ಯವಾಗುತ್ತದೆ. ಯಾವ ಜೊತೆ ವೇಗವಾಗಿ ಮಂಜೊಟ್ಟಿಯನ್ನು (ಮುಕ್ತಾಯದ ಗೆರೆ) ತಲುಪುವುದೋ ಅದು ಗೆಲ್ಲುತ್ತದೆ. ಇದರಲ್ಲಿ ಓಡಿಸುವಾತನ ಓಟದ ಸಾಮರ್ಥ್ಯ ಅDiಕವಾಗಿರಬೇಕು.

ಅಡ್ಡ ಪಲಾಯಿ: ಇದರಲ್ಲಿ ಕೋಣಗಳ ಹೆಗಲ ಮೇಲಿನ ನೊಗಕ್ಕೆ ಉದ್ದವಾದ ಹರಗುವ ಗೋರುಹಲಗೆಯನ್ನು ಕಟ್ಟಲಾಗುತ್ತದೆ. ಈ ಹಲಗೆಯ ಮೇಲೆ ನಿಲ್ಲುವ ಕೋಣ ಓಡಿಸುವಾತ, ಎಡಗೈಯಲ್ಲಿ ಕೋಣದ ಬಾಲವನ್ನು ಹಿಡಿದುಕೊಳ್ಳುತ್ತಾನೆ. ಬಲಗೈಯಲ್ಲಿ ಚಾಟಿ ಹಿಡಿದುಕೊಂಡು, ಕೋಣಗಳ ತೊಡೆಗೆ ಚೆನ್ನಾಗಿ ಬಾರಿಸುತ್ತ, ಅವು ವೇಗವಾಗಿ ಓಡುವಂತೆ ನೋಡಿಕೊಳ್ಳುತ್ತಾನೆ. ಓಡಿಸುವಾತನಿಗೆ ಇಲ್ಲಿ ಓಟದ ಮೇಲೆ ಅಪಾರ ಹಿಡಿತ ಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಆಯತಪ್ಪಿ ಗದ್ದೆಗೆ ಬೀಳುತ್ತಾನೆ. ಇದರಲ್ಲಿಯೂ ವೇಗದ ಓಟಕ್ಕೇ ಬಹುಮಾನ ಲಭಿಸುತ್ತದೆ.

ನೇಗಿಲ ಓಟ: ಇದರಲ್ಲಿ ಉಳುವ ಸ್ಥಿತಿಯಲ್ಲಿಯೇ ಕೋಣಗಳನ್ನು ನೇಗಿಲಿನೊಂದಿಗೆ ಓಡಿಸಲಾಗುತ್ತದೆ. ಇದು ಸ್ವಲ್ಪ ಅಪಾಯಕಾರಿಯಾದ ಓಟವಾದ್ದರಿಂದ ಕಡಿಮೆ ಜನಪ್ರಿಯವಾಗಿದೆ. ಓಡುವಾಗ ನೇಗಿಲ ಮೊನೆ ಕೋಣಗಳಿಗೆ ತಾಗಿದರೆ ಅವಕ್ಕೆ ಅಪಾರವಾದ ನೋವುಂಟಾಗುತ್ತದೆ, ಕಾಲು ಕುಂಟಾಗಿಬಿಡಬಹುದು. ಇದರಲ್ಲಿಯೂ ವೇಗಕ್ಕೇ ಮರ್ಯಾದೆ.

ಕಣೆ ಪಲಾಯಿ: ಕಂಬುಲದಲ್ಲೆಲ್ಲ ಇದು ಅತ್ಯಂತ ಸುಂದರವಾದ ಓಟ. ಗೋರು ಹಲಗೆಯನ್ನು ಸ್ವಲ್ಪ ವ್ಯತ್ಯಾಸಮಾಡಿ, ‘ಕಣೆ ಪಲಾಯಿ’ (ಪಲಾಯಿ ಎಂದರೆ ಹಲಗೆ ಎಂದರ್ಥ)ಯನ್ನು ಸಿದ್ಧಗೊಳಿಸುತ್ತಾರೆ. ಇದನ್ನು ನೊಗಕ್ಕೆ ಬಿಗಿಯುತ್ತಾರೆ. ಕೋಣ ಓಡಿಸುವಾತ ಈ ಕಣೆ ಪಲಾಯಿಯ ಮೇಲೆ ಓರೆಯಾಗಿ ನಿಂತುಕೊಂಡು, ಒಂದು ಕೈಯಲ್ಲಿ ಕೋಣದ ಬಾಲವನ್ನು ಹಿಡಿದುಕೊಂಡು, ಒಂದು ಕಾಲಿನಲ್ಲಿ ಕಣೆ ಪಲಾಯಿಯನ್ನು ನೆಲದತ್ತ ಅದುಮುತ್ತ ಓಡಿಸುತ್ತಾನೆ. ಕಣೆ ಪಲಾಯಿಯಿಂದ ಈಗ ನೀರು ಕಾರಂಜಿಯಂತೆ ಮೇಲಕ್ಕೆ ಚಿಮ್ಮುತ್ತದೆ. ಓಡಿಸುವಾತನ ಚಾಕಚಕ್ಯತೆ ಮತ್ತು ಕೋಣಗಳ ವೇಗ ಎರಡನ್ನೂ ಅನುಸರಿಸಿಕೊಂಡು, ನೀರಿನ ಚಿಮ್ಮುವಿಕೆ ನಿರ್ಧಾರವಾಗುತ್ತದೆ. ಗದ್ದೆಯ ಮಧ್ಯಭಾಗದಲ್ಲಿ ಗದ್ದೆಗೆ ಅಡ್ಡಲಾಗಿ, ಸುಮಾರು ೨೦-೨೫ ಅಡಿ ಎತ್ತರದಲ್ಲಿ ಬಿಳಿಬಟ್ಟೆಯನ್ನು ಕಟ್ಟುತ್ತಾರೆ. ಇದಕ್ಕೆ ‘ನಿಸಾನೆ’ ಎಂದು (ಕನ್ನಡ: ನಿಶಾನಿ) ಎಂದು ಹೆಸರು. ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ ಪ್ರಶಸ್ತಿ ಸಲ್ಲುತ್ತದೆ. ಒಂದು ವೇಳೆ ನಿಶಾನಿವರೆಗೆ ನೀರು ಹಾರದಿದ್ದರೆ, ಅತಿ ಎತ್ತರಕ್ಕೆ ನೀರು ಚಿಮ್ಮಿಸಿದ ಕೋಣಗಳಿಗೆ ಪ್ರಶಸ್ತಿ ಸಲ್ಲುತ್ತದೆ

” ತುಳುನಾಡಿನ ಮಣ್ಣಿನ ಮಕ್ಕಳ ಸಾಂಸ್ಕ ತಿಕ ಹಸಿವನ್ನು ತಣಿಸುವ ಅಪರೂಪದ ಕ್ರೀಡೆ ಕಂಬಳ”

 

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

22 mins ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

2 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

3 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

5 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

6 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

6 hours ago