Andolana originals

ಸಂಕಷ್ಟದ ಸುಳಿಯಲ್ಲಿ ಮೈಸೂರು ವಿವಿ

ಕೆ.ಬಿ.ರಮೇಶನಾಯಕ

ವರ್ಷದಿಂದ ವರ್ಷಕ್ಕೆ ಅನುದಾನ ಇಳಿಮುಖ

ಖಾಯಂ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ಕೊರತೆ

ಆರ್ಥಿಕ ಸಂಪನ್ಮೂಲ ಇಲ್ಲದೆ ನಿರ್ವಹಣೆಯು ದೊಡ್ಡ ಭಾರ

ಮೈಸೂರು: ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯವು ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಸಂಕಷ್ಟಗಳ ಸುಳಿಗೆ ಸಿಲುಕಿದೆ. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದಲ್ಲದೆ, ಖಾಯಂ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ಕೊರತೆ ಹೆಚ್ಚಾಗುತ್ತಿದೆ. ಆರ್ಥಿಕ ಸಂಪನ್ಮೂಲ ಇಲ್ಲದೆ ನಿರ್ವಹಣೆ ಮಾಡಲು ಹರ ಸಾಹಸಪಡುತ್ತಿರುವ ವಿವಿಯಲ್ಲಿ ಈಗ ಅನೇಕ ವಿಭಾಗಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಶೂನ್ಯ ವಾಗಿರುವುದು ದೊಡ್ಡ ಚಿಂತೆಗೀಡು ಮಾಡಿದೆ.

ಮೈಸೂರು ವಿವಿಯಿಂದ ಪ್ರತ್ಯೇಕಗೊಂಡ ಚಾಮರಾಜನಗರ, ಮಂಡ್ಯ, ಹಾಸನ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಿ ಮತ್ತೆ ಒಂದು ಮಾಡಬೇಕೆಂಬ ಪ್ರಸ್ತಾಪದ ನಿರೀಕ್ಷೆಯಲ್ಲಿದ್ದ ಆಡಳಿತ ವರ್ಗಕ್ಕೆ ನಿರಾಸೆಯಾಗಿದೆ. ಇದರಿಂದಾಗಿ ಮೈಸೂರು ವಿವಿಯು ಆದಾಯ ಮೀರಿದ ನಿರ್ವಹಣೆಯ ಭಾರವನ್ನು ತಾಳಲಾರದೆ ಬಹಳಷ್ಟು ಸಮಸ್ಯೆಗಳಿಗೆ ಸಿಲುಕಿ ಕೊಳ್ಳುವಂತಾಗಿದೆ. ವಿವಿಯು ರಾಜ್ಯದ ಮೊದಲನೇ ಮತ್ತು ದೇಶದ ಆರನೇ ವಿವಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ೩ ವರ್ಷಗಳಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮೈಸೂರು ವಿವಿಯಿಂದ ಚಾ.ನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಪ್ರತ್ಯೇಕಿಸಿ, ಸ್ವತಂತ್ರ ವಿವಿಗಳಾಗಿ ಘೋಷಣೆ ಮಾಡಿತ್ತು.

ಹಾಗಾಗಿ ಮೈಸೂರು ವಿವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇ.೫೦ರಷ್ಟು ಕುಸಿಯಿತು. ಈಗಲೂ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಈ ವಿವಿಯಲ್ಲಿ ಪ್ರವೇಶ ಪಡೆದರೂ, ಅವರ ಸಂಖ್ಯೆ ಶೇ.೨೦ ದಾಟುತ್ತಿಲ್ಲ. ವಿವಿ ವ್ಯಾಪ್ತಿಯ ಹಲವು ಪದವಿ ಕಾಲೇಜುಗಳಲ್ಲಿ ಹಿಂದೆ ೨೦ ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈಗ ಆ ಸಂಖ್ಯೆ ಐದು ಸಾವಿರಕ್ಕೆ ಕುಸಿದಿದೆ.

ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಗೈಡ್‌ಗಳ ಕೊರತೆ: ವಿವಿಯಲ್ಲಿ ಖಾಯಂ ಪ್ರಾಧ್ಯಾಪಕರು, ಅಸೋಸಿಯೇಟ್ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ಕೊರತೆ ಎದುರಾಗಿರುವ ಕಾರಣ ಪಿಎಚ್.ಡಿ. ಅಧ್ಯಯನಕ್ಕೆ ಅರ್ಹತೆ ಗಳಿಸಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆ ಉಂಟಾಗಿದೆ. ಅಂದಾಜು ೧,೦೦೦ ಮಂದಿ ಪಿಎಚ್.ಡಿ. ಅಧ್ಯಯನಕ್ಕೆ ಅರ್ಹತೆ ಪಡೆದಿದ್ದಾರೆ. ಹಾಲಿ ಇರುವ ಪ್ರಾಧ್ಯಾಪಕರ ಸಂಖ್ಯೆಯ ಪ್ರಕಾರ ೨೦೦ ವಿದ್ಯಾರ್ಥಿಗಳಿಗಷ್ಟೇ ಮಾರ್ಗದರ್ಶನ ಮಾಡಬಹುದು. ಉಳಿದ ೮೦೦ ಮಂದಿಗೆ ಗೈಡ್‌ಗಳ ಕೊರತೆ ಎದುರಾಗಿದೆ. ಯುಜಿಸಿ ನಿಯಮಾವಳಿ ಪ್ರಕಾರ ಮಾರ್ಗದರ್ಶಕರಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಅವಕಾಶ ಇಲ್ಲ. ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದರೂ ಯುಜಿಸಿ ನಿಯಮವನ್ನು ಉಲ್ಲಂಸಲಾಗದೆ ಸರ್ಕಾರ ಕೂಡ ಅಸಹಾಯಕತೆ ಪ್ರದರ್ಶಿಸಿದೆ. ಹಾಗಾಗಿ ಪಿಎಚ್.ಡಿ. ಪ್ರವೇಶ ಪರೀಕ್ಷೆಯಲ್ಲಿ ಪಾಸಾದವರು ಅವಕಾಶ ಕೈತಪ್ಪುವ ಆತಂಕಕ್ಕೀಡಾಗಿದ್ದಾರೆ.

ಅನುದಾನ ಸಮಸ್ಯೆ: ರಾಜ್ಯ ಸರ್ಕಾರವು ಬಿಡುಗಡೆ ಮಾಡುತ್ತಿದ್ದ ಅನುದಾನ ಮತ್ತು ಪಿಂಚಣಿ ಅನುದಾನದಲ್ಲಿ ಸಾಕಷ್ಟು ಕಡಿತವಾಗಿದೆ. ಪ್ರತಿ ವರ್ಷ ನೂರು ಕೋಟಿ ರೂ. ಕೊಡುತ್ತಿದ್ದ ಸರ್ಕಾರ ಕ್ರಮೇಣವಾಗಿ ೯೦ ಕೋಟಿ, ೭೦ ಕೋಟಿ, ಈಗ ೫೦ ಕೋಟಿ ರೂ.ಗೆ ಬಂದುನಿಂತಿದೆ. ಪಿಂಚಣಿ ಹಣವನ್ನೂ ಸಮರ್ಪಕವಾಗಿ ನೀಡುತ್ತಿಲ್ಲ. ಹೀಗಾಗಿ, ಪ್ರತಿ ವರ್ಷ ೧,೮೨೦ ಮಂದಿ ನೌಕರರಿಗೆ ವಾರ್ಷಿಕ ೧೨೦ ಕೋಟಿ ರೂ. ಪಾವತಿಸಬೇಕು. ಆದರೆ, ಸರ್ಕಾರ ಬರೀ ೮೦ ಕೋಟಿ ರೂ.ನೀಡುತ್ತಿದೆ. ಉಳಿದ ಹಣವನ್ನು ವಿವಿಯು ಠೇವಣಿ ಮೊತ್ತದಲ್ಲೇ ಪಾವತಿಸಬೇಕಿದೆ. ರಾಜ್ಯ ಸರ್ಕಾರದಿಂದಲೇ ನೇರವಾಗಿ ಪಿಂಚಣಿ ಭರಿಸುವಂತೆ ವಿವಿ ಪತ್ರದ ಮೇಲೆ ಪತ್ರ ಬರೆದರೂ, ಸ್ಪಂದನೆ ದೊರೆಯದಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿಸಿದೆ.

ಮುಚ್ಚುವ ಭೀತಿಯಲ್ಲಿ ೯ ವಿಭಾಗಗಳು: ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆಯಿಂದ ಮೈಸೂರು ವಿವಿಯ ೯ ಅಧ್ಯಯನ ವಿಭಾಗಗಳು ಮುಚ್ಚುವ ಭೀತಿಯನ್ನು ಎದುರಿಸುತ್ತಿವೆ. ವಿವಿಯ ಪಿಜಿ ವಿಭಾಗಕ್ಕೆ ದಾಖಲಾಗುವ ವಿದ್ಯಾರ್ಥಿಗಳು ಸಾಮಾನ್ಯ ಪರೀಕ್ಷೆ ಎದುರಿಸಬೇಕು. ಆದರೆ, ಈ ಬಾರಿ ೨೦ ವಿಷಯಗಳಲ್ಲಿ ನಿಗದಿತ ಸೀಟುಗಳಿಗಿಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗಾಗಿ ಸದರಿ ವಿಷಯಗಳ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಅದರಲ್ಲಿ ಯೂ ೯ ವಿಷಯಗಳಿಗೆ ಪ್ರವೇಶ ಕೋರಿ ೧೫ಕ್ಕೂ ಕಡಿಮೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದ ಕಾರಣ ಆ ಕೋರ್ಸ್‌ಗಳನ್ನೇ ಮುಚ್ಚುವ ಸನ್ನಿವೇಶ ಎದುರಾಗಿದೆ.

” ಮೈಸೂರು ವಿವಿಯಲ್ಲಿ ಪಿಂಚಣಿ ಕೊಡುವುದಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದೆ. ಸರ್ಕಾರದಿಂದ ಕೊಡುವ ಅನುದಾನ ಕಡಿಮೆಯಾಗಿದೆ. ಆಂತರಿಕ ಸಂಪನ್ಮೂಲ ಹೆಚ್ಚಳಕ್ಕೆ ಅನೇಕ ಕ್ರಮಕೈಗೊಂಡಿದ್ದರೂ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಸರ್ಕಾರವೇ ನೇರವಾಗಿ ಪಿಂಚಣಿ ನೀಡಿದರೆ ಸಮಸ್ಯೆ ದೂರವಾಗಲಿದೆ. ಪ್ರಾಧ್ಯಾಪಕರ ನೇಮಕಕ್ಕೆ ಅನುಮತಿ ದೊರೆಯುವ ನಿರೀಕ್ಷೆ ಇದೆ.”

-ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ, ಮೈಸೂರು ವಿವಿ

ಆಂದೋಲನ ಡೆಸ್ಕ್

Recent Posts

ಹನೂರು| ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ ನಡುವೆ ಅಪಘಾತ: ಇಬ್ಬರು ಸಾವು

ಮಹಾದೇಶ್‌ ಎಂ ಗೌಡ  ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…

8 hours ago

ಹನೂರು: ಟ್ರ್ಯಾಕ್ಟರ್‌ಗೆ ದ್ವಿಚಕ್ರ ವಾಹನ ಡಿಕ್ಕಿ: ಸವಾರ ಸಾವು

ಮಹಾದೇಶ್‌ ಎಂ ಗೌಡ  ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…

8 hours ago

ಮೈಸೂರು ಏರ್‌ಪೋರ್ಟ್‌ನಲ್ಲಿ ಸಿಎಂ, ಡಿಸಿಎಂ ಜೊತೆ ರಾಹುಲ್‌ ಗಾಂಧಿ ಮಾತುಕತೆ

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌…

11 hours ago

ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜನ‌ ಎಂಟ್ರಿ: ವಾಹನ ಸವಾರರಿಗೆ ಢವಢವ

ಮಹಾದೇಶ್‌ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…

11 hours ago

ಎಂ.ಲಕ್ಷ್ಮಣ್‌ ವಿರುದ್ಧ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ ಶಾಸಕ ಶ್ರೀವತ್ಸ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…

11 hours ago

ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್‌ ಸ್ಪಷ್ಟನೆ ನೀಡಲಿ: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್‌ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…

11 hours ago