Andolana originals

ಗಾಂಧಿ ಅನುಸಂಧಾನದ ವೈರುಧ್ಯಗಳು

ಡಾ.ರಹಮತ್ ತರೀಕೆರೆ

ಕರ್ನಾಟಕದಲ್ಲಿ ಗಾಂಧಿಗೆ ಸಂಬಂಧಿಸಿದಂತೆ ಪರಸ್ಪರ ವಿರುದ್ಧವೆನಿಸುವ ವಿದ್ಯಮಾನಗಳು ಜರುಗುತ್ತಿವೆ. ಉದಾ ಹರಣೆಗೆ- ೧. ಗಾಂಧಿ ಹಂತಕ ಗೋಡ್ಸೆ ಮತ್ತು ಈ ಹತ್ಯೆಯಲ್ಲಿ ಫಿತೂರಿದಾರರೆಂದು ಆಪಾದಿತರಾಗಿದ್ದ ಸಾವರ್ಕರ್ ವ್ಯಕ್ತಿತ್ವ ಮತ್ತು ಚಿಂತನೆಗಳಿಗೆ ಸಾರ್ವಜನಿಕ ಸಮ್ಮತಿಯನ್ನು ಪಡೆಯುತ್ತಿರುವುದು; ಗಾಂಧಿ ಹತ್ಯೆಯ ಪರೋಕ್ಷ ಸಮರ್ಥನೆ ನಡೆ ಯುತ್ತಿರುವುದು. ೨. ಗಾಂಧಿ ಜೀವನ- ಚಿಂತನೆ ಕುರಿತ ಪುಸ್ತಕಗಳು ಹೆಚ್ಚು ರಚನೆಯಾಗುತ್ತ ಜನಪ್ರಿಯಗೊಳ್ಳುತ್ತಿರುವುದು. ಈ ಎರಡು ವಿದ್ಯಮಾನಗಳು, ಪರಸ್ಪರ ವಿರುದ್ಧ ಚಿಂತನೆಗಳ ಸಂಘರ್ಷಕ್ಕೂ, ಗಾಂಧಿ ಅನುಸಂಧಾನದ ಪುರಾವೆಯಂತಿವೆ.

ಗಾಂಧಿ ಅನುಸಂಧಾನ ಕೆಲವು ಮಾದರಿಗಳನ್ನು ಗಮನಿಸಬಹುದು: ಬಾಬಾಸಾಹೇಬ್ ಅಂಬೇಡ್ಕರ್, ತಮ್ಮ ಬರೆಹಗಳಲ್ಲಿ ಗಾಂಧಿಯ ಬಗ್ಗೆ ಸೈದ್ಧಾಂತಿಕವಾದ ಕಟು ವಿಮರ್ಶೆ ಮಾಡಿದರು. ಕೆಲವು ದಲಿತ ಧಾರೆಗಳು, ಗಾಂಧಿಯನ್ನು ದಲಿತರಿಗೆ ಮಾಡಿದ ಚಾರಿತ್ರಿಕ ದ್ರೋಹದ ಪ್ರತೀಕವೆಂದು ಪರಿಭಾವಿಸುತ್ತವೆ. ತೀವ್ರಗಾಮಿ ಮಾರ್ಕ್ಸಿಸ್ಟ್ ದೃಷ್ಟಿಕೋನವು ಗಾಂಧಿ ಹೇಗೆ ಬಂಡವಾಳಶಾಹಿಗಳ ಆಶ್ರಯದಲ್ಲಿದ್ದು ತಮ್ಮ ಮಾತು ಚಳವಳಿ ಕಾರ್ಯಕ್ರಮಗಳನ್ನು ರೂಪಿಸಿದರು ಎಂದು ವಿಶ್ಲೇಷಿಸುತ್ತದೆ. ಆದರೆ ಮಾರ್ಕ್ಸ್‌ವಾದಿಯ ಬೇರೆ ಬೇರೆ ಬಣಗಳು ಗಾಂಧಿವಾದವನ್ನು ಮನ್ನಿಸುತ್ತವೆ.

ಸಾಂಪ್ರದಾಯಿಕ ಗಾಂಧಿವಾದವು ಗಾಂಧಿಯ ಚಿಂತನೆಯನ್ನು ವಿಮರ್ಶೆಯಿಲ್ಲದೆ ಒಪ್ಪಿಕೊಂಡು, ವರ್ತ ಮಾನಕ್ಕೆ ಅದರ ಪ್ರಸ್ತುತತೆಯನ್ನು ಪ್ರತಿಪಾದಿಸುತ್ತದೆ. ಲೋಹಿಯಾವಾದವು ಗಾಂಧಿ ಚಿಂತನೆಯ ತಿರುಳನ್ನು ಅರ್ಥ ಪೂರ್ಣವಾಗಿ ವಿಸ್ತರಿಸಿದರು ಎಂದು ನಂಬುತ್ತದೆ. ಕರ್ನಾಟಕದ ರಾಜಕಾರಣ, ಆಕ್ಟಿವಿಸಂ, ಸಮಾಜ, ಸಾಹಿತ್ಯ, ವಿಚಾರವಾದ ಮತ್ತು ಸಂಸ್ಕೃತಿ ಚಿಂತನೆಗಳನ್ನು ಅಂಬೇಡ್ಕರ್, ಮಾರ್ಕ್ಸ್,ಗಾಂಧಿ, ಲೋಹಿಯಾ ಚಿಂತನೆಗಳು ಪ್ರಭಾವಿಸಿದವು. ವರ್ತಮಾನದ ರಾಜಕೀಯ ಸಾಮಾಜಿಕ ಸಾಹಿತ್ಯಕ ವಿದ್ಯಮಾನಗಳನ್ನು ಪ್ರಭಾವಿಸುವ ಯಾವುದೇ ತತ್ವಸಿದ್ಧಾಂತವು, ಅದನ್ನು ಸೃಷ್ಟಿಸಿದ ಚಾರಿತ್ರಿಕ ವ್ಯಕ್ತಿಗಳಿರುವ ಕಾಲಘಟ್ಟದಲ್ಲೇ ಬೀರುವ ಪರಿಣಾಮದ ವಿನ್ಯಾಸ ಒಂದಿದೆ. ಈ ಚಾರಿತ್ರಿಕ ವ್ಯಕ್ತಿಗಳು ಗತಿಸಿದ ಬಳಿಕ, ಹೊಸ ಚಾರಿತ್ರಿಕಮ ಸನ್ನಿವೇಶಗಳಲ್ಲಿ ಸಮಕಾಲೀನ ಒತ್ತಡಗಳ ನಡುವೆ ಅದು ಮರುಹುಟ್ಟು ಪಡೆವ ಎರಡನೇ ವಿನ್ಯಾಸ ಇನ್ನೊಂದಿದೆ. ಈ ಎರಡನೇ ವಿನ್ಯಾಸವನ್ನು ತತ್ವ ಸಿದ್ಧಾಂತಗಳ ರೂಪಾಂತರ ಎನ್ನಬಹುದು. ಈ ರೂಪಾಂತರ ಪ್ರಕ್ರಿಯೆಯಲ್ಲಿ ಮೂಲ ಚಿಂತನೆ/ ಸಿದ್ಧಾಂತಗಳು ಹೊಸ ಪ್ರಖರತೆ ಮತ್ತು ಹೊಸ ದೃಷ್ಟಿಕೋನದಲ್ಲಿ ಮೈದಳೆಯುತ್ತವೆ. ಈ ಮೈದಳೆ ಯುವಿಕೆ ಕೆಲವೊಮ್ಮೆ ವಿರುದ್ಧ ಗತಿಯಲ್ಲಿ ಚಲಿಸಬಹುದು. ‘ಎದುರಾಳಿ’ ತತ್ವಸಿದ್ಧಾಂತದ ಜತೆಗೆ ಸ್ನೇಹ ಮಾಡಬಹುದು. ಗಾಂಧಿವಾದದ ವಿಷಯದಲ್ಲಿ ಈ ರೂಪಾಂತರ ತತ್ವವು ಸೃಷ್ಟಿಸಿರುವ ೪ ವಿದ್ಯಮಾನಗಳಿವೆ.

೧. ಗಾಂಧಿ ವ್ಯಕ್ತಿತ್ವ ಮತ್ತು ವಾದಗಳನ್ನು ಸೈದ್ಧಾಂತಿಕವಾಗಿ ದ್ವೇಷಿಸುವ ಬಲಪಂಥೀಯ ಸಂಘಟನೆಗಳು, ಯುದ್ಧತಂತ್ರದ ಭಾಗವಾಗಿ ಅವೆರಡನ್ನೂ ಅನುಸಂಧಾನ ಮಾಡುವುದು. ಉದಾಹರಣೆಗೆ, ಸ್ವಚ್ಛ ಭಾರತ್ ಕಾರ್ಯಕ್ರಮಕ್ಕೆ ಗಾಂಧಿಯ ಚಿತ್ರವನ್ನು ಬಳಸುವುದು; ಗಾಂಧಿ ಪ್ರತಿಮೆ ಎದುರು ಉಪವಾಸ ಕೂರುವುದು; ಗಾಂಧಿ ಸಮಾಧಿಗೆ ಪುಷ್ಪಗುಚ್ಛ ಇಡುವುದು; ವಿದೇಶಗಳಲ್ಲಿ ಗಾಂಧಿಪ್ರತಿಮೆ ಅನಾ ವರಣ ಮಾಡುವುದು-ಇತ್ಯಾದಿ. ಉಳಿದಂತೆ ಇವು ಗಾಂಧಿ ಚಿಂತನೆ ತಮ್ಮ ಮತೀಯ ರಾಷ್ಟ್ರನಿರ್ಮಾಣದ ಪರಿಕಲ್ಪನೆಗೆ ತೊಡಕಾಗಿರುವುದರಿಂದ, ಆಳದಲ್ಲಿ ಅದನ್ನು ದ್ವೇಷಿಸುವುದು. ಸತತವಾಗಿ ಗಾಂಧಿ ವ್ಯಕ್ತಿತ್ವವನ್ನು ದುರುಳೀಕರಿಸಿವೆ.

ವ್ಯಂಗ್ಯವೆಂದರೆ, ಹಿಂದೂ- ಮುಸ್ಲಿಂ ಏಕತೆಗಾಗಿ ಜೀವಮಾನ ವಿಡೀ ದುಡಿದ ಗಾಂಧಿಯವರ ಜನ್ಮಭೂಮಿ ಗುಜರಾತಿ ನಿಂದಲೇ ಅದ್ವಾನಿಯವರ ರಥಯಾತ್ರೆ ಆರಂಭವಾಯಿತು. ೨೦೦೨ರಲ್ಲಿ ಗೋಧ್ರಾ ಹತ್ಯಾಕಾಂಡವಾಯಿತು. ಗೋಧ್ರಾ ಗಲಭೆಗಳಿಗೆ ನೆಪ ಒದಗಿಸಿದ ರೈಲಿನ ಹೆಸರು ಗಾಂಧಿಯವರ ಆಶ್ರಮದ ಹೆಸರೇ (ಸಾಬರಮತಿ ಎಕ್ಸ್‌ಪ್ರೆಸ್) ಆಗಿತ್ತು. ಈಚೆಗೆ ಗಾಂಧಿ ಹತ್ಯೆಯ ದಿನವನ್ನು ಸಂಭ್ರಮಿಸುವ ವರದಿಗಳು ಬರುತ್ತವೆ. ಗೋಡ್ಸೆಯ ವೈಭವೀಕರಣ ನಡೆಯುತ್ತಿದೆ.

೨. ಕೆಲವು ಗಾಂಧಿವಾದಿಗಳು ಗಾಂಧಿಯವರ ಕೋರ್ ಚಿಂತನೆಗಳಿಗೆ ನಿಷ್ಠೆಯನ್ನು ಬದಲಿಸಿದರು. ರಾಜಕೀಯವಾಗಿ ಬಿಜೆಪಿಯ ಎದುರಾಳಿಗಳಾಗಿದ್ದರೂ, ಸಾಂಸ್ಕ ತಿಕವಾಗಿ ಬಲಪಂಥೀಯ ಅಜೆಂಡಾಗಳಿಗೆ ಸಮ್ಮತಿಯಿರುವ ದೊಡ್ಡ ಸಂಖ್ಯೆಯ ಜನ ಕಾಂಗ್ರೆಸ್ಸಿನಲ್ಲಿದ್ದಾರೆ. ಬಹಳಷ್ಟು ಗಾಂಧಿವಾದಿಗಳು, ೧೯೯೦ರ ದಶಕದ ನಂತರ ಬಲಪಂಥೀಯ ರಾಜ ಕಾರಣಕ್ಕೆ ಕೈಜೋಡಿಸಿದರು. ಅಣ್ಣಾ ಹಜಾರೆ ಇದಕ್ಕೊಂದು ನಿದರ್ಶನ.

೩. ಕೆಲ ಚಿಂತಕರು, ೯೦ರ ದಶಕದ ಬಳಿಕ, ಮತೀಯವಾದದ ಪ್ರತಿರೋಧದಲ್ಲಿ ಲೋಹಿಯಾವಾದಿಗಳು, ತಮ್ಮ ಕಾಂಗ್ರೆಸ್ ವಿರೋಧಿ ನೆಲೆಯನ್ನು ಬಿಟ್ಟುಕೊಟ್ಟು ಕಾಂಗ್ರೆಸ್ ಬೆಂಬಲಿಸಿದರು. ಅನಂತಮೂರ್ತಿ, ಲಂಕೇಶ್ ಇದಕ್ಕೆ ನಿದರ್ಶನ. ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಚಂಪಾ, ರಾಜಕೀಯ ಪ್ರತಿರೋಧವನ್ನು ‘ಗಾಂಧಿ ಸ್ಮರಣೆ’ ಸಂಕಲನದಲ್ಲಿ ಕವಿತೆಗಳಾಗಿ ಪ್ರಕಟಿಸಿದರು. ಕಾಂಗ್ರೆಸ್ ನೇತಾರರಾಗಿದ್ದ ಗಾಂಧಿಯೇ, ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರ ವಿರೋಧಿಸಲು ಪ್ರೇರಣೆಯಾದರು.

ಲಂಕೇಶರ ಬರೆಹಗಳಲ್ಲಿ ಮತ್ತೆ ಮತ್ತೆ ಗಾಂಧಿ ಉಲ್ಲೇಖ ಬರುತ್ತದೆ. ಆದರೆ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಪ್ರತಿಪಾದಿಸಿದ್ದಕ್ಕೆ ವಿರುದ್ಧವಾಗಿ, ಲಂಕೇಶ್ ಪಾಶ್ಚಿ ಮಾತ್ಯ ವಿಜ್ಞಾನ, ತಂತ್ರಜ್ಞಾನ ಉದ್ಯಮ ಶೀಲತೆ ಪರವಾಗಿದ್ದರು. ಬಾಳಿನ ಕೊನೆಯ ದಿನಗಳಲ್ಲಿ ಅನಂತಮೂರ್ತಿ ‘ಹಿಂದುತ್ವ ಮತ್ತು ಹಿಂದ್‌ಸ್ವರಾಜ್’ ಕೃತಿ ಯಲ್ಲಿ ಗಾಂಧಿವಾದದ ಪ್ರಸ್ತುತತೆ ಪ್ರತಿಪಾದಿಸಿದರು.

೪. ಲೋಹಿಯಾ ಮತ್ತು ಗಾಂಧಿವಾದಿಗಳು ಕಮ್ಯುನಿಸ್ಟರ ಕಟು ವಿಮರ್ಶಕರು. ಆದರೆ ಅನೇಕ ಕಮ್ಯುನಿಸ್ಟರು ಗಾಂಧಿವಾದವನ್ನು ಅನುಸಂಧಾನಿಸಿದರು. ಇದನ್ನು ಜಿ.ರಾಮಕೃಷ್ಣ, ಬರಗೂರು, ಪ್ರಸನ್ನ ಅವರಲ್ಲಿ ಕಾಣಬಹುದು. ರಂಗಕರ್ಮಿ ಪ್ರಸನ್ನ, ಉಪವಾಸ ವ್ರತ, ಖಾದಿ ಉತ್ಪಾದನೆ, ಗ್ರಾಮೀಣ ಭಾರತ, ಕೈಕಸುಬು, ಯಂತ್ರವಿರೋಧದ ಚಿಂತನೆ ಮತ್ತು ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಗಾಂಧಿವಾದಿಯೂ ಸ್ವತಂತ್ರ ಹೋರಾಟ ಗಾರರೂ ಆಗಿದ್ದ ಎಚ್.ಎಸ್.ದೊರೆಸ್ವಾಮಿ ಅವರು, ಎಡಚಳವಳಿಗಳ ಜತೆ ಸೇರಿ, ಭೂಹೋರಾಟಗಳಲ್ಲಿ ಹಾಗೂ ಅಕ್ರಮ ಗಣಿಗಾರಿಕೆ, ಕೋಮುವಾದ ವಿರೋಧಿ ಆಂದೋಲನಗಳಲ್ಲಿ ಧುಮುಕಿದರು.

ಮೇಲ್ಕಾಣಿಸಿದ ಸೈದ್ಧಾಂತಿಕ ಪ್ರಯಾಣ, ವೈರುಧ್ಯಗಳು ತತ್ವಸಿದ್ಧಾಂತದ ಸಾಂದರ್ಭಿಕ ರೂಪಾಂತರಗಳಾಗಿವೆ. ಯಾವುದೇ ಸಿದ್ಧಾಂತ ತತ್ವಚಿಂತನೆ ಧರ್ಮ ರಾಜಕಾರಣಗಳು, ತಮ್ಮ ಜನ್ಮಮೂಲದ ಅವಸ್ಥೆಯಲ್ಲೇ ಬದುಕುವುದಿಲ್ಲ. ಹಾಗೇ ಬದುಕುತ್ತಿದ್ದರೆ, ಅವಕ್ಕೆ ಚಲನಶೀಲತೆ ನಿಂತಿದೆ ಎಂದರ್ಥ. ಅವು ಸಮಕಾಲೀನ ಸಾಮಾಜಿಕ ರಾಜಕೀಯ ಆರ್ಥಿಕ ಸನ್ನಿವೇಶಗಳ ಒತ್ತಡಕ್ಕೆ ಅನುಸಾರ, ನಿರಂತರವಾಗಿ ಸ್ಥಿತ್ಯಂತರ ಪಡೆಯುತ್ತಿರುತ್ತವೆ.

ನಮ್ಮ ಬದುಕಿನ ಎಲ್ಲದರಲ್ಲಿ ಗಾಂಧಿ ವ್ಯಾಪಿಸಿದ್ದಾರೆ: 

ಗಾಂಧಿಯವರು, ಸಮುದಾಯದ ಒಳಿತಿನಲ್ಲಿ ವ್ಯಕ್ತಿಯ ಒಳಿತು ಇದೆ ಎಂಬುದನ್ನು ಹೇಳಿದ್ದು, ಮಾತ್ರವಲ್ಲ, ಅದರಂತೆ ಬಾಳಿ ತೋರಿಸಿದರು. ಈಗ ಬಳಸುವಂತೆ ಸಮುದಾಯ ಎಂದರೆ ಜತಿ ಅಲ್ಲ, ಉಪ ಜತಿ ಅಲ್ಲ! ಈಗಿನಂತೆ ಮಾಧ್ಯಮಗಳ ಅನುಕೂಲಗಳಿಲ್ಲದ ನಾವೆಲ್ಲರೂ ೫೦೦ ಚಿಲ್ಲರೇ ರಾಜರ ಪ್ರಜೆಗಳಾಗಿದ್ದ ಈ ವಿಶಾಲ ದೇಶದಲ್ಲಿ ಗಾಂಧಿ ಒಂದು ಅಚ್ಚರಿ. ಬಹುಶಃ ಈಗ ಅನಿವಾರ್ಯವೂ ಹೌದು. ನಮ್ಮ ಬದುಕಿನ ಎಲ್ಲದರಲ್ಲಿ ಗಾಂಧಿ ವ್ಯಾಪಿಸಿದ್ದಾರೆ. ನಮ್ಮ ಆಹಾರ, ನೀರು, ಆರೋಗ್ಯ, ಉಡುಪು, ಮನೆ ನಿರ್ಮಾಣ, ಭಾಷೆ, ಕಾಯಕ, ಸ್ವಚ್ಛತೆ, ಜತಿ ತಾರತಮ್ಯ ಮತ್ತು ಅಸ್ಪೃಶ್ಯತಾ ನಿವಾರಣೆ, ಸರಳತೆ, ಗಂಡು ಹೆಣ್ಣಿನ ಸಮಾನತೆ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಜೀವನದ ಎಲ್ಲ ರಂಗಗಳಲ್ಲಿಯೂ ಪ್ರಯೋಗ ನಡೆಸಿದ್ದಾರೆ. ಸಾವಿರಾರು ವಿವಿಧ ವಿಚಿತ್ರ ವೇಷಗಳ ಸಂತರು, ಸಾಧುಗಳು, ಪವಾಡ ಪುರುಷರು, ಬದುಕು ಮತ್ತು ಬದುಕಿನ ಉದ್ದೇಶಗಳ ಬಗ್ಗೆ ಚಿಂತಿಸುವ ಪ್ರಖರ ಬುದ್ಧಿವಂತರ ನಡುವೆ ನಾವು ಅರ್ಥಮಾಡಿ ಕೊಂಡು ಅನುಸರಿಸಬಹುದಾದ ಬಹಳ ದೊಡ್ಡ ಸಂತ. ಅವರ ಅನೇಕ ವಿಷಯಗಳನ್ನು ಒಪ್ಪದೆಯೂ ನಾವು ಗಾಂಧಿ ಮಾರ್ಗಿಗಳಾಗಬಹುದು.

-ಕೆ. ವೆಂಕಟರಾಜು, ಚಾಮರಾಜನಗರ

ಆಂದೋಲನ ಡೆಸ್ಕ್

Recent Posts

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಇಂದು ಜಗತ್ತಿಗೆ ಗಾಂಧಿ ಚಿಂತನೆ ಹೆಚ್ಚು ಪ್ರಸ್ತುತ:  ಗಾಂಧಿ ಎಂದರೆ ಕೇವಲ ಇತಿಹಾಸದ ಪುಟಗಳಲ್ಲಿ ಉಳಿದಿರುವ ಸ್ವಾತಂತ್ರ್ಯ ಹೋರಾಟಗಾರ ಮಾತ್ರ ಅಲ್ಲ. ಸದಾ…

2 mins ago

ನಮ್ಮ ತಂದೆಯ ಮರಣ ಮತ್ತು ನನ್ನ ಇಮ್ಮಡಿ ಅವಮಾನ

ಗಾಂಧಿ ಅಭಿಯಾನ ಅರಿವಿನ ಯಾನ  ನಾನು ಮೊದಲೇ ಹೇಳಿರುವಂತೆ, ನಮ್ಮ ತಂದೆ ಭಗಂದರ ರೋಗದಿಂದ ನರಳುತ್ತಿದ್ದರು. ಅವರ ಶುಶ್ರೂಷೆಯ ಅಧಿಕಾಂಶದ ಹೊರೆ…

28 mins ago

ಸಂಪಾದನೆ ಎಂಬ ಧರ್ಮ ಸಂಕಟಕ್ಕೆ ಸಿಲುಕಿ…

ದೇವನೂರ ಮಹಾದೇವ ‘ಹಾಡುಪಾಡು ರಾಮು’ ಎಂದೇ ಖ್ಯಾತರಾಗಿದ್ದ ಟಿ.ಎಸ್.ರಾಮಸ್ವಾಮಿಯವರು ನೆಲಗನ್ನಡಕ್ಕೆ ಅನುವಾದಿಸಿರುವ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯ ಲೋಕಾರ್ಪಣೆ ಶನಿವಾರ ಸಂಜೆ…

4 hours ago

ಪ್ರವಾಸಿಗರಿಗೆ ಮುಕ್ತವಾದ ಮಾಂದಲ್‌ಪಟ್ಟಿ

ನವೀನ್ ಡಿಸೋಜ ೪ ತಿಂಗಳಿನಿಂದ ಬಂದ್ ಆಗಿದ್ದ ಮುಗಿಲುಪೇಟೆ ಖ್ಯಾತಿಯ ಪ್ರವಾಸಿ ತಾಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ…

4 hours ago

ಯತೀಂದ್ರಗೆ ನಗರಾಭಿವೃದ್ಧಿ; ಮೈಸೂರಿಗೆ ಯೋಜನೆಗಳ ಸಮೃದ್ಧಿ?

ಕೆ.ಬಿ.ರಮೇಶನಾಯಕ ಮೈಸೂರು: ತವರಿನವರೇ ಮುಖ್ಯಮಂತ್ರಿಯಾಗಿದ್ದಾಗ ಹತ್ತಾರು ಯೋಜನೆಗಳು ಮಂಜೂರಾಗಿದ್ದರೆ, ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ…

4 hours ago

ಬೀದಿ ದೀಪಗಳ ನಿರ್ವಹಣೆ ಕೊರತೆ; ಸಾರ್ವಜನಿಕರ ವ್ಯಥೆ

ಕೆ.ಪಿ.ಮದನ್ ಮೈಸೂರು: ಹಲವೆಡೆ ಬೀದಿ ನಾಯಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವರದಿಗಳು ಪ್ರಕಟವಾಗುತ್ತಿವೆ. ಇತ್ತ ನಗರದ ಆಸುಪಾಸಿನಲ್ಲಿರುವ ಕೆಲ ಬಡಾವಣೆಗಳ…

4 hours ago