ಗಾಂಧಿ ಅಭಿಯಾನ ಅರಿವಿನ ಯಾನ
ನಾನು ಮೊದಲೇ ಹೇಳಿರುವಂತೆ, ನಮ್ಮ ತಂದೆ ಭಗಂದರ ರೋಗದಿಂದ ನರಳುತ್ತಿದ್ದರು. ಅವರ ಶುಶ್ರೂಷೆಯ ಅಧಿಕಾಂಶದ ಹೊರೆ ನಮ್ಮ ತಾಯಿ, ಒಬ್ಬ ಹಳೇ ಆಳು ಮತ್ತು ನನ್ನ ಮೇಲೆ ಬಿದ್ದಿತ್ತು. ನಾನು, ದಾದಿಯಂತೆ ಸೇವೆ ಮಾಡುತ್ತಿದ್ದೆ.ಗಾಯವನ್ನು ತೊಳೆದು ಬಟ್ಟೆ ಕಟ್ಟುವುದು, ಔಷಧಿ ಕೊಡುವುದು, ಮೂಲಿಕೆಗಳನ್ನು ಪುಡಿಮಾಡಿ ತಯಾರಿಸುವುದು, ಇವು ನನ್ನ ಮುಖ್ಯ ಕೆಲಸವಾಗಿದ್ದವು. ರಾತ್ರಿ ಅವರ ಕಾಲುಗಳನ್ನು ಅದುಮುತ್ತಿದ್ದೆ. ಮತ್ತೆ ಅವರಿಗೆ ನಿದ್ರೆ ಬಂದಾಗ ಅಥವಾ ಅವರು ಹೋಗು ಎಂದು ಹೇಳಿದಾಗ ನಾನು ಹೋಗಿ ಮಲಗಿಕೊಳ್ಳುತ್ತಿದ್ದೆ. ಈ ಸೇವೆ ನನಗೆ ಬಹಳ ಪ್ರಿಯವಾಗಿತ್ತು. ಈ ಸೇವೆಯನ್ನು ನಾನು ಎಂದೂ ಉದಾಸೀನ ಮಾಡಿದ ಜ್ಞಾಪಕವಿಲ್ಲ.
ಅದು ನನ್ನ ಪ್ರೌಢಶಾಲೆಯ ದಿನಗಳು. ಆದುದರಿಂದ ನನ್ನ ನಿತ್ಯ ಕಾರ್ಯಗಳನ್ನು ಮಾಡಿಕೊಡು ಉಳಿದ ಕಾಲವನ್ನು ಶಾಲೆಗೂ, ನಮ್ಮ ತಂದೆಯ ಸೇವೆಗೂ ವಿನಿಯೋಗಿಸುತ್ತಿದ್ದೆನು. ನಮ್ಮ ತಂದೆ ಹೋಗೆಂದು ಹೇಳಿದಾಗ ಅಥವಾ ಆವರ ಆರೋಗ್ಯ ತೃಪ್ತಿಕರವಾಗಿದ್ದಾಗ ಮಾತ್ರ, ನಾನು ಸಂಜೆ ತಿರುಗಾಡಲು ಹೋಗುತ್ತಿದ್ದೆ. ಅದೇ ಸಮಯದಲ್ಲಿ ನನ್ನ ಹೆಂಡತಿ ಗರ್ಭವತಿಯಾಗಿದ್ದಳು. ಇಂದು ಯೋಚಿಸಿದರೆ, ಆದು ನನ್ನ ದ್ವಿಗುಣ ಅವಮಾನವಾಗಿ ತೋರುತ್ತದೆ. ನನ್ನ ವಿಷಯ ಸುಖಲಾಲಸೆ ಹಾಗಿತ್ತು. ವಿದ್ಯಾರ್ಥಿಯಾದ ನನಗೆ ಇನ್ನೂ ಹೆಚ್ಚು ಸಂಯಮ ಇರಬೇಕಾಗಿತ್ತು. ನನ್ನ ವ್ಯಾಸಂಗ, ನನ್ನ ಮುಖ್ಯ ಕರ್ತವಾಗಿತ್ತು. ನನ್ನ ಪಿತೃಸೇವೆ ಅದಕ್ಕಿಂತಲೂ ಮುಖ್ಯ ಸರ್ಕವ್ಯವಾಗಿತ್ತು. ನನ್ನ ವಿಷಯ ಸುಖದ ಆಸೆ ಈ ಕರ್ತವ್ಯಗಳನ್ನೆಲ್ಲ ಮೀರಿಸಿತು. ಬಾಲ್ಯದಿಂದ ಶ್ರವಣನು ನನ್ನ ಆದರ್ಶವಾದದ್ದು ವ್ಯರ್ಥವಾಯಿತು. ಪ್ರತಿ ರಾತ್ರಿಯೂ, ನನ್ನ ಕೈಗಳು ನಮ್ಮ ತಂದೆಯ ಕಾಲನ್ನು ಒತ್ತುತ್ತಿರುವಾಗ, ನನ್ನ ಮನಸ್ಸು ಶಯನಗೃಹದಲ್ಲಿ ವಿಹರಿಸುತ್ತಿತ್ತು.ಅದರಲ್ಲಿಯೂ, ವೈದ್ಯಶಾಸ್ತ್ರವೂ, ವ್ಯವಹಾರ ಶಾಸ್ತ್ರವೂ, ಧರ್ಮಶಾಸ್ತ್ರವೂ ಯಾವ ಸಮಯದಲ್ಲಿ ಸ್ತ್ರೀಸಂಗ ತ್ಯಾಜ್ಯವೆಂದು ಹೇಳುತ್ತದೋ, ಆ ಸಮಯದಲ್ಲಿ ತಂದೆಯ ಶೂಶ್ರುಷೆಯಿಂದ ಬಿಡುಗಡೆ ದೊರೆತ ಕೂಡಲೇ, ನಾನು ಅವರಿಗೆ ನಮಸ್ಕರಿಸಿ ನೆಟ್ಟಗೆ ಶಯನಗೃಹಕ್ಕೆ ಹೋಗುತ್ತಿದ್ದೆ. ದಿನದಿನಕ್ಕೆ ನಮ್ಮ ತಂದೆಯ ಕಾಯಿಲೆ ಹೆಚ್ಚುತ್ತಾ ಹೋಗುತ್ತಿತ್ತು. ಆಯುರ್ವೇದ ಪಂಡಿತರು ತಮ್ಮ ಲೇಫಗಳನ್ನು ಹೆಚ್ಚಿದರು. ಹಕೀಮರು ತಮ್ಮ ಪಟ್ಟಿಗೆಗಳನ್ನು ಹಚ್ಚಿದರು. ನಾಡಿ ವೈದ್ಯರು ತಮ್ಮ ಔಷಧಿ ಕುಡಿಸಿದರು.
ಇಂಗ್ಲಿಷ್ ಡಾಕ್ಟರ್ ತಮ್ಮ ಸಾಹಸ ತೋರಿಸಿದರು. ಶಸ್ತ್ರ ಚಿಕಿತೆಯ ಹೊರತು ಬೇರೆ ದಾರಿ ಇಲ್ಲವೆಂದರು. ಆದರೆ ನಮ್ಮ ಕುಟುಂಬದ ವೈದ್ಯರು ಅದಕ್ಕೆ ಅಡ್ಡಿಯಾಗಿ, ಇಂಥ ಇಳಿವಯಸ್ಸಿನಲ್ಲಿ ಶಸ್ತ್ರ ಚಿಕಿತ್ಸೆ ಯೋಗ್ಯವಲ್ಲವೆಂದರು. ಅವರು ಹೆಸರುವಾಸಿಯಾದವರಾದುದರಿಂದ, ಅವರ ಮಾತೇ ನಡೆಯಿತು. ಶಸ್ತ್ರ ಚಿಕಿತ್ಸೆಗೆ ಅವಕಾಶ ಕೊಟ್ಟಿದ್ದರೆ ರೋಗ ಗುಣವಾಗುತ್ತಿತ್ತೆಂದು ನನ್ನ ನಂಬಿಕೆ. ಶಸ್ತ್ರ ಚಿಕಿತ್ಸೆ ಆಗುವುದಾಗಿದ್ದರೆ ಬೊಂಬಾಯಿನ ಹೆಸರುವಾಸಿಯಾಗಿದ್ದ ಒಬ್ಬ ವೈದ್ಯರಿಂದ ಆಗುವುದಿತ್ತು. ಆದರೆ ದೇವರ ಇಚ್ಛೆ, ಬೇರೆಯಾಗಿತ್ತು. ನಮ್ಮ ತಂದೆ ಅನುಪಯೋಗಿಯಾದ ಶಸ್ತ್ರ ಚಿಕಿತ್ಸೆಗೆ ಸಂಬಂಧಪಟ್ಟ ಔಷಧ ಉಪಕರಣಗಳನ್ನು ತೆಗೆದುಕೊಂಡು ಬೊಂಬಾಯಿಯಿಂದ ಹಿಂದಿರುಗಿದರು.
ಅವರು ಬದುಕುವ ಆಸೆಯನ್ನೇ ಬಿಟ್ಟರು. ದಿನ ಕಳೆದಂತೆ ಅವರ ಶಕ್ತಿ ಪೂರ್ಣವಾಗಿ ಕಡಿಮೆಯಾಯಿತು. ದೇಹಬಾಧೆಯನ್ನು ಹಾಸಿಗೆಯಲ್ಲಿಯೇ ತೀರಿಸಿಕೊಳ್ಳುವಂತೆ ನಾವು ಅವರನ್ನು ಬಲಾತ್ಕರಿಸಿದೆವು. ಆದರೆ ಅವರು ಇದಕ್ಕೆ ಕಡೆಯವರೆಗೂ ಒಪ್ಪಲಿಲ್ಲ. ಪ್ರತಿ ಸಲ ಏಳುವಾಗಲೂ ತುಂಬಾ ಯಾತನೆಯಾದರೂ ಹಾಸಿಗೆಯಿಂದ ಎದ್ದು ಹೋಗುತ್ತಿದ್ದರು. ಸ್ನಾನಾದಿಗಳನ್ನು ಮಾಡಲು ಹಾಸಿಗೆಯಿಂದ ಏಳಲು ಹಠ ಹಿಡಿದು, ಅದರಂತೆ ನಡೆಸುತ್ತಿದ್ದುದನ್ನು ನೋಡಿ ನನಗೆ ಆಶ್ಚರ್ಯವುಂಟಾಗುತ್ತಿತ್ತು. ಮನಸ್ಸಿನಲ್ಲಿ ಅವರನ್ನು ಸ್ತುತಿಸುತ್ತಿದ್ದೆ.
ಅವರ ಅವಸಾನದ ಘೋರ ರಾತ್ರಿ ಬಂತು. ನಮ್ಮ ಚಿಕ್ಕಪ್ಪ ಆಗ ರಾಜಕೋಟೆಯಲ್ಲಿದ್ದರು. ನಮ್ಮ ತಂದೆಯವರ ಕಾಯಿಲೆ ಹೆಚ್ಚಾದುದನ್ನು ಕೇಳಿ, ಅವರು ರಾಜಕೋಟೆಗೆ ಬಂದಿದ್ದರೆಂದು ನನ್ನ ನೆನಪು. ಆ ಅಣ್ಣ ತಮ್ಮಂದಿರಲ್ಲಿ ಗಾಢ ಪ್ರೇಮವಿತ್ತು. ಚಿಕ್ಕಪ್ಪ ಹಗಲೆಲ್ಲ ತಂದೆಯ ಹಾಸಿಗೆಯ ಬಳಿಯೇ ಕುಳಿತಿರುತ್ತಿದ್ದರು. ರಾತ್ರಿ, ನಮ್ಮನ್ನೆಲ್ಲ ಮಲಗಲು ಕಳುಹಿಸಿ, ತಾವು ತಂದೆಯ ಮಗ್ಗುಲಲ್ಲಿಯೇ ಮಲಗುತ್ತಿದ್ದರು. ಅಂದು ರಾತ್ರಿ ಸುಮಾರು ಹತ್ತೂವರೆ ಹನ್ನೊಂದು ಗಂಟೆ ಆಗಿತ್ತು. ನಾನು ತಂದೆಯವರ ಕಾಲು ಒತ್ತುತ್ತಿದ್ದೆ. ಚಿಕ್ಕಪ್ಪ, ‘ನೀನು ಹೋಗಿ ಮಲಗಿಕೋ, ನಾನು ಕುಳಿತಿರುತ್ತೇನೆ’ ಎಂದು ಹೇಳಿದರು. ನಾನು ಸಂತೋಷದಿಂದ ಶಯನಗೃಹಕ್ಕೆ ಹೋದೆ. ನನ್ನ ಹೆಂಡತಿ ಗಾಢನಿದ್ರೆಯಲ್ಲಿದ್ದಳು. ಆದರೆ ನಾನು ಅವಳನ್ನು ಮಲಗಲು ಬಿಡಬೇಕಲ್ಲ ಎಬ್ಬಿಸಿದೆನು. ಆರು ಏಳು ನಿಮಿಷ ಕಳೆದಿರಬಹುದು.
ಅಷ್ಟರಲ್ಲಿ ನೌಕರ ಬಂದು ಬಾಗಿಲು ಬಡಿದ. ನಾನು ಗಾಬರಿಯಾದೆ. ‘ಏಳು, ತಂದೆಯ ಸ್ಥಿತಿ ತುಂಬ ಕೆಟ್ಟಿದೆ’ ಎಂದ. ತಂದೆಗೆ ಬಹಳ ಕಾಯಿಲೆ ಎಂಬುದು ನನಗೆ ಗೊತ್ತೇ ಇತ್ತು. ನಾನು ಕೂಡಲೇ ಆ ಮಾತಿನ ಅರ್ಥವನ್ನು ಗ್ರಹಿಸಿ ಹಾಸಿಗೆಯಿಂದ ಎದ್ದು, ‘ನಿಜವಾಗಿ ಏನಾಗಿದೆ ಹೇಳು’ ಎಂದೆ. ‘ತಂದೆ ತೀರಿಕೊಂಡರು’ ಎಂದು ಉತ್ತರ ಬಂದಿತು. ಅಂತೂ ಎಲ್ಲ ಮುಕ್ತಾಯವಾಯಿತು. ಕೈ ಹಿಸುಕಿಕೊಳ್ಳುವುದೊಂದೇ ನನಗೆ ಇನ್ನು ಉಳಿದುದು. ಇನ್ನು ಏತಕ್ಕಾಗಿ ಪಶ್ಚಾತ್ತಾಪ. ನಾನು ತುಂಬ ನಾಚಿಕೊಂಡೆ, ಬೇದಗೊಂಡೆ.
ತಂದೆಯವರ ಕೊಠಡಿಗೆ ಅತುರದಿಂದ ಓಡಿದೆ. ನಾನು ವಿಷಯಾಂಧನಾಗಿಲ್ಲದಿದ್ದರೆ ಅಂತ್ಯಕಾಲದವರೆಗೆ ನಮ್ಮ ತಂದೆಯ ಕಾಲುಗಳನ್ನು ಒತ್ತುತ್ತಲೇ ಇರುತ್ತಿದ್ದೆ. ಅವರು ನನ್ನ ಹಸ್ತಗಳ ಮೇಲೆ ಅವಸಾನ ಹೊಂದುತ್ತಿದ್ದರು. ಅವರ ಬಗೆಗೆ ಗಾಢ ಭಕ್ತಿ ಹೊಂದಿದ್ದ ನನ್ನ ಚಿಕ್ಕಪ್ಪನವರಿಗೆ ಆ ಅಣ್ಣನ ಅಂತಿಮ ಸೇವೆಯ ಭಾಗ್ಯ ದೊರೆಯಿತು. ತಮ್ಮ ಅಮಾನ ಕಾಲ ಸಮೀಪಿಸುತ್ತಿದ್ದುದು ನಮ್ಮ ತಂದೆಗೆ ಗೊತ್ತಾಗಿದ್ದಿತು. ಅವರು ಕಾಗದ ಲೇಖನಿ ತರಿಸಿ, ‘ಅಂತ್ಯ ಕ್ರಿಯೆಗೆ ಸಿದ್ಧಗೊಳಿಸಿ’ ಎಂದು ಬರೆದರು. ಆನಂತರ ಕೈಗೆ ಕಟ್ಟಿಕೊಂಡಿದ್ದ ಕಂಕಣ (ತಾಯತ) ವನ್ನೂ, ಕತ್ತಿನಲ್ಲಿದ್ದ ಚಿನ್ನದ ತುಳಸಿ ಮಣಿ ಹಾರವನ್ನೂ ಕಿತ್ತೆಸೆದರು. ಮರು ಗಳಿಗೆಯಲ್ಲಿಯೇ ಪ್ರಾಣ ಬಿಟ್ಟಿದ್ದರು.
ಹಿಂದಿನ ಅಧ್ಯಾಯದಲ್ಲಿ ನನ್ನ ನಾಚಿಕೆಯ ಪ್ರಸಂಗ ಎಂದು ನಾನು ಸೂಚಿಸಿದುದು ಇದನ್ನೇ. ಸೇವೆ ಮಾಡಬೇಕಾದ ಸಮಯದಲ್ಲಿ ನಾನು ವಿಷಯಾಸಕ್ತನಾಗಿದ್ದೆನು. ಈ ಕಳಂಕವನ್ನು ಅಳಿಸುವುದಕ್ಕೂ, ಮರೆಯುವುದಕ್ಕೂ ನನ್ನಿಂದ ಸಾಧ್ಯವಾಗಿಲ್ಲ. ನನ್ನ ತಂದೆ ತಾಯಿಗಳಲ್ಲಿ ನನ್ನ ಭಕ್ತಿ ಅಪಾರವಾಗಿದ್ದರೂ ಅದಕ್ಕಾಗಿ ನಾನು ಏನನ್ನೂ ತ್ಯಜಿಸಲು ಸಿದ್ಧವಾಗಿವಾಗಿದ್ದರೂ, ನಾನು ವಿಷಯಾಂಧನಾಗಿದ್ದುದರಿಂದ ನನ್ನ ಪಿತೃಭಕ್ತಿ ಅಕ್ಷಮ್ಮ ನ್ಯೂನತೆಯಿಂದ ಕೂಡಿತ್ತು.
ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…
ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…
ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…
ಚನ್ನೇಶ ಬಿ.ಇದರಮನಿ ಬರ ಪರಿಸ್ಥಿತಿಯಿಂದ ಅಕ್ಕಿ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ ಪ್ರತಿ ಕೆಜಿಗೆ ೬ ರಿಂದ ೧೦ ರೂ.ಗಳಷ್ಟು…
ಎಸ್.ಎಸ್.ಭಟ್ಟ ನಾಳೆ ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಆಯೋಜನೆ ನಂಜನಗೂಡು: ಮಾಜಿ ಸಂಸದರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ…