ರಾಜ್ಯ

ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಪಿಎಂ ಇ-ಡ್ರೈವ್ ಅಡಿಯಲ್ಲಿ ಮೊದಲ ಹಂತದಲ್ಲಿಯೇ ರಾಷ್ಟ್ರದ ಐದು ಪ್ರಮುಖ ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

ಈ ಪೈಕಿ ಬೆಂಗಳೂರು ನಗರಕ್ಕೆ 4500 ಬಸ್ ಗಳನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಹೊಸದಿಲ್ಲಿಯಲ್ಲಿರುವ ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಎಲೆಕ್ಟ್ರಿಕ್ ಬಸ್ ಹಂಚಿಕೆಯ ಸಂಬಂಧ ಕರ್ನಾಟಕ, ತೆಲಂಗಾಣ, ಗುಜರಾತ್ ಹಾಗೂ ದೆಹಲಿ ರಾಜ್ಯಗಳ ಅಧಿಕಾರಿಗಳ ಜತೆ ಕೇಂದ್ರ ಸಚಿವರು ಸಭೆ ನಡೆಸಿದರು.

ಎಲೆಕ್ಟ್ರಿಕ್ ಬಸ್ ಗಳ ಬಳಕೆ ಹಾಗೂ ಅವುಗಳ ನಿರ್ವಹಣೆಗೆ ಅಗತ್ಯವಾದ ಪೂರಕ ಮೂಲಸೌಕರ್ಯವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು; ಮಾಲಿನ್ಯರಹಿತ ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ರಾಷ್ಟ್ರೀಯ ಅಗತ್ಯ ಎಂದು ಪ್ರತಿಪಾದಿಸಿದರು.

ಬಸ್ ಹಂಚಿಕೆಯಲ್ಲಿ ಬೇಡಿಕೆ, ಜನಸಂಖ್ಯೆ ಹಾಗೂ ಹಳೆಯ ಬಸ್ ಗಳ ವಿಲೇವಾರಿ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ಕರ್ನಾಟಕಕ್ಕೆ 4500 ಬಸ್ ಹಂಚಿಕೆ:
ಕರ್ನಾಟಕದ ಪರವಾಗಿ ಸಭೆಯಲ್ಲಿ ಹಾಜರಿದ್ದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಾಗಿ (BMTC) 7,000 ಎಲೆಕ್ಟ್ರಿಕ್ ಬಸ್ ಗಳಿಗೆ ಬೇಡಿಕೆ ಸಲ್ಲಿಸಿದರು. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿದ್ದ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಇಷ್ಟೇ ಸಂಖ್ಯೆಯ ಬಸ್ ಗಳಿಗೆ ಬೇಡಿಕೆ ಸಲ್ಲಿಸಿದರು.

ಈ ಬೇಡಿಕೆ ಹಾಗೂ ಜನಸಂಖ್ಯೆಯನ್ನು ಪರಿಗಣಿಸಿ ಮೊದಲ ಹಂತದಲ್ಲಿಯೇ ಬಿಎಂಟಿಸಿಗೆ 4,500 ಬಸ್ ಗಳನ್ನು ಒದಗಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರಕ್ಕೆ ಅತ್ಯಧಿಕ ಬಸ್ ಗಳನ್ನು ಹಂಚಿಕೆ ಮಾಡುವ ಭರವಸೆಯನ್ನು ಅವರು ನೀಡಿದರು.

ಉಳಿದಂತೆ ದೆಹಲಿ ಸಾರಿಗೆ ಸಂಸ್ಥೆ 2800 ಬಸ್ ಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟೂ ಬಸ್ ಗಳನ್ನು ಒದಗಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನಸಂಖ್ಯೆ ಅಧಿಕವಾಗಿದೆ. ಜತೆಗೆ ಇನ್ನೂ ಕೆಲ ಅಂಶಗಳನ್ನು ಪರಿಗಣಿಸಿ ಬೇಡಿಕೆ ಇಟ್ಟಿರುವಷ್ಟೂ ಸಂಖ್ಯೆಯ ಬಸ್ ಗಳನ್ನು ಹಂಚಿಕೆ ಮಾಡುವಂತೆ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಳಿದಂತೆ ಸೂರತ್ ನಗರ ಸಾರಿಗೆ ಸಂಸ್ಥೆ 600 ಬಸ್ ಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟೂ ಬಸ್ ಗಳನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿದೆ. ಅಹಮದಾಬಾದ್ ನಗರಕ್ಕೆ 1000 ಬಸ್ ಗಳನ್ನು ಕೇಳಲಾಗಿದ್ದು, ಅಷ್ಟೂ ಬಸ್ ಗಳನ್ನೂ ಹಂಚಿಕೆ ಮಾಡುವುದಕ್ಕೆ ಸಚಿವರು ಒಪ್ಪಿಗೆ ನೀಡಿದರು.

ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರ ಸಾರಿಗೆ ಸಂಸ್ಥೆ 2800 ವಿದ್ಯುತ್ ಚಾಲಿತ ಬಸ್ ಗಳಿಗೆ ಬೇಡಿಕೆ ಇಟ್ಟಿತ್ತು, ಆ ಪೈಕಿ 2000 ಬಸ್ ಗಳನ್ನು ಹಂಚಿಕೆ ಮಾಡುವ ಬಗ್ಗೆ ಸಚಿವರು ಭರವಸೆ ನೀಡಿದರು.

ಒಟ್ಟಾರೆಯಾಗಿ ಐದೂ ನಗರಗಳಿಂದ 14,200 ಬಸ್ ಗಳಿಗೆ ಬೇಡಿಕೆ ಬಂದಿತ್ತು. ಆ ಪೈಕಿ 10,900 ಬಸ್ ಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದ ಕೇಂದ್ರ ಸಚಿವರು; ಎಲೆಕ್ಟ್ರಿಕ್ ಬಸ್ ಗಳನ್ನು ಹಂಚಿಕೆ ಮಾಡುವ ಮುನ್ನ ಐದೂ ನಗರಗಳ ಸಾರಿಗೆ ಸಂಸ್ಥೆಗಳು ಡಿಪೋಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯವಾದ ಮೂಲಸೌಕರ್ಯವನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಡಿಪೋಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಅಗತ್ಯವಾದರೆ ಹೊಸ ಡಿಪೋಗಳನ್ನು ಸ್ಥಾಪಿಸುವ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿಗೆ ಸಿಕ್ಕಿದ್ದೆಷ್ಟು?
•ಬಿಎಂಟಿಸಿ ಒಟ್ಟು ಬೇಡಿಕೆಯ ಮೂರನೇ ಎರಡರಷ್ಟು (67%) ಬಸ್ ಗಳ ಬೇಡಿಕೆ ಪೂರೈಕೆ
•ಹಂಚಿಕೆ ಮಾಡುತ್ತಿರುವ 10,900 ಬಸ್ ಗಳಲ್ಲಿ 4,500 ಬಸ್ ಗಳು ಬೆಂಗಳೂರಿಗೆ
•ಮೊದಲ ಹಂತದಲ್ಲಿ ಉದ್ಯಾನ ನಗರಿಗೆ ಸಿಂಹಪಾಲು
•ಬೆಂಗಳೂರು ಹೆಚ್ಚು ಜನಸಂಖ್ಯೆಯುಳ್ಳ ನಗರ ಎಂದು ಪರಿಗಣನೆ
•ಸುಮಾರು 800 ಕಿ ಮಿ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಕಾರ್ಯಾಚರಣೆ ನಡೆಸುತ್ತಿದೆ. ಈ ಅಂಶವನ್ನು ಪರಿಗಣಿಸಲಾಗಿದೆ.

ಮಾಲಿನ್ಯರಹಿತ ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ರಾಷ್ಟ್ರೀಯ ಅಗತ್ಯ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಹೆಚ್ಚು ಒತ್ತು ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಗುರಿ ಸಾಧಿಸುತ್ತೇವೆ. ಹೆಚ್.ಡಿ. ಕುಮಾರಸ್ವಾಮಿ, ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು

ಆಂದೋಲನ ಡೆಸ್ಕ್

Recent Posts

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

2 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

2 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

5 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

10 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

16 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

16 hours ago