ರಾಜ್ಯ

ಸಾಮಾಜಿಕ ಬಹಿಷ್ಕಾರಕ್ಕೆ ಕಾನೂನಿನ ಅಂಕುಶ : ಇಂದಿನಿಂದ ಹೊಸ ನಿಯಮ ಜಾರಿಗೆ

ಬೆಂಗಳೂರು : ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ರೂ.1 ಲಕ್ಷದವರೆಗೆ ದಂಡ, ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶವಿರುವ ಕಾನೂನು ಸೋಮವಾರದಿಂದ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ.

ಸಾಮಾಜಿಕ ಬಹಿಷ್ಕಾರವನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆಗೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದ್ದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿದೆ.

ವ್ಯಕ್ತಿ, ವ್ಯಕ್ತಿಗಳ ಗುಂಪು, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರ ಹಾಗೂ ಅಪರಾಧ ತಡೆಗಟ್ಟಲು ಮತ್ತು ನಿರ್ಬಂಧಿಸಲು ಈ ಮಸೂದೆ ರೂಪಿಸಲಾಗಿದೆ. ಈ ಕೃತ್ಯಗಳಲ್ಲಿ ತೊಡಗುವವರಿಗೆ ದಂಡನೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.

ದ್ವೇಷ ಅಪರಾಧ ಎಸಗಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಶಿಕ್ಷೆ ₹50 ಸಾವಿರ ದಂಡ ವಿಧಿಸಬಹುದಾಗಿದೆ. ಮತ್ತದೇ ಅಪರಾಧದಲ್ಲಿ ಭಾಗಿಯಾದರೆ 2-10 ವರ್ಷಗಳ ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಸಂಜ್ಞೇ ಅಪರಾಧವಾಗಿರಲಿದ್ದು, ಜಾಮೀನುರಹಿತವಾಗಿರಲಿದೆ ಎಂದು ವಿವರಿಸಲಾಗಿದೆ.

ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕದಲ್ಲಿ, ಜಾತಿ ಅಥವಾ ಸಮುದಾಯ ಪಂಚಾಯಿತಿಯ ಮೂಲಕ ಬಹಿಷ್ಕಾರ ಹಾಕುವುದು ಇನ್ನೂ ಹಲವು ಸಮುದಾಯಗಳಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಘನತೆಯಿಂದ ಜೀವನ ನಡೆಸುವುದಕ್ಕೆ ಹಲವು ಸಮುದಾಯಗಳಿಗೆ ಕಿರುಕುಳವಾಗುತ್ತಿದೆ. ಸಮಾಜದಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದ್ದು, ಸೌಹಾರ್ದಕ್ಕೆ ಧಕ್ಕೆಯಾಗುತ್ತಿದೆ. ಇಂಥ ಅಸಾಂವಿಧಾನಿಕ ಆಚರಣೆಗಳನ್ನು ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ.

ಈ ಬಗೆಯ ಬಹಿಷ್ಕಾರಕ್ಕೆ ಸಭೆ ಸೇರುವ ಅಥವಾ ಭಾಗವಹಿಸುವ ಪ್ರತಿಯೊಬ್ಬರಿಗೂ ₹1 ಲಕ್ಷ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ. ಇಂಥ ಅಪರಾಧದಲ್ಲಿ ಭಾಗವಹಿಸಲು ಪ್ರೇರಣೆ ಅಥವಾ ನೆರವು ನೀಡುವವರೆಗೆ 3 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಬಹುದಾಗಿದೆ. ಸಂತ್ರಸ್ತನ ಸಮ್ಮತಿಯೊಂದಿಗೆ ರಾಜೀ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಾಗಿರುವ ಈ ಮಸೂದೆಯನ್ನು ಸಮಾಜ ಕಲ್ಯಾಣ ಮಂತ್ರಿ ಡಾ. ಎಚ್‌ ಸಿ ಮಹದೇವಪ್ಪ ಅವರು ಬೆಳಗಾವಿಯಲ್ಲಿ ಇತ್ತೀಚಿಗೆ ನಡೆದ ಚಳಿಗಾಲ ಅಧಿವೇಶನದ ವೇಳೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ
ಸರ್ವಾನುಮತದಿಂದ ಅಂಗೀಕಾರ ಪಡೆದುಕೊಂಡಿದ್ದರು.

ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು, ಈ ಉದ್ದೇಶದಿಂದ ಸಭೆ, ಪಂಚಾಯಿತಿ, ಜಮಾವಣೆ, ಅಭಿಪ್ರಾಯ ಸಂಗ್ರಹಿಸುವುದು, ಬಹಿಷ್ಕಾರಕ್ಕೆ ಪ್ರತ್ಯಕ್ಷ, ಪರೋಕ್ಷ ಸಹಾಯ, ಒತ್ತಡ, ಪ್ರಚೋದನೆ ನೀಡುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಕೂಡಾ ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಕಾಯ್ದೆಯ ಅನ್ವಯ, ಬಹಿಷ್ಕಾರಕ್ಕೆ ಒಳಗಾದವರು ಪೊಲೀಸ್‌ ಠಾಣೆ ಅಥವಾ ನ್ಯಾಯಾಧೀಶರಿಗೆ ದೂರು ನೀಡಬಹುದು. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ. ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶ ನೀಡಬಹುದು. ಸಂತ್ರಸ್ತರಿಗೆ ಸಹಾಯ ಒದಗಿಸಲು ಮತ್ತು ದಂಡದ ಮೊತ್ತವನ್ನು ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು. ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಬಹುದು. ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಗಳಾಗಿ ಗ್ರೂಪ್ ‘ಎ’ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಲಿದೆ.

 

ವಿಧೇಯಕದ ಮುಖ್ಯಾಂಶಗಳು

ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ 1 ಲಕ್ಷ ರೂ. ದಂಡ ಹಾಗೂ 3 ವರ್ಷದವರೆಗಿನ ಜೈಲು ಶಿಕ್ಷೆ.

ಸಾಮಾಜಿಕ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು, ಬಹಿಷ್ಕಾರ ಮಾಡಲು ನಡೆಸುವ ಸಭೆ, ಪಂಚಾಯಿತಿ ನಡೆಸಿದರೆ ಅಪರಾಧ.‌
ಬಹಿಷ್ಕಾರಕ್ಕೆ ಒತ್ತಡ ಹೇರುವುದು, ಬಹಿಷ್ಕಾರದ ಪರ ಮತ ಹಾಕುವುದು ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳುವುದು ಅಪರಾಧ‌.

ಬಹಿಷ್ಕಾರಕ್ಕೆ ಒತ್ತಡ ಹೇರುವುದು, ಬಹಿಷ್ಕಾರದ ಪರ ಮತ ಹಾಕುವುದು ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳುವುದು ಅಪರಾಧ‌.

ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್ ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಲು ಅವಕಾಶ.

ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸುವ ಆದೇಶ ಹೊರಡಿಸಲು ಅವಕಾಶ.

ಗ್ರಾಮ ಅಥವಾ ಸಮುದಾಯದಿಂದ ಹೊರ ಹಾಕುವುದು, ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸುವುದು ಅಪರಾಧ.

ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು, ವ್ಯವಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು ಅಪರಾಧ. ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶಕ್ಕೆ ತಡೆಯೊಡ್ಡುವುದು, ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು ಅಪರಾಧ. ಸಾಮಾಜಿಕ–ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯೊಡ್ಡುವುದು ಅಪರಾಧ.

ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು ಅಪರಾಧ. ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು, ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು, ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು ಅಪರಾಧ.

ಮಾನವ ಹಕ್ಕುಗಳನ್ನು ನಿರಾಕರಿಸುವುದು, ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದನ್ನು ಅಪರಾಧ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

2 mins ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

6 mins ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

10 mins ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

19 mins ago

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

10 hours ago