ಅಣ್ಣೂರು ಸತೀಶ್
ಶೇ.೫೦ರಷ್ಟು ವಹಿವಾಟು ಇಳಿಕೆ; ಗ್ರಾಹಕರಿಲ್ಲದೆ ಕಂಗಾಲಾದ ವ್ಯಾಪಾರಿಗಳು
ಭಾರತೀನಗರ: ದೀಪಾವಳಿ ಎಂದರೆ ಮನೆಮನೆಗಳಲ್ಲಿ ದೀಪಗಳ ಬೆಳಕಿನೊಂದಿಗೆ ಪಟಾಕಿಗಳ ಸಂಭ್ರಮವೂ ಮನೆ ಮಾಡುವುದು ವಾಡಿಕೆ. ಆದರೆ ಈ ಬಾರಿ ಭಾರತೀನಗರದಲ್ಲಿ ಪಟಾಕಿಗಳ ಸದ್ದು ಕಡಿಮೆಯಾಗಿದ್ದು, ವ್ಯಾಪಾರ ವಹಿವಾಟಿನ ಮೇಲೂ ಅದರ ಪರಿಣಾಮ ಬೀರಿದೆ. ಪರಿಸರ ಜಾಗೃತಿ, ಶಬ್ದ ಮಾಲಿನ್ಯದ ದುಷ್ಪರಿಣಾಮ ಹಾಗೂ ಪಟಾಕಿಗಳಿಂದ ಸಂಭವಿಸುವ ಅನಾಹುತಗಳ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಅರಿವಿನಿಂದಾಗಿ ಈ ವರ್ಷ ಪಟಾಕಿ ವ್ಯಾಪಾರದಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಶೇ.೫೦ರಷ್ಟು ಕುಸಿತವಾಗಿದೆ.
ಪ್ರತಿವರ್ಷ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಭಾರತೀನಗರದ ಪಟಾಕಿ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿರುತ್ತಿತ್ತು. ವ್ಯಾಪಾರಿಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಹಲಗೂರು ರಸ್ತೆಯ ಹಳೆಯ ಎಸ್‌ಬಿಐ ಕಚೇರಿ ಹಿಂಭಾಗದ ಆವರಣದಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಪಟಾಕಿ ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಾಗಿದ್ದು, ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮದ್ದೂರು, ಮಳವಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಂದ ವ್ಯಾಪಾರಕ್ಕಾಗಿ ಆಗಮಿಸಿರುವ ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿ ದಿನ ಕಳೆಯುವಂತಾಗಿದೆ.
ಪಟಾಕಿಗಳಿಂದ ದೂರ ಸರಿಯುತ್ತಿರುವ ಜನರು: ಹಿಂದೆ ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದ ಪಟಾಕಿಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ. ಪರಿಸರ ಮಾಲಿನ್ಯ, ಕಿವಿಗಡಚಿಕ್ಕುವ ಶಬ್ದ, ಹೊಗೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಪ್ರಾಣಿ-ಪಕ್ಷಿಗಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಮಕ್ಕಳ ಸುರಕ್ಷತೆಯ ಬಗ್ಗೆಯೂ ಪೋಷಕರು ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಪಟಾಕಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಕೆಲವು ಕುಟುಂಬಗಳು ಮಕ್ಕಳ ಸಂತೋಷಕ್ಕಾಗಿ ಕಡಿಮೆ ಶಬ್ದ ಉಂಟುಮಾಡುವ ಸಣ್ಣ ಪ್ರಮಾಣದ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸುತ್ತಿದ್ದರೆ, ಇನ್ನೂ ಹಲವರು ಪಟಾಕಿಗಳ ಬದಲಿಗೆ ಮನೆಗಳಮುಂದೆ ಹಣತೆ ಹಚ್ಚಿ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿ ಪಟಾಕಿ ಮಾರುಕಟ್ಟೆಯಲ್ಲಿ ನಿರೀಕ್ಷಿತ ಸಂಭ್ರಮ ಕಂಡುಬರುತ್ತಿಲ್ಲ.
ಬೆಲೆ ಇಳಿದರೂ ಖರೀದಿಗೆ ನಿರಾಸಕ್ತಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಹಬ್ಬದ ಖರ್ಚಿನಲ್ಲೂ ಮಿತವ್ಯಯದ ಹಾದಿ ಹಿಡಿದಿದ್ದಾರೆ. ಹಿಂದಿನ ವರ್ಷಗಳಲ್ಲಿ ಪಟಾಕಿಗಳ ಬೆಲೆ ಹೆಚ್ಚಳ ಖರೀದಿಗೆ ಹಿನ್ನಡೆಯಾಗುತ್ತಿತ್ತು. ಆದರೆ, ಈ ಬಾರಿ ಕಡಿಮೆ ಬೆಲೆಗೆ ಹಸಿರು ಪಟಾಕಿಗಳು ಲಭ್ಯವಿದ್ದರೂ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇದರಿಂದ ವ್ಯಾಪಾರಿಗಳು ತೀವ್ರ ನಿರಾಸೆ ಅನುಭವಿಸುವಂತಾಗಿದೆ. ಹೊರರಾಜ್ಯಗಳಿಂದ ಲಕ್ಷಾಂತರ ರೂ. ಮೌಲ್ಯದ ಪಟಾಕಿಗಳನ್ನು ಖರೀದಿಸಿ ತಂದು ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ಈಗ ಬಂಡವಾಳ ವಾಪಸ್ ಪಡೆಯುವುದೇ ದೊಡ್ಡ ಸವಾಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆಯದ ಕಾರಣ ತಂದ ಪಟಾಕಿಗಳನ್ನು ಖರೀದಿ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕನಿಷ್ಠ ಹೂಡಿಕೆ ಮಾಡಿದ ಹಣವಾದರೂ ವಾಪಸ್ ಬಂದರೆ ಸಾಕು ಎಂಬ ಚಿಂತೆಯಲ್ಲಿ ವ್ಯಾಪಾರಿಗಳಿದ್ದಾರೆ.
ಪರಿಸರ ಸ್ನೇಹಿ ದೀಪಾವಳಿ: ಆರೋಗ್ಯದ ದೃಷ್ಟಿಯಿಂದ ಪಟಾಕಿಗಳ ಬಳಕೆ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಟ್ಟಿನಲ್ಲಿ ಪರಿಸರ ಕಾಳಜಿ ಹಾಗೂ ಆರೋಗ್ಯದ ಅರಿವಿನಿಂದ ಜನರು ಪರಿಸರ ಸ್ನೇಹಿ ದೀಪಾವಳಿಯತ್ತ ಮುಖ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ವರ್ಷವಿಡೀ ದೀಪಾವಳಿ ವ್ಯಾಪಾರದ ನಿರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಳ್ಳುವ ಪಟಾಕಿ ವ್ಯಾಪಾರಿಗಳಿಗೆ ಮಾತ್ರ ಈ ಬಾರಿಯ ಹಬ್ಬ ನಿರೀಕ್ಷಿತ ಆದಾಯ ತಂದುಕೊಡುವಲ್ಲಿ ವಿಫಲವಾಗಿದೆ.
” ಪಟಾಕಿ ಸಿಡಿಸುವುದರಿಂದ ಕ್ಷಣಿಕ ಸಂತೋಷ ಸಿಗಬಹುದು. ಆದರೆ, ಇದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪಟಾಕಿಗಳ ದುಷ್ಪರಿಣಾಮ ಮನುಷ್ಯರ ಮೇಲೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಮೇಲೂ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಪಟಾಕಿಗಳ ಬಳಕೆಯನ್ನು ನಿಯಂತ್ರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು.”
ಮಧು ಜಿ.ಮಾದೇಗೌಡ, ವಿಧಾನಪರಿಷತ್ ಸದಸ್ಯ
” ಪ್ರತಿವರ್ಷ ತಮಿಳುನಾಡಿನಿಂದ ಪಟಾಕಿಗಳನ್ನು ಖರೀದಿಸಿ ತಂದು ಭಾರತೀನಗರದಲ್ಲಿ ಮಾರಾಟ ಮಾಡುತ್ತಿದ್ದೇನೆ. ಆದರೆ ಕಳೆದ ಎರಡು-ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವ್ಯಾಪಾರದಲ್ಲಿ ಶೇ.೫೦ರಷ್ಟು ಕುಸಿತವಾಗಿದೆ. ಹಸಿರು ಪಟಾಕಿಗಳು ಕಡಿಮೆ ಬೆಲೆಗೆ ಸಿಗುತ್ತಿದ್ದರೂ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ನಾವು ಹೂಡಿಕೆಯ ಹಣ ವಾಪಸ್ ಪಡೆಯುವುದೇ ಕಷ್ಟವಾಗಿದೆ.”
ವಿ.ರಾಘು, ಸೌಭಾಗ್ಯ ಟ್ರೇಡರ್ ಪಟಾಕಿ ಮಳಿಗೆ ಮಾಲೀಕರು
ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ…
ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ, ಚುನಾವಣೆಯೆಂದರೆ, ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತು…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ…
ಕೆ.ಬಿ.ರಮೇಶನಾಯಕ ಕಾಮಗಾರಿ ವೇಳೆ ಒಂದು ಕಡೆ ಸಂಚಾರ ನಿರ್ಬಂಧ; ಮತ್ತೊಂದು ಕಡೆ ಓಡಾಟಕ್ಕೆ ಅವಕಾಶ ವೈಟ್ ಟಾಪಿಂಗ್ ಕಾಮಗಾರಿಗೆ ಅತ್ಯಾಧುನಿಕ…
ಪ್ರಶಾಂತ್ ಎಸ್. ಮೈಸೂರು: ನಗರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತಿದ್ದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಾರ್ಡ್ ಸಂಖ್ಯೆ ೪೭ರ ಕುವೆಂಪುನಗರದ ಉದ್ಯಾನ…
ಪಿ.ಶಿವಕುಮಾರ್ ಕಾರ್ಯ ಗ್ರಾಮದಲ್ಲಿ ನ.೧೧, ೧೨, ೧೩ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೊಡ್ಡ ಕವಲಂದೆ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ…