Andolana originals

ನಾಯಿಗೆ ಮೇಯರ್ ಗಿರಿ…!!

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ, ಚುನಾವಣೆಯೆಂದರೆ, ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತು ನಾವು ಒಪ್ಪುವ ಅಭ್ಯರ್ಥಿಯ ಹೆಸರು/ಚಿಹ್ನೆಯ ಪಕ್ಕದ ಬಟನ್ ಪ್ರೆಸ್ ಮಾಡುವುದು. ಆದರೆ, ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾದ ಅಮೆರಿಕದಲ್ಲಿ ಇದು ಅಷ್ಟೊಂದು ಸುಲಭದ ಪ್ರಕ್ರಿಯೆಯಲ್ಲ; ಅದೊಂದು ವಿಚಿತ್ರವೆನ್ನಿಸಬಹುದಾದ ನಿಯಮಾವಳಿಗಳ, ಗಂಭೀರ ತಾತ್ವಿಕ ವಿಷಯಗಳ ಮತ್ತು ನಂಬಲಸಾಧ್ಯ ತಮಾಷೆ-ವೈಚಿತ್ರ್ಯಗಳ ಸಮ್ಮಿಶ್ರಣ.

ಮೊಟ್ಟ ಮೊದಲಿಗೆ, ಅಮೆರಿಕದಲ್ಲಿ, ಭಾರತದಂತೆ ಒಂದು ರಾಷ್ಟ್ರೀಯ ಚುನಾವಣಾ ಆಯೋಗವಿಲ್ಲ. ಒಂದೊಂದು ರಾಜ್ಯವೂ, ಹಲವು ಬಾರಿ ಒಂದೊಂದು ಜಿಲ್ಲೆಯೂ ತನ್ನದೇ ಆದ ಚುನಾವಣಾ ನಿಯಮಾವಳಿಗಳನ್ನು ರೂಪಿಸಿಕೊಂಡಿರುತ್ತದೆ. ಕೆಲವೆಡೆ ಎಲೆಕ್ಟ್ರಾನಿಕ್ ಮತ ಯಂತ್ರಗಳಿದ್ದರೆ, ಕೆಲವೆಡೆ ಪೇಪರ್ ಬ್ಯಾಲಟ್. ಇನ್ನೂ ಕೆಲವೆಡೆ ಎಲ್ಲ ಮತದಾರರಿಗೆ ಅಂಚೆಯ ಮೂಲಕವೇ ಮತಪತ್ರವನ್ನು ಕಳುಹಿಸಲಾಗುತ್ತದೆ.

ಕೆಲವೆಡೆ, ಅವನ್ನು ಇ-ಮೇಲ್ ಮೂಲಕ ಕಳುಹಿಸುವುದೂ ಇದೆ. ನಿಯಮಾವಳಿಗಳಲ್ಲಿ ಏನೇ ವೈವಿಧ್ಯತೆ ಇದ್ದರೂ, ಇಡೀ ದೇಶಕ್ಕೆ ಚುನಾವಣಾ ದಿನ ಮಾತ್ರ ಒಂದೇ: ನವೆಂಬರ್ ತಿಂಗಳ ಮೊದಲ ಸೋಮವಾರದ ಮರುದಿನ. ಹಾಗೆಂದು ಆ ದಿನ ಮಾತ್ರ ಮತ ಹಾಕಬೇಕೆಂದೇನೂ ಇಲ್ಲ. ಚುನಾವಣಾ ದಿನಕ್ಕೆ ಮುನ್ನವೇ ಮತ ಹಾಕುವ ಸೌಲಭ್ಯವೂ ಇರುತ್ತದೆ. ಅಂಚೆಯ ಮೂಲಕ ಮತ ಹಾಕುವ ಹಕ್ಕು ಇರುವುದರಿಂದ, ಕೆಲವೆಡೆ, ಚುನಾವಣಾ ದಿನ ಮುಗಿದು ವಾರಗಳಾದರೂ, ಆ ಮತಪತ್ರಗಳ ಬರುವಿಕೆಗಾಗಿ ಕಾಯಲಾಗುತ್ತದೆ.

ಅಮೆರಿಕದ ಅಧ್ಯಕ್ಷರ ಅವಧಿ ನಾಲ್ಕು ವರ್ಷಗಳಾದರೂ, ಅಲ್ಲಿನ ಸಂಸತ್ತಿನ ಕೆಳಮನೆಯ ಸದಸ್ಯರ ಅವಧಿ ಎರಡೇ ವರ್ಷ.ಹೀಗಾಗಿ, ಪ್ರತಿ ಎರಡು ವರ್ಷಕ್ಕೊಮ್ಮೆ ನವೆಂಬರ್ ತಿಂಗಳಲ್ಲಿ ಚುನಾವಣೆ ಖಚಿತ. ಈ ಬಾರಿ ಚುನಾವಣೆ ಗೆದ್ದು ಸಂಭ್ರಮಿಸಿ ಮತದಾರರನ್ನು  ಮರೆಯುವ ಮುನ್ನವೇ ಸಂಸತ್ ಸದಸ್ಯರು ಮುಂದಿನ ಚುನಾವಣೆಗೆ ಸಿದ್ಧರಾಗಬೇಕು. (ನಮ್ಮ ಲೋಕಸಭಾ ಸದಸ್ಯರ ಅವಧಿಯನ್ನು ಐದು ವರ್ಷದ ಬದಲು ಎರಡಕ್ಕಿಳಿಸಿದರೆ, ಅವರು ಜನಸಾಮಾನ್ಯರ ಬಗೆಗೆ ಹೆಚ್ಚು ಕಾಳಜಿ ತೋರಬಹುದೇ? ಅಥವಾ ಸದಾ ಚುನಾವಣಾ ತಯಾರಿಯಲ್ಲೇ ಇದ್ದು ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೇ?)

ಅಮೆರಿಕದ ಇಂತಹ ವೈವಿಧ್ಯಮಯ ನಿಯಮಗಳಿಂದ, ಹಲವು ಬಾರಿ, ಚಲಾಯಿಸಿದ ಮತಗಳನ್ನು ಸಂಪೂರ್ಣವಾಗಿ ಎಣಿಸಿ ಫಲಿತಾಂಶ ಘೋಷಿಸಲು ಹಲವು ವಾರಗಳೇ ಆಗಬಹುದು. ಅಷ್ಟೇ ಅಲ್ಲ, ಅಮೆರಿಕದ ಸಂವಿಧಾನ ಸೂಚಿಸಿರುವ ನಡಾವಳಿಗಳ ಪ್ರಕಾರ, ಹೆಚ್ಚು ಮತ ಪಡೆದ ಅಭ್ಯರ್ಥಿ ಚುನಾವಣೆಯಲ್ಲಿ ಸೋಲು ಅನುಭವಿಸುವ ಸಾಧ್ಯತೆಯೂ ಇದೆ! ೨೦೧೬ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲ್ಲರಿ ಕ್ಲಿಂಟನ್, ಡೊನಾಲ್ಡ್ ಟ್ರಂಪ್ ಅವರಿಗಿಂತ ಸುಮಾರು ಮೂವತ್ತು ಲಕ್ಷ ಹೆಚ್ಚು ಮತ ಗಳಿಸಿದ್ದರೂ, ಗೆದ್ದದ್ದು ಮಾತ್ರ ಟ್ರಂಪ್ ಅವರೇ!! ಇನ್ನು ಬ್ಯಾಲಟ್ ಪೇಪರ್ ವಿಷಯಕ್ಕೆ ಬಂದರೆ, ಒಂದೊಂದೆಡೆ ಅದು ಒಂದೊಂದು ವಿಧ. ಕೆಲವೊಮ್ಮೆ ಈ ಬ್ಯಾಲಟ್ ಪೇಪರ್‌ಗಳು ಉದ್ದವಾಗುತ್ತಾ ಹೋಗಿ, ಕೊನೆಗೆ ಅದು ಪೇಪರ್ ಬದಲು ಪುಸ್ತಕದ ರೂಪ ತಾಳಲೂಬಹುದು. ಇದಕ್ಕೆ ಕಾರಣವೂ ಇದೆ. ಅಮೆರಿಕದಲ್ಲಿ ಚುನಾವಣಾ ದಿನವೆಂದರೆ, ಎಲ್ಲ ಚುನಾವಣೆಗಳೂ ಅಂದೇ. ಜೊತೆಗೆ, ಅಮೆರಿಕದ ಹಲವಾರು ಪ್ರದೇಶಗಳಲ್ಲಿ ಅಮೆರಿಕದ ಅಧ್ಯಕ್ಷನಿಂದ ಹಿಡಿದು, ರಾಜ್ಯದ ಗವರ್ನರ್, ಜಿಲ್ಲೆಯ ಮುಖ್ಯಸ್ತ, ಊರಿನ ಮೇಯರ್, ಕೌನ್ಸಿಲರ್, ಸ್ಥಳೀಯ ನ್ಯಾಯಾಧಿಶ, ಪೊಲೀಸ್ ಮುಖ್ಯಸ್ಥ, ಊರಿನ ಸರ್ಕಾರಿ ಶಾಲೆಗಳ ಉಸ್ತುವಾರಿ ಬೋರ್ಡಿನ ಸದಸ್ಯರು, ಕೊನೆಗೆ ಊರಿನ ಬೀದಿ ನಾಯಿ ಹಿಡಿಯುವವನವರೆಗೆ ಎಲ್ಲರನ್ನೂ ಒಂದೇ ಚುನಾವಣೆಯ ಒಂದೇ ಬ್ಯಾಲಟ್ ಪೇಪರ್ (ಅಥವಾ ಪುಸ್ತಕ ಎನ್ನಿ!) ಮೂಲಕ ಆಯ್ದುಕೊಳ್ಳುವ ಪರಿಪಾಠವಿದೆ. ಮೊನ್ನಿನ ನವೆಂಬರ್ ೩ರ ಚುನಾವಣೆಯಲ್ಲಿ, ಟೆಕ್ಸಾಸ್ ರಾಜ್ಯದ ಹ್ಯಾರಿಸ್ ಕೌಂಟಿಯಲ್ಲಿ ಒಂದೇ ಬ್ಯಾಲಟ್ ಪೇಪರ್ ಮೂಲಕ ಬರೋಬ್ಬರಿ ೮೮ ವಿವಿಧ ಹುದ್ದೆಗಳಿಗೆ ಮತದಾನವಾಯಿತು! ಈ ೮೮ ಹುದ್ದೆಗಳಿಗೆ ಸುಮಾರು ೨೦೦ ಮಂದಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಈ ೨೦೦ ಅಭ್ಯರ್ಥಿಗಳಲ್ಲಿ ನಿಮಗೆ ಯಾರೂ ಒಪ್ಪಿಗೆಯಾಗಲಿಲ್ಲವೆನ್ನಿ, ಹಾಗಿದ್ದರೆ, ನಿಮಗೆ ಇಷ್ಟವಾದವರ ಹೆಸರನ್ನು ಬರೆಯುವ ಅವಕಾಶವೂ ಇದೆ. ೨೦೧೦ರ ಚುನಾವಣೆಯಲ್ಲಿ, ಅಲಾಸ್ಕಾ ರಾಜ್ಯದಿಂದ ಅಮೆರಿಕದ ಸೆನೆಟ್‌ಗೆ (ಸಂಸತ್ತಿನ ಮೇಲ್ಮನೆ) ಲೀಸಾ ಮರ್ಕೋವಸ್ಕಿಯವರು ಆಯ್ಕೆಯಾಗಿದ್ದು ಹಾಗೆಯೇ. ಶೇ.೪೦ಕ್ಕೂ ಹೆಚ್ಚು ಮತದಾರರು ಆಕೆಯ ಹೆಸರನ್ನು ಬ್ಯಾಲಟ್ ಪೇಪರಿನಲ್ಲಿ ಬರೆದಿದ್ದರು. ಹೀಗೆ ಬರೆಯುವಾಗ ನಿಜವಾದ ವ್ಯಕ್ತಿಗಳ ಹೆಸರು ಬರೆಯ ಬೇಕೆಂದೇನೂ ಇಲ್ಲ; ‘ಮಿಕ್ಕಿ ಮೌಸ್’, ‘ಮಿಸ್ಟರ್ ಬೀನ್ಸ್’ ಹೀಗೆ ಏನು ಬೇಕಾದರೂ ಬರೆಯಬಹುದು. ಸ್ಥಳೀಯ ಮೇಯರ್ ಹುದ್ದೆಗೆ ನಾಯಿ, ಬೆಕ್ಕುಗಳ ಹೆಸರನ್ನು ಬರೆದ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ. ಮಿನ್ನೆಸೋಟಾ ರಾಜ್ಯದ ಸಣ್ಣ ಹಳ್ಳಿಯೊಂದರ ಮೇಯರ್ ಆಗಿ ‘ಡ್ಯೂಕ್’ ಎಂಬ ನಾಯಿ ಹೀಗೆ ಆಯ್ಕೆಗೊಂಡರೆ, ಅಲಾಸ್ಕದ ತಲಕಿಟ್ನಾ ಪಟ್ಟಣದ ಮೇಯರ್ ಆಗಿ ‘ಸ್ಟಬ್ಸ್’ ಎಂಬ ಬೆಕ್ಕು ಆಯ್ಕೆಯಾಯಿತೆಂಬ ದಂತ ಕಥೆಗಳಿವೆ. (ಇಂತಹ ಸಾಧ್ಯತೆಗಳಿದ್ದರೂ, ನಿಜಕ್ಕೂ ಆಗಿದ್ದಕ್ಕೆ ಸಾಕ್ಷ್ಯಗಳಿದ್ದಂತಿಲ್ಲ. ‘ತಲಕಿಟ್ನಾ‘ ಪಟ್ಟಣದ ಹೆಸರು ಏನೇ ಇದ್ದರೂ, ಅಲ್ಲಿನ ನಾಗರಿಕರ ತಲೆ ವಾಸ್ತವದಲ್ಲಿ ಅಷ್ಟೊಂದು ಕೆಟ್ಟಿಲ್ಲ)

” ಅಮೆರಿಕದ ಚುನಾವಣೆಗಳಲ್ಲಿ, ಬ್ಯಾಲಟ್ ಮೇಲೆ ನಿಮಗೆ ಬೇಕಾದವರ ಹೆಸರನ್ನು ಬರೆಯಲು ಸಾಧ್ಯವಿರುವಂತೆಯೇ, ಹಲವೊಮ್ಮೆ, ನಿಮಗೆ ಬೇಡವೆನ್ನಿಸುವವರನ್ನು, ಈಗಾಗಲೇ ಚುನಾಯಿತರಾಗಿ ಅಧಿಕಾರದಲ್ಲಿ ರುವವರನ್ನು ಕೆಳಗಿಳಿಸುವ ಅವಕಾಶವೂ ಇದೆ. ೨೦೦೩ರ ಚುನಾವಣೆಯಲ್ಲಿ, ಕ್ಯಾಲಿಫೋರ್ನಿಯಾದಲ್ಲಿ, ಆ ರಾಜ್ಯದ ಗವರ್ನರ್ ಆಗಿದ್ದ ಗ್ರೇ ಡೇವಿಸ್ ಅವರನ್ನು ಹೀಗೆಯೇ ಕೆಳಗಿಳಿಸಲಾಯಿತು. ಹಾಗೆಯೇ ೧೩೫ ಉಮೇದುವಾರರಿದ್ದ ಬ್ಯಾಲಟ್ ಪೇಪರ್ ಮೂಲಕ, ಖ್ಯಾತ ಹಾಲಿವುಡ್ ನಟ ಆರ್ನಾಲ್ಡ್ ಶ್ವಾರ್ಜ಼್‌ನೆಗರ್ ಅವರನ್ನು ಗವರ್ನರ್ ಪಟ್ಟಕ್ಕೆ ಏರಿಸಲಾಯಿತು”

 

 

ಆಂದೋಲನ ಡೆಸ್ಕ್

Recent Posts

ದರಗಳ ಏರಿಕೆಯಿಂದ ಸಂಕಷ್ಟದಲ್ಲಿ ಜನರು

ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ…

2 hours ago

ಸಿಎಂ ಅಚ್ಯುತರಾಯರು ಮತ್ತು ಮಂತ್ರಿ ಗುಲ್ಗುಲೆಯೂ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ…

3 hours ago

ದೀಪಾವಳಿ ಬಳಿಕ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ

ಕೆ.ಬಿ.ರಮೇಶನಾಯಕ ಕಾಮಗಾರಿ ವೇಳೆ ಒಂದು ಕಡೆ ಸಂಚಾರ ನಿರ್ಬಂಧ; ಮತ್ತೊಂದು ಕಡೆ ಓಡಾಟಕ್ಕೆ ಅವಕಾಶ ವೈಟ್ ಟಾಪಿಂಗ್ ಕಾಮಗಾರಿಗೆ ಅತ್ಯಾಧುನಿಕ…

3 hours ago

ಅವ್ಯವಸ್ಥೆಗಳ ಆಗರ ಕುವೆಂಪುನಗರ ಪಾರ್ಕ್

ಪ್ರಶಾಂತ್ ಎಸ್. ಮೈಸೂರು: ನಗರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತಿದ್ದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಾರ್ಡ್ ಸಂಖ್ಯೆ ೪೭ರ ಕುವೆಂಪುನಗರದ ಉದ್ಯಾನ…

3 hours ago

ಬೆಳಕಿನ ಹಬ್ಬಕ್ಕಿಲ್ಲ ಪಟಾಕಿ ವ್ಯಾಪಾರದ ಕಳೆ

ಅಣ್ಣೂರು ಸತೀಶ್ ಶೇ.೫೦ರಷ್ಟು ವಹಿವಾಟು ಇಳಿಕೆ; ಗ್ರಾಹಕರಿಲ್ಲದೆ ಕಂಗಾಲಾದ ವ್ಯಾಪಾರಿಗಳು ಭಾರತೀನಗರ: ದೀಪಾವಳಿ ಎಂದರೆ ಮನೆಮನೆಗಳಲ್ಲಿ ದೀಪಗಳ ಬೆಳಕಿನೊಂದಿಗೆ ಪಟಾಕಿಗಳ…

3 hours ago

ದೀಪಾವಳಿ ಜಾತ್ರೆಗೆ ಕಾರ್ಯ ಸಿದ್ದೇಶ್ವರಸ್ವಾಮಿ ಬೆಟ್ಟ ಸಜ್ಜು

ಪಿ.ಶಿವಕುಮಾರ್ ಕಾರ್ಯ ಗ್ರಾಮದಲ್ಲಿ ನ.೧೧, ೧೨, ೧೩ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೊಡ್ಡ ಕವಲಂದೆ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ…

3 hours ago