ಆರ್.ಟಿ.ವಿಠಲಮೂರ್ತಿ

ಬೆಂಗಳೂರು ಡೈರಿ : ರಾಜಕಾರಣದ ಪಡಸಾಲೆಯಲ್ಲಿ ಭೂಗತ ಲೋಕದ ಸದ್ದು ಹೊಸತಲ್ಲ

ಆಗೊಮ್ಮೆ ಸಿಡಿದು ಬಿದ್ದಿದ್ದ ಯಡಿಯೂರಪ್ಪ ಈಗ ಚಕಾರ ಎತ್ತುತ್ತಿಲ್ಲ?

-ಆರ್.ಟಿ.ವಿಠ್ಠಲಮೂರ್ತಿ

ಇದು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಘಟನೆ. ಆ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಭೂಗತ ಜಗತ್ತಿನ ಪಾತಾಕಿಯೊಬ್ಬನ ಹತ್ಯೆಯಾಯಿತು. ಹೀಗೆ ಹತ್ಯೆಗೀಡಾದ ಆ ಪಾತಕಿಯ ಅಂತಿಮ ದರ್ಶನಕ್ಕೆ ಆವತ್ತು ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದ ನಾಯಕರೊಬ್ಬರು ಹೋಗಿದ್ದರು. ಹೀಗೆ ಅವರು ಹೋದ ವಿಷಯ ಅಂದು ಭಾರೀ ಚರ್ಚೆಗೆ ಗ್ರಾಸವಾಯಿತು.
ಇವತ್ತು ಮಾಜಿ ಮುಖ್ಯಮಂತ್ರಿಗಳಾಗಿರುವ, ಆವತ್ತು ಪ್ರತಿಪಕ್ಷದಲ್ಲಿದ್ದ ಯಡಿಯೂರಪ್ನಪ ನವರು ಇದನ್ನೇ ಎತ್ತಿ ಹಿಡಿದು ರಣರಂಪ ಮಾಡಿದರು. ರೌಡಿಯೊಬ್ಬನ ಅಂತ್ಯಕ್ರಿಯೆ ಸಂದರ್ಭದಲ್ಲಿ ಈ ರಾಜ್ಯದ ಸಚಿವರೊಬ್ಬರು ಹೋಗುವುದು ಎಂದರೇನು? ಇದು ರಾಜ್ಯದ ಜನರಿಗೆ ರವಾನಿಸುವ ಸಂದೇಶವೇನು? ಅಂತ ಅವರು ಹಾಕಿದ ಅಬ್ಬರ ಇಡೀ ರಾಜ್ಯದ ಗಮನ ಸೆಳೆಯಿತು. ಅಷ್ಟೇ ಅಲ್ಲ, ಹತ್ಯೆಗೀಡಾದ ಪಾತಕಿಯನ್ನು ನೋಡಲು ಹೋದ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದವರು ಪಟ್ಟು ಹಿಡಿದ ರೀತಿ ಜನರ ಮೆಚ್ಚುಗೆಗೆ ಕಾರಣವಾಯಿತು.
ಸರಿ, ಈ ರೀತಿ ಸಚಿವರ ವಿರುದ್ಧದ ಆರೋಪ ಭಾರೀ ಚರ್ಚೆಗೆ ಒಳಗಾಗುತ್ತಿದ್ದಂತೆೆಯೇ ಮುಖ್ಯಮಂತ್ರಿ ದೇವೇಗೌಡರು ರಂಗಕ್ಕಿಳಿದರು. ಈ ಸಂಬಂಧ ಪತ್ರಕರ್ತರೊಬ್ಬರು ಪ್ರಶ್ನೆ ಕೇಳುತ್ತಿದ್ದಂತೆೆಯೇ ಮುಖ ಕಿವುಚಿ, ಅಯ್ಯೂ ರಾಮ, ನಾನೂ ನೋಡಿದಿನ್ರೀ, ಆ ಸಚಿವರು ಹೋಗಿದ್ದಷ್ಟೇ ಅಲ್ಲ, ಕಣ್ಣೀರು ಹಾಕುತ್ತಿರುವ ರೀತಿಯನ್ನೂ ನೋಡಿದ್ದೇನೆ. ಯಾವ ಕಾರಣಕ್ಕಾಗಿ ಇವರು ಹೋದರು? ಯಾಕೆ ಅಳು ಮುಖ ಮಾಡಿಕೊಂಡು ನಿಂತಿದ್ದರು ಅಂತ ವಿವರಣೆ ಪಡೆಯುತ್ತೇನೆ ಎಂದರು.
ಇದಾದ ಮರುದಿನವೇ ದೇವೇಗೌಡರು ಸಂಬಂಧಪಟ್ಟ ಸಚಿವರನ್ನು ಕರೆಸಿ ವಿವರಣೆ ಕೇಳಿದರು. ಅದಕ್ಕೆ ಪ್ರತಿಯಾಗಿ ಆ ಸಚಿವರು, ಸದರಿ ರೌಡಿಯ ಹತ್ಯೆಯಿಂದಾಗಿ ವಾತಾವರಣ ಉದ್ವಿಗ್ನವಾಗಿತ್ತು. ಆ ಏರಿಯಾದ ಜನ ಬಂದ್ ಆಚರಿಸುತ್ತಿದ್ದರು. ಅದೇ ಕ್ಷೇತ್ರದ ಶಾಸಕನಾಗಿ ನಾನು ಅಲ್ಲಿಗೆ ಹೋಗುವುದು ಅನಿವಾರ್ಯವಾಗಿತ್ತು ಎಂದರಂತೆ. ಇದನ್ನು ಕೇಳಿ ಮುಖ ಸಿಂಡರಿಸಿಕೊಂಡ ದೇವೇಗೌಡರು: ಅದೇನು ಅಂತಹ ಅನಿವಾರ್ಯತೆ ಅಂತ ಕೇಳಿದರಂತೆ. ಅದಕ್ಕೆ ಆ ಸಚಿವರು: ನಾನು ಹೋಗದಿದ್ದರೆ ಲಾ ಅಂಡ್ ಆರ್ಡರ್ ಪ್ರಾಬ್ಲಂ ಆಗುತ್ತಿತ್ತು ಸಾರ್ ಎಂದರಂತೆ.
ಅಲ್ಲಿಗೆ ಆ ವಿಷಯ ಮುಗಿದರೂ ಅದರ ಕಾವು ಇವತ್ತಿಗೂ ಆರಿಲ್ಲ. ಅಂದ ಹಾಗೆ ಇತ್ತೀಚೆಗೆ ರಾಜ್ಯದ ಇಬ್ಬರು ಬಿಜೆಪಿ ಸಂಸದರ ವಿರುದ್ಧ ಇದೇ ಮಾದರಿಯ ಆರೋಪ ಕೇಳಿ ಬಂತು. ವ್ಯಾಪಕ ಚರ್ಚೆಯೂ ನಡೆಯಿತು. ಆದರೆ ಹಿಂದೆ ರೌಡಿಯ ಅಂತ್ಯಕ್ರಿಯೆಗೆ ಹೋದ ಸಚಿವರ ವಿರುದ್ಧ ಸಿಡಿದು ಬಿದ್ದು ರಾಜೀನಾಮೆ ಕೇಳಿದ್ದ ಯಡಿಯೂರಪ್ಪ ಮಾತ್ರ ಈ ಬಗ್ಗೆ ಚಕಾರವೆತ್ತಿಲ್ಲ.

ಅಂದ ಹಾಗೆ ರಾಜಕಾರಣದ ಪಡಸಾಲೆಯಲ್ಲಿ ಭೂಗತ ಜಗತ್ತಿನ ಜನ ಕಾಣಿಸಿಕೊಂಡಿದ್ದು ಹೊಸ ವಿಷಯವೇನಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರಳಿಯ ಎಂ.ಡಿ.ನಟರಾಜ್ ಹಿಂದೆ ಭೂಗತ ಜಗತ್ತಿನ ಪಾತಕಿಗಳ ನೆರಳು ಕಂಡಿತ್ತು. ಅವರು ಸ್ಥಾಪಿಸಿದ ಇಂದಿರಾ ಬ್ರಿಗೇಡ್‌ನಲ್ಲಿ ಎಂತೆಂತಹವರು ಕಾಣಿಸಿಕೊಂಡಿದ್ದರೆಂದರೆ, ಈ ವಿಷಯ ಸಾರ್ವಜನಿಕವಾಗಿ ಅರಸರ ಹೆಸರಿಗೆ ಕಳಂಕ ಅಂಟಿಸುವ ಮಟ್ಟಕ್ಕೆ ಹೋಯಿತು. ಆವತ್ತು ಇಂದಿರಾ ಬ್ರಿಗೇಡ್‌ನಲ್ಲಿ ಸಕ್ರಿಯವಾಗಿದ್ದ ಪಾತಕಿಯೊಬ್ಬ ಮುಂದೆ ಬೆಂಗಳೂರಿನ ಭೂಗತ ಜಗತ್ತಿನ ನಂಬರ್ ಒನ್ ಡಾನ್ ಆಗಿ ಕುಖ್ಯಾತಿ ಗಳಿಸಿದ್ದ.

ಮುಂದೆ ೧೯೮೩ರಲ್ಲಿ ಕರ್ನಾಟಕದಲ್ಲಿ ಜನತಾರಂಗ ಅಧಿಕಾರ ಹಿಡಿಯಿತಲ್ಲ, ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆ ರಾಮಕೃಷ್ಣ ಹೆಗಡೆಯವರ ಪಾಲಾಯಿತು. ಹೀಗೆ ಆಾಂಚಿತವಾಗಿ ಮುಖ್ಯಮಂತ್ರಿ ಹುದ್ದೆಗೇರಿದ ರಾಮಕೃಷ್ಣ ಹೆಗಡೆ ಅವರ ವಿರುದ್ಧ ಜನತಾರಂಗದ ನಾಯಕರೊಬ್ಬರು ಸಿಡಿದೆದ್ದರು. ರಾಜ್ಯದಲ್ಲಿ ಜನತಾರಂಗ ಅಧಿಕಾರಕ್ಕೆ ಬರಲು ದುಡಿದವರು ತಾವು. ಆದರೆ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದವರು ಅವರು ಎಂಬುದು ಈ ನಾಯಕರ ಸಿಟ್ಟು. ಇದರ ಬೆನ್ನಲ್ಲೇ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಅಡ್ಡಗಟ್ಟುವ ಪ್ರಯತ್ನಗಳೂ ನಡೆದವು. ಒಂದು ಬಾರಿ ಈ ನಾಯಕರ ಹಿಂಬಾಲಕ ವ್ಯಕ್ತಿಯೊಬ್ಬನಿಂದಲೂ ಇಂತಹ ಪ್ರಯತ್ನ ನಡೆಯಿತು. ಮತ್ತು ಈ ಪ್ರಯತ್ನ ಮಾಡಿದ ವ್ಯಕ್ತಿ ಭೂಗತ ಜಗತ್ತಿನ ಪಾತಕಿ ಎಂಬ ಮಾತು ಕೇಳಿ ಬಂತು.
ಇದಾದ ಕೆಲವೇ ದಿನಗಳಲ್ಲಿ ರಾಮಕೃಷ್ಣ ಹೆಗಡೆ ಅವರು, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ ಯಾವುದೇ ಠಾಣೆಗಳಿರಲಿ, ಅದರ ವ್ಯಾಪ್ತಿಉಲ್ಲಿ ಒಂದೋ ರೌಡಿಗಳಿರಬೇಕು, ಇಲ್ಲವೇ ಪೊಲೀಸರಿರಬೇಕು ಎಂದು ಕಟ್ಟಪ್ಪಣೆ ಮಾಡಿದರಂತೆ. ಹೀಗಾಗಿ ಎಲ್ಲೆಡೆ ರೌಡಿಗಳನ್ನು ನಿಯಂತ್ರಿಸುವ ಕೆಲಸ ವ್ಯಾಪಕವಾಗಿ ನಡೆಯಿತು ಅಂತ ಈಗಲೂ ಪಿಸುಗುಡುವವರು ಇದ್ದಾರೆ. ಮುಂದೆ ಜಾಗತೀಕರಣ ಕಾಲಿಟ್ಟ ನಂತರ ಭೂಗತ ಜಗತ್ತಿನ ರೆಕ್ಕೆಗಳು ಅಗಲವಾದವು. ಮುಂಚೆಲ್ಲ ಬೀದಿ ಕಾಳಗಗಳಲ್ಲಿ, ಹೊಡೆದಾಟಗಳಲ್ಲಿ ಕಾಣುತ್ತಿದ್ದ ರೌಡಿಗಳ ಚಟುವಟಿಕೆ ಬೇರೆ ದಿಕ್ಕಿಗೆ ತಿರುಗಿತು. ಈ ಪೈಕಿ ಬಹುತೇಕರು ರಿಯಲ್ ಎಸ್ಟೇಟ್ ದಂಧೆ, ಕೇಬಲ್ ದಂಧೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಧುಮುಕಿದರು. ಇದಾಗಿ ಎರಡು ದಶಕ ಕಳೆಯುವಷ್ಟರಲ್ಲಿ ಅವರು ರಾಜಕೀಯದ ಸ್ಟೇಜು ಹತ್ತುವ ಪ್ರಯತ್ನ ಮಾಡತೊಡಗಿದ್ದಾರೆ.

೨೦೧೯ರಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಜಾತ್ಯತೀತ ಜನತಾದಳ-ಕಾಂಗ್ರೆಸ್ ಸರ್ಕಾರ ಉರುಳಿತಲ್ಲ? ಹೀಗೆ ಅದು ಉರುಳುವುದರ ಹಿಂದೆ ಏನೇನು ನಡೆಯಿತು ಎಂಬ ಬಗ್ಗೆ ಚರ್ಚೆ ಆರಂಭವಾದಾಗ ಸರ್ಕಾರವನ್ನು ಉರುಳಿಸಲು ಭೂಗತ ಲೋಕದ ಕೆಲವರು ಬಂಡವಾಳ ಹೂಡಿದ್ದರು ಎಂಬ ಮಾತು ಕೇಳಿ ಬಂತು. ೨೦೨೩ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆೆಯೇ ಮತ್ತೆ ಭೂಗತ ಜಗತ್ತಿನ ವ್ಯಕ್ತಿಗಳ ನೆರಳು ರಾಜಕೀಯ ಪಕ್ಷಗಳ ಹಿಂದೆ ಕಾಣತೊಡಗಿದೆ. ಅಷ್ಟೇ ಅಲ್ಲ, ಇದು ಕರ್ನಾಟಕ ಕೂಡ ಪಶ್ಚಿಮ ಬಂಗಾಳದ ದಾರಿುಂಲ್ಲಿ ಹೆಜ್ಜೆ ಇಡುತ್ತಿದೆೆಯೇ ಎಂಬ ಅನುಮಾನ ಹಲವರಲ್ಲಿ ಮೂಡುವಂತೆ ಮಾಡಿದೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹೇಗೆ ನಡೆಯಿತು? ಎಷ್ಟು ಮಾರಾಮಾರಿಗಳಿಗೆ, ಹಿಂಸಾಚಾರಕ್ಕೆ ಸಾಕ್ಷಿಯಾಯಿತು ಎಂಬುದು ಈಗ ಇತಿಹಾಸ. ಆ ಇತಿಹಾಸ ಇಲ್ಲಿ ಮರುಕಳಿಸುತ್ತದೆ ಎಂಬುದು ಸದ್ಯದ ಮಟ್ಟಿಗೆ ಉತ್ಪ್ರೇಕ್ಷೆ ಅನಿಸಬಹುದು. ಆದರೆ ಹುಕ್ ಆರ್ ಕ್ರುಕ್ ನಾವು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕು ಎಂಬ ಮನಃಸ್ಥಿತಿ ರಾಜಕೀಯ ಪಕ್ಷಗಳಲ್ಲಿರುವುದನ್ನು ಕಂಡರೆ ಪರಿಸ್ಥಿತಿ ಯಾವ ವಿಕೋಪಕ್ಕೆ ತಲುಪಿದರೂ ಅಚ್ಚರಿಯಿಲ್ಲ ಅನಿಸುತ್ತದೆ. ಇವತ್ತು ರಾಜಕಾರಣಿಗಳ ಪಕ್ಕ ಭೂಗತ ಜಗತ್ತಿನ ವ್ಯಕ್ತಿಗಳು ಕಂಡಾಗ ಈ ಅನುಮಾನ ಮತ್ತಷ್ಟು ದಟ್ಟವಾಗುವುದು ಸಹಜ. ಮುಂದೇನು ಕತೆಯೋ?

೨೦೧೯ರಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಜಾತ್ಯತೀತ ಜನತಾದಳ-ಕಾಂಗ್ರೆಸ್ ಸರ್ಕಾರ ಉರುಳಿತಲ್ಲ? ಹೀಗೆ ಅದು ಉರುಳುವುದರ ಹಿಂದೆ ಏನೇನು ನಡೆಯಿತು ಎಂಬ ಬಗ್ಗೆ ಚರ್ಚೆ ಆರಂಭವಾದಾಗ ಸರ್ಕಾರವನ್ನು ಉರುಳಿಸಲು ಭೂಗತ ಲೋಕದ ಕೆಲವರು ಬಂಡವಾಳ ಹೂಡಿದ್ದರು ಎಂಬ ಮಾತು ಕೇಳಿ ಬಂತು. ೨೦೨೩ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆೆಯೇ ಮತ್ತೆ ಭೂಗತ ಜಗತ್ತಿನ ವ್ಯಕ್ತಿಗಳ ನೆರಳು ರಾಜಕೀಯ ಪಕ್ಷಗಳ ಹಿಂದೆ ಕಾಣತೊಡಗಿದೆ.

 

 

 

andolanait

Recent Posts

ಗಣೇಶೋತ್ಸವದ ವೇಳೆ ಪ್ರಸಾದಕ್ಕೆ ಪರವಾನಗಿ ಕಡ್ಡಾಯ ಆದೇಶಕ್ಕೆ ಪ್ರಹ್ಲಾದ್‌ ಜೋಶಿ ಆಕ್ರೋಶ

ಹುಬ್ಬಳ್ಳಿ: ಗಣೇಶೋತ್ಸವ ಆಚರಣೆ ವೇಳೆ ಪೆಂಡಾಲ್‌ಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಗಿ ಪಡೆಯಬೇಕು ಎಂಬ ರಾಜ್ಯ ಸರ್ಕಾರದ…

3 mins ago

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

19 mins ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

36 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

49 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

9 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago